varthabharthi


ಅಂತಾರಾಷ್ಟ್ರೀಯ

ಇಯು ಸದಸ್ಯತ್ವದ ಬಗ್ಗೆ ಸಕಾರಾತ್ಮಕ ನಿರ್ಧಾರಕ್ಕೆ ಆಗ್ರಹ

ಹೋರಾಟ ತೀವ್ರಗೊಳಿಸಲು ರಶ್ಯ ಸಿದ್ಧತೆ: ಝೆಲೆನ್ಸ್ಕಿ

ವಾರ್ತಾ ಭಾರತಿ : 21 Jun, 2022

ಕೀವ್, ಜೂ.20: ಉಕ್ರೇನ್ ಮೇಲಿನ ಆಕ್ರಮಣವನ್ನು ಇನ್ನಷ್ಟು ತೀವ್ರಗೊಳಿಸಲು ರಶ್ಯ ಸಿದ್ಧತೆ ನಡೆಸುತ್ತಿದೆ ಎಂದು ಎಚ್ಚರಿಸಿರುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ, ಆಕ್ರಮಣ ಎದುರಿಸಲು ನಾವೂ ಸನ್ನದ್ಧರಾಗಿದ್ದೇವೆ ಎಂದಿದ್ದಾರೆ.

ಯುರೋಪಿಯನ್ ಯೂನಿಯನ್(ಇಯು) ಸದಸ್ಯತ್ವ ಕೋರಿ ಉಕ್ರೇನ್ ಸಲ್ಲಿಸಿರುವ ಅರ್ಜಿಯ ಕುರಿತು ಸಕಾರಾತ್ಮಕ ನಿರ್ಧಾರ ಕೈಗೊಳ್ಳುವುದು ಇಡೀ ಯುರೋಪ್ನ ಹಿತಾಸಕ್ತಿಗೆ ಪೂರಕವಾಗಿದೆ. ಇಯುವಿನಿಂದ ಐತಿಹಾಸಿಕ ನಿರ್ಧಾರವನ್ನು ನಾವು ಎದುರುನೋಡುತ್ತಿದ್ದೇವೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಕೈಗಾರಿಕಾ ಕೇಂದ್ರವಾಗಿರುವ ಡೋನ್ಬಾಸ್ ಪ್ರಾಂತವನ್ನು ಕೈವಶ ಮಾಡಿಕೊಳ್ಳಲು ಕಳೆದ ಕೆಲ ವಾರಗಳಿಂದ ಯುದ್ಧವನ್ನು ತೀವ್ರಗೊಳಿಸಿರುವ ರಶ್ಯ, ಪೂರ್ವದ ಮುಂಚೂಣಿ ಸ್ಥಾನಗಳತ್ತ ಮುನ್ನುಗ್ಗಿ ಬರಲು ನಡೆಸಿರುವ ಪ್ರಯತ್ನಗಳನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಉಕ್ರೇನ್ನ ಸೇನೆ ಹೇಳಿದೆ.

ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ದಕ್ಷಿಣ ಪ್ರಾಂತವನ್ನು ಯಾವುದೇ ಕಾರಣಕ್ಕೂ ಆಕ್ರಮಣಕಾರರಿಗೆ ಬಿಟ್ಟುಕೊಡುವುದಿಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ರಶ್ಯದ ಮುತ್ತಿಗೆಗೆ ಒಳಗಾಗಿರುವ ಕಪ್ಪು ಸಮುದ್ರದ ಬಂದರು ನಗರ ಮಿಕೊಲೈವ್ಗೆ ಭೇಟಿ ನೀಡಿದ ಝೆಲೆನ್ಸ್ಕಿ, ಮುಂಚೂಣಿ ನೆಲೆಗಳಲ್ಲಿನ ಯೋಧರಲ್ಲಿ ಧೈರ್ಯ ತುಂಬಿದರು. ದಕ್ಷಿಣವನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ ಮತ್ತು ನಮ್ಮದಾಗಿದ್ದ ಎಲ್ಲವನ್ನೂ ಮರಳಿ ಪಡೆಯಲಿದ್ದೇವೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ಈ ಮಧ್ಯೆ, ರವಿವಾರ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಉಕ್ರೇನ್ ಸೇನೆಗೆ ಅಪಾರ ಹಾನಿಯಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ. ನಿಪ್ರೊ ನಗರದಲ್ಲಿ ಉಕ್ರೇನ್ ಸೇನೆಯ ಉನ್ನತ ಮಟ್ಟದ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಕ್ಷಿಪಣಿ ಅಪ್ಪಳಿಸಿದ್ದು 50ಕ್ಕೂ ಅಧಿಕ ಸೇನಾಧಿಕಾರಿಗಳು ಮೃತಪಟ್ಟಿದ್ದಾರೆ. ಅಲ್ಲದೆ ಮಿಕೊಲೈವ್ನಲ್ಲಿ ಪಾಶ್ಚಾತ್ಯರು ನೀಡಿದ್ದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದ ಕೇಂದ್ರವನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ 155 ಎಂಎಂನ 10 ಹೊವಿಟ್ಜರ್ ಫಿರಂಗಿ ಹಾಗೂ ಸುಮಾರು 20 ಸೇನಾ ವಾಹನ ಧ್ವಂಸವಾಗಿದೆ ಎಂದು ಇಲಾಖೆ ಹೇಳಿದೆ.

ಯುದ್ಧ ವರ್ಷಗಳವರೆಗೆ ನಡೆಯಬಹುದು: ನೇಟೊ
ಉಕ್ರೇನ್ನಲ್ಲಿನ ಯುದ್ಧ ವರ್ಷಾನುಗಟ್ಟಲೆ ನಡೆಯಬಹುದು. ಆದ್ದರಿಂದ ಉಕ್ರೇನ್ಗೆ ದೀರ್ಘಾವಧಿಗೆ ಮಿಲಿಟರಿ, ರಾಜಕೀಯ ಮತ್ತು ಆರ್ಥಿಕ ನೆರವು ಒದಗಿಸಲು ಪಾಶ್ಚಿಮಾತ್ಯ ದೇಶಗಳು ಸಿದ್ಧವಾಗಿರಬೇಕು ಎಂದು ನೇಟೊದ ಮುಖ್ಯಸ್ಥ ಜೆನ್ಸ್ ಸ್ಟಾಲ್ಟನ್ಬರ್ಗ್ ಎಚ್ಚರಿಸಿದ್ದಾರೆ.
 
ಉಕ್ರೇನ್ಗೆ ನಮ್ಮ ನೆರವು ದುರ್ಬಲಗೊಳ್ಳಬಾರದು. ಸೇನಾ ನೆರವು, ಇಂಧನ ಮತ್ತು ಆಹಾರ ಧಾನ್ಯಗಳ ಬೆಲೆ ಏರಿಕೆಯಿಂದ ನಮ್ಮ ಖಜಾನೆಗೆ ಹೊರೆ ಬಿದ್ದರೂ ಉಕ್ರೇನ್ಗೆ ಬೆಂಬಲ ಮುಂದುವರಿಸುವ ಅಗತ್ಯವಿದೆ ಎಂದು ಸ್ಟಾಲ್ಟನ್ಬರ್ಗ್ರನ್ನು ಉಲ್ಲೇಖಿಸಿ ಜರ್ಮನಿಯ ದಿನಪತ್ರಿಕೆ ‘ಬಿಲ್ಡ್’ ವರದಿ ಮಾಡಿದೆ. ಉಕ್ರೇನ್ಗೆ ನಿರಂತರ ಬೆಂಬಲ ನೀಡದಿದ್ದರೆ ಆಕ್ರಮಣಶೀಲತೆಗೆ 2ನೇ ವಿಶ್ವಯುದ್ಧದ ಬಳಿಕದ ಅತೀ ದೊಡ್ಡ ಗೆಲುವಾಗಲಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಎಚ್ಚರಿಸಿದ್ದಾರೆ.

 ಆಹಾರಧಾನ್ಯಕ್ಕೆ ರಶ್ಯದ ತಡೆ ನೈಜ ಯುದ್ಧಾಪರಾಧ: ಇಯು 

ಉಕ್ರೇನ್ನ ಆಹಾರಧಾನ್ಯಕ್ಕೆ ರಶ್ಯದ ತಡೆಯು ನೈಜ ಯುದ್ಧಾಪರಾಧವಾಗಿದೆ ಎಂದು ಯುರೋಪಿಯನ್ ಯೂನಿಯನ್ ವಿದೇಶನೀತಿ ವಿಭಾಗದ ಮುಖ್ಯಸ್ಥ ಜೋಸೆಫ್ ಬೊರೆಲ್ ಸೋಮವಾರ ಹೇಳಿದ್ದಾರೆ.

ವಿಶ್ವದ ಹಲವೆಡೆ ಜನರಿಗೆ ಆಹಾರದ ತೀವ್ರ ಕೊರತೆ ಇರುವ ಸಂದರ್ಭದಲ್ಲಿ ಉಕ್ರೇನ್ನ ಗೋದಾಮುಗಳಲ್ಲಿರುವ ಕೋಟ್ಯಾಂತರ ಟನ್ಗಳಷ್ಟು ಆಹಾರ ಧಾನ್ಯಕ್ಕೆ ತಡೆಯೊಡ್ಡಲಾಗಿದೆ ಎಂಬುದು ಕಲ್ಪಿಸಲಾಗದ ವಾಸ್ತವವಾಗಿದೆ. ಈ ಕೃತ್ಯಕ್ಕೆ ರಶ್ಯವನ್ನು ಹೊಣೆಯಾಗಿಸಬೇಕು. ಇದು ಯುದ್ಧಾಪರಾಧದ ಕೃತ್ಯವಾಗಿದೆ ಎಂದು ಲುಕ್ಸೆಂಬರ್ಗ್ನಲ್ಲಿ ನಡೆದ ಯುರೋಪಿಯನ್ ಯೂನಿಯನ್ ವಿದೇಶ ಸಚಿವ ಸಭೆಯಲ್ಲಿ ಬೊರೆಲ್ ಹೇಳಿದ್ದಾರೆ. 

 ಬಡ ಮತ್ತು ದುರ್ಬಲ ದೇಶಗಳಲ್ಲಿ ಆಹಾರದ ಬಿಕ್ಕಟ್ಟು ತೀವ್ರಗೊಂಡ ಬರಗಾಲದ ಅಪಾಯ ಎದುರಾಗಿರುವುದರಿಂದ ಕಪ್ಪು ಸಮುದ್ರದಲ್ಲಿರುವ ಉಕ್ರೇನ್ನ ಬಂದರುಗಳಿಗೆ ಹಾಕಿರುವ ದಿಗ್ಬಂಧನವನ್ನು ಸಡಿಲಿಸಿ ಆಹಾರ ಧಾನ್ಯಗಳ ರಫ್ತಿಗೆ ಅನುವು ಮಾಡಿಕೊಡಬೇಕೆಂದು ರಶ್ಯವನ್ನು ಪಾಶ್ಚಿಮಾತ್ಯ ದೇಶಗಳು ಆಗ್ರಹಿಸಿವೆ. ಉಕ್ರೇನ್ ಬಂದರುಗಳಲ್ಲಿ ರಾಶಿ ಬಿದ್ದಿರುವ ಆಹಾರ ಧಾನ್ಯವನ್ನು ಅಲ್ಲಿಂದ ರಫ್ತು ಮಾಡುವ ಕುರಿತ ಒಪ್ಪಂದದ ಬಗ್ಗೆ ವಿಶ್ವಸಂಸ್ಥೆ ನಡೆಸುತ್ತಿರುವ ಪ್ರಯತ್ನಗಳಿಗೆ ತಮ್ಮ ಬೆಂಬಲವಿದೆ ಎಂದು ಯುರೋಪಿಯನ್ ಯೂನಿಯನ್ ಹೇಳಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)