ಅಗ್ನಿಪಥ್ ಪ್ರತಿಭಟನೆಗಳ ಹಿಂದೆ ʼಭಯೋತ್ಪಾದಕರ ಷಡ್ಯಂತ್ರʼ ಇದೆ ಎಂದ ಬಿಹಾರದ ಬಿಜೆಪಿ ಸಚಿವ
Photo: Twitter
ಪಾಟ್ನಾ:ಸೇನಾ ಪಡೆಗಳಿಗೆ ನೇಮಕಾತಿಗಾಗಿ ಕೇಂದ್ರ ಸರಕಾರ ಘೋಷಿಸಿದ ಅಗ್ನಿಪಥ ಯೋಜನೆಯ ವಿರುದ್ಧ ಬಿಹಾರದಲ್ಲಿ ವ್ಯಾಪಕ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಹಾಗೂ ರಾಜ್ಯ ಸಚಿವ ರಾಮ್ಸೂರತ್ ರಾಯ್, ಈ ಹಿಂಸಾತ್ಮಕ ಪ್ರತಿಭಟನೆಗಳ ಹಿಂದೆ ಉಗ್ರರ ಷಡ್ಯಂತ್ರವಿದೆ ಎಂದು ಆರೋಪಿಸಿದ್ದಾರೆ.
ಈ ಪ್ರತಿಭಟನೆಗಳ ಹಿಂದೆ ಉಗ್ರರ ಮತ್ತು ಗೂಂಡಾಗಳ ಕೈವಾಡವಿದೆ. ಆರಂಭದಲ್ಲಿ ಸೇನಾ ಆಕಾಂಕ್ಷಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರೂ ನಂತರ ಗೂಂಡಾಗಳು ಮತ್ತು ಉಗ್ರರು ಪ್ರತಿಭಟನೆಯಲ್ಲಿ ಸೇರಿಕೊಂಡಿದ್ದಾರೆ. ಚಳುವಳಿಯ ಹೆಸರಿನಲ್ಲಿ ಹಿಂಸೆಯಲ್ಲಿ ತೊಡಗುವವರನ್ನು ಇದಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ರಾಜಕೀಯ ಗೂಂಡಾಗಳೂ ಸೇರಿ ತಮ್ಮ ಬೇಳೆ ಬೇಯಿಸುತ್ತಿದ್ದಾರೆ, ಅವರಿಗೆ ಈ ದೇಶದ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತೆಯಿಲ್ಲ, ಎಂದು ಅವರು ಹೇಳಿದರು.ಅಗ್ನಿಪಥ್ ಯೋಜನೆಯನ್ನು ಶ್ಲಾಘಿಸಿದ ರಾಯ್, ಇದು ಯುವಜನರಿಗೊಂದು ಸುವರ್ಣಾವಕಾಶ ಎಂದಿದ್ದಾರೆ.
ಇದಕ್ಕೂ ಮುಂಚೆ ಬಿಜೆಪಿ ಶಾಸಕ ಹರಿಭೂಷಣ್ ಠಾಕುರ್ ಬಚೌಲ್ ಮಾತನಾಡುತ್ತಾ ಈ ಯೋಜನೆಯನ್ನು ವಿರೋಧಿಸುವವರು ಜಿಹಾದಿಗಳು ಎಂದಿದ್ದರು. ಇದು ಸೇನೆಯ ಕೆಲಸವಲ್ಲ, ಇದೊಂದು ಸೇವೆ, ಧೈರ್ಯವಂತರು ಮಾತ್ರ ಸೇರುತ್ತಾರೆ, ಎಂದೂ ಅವರು ಹೇಳಿಕೊಂಡಿದ್ದರು.