ಸಾವರ್ಕರ್, ಆರೆಸ್ಸೆಸ್, ಜಾತಿ ವ್ಯವಸ್ಥೆ ಮತ್ತು ಅಂಬೇಡ್ಕರ್
ಬ್ರಾಹ್ಮಣಶಾಹಿ ಹಾಗೂ ಬಂಡವಾಳಶಾಹಿಯ ವಿನಾಶವನ್ನು ಗುರಿಯಾಗಿಟ್ಟುಕೊಂಡು ನಡೆಸುವ ಹೋರಾಟದಲ್ಲಿ ಕಾಂಗ್ರೆಸ್ ರಾಜಕೀಯವಾಗಲೀ, ಗಾಂಧಿವಾದೀ ಸಿದ್ಧಾಂತವಾಗಲೀ ಅಂದಿಗೂ ಇಂದಿಗೂ ಮಿತ್ರಶಕ್ತಿಯಾಗದು ಎಂಬ ಎಚ್ಚರವನ್ನಿಟ್ಟುಕೊಳ್ಳುತ್ತಲೇ, ಈ ಸಮಾಜದ ಶೋಷಿತ-ದಮನಿತರಿಗೆ ಸಾವರ್ಕರ್-ಬಿಜೆಪಿ-ಆರೆಸ್ಸೆಸ್‌ಗಳು ಮಿತ್ರರಾಗುವುದಿರಲಿ ಅತ್ಯಂತ ದೊಡ್ಡ ಅಪಾಯಕಾರಿ ಶತ್ರುಗಳು ಎನ್ನುವ ಸತ್ಯವನ್ನು ಮರೆಯಕೂಡದು.
ಭಾಗ-1
ಭಾರತವನ್ನು ಅರ್ಥಮಾಡಿಕೊಳ್ಳಬೇಕಾದರೆ ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಳ್ಳಬೇಕು. ಭಾರತವನ್ನು ಬದಲಿಸಬೇಕೆಂದರೆ ಅಂಬೇಡ್ಕರ್ ಅವರನ್ನು ಅರಗಿಸಿಕೊಂಡಿರಬೇಕು ಎಂಬುದನ್ನು ಈಗ ಪ್ರಾಮಾಣಿಕರು ಯಾರೂ ಪ್ರಾಯಶಃ ನಿರಾಕರಿಸಲಾರರು. ಮೂರು ಸಾವಿರ ವರ್ಷಗಳಿಂದ ಈ ದೇಶದ ಶೇ. 97ರಷ್ಟು ಜನರನ್ನು ದಾಸ್ಯದಲ್ಲಿಟ್ಟುಕೊಂಡೇ ಬಂದಿರುವ ಬ್ರಾಹ್ಮಣಶಾಹಿಯಿಂದ ವಿಮೋಚನೆ ಪಡೆಯದೇ ಕೇವಲ ಕಳೆದ ಇನ್ನ್ನೂರೈವತ್ತು ವರ್ಷಗಳಿಂದ ಭಾರತವನ್ನು ಗುಲಾಮತನದಲ್ಲಿಟ್ಟುಕೊಂಡಿದ್ದ ಬ್ರಿಟಿಷ್ ವಸಾಹತುಶಾಹಿಯಿಂದ ಮಾತ್ರ ವಿಮೋಚನೆ ಪಡೆದರೆ ಈ ದೇಶದ ಬಹುಜನರಿಗೆ ನಿಜವಾದ ಸ್ವಾತಂತ್ರ್ಯ ದಕ್ಕುವುದೇ ಎಂಬ ಮೂಲಭೂತ ಪ್ರಶ್ನೆಯನ್ನು ಅಂಬೇಡ್ಕರ್ ಅವರು ಗಾಂಧಿಯನ್ನೂ ಒಳಗೊಂಡಂತೆ ಸ್ವಾತಂತ್ರ್ಯ ಹೋರಾಟದ ಎಲ್ಲಾ ಪ್ರತಿಷ್ಠಿತ ನಾಯಕರನ್ನು ಗಟ್ಟಿಯಾಗಿ ಪ್ರಶ್ನಿಸುತ್ತಲೇ ಇದ್ದರು. ಜಾತಿ ವ್ಯವಸ್ಥೆ ಹಾಗೂ ಮನುಸ್ಮತಿ ಆಧಾರಿತ ಹಿಂದೂ ಧರ್ಮ ಈ ಅಂತರಿಕ ವಸಾಹತುಶಾಹಿಯ ಗಂಗೋತ್ರಿಯಾಗಿದ್ದು ಎಲ್ಲಿಯತನಕ ಈ ಬ್ರಾಹ್ಮಣಶಾಹಿ ಸಾಮಾಜಿಕ ವ್ಯವಸ್ಥೆ ನಾಶವಾಗಿ ಮನುಷ್ಯರನ್ನು ಮನುಷ್ಯರಾಗಿ ಗುರುತಿಸುವ ಪ್ರಜಾತಾಂತ್ರಿಕ ಮೌಲ್ಯಗಳುಳ್ಳ ವ್ಯವಸ್ಥೆ ನಿರ್ಮಾಣವಾಗುವುದಿಲ್ಲವೋ ಅಲ್ಲಿಯ ತನಕ ಈ ದೇಶದ ಬಹುಜನರಿಗೆ ವಿಮೋಚನೆ ಸಾಧ್ಯವಿಲ್ಲವೆಂದು ಅಂಬೇಡ್ಕರ್ ಅವರು ಅತ್ಯಂತ ಸ್ಪಷ್ಟ ನಿಲುವಿಗೆ ಬಂದಿದ್ದರು. ಹೀಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಬಹುಜನರ ನೈಜ ಸ್ವಾತಂತ್ರ್ಯಕ್ಕೆ ಸೈದ್ಧಾಂತಿಕ ಅಡ್ಡಿಯಾಗಿದ್ದ ಹಿಂದೂ ಧರ್ಮದ ಮುಸುಕಿನ ಬ್ರಾಹ್ಮಣಶಾಹಿ ಸಿದ್ಧಾಂತ, ಜಾತಿ ವ್ಯವಸ್ಥೆ, ಮನುಸ್ಮತಿಯ ವಿರುದ್ಧ ರಾಜಕೀಯ ಹಾಗೂ ಧಾರ್ಮಿಕ ಹೋರಾಟ ಸಾರಿದ್ದರು. ಆದರೆ ಆಗ ಗಾಂಧಿಯನ್ನು ಒಳಗೊಂಡಂತೆ ಭಾರತದ ಸ್ವಾತಂತ್ರ್ಯ ಹೋರಾಟದ ಬಹುಪಾಲು ಹಿಂದೂ ಮೇಲ್ಜಾತಿ ನಾಯಕರು ಮನುಸ್ಮತಿ, ಜಾತಿ ವ್ಯವಸ್ಥೆ ಇತ್ಯಾದಿಗಳನ್ನು ಬ್ರಿಟಿಷ್ ವಸಾಹತುಶಾಹಿಯ ವಿರುದ್ಧದ ಭಾರತದ ಸನಾತನ ಅಸ್ಮಿತೆಯ ಸಂಕೇತಗಳನ್ನಾಗಿಯೇ ಪರಿಗಣಿಸಿದ್ದರು. ಆದರೆ ಅಂಬೇಡ್ಕರ್ ಅವರು ಮಹಾಡ್ ಸತ್ಯಾಗ್ರಹ, ಕಾಳಾರಾಮ ದೇವಸ್ಥಾನ ಪ್ರವೇಶ ಇತ್ಯಾದಿ ಸತ್ಯಾಗ್ರಹಗಳ ಮೂಲಕ ಹಿಂದೂ ಧರ್ಮ ಸುಧಾರಣೆಯಾಗಲು ಹೇಗೆ ಸಾಧ್ಯವಿಲ್ಲವೆಂದು ಸಾಬೀತು ಪಡಿಸಿದರು.
ಸತತ ತಾತ್ವಿಕ ಹಾಗೂ ರಾಜಕೀಯ ಸಂಘರ್ಷಗಳ ಮೂಲಕ ದುಂಡು ಮೇಜಿನ ಸಭೆಗಳಲ್ಲಿ ಅಸ್ಪಶ್ಯರನ್ನು ಹಿಂದೂಗಳೆಂದು ಪರಿಗಣಿಸದೆ ಪ್ರತ್ಯೇಕ ಸಮುದಾಯವೆಂದು ಪರಿಗಣಿಸಬೇಕೆಂದು ಆಗ್ರಹಿಸಿ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯವನ್ನು ಪಡೆದುಕೊಂಡರು. ಆದರೆ ಇದರಿಂದ ಮುಸ್ಲಿಮರೆದುರು ಹಿಂದೂಗಳ ಜನಸಂಖ್ಯಾವಾರು ಪ್ರಮಾಣ ಕಡಿಮೆಯಾಗಿ ಹಿಂದೂಗಳ ರಾಜಕೀಯ ಪ್ರಾತಿನಿಧ್ಯವೂ ಕಡಿಮೆಯಾಗುತ್ತದೆಂಬ ಹಿಂದೂ ರಾಜಕೀಯ ಲೆಕ್ಕಾಚಾರಗಳ ಕಾರಣದಿಂದಾಗಿ ಗಾಂಧಿಯವರು ಸತ್ಯಾಗ್ರಹದ ಅಸ್ತ್ರ ಪ್ರಯೋಗಿಸಿ ಅಸ್ಪಶ್ಯರನ್ನು ಹಿಂದೂಗಳ ಭಾಗವಾಗಿಯೇ ಪರಿಗಣಿಸುವ ಹಾಗೂ ಅದರ ಭಾಗವಾಗಿ ಅಸ್ಪಶ್ಯರಿಗೆ ರಾಜಕೀಯ ಪ್ರಾತಿನಿಧ್ಯದಲ್ಲಿ ಮೀಸಲಾತಿ ಒದಗಿಸುವ ಪೂನಾ ಒಪ್ಪಂದಕ್ಕೆ ಅಂಬೇಡ್ಕರ್ ಒಪ್ಪಿಕೊಳ್ಳಬೇಕಾದ ಒತ್ತಡವನ್ನು ಸೃಷ್ಟಿಸಿದರು. ಇದರಿದ ದಲಿತ ಸಮುದಾಯಕ್ಕೆ ರಾಜಕೀಯವಾಗಿಯೂ ಹಾಗೂ ಸಾಮಾಜಿಕವಾಗಿಯೂ ಅತ್ಯಂತ ದೊಡ್ಡ ಅನ್ಯಾಯವಾಯಿತು.
ಡಾ. ಅಂಬೇಡ್ಕರ್ ನೀಡಿದ ಶಾಕ್ ಟ್ರೀಟ್‌ಮೆಂಟ್
ಆ ನಂತರ 1935ರಲ್ಲಿ ‘‘ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯುವುದಿಲ್ಲ’’ ಎಂದು ಘೋಷಿಸಿದ ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತೊರೆದು ಹಿಂದೂಯೇತರ ಧರ್ಮಕ್ಕೆ ಮತಾಂತರವಾಗುವುದಾಗಿ ಘೋಷಿಸಿದರು. ಇದು ಪ್ರತ್ಯೇಕ ಪ್ರಾತಿನಿಧ್ಯಕ್ಕಿಂತ ದೊಡ್ಡ ಆತಂಕವನ್ನು ಹಿಂದೂ ಸಮಾಜದಲ್ಲಿ ಹುಟ್ಟುಹಾಕಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಒಂದು ಕಡೆ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಮೊತ್ತಮೊದಲಿಗೆ ಹಿಂದೂ ಸಮಾಜದೊಳಗೆ ಅಸ್ಪಶ್ಯತಾ ನಿವಾರಣೆ, ದೇವಸ್ಥಾನ ಪ್ರವೇಶದಂಥ ‘ವಿಧಾಯಕ’ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿತು. ಇದರ ಜೊತೆಗೆ ಹಲವಾರು ಮೇಲ್ಜಾತಿ ಮನುಷ್ಯವಂತರಲ್ಲಿ ಸುಪ್ತವಾಗಿದ್ದ ಮಾನವೀಯ ನೆಲೆಯ ಗಿಲ್ಟ್ ಅಂಬೇಡ್ಕರ್ ಎತ್ತಿದ ಪ್ರಶ್ನೆಗಳ ಕಾರಣದಿಂದಲೂ ಜಾಗೃತಗೊಂಡಿತು. ಆ ಕಾರಣದಿಂದಲೂ ಗಾಂಧಿ ಆಶ್ರಮದಲ್ಲೂ ಸಹಭೋಜನ, ಅಂತರ್ಜಾತಿ ವಿವಾಹಗಳು ಪ್ರಾರಂಭಗೊಂಡವು. ದೇಶದ ಹಲವಾರು ಕಡೆ ಮೇಲ್ಜಾತಿ ಗಾಂಧಿವಾದಿಗಳು ಹಲವು ಸುಧಾರಣಾ ಪ್ರಯತ್ನಗಳಲ್ಲಿ ತೊಡಗಿಕೊಂಡರು. ಆದರೆ ಇವೆಲ್ಲವೂ ಮೇಲ್ಜಾತಿ ಔದಾರ್ಯ ಹಾಗೂ ಚಾತುರ್ವರ್ಣ ವ್ಯವಸ್ಥೆ ಚೌಕಟ್ಟಿನಲ್ಲಿತ್ತೇ ವಿನಾ ಜಾತಿ ವಿನಾಶದ ಪ್ರಶ್ನೆಯನ್ನೇ ಪರಿಗಣಿಸಿರಲಿಲ್ಲ. ಇದು ಭಾರತದ ಸ್ವಾತಂತ್ರ್ಯ ಹೋರಾಟದ ಮತ್ತು ಭವಿಷ್ಯ ನಿರ್ಮಾಣದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್‌ನ ಮಿತಿಯೂ ಆಗಿತ್ತು. ಹೀಗಾಗಿಯೇ ಆ ನಂತರ ಸಂವಿಧಾನವೂ ಸಹ ಅಸ್ಪಶ್ಯತೆಯನ್ನು ನಿಷೇಧಿಸಿತೇ ವಿನಾ ಜಾತಿ ವ್ಯವಸ್ಥೆ ಮತ್ತು ಜಾತಿ ಆಧಾರಿತ ಸಾಮಾಜಿಕ ತಾರತಮ್ಯಗಳನ್ನಲ್ಲ. ಆದರೆ ಡಾ. ಅಂಬೇಡ್ಕರ್ ಜಾತಿ ಆಧಾರಿತ ಭಾರತದ ಬ್ರಾಹ್ಮಣಶಾಹಿ ವ್ಯವಸ್ಥೆಗೆ ಕೊಟ್ಟ ಟ್ರೀಟ್‌ಮೆಂಟಿಗೆ ಅತ್ಯಂತ ಅಪ್ರಮಾಣಿಕ ಹಾಗೂ ಅತ್ಯಂತ ಕುತಂತ್ರಿ ಪ್ರತಿಸ್ಪಂದನೆಯನ್ನು ಕೊಟ್ಟಿದ್ದು ಸಾವರ್ಕರ್ ಹಾಗೂ ಅವರ ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್. ಆದರೆ ಆ ಕಾಲಘಟ್ಟದಲ್ಲಿ ರಾಜಕಾರಣದಲ್ಲಿ ಅಂಥ ಮಹತ್ತರ ಸ್ಥಾನಮಾನಗಳನ್ನೇನೂ ಹೊಂದಿರಲಿಲ್ಲ. ಆಗ ಬ್ರಾಹ್ಮಣಶಾಹಿ ರಾಜಕಾರಣ ಹಾಗೂ ಅದರ ವಿರುದ್ಧ ಪ್ರಜಾತಾಂತ್ರಿಕ ರಾಜಕಾರಣ ಎರಡರ ಪ್ರಧಾನ ಧಾರೆ ವೇದಿಕೆಯೂ ಕಾಂಗ್ರೆಸ್ಸೇ ಆಗಿತ್ತು. ಹೀಗಾಗಿ ಅಂಬೇಡ್ಕರ್ ಅವರ ರಾಜಕೀಯ ಹಾಗೂ ಸೈದ್ಧಾಂತಿಕ ದಾಳಿಯ ಪ್ರಮುಖ ಗುರಿ ಕಾಂಗ್ರೆಸ್ ಆಗಿತ್ತು.
ಅದೇ ಸಮಯದಲ್ಲಿ ಅಂಬೇಡ್ಕರ್ ಅವರು ತಮ್ಮೆಲ್ಲಾ ಸೈದ್ಧಾಂತಿಕ ವಿರೋಧಗಳೊಂದಿಗೆ ಸಂವಿಧಾನ ರಚನೆಯಂತಹ ಸಂದರ್ಭಗಳಲ್ಲಿ ಕಾಂಗ್ರೆಸ್ ಜೊತೆಗೂಡಿಯೂ ಕೆಲಸ ಮಾಡಿದ್ದರು. ಇಂದು ಈ ಐತಿಹಾಸಿಕ ವಿಷಯಗಳನ್ನು ಬಳಸಿಕೊಂಡು ಆರೆಸ್ಸೆಸ್-ಬಿಜೆಪಿಗಳು ದಲಿತರಿಗೆ ಕಾಂಗ್ರೆಸ್ ಪ್ರಧಾನ ಶತ್ರುವೇ ವಿನಾ ಬಿಜೆಪಿಯಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ ಮತ್ತು ತಮ್ಮ ಎಂದಿನ ಚಾಳಿಯಂತೆ ತಮ್ಮ ವಾದದ ಸಮರ್ಥನೆಗೆ ಹಲವಾರು ಅರ್ಧ ಸತ್ಯಗಳನ್ನು ಮತ್ತು ಸುಳ್ಳುಗಳನ್ನು ಹರಿಬಿಟ್ಟಿದ್ದಾರೆ. ಆ ಸುಳ್ಳುಗಳಿಗೆ ಬಲಿಬಿದ್ದಿರುವ ಹಲವರು ಈ ಶತ್ರುಗಳನ್ನೇ ಮಿತ್ರರೆಂದೋ ಅಥವಾ ಕಡಿಮೆ ಶತ್ರುಗಳೆಂದೋ ನಂಬಿಕೊಳ್ಳುವ ನಂಬಿಸುವ ಹರಾಕಿರಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಬ್ರಾಹ್ಮಣಶಾಹಿ ಹಾಗೂ ಬಂಡವಾಳಶಾಹಿಯ ವಿನಾಶವನ್ನು ಗುರಿಯಾಗಿಟ್ಟುಕೊಂಡು ನಡೆಸುವ ಹೋರಾಟದಲ್ಲಿ ಕಾಂಗ್ರೆಸ್ ರಾಜಕೀಯವಾಗಲೀ, ಗಾಂಧಿವಾದೀ ಸಿದ್ಧಾಂತವಾಗಲೀ ಅಂದಿಗೂ ಇಂದಿಗೂ ಮಿತ್ರಶಕ್ತಿಯಾಗದು ಎಂಬ ಎಚ್ಚರವನ್ನಿಟ್ಟುಕೊಳ್ಳುತ್ತಲೇ, ಈ ಸಮಾಜದ ಶೋಷಿತ-ದಮನಿತರಿಗೆ ಸಾವರ್ಕರ್-ಬಿಜೆಪಿ-ಆರೆಸ್ಸೆಸ್‌ಗಳು ಮಿತ್ರರಾಗುವುದಿರಲಿ ಅತ್ಯಂತ ದೊಡ್ಡ ಅಪಾಯಕಾರಿ ಶತ್ರುಗಳು ಎನ್ನುವ ಸತ್ಯವನ್ನು ಮರೆಯಕೂಡದು.
ಅಯೋಗ್ಯ ಹಿಂದೂ ಮಹಾ ಸಭಾ ಮತ್ತು ಅಪ್ರಾಮಾಣಿಕ ಕಾಂಗ್ರೆಸ್
ವಾಸ್ತವದಲ್ಲಿ ಅಂಬೇಡ್ಕರ್ ಆಗ ತಮ್ಮ ಪ್ರಧಾನ ರಾಜಕೀಯ ಶತ್ರುವೆಂದು ಪರಿಗಣಿಸಿದ್ದ ಕಾಂಗ್ರೆಸ್‌ನ ವಿರುದ್ಧ ಹೋರಾಡುತ್ತಿದ್ದಾಗಲೂ ಈ ಅಪಾಯಾಕಾರಿ ಶಕ್ತಿಗಳ ಬಗ್ಗೆ ಅತ್ಯಂತ ನಿಷ್ಠುರ ಸ್ಪಷ್ಟತೆಯನ್ನು ಇಟ್ಟುಕೊಂಡಿದ್ದರು. ಉದಾಹರಣೆಗೆ ಕಾಂಗ್ರೆಸ್ ಒಂದು ಸಿದ್ಧಾಂತವಾಗಿ ಮತ್ತು ರಾಜಕೀಯ ಪಕ್ಷವಾಗಿ ಅಸ್ಪಶ್ಯರಿಗೆ ಹೇಗೆ ಮೋಸ ಮಾಡಿತು ಎಂದು ವಿವರಿಸುವ ಅವರ “WHAT CONGRESS AND GANDHI HAVE DONE TO THE UNTOUCHABLES” ಎಂಬ ದೀರ್ಘ ಬರಹದಲ್ಲೂ ಅಂಬೇಡ್ಕರ್ ಅವರು ಕಾಂಗ್ರೆಸ್ ಅಸ್ಪಶ್ಯರ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿಯನ್ನು ಸಾವರ್ಕರ್-ಮೂಂಜೆ ನೇತೃತ್ವದ ಹಿಂದೂ ಮಹಾಸಭಾದಂತಹ ‘ಅಯೋಗ್ಯ ಸಂಘಟನೆ’ಗೆ ವಹಿಸಿದ್ದನ್ನು ಅಸ್ಪಶ್ಯರ ಬಗೆಗೆ ಅದಕ್ಕೆ ಇರುವ ತಾತ್ಸಾರಕ್ಕೆ ಒಂದು ಉದಾಹರಣೆಯೆಂದು ಪ್ರತಿಪಾದಿಸುತ್ತಾರೆ. ಮುಂದುವರಿದು:
‘‘ಕಾಂಗ್ರೆಸ್ ಅಸ್ಪಶ್ಯರ ಸಮಸ್ಯೆಯನ್ನು ನಿವಾರಿಸುವ ಜವಾಬ್ದಾರಿಯಿಂದ ಜಾರಿಕೊಂಡಿದ್ದು ಮಾತ್ರವಲ್ಲದೆ ಆ ಜವಾಬ್ದಾರಿಯನ್ನು ಹಿಂದೂ ಮಹಾಸಭಾಗೆ ವಹಿಸಿ ಗಾಯದ ಮೇಲೆ ಉಪ್ಪುಸವರಿತು. ಅಸ್ಪಶ್ಯರ ಉದ್ಧಾರದ ಜವಾಬ್ದಾರಿಯನ್ನು ಹೊರಲು ಅತ್ಯಂತ ಅಯೋಗ್ಯವಾಗಿರುವ ಸಂಸ್ಥೆಯೊಂದು ಇದ್ದರೆ ಅದು ಹಿಂದೂ ಮಹಾಸಭಾ. ಹಿಂದೂ ಮಹಾ ಸಭಾ ಒಂದು ಉಗ್ರ ಹಿಂದೂ ಸಂಘಟನೆ. ಅದರ ಉದ್ದೇಶ ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದೂ ಎಂದು ಇರುವುದೆಲ್ಲವನ್ನೂ ಕಾಪಿಟ್ಟುಕೊಳ್ಳುವುದೇ ಆಗಿದೆ. ಅದು ಒಂದು ಸಾಮಾಜಿಕ ಸುಧಾರಣೆಯ ಸಂಘಟನೆಯೂ ಅಲ್ಲ. ಅದೊಂದು ರಾಜಕೀಯ ಸಂಘಟನೆಯಾಗಿದ್ದು ಅದರ ಪ್ರಮುಖ ಧ್ಯೇಯ ಭಾರತದ ರಾಜಕೀಯದಲ್ಲಿ ಮುಸ್ಲಿಮ್ ಪ್ರಭಾವದ ವಿರುದ್ಧ ಘರ್ಷಣೆ ಹುಟ್ಟುಹಾಕುವುದೇ ಆಗಿದೆ. ತನ್ನ ರಾಜಕೀಯ ಶಕ್ತಿಯನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಅದು ಸಾಮಾಜಿಕ ಸೌಹಾರ್ದವನ್ನು ಉಳಿಸಿಕೊಳ್ಳಲು ಬಯಸುತ್ತದೆ ಹಾಗೂ ಅದಕ್ಕಾಗಿ ಅದು ಅನುಸರಿಸುವ ಮಾರ್ಗ ಜಾತಿ ಮತ್ತು ಅಸ್ಪಶ್ಯತೆಯ ಬಗ್ಗೆ ಮಾತಾಡದೇ ಮೌನವಾಗಿದ್ದುಬಿಡುವುದು. ಅಂತಹ ಸಂಘಟನೆಯನ್ನು ಅಸ್ಪಶ್ಯರ ನಡುವೆ ಕೆಲಸ ಮಾಡಲು ಕಾಂಗ್ರೆಸ್ ಹೇಗೆ ಆಯ್ಕೆ ಮಾಡಿತು ಎಂಬುದು ನನ್ನ ಗ್ರಹಿಕೆಗೆ ಮೀರಿದ ವಿಷಯವಾಗಿದೆ. ಕಾಂಗ್ರೆಸ್ ಹೀಗೇಕೆ ಮಾಡುತ್ತಿದೆ? ತನಗೆ ಅಹಿತಕರವಾಗಿರುವ ಈ ವಿಷಯವನ್ನು ಮತ್ತೊಬ್ಬರಿಗೆ ದಾಟಿಸಿಬಿಡುವ ಧೋರಣೆಯನ್ನು ಬಿಟ್ಟರೆ ಇದಕ್ಕೇ ಬೇರೆ ಕಾರಣಗಳು ಇಲ್ಲ. ಹಿಂದೂ ಮಹಾಸಭಾ ಕೂಡ ಈ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಉತ್ಸುಕತೆ ಹೊಂದಿರಲಿಲ್ಲ. ಹಾಗೂ ಇದಕ್ಕಾಗಿ ಕಾಂಗ್ರೆಸ್ ಯಾವುದೇ ವಿಶೇಷ ನಿಧಿಯನ್ನೂ ಎತ್ತಿಟ್ಟಿರಲಿಲ್ಲ. ಹೀಗಾಗಿ ಈ ಯೋಜನೆ ಅತ್ಯಂತ ಅವಮಾನಕಾರಿಯಾದ ಸಾವನ್ನಪ್ಪಿತು’’(DR.BABASAHEB AMBEDKAR : WRITINGS AND SPEECHES, Vol. 9- p.23)
ದೂ ಮಹಾ ಸಭಾ ಮತ್ತು ಆರೆಸ್ಸೆಸ್ ಗಳು ಮೊದಲಿಂದಲೂ ದಲಿತೋದ್ಧಾರಕ್ಕಾಗಿ ಪಣತೊಟ್ಟು ಕೆಲಸ ಮಾಡುತ್ತಿವೆ ಎಂಬ ಅವರ ಪ್ರಚಾರಗಳು ಎಷ್ಟು ಸುಳ್ಳು ಎಂಬುದು ಇದರಿಂದ ಗೊತ್ತಾಗುತ್ತದೆ. ‘‘ಅಂಬೇಡ್ಕರ್‌ಗೆ ಸಹಾಯ ಮಾಡುವುದೆಂದರೆ ಹಾವಿಗೆ ಹಾಲೆರೆದಂತೆ!’’- ಹಿಂದೂ ಮಹಾಸಭಾ
ಅಂಬೇಡ್ಕರ್ ಅವರು ಈ ಅಭಿಪ್ರಾಯಕ್ಕೆ ಬರಲು ಸಾಕಷ್ಟು ಕಾರಣಗಳಿವೆ. 1935ರಲ್ಲಿ ಅಂಬೇಡ್ಕರ್ ಅವರು ಹಿಂದೂ ಧರ್ಮ ತೊರೆಯುತ್ತೇನೆ ಎಂದು ಘೋಷಿಸುವ ತನಕ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾಗಳು ಅಸ್ಪಶ್ಯರನ್ನು ಮನುಷ್ಯರೆಂದೇ ಪರಿಗಣಿಸಿರಲಿಲ್ಲ. ಯಾವಾಗ 1932ರ ದುಂಡು ಮೇಜಿನ ಪರಿಷತ್ತಿನ ಒಪ್ಪಂದಗಳು ಶಾಸನ ಸಭೆಗಳಲ್ಲಿ ಕೋಮುವಾರು ಜನಸಂಖ್ಯಾಧಾರಿತ ಪ್ರಾತಿನಿಧ್ಯವನ್ನು ಘೋಷಿಸಿತೋ, ಆಗ ಹಿಂದೂಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಅವರಿಗೆ ಎದುರಾಯಿತು. ಅಸ್ಪಶ್ಯರು ಹಿಂದೂ ಧರ್ಮ ತೊರೆದರೆ ಹಿಂದೂ ಕೋಮಿನ ಜನಸಂಖ್ಯೆ ಪ್ರಮಾಣ ಕಡಿಮೆಯಾಗಿ, ಆ ಮೂಲಕ ಹಿಂದೂ ಪ್ರಾತಿನಿಧ್ಯ ಕಡಿಮೆಯಾಗುತ್ತದೆ ಎಂಬ ಭಯ ಕಾಂಗ್ರೆಸ್ ಮತ್ತು ಸಭಾ ಎರಡನ್ನು ಸಮಾನವಾಗಿ ಆವರಿಸಿಕೊಂಡಿತ್ತು. ಅದರಲ್ಲೂ ಪ್ರಾರಂಭದಲ್ಲಿ ಅಂಬೇಡ್ಕರ್ ಇಸ್ಲಾಮ್ ಧರ್ಮವನ್ನು ಸೇರುವ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದದ್ದು ಸಹ ಹಿಂದೂ ಮಹಾಸಭಾದ ಆತಂಕವನ್ನು ಹೆಚ್ಚಿಸಿತು. ಹೀಗಾಗಿ ಒಲ್ಲದ ಮನಸ್ಸಿನಿಂದ ಸಾವರ್ಕರ್ ಮತ್ತು ಮೂಂಜೆಯಂಥ ಹಿಂದೂ ಮಹಾಸಭಾದ ನಾಯಕರು ಯಾವ ಕಾರಣಕ್ಕೂ ಅಂಬೇಡ್ಕರ್ ಅವರು ಇಸ್ಲಾಮನ್ನು ಸೇರಬಾರದೆಂದು ಮನವೊಲಿಸಲು ಮುಂದಾಗುತ್ತಾರೆಯೇ ವಿನಾ ದಲಿತರ ಮೇಲಿನ ಕಾಳಜಿಯಿಂದಲ್ಲ. ಏಕೆಂದರೆ ಈ ಅನಿವಾರ್ಯತೆ ಸೃಷ್ಟಿಯಾಗುವ ಕೇವಲ ಎರಡು ವಾರಗಳ ಮುನ್ನವೂ ಹಿಂದೂ ಮಹಾಸಭಾದ ನಾಯಕ ಮೂಂಜೆ ಅವರು ತಮ್ಮ ಡೈರಿಯಲ್ಲಿ ಹೀಗೆ ಬರೆದುಕೊಂಡಿರುತ್ತಾರೆ:‘‘ಇವತ್ತಿನ ಸಂದರ್ಭದಲ್ಲಿ ನಾವು ನಮ್ಮ ಎಲ್ಲಾ ಶಕ್ತಿಯನ್ನು, ಹಣ ಮತ್ತು ಇನ್ನಿತರ ಸಂಪನ್ಮೂಲಗಳನ್ನು ಒಗ್ಗೂಡಿಸಿ ಮಾಡಬೇಕಾದ ತುರ್ತು ಕೆಲಸವೆಂದರೆ ಸವರ್ಣೀಯ ಹಿಂದೂಗಳ ಸೈನಿಕ ತರಬೇತಿ. ಆ ತರಬೇತಿಯನ್ನು ಪಡೆದವರು ನಂತರದಲ್ಲಿ ಹಿಂದೂ ಧರ್ಮವನ್ನು ತೊರೆಯುವವರನ್ನು ಮತ್ತು ಆ ರೀತಿ ಹಿಂದೂಶ್ರದ್ಧೆಯನ್ನು ತೊರೆಯುವಂತೆ ಮಾಡುವವರನ್ನು ಶಿಕ್ಷಿಸಲು ಸಮರ್ಥರಾಗುತ್ತಾರೆ.’’
ಹಾಗೆ ನೋಡಿದರೆ 1932ರ ಪೂನ ಒಪ್ಪಂದದಲ್ಲಿ ಗಾಂಧಿ ನೀಡಿದ ದಲಿತೋದ್ಧಾರದ ಒಪ್ಪಂದಕ್ಕೆ ಹಿಂದೂ ಸಮಾಜದ ಪರವಾಗಿ ಸಹಿ ಹಾಕಿದವರಲ್ಲಿ ಮೂಂಜೆಯವರೂ ಒಬ್ಬರು. ಆದರೂ ಅವರು ಅಸ್ಪಶ್ಯರು ಮತ್ತು ಅಂಬೇಡ್ಕರ್ ಬಗ್ಗೆ ತಮಗಿದ್ದ ದ್ವೇಷವನ್ನು 1935ರಲ್ಲಿ ಅತ್ಯಂತ ಸ್ಪಷ್ಟವಾಗಿ ಹೀಗೆ ಕಕ್ಕಿಕೊಂಡಿದ್ದರು:
‘‘..ಅಂಬೇಡ್ಕರ್ ಅವರ ಮೇಲೆ ಮತ್ತು ಅಸ್ಪಶ್ಯರ ಮೇಲೆ ಹಣವನ್ನು ಖರ್ಚು ಮಾಡುವುದೆಂದರೆ ಹಾವಿಗೆ ಹಾಲೆರದಂತೆ. ನಾವು ಅಸ್ಪಶ್ಯರಿಗೆ ಯಾವುದೇ ಸಹಾಯವನ್ನು ಮಾಡದೆ ಅವರ ಕಷ್ಟಗಳನ್ನು ಅವರೇ ಅನುಭವಿಸಲು ಬಿಟ್ಟುಬಿಡಬೇಕು.’’
(Moonje Diary, Nehru Memorial Museum and Library, ಕೀಥ್ ಮೆಡೊಕ್ರಾಫ್ಟ್ ಅವರ he Moonje–Ambedkar Pact ಲೇಖನದಲ್ಲಿ ಉಲ್ಲೇಖ)
ಅಂಬೇಡ್ಕರ್ ಅವರು ತಮ್ಮ ಜಾತಿ ವಿನಾಶ ಕೃತಿಯಲ್ಲಿ ಕೆಲವು ಹಿಂದೂ ನಾಯಕರು ತನ್ನನ್ನು ದೇವತೋಟದ ಹಾವೆಂದು ಪರಿಗಣಿಸುತ್ತಾರೆ ಎಂದು ಉಲ್ಲೇಖಿಸುವುದು ಇದೇ ಪ್ರಸಂಗವನ್ನೇ.. ಇದೇ ಮೂಂಜೆಯವರೇ ಸಾವರ್ಕರ್ ಅವರ ಅಣ್ಣ ಮತ್ತು ಹೆಡಗೆವಾರ್ ಅವರ ಜೊತೆ ಸೇರಿ 1925ರಲ್ಲಿ ಆರೆಸ್ಸೆಸ್ಸನ್ನು ಹುಟ್ಟುಹಾಕಿದರು. 1932ರಲ್ಲಿ ಇಟಲಿಗೆ ಹೋಗಿ ಮುಸಲೋನಿಯನ್ನು ಭೇಟಿಯಾಗಿ ಬಂದು ಭಾರತದಲ್ಲಿ ಹಿಂದೂಗಳನ್ನು ಅದೇ ಮಾದರಿಯಲ್ಲಿ ಸೈನಿಕವಾಗಿ ಸಂಟಿಸಬೇಕೆಂದೂ, ಆರ್ಯ ಶ್ರೇಷ್ಟತೆಯನ್ನು ಕಾಪಾಡಿಕೊಳ್ಳಲು ಜಾತಿ ಶ್ರೇಷ್ಠತೆಯನ್ನು ಉಳಿಸಿಕೊಳ್ಳಬೇಕೆಂಬ ದರ್ಶನವನ್ನು ಒದಗಿಸಿದವರು.