varthabharthi


ಅನುಗಾಲ

ಮುಂದಿನ ರಾಷ್ಟ್ರಪತಿ

ವಾರ್ತಾ ಭಾರತಿ : 23 Jun, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಆಳುವ ಪಕ್ಷದ ಅಭ್ಯರ್ಥಿ ಪಕ್ಷಕ್ಕೆ ನಿಷ್ಠರು. ಇದಲ್ಲದೆ ಅವರಿಗೆ ರಾಷ್ಟ್ರಪತಿ ಹುದ್ದೆಗೆ ವಿಶೇಷ ಅರ್ಹತೆಯೇನೂ ಇಲ್ಲ. ಆದರೆ ಈ ದೇಶದ ಜನರು ಮಾತ್ರವಲ್ಲ, ಅವರು ಆಯ್ಕೆ ಮಾಡಿದ ಜನಪ್ರತಿನಿಧಿಗಳು ವಿವೇಕವಿಲ್ಲದೆ ನಡೆದುಕೊಂಡದ್ದೇ ಹೆಚ್ಚು. ಆದ್ದರಿಂದ ಅವರು ಆಯ್ಕೆಮಾಡುವ ಯಾವುದೇ ಚುನಾವಣೆಯಲ್ಲೂ ರಾಜಕಾರಣದ, ಅವಕಾಶದ ಘಾಟುವಾಸನೆ ಸಾಂದ್ರವಾಗಿರುತ್ತದೆ. ಪಕ್ಷಾಂತರ ಪಿಡುಗು ರಾಜಕಾರಣಿಗಳ ಜನ್ಮಸಿದ್ಧ ಹಕ್ಕಾಗಿರುವಾಗ ರಾಷ್ಟ್ರಪತಿಯ ಆಯ್ಕೆಯು ಅದರಿಂದ ದೂರವಾಗುವುದು ಹೇಗೆ ಸಾಧ್ಯ? ಈ

ಗ ಮುಂದಿನ ರಾಷ್ಟ್ರಪತಿ ಸ್ಥಾನಕ್ಕೆ ರಂಗಸ್ಥಳ ಸಜ್ಜಾಗಿದೆ. ಪ್ರತಿ ಪಕ್ಷಗಳ ಅಭ್ಯರ್ಥಿಯಾಗಿ ಮಾಜಿ ವಿದೇಶಾಂಗ ಸೇವೆಯ ಅಧಿಕಾರಿ ಮತ್ತು ವಾಜಪೇಯಿ ಸರಕಾರದಲ್ಲಿ ವಿತ್ತ ಹಾಗೂ ಆನಂತರ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಯಶವಂತ ಸಿನ್ಹಾ ಸ್ಪರ್ಧಿಸುತ್ತಿದ್ದರೆ, ಆಡಳಿತ ಪಕ್ಷಗಳ ಅಭ್ಯರ್ಥಿಯಾಗಿ ಜಾರ್ಖಂಡಿನ ಮಾಜಿ ರಾಜ್ಯಪಾಲರಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಕಣದಲ್ಲಿದ್ದಾರೆ. ಈ ಇಬ್ಬರಲ್ಲಿ ಒಬ್ಬರು ಮುಂದಿನ ರಾಷ್ಟ್ರಪತಿ.

ಜನರ ನಡುವೆ ರಾಷ್ಟ್ರಪತಿ ಹುದ್ದೆ ವಿಶೇಷ ಆಸಕ್ತಿ ಅಥವಾ ಕುತೂಹಲವನ್ನುಂಟುಮಾಡುವುದಿಲ್ಲ. ಇದಕ್ಕೆ ಕಾರಣ ಸಾಂವಿಧಾನಿಕವಾಗಿ ದೇಶದ ಅತ್ಯುಚ್ಚ, ಮತ್ತು ಅಲಂಕಾರಿಕವಾಗಿ ದೇಶದ ಪ್ರಥಮ ಪ್ರಜೆಯಾಗುವ ಈ ಹುದ್ದೆ ಸಾಕಷ್ಟು ಅಪಮೌಲ್ಯಗೊಂಡಿರುವುದು. ಸಂವಿಧಾನದಲ್ಲಿ ಇದು ರಾಜ್ಯಪಾಲರ ಹುದ್ದೆಯ ದಪ್ಪಕ್ಷರ ಅಷ್ಟೇ. ಪ್ರಾಯಃ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಹುದ್ದೆಯ ಜೀರ್ಣಾವಸ್ಥೆಯ ಭವಿಷ್ಯವನ್ನು ಊಹಿಸಿದ್ದರೆ ನಮ್ಮ ಸಂವಿಧಾನ ಶಿಲ್ಪಿಗಳು ಈ ಹುದ್ದೆಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡುತ್ತಿದ್ದರೋ ಏನೋ? ಉಪರಾಷ್ಟ್ರಪತಿಗಳಿಗಾದರೂ ರಾಜ್ಯಸಭೆಯ ಅಧ್ಯಕ್ಷತೆಯಿಂದಾಗಿ ಕಾಲಕಳೆಯಬಹುದು. ರಾಷ್ಟ್ರಪತಿಗಳಿಗೆ? ಗರ್ಭಗುಡಿಯಲ್ಲಿರುವ ದೇವರಂತೆ ಏಕಾಂತ; ಹಬ್ಬಹರಿದಿನಗಳಲ್ಲಿ ಮೆರವಣಿಗೆಯಾಗುವಂತೆ ವಿದೇಶ ಪ್ರವಾಸ, ಉದ್ಘಾಟನೆ, ಭೇಟಿ ಇತ್ಯಾದಿ. ಒಕ್ಕೂಟ ವ್ಯವಸ್ಥೆಯಲ್ಲಿ ಸಚಿವ ಸಂಪುಟ ಶಿಫಾರಸು ಮಾಡಿದ್ದಕ್ಕೆ ಹಸ್ತಾಕ್ಷರ. ಎಲ್ಲವೂ ಅವರ ಹೆಸರಿನಲ್ಲೇ. ತುಳು ಭಾಷೆಯಲ್ಲಿ ‘ಮೀತ್ ಉಣ್ಪುನ ಅಣ್ಣೆ’ ಎಂಬ ಮಾತಿದೆ. ಅಂದರೆ ‘ಮಿಂದು ಅಥವಾ ಮಡಿಹಚ್ಚಿ ಉಣ್ಣುವ ಮನೆಯ ಹಿರಿಯ’. ವ್ಯವಹಾರವೆಲ್ಲ ಇನ್ನೊಬ್ಬರ ಕೈಯಲ್ಲಿ. ಆದರೆ ಹೆಸರು ಹಿರಿಯವನದ್ದೇ. ಸಾಂಸದಿಕ ಪ್ರಜಾತಂತ್ರದಲ್ಲಿ ಅಧ್ಯಕ್ಷರ ಹಕ್ಕು ಮೊಟಕಾಗಿದೆ.

ಅಧ್ಯಕ್ಷೀಯ ಪ್ರಜಾತಂತ್ರದಲ್ಲಿ ಹೇಗಿದೆಯೆಂದು ನೋಡಬೇಕಾದರೆ ಅಮೆರಿಕದ ಸ್ವರೂಪವನ್ನು ಗಮನಿಸಬೇಕು. ಸಂವಿಧಾನದಲ್ಲಿ ಆದ್ಯತೆಯ ಮೇಲೆ ಪ್ರಸ್ತಾವಿಸಿರುವ, ಉಲ್ಲೇಖಿಸಿರುವ ಹುದ್ದೆಯೆಂದರೆ ರಾಷ್ಟ್ರಪತಿ. 52ನೇ ವಿಧಿಯಿಂದ ಆರಂಭವಾದ ಅವರ ಕುರಿತ ಉಲ್ಲೇಖವು 62ನೇ ವಿಧಿಯ ವರೆಗಿದೆ. (63ನೇ ವಿಧಿಯಿಂದ 70ನೇ ವಿಧಿಯ ವರೆಗೆ ಉಪರಾಷ್ಟ್ರಪತಿಯ ಕುರಿತ ವಿಧಿಗಳಿವೆ.) ರಾಷ್ಟ್ರಪತಿಗೆ ಕ್ಷಮಾದಾನ ನೀಡುವ, ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡುವ, ಸಂಸತ್ ಅಧಿವೇಶನದಲ್ಲಿಲ್ಲದಾಗ ಸುಗ್ರೀವಾಜ್ಞೆಯನ್ನು ಹೊರಡಿಸುವ, ತುರ್ತು ಪರಿಸ್ಥಿತಿಯನ್ನು ಘೋಷಿಸುವ, ಮುಂತಾದ ಮಹತ್ತರ ಹೊಣೆಯನ್ನು ನೀಡಲಾಗಿದೆಯಾದರೂ ಅದನ್ನು ಸೂಚಿಸುವ, ಶಿಫಾರಸು ಮಾಡುವ, ಕಾರ್ಯರೂಪಕ್ಕಿಳಿಸುವಲ್ಲಿ ಸಚಿವಾಲಯಕ್ಕಿರುವ ಹಕ್ಕಿನಿಂದಾಗಿ ರಾಷ್ಟ್ರಪತಿಯ ಹಕ್ಕುಗಳು ಪೊಳ್ಳಾಗಿವೆ. ಅವರು ಸಂಸತ್ತನ್ನುದ್ದೇಶಿಸಿ ಮಾಡುವ ಭಾಷಣವೂ ಸಚಿವ ಸಂಪುಟದ ಅನುಮೋದನೆಯಿಂದ ಅಂತಿಮಗೊಳ್ಳುವುದರಿಂದ, ಅದೂ ಕಾಟಾಚಾರವಾಗಿದೆ. ನಮ್ಮ ಮಾಧ್ಯಮಗಳಲ್ಲಿ ರಾಷ್ಟ್ರಪತಿಯ ಹೆಸರನ್ನು ಬರೆದು ಸುಗ್ರೀವಾಜ್ಞೆಗೆ, ಶಾಸನಕ್ಕೆ ಅಂಕಿತ ಹಾಕಿದರು ಎಂದು ವರದಿಯಾಗುವುದಿದೆ.

ತಾಂತ್ರಿಕವಾಗಿ ಇದು ಸರಿ. ಅಧಿಕೃತ ಮಾಹಿತಿಯಲ್ಲಿ ಹೀಗೆಯೇ ಇರಬೇಕು. ಆದರೆ ಮಾಧ್ಯಮಗಳು ಇವುಗಳ ಯಥಾರ್ಥವನ್ನು ಅರಿತ ವರದಿಯನ್ನು ಅಂದರೆ ಸರಕಾರ ಇಂತಹ ಸುಗ್ರೀವಾಜ್ಞೆ ತಂದರೆ, ಈ ಶಾಸನವನ್ನು ಜಾರಿ ಮಾಡಿದರು ಎಂದೇ ವರದಿ ಮಾಡಿದರೆ ಮಾತ್ರ ಅದು ಮಾಧ್ಯಮ ವರದಿಯಾಗುತ್ತದೆ. ಇಲ್ಲವಾದರೆ ಅದು ಸರಕಾರಿ ಮಾಧ್ಯಮದ ಅಥವಾ ಹೆಚ್ಚೆಂದರೆ ಆಕಾಶವಾಣಿಯ ವರದಿಯಾಗುತ್ತದೆ.

ನಾವೀಗ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಕಳೆದ ಏಳು ಚಿಲ್ಲರೆ ದಶಕಗಳ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ ಅಧ್ಯಕ್ಷರಿಂದ ಅಧ್ಯಕ್ಷರಿಗೆ ಈ ಹುದ್ದೆ ಗೌಣವಾಗುತ್ತ ಸಾಗಿದೆ. 35 ವರ್ಷ ದಾಟಿದ, ಅಪರಾಧದ ಹಿನ್ನೆಲೆಯಿಲ್ಲದ, (ಇದ್ದರೂ ಸಾಬೀತಾಗದ!) ದಿವಾಳಿ ಅರ್ಜಿ ಸಲ್ಲಿಸದ, ಯಾವನೇ ಭಾರತೀಯ ಪ್ರಜೆಯೂ ಈ ಹುದ್ದೆಗೆ ಅಭ್ಯರ್ಥಿಯಾಗಬಹುದು. ಪಕ್ಷಗಳೇ ಅಭ್ಯರ್ಥಿಯನ್ನು ಆಯ್ಕೆ ಮಾಡುವುದರಿಂದಾಗಿ ಮತ್ತು ಆಳುವ ಪಕ್ಷಗಳು ಅಧಿಕಾರವಿಲ್ಲದೆ ಶಾಸಕಾಂಗದ, ಕಾರ್ಯಾಂಗದ ಮಾತಿಗೆ ಶಿರಬಾಗುವ ವ್ಯಕ್ತಿಯನ್ನೇ ಆರಿಸಲು ಪ್ರಯತ್ನಿಸುವುದರಿಂದಾಗಿ ಯೋಗ್ಯತೆಯ ಪ್ರಶ್ನೆಯಿಲ್ಲದೆ ಯಾರೋ ಒಬ್ಬರನ್ನು ಆಯ್ಕೆ ಮಾಡುವುದು ಪರಿಪಾಠವಾಗಿದೆ.

ಇದರ ರಾಜಕೀಯ ಸಮಸ್ಯೆ ಎಷ್ಟು ಹಾಸ್ಯಾಸ್ಪದವಾಗಿದೆಯೆಂದರೆ ಐದು ವರ್ಷಗಳ ಕಾಲ ರಾಷ್ಟ್ರಪತಿಯಾಗಿದ್ದವರನ್ನು ಆಳುವ ಪಕ್ಷ ಮರುನೇಮಕಾತಿ ಮಾಡುವುದಿಲ್ಲ. ಏನಾದರೂ ಸಕಾರಣವಿಲ್ಲದೆ ಅವರ ಸೇವಾವಧಿ ಮುಗಿದ ತಕ್ಷಣ ಅವರಿಗೆ ಮೋಕ್ಷ ಕರುಣಿಸುವುದು ಒಂದು ರೀತಿಯ ವ್ಯಂಗ್ಯ. ಅಷ್ಟೇ ಅಲ್ಲ, ಆವರೆಗೆ ಉಪರಾಷ್ಟ್ರಪತಿಯಾಗಿದ್ದವರಿಗೆ ಇನ್ನೊಂದು ಮೆಟ್ಟಿಲೇರಲು ಅವಕಾಶ ನೀಡದೆ ಹೊಸಬರನ್ನು ಅಭ್ಯರ್ಥಿಯಾಗಿ ಗುರುತಿಸುವುದು ಇನ್ನೂ ಅಪಮಾನ. ಸದ್ಯ ನಮ್ಮ ಮುಂದಿರುವ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳಿಗೆ ಅಧಿಕಾರಾವಧಿಯ ವಿಸ್ತರಣೆಯ ಭಾಗ್ಯವಿಲ್ಲ. ಈ ಎರಡೂ ಹುದ್ದೆಗಳೂ ಭಾಗಶಃ ಗೌರವ ಮತ್ತು ಭಾಗಶಃ ಚುನಾವಣೆಯನ್ನು ಆಧರಿಸಿದೆಯೆನ್ನಲಾಗಿದ್ದು ಕೊನೆಗೆ ಎರಡೂ ಅಲ್ಲದ ಅತಂತ್ರ ಆಯ್ಕೆಯಾಗುವುದೇ ವಿಷಾದನೀಯ. ಹಾಗೆ ನೋಡಿದರೆ ಮೊದಲ ಕೆಲವು ರಾಷ್ಟ್ರಪತಿಗಳು ರಾಜಕಾರಣದ ಹಿನ್ನೆಲೆಯವರಾಗಿದ್ದೂ ಉನ್ನತ ವ್ಯಕ್ತಿತ್ವವನ್ನು ಪಡೆದವರಾಗಿದ್ದುದರಿಂದ ರಾಷ್ಟ್ರಪತಿಯ ಹುದ್ದೆಗೆ ಗೌರವ ತಂದರು. ಆನಂತರ ರಾಜಕಾರಣದಲ್ಲಿ ಆಳುವವರಿಗೆ ನಿಷ್ಠರಾದ ರಾಜಕಾರಣಿಗಳನ್ನು ಆಯ್ಕೆ ಮಾಡುವುದು ಆರಂಭವಾಯಿತು. ತಮಗಿಷ್ಟವಾದ ಯಾರೂ ಆಗಬಹುದೆಂಬ ತತ್ವದಿಂದಾಗಿ ಅನೇಕ ಆಕಸ್ಮಿಕರಿಗೆ ಅವಕಾಶವಾಯಿತು. ಹೀಗೆ ಆಯ್ಕೆಯಾದ ವ್ಯಕ್ತಿಗಳು ಡಾ. ಅಬ್ದುಲ್ ಕಲಾಮ್‌ರಂತೆ ಜನಪ್ರಿಯರಾದದ್ದೂ ಇದೆ ಅಥವಾ ಪ್ರತಿಭಾ ಪಾಟೀಲ್, ರಾಮನಾಥ್ ಕೋವಿಂದ್ ಅವರಂತೆ ಬಂದು ಹೋಗುವವರೂ ಆದದ್ದುಂಟು. ರಾಜಕಾರಣದಲ್ಲಿ ಸ್ಪರ್ಧೆಗಿಳಿದಾರೆಂಬ ಆತಂಕದಿಂದ ಪಕ್ಷದ ಪರವಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿಯಾಗಿ ಆಯ್ಕೆಯಾದವರೂ ಉಂಟು: ಪ್ರಣವ್ ಮುಖರ್ಜಿ, ವೆಂಕಯ್ಯನಾಯ್ಡು ಹೀಗೆ.

ಈ ಬಾರಿಯ ಚುನಾವಣೆ ಒಂದು ತಂತ್ರವಾಗಿ ಪರಿಣಮಿಸಿದೆ. ಪ್ರಧಾನಿ ಹಿಂದಿನ ಸಲವೂ ಆಯ್ಕೆ ಮಾಡಿದ್ದು ಒಬ್ಬ ಸಾಧಾರಣ, ಅಷ್ಟೇನೂ ಪರಿಚಿತರಲ್ಲದ, ಜನಪ್ರಿಯರಲ್ಲದ, ಆದರೆ ನಿಷ್ಠಾವಂತ ರಾಜಕಾರಣಿಯನ್ನು. ಅವರು ಹಿಂದುಳಿದ ಜಾತಿಯವರೆಂಬುದು ಮತ್ತು ಈ ಮೂಲಕ ತಾವು ಹಿಂದುಳಿದವರ ಪರವಾಗಿದ್ದೇವೆ ಎಂಬ ಸಂದೇಶವೇ ಮುಖ್ಯವಾಗಿತ್ತು. ಈ ಬಾರಿ ಆಡಳಿತ ಪಕ್ಷದವರು ಅಭ್ಯರ್ಥಿಯನ್ನು ಘೋಷಿಸುವ ಮೊದಲೇ ಪ್ರತಿಪಕ್ಷಗಳು ಸಿನ್ಹಾ ಅವರನ್ನು ಆಯ್ಕೆಮಾಡಿವೆ. ಇಲ್ಲಿಯು ಜಾತೀಯವಲ್ಲದ ರಾಜಕಾರಣ ಸಾಕಷ್ಟು ಕೆಲಸಮಾಡಿದೆ. ಅಭ್ಯರ್ಥಿಯಾಗಿದ್ದರೆ ಗೆಲ್ಲುವ ಅವಕಾಶವಿದ್ದ ಶರದ್ ಪವಾರ್ ಈ ಅವಕಾಶವನ್ನು ತಿರಸ್ಕರಿಸಿದರು. ಇದಕ್ಕೆ ಕಾರಣವೆಂದರೆ ಅವರಿಗಿನ್ನೂ ಅಧಿಕಾರ ರಾಜಕೀಯದ ಮಹತ್ವಾಕಾಂಕ್ಷೆಯಿರುವುದು. ಇವರಲ್ಲದೆ, ಸಕ್ರಿಯ ರಾಜಕಾರಣದಲ್ಲಿರುವ ಶೇಕ್ ಅಬ್ದುಲ್ಲಾ, ರಾಜಕೀಯದಿಂದ ದೂರವಿದ್ದೂ ವ್ಯವಸ್ಥೆಯ ಲೋಪದೋಷಗಳನ್ನು ಗುರುತಿಸಲು ಸಮರ್ಥರಾದ ಗಾಂಧೀ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಮುಂತಾದವರ ಹೆಸರೂ ಚಾಲ್ತಿಗೆ ಬಂತು. ಆದರೆ ಅವರೂ ತಿರಸ್ಕರಿಸಿದರು. ರಾಷ್ಟ್ರಪತಿಯ ಹುದ್ದೆಗೆ ಘನತೆ-ಗೌರವ ತರಬಲ್ಲ ಡಾ. ಕರಣ್‌ಸಿಂಗ್, ಗೋಪಾಲಕೃಷ್ಣ ಗಾಂಧಿಯಂತಹವರು ವ್ಯವಸ್ಥೆಯನ್ನು, ರಾಜಕಾರಣದ ಕೊಳೆಯನ್ನು, ಟೀಕಿಸಬಲ್ಲರೆಂಬುದೇ ಅವರಿಗಿರುವ ಅವಗುಣ. ಆದರೂ ಪ್ರತಿಪಕ್ಷಗಳು ಸಾಮಾನ್ಯವಾಗಿ ಸರಕಾರವನ್ನು ಇರುಸುಮುರುಸಿಗೆ ತಳ್ಳಬಲ್ಲ ಸಮರ್ಥರನ್ನೇ ಹುಡುಕುತ್ತವೆ.

ಇದರಿಂದಾಗಿ ಅವರಿಗೆ ಸಿಕ್ಕ ಕೊನೆಯ ಆಯ್ಕೆಯೂ ಯೋಗ್ಯತೆಯುಳ್ಳವರೇ. ವಯಸ್ಸಿನ ಹೊರತಾಗಿ ಸಿನ್ಹಾ ಸಮರ್ಥರು. ವಿಚಿತ್ರವೆಂದರೆ ಪ್ರತಿಪಕ್ಷಗಳು ಪಕ್ಷೀಯ ಅಹಂಭಾವವನ್ನು ತೋರಿಸಿ ಬಿರುಕು ಬಿಟ್ಟಿವೆ. ಆದ್ದರಿಂದ ಎಲ್ಲ ಪ್ರತಿಪಕ್ಷಗಳೂ ಒಟ್ಟಾಗಿವೆ, ಅಥವಾ ಒಟ್ಟಾಗುತ್ತವೆಯೆಂದು ಹೇಳಲಾಗುವುದಿಲ್ಲ. ಈಚೆಗೆ ಈ ಕುರಿತ ಸಮಾಲೋಚನೆಗೆ ಸಭೆ ಕರೆದಾಗಲೇ ಈ ಬಿರುಕು ಕಾಣುತ್ತಲಿತ್ತು. ಕಾಂಗ್ರೆಸ್, ಟಿಎಂಸಿ, ಆಪ್, ಬಿಜೆಡಿ ಮುಂತಾದ ಪಕ್ಷಗಳು ‘ನಿಮ್ಮೆಡನಿದ್ದೂ ನಿಮ್ಮಂತಾಗದೆ’ ಎಂಬ ತತ್ವ್ವದಡಿ ಗೆಲ್ಲಲಾಗದಷ್ಟು ತಂತ್ರಗಳನ್ನು ಮಾಡಿವೆ. ಇವಲ್ಲದೆ ಉಳಿದ ಪಕ್ಷಗಳೂ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಪ್ರತಿಪಕ್ಷಗಳು ಏಕತೆಯಲ್ಲಿ ವೈವಿಧ್ಯ ಮಾತ್ರವಲ್ಲ ಭಿನ್ನತೆಯನ್ನು ತೋರಿಸುತ್ತಿವೆ. ಇವೆಲ್ಲವೂ ಆಳುವ ಪಕ್ಷಕ್ಕೆ ಅನುಕೂಲಕರವಾಗಿ ಪರಿಣಮಿಸಿದರೆ ಅಚ್ಚರಿಯಿಲ್ಲ. ತನ್ನ ಶಕ್ತಿಗಿಂತ ಪ್ರತಿಪಕ್ಷಗಳಲ್ಲಿರುವ ಈ ಒಗ್ಗಟ್ಟಿನ ಅಭಾವವನ್ನೇ ಮುಖ್ಯ ಬಂಡವಾಳವಾಗಿಸಿ ಮತ್ತು ಒಂದಿಷ್ಟು ಆಮಿಷ, ಭೇದ ಮುಂತಾದವುಗಳನ್ನು ಒಡ್ಡಿ ಜಯಿಸಲು ಆಡಳಿತಪಕ್ಷ ಸಮರ್ಥವಾಗಿದೆ. ಈ ಬಾರಿ ಆಳುವ ಗುಂಪು ಒಬ್ಬ ಬುಡಕಟ್ಟಿನ ವ್ಯಕ್ತಿಯನ್ನು ಆಯ್ಕೆ ಮಾಡಿದೆ. ಮುಂದಿನ ದಿನಗಳಲ್ಲಿ ಬುಡಕಟ್ಟಿನ ಈ ವ್ಯಕ್ತಿ ರಾಷ್ಟ್ರಪತಿಯಾದರೆ ಇಡೀ ದೇಶದ ಬುಡಕಟ್ಟಿನ ಜನರ ಹಿತ ಈಡೇರುತ್ತದೆ ಎಂಬಂತೆ ಈಗಲೇ ಮಾಧ್ಯಮ ವರದಿಗಳು ಸಾರುತ್ತಿವೆ.

ರಾಷ್ಟ್ರಪತಿಯಂತಹ ಹುದ್ದೆಯ ಆಯ್ಕೆಯಲ್ಲಿ ಜಾತಿ, ಧರ್ಮ, ಮತ ಇವು ಕೆಲಸಮಾಡಬಾರದು. ಯೋಗ್ಯತೆ ಮತ್ತು ಆ ಹುದ್ದೆಗೆ ಬೇಕಾದ ಅರ್ಹತೆ ಅಲ್ಲದೆ ಹುದ್ದೆಯ ಗೌರವವನ್ನು ಉಳಿಸುವ ಮತ್ತು ಸಾಧ್ಯವಾದರೆ ಹೆಚ್ಚಿಸುವ ವ್ಯಕ್ತಿಗಳು ಈ ದೇಶದಲ್ಲಿ ಬೇಕಷ್ಟಿದ್ದಾರೆ. ಆದರೆ ಅವರಿಗೆ ರಾಜಕೀಯದ ಕೃಪಾಶ್ರಯ, ರಾಜಕಾರಣಿಗಳು ಗೌರವಿಸುವ ವಾತಾವರಣ ಬೇಕಾಗಿದೆ. ಅಡ್ವಾಣಿಯಂಥವರು ಮೂಲೆಗುಂಪಾಗಿದ್ದಾರೆ; ಈ ಬಾರಿ ಭಡ್ತಿ ಸಿಗಲಾರದ ವೆಂಕಯ್ಯ ನಾಯ್ಡು ಪ್ರಾಯಃ ಸಕ್ರಿಯ ರಾಜಕಾರಣಕ್ಕೆ ವಾಪಸಾದಾರು ಇಲ್ಲವೇ ಉಪರಾಷ್ಟ್ರಪತಿಯಾಗಿ ಮುಂದುವರಿದಾರು. ಆಳುವ ಪಕ್ಷದ ಅಭ್ಯರ್ಥಿ ಪಕ್ಷಕ್ಕೆ ನಿಷ್ಠರು. ಇದಲ್ಲದೆ ಅವರಿಗೆ ರಾಷ್ಟ್ರಪತಿ ಹುದ್ದೆಗೆ ವಿಶೇಷ ಅರ್ಹತೆಯೇನೂ ಇಲ್ಲ. ಆದರೆ ಈ ದೇಶದ ಜನರು ಮಾತ್ರವಲ್ಲ, ಅವರು ಆಯ್ಕೆ ಮಾಡಿದ ಜನಪ್ರತಿನಿಧಿಗಳು ವಿವೇಕವಿಲ್ಲದೆ ನಡೆದುಕೊಂಡದ್ದೇ ಹೆಚ್ಚು. ಆದ್ದರಿಂದ ಅವರು ಆಯ್ಕೆಮಾಡುವ ಯಾವುದೇ ಚುನಾವಣೆಯಲ್ಲೂ ರಾಜಕಾರಣದ, ಅವಕಾಶದ ಘಾಟುವಾಸನೆ ಸಾಂದ್ರವಾಗಿರುತ್ತದೆ. ಪಕ್ಷಾಂತರ ಪಿಡುಗು ರಾಜಕಾರಣಿಗಳ ಜನ್ಮಸಿದ್ಧ ಹಕ್ಕಾಗಿರುವಾಗ ರಾಷ್ಟ್ರಪತಿಯ ಆಯ್ಕೆಯು ಅದರಿಂದ ದೂರವಾಗುವುದು ಹೇಗೆ ಸಾಧ್ಯ? ಈ ಬಾರಿ ಗಮನಿಸಬೇಕಾದದ್ದು ಪರಸ್ಪರ ಬಲಾಬಲ ಮತ್ತು ಶಕ್ತಿ. ಆಡಳಿತ ಪಕ್ಷಕ್ಕೆ ಮತಗಟ್ಟೆಯಲ್ಲಿ ಗೆದ್ದೇ ಗೆಲ್ಲುತ್ತೇವೆನ್ನುವಷ್ಟು ಬಹುಮತವಿಲ್ಲ. ಏನಾದರೂ ಆತ್ಮಸಾಕ್ಷಿಯ ವಿಚಾರ ಬಂದರೆ (ವಿ.ವಿ.ಗಿರಿಯವರು ಗೆದ್ದಂತೆ) ಸಿನ್ಹಾ ಗೆಲ್ಲುವ ಸಾಧ್ಯತೆಯೂ ಇದೆ.

ಒಂದಂತೂ ಸ್ಪಷ್ಟ: ಅಧ್ಯಕ್ಷೀಯ ಮಾದರಿಯ ಸರಕಾರಕ್ಕೆ ಪ್ರಧಾನಿ ತಕ್ಷಣದ ಒಲವನ್ನು ತೋರಿಸಿಲ್ಲ. ಇದಕ್ಕೆ ಬೇಕಾದ ಸಂವಿಧಾನ ತಿದ್ದುಪಡಿಗೆ ಬಹುಮತ ಸಾಲದು. ತನ್ನ ಕೊರತೆಗಳನ್ನು, ಲೋಪದೋಷಗಳನ್ನು, ಗುರುತಿಸಿಕೊಳ್ಳದೆ ಸಾಹಸಕ್ಕೆ ಇಳಿದರೆ ಏನಾಗುತ್ತದೆಂದು ಕೃಷಿ ಮಸೂದೆಗಳು, ಸಿಎಎ, ಎನ್‌ಆರ್‌ಸಿ ಮುಂತಾದವು ತೋರಿಸಿಕೊಟ್ಟಿವೆ. ಆದ್ದರಿಂದ ಅಂತಹ ದುಸ್ಸಾಹಸಕ್ಕೆ ಸರಕಾರ ಮತ್ತದರ ಪ್ರಧಾನಿ ಮನಮಾಡಿಲ್ಲ. ಅದಲ್ಲದಿದ್ದರೆ, ಈಗಿನ ರಾಜಕೀಯ ಸ್ಥಿತಿಯಲ್ಲಿ ಪ್ರಧಾನಿ ತನ್ನ ಹುದ್ದೆಯನ್ನು ಶಾ ಅವರ ಹೆಗಲಿಗಿರಿಸಿ ತಾನೇ ಅಧ್ಯಕ್ಷ ಅಭ್ಯರ್ಥಿಯಾಗುತ್ತಿದ್ದರು. ಯಾರೇ ಅಧ್ಯಕ್ಷರಾದರೂ ಪರಿಣಾಮದಲ್ಲಿ ವಿಶೇಷ ವ್ಯತ್ಯಾಸವಿರಲಾರದು. ಆದರೆ ಆಡಳಿತ ಪಕ್ಷದ ಮೇಲೆ, ಸರಕಾರದ ಮೇಲೆ ರಾಷ್ಟ್ರಪತಿಯ ನಿಯಮನಿಷ್ಠೆಗಳು ಖಂಡಿತಾ ಪರಿಣಾಮ ಬೀರಲಿವೆ. ಈ ಹಿನ್ನೆಲೆಯಲ್ಲಿ ಸಿನ್ಹಾ ಅವರ ಆಯ್ಕೆ ಪ್ರಜಾಪ್ರಭುತ್ವವನ್ನು ಕಾಪಾಡಬಹುದು. ಈಗ ಲಂಗುಲಗಾಮಿಲ್ಲದೆ ಕೆನೆಯುವ ಅಧಿಕಾರದ ಕುದುರೆಗೆ ಒಂದಿಷ್ಟು ಪಾಠ ಸಿಕ್ಕಿದರೂ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹಿತವಾಗಬಹುದು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)