varthabharthi


ಅಂತಾರಾಷ್ಟ್ರೀಯ

ನೆದರ್ಲ್ಯಾಂಡ್: ರೈತರ ಬೃಹತ್ ಪ್ರತಿಭಟನೆ ‌

ವಾರ್ತಾ ಭಾರತಿ : 23 Jun, 2022

PHOTO CREDIT: [Vincent Jannink/EPA]

ಆಮ್‌ಸ್ಟರ್‌ಡಾಂ, ಜೂ.22: ನೈಟ್ರೋಜನ್ ಆಕ್ಸೈಡ್ ಮತ್ತು ಅಮೋನಿಯ ಹೊರಸೂಸುವಿಕೆಯನ್ನು ನಿಯಂತ್ರಿಸುವ ಸರಕಾರದ ಯೋಜನೆಗಳನ್ನು ವಿರೋಧಿಸಿ ನೆದರ್ಲ್ಯಾಂಡಿನ ಸಾವಿರಾರು ರೈತರು ಪ್ರಮುಖ ರಸ್ತೆಗಳಲ್ಲಿ ಟ್ರ್ಯಾಕ್ಟರ್‌ಗಳ ಮೂಲಕ ರ್ಯಾಲಿ ನಡೆಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ರೈತರ ಪ್ರತಿಭಟನೆಯಿಂದ ಪ್ರಮುಖ ಹೆದ್ದಾರಿಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ನೈಟ್ರೋಜನ್ ಆಕ್ಸೈಡ್ ಮತ್ತು ಅಮೋನಿಯ ಹೊರಸೂಸುವಿಕೆಯ ಪ್ರಮಾಣವನ್ನು ಇಳಿಸುವ ಸರಕಾರದ ನಿರ್ಧಾರವು ತಮ್ಮ ಜೀವನೋಪಾಯದ ಮೇಲೆ ಮತ್ತು ಕೃಷಿ ಸೇವಾ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
 

ಈ ಪರಿವರ್ತನೆ ಅನಿವಾರ್ಯವಾಗಿದೆ. ಸಂರಕ್ಷಿತ ಪ್ರಾಕೃತಿಕ ಪ್ರದೇಶಗಳಿಗೆ ಸಮೀಪದಲ್ಲಿರುವ ಪ್ರದೇಶಗಳಲ್ಲಿ ಅಮೋನಿಯ ಹೊರಸೂಸುವಿಕೆ ಪ್ರಮಾಣವನ್ನು 70%ದವರೆಗೆ ಮತ್ತು ಇತರ ಸ್ಥಳಗಳಲ್ಲಿ ಹೊರಸೂಸುವಿಕೆಯನ್ನು 95%ದಷ್ಟು ಕಡಿಮೆಗೊಳಿಸುವ ನಿರ್ಧಾರಕ್ಕೆ ಬದ್ಧ ಎಂದು ಸರಕಾರ ಹೇಳಿದೆ.ದೇಶದಲ್ಲಿ ಹೊರಸೂಸುವಿಕೆ ಮಟ್ಟವನ್ನು ಸೀಮಿತಗೊಳಿಸುವ ಗುರಿ ಸಾಧಿಸಲು ಸರಕಾರ ವಿಫಲವಾಗಿದೆ ಎಂದು ಎಚ್ಚರಿಸಿದ್ದ ನ್ಯಾಯಾಲಯ , ಮೂಲಸೌಕರ್ಯ ಮತ್ತು ವಸತಿ ಯೋಜನೆಗಳಿಗೆ ಅನುಮತಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸರಕಾರಕ್ಕೆ ಈಗ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ.

ರಾಜಧಾನಿ ಆಮ್ಸ್ಟರ್ಡಾಂನ ಪೂರ್ವದಲ್ಲಿರುವ ಸಣ್ಣ ಗ್ರಾಮದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತ ರೈತರ ಗುಂಪು ಅಲ್ಲಿ ಸರಕಾರದ ನಿರ್ಧಾರವನ್ನು ವಿರೋಧಿಸಿ ಘೋಷಣೆ ಕೂಗಿತು. ಘೋಷಣೆಯ ಜತೆಗೆ ರೈತರು ತಮ್ಮ ಟ್ರ್ಯಾಕ್ಟರ್‌ಗಳ ಹಾರನ್ ಬಜಾಯಿಸುತ್ತಾ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ದೇಶದ ಸಂಸತ್ತು ಆಯ್ಕೆ ಮಾಡಿರುವ ಕ್ರಮವು ರೈತ ವಿರೋಧಿಯಾಗಿದೆ. ಇನ್ನು ಮುಂದೆ ನಮ್ಮನ್ನು ಯಾರೂ ತಡೆಯಲಾರರು ಎಂದು ಘೋಷಣೆ ಕೂಗಿದರು. ಕೆಲವು ರೈತರು ತಮ್ಮ ಟ್ರ್ಯಾಕ್ಟರ್‌ಗಳನ್ನು ಹೆದ್ದಾರಿಗೆ ನುಗ್ಗಿಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
 ಮತ್ತೊಂದು ಪ್ರಮುಖ ನಗರ ಹೇಗ್ನಲ್ಲೂ ಪ್ರತಿಭಟನೆ ನಡೆಸಿದ ರೈತರು ‘ ರೈತರಿಲ್ಲದಿದ್ದರೆ ತಿನ್ನಲು ಆಹಾರವೂ ಇಲ್ಲ’ ಎಂದು ಬರೆದಿದ್ದ ಬ್ಯಾನರ್ ಪ್ರದರ್ಶಿಸುತ್ತಾ ಸರಕಾರದ ನಿರ್ಧಾರದ ವಿರುದ್ಧ ಘೋಷಣೆ ಕೂಗಿದರು ಎಂದು ವರದಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)