varthabharthi


ವಿಶೇಷ-ವರದಿಗಳು

ಹಾಲಿ, ಮಾಜಿ ಸಚಿವರ ವಿರುದ್ಧ ದೂರು: ವಿಚಾರಣೆ ಬಾಕಿ ಉಳಿಸಿರುವ ಲೋಕಾಯುಕ್ತ

ವಾರ್ತಾ ಭಾರತಿ : 23 Jun, 2022
ಜಿ. ಮಹಾಂತೇಶ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮುರುಗೇಶ್ ನಿರಾಣಿ, ಆರ್. ಅಶೋಕ್, ಜೆ.ಸಿ. ಮಾಧುಸ್ವಾಮಿ, ಶಶಿಕಲಾ ಜೊಲ್ಲೆ, ಪರಣ್ಣ ಮುನವಳ್ಳಿ ಸೇರಿದಂತೆ ಹಾಲಿ ಮತ್ತು ಮಾಜಿ ಸಚಿವರ ವಿರುದ್ಧದ ಆರೋಪಗಳ ಕುರಿತು ಸಲ್ಲಿಕೆಯಾಗಿದ್ದ ದೂರುಗಳು ಲೋಕಾಯುಕ್ತ ಸಂಸ್ಥೆಯಲ್ಲಿ ಹಲವು ವರ್ಷಗಳಿಂದಲೂ ತೆವಳುತ್ತಿದೆ.

ಚುನಾಯಿತ ಜನಪ್ರತಿನಿಧಿಗಳ ವಿರುದ್ಧದ ದೂರುಗಳ ಕುರಿತು ತ್ವರಿತಗತಿಯಲ್ಲಿ ವಿಚಾರಣೆ ನಡೆಸಬೇಕಿದ್ದ ಲೋಕಾಯುಕ್ತ ಸಂಸ್ಥೆಯು ಉದ್ಧೇಶಪೂರ್ವಕವಾಗಿಯೇ ವಿಳಂಬ ದ್ರೋಹ ಎಸಗಿರುವುದು ಇದೀಗ ಬಹಿರಂಗವಾಗಿದೆ.

ನಿವೃತ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ನೂತನ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಲೋಕಾಯುಕ್ತರ ಪರಿಧಿಯೊಳಗೇ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಇನ್ನಿತರ ಪ್ರಮುಖರ ವಿರುದ್ಧದ ದೂರುಗಳ ವಿಚಾರಣೆಯು ಆಮೆಗತಿಯಲ್ಲಿ ಇರುವುದು ಮುನ್ನೆಲೆಗೆ ಬಂದಿದೆ.

ಮಾಜಿ ಶಾಸಕ ವೈ.ಎಸ್.ವಿ.ದತ್ತಾ, ವಿ.ಎಸ್.ಉಗ್ರಪ್ಪ, ಬಿ.ಎಲ್. ಶಂಕರ್ ಸೇರಿದಂತೆ ಹಲವರು ನೀಡಿದ್ದ ದೂರಿನ ವಿಚಾರಣೆಯು 11 ವರ್ಷವಾದರೂ ಪೂರ್ಣಗೊಂಡಿಲ್ಲ. ಈ ಪ್ರಕರಣಗಳ ಕುರಿತು ವಿಚಾರಣೆಯು ತ್ವರಿತಗತಿಯಲ್ಲಿ ನಡೆಯುತ್ತಿಲ್ಲ. ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯ ಮಂತ್ರಿಯಾದ ಹೊಸತರಲ್ಲೇ ವೈ.ಎಸ್.ವಿ. ದತ್ತಾ, ಮತ್ತು ವಿ.ಎಸ್.ಉಗ್ರಪ್ಪ ಅವರು ದೂರು ಸಲ್ಲಿಸಿದ್ದರು.

 ಈ ದೂರುಗಳ ವಿಚಾರಣೆಯು 11 ವರ್ಷಗಳವರೆಗೂ ಯಾವುದೇ ಪ್ರಗತಿ ಕಂಡುಬಂದಿಲ್ಲವಲ್ಲದೆ ಇನ್ನೂ ಅಂತಿಮ ಪರಿಶೀಲನೆಯಲ್ಲಿದೆ. ಈ ಅವಧಿಯಲ್ಲಿ ಭಾಸ್ಕರ ರಾವ್ ಮತ್ತು ಪಿ.ವಿಶ್ವನಾಥ ಶೆಟ್ಟಿ ಅವರು ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಲೋಕಾಯುಕ್ತ ಸಂಸ್ಥೆಗೆ ಪೊಲೀಸ್ ಅಧಿಕಾರ ಇದ್ದಾಗಲೂ ದೂರುಗಳ ವಿಚಾರಣೆ,ತನಿಖೆಯು ವಿಳಂಬವಾ ಗಿರುವುದು ಹಲವು ಅನುಮಾನ ಗಳಿಗೆ ದಾರಿಮಾಡಿಕೊಟ್ಟಿದೆ. ಲೋಕಾಯುಕ್ತ ಸಂಸ್ಥೆಯು ತನ್ನ ಅಧಿಕೃತ ಜಾಲ ತಾಣದಲ್ಲಿಯೇ ೨೦೨೨ರ ಮಾರ್ಚ್ ಅಂತ್ಯಕ್ಕೆ ದೂರು, ಪ್ರಕರಣಗಳ ವಿಚಾರಣೆ ಹಂತದ ಕುರಿತು ಮಾಹಿತಿಯನ್ನು ಸಾರ್ವಜನಿಕ ವಾಗಿ ತೆರೆದಿಟ್ಟಿದೆ. ಇದರ ಪ್ರಕಾರ ಇದುವರೆಗೂ ೨,೨೨೮ ದೂರುಗಳು ದಾಖಲಾಗಿವೆ. 12(3) ಅಡಿಯಲ್ಲಿ ಜುಲೈ 2021ರಿಂದ ಮೇ 2022 ರವರೆಗೆ ಒಟ್ಟು ೩೭೦ ಪ್ರಕರಣಗಳನ್ನು ಸರಕಾರಕ್ಕೆ ಸಲ್ಲಿಸಿರುವುದು ಗೊತ್ತಾಗಿದೆ.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ, ಟೆಂಡರ್ ಪ್ರಕ್ರಿಯೆಗಳಲ್ಲಿ ಹಲವು ರೀತಿಯ ಅಕ್ರಮಗಳು ನಡೆದಿವೆ ಎಂದು ಜೆಡಿಎಸ್‌ನ ವೈ.ಎಸ್.ವಿ.ದತ್ತಾ ಅವರು ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್ .ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರ ವಿರುದ್ಧ ಅಧಿಕಾರ ದುರುಪಯೋಗ ಸಂಬಂಧ ಒಟ್ಟು 2 ದೂರುಗಳನ್ನು 2010ರ ನವೆಂಬರ್ 18ರಂದು ಸಲ್ಲಿಸಿದ್ದರು. ಈ ದೂರು 2011ರ ಫೆ.19ರವರೆಗೆ ಪ್ರಗತಿಯಾಗಿದ್ದರೆ ಅ ನಂತರ ಪ್ರಗತಿ ಕಂಡು ಬಂದಿಲ್ಲ. ಇದೀಗ 2022ರ ಜೂನ್ 22ರಂದು ವಿಚಾರಣಾಧಿಕಾರಿಗಳ ಮುಂದೆ (2022ರ ಜೂನ್ 19 ಅಂತ್ಯಕ್ಕೆ) ಬರಲಿದೆ.

 ಈ ದೂರು ಸಲ್ಲಿಕೆಯಾದ ನಂತರ ಪ್ರತಿವಾದಿಗಳಿಂದ ವಿವರಣೆ ಪಡೆಯುವ ಪ್ರಕ್ರಿಯೆ 2010ರ ಡಿಸೆಂಬರ್ 1, ಡಿಸೆಂಬರ್ 28, 31, ಫೆ.19ರಂದು ನಡೆದಿತ್ತು. 10 ವರ್ಷಗಳಾದರೂ ಈ ದೂರಿನ ವಿಚಾರಣೆ ಇನ್ನೂ ಅಂತಿಮ ಗೊಂಡಿಲ್ಲ. ಸದ್ಯ ಅಂತಿಮ ಪರಿಶೀಲನೆಯು ಲೋಕಾ ಯುಕ್ತ ಪರಿಧಿಯೊಳಗೇ ಇದೆ ಎಂದು ಸಂಸ್ಥೆಯ ಅಧಿಕೃತ ಜಾಲತಾಣದಲ್ಲಿ ವಿವರಗಳಿವೆ.

ಅದೇ ರೀತಿ ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ರಾಗಿದ್ದ ವಿ.ಎಸ್. ಉಗ್ರಪ್ಪ, ಡಾ.ಬಿ.ಎಲ್.ಶಂಕರ್, ಅಪ್ಪಾಜಿ ಚನ್ನಬಸವರಾಜ ಶಂಕರರಾವ್ ನಾಡಗೌಡ ಅವರು 2010ರ ಡಿಸೆಂಬರ್ 2ರಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

 ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಬಿ.ವೈ. ರಾಘವೇಂದ್ರ, ಆರ್.ಅಶೋಕ್, ಮುರುಗೇಶ್ ನಿರಾಣಿ, ಕಟ್ಟಾ ಸುಬ್ರಹ್ಮಣ್ಯನಾಯ್ಡು, ಕೃಷ್ಣಯ್ಯ ಶೆಟ್ಟಿ, ಹೇಮಚಂದ್ರ ಸಾಗರ್, ಎಂ. ಪಿ. ಕುಮಾರ ಸ್ವಾಮಿ, ವಿಧಾನಪರಿಷತ್ ಸದಸ್ಯರಾಗಿದ್ದ ಭಾರತಿ ಶೆಟ್ಟಿ, ಶೋಭಾ ಕರಂದ್ಲಾಜೆ ಅವರ ವಿರುದ್ಧ ದೂರು ನೀಡಿದ್ದರು. ಈ ದೂರಿನ ವಿಚಾರಣೆಯು ಇನ್ನೂ ಅಂತಿಮಗೊಂಡಿಲ್ಲ.
ಪ್ರತಿವಾದಿಗಳ ವಿವರಣೆ ಪಡೆದುಕೊಳ್ಳುವುದರಲ್ಲೇ ಲೋಕಾಯುಕ್ತ ಸಂಸ್ಥೆಯು ನಿರತವಾಗಿ ರುವುದು ಗೊತ್ತಾಗಿದೆ.

ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ರೀತಿಯ ಅಕ್ರಮಗಳ ಕುರಿತು ಮಾಜಿ ಶಾಸಕ
ಡಾ.ಸಾರ್ವಭೌಮ ಬಗಲಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವರಾಗಿದ್ದ ಬಿ.ಶ್ರೀರಾಮುಲು, ಡಾ.ಕೆ.ಸುಧಾಕರ್, ಹಿರಿಯ ಐಎಎಸ್ ಅಧಿಕಾರಿ ಜಾವೇದ್ ಅಖ್ತರ್, ಮಂಜುಶ್ರೀ, ಪಂಕಜ್‌ಕುಮಾರ್ ಪಾಂಡೆ ಅವರ ವಿರುದ್ಧ ನೀಡಿದ್ದ ದೂರುಗಳು 2 ವರ್ಷಗಳಾದರೂ ಯಾವ ಪ್ರಗತಿ ಕಂಡು ಬಂದಿಲ್ಲ.

ಎಸ್.ಎನ್ ಮರಿಯಪ್ಪ ಎಂಬವರು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ಮುಖ್ಯ ಕಾರ್ಯದರ್ಶಿ, ಕೋಲಾರ ಜಿಲ್ಲಾಧಿಕಾರಿಯ ವಿರುದ್ಧ ಒಂದು ವರ್ಷದ ಹಿಂದೆಯೇ ಸಲ್ಲಿಸಿದ್ದ ದೂರಿನ ಕುರಿತಾದ ವಿಚಾರಣೆಯು ಇದ್ದಲ್ಲೇ ಇದೆ. ಒಂದು ವರ್ಷದ ಬಳಿಕ ಪ್ರತಿವಾದಿಗಳಿಂದ ದೂರಿನ ಕುರಿತು ವಿವರಣೆ ಪಡೆಯಲು ನೋಟೀಸ್ ಜಾರಿಮಾಡಿರುವುದು ತಿಳಿದು ಬಂದಿದೆ.

ಹಾಗೆಯೇ ಸುರೇಂದ್ರ ಉಗಾರೆ ಎಂಬವರು ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಪರಣ್ಣ ಮುನವಳ್ಳಿ, ಪ್ರಶಾಂತ ಘಾಟ್ಗೆ ವಿರುದ್ದ ನೀಡಿರುವ ದೂರಿನ ವಿಚಾರಣೆಯನ್ನು ಪೊಲೀಸ್ ತನಿಖೆಗೆ ಶಿಫಾರಸ್ಸು ಮಾಡಿದೆ. ಆದರೆ ವರದಿ ಇನ್ನೂ ಲೋಕಾಯುಕ್ತರ ಕೈ ಸೇರಿಲ್ಲ ಎಂದು ಗೊತ್ತಾಗಿದೆ.

ಹಾಗೆಯೇ ಸಿದ್ದಲಿಂಗೇಗೌಡ ಎಂಬವರು ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಐಎಎಸ್ ಅಧಿಕಾರಿ ಶಾಮಭಟ್ (ಬಿಡಿಎ ಆಯುಕ್ತರಾಗಿದ್ದರು), ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ವಿರುದ್ಧ ನೀಡಿದ್ದ ದೂರು ೭ ವರ್ಷಗಳಿಂದಲೂ ಅಂತಿಮ ಪರಿಶೀಲನೆಯಲ್ಲಿಯೇ ಇದೆ ಎಂಬುದು ಲೋಕಾಯುಕ್ತ ಅಧಿಕೃತ ಜಾಲತಾಣದಿಂದ ಗೊತ್ತಾಗಿದೆ.

ಮೈಸೂರಿನ ಬಿ.ಕರುಣಾಕರ್ ಎಂಬವರು ಅಂದು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಎಸ್.ಎ.ರಾಮದಾಸ್, ನಿಂಗಪ್ಪ ಗುಡಿ ಎಂಬವರು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ಸಿದ್ದಲಿಂಗೇಗೌಡ ಎಂಬವರು ಅಂದು ಸಚಿವರಾಗಿದ್ದ ಆರ್.ರಾಮಲಿಂಗಾರೆಡ್ಡಿ, ರಾಘವೇಂದ್ರ ಎಂಬವರು ಶಾಸಕಿ ಶಾರದಾ ಮೋಹನ್ ಶೆಟ್ಟಿ, ಡಿ.ಸಿ. ಪ್ರಕಾಶ್ ಎಂಬವರು ದೊಡ್ಡಬಳ್ಳಾಪುರ ಶಾಸಕರಾಗಿದ್ದ ಜೆ.ನರಸಿಂಹಸ್ವಾಮಿ, ಎಲ್.ಶಿವಣ್ಣ ಎಂಬವರು ಹಾಲಿ ಸಚಿವರಾಗಿರುವ ಮುನಿರತ್ನ ವಿರುದ್ಧ ದೂರುಗಳು ಇನ್ನೂ ಅಂತಿಮ ಪರಿಶೀಲನೆಯಲ್ಲಿಯೆ ತೆವಳುತ್ತಿದೆ.

ರವಿಕಿರಣ್ ಕಾಂಬ್ಳೆ ಎಂಬವರು ಅಂದು ಗ್ರಾಮೀಣಾ ಭಿವೃದ್ಧಿ ಸಚಿವರಾಗಿದ್ದ ಎಚ್.ಕೆ.ಪಾಟೀಲ್, ಜಿ.ವಿ. ಕೃಷ್ಣರಾಜು, ಮಾಜಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಗಂಗಾರಾಮ್ ಬಡೇರಿಯಾ, ಮುನೀಶ್ ಮೌದ್ಗಿಲ್, ಚಿಕ್ಕಣ್ಣಗೌಡರ್ ಎಂಬವರ ವಿರುದ್ಧ ೨೦೧೬ರಲ್ಲಿಯೇ ದೂರು ನೀಡಿದ್ದರು. ಈ ದೂರು ಕೂಡ ೬ ವರ್ಷಗಳಿಂದ ಅಂತಿಮ ಪರಿಶೀಲನೆ ಯಲ್ಲಿರುವುದು ಗೊತ್ತಾಗಿದೆ.

 ಇನ್ನು, ಎಚ್.ಬಿ.ನಾಗೇಶ್ ಎಂಬವರು ಅಂದು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾರ್ಜ್, ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ್, ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್, ಪಿಡಬ್ಲ್ಯೂಡಿ ಸಚಿವರಾಗಿದ್ದ ಎಚ್.ಸಿ.ಮಹದೇವಪ್ಪ, ಶಾಸಕರಾಗಿದ್ದ ಆರ್.ವಿ.ದೇವರಾಜ್, ವಿಧಾನಪರಿಷತ್ ಸದಸ್ಯರಾಗಿದ್ದ ಗೋವಿಂದರಾಜ್ ಅವರ ವಿರುದ್ಧ ನೀಡಿದ್ದ ದೂರು ೫ ವರ್ಷದಿಂದಲೂ ವಿಚಾರಣೆ ಹಂತದಲ್ಲಿಯೇ ಇದೆ.

ಪ್ರಭಾವಿ ರಾಜಕಾರಣಿಗಳು ಮತ್ತು ಪ್ರಭಾವಿ ಅಧಿಕಾರಿಗಳ ವಿರುದ್ಧ ಇರುವ ಪ್ರಕರಣಗಳಲ್ಲಿ ಯಾವುದೇ ಸಂದರ್ಭದಲ್ಲಿಯೂ ನ್ಯಾಯಯುತ ಆದೇಶ ಮಾಡುವ ಸ್ಥಿತಿಯಲ್ಲಿ ಇಂದಿನ ಲೋಕಾಯುಕ್ತ ಸಂಸ್ಥೆಯಿಲ್ಲ. ಅದಕ್ಕೆ ಉದಾಹರಣೆಯಾಗಿ ಹತ್ತಾರು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳೇ ಸಾಕ್ಷಿ. ದೂರು ಕೊಟ್ಟಿರುವ ಕೆಲವರು ಈಗಲೂ ಪ್ರಭಾವಿ ರಾಜಕಾರಣಿಗಳಾಗಿದ್ದಾರೆ. ಆದರೂ ಅವರೂ ಸಹ ನ್ಯಾಯ ಪಡೆಯಲು ಆಗಿಲ್ಲ ಅಥವಾ ಅವರೇ ಹೇಗೋ ಲಾಭ ಮಾಡಿಕೊಂಡು ರಾಜಿಯಾಗಿ ದ್ದಾರೆ ಎಂಬ ಭಾವನೆ ಬರುತ್ತಿದೆ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

 ಸಂತೋಷ್ ಹೆಗ್ಡೆ ಅವರ ನಂತರ ಬಂದಂತಹ ಯಾವುದೇ ಲೋಕಾಯುಕ್ತ ಮತ್ತು ಉಪ ಲೋಕಾಯು ಕ್ತರು ಆ ಹುದ್ದೆಗೆ ನ್ಯಾಯ ಕೊಡಿಸಿಲ್ಲ ಮತ್ತು ಈ ಮೂರೂ ಭ್ರಷ್ಟ ಪಕ್ಷಗಳು ಅಂತಹ ಅನರ್ಹರನ್ನೇ ಆ ಹುದ್ದೆಗಳಿಗೆ ನೇಮಿಸಿರುವುದು ಇದಕ್ಕೆ ಕಾರಣವಿದೆ.

ನಿಜಕ್ಕೂ ಲೋಕಾಯುಕ್ತ ಸಂಸ್ಥೆಯಲ್ಲಿ ಸಾರ್ವಜನಿಕರ ತೆರಿಗೆಯ ಹಣದಲ್ಲಿ ಸಂಬಳ ಪಡೆಯುತ್ತಿರುವ ಲೋಕಾಯುಕ್ತರಿಂದ ಹಿಡಿದು ಡಿ ಗ್ರೂಪ್ ನೌಕರರವರೆಗೂ
ನಾಚಿಕೆಯಿಂದ ತಲೆತಗ್ಗಿಸಬೇಕಾದ ವಿಚಾರವಿದು ಎಂದು ವಿವರಿಸುತ್ತಾರೆ.

ಇತ್ತೀಚೆಗೆ ತಾನೇ ಲೋಕಾಯುಕ್ತರಾಗಿ ನೇಮಕವಾಗಿರುವ ಬಿ.ಎಸ್. ಪಾಟೀಲ್ ಅವರು ಪ್ರತಿಯೊಂದು ಪ್ರಕರಣಕ್ಕೂ ತನಿಖೆ ಮತ್ತು ವಿಚಾರಣೆಗೆ ಕಾಲಮಿತಿ ನಿಗದಿಪಡಿಸುವ ತೀರ್ಮಾನ ತೆಗೆದುಕೊಂಡರೇ ಮಾತ್ರ ಅವರು ತಮ್ಮ ಜವಾಬ್ದಾರಿಯನ್ನು ಒಂದಷ್ಟರ ಮಟ್ಟಿಗಾದರೂ ನಿಭಾಯಿಸಿದಂತಾಗುತ್ತದೆ. ಇಲ್ಲದಿದ್ದರೇ ದಂಡಪಿಂಡ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚುವುದರಿಂದಲೇ ಜನರಿಗೆ ಒಳ್ಳೆಯದಾಗುತ್ತದೆ ಮತ್ತು ತೆರಿಗೆ ಹಣ ಉಳಿಯುತ್ತದೆ.

- ರವಿಕೃಷ್ಣಾರೆಡ್ಡಿ
ಕರ್ನಾಟಕ ರಾಷ್ಟ್ರ ಸಮಿತಿಯ ರಾಜ್ಯಾಧ್ಯಕ್ಷ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)