varthabharthi


ಕರ್ನಾಟಕ

ತಾಯಿ, ಇಬ್ಬರು ಪುಟಾಣಿ ಮಕ್ಕಳ ಕೊಲೆ ಪ್ರಕರಣದ ಆರೋಪಿ ನಿರ್ದೋಷಿ: ಧಾರವಾಡ ಹೈಕೋರ್ಟ್ ಪೀಠ ತೀರ್ಪು

ವಾರ್ತಾ ಭಾರತಿ : 23 Jun, 2022

 ಪ್ರವೀಣ್ ಭಟ್

ಬೆಳಗಾವಿ, ಜೂ.23: ಸುಮಾರು ಏಳು ವರ್ಷಗಳ ಹಿಂದೆ ನಡೆದ ತಾಯಿ ಹಾಗೂ ಇಬ್ಬರು ಪುಟಾಣಿ ಮಕ್ಕಳ ಕೊಲೆ ಪ್ರಕರಣದ ಆರೋಪಿಯೋರ್ವನನ್ನು ಧಾರವಾಡದ ಹೈಕೋರ್ಟ್ ಪೀಠ ನಿರ್ದೋಷಿ ಎಂದು ತೀರ್ಪು ನೀಡಿದೆ.

 ಪ್ರವೀಣ್ ಭಟ್ ಕೊಲೆ ಪ್ರಕರಣದಲ್ಲಿ ಖುಲಾಸೆಯಾದ ವ್ಯಕ್ತಿ.

2015ರಲ್ಲಿ ಇಲ್ಲಿನ ಕುವೆಂಪು ನಗರದ ಮನೆಯಲ್ಲಿ ನಡೆದಿದ್ದ ಈ ತ್ರಿವಳಿ ಕೊಲೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದರ ವಿಚಾರಣೆ ನಡೆಸಿದ ಬೆಳಗಾವಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿತ್ತು. ಆದರೆ, ಹೈಕೋರ್ಟ್ ದ್ವಿಸದಸ್ಯ ಪೀಠವು ಸೂಕ್ತ ಸಾಕ್ಷ್ಯಾಧಾರ ಇಲ್ಲದ ಕಾರಣ ನೀಡಿ, ಆರೋಪಿಯನ್ನು ಬಿಡುಗಡೆ ಮಾಡಿದೆ.

2015ರ ಆಗಸ್ಟ್ 16ರಂದು ನಸುಕಿನ ಜಾವ ಇಲ್ಲಿನ ಕುವೆಂಪು ನಗರದ ಮನೆಯಲ್ಲಿ ಗೃಹಿಣಿ ರೀನಾ ಮಾಲಗತ್ತಿ, ಅವರ ಮಕ್ಕಳಾದ ಆದಿತ್ಯ ಹಾಗೂ ಸಾಹಿತ್ಯರನ್ನು ಬೆಡ್ ರೂಮಿನಲ್ಲೇ ಕೊಲೆ ಮಾಡಲಾಗಿತ್ತು. ರೀನಾರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪ್ರವೀಣ್ ಭಟ್ ಈ ಕೊಲೆ ಮಾಡಿದ್ದಾಗಿ, ರೀನಾ ಅವರ ಸಹೋದರ ಪೊಲೀಸ್ ದೂರು ದಾಖಲಿಸಿದ್ದರು. ಕೃತ್ಯ ನಡೆದ 24 ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ ಬೆಳಗಾವಿಯ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2018ರ ಎಪ್ರಿಲ್ 16ರಂದು ಪ್ರವೀಣ್ ಭಟ್‌ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಈ ಆದೇಶವನ್ನು ತಡೆಹಿಡಿದ ಧಾರವಾಡ ಹೈಕೋರ್ಟ್ ಪೀಠವು, ಮಂಗಳವಾರ (ಜೂ.21ರಂದು) ಆರೋಪಿಯನ್ನು ಖುಲಾಸೆ ಮಾಡಿದೆ.

ನ್ಯಾಯಮೂರ್ತಿಗಳಾದ ಕೆ.ಎಸ್. ಮುದಗಲ್ ಹಾಗೂ ಎಂ.ಜಿ.ಎಸ್ ಕಮಲ್ ಅವರಿದ್ದ ಪೀಠವು ಈ ಮಹತ್ವದ ತೀರ್ಪು ನೀಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)