varthabharthi


ಅಂತಾರಾಷ್ಟ್ರೀಯ

ಭಾರತ ಮತ್ತು ಚೀನಾದ ಸಾಮಾನ್ಯ ಹಿತಾಸಕ್ತಿಗಳು ಭಿನ್ನಾಭಿಪ್ರಾಯವನ್ನು ಮೀರಿಸುತ್ತವೆ: ಚೀನಾ ವಿದೇಶಾಂಗ ಸಚಿವ ವಾಂಗ್ ಯಿ

ವಾರ್ತಾ ಭಾರತಿ : 24 Jun, 2022

Photo: PTI

ಬೀಜಿಂಗ್, ಜೂ.24: ಭಾರತ -ಚೀನಾದ ಸಾಮಾನ್ಯ ಹಿತಾಸಕ್ತಿಗಳು ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯವನ್ನು ಮೀರಿಸುತ್ತವೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.

 ಚೀನಾ ಆತಿಥೇಯತ್ವದಲ್ಲಿ 14ನೇ ಬ್ರಿಕ್ಸ್ ಶೃಂಗಸಭೆ ವರ್ಚುವಲ್ ರೂಪದಲ್ಲಿ ನಡೆಯಲಿದ್ದು ಶೃಂಗಸಭೆಗೂ ಮುನ್ನ ಚೀನಾಕ್ಕೆ ಭಾರತದ ರಾಯಭಾರಿ ಪ್ರದೀಪ್ ಕುಮಾರ್ ರಾವತ್ ಗುರುವಾರ ವಾಂಗ್ ಯಿಯನ್ನು ಭೇಟಿಯಾಗಿದ್ದರು ಎಂದು ‘ದಿ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ. ಈ ಸಂದರ್ಭ ಮಾತನಾಡಿದ ವಾಂಗ್ ಯಿ, ಭಾರತ ಮತ್ತು ಚೀನಾಗಳ ಸಮಾನ ಹಿತಾಸಕ್ತಿಗಳು ಭಿನ್ನಾಭಿಪ್ರಾಯಗಳನ್ನು ಮೀರಿಸುತ್ತವೆ. ಎರಡೂ ದೇಶಗಳು ಪರಸ್ಪರರನ್ನು ದುರ್ಬಲಗೊಳಿಸಲು ಪ್ರಯತ್ನಿಸದೆ ಪರಸ್ಪರ ಬೆಂಬಲಿಸಬೇಕು. ಪರಸ್ಪರ ಸ್ಪರ್ಧೆಯ ಬದಲು ಸಹಕಾರವನ್ನು ಬಲಪಡಿಸಬೇಕು, ಪರಸ್ಪರರ ಮೇಲೆ ಸಂದೇಹ ಪಡುವ ಬದಲು ಪರಸ್ಪರರ ಮೇಲೆ ವಿಶ್ವಾಸ ವೃದ್ಧಿಸಿಕೊಳ್ಳಬೇಕಾಗಿದೆ ಎಂದರು.

ಭಾರತ-ಚೀನಾ ಸಂಬಂಧಗಳಿಗೆ ಸಂಬಂಧಿಸಿ ಚತುರ್ಮುಖ ಪರಿಶ್ರಮದ ಅಗತ್ಯವಿದೆ, ಉನ್ನತ ನಾಯಕರು ರೂಪಿಸಿದ ಪ್ರಮುಖ ಕಾರ್ಯತಂತ್ರದ ಒಮ್ಮತವನ್ನು ಉಭಯ ದೇಶಗಳು ಅನುಸರಿಸಬೇಕಾಗಿದೆ. ಉಭಯ ದೇಶಗಳು ಪರಸ್ಪರ ಬೆದರಿಕೆ ಹಾಕಬಾರದು, ಪಾಲುದಾರರಾಗಿ ಕಾರ್ಯನಿರ್ವಹಿಸಬೇಕು ಎಂದು ವಾಂಗ್ ಯಿ ಹೇಳಿದ್ದಾರೆ.

 ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಒಮ್ಮತದ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯ ನಿರ್ವಹಣೆಯ ನಿರ್ಣಾಯಕತೆಯ ಕುರಿತು ಭಾರತೀಯ ರಾಯಭಾರಿ ಒತ್ತಿ ಹೇಳಿದರು ಎಂದು ಭಾರತದ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ. ಬ್ರೆಝಿಲ್, ರಶ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಬ್ರಿಕ್ಸ್ ನ ಸದಸ್ಯ ದೇಶಗಳಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)