varthabharthi


ಅಂತಾರಾಷ್ಟ್ರೀಯ

ವಿಶ್ವಸಂಸ್ಥೆಯಲ್ಲಿ ನಿರ್ಧಾರ ಕೈಗೊಳ್ಳುವಿಕೆ ಪ್ರಜಾಪ್ರಭುತ್ವೀಕರಣಗೊಳಿಸುವ ಅಗತ್ಯವಿದೆ: ಆಫ್ರಿಕಾ ಅಧ್ಯಕ್ಷ ರಮಫೋಸ

ವಾರ್ತಾ ಭಾರತಿ : 24 Jun, 2022


Photo: Twitter/@CyrilRamaphosa

ಜೊಹಾನೆಸ್ಬರ್ಗ್, ಜೂ.24: ಜಾಗತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ವಿಶ್ವಸಂಸ್ಥೆಯಲ್ಲಿ ನಿರ್ಧಾರ ಕೈಗೊಳ್ಳುವಿಕೆಯನ್ನು ಪ್ರಜಾಪ್ರಭುತ್ವೀಕರಣಗೊಳಿಸುವ ಅಗತ್ಯವಿದೆ ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ ಹೇಳಿದ್ದಾರೆ.

ವರ್ಚುವಲ್ ವೇದಿಕೆಯಲ್ಲಿ ನಡೆದ 14ನೇ ಬ್ರಿಕ್ಸ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಹುಪಕ್ಷೀಯ ಸಂಸ್ಥೆಗಳು ಜಾಗತಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುವಂತೆ ಇಡೀ ವಿಶ್ವಸಂಸ್ಥೆಯ ವ್ಯವಸ್ಥೆಯಾದ್ಯಂತ ನಿರ್ಧಾರ ನಿರ್ವಹಣೆಯನ್ನು ಪ್ರಜಾಪ್ರಭುತ್ವಗೊಳಿಸಬೇಕಾಗಿದೆ ಎಂದರು. ಅಂತರಾಷ್ಟ್ರೀಯ ಸಮುದಾಯದ ಗಮನ ಮತ್ತು ಸಂಪನ್ಮೂಲಗಳು ಇತರ ಕಳವಳಕಾರಿ ಸಂಘರ್ಷಗಳು ಮತ್ತು ಮಾನವೀಯ ಬಿಕ್ಕಟ್ಟುಗಳಿಂದ ಬೇರೆಡೆಗೆ ತಿರುಗಿದೆ ಎಂಬ ಆತಂಕವಿದೆ. ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿಯಂತಹ ತುರ್ತು ಜಾಗತಿಕ ವಿಷಯಗಳ ಬಗ್ಗೆ ಪರಿಣಾಮಕಾರಿಯಾಗಿ ಗಮನ ನೀಡುತ್ತಿಲ್ಲ. ವಿಶ್ವದಾದ್ಯಂತದ ಸಂಘರ್ಷಕ್ಕೆ ಮಾತುಕತೆಯ ಮೂಲಕ ಶಾಂತರೀತಿಯ ಪರಿಹಾರ ಕಂಡುಕೊಳ್ಳಬೇಕು ಎಂಬುದು ನಮ್ಮ ಒತ್ತಾಯವಾಗಿದೆ. 

ಎಲ್ಲಾ ಜನರೂ ಅರ್ಥಪೂರ್ಣ ಪಾಲನ್ನು ಹೊಂದಿರುವ, ಎಲ್ಲರಿಗೂ ಸಮಾನ ಅವಕಾಶವನ್ನು ಹೊಂದಿರುವ ಮತ್ತು ಎಲ್ಲರೂ ಪ್ರಯೋಜನ ಪಡೆಯಬಹುದಾದ ವಿಶ್ವದ ಸಮಾನ ಹಂಚಿಕೆಯ ಬಯಕೆಯನ್ನು ದೃಢೀಕರಿಸಲು ನಾವು ಬ್ರಿಕ್ಸ್ ನ ಸದಸ್ಯರಾಗಿ ಇಲ್ಲಿದ್ದೇವೆ. ಜಗತ್ತಿಗೆ ನಾಯಕತ್ವ ನೀಡುವಲ್ಲಿ ಬ್ರಿಕ್ಸ್ ಪ್ರಮುಖ ಪಾತ್ರ ನಿರ್ವಹಿಸಬೇಕಾಗಿದೆ ಎಂದವರು ಹೇಳಿದ್ದಾರೆ.

 ಬ್ರಿಕ್ಸ್ ಸದಸ್ಯರ ನಡುವಿನ ವ್ಯಾಪಾರ, ಹೂಡಿಕೆ ಮತ್ತು ಪ್ರವಾಸೋದ್ಯಮವನ್ನು ಬಲಪಡಿಸಲು ನಮ್ಮ ಆರ್ಥಿಕ ಪಾಲುದಾರಿಕೆಯ ಮಹಾನ್ ಸಾಮರ್ಥ್ಯವನ್ನು ನಾವು ಅರಿತುಕೊಳ್ಳಬೇಕಾಗಿದೆ. ನಮ್ಮ ಸಂಯೋಜಿತ ಅರ್ಥಿಕ ಶಕ್ತಿಯು ಸುಸ್ಥಿರ ಜಾಗತಿಕ ಆರ್ಥಿಕ ಚೇತರಿಕೆಗೆ ವೇಗವರ್ಧಕವಾಗಿರಬೇಕು ಎಂದ ಅವರು, ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಬ್ರಿಕ್ಸ್ನ ಪ್ರತಿಕ್ರಿಯೆಯು ನಾವು ಸ್ನೇಹ, ಒಗ್ಗಟ್ಟು ಮತ್ತು ಉತ್ಸಾಹದ ಜವಾಬ್ದಾರಿಯಲ್ಲಿ ಕೆಲಸ ಮಾಡಿದಾಗ ಏನನ್ನೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. 

ಆದರೆ ಲಸಿಕೆಗಳ ಸಮಾನ ಹಂಚಿಕೆಯ ವಿಷಯಕ್ಕೆ ಬಂದಾಗ ಜಾಗತಿಕ ಸಮುದಾಯದ ಇತರರು ಒಗ್ಗಟ್ಟು ಮತ್ತು ಸಹಕಾರದ ತತ್ವವನ್ನು ಉಳಿಸಿಕೊಂಡಿಲ್ಲ ಎಂಬುದು ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ. ಆಫ್ರಿಕಾ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ಅರ್ಥವ್ಯವಸ್ಥೆಯ ಉತ್ಪಾದಕರಿಂದ ಲಸಿಕೆ ಖರೀದಿಸುವಂತೆ ಅಭಿವೃದ್ಧಿಹೊಂದಿದ ದೇಶಗಳು, ಅಂತರಾಷ್ಟ್ರೀಯ ಏಜೆನ್ಸಿಗಳು ಹಾಗೂ ದಾನಿಗಳನ್ನು ವಿನಂತಿಸುತ್ತೇವೆ ಎಂದರು.

ಶೃಂಗಸಭೆಯಲ್ಲಿನ ಕಾರ್ಯಸೂಚಿಯಲ್ಲಿ ಜಾಗತಿಕ ಅಭಿವೃದ್ಧಿಯ ಮೇಲಿನ ಉನ್ನತ ಮಟ್ಟದ ಸಂವಾದವು ಹೆಚ್ಚು ಅಂತರ್ಗತ, ನ್ಯಾಯಯುತ ಮತ್ತು ಸ್ಥಿರವಾದ ಅಂತರಾಷ್ಟ್ರೀಯ ಕ್ರಮದ ಸಾಮಾನ್ಯ ದೃಷ್ಟಿಕೋನವನ್ನು ರೂಪಿಸಲು ಒಂದು ಪ್ರಮುಖ ಅವಕಾಶವಾಗಿದೆ ಎಂದು ರಮಫೋಸ ಅಭಿಪ್ರಾಯಪಟ್ಟರು.

 ಬ್ರಿಕ್ಸ್(ಬ್ರೆಝಿಲ್-ರಶ್ಯ-ಭಾರತ-ಚೀನಾ-ದಕ್ಷಿಣ ಆಫ್ರಿಕಾ) ವರ್ಚುವಲ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಮತ್ತು ದಕ್ಷಿಣ ಆಫ್ರಿಕಾ ಅಧ್ಯಕ್ಷ ರಮಫೊಸ ಪಾಲ್ಗೊಂಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)