varthabharthi


ನಿಮ್ಮ ಅಂಕಣ

ಭಾಗ-1

ಮೋದಿ ನೇತೃತ್ವದ ಬಿಜೆಪಿ ಸರಕಾರದ 8 ವರ್ಷಗಳ ಆಡಳಿತ ಜನರ ಪಾಲಿಗದು ಹಿತಕಾರಿಯೇ? ಅಹಿತಕಾರಿಯೇ?

ವಾರ್ತಾ ಭಾರತಿ : 25 Jun, 2022
ಎಸ್. ವಿ. ಅಮಿನ್

2016ರ ನವೆಂಬರ್ 8ರಂದು ತಡರಾತ್ರಿ ಪ್ರಧಾನಿ ಮೋದಿಯವರು ದೇಶದಲ್ಲಿ ಚಲಾವಣೆಯಲ್ಲಿದ್ದ 500 ಮತ್ತು  1000 ರೂ. ನೋಟುಗಳ ಚಲಾವಣೆಯನ್ನು ನಿರ್ಬಂಧಿಸುವ ಘೋಷಣೆಯನ್ನು ಪ್ರಕಟಿಸಿದರು. ಆ ಮೂಲಕ ದೇಶದ ಎಲ್ಲೆಡೆ ವ್ಯಾಪಕವಾಗಿ ಚಾಲ್ತಿಯಲ್ಲಿದ್ದ ಕಪ್ಪು ಹಣದ ವ್ಯವಹಾರವನ್ನು ಮಟ್ಟಹಾಕಿ ದೇಶದ ಖಜಾನೆಗೆ ಬೃಹತ್ ಮೊತ್ತದ ಕರ ಆದಾಯ ನಷ್ಟ ಎಸಗುತ್ತಿರುವ ದಂಧೆಕೋರರನ್ನು ಜೈಲಿಗೆ ತಳ್ಳಲಾಗುವುದು ಎಂಬಿತ್ಯಾದಿ ರಂಗುರಂಗಿನ ಭರವಸೆಗಳನ್ನು ನೀಡಲಾಯಿತು. ಆದರೆ ಮುಂದೆ ಏನಾಯಿತು?

ಭಾರತೀಯ ಜನತಾಪಕ್ಷ 2013ರಲ್ಲಿ ನರೇಂದ್ರ ಮೋದಿ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿದ ನಂತರ ಅವರು ಪಕ್ಷದ ಪ್ರಚಾರ ಕಾರ್ಯದ ನೇತೃತ್ವವಹಿಸಿ ದೇಶದ ಉದ್ದಗಲಕ್ಕೂ ಪ್ರವಾಸ ಆರಂಭಿಸಿ ಬಹಳ ಅದ್ದೂರಿಯಾದ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗುತ್ತಾರೆ.  ಸಂಘಪರಿವಾರ ಮತ್ತು ಬಹುತೇಕ ಮಾಧ್ಯಮಗಳ ಪರೋಕ್ಷ ನೆರವಿನಿಂದ ತನ್ನ ಪ್ರಚಾರ ಸಭೆಗಳನ್ನು ಅವರು ಬಹಳ ವೈಭವಯುತವಾಗಿ ಮಾಡಿರುವುದು ಇದೀಗ ಇತಿಹಾಸದ ಭಾಗ.  ಈ ತೆರನಾದ ಅದ್ದೂರಿಯ ಪ್ರಚಾರ ಸಭೆಗಳಲ್ಲಿ ಪಕ್ಷದ ಪ್ರಣಾಳಿಕೆ ಮೂಲಕ ಬಿಂಬಿತ ಕಾರ್ಯಗಳಲ್ಲದೆ ಮೋದಿಯವರು ತನ್ನದೇ ಆದ ಕೆಲವೊಂದು ಕಾರ್ಯಕ್ರಮಗಳನ್ನು ಘೋಷಿಸಿರುತ್ತಾರೆ. ಹೀಗೆ ಪಕ್ಷ ಮತ್ತು ತನ್ನ ಸ್ವಯಂ ಘೋಷಿತ ಕಾರ್ಯಕ್ರಮಗಳಲ್ಲದೆ ಮುಂದೆ 2014ರ ಮಹಾಚುನಾವಣೆಯಲ್ಲಿ ಬಿಜೆಪಿ ಗೆದ್ದು ತಾನು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ತನ್ನ ನೇತೃತ್ವದ ಸರಕಾರ ಘೋಷಿತ  ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಎಷ್ಟರಮಟ್ಟಿಗೆ ಮೋದಿಯವರು ಮತ್ತು ಅವರ ಸರಕಾರ ಸಫಲರಾಗಿದ್ದಾರೆ ಎಂಬುದನ್ನು ವಿಶ್ಲೇಷಿಸುವುದು ಈ ಲೇಖನದ ಉದ್ದೇಶ. ಮೊದಲು ಚುನಾವಣಾ ಪೂರ್ವದ ಭರವಸೆಗಳ ಈಡೇರಿಕೆ ಬಗ್ಗೆ ವಿಮರ್ಶಿಸೋಣ.

1. ಸ್ವಿಸ್ ಬ್ಯಾಂಕ್ ಠೇವಣಿ ವಾಪಸಾತಿ ಮತ್ತು ಎಲ್ಲರಿಗೂ ತಲಾವಾರು ರೂ. 15ಲಕ್ಷ ಹಂಚುವ ಭರವಸೆ:

ತನ್ನ ಪಕ್ಷ ಅಧಿಕಾರಕ್ಕೆ ಬಂದರೆ ಕೇವಲ 100 ದಿನಗಳೊಳಗೆ ಸ್ವಿಸ್ ಬ್ಯಾಂಕ್‌ನಲ್ಲಿ ಠೇವಣಿ ಇಡಲಾದ ಕಪ್ಪು ಹಣವನ್ನು ದೇಶಕ್ಕೆ ವಾಪಸ್ ತಂದು ದೇಶದ ಎಲ್ಲ ನಾಗರಿಕರ ಬ್ಯಾಂಕ್ ಖಾತೆಗೆ ತಲಾ ರೂ. ೧೫ ಲಕ್ಷ ಪಾವತಿಸುವುದಾಗಿ  ಮೋದಿಯವರು ದೇಶದ ಎಲ್ಲೆಡೆ ಜನತೆಯ ಕರತಾಡನಗಳ ಮಧ್ಯೆ ಘೋಷಿಸಿರುತ್ತಾರೆ. ಆ ಕಪ್ಪುಹಣವನ್ನು ದೇಶಕ್ಕೆ ವಾಪಸ್ ತಂದು ದೇಶದ ಅಗತ್ಯವಾದ ನೀರಾವರಿ, ರಸ್ತೆ ಮೊದಲಾದ ಮೂಲಸೌಲಭ್ಯ ಯೋಜನೆಗಳ ಅನುಷ್ಠಾನಕ್ಕಾಗಿ ವಿನಿಯೋಗಿಸಲಾಗುವುದು ಎಂದಿದ್ದರೆ ಅದು ಸ್ವಾಗತಾರ್ಹ ಕಾರ್ಯವೆನಿಸುತ್ತಿತ್ತು. ಆದರೆ ಮೋದಿ ಅವರು ಹಣ ವಾಪಸ್ ತಂದು ಪ್ರತಿ ನಾಗರಿಕನ ಬ್ಯಾಂಕ್ ಖಾತೆಗೆ ಪಾವತಿಸುವುದಾಗಿ ಅಂದು ಚುನಾವಣಾ ಸಂದರ್ಭದಲ್ಲಿ ದೇಶದ ಎಲ್ಲೆಡೆ ವ್ಯಾಪಕ ಪ್ರಚಾರ ಮಾಡಿದ್ದರು. ಇದೀಗ ತನ್ನ ಪಕ್ಷ ಅಧಿಕಾರಕ್ಕೆ ಬಂದು 100 ದಿನ ಅಲ್ಲ, ಒಟ್ಟು 8 ವರ್ಷಗಳ 3,000 ದಿನಗಳೇ ಮುಗಿದಿದ್ದರೂ ಸ್ವಿಸ್ ಬ್ಯಾಂಕ್ ಠೇವಣಿ ಇನ್ನೂ ಅಲ್ಲೇ ಭದ್ರವಾಗಿದೆ. ಅಲ್ಲದೆ ಅದಕ್ಕೆ ಇನ್ನೂ ಶೇ. 50 ಸೇರ್ಪಡೆಯಾಗಿದೆ ಎಂದು ತಿಳಿದುಬಂದಿದೆ. ತಾನು ನುಡಿದಂತೆ ನಡೆವ, ಸಾಧನೆ ಮಾಡಿ ತೋರಿಸುವ 56 ಇಂಚಿನ ವಿಶಾಲ ಹೃದಯಿ ಮೋದಿ ಎಂದು ಹೇಳುತ್ತಾ ಬಂದಿರುವ ಬಿಜೆಪಿಯವರೆಲ್ಲರೂ ನಯವಂಚಕರು ಎಂದು ಸಾಬೀತು ಮಾಡಿದಂತಾಗುವುದಿಲ್ಲವೇ? ಈ ಭರವಸೆಯ ಬಗ್ಗೆ ಮೋದಿಯವರು ಇನ್ನೂ ತುಟಿ ಬಿಚ್ಚಿಲ್ಲ. ಅವರ ಸರಕಾರದಲ್ಲಿ ನಂಬರ್ 2 ಸ್ಥಾನದಲ್ಲಿರುವ ಅವರ ಆಪ್ತ ಶ್ರೀ ಅಮಿತ್ ಶಾ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ‘‘ಅದೆಲ್ಲ ಚುನಾವಣಾ ಸಂದರ್ಭದಲ್ಲಿ ಆಡುವ ಚಿಲ್ಲರೆ ವಿಷಯ’’ ಎಂದು ಲಘುವಾಗಿ ಪ್ರತಿಕ್ರಿಯಿಸುವುದನ್ನು ನೋಡಿದರೆ ಮೋದಿ ಅವರು ಕೇವಲ ಮತದಾರರನ್ನು ಮಂಕುಗೊಳಿಸಿ ಅವರ ಮತ ಸೆಳೆಯಲು ಉದ್ದೇಶ ಪೂರ್ವಕ ಸುಳ್ಳು ಹೇಳಿದ್ದಾರೆ ಎಂದಾಗುವುದಿಲ್ಲವೇ? ಇದು ದೇಶದ ಚುನಾವಣಾ ಪ್ರಾತಿನಿಧ್ಯ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಅಲ್ಲವೇ?

2. ಪೆಟ್ರೋಲಿಯಮ್ ಉತ್ಪನ್ನಗಳು ಮತ್ತು ಎಲ್ಲ ದಿನಬಳಕೆಯ ವಸ್ತುಗಳ ಬೆಲೆ ಇಳಿಕೆಯ ಭರವಸೆ:

ಮೋದಿಯವರು ಮತ್ತು ಇತರ ಎಲ್ಲಾ ನಾಯಕರುಗಳು ಬಹುತೇಕ ಎಲ್ಲಾ ಚುನಾವಣಾ ಪ್ರಚಾರ ಸಭೆಯಲ್ಲಿ ಹೆಚ್ಚಿನ ಒತ್ತುಕೊಟ್ಟು ಪ್ರಚಾರ ಮಾಡಿ ಭರವಸೆ ಕೊಟ್ಟ ಇನ್ನೊಂದು ಮಹತ್ವದ ವಿಷಯ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆಗಳನ್ನು ಇಳಿಸುವುದು. ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕ್ರಮವಾಗಿ ಲೀಟರ್ 1ರ ರೂ. 40 ಮತ್ತು ರೂ. 30ಕ್ಕೆ ಹಾಗೂ ಅಡುಗೆ ಅನಿಲ ಸಿಲಿಂಡರ್ ಬೆಲೆ ರೂ. 200ಕ್ಕೆ ಇಳಿಸಲಾಗುವುದು ಎಂದು ದೇಶದ ಎಲ್ಲೆಡೆ ಪ್ರಚಾರ ಮಾಡಲಾಗಿತ್ತು. ಇದೀಗ ಏನಾಗಿದೆ, ಅಂದು (2008-  2014ರ ಸಂದರ್ಭ)  ಕಚ್ಚಾತೈಲ ಬ್ಯಾರೆಲ್ ಒಂದರ ಬೆಲೆ ನಿರಂತರ 100ರಿಂದ 145 ಡಾಲರ್‌ನಷ್ಟು ಏರಿಕೆಯಾಗಿದ್ದರೂ.ಕಾಂಗ್ರೆಸ್-ಯುಪಿಎ ಸರಕಾರ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆಗಳನ್ನು ಯಾವತ್ತೂ ಕ್ರಮವಾಗಿ ರೂ. 80, ರೂ. 60, ಮತ್ತು ರೂ. 400 (ಸಿಲಿಂಡರ್ 1ರ) ಮೀರದಂತೆ ನಿಗಾ ವಹಿಸಿದ್ದರೆ, ಇದೀಗ ಮೋದಿ ಸರಕಾರ ಕಚ್ಚಾತೈಲ ಬೆಲೆ ೩೦ರಿಂದ 70 ಡಾಲರ್ ಒಳಗಡೆ ಇದ್ದಾಗ್ಯೂ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಕ್ರಮವಾಗಿ ರೂ. 110ರಿಂದ ರೂ.120 ಮತ್ತು ರೂ. 100ರಿಂದ 110 ಮತ್ತು ರೂ. 1,000ದಂತೆ ಮಾರಾಟ ಮಾಡುತ್ತಿದ್ದು, ಇದು ಬೆಲೆಗಳನ್ನು ಕನಿಷ್ಠ ಮಟ್ಟಕ್ಕೆ ಇಳಿಸುವ ಪರಿಯೇ ಅಥವಾ ಚುನಾವಣೆ ಗೆಲ್ಲಲು ಸುಳ್ಳು ಭರವಸೆ ನೀಡುವ ಪರಿಯೇ?

3. ಗಗನಕ್ಕೇರುತ್ತಿರುವ ದಿನಬಳಕೆ ವಸ್ತುಗಳ ಬೆಲೆ:

ಜನಸಾಮಾನ್ಯರ ದಿನಬಳಕೆಯ ವಸ್ತುಗಳಾದ ಆಹಾರಧಾನ್ಯಗಳು, ತೊಗರಿ, ಹೆಸರುಕಾಳು, ಅಡುಗೆ ಅನಿಲದ ಬೆಲೆಗಳು 2014ರ ಸಂದರ್ಭಕ್ಕೆ ಹೋಲಿಸಿದರೆ ಪ್ರಸ್ತುತ ಯಾವ ಮಟ್ಟಕ್ಕೆ ಏರಿಕೆಯಾಗಿದೆ ಹಾಗೂ ಈ ಬೆಲೆ ಏರಿಕೆಯಿಂದ ಜನ ಯಾವ ರೀತಿ ಕಷ್ಟ ನಷ್ಟ ಅನುಭವಿಸುತ್ತಿದ್ದಾರೆ ಎಂದು ಎಲ್ಲರಿಗೂ ತಿಳಿದೇ ಇದೆ. ವಿಶೇಷವಾಗಿ ರೂ. 90ರಿಂದ 110ರಷ್ಟಿದ್ದ ಅಡುಗೆ ಎಣ್ಣೆ ಬೆಲೆ (2013-14ರಲ್ಲಿ), ಇದೀಗ ರೂ. 200ರ ಗಡಿ ದಾಟಿದ್ದು ಜನರ ಗೋಳಿಗೆ ಕಾರಣವಾಗಿದೆ. ಈ ರೀತಿ ಚುನಾವಣಾ ಪೂರ್ವದಲ್ಲಿ ಬೆಲೆ ಇಳಿಕೆ ಬಗ್ಗೆ ಮೋದಿಯವರು  ನೀಡಿದ್ದ ಭರವಸೆಗಳನ್ನು ಸಂಪೂರ್ಣ ಮರೆತು ಜನರ ಸಂಕಷ್ಟಗಳಿಗೆ ಕಾರಣರಾಗಿದ್ದಾರೆ. ಪ್ರಸ್ತುತ ಎಪ್ರಿಲ್ 2022ರಲ್ಲಿ ದಾಖಲಾದ ಬೆಲೆ ಏರಿಕೆ ಶೇ. 15.08 ಪ್ರಮಾಣ ಕಳೆದ 30 ವರ್ಷಗಳಲ್ಲಿ ದಾಖಲಾಗಿರುವ ಗರಿಷ್ಠ ಏರಿಕೆಯ ಪ್ರಮಾಣವಾಗಿದೆ.

4. ಗುಜರಾತ್ ವಿಕಾಸದ ಮಾದರಿಯಲ್ಲಿ ದೇಶದ ವಿಕಾಸ ಎಂದು ಮರೆತ ಮೋದಿ:

ತಥಾಕಥಿತ ಗುಜರಾತ್ ವಿಕಾಸದ ಮಾದರಿಯಲ್ಲೇ ದೇಶದ ವಿಕಾಸ ಮಾಡುವುದಾಗಿ ದೇಶದಾದ್ಯಂತ ಅದ್ದೂರಿ ಪ್ರಚಾರ ಮಾಡಿದ್ದರು ಮಾನ್ಯ ಮೋದಿ ಮತ್ತು ಬಿಜೆಪಿಯ ಸಂಘಪರಿವಾರದವರು. ಇದೀಗ ಆ ಪದಗಳನ್ನು ಅವರು ಮರೆತಿದ್ದಾರೆ.  ಮೇಲೆ ಹೇಳಿರುವಂತೆ ಗುಜರಾತ್ ವಿಕಾಸ ಎಂಬುದೇ ಅತಿರಂಜಿತ ತಥಾಕಥಿತ ವಿಕಾಸ ಎಂದಾಗಿದ್ದರೆ, ಇನ್ನು ದೇಶದ ವಿಕಾಸ ಎಲ್ಲಿಂದ ಬರಬೇಕು? ಹೌದು, ಮಾನ್ಯ ಮೋದಿಯವರು ಕೆಲವೊಂದು ಬೃಹತ್ ಸೇತುವೆ, ರೈಲುಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಟೇಪ್ ಕಟ್ ಮಾಡಿ ದೇಶಸೇವೆಗೆ ಅರ್ಪಿಸಿದ್ದಾರೆ. ಹೀಗೆ ಸೇವೆಗೆ ಅರ್ಪಿಸಲಾದ ಅಸ್ಸಾಮಿನ 6 ಕಿ.ಮೀ. ಉದ್ದದ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ, ಉತ್ತರಪ್ರದೇಶದ ರಾ-ಹೆದ್ದಾರಿ, ಕಾಶ್ಮೀರ ಕಣಿವೆಯ ರೈಲು ಮಾರ್ಗಗಳನ್ನು  ಮೋದಿಯವರು ಟೇಪ್ ಕಟ್ ಮಾಡಿ ದೇಶದ ಸೇವೆಗೆ ಅರ್ಪಿಸಲಾದ ಬಹುತೇಕ ಕಾಮಗಾರಿಗಳು ಹಿಂದಿನ ಯುಪಿಎ ಸರಕಾರ ಆರಂಭಿಸಿದ ಕೆಲಸಗಳು ಎಂದು ಬೇರೆ ಹೇಳಬೇಕಿಲ್ಲ.

5. ಭರವಸೆಯಾಗಿಯೇ ಉಳಿದ ಸ್ವಚ್ಛ ಭಾರತದ ಭರವಸೆ:

ಮೋದಿ ಅವರು ತಾನು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಆರಂಭದ ದಿನಗಳಲ್ಲಿ ಸ್ವಚ್ಛ ಭಾರತದ ನಿರ್ಮಾಣಕ್ಕಾಗಿ ಸ್ವಯಂ ಆಳೆತ್ತರದ ಮೋಪು ಹಿಡಿದು ಬೀದಿ ಸ್ವಚ್ಛ ಮಾಡುವ ಆ ದೃಶ್ಯ ದೇಶದ ದೂರದರ್ಶನದಲ್ಲಿ ನೋಡಿರುವುದು ಎಲ್ಲರಿಗೂ ನೆನಪಿರಬಹುದು. ಆದರೆ ದೇಶದ ಸ್ವಚ್ಛತೆ ಬಗ್ಗೆ ಸ್ವಯಂ ಮೋದಿಯವರು ಈಗ ಮರೆತಿರುವಂತಿದೆ.

6. ವಾರ್ಷಿಕ ಎರಡು ಕೋಟಿ ಉದ್ಯೋಗ ನಿರ್ಮಾಣದ ಭರವಸೆ:

2014ರ ಮಹಾ ಚುನಾವಣೆ ಸಂದರ್ಭ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿ ಮುಂದೆ ದೇಶದಾದ್ಯಂತ ತನ್ನ ಪ್ರಚಾರ ಸಭೆಗಳ ಮೂಲಕ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ವಾರ್ಷಿಕ ಎರಡು ಕೋಟಿ ಉದ್ಯೋಗ ಒದಗಿಸಲಾಗುವುದೆಂದು ಸಾರಿದ್ದರು. ಕೇಂದ್ರದಲ್ಲಿ ಇದೀಗ ಎರಡನೇ ಅವಧಿಗೆ ಅಧಿಕಾರ ಚಲಾಯಿಸುತ್ತಿರುವ ಬಿಜೆಪಿ, ಕಳೆದ ೮ ವರ್ಷಗಳಲ್ಲಿ ಒಟ್ಟು ಎಷ್ಟು ಕೋಟಿ ಉದ್ಯೋಗ ನೀಡಿದ್ದಾರೆ ಎಂದು ಕೇಳುವುದರ ಬದಲು ಅವರ ಸರಕಾರ ತನ್ನ ತಪ್ಪುಆರ್ಥಿಕ ನೀತಿ ಮತ್ತು ನಿರ್ಧಾರಗಳಿಂದಾಗಿ ಪ್ರಸ್ತುತ ಒಟ್ಟು ಎಷ್ಟು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ಜನತೆ ಕೇಳಬೇಕಾದ ಪರಿಸ್ಥಿತಿ ದೇಶದಲ್ಲಿದೆ. ಮಾನ್ಯ ಪ್ರಧಾನಿ ಮೋದಿಯವರು ದೇಶದ ಆರ್ಥಿಕ ನೀತಿ ನಿರೂಪಣಾ ಇಲಾಖೆಗಳು ಮತ್ತು ಸಂಬಂಧಪಟ್ಟ ರಿಸರ್ವ್ ಬ್ಯಾಂಕ್, ನೀತಿ ಆಯೋಗದಂತಹ ಸಕ್ಷಮ ಪ್ರಾಧಿಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮತ್ತು ಯಾವುದೇ ಪೂರ್ವ ಸಿದ್ಧತೆ ಮಾಡದೆ ಸ್ವಯಂ ಘೋಷಣೆಗೈದ ನೋಟು ಅಮಾನ್ಯ ಕಾರ್ಯದ ಮೂಲಕ ದೇಶದಲ್ಲಿ ಅಂದು ಚಲಾವಣೆಯಲ್ಲಿದ್ದ 500 ಮತ್ತು 1,000 ರೂ. ನೋಟುಗಳ ಚಲಾವಣೆಯನ್ನು ದಿಢೀರ್ ರದ್ದು ಮಾಡಿದ ಕಾರಣ ದೇಶದ ಆರ್ಥಿಕ ವ್ಯವಸ್ಥೆ ಪೂರ್ತಿ ತೀವ್ರ ಕುಸಿತ ಕಂಡು ವಿಶೇಷವಾಗಿ ಸಣ್ಣ, ಅತಿಸಣ್ಣ, ಮತ್ತು ಮಧ್ಯಮ ಕೈಗಾರಿಕೆಗಳು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿ ಪೂರ್ತಿ ಇಲ್ಲವೇ ಅಂಶಿಕ ಮುಚ್ಚಲ್ಪಟ್ಟ ಕಾರಣ ಲಕ್ಷಾಂತರ ಜನ ತಮ್ಮಲ್ಲಿರುವ ಉದ್ಯೋಗಗಳನ್ನು ಕಳೆದುಕೊಂಡು ತೀವ್ರ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಹೀಗೆ ಮೋದಿ ಸರಕಾರ 8 ವರ್ಷಗಳಲ್ಲಿ ಜನತೆಗೆ ಒಟ್ಟು 16 ಕೋಟಿ (ವಾರ್ಷಿಕ 2 ಕೋಟಿ x 8 ವರ್ಷಗಳಿಗೆ) ಉದ್ಯೋಗ ಒದಗಿಸುವ ಬದಲು ಜನ ತಮ್ಮಲ್ಲಿರುವ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಯಿತು.

ಮೇಲೆ ವಿವರಿಸಲಾದ ಈಡೇರದ ಬಹುತೇಕ ಭರವಸೆಗಳು 2014ರ ಮಹಾ ಚುನಾವಣಾ ಪೂರ್ವದಲ್ಲಿ ನೀಡಲಾಗಿದ್ದರೆ, ಸ್ವಚ್ಛ ಭಾರತ ನಿರ್ಮಾಣ, ಕಪ್ಪುಹಣದ ನಿಗ್ರಹ ಮುಂತಾದ ಘೋಷಣೆಗಳು ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸ್ವಯಂ ಘೋಷಣೆ ಮಾಡಿರುವ ಭರವಸೆಗಳಾಗಿವೆ. ಇನ್ನು ಮೋದಿ ನೇತೃತ್ವದ ಸರಕಾರ ತನ್ನ ವಾರ್ಷಿಕ ಬಜೆಟ್ ಮೂಲಕ ಘೋಷಿಸಿರುವ ಕಾರ್ಯಕ್ರಮಗಳ ಜಾರಿ ಕುರಿತಂತೆ ವಿಮರ್ಶಿಸೋಣ.

7. ನೋಟು ಅಮಾನ್ಯ ಮತ್ತು ಸುಳ್ಳಾದ ಕಪ್ಪುಹಣ ನಿಗ್ರಹದ ಭರವಸೆ:

2016ರ ನವೆಂಬರ್ ೮ರಂದು ತಡರಾತ್ರಿ ಪ್ರಧಾನಿ ಮೋದಿಯವರು ದೇಶದಲ್ಲಿ ಚಲಾವಣೆಯಲ್ಲಿದ್ದ 500 ಮತ್ತು 1,000 ರೂ. ನೋಟುಗಳ ಚಲಾವಣೆಯನ್ನು ನಿರ್ಬಂಧಿಸುವ ಘೋಷಣೆಯನ್ನು ಪ್ರಕಟಿಸಿದರು. ಆ ಮೂಲಕ ದೇಶದ ಎಲ್ಲೆಡೆ ವ್ಯಾಪಕವಾಗಿ ಚಾಲ್ತಿಯಲ್ಲಿದ್ದ ಕಪ್ಪು ಹಣದ ವ್ಯವಹಾರವನ್ನು ಮಟ್ಟಹಾಕಿ ದೇಶದ ಖಜಾನೆಗೆ ಬೃಹತ್ ಮೊತ್ತದ ಕರ ಆದಾಯ ನಷ್ಟ ಎಸಗುತ್ತಿರುವ ದಂಧೆಕೋರರನ್ನು ಜೈಲಿಗೆ ತಳ್ಳಲಾಗುವುದು ಎಂಬಿತ್ಯಾದಿ ರಂಗುರಂಗಿನ ಭರವಸೆಗಳನ್ನು ನೀಡಲಾಯಿತು. ಆದರೆ ಮುಂದೆ ಏನಾಯಿತು? ನಿಷೇಧಿತ ನೋಟುಗಳ ಬದಲಾವಣೆ  ಮಾಡಲು ನಿಗದಿತ ಅವಧಿಯೊಳಗೆ ಒಟ್ಟು ದೇಶದಲ್ಲಿ ಚಲಾವಣೆಯಲ್ಲಿದ್ದ 500 ಮತ್ತು 1,000 ರೂಪಾಯಿಯ ಶೇ. 67ರಷ್ಟು ನೋಟುಗಳು ದೇಶದ  ಬ್ಯಾಂಕ್‌ಗಳ ಮೂಲಕ ರಿಸರ್ವ್ ಬ್ಯಾಂಕ್‌ನ ಬೊಕ್ಕಸ ಸೇರಿತ್ತು. ಅಂದರೆ ಸರಕಾರಕ್ಕೆ ಹತ್ತಿರವಿರುವ ಮಧ್ಯವರ್ತಿಗಳ ನೆರವಿನಿಂದ ಚಾಲ್ತಿಯಲ್ಲಿದ್ದ ಎಲ್ಲಾ ಕಪ್ಪುಹಣ ಅಂದರೆ ಶೇ. 97ರಷ್ಟು ನೋಟುಗಳು ಹೊಸ ನೋಟುಗಳೊಂದಿಗೆ ವಿನಿಮಯ ಆಗಿದೆ ಎಂದರೆ, ಚಾಲ್ತಿಯಲ್ಲಿದ್ದ ಆ ಕಪ್ಪು ಹಣ ಎಲ್ಲಿ ಹೋಯಿತು ಎಂಬುದರ ಬಗ್ಗೆ ಸರಕಾರ ಇನ್ನೂ ಸರಿಯಾದ ರೀತಿಯಲ್ಲಿ ಉತ್ತರಿಸಿಲ್ಲ. ನಿಷೇಧಿತ ನೋಟುಗಳನ್ನು ಬ್ಯಾಂಕ್ ಮೂಲಕ ಬದಲಾವಣೆ ಮಾಡಲು  ಒಟ್ಟು ಆರು ತಿಂಗಳ ಅವಧಿ 2017ರಲ್ಲಿ ಮುಗಿದಿದ್ದರೂ. ಆ ನಿಷೇಧಿತ ನೋಟು ಉಳ್ಳವರು ಈಗಲೂ ಅವುಗಳನ್ನು ಬದಲಾಯಿಸುತ್ತಿದ್ದಾರೆ  ಎಂಬ ಅನಧಿಕೃತ ವರದಿಗಳು ಬರುತ್ತಲೇ ಇದೆ. ಅಂದರೆ ಹಳೆ ನೋಟುಗಳಲ್ಲಿದ್ದ ಕಪ್ಪುಹಣ ಹೊಸ ನೋಟುಗಳಾಗಿ ಈಗಲೂ ಬದಲಾಗುತ್ತಿವೆ ಎಂದಾಯಿತು! ಅಂದರೆ ಮೋದಿಯವರ ರಾಜಾರೋಷದ ಘೋಷಣೆಗಳು ಕೇವಲ ರಾಜಕೀಯದ ಬೂಟಾಟಿಕೆ ಎಂದಾಯಿತು.

8. ಯಾರಿಗೆ ನಷ್ಟ-ಯಾರಿಗೆ ಲಾಭ?

೨೦೧೦-೨೦೧೧ ರ ಆರ್ಥಿಕ ವರ್ಷದಲ್ಲಿ ದೇಶದ ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್ (ಸಿಎಜಿ) ಆಗಿದ್ದ ವಿನೋದ್ ರಾಯ್ ಟೆಲಿಕಾಂ ಇಲಾಖಾ ಆಡಿಟ್ ಸಂಬಂಧಿತ ವರದಿಯಲ್ಲಿ -2ಜಿ ತರಂಗಾಂತರ ಮಾರಾಟದಿಂದ ಸರಕಾರಕ್ಕೆ ರೂ. 50,000 ಕೋಟಿ ಮಾತ್ರ ಆದಾಯ ಬಂದಿದೆ, ಮಾರಾಟ ಸಂಬಂಧಪಟ್ಟಂತೆ ಇಲಾಖೆ ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ಎಂಬ ವಿಧಾನದಲ್ಲಿ ಮಾರಾಟ ಮಾಡುವ ಬದಲು- ಟೆಂಡರ್ ಮೂಲಕ ಬಿಡ್ ಆಹ್ವಾನಿಸುತ್ತಿದ್ದರೆ, ಸುಮಾರು ರೂ. 1.60 ಲಕ್ಷ ಕೋಟಿಯಷ್ಟು ಆದಾಯ ಬರಲು ಸಾಧ್ಯವಿತ್ತು ಎಂದು ಉಲ್ಲೇಖಿಸಿದ್ದರು. ಆ ಆದಾಯ ನಷ್ಟದ ಉಲ್ಲೇಖವನ್ನು ಬಿಜೆಪಿ ‘‘ಕೆಲವೊಂದು ಆಯ್ದ ಟೆಲಿಕಾಂ ಕಂಪೆನಿಗಳಿಗೆ ಹಿಂದಿನ ಬಾಗಿಲ ಮೂಲಕ ಸಹಾಯ ಮಾಡಿ ಟೆಲಿಕಾಂ ಸಚಿವರು ಅಕ್ರಮ ಸಂಪಾದನೆ ಮಾಡಲು ಬಳಸಿದ್ದಾರೆ’’ ಎಂಬರ್ಥ ಬರುವಂತೆ ಸಚಿವ ಡಿ. ರಾಜ ಮತ್ತು ಸರಕಾರದ ವಿರುದ್ಧ ಬೃಹತ್ ಹಗರಣದ ಆರೋಪ ಹೊರಿಸಿ-ಪಾರ್ಲಿಮೆಂಟ್‌ನಲ್ಲಿ ನಿರಂತರ ಆಪಾದನೆ, ಗದ್ದಲ ಅಲ್ಲದೆ ದೇಶದಾದ್ಯಂತ ಈ ಪ್ರಕರಣ ಕುರಿತಂತೆ ಯುಪಿಎ ಸರಕಾರದ ವಿರುದ್ಧ ರಾಜಕೀಯ ಸಮರ ಸಾರಿದ್ದರು. ಈ ಪ್ರಕರಣವನ್ನು ಬಿಜೆಪಿ 2017ರ ಮಹಾಚುನಾವಣೆವರೆಗೂ ಜೀವಂತ ಇರಿಸಿ ಅದು ‘‘2 ಲಕ್ಷ ಕೋಟಿ ರೂ.ನ ಶತಮಾನದ ಬೃಹತ್ ಕರ್ಮಕಾಂಡ’’ ಎಂದು ನಿರಂತರ ಪ್ರಚಾರ ಮಾಡಿದ ಪರಿಣಾಮವಾಗಿ ಕಾಂಗ್ರೆಸ್-ಯುಪಿಎಯ ಪಕ್ಷಗಳ ಬಹುತೇಕ ಅಭ್ಯರ್ಥಿಗಳು 2014ರ ಮಹಾಚುನಾವಣೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿ ಸೋತಿರುವುದು ಇದೀಗ ಇತಿಹಾಸ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)