varthabharthi


ಕಲೆ - ಸಾಹಿತ್ಯ

ನಾಳೆ ಸಿಜಿಕೆ ಜನ್ಮದಿನ

ವಿನೂತನ ರಂಗ ಪ್ರಯೋಗಗಳ ಧೀಮಂತ ರಂಗ ಸಂಘಟಕ ಸಿಜಿಕೆ

ವಾರ್ತಾ ಭಾರತಿ : 26 Jun, 2022
ಗುಂಡಣ್ಣ ಚಿಕ್ಕಮಗಳೂರು

ಸಮುದಾಯ, ರಂಗಸಂಪದ, ರಂಗ ನಿರಂತರ 150, ಗ್ರಾಮ ಸಮಾಜ, ರಂಗಾಯಣ ಮೈಸೂರು, ಹಂದರ, ಮುಂತಾದ ಹಲವು ರಂಗ ತಂಡಗಳೊಟ್ಟಿಗೆ, ಸಾಣೆಹಳ್ಳಿಯ ಶ್ರೀ ಮಠದ ರಂಗಚಟುವಟಿಕೆಗಳ ಜೊತೆಗೆ ಸದಾಕಾಲವೂ, ಕೊನೆಯ ದಿನದವರೆಗೂ ರಂಗಚಟುವಟಿಕೆಗಳನ್ನು ನಡೆಸಿದ ಸಿಜಿಕೆ, ಯುವಕರನ್ನು ರಂಗಭೂಮಿಯಲ್ಲಿ ಗುರುತಿಸುವ, ಬೆಳೆಸುವ ಅದಮ್ಯ ಶಕ್ತಿಯ ಪ್ರೇರಕ. ಅವರ ಬದುಕು ನಿಜ ಅರ್ಥದಲ್ಲಿ ಅವರ ಜೀವನ ವೃತ್ತಾಂತದ ಪುಸ್ತಕದ ರೀತಿಯಲ್ಲಿ ಕತ್ತಾಲ ಬೆಳದಿಂಗಳೇ.


 ಹವ್ಯಾಸಿ ರಂಗಭೂಮಿಯ ದೈತ್ಯ ಪ್ರತಿಭೆ ಸಿಜಿಕೆ ಜನ್ಮ ತಳೆದಿದ್ದು ಜೂನ್ ತಿಂಗಳಲ್ಲಿ. ಜೂನ್ 27, 1950. (ಅಗಲಿಕೆ 11.01.2006). 56 ವರುಷ ಬದುಕಿದ್ದ ಸಿಜಿಕೆ ತನ್ನ ಬದುಕಿನ 31 ವರುಷ ರಂಗಕಾಯಕ ಸಲ್ಲಿಸಿದ ಮಹಾನ್ ಚೇತನ. ಹಲವಾರು ರೀತಿಯ ವಿನೂತನ ಮತ್ತು ನಿರಂತರ ರಂಗ ಪ್ರಯೋಗಗಳಿಗೆ ತನ್ನ ಬದುಕನ್ನು ಮೀಸಲಿಟ್ಟ ರಂಗ ಸಂಘಟಕ. ಕಷ್ಟದಲ್ಲಿರುವ ಒಬ್ಬರಿಗೆ ನೆರವಾಗಲು ಮತ್ತೊಬ್ಬರಿಂದ ಸಾಲ ಮಾಡಿ, ನೆರವಾಗುವ ಹೃದಯ ವೈಶಾಲ್ಯದ ಭಾವನಾತ್ಮಕ ಜೀವಿ. ಸಮುದಾಯ ಸಂಘಟನೆಯಿಂದ ರಂಗ ಬದುಕನ್ನು ಪ್ರಾರಂಭಿಸಿದ ಸಿಜಿಕೆ ನಂತರದಲ್ಲಿ ತಾನು ಕೆಲಸ ಮಾಡದ ರಂಗ ಸಂಘಟನೆಗಳು, ತಂಡ ಗಳು ಇಲ್ಲ. ಧರಿಸಿದ ವೇಷಗಳು, ಮಾಡಿದ ಕಾರ್ಯಗಳು ನೂರಾರು. ಆದರೆ ಎಲ್ಲವೂ ರಂಗಸಾಂಗತ್ಯದ ಮೆರುಗಿನ ಅಂಚನ್ನೇ ಹೊಂದಿದ್ದವು. ಓದಿದ್ದು ಅರ್ಥಶಾಸ್ತ್ರ. ಬೆಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಪ್ರೊಫೆಸರ್ ವೃತ್ತಿ. ಅದಕ್ಕೂ ಮಿಗಿಲಾಗಿ ಮಾಡಿದ್ದು ಪ್ರವೃತ್ತಿಯಾಗಿ ರಂಗಭೂಮಿ ಕಾಯಕ. ಹೆಸರು, ಖ್ಯಾತಿ ಎಲ್ಲವೂ ದಕ್ಕಿದ್ದು ರಂಗಕಾಯಕದಲ್ಲೇ. ಮುಚ್ಚಿದ್ದ ಪ್ರತಿಭೆ ಜಗತ್ತಿಗೆ ಕಂಡಿದ್ದು ಸಹ ರಂಗಭೂಮಿಯಲ್ಲೇ. ನಾಟಕ ಅಕಾಡಮಿ ಅಧ್ಯಕ್ಷ, ಗಾಂಧಿ ಭವನದ ನಿರ್ದೇಶಕ, ಸಾಣೇಹಳ್ಳಿಯ ಶ್ರೀ ಮಠದ ರಂಗ ಚಟುವಟಿಕೆಗಳ ಮತ್ತು ಶಿವಸಂಚಾರದ ಕನಸುಗಾರ, ರಂಗ ನಿರಂತರ ಸಂಘಟನೆಯ ಸ್ಥಾಪಕ, ನಿರಂತರ ರಂಗ ಚಟುವಟಿಕೆಗಳ ಪ್ರವರ್ತಕ. ಪಂಚಮ, ಯಾರು ಗೆಳೆಯ ನೀನು ಯಾರು?, ಬೆಲ್ಚಿ, ಸುರಪುರದ ವೆಂಕಟಪ್ಪ ನಾಯಕ, ಮಹಾಚೈತ್ರ, ಒಡಲಾಳ, ಶೇಕ್ಸ್ ಪಿಯರ್ ಸ್ವಪ್ನ ನೌಕೆ, ಅಂಬೇಡ್ಕರ್, ದಂಡೆ, ರುಡಾಲಿ, ಸುಲ್ತಾನ್ ಟಿಪ್ಪು, ನೀಗಿಕೊಂಡ ಸಂಸ, ಕಾಲಜ್ಞಾನಿ ಕನಕ, ಇಗೋ ಮುಗಿಲು ಮುಂತಾದ ಹಲವು ನಾಟಕಗಳು ಸಿಜಿಕೆಗೆ ಕೀರ್ತಿ ತಂದ ರಂಗ ಪ್ರಯೋಗಗಳು. ಸಮುದಾಯ, ರಂಗಸಂಪದ, ರಂಗ ನಿರಂತರ 150, ಗ್ರಾಮ ಸಮಾಜ, ರಂಗಾಯಣ ಮೈಸೂರು, ಹಂದರ, ಮುಂತಾದ ಹಲವು ರಂಗ ತಂಡಗಳೊಟ್ಟಿಗೆ, ಸಾಣೆಹಳ್ಳಿಯ ಶ್ರೀ ಮಠದ ರಂಗಚಟುವಟಿಕೆಗಳ ಜೊತೆಗೆ ಸದಾಕಾಲವೂ, ಕೊನೆಯ ದಿನದವರೆಗೂ ರಂಗಚಟುವಟಿಕೆಗಳನ್ನು ನಡೆಸಿದ ಸಿಜಿಕೆ, ಯುವಕರನ್ನು ರಂಗಭೂಮಿಯಲ್ಲಿ ಗುರುತಿಸುವ, ಬೆಳೆಸುವ ಅದಮ್ಯ ಶಕ್ತಿಯ ಪ್ರೇರಕ. ಅವರ ಬದುಕು ನಿಜ ಅರ್ಥದಲ್ಲಿ ಅವರ ಜೀವನ ವೃತ್ತಾಂತದ ಪುಸ್ತಕದ ರೀತಿಯಲ್ಲಿ ಕತ್ತಾಲ ಬೆಳದಿಂಗಳೇ.

ಈ ಕಾರಣಗಳಿಂದ, ಅವರ ಹುಟ್ಟಿದ ತಿಂಗಳಿನ ಕಾರಣದಿಂದ, ಅಭಿನಯ ಭಾರತಿ ಧಾರವಾಡದ ಈ ರಂಗ ನಿರಂತರ 150 ದಿನಗಳ ಕಾರ್ಯಕ್ರಮವನ್ನು ಸಿಜಿಕೆ ನೆನಪಿಗೆ ಅರ್ಪಿಸುತ್ತಿದ್ದೇನೆ. ಸಿಜಿಕೆಯ ಈ ವಿನೂತನ ಪರಿಕಲ್ಪನೆಯ 150 ದಿನಗಳ ನಿರಂತರ ರಂಗ ಪ್ರಯೋಗ 09 ಫೆಬ್ರವರಿ 1987ಕ್ಕೆ ಪ್ರಾರಂಭವಾಗಿ, ಜುಲೈ 08, 1987ಕ್ಕೆ ಮುಕ್ತಾಯಗೊಂಡಿತು. ಇಂದಿಗೆ ಸರಿಯಾಗಿ 35 ವರುಷಗಳ ಹಿಂದೆ. ಕಲಾಕ್ಷೇತ್ರ ಹೊರ ಆವರಣದಲ್ಲಿ, ಈಗ ಕಾರಂತರು ನಡೆಸುತ್ತಿರುವ ಕ್ಯಾಂಟೀನ್ ಆವರಣದಲ್ಲಿ ತಾತ್ಕಾಲಿಕ ರಂಗಮಂದಿರ ನಿರ್ಮಿಸಿ, ಸುತ್ತಮುತ್ತ ಇದ್ದ ದೊಡ್ಡ ಮರ, ಅದರ ವಿವಿಧ ಕೊಂಬೆ ರಂಬೆಗಳನ್ನು ಇದ್ದ ಹಾಗೆಯೇ ಉಪಯೋಗಿಸಿಕೊಂಡು ರಂಗ ವೇದಿಕೆಯನ್ನು ಸಿದ್ಧಗೊಳಿಸಲಾಗಿತ್ತು. ಅದೇ ಮರದ ಎಲ್ಲ ರಂಬೆ ಕೊಂಬೆಗಳಿಗೆ ಬೆಳಕಿನ ಡಬ್ಬಗಳನ್ನು ತೂಗುಹಾಕಿ ಬೆಳಕಿನ ವಿನ್ಯಾಸವನ್ನು ಮಾಡಲಾಗಿತ್ತು. ಪ್ರತೀ ಪ್ರದರ್ಶನಕ್ಕೂ ಹೆಚ್ಚು ಅಂದರೆ 60-70 ಜನ ಕೂರಲು ಕುರ್ಚಿಗಳನ್ನು ಹಾಕಲಾಗಿತ್ತು. ಆವರಣದ ಸುತ್ತಲೂ ಶಾಮಿಯಾನ ಹಾಕಿ ರಂಗ ಮಂದಿರದ ವಾತಾವರಣ ನಿರ್ಮಿಸಲಾಗಿತ್ತು. ಈ ಜಾಗದಲ್ಲಿ ಅಂದು ಕ್ಯಾಂಟೀನ್ ಆಗಲಿ, ಈಗ ಇರುವ ತಾಲೀಮು ಕೊಠಡಿಗಳಾಗಲೀ ಇರಲಿಲ್ಲ. ಹೀಗಾಗಿ ಇಡೀ ಆವರಣದಲ್ಲಿ ರಂಗ ನಿರಂತರದ ತಾತ್ಕಾಲಿಕ ರಂಗ ಮಂದಿರ ನಿರ್ಮಾಣವಾಗಿತ್ತು. ಬೆಳಕು ಸಹ ಅತ್ಯಂತ ಕಡಿಮೆ ಸಂಖ್ಯೆಯ ಸ್ಪಾಟ್ ಲೈಟುಗಳು ಬಳಕೆಯಾಗಿದ್ದವು; ಮಿಕ್ಕಂತೆ ಡಬ್ಬಾಗಳನ್ನು ಸ್ಪಾಟ್ ಲೈಟಾಗಿ ಪರಿವರ್ತಿಸಿ ಮಾಡಿದ ಲೈಟುಗಳಾಗಿದ್ದವು. ಮಳೆ ಬಂದರೆ, ನಟರಿಗೆ ಮತ್ತು ಪ್ರೇಕ್ಷಕರಿಗೆ ಯಾವುದೇ ರಕ್ಷಣೆ ಇರಲಿಲ್ಲ; ಅವರೂ ತಾತ್ಕಾಲಿಕವಾಗಿ ನಿರ್ಮಾಣಗೊಂಡಿದ್ದ ಮೇಕಪ್ ರೂಂಗೆ ಹೋಗಿ ಆಶ್ರಯ ಪಡೆದು, ಮಳೆ ನಿಂತ ನಂತರ, ಮಳೆ ನೀರು ಸೋರಿ ಒದ್ದೆಯಾಗಿದ್ದ ರಂಗ ಮಂಚದ ಮೇಲೆ ಮತ್ತೆ ನಾಟಕ ಪ್ರಾರಂಭಿಸಬೇಕಿತ್ತು. ಒಟ್ಟು 18 ನಾಟಕಗಳು ಈ 150 ದಿನಗಳಲ್ಲಿ ಪ್ರದರ್ಶನಗೊಂಡವು; ಪ್ರತೀ ನಾಟಕವೂ ನಿರಂತರವಾಗಿ ಏಳು ದಿನಗಳ ಪ್ರದರ್ಶನ ಮಾಡಬೇಕಿತ್ತು; ನಂತರ ಮೂರು ದಿನಗಳ ಬಿಡುವು. ಈ ಮೂರು ದಿನಗಳಲ್ಲಿ ಮುಂದಿನ ಹೊಸ ನಾಟಕದ ರಂಗ ಸಜ್ಜಿಕೆ, ರಂಗ ಪರಿಕರ, ಬೆಳಕು-ಧ್ವನಿಗಳ ವ್ಯವಸ್ಥೆ, ರಂಗ ಮಂಚದ ಮೇಲಿನ ತಾಲೀಮು ಮುಂತಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದರು; ನಂತರ ಮತ್ತೆ ಏಳು ದಿನಗಳ ನಿರಂತರ ಪ್ರದರ್ಶನ.

ಹದಿನೆಂಟು ಹೊಸ ನಾಟಕಗಳು ರಚನೆಯಾಗಿ ಪ್ರಯೋಗಗೊಂಡವು. ಕೆಲವು ವಿಶಿಷ್ಟ ನಾಟಕಗಳು ಎಂದರೆ, ಸುಣ್ಣ ಹಚ್ಚಿದ ಸಮಾಧಿಗಳು ಮತ್ತು ನೆರೆ(ರಚನೆ: ಪಾಲ್ ಸುದರ್ಶನ್), ಅಹಲ್ಯೆ ನನ್ನ ತಾಯಿ(ರಚನೆ: ಬಿ ಸುರೇಶ), ಗರಂ ಕಡ್ಲೆಕಾಯಿ(ರಚನೆ: ಮಣಿಗನಹಳ್ಳಿ ಸತ್ಯ), ಜಗನ್ನಾಥನ ರಥ ಚಕ್ರಗಳು(ರಚನೆ: ಅಮರ್ ದೇವ್), ಬಾವಿ(ರಚನೆ: ಕತ್ಲು ಸತ್ಯ), ಬಿಳಿಲು ಬೇರಾಗಬಹುದೇ(ರಚನೆ: ನಾಗರಾಜ ರಾವ್), ನರಕದ ಬೇಗೆ(ಏಟ್ಸ್ ಮಹಾಕವಿ/ಕನ್ನಡಕ್ಕೆ: ಎಚ್.ಎಸ್.ಶಿವಪ್ರಕಾಶ್), ತುಕ್ಕೋಜಿ(ತೇಜಸ್ವಿ/ನಾಟಕ ರೂಪ: ರಮೇಶ್ ಚಂದ್), ಆಬೋಲಿನ(ಯಶವಂತ ಚಿತ್ತಾಲ/ನಾಟಕ ರೂಪ: ಸಿಜಿಕೆ), ಅಂತಿಗೊನೆ(ಜೀನ್ ಆನ್ವಿ/ಕನ್ನಡಕ್ಕೆ: ಜಿ.ಎನ್. ರಂಗನಾಥ ರಾವ್), ಬಡಪಾಯಿ ಬ್ರಹ್ಮ ರಾಕ್ಷಸ(ಎ.ಕೆ. ರಾಮಾನುಜಮ್) ನಾಟಕಗಳು ಸಿಜಿಕೆ ಮತ್ತು ರಂಗನಿರಂತರದ ಉದ್ದೇಶಗಳನ್ನು ಸಾರುವ ನಾಟಕಗಳಾಗಿದ್ದವು. ಈ ಹೊಸ ನಾಟಕಗಳ ಜೊತೆಗೆ ಪ್ರತಿಷ್ಠಿತ ಹಿರಿಯ ನಾಟಕಕಾರರಾದ ಶ್ರೀರಂಗರ ‘ಇದು ಭಾಗ್ಯ ಇದು ಭಾಗ್ಯವಯ್ಯ’ ಮತ್ತು ರಾಮಚಂದ್ರ ದೇವ ಅವರ ‘ಮಾಂಡಲೀಕಪುರದ ದುರಂತ ಕಥೆ’ ಮುಂತಾದ ನಾಟಕಗಳೂ ಇದ್ದವು.

ಮೊದಲ ಬಾರಿ ನಿರ್ದೇಶಕರಾಗಿ ಬಿ.ಸುರೇಶ(ಅಹಲ್ಯೆ ನನ್ನ ತಾಯಿ), ರಮೇಶ ಚಂದ್ರ(ತುಕ್ಕೋಜಿ), ಪ್ರಕಾಶ್ ರೈ(ಸೇತೂಮಾಧವನ ಸರಸ ಸಲ್ಲಾಪ), ಗಾಂಧಿ ಗೋಪಿ(ಗರಂ ಕಡ್ಲೇಕಾಯಿ), ಅಮರ್ ದೇವ್(ಜಗನ್ನಾಥನ ರಥ ಚಕ್ರಗಳು), ಅಶೋಕ್ ಸಂದೀಪ್(ಗಿನಿಪಿಗ್) ಮುಂತಾದವರು ಹವ್ಯಾಸಿ ರಂಗಭೂಮಿಯ ನಿರ್ದೇಶಕರ ಪಟ್ಟಿಗೆ ಸೇರ್ಪಡೆಯಾದರು. ಇವರೊಟ್ಟಿಗೆ ಕನ್ನಡ ರಂಗಭೂಮಿಯ ಹಿರಿಯ ನಿರ್ದೇಶಕರಾದ ಬಿ. ಜಯಶ್ರೀ(ಆಬೋಲಿನ), ಸುರೇಂದ್ರನಾಥ್(ಮಾಂಡಲೀಕಪುರದ ದಂತಕಥೆ), ವಿ.ರಾಮಮೂರ್ತಿ(ಟೋಪಿಯಾಟವಯ್ಯ), ಎಚ್.ವಿ. ವೆಂಕಟಸುಬ್ಬಯ್ಯ(ಇದು ಭಾಗ್ಯ ಇದು ಭಾಗ್ಯವಯ್ಯ), ಎಸ್.ಆನಂದ್(ಬಿಳಿಲು ಬೇರಾಗಬಹುದೇ), ಶ್ರೀನಿವಾಸ ಪ್ರಭು(ಅಂತಿಗೊನೆ), ಎನ್. ಎ. ಸೂರಿ(ಬಡಪಾಯಿ ಬ್ರಹ್ಮರಾಕ್ಷಸ), ಬಿ.ವಿ. ರಾಜಾರಾಂ(ಸುಣ್ಣ ಹಚ್ಚಿದ ಸಮಾಧಿಗಳು), ಉಮಾಶಂಕರಸ್ವಾಮಿ(ನರಕದ ಬೇಗೆ) ಅವರು ನಿರ್ದೇಶನ ಮಾಡಿದರು. ಈ ರೀತಿಯಲ್ಲಿ, ಹೊಸ ನಾಟಕಕಾರರು ಮತ್ತು ಹೊಸ ನಿರ್ದೇಶಕರು ಈ ‘ರಂಗ ನಿರಂತರ-150’ ಪ್ರಾಯೋಗಿಕ ಪ್ರಯೋಗದ ಮುಖಾಂತರ ಕನ್ನಡ ರಂಗಭೂಮಿಗೆ ಸೇರ್ಪಡೆಯಾದರು. ಇದು ‘ರಂಗನಿರಂತರ -150’ರ ದೊಡ್ಡ ಸಾಧನೆ ಎನ್ನಬಹುದು. ಸುಣ್ಣ ಹಚ್ಚಿದ ಸಮಾಧಿ, ಅಹಲ್ಯೆ ನನ್ನ ತಾಯಿ, ಜಗನ್ನಾಥನ ರಥ ಚಕ್ರಗಳು, ಸೇತೂಮಾಧವನ ಸರಸ ಸಲ್ಲಾಪ, ಅಂತಿಗೊನೆ, ನೆರೆ, ಆಬೋಲಿನ, ಮರೀಚಿಕೆ, ತುಕ್ಕೋಜಿ ಮುಂತಾದವು ಪ್ರೇಕ್ಷಕರ ಮೇಲೆ ವಿವಿಧ ಸ್ತರಗಳಲ್ಲಿ ಗಾಢ ಪ್ರಭಾವ ಬೀರಿ ಮೆಚ್ಚುಗೆಗೆ ಪಾತ್ರವಾದ ನಾಟಕಗಳಾದವು. ಇಂದಿಗೂ ಅಂದಿನ ಪ್ರದರ್ಶನ ನೋಡಿದ ಪ್ರೇಕ್ಷಕರು ನೆನಪಿಸಿಕೊಳ್ಳುವ ಪ್ರಯೋಗಗಳು ಇವು.

ಈ ರಂಗ ನಿರಂತರ 150ರ ಪರಿಕಲ್ಷನೆ ಸಿಜಿಕೆಗೆ ಹುಟ್ಟಿದ್ದಾದರೂ ಏಕೆ ಮತ್ತು ಹೇಗೆ?

1972ರ ಬಯಲು ನಾಟಕೋತ್ಸವದಿಂದ ಪ್ರಾರಂಭವಾದ ಬೆಂಗಳೂರು ಹವ್ಯಾಸಿ ರಂಗಭೂಮಿಯ ಇತಿಹಾಸ, 75ರಿಂದ 85ರವರೆಗೆ ಪ್ರವರ್ಧಮಾನಕ್ಕೆ ಹೋಯಿತು. ಕರ್ನಾಟಕ, ಮುಖ್ಯವಾಗಿ ಬೆಂಗಳೂರು, ಮತ್ತು ಜೊತೆ ಜೊತೆಗೆ ಮೈಸೂರು, ಹೆಗ್ಗೋಡು, ಹುಬ್ಬಳ್ಳಿ-ಧಾರವಾಡ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳ ರಂಗ ಚಟುವಟಿಕೆಗಳಿಂದ ಕೋಲ್ಕತಾ, ಮುಂಬೈ, ಮಹಾರಾಷ್ಟ್ರ ರಾಜ್ಯಗಳನ್ನು ಪ್ರಯೋಗಶೀಲ ಪ್ರದರ್ಶನಗಳಿಂದ ಹಿಂದಿಕ್ಕಿತು. ಕಾರಂತರು, ಪ್ರೊ. ಬಿ.ಸಿ. ನಾಗೇಶ್, ಎಂ.ಎಸ್. ಸತ್ಯು, ಎ.ಎಸ್. ಮೂರ್ತಿ, ಪ್ರಸನ್ನ, ವೆಂಕಟರಾಮ್, ಬಿ.ಜಯಶ್ರೀ, ಸಿ.ಆರ್.ಸಿಂಹ, ವೆಂಕಟಸುಬ್ಬಯ್ಯ, ನಾಗಾಭರಣ, ಟಿ.ಎನ್.ನರಸಿಂಹನ್, ಪ್ರೇಮಾ ಕಾರಂತ, ಬಾದರದಿನ್ನಿ ಮುಂತಾದವರ ನಿರ್ದೇಶಿತ ನಾಟಕಗಳು ಅಖಿಲ ಭಾರತ ಮಟ್ಟದಲ್ಲಿ ಹೆಸರು ಮಾಡಿದವು. ರಂಗಭೂಮಿಯನ್ನೇ ವೃತ್ತಿಯಾಗಿ ಸ್ವೀಕರಿಸಿ ಬದುಕನ್ನು ಕಟ್ಟಿಕೊಳ್ಳುವ ಯುವಕರ ಸಂಖ್ಯೆ ಹೆಚ್ಚುತ್ತಾ ಬಂತು. ಆದರೆ ಏಕಾಏಕಿ 85ರ ನಂತರ ಚಟುವಟಿಕೆಗಳು ಕಡಿಮೆಯಾಗುತ್ತಾ ಬಂತು; ಕಲಾಕ್ಷೇತ್ರದ ಪ್ರದರ್ಶನಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಹೂಡಿದ ಬಂಡವಾಳವನ್ನು ಹಿಂಪಡೆಯಲು ರಂಗ ತಂಡಗಳು ವರ್ಷಾನುಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಯಿತು. ದುಬಾರಿ ವೆಚ್ಚದ ಪ್ರಯೋಗಗಳು, ತುಂಬಾ ಹೆಚ್ಚಿನ ನಟರ ತಂಡವನ್ನು ಹೊರ ಜಿಲ್ಲೆಯ, ರಾಜ್ಯದ ತಂಡಗಳು ಕರೆಯಲು ಹಿಂದೇಟು ಹಾಕುತ್ತಿದ್ದರು. ಸ್ವತ: ಸಿಜಿಕೆಗೇ ದುಬಾರಿ ನಿರ್ದೇಶಕ ಎನ್ನುವ ಹೆಸರೂ ಇತ್ತು. ಸಿಜಿಕೆಗೆ ಈ ಹಿಂದೆ ಸಮುದಾಯ ತಂಡದಿಂದ ಪರಿಚಯವಾಗಿದ್ದ ಕೋಲ್ಕತಾದ ಬಾದಲ್ ಸರ್ಕಾರ್ ಮತ್ತು ಮಣಿಪುರದ ಕನ್ನಯ್ಯಲಾಲ್ ಅವರ ಪ್ರಯೋಗಗಳು ತುಂಬಾ ಪರಿಣಾಮ ಬೀರಿತ್ತು. ಅತಿ ಸರಳ ರಂಗ ಸಜ್ಜಿಕೆ, ರಂಗ ಪರಿಕರಗಳು, ನಟನೆಯೇ ಮೂಲ ದ್ರವ್ಯವಾಗಿದ್ದ ಪ್ರಯೋಗಗಳು, ಪ್ರೇಕ್ಷಕರ ಮೇಲೆ ಬೀರುತ್ತಿದ್ದ ಗಾಢ ಪರಿಣಾಮ ಇವುಗಳು ಸಿಜಿಕೆಗೆ ನೇರವಾಗಿ ಪರಿಚಯವಾಗಿದ್ದವು. ಬಾದಲ್ ಅವರು ಕೋಲ್ಕತಾದ ಒಂದು ಸಾರ್ವಜನಿಕ ಪಾರ್ಕಿನಲ್ಲಿ ನಿರಂತರವಾಗಿ ಪ್ರತೀ ರವಿವಾರ ಸಂಜೆ ನಡೆಸುತ್ತಿದ್ದ ರಂಗ ಪ್ರಯೋಗಗಳು ಮತ್ತು ಅವರ ಸಿದ್ಧಾಂತದ ಮೂರನೇ ರಂಗಭೂಮಿಯ ರಂಗ ಚಟುವಟಿಕೆಗಳು ಸಿಜಿಕೆ ಬೆಲ್ಚಿ ನಾಟಕವನ್ನು ನಿರ್ದೇಶನ ಮಾಡಲು ಮೂಲ ಪ್ರೇರಕ ಶಕ್ತಿಯಾಗಿತ್ತು. ಬಾದಲ್ ಅವರು ಸಮುದಾಯಕ್ಕೆ ಎರಡು ವರ್ಷ ನಡೆಸಿದ ರಾಜ್ಯಮಟ್ಟದ ರಂಗಶಿಬಿರಗಳು ಮತ್ತು ಮಣಿಪುರದ ಕನ್ನಯ್ಯಲಾಲ್ ಅವರನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿನ ಪ್ರದರ್ಶನಗಳಿಗೆ ಕರೆದೊಯ್ದ ಸಂಘಟಕನಾಗಿ ಕೆಲಸ ಮಾಡಿದ ನೇರ ಅನುಭವ ಸಿಜಿಕೆಗೆ ದೊರಕಿತ್ತು.

ಇಂತಹ ಸಮಯದಲ್ಲಿ, ಇಂಟಿಮೇಟ್ ಥಿಯೇಟರ್ ಅಥವಾ ಎನ್‌ವಿರೋನ್‌ಮೆಂಟಲ್ ಥಿಯೇಟರ್ ಎನ್ನುವ ವಿನ್ಯಾಸದಲ್ಲಿ ರಂಗ ಪ್ರಯೋಗಗಳನ್ನು ಮಾಡಿದಲ್ಲಿ, ಪ್ರೇಕ್ಷಕರು ಈ ವಿನೂತನ ರಂಗಭೂಮಿ ಪ್ರಯೋಗಗಳನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ; ಅತಿ ಕಡಿಮೆ ವೆಚ್ಚದ, ಸರಳ ರಂಗ ಸಜ್ಜಿಕೆ ಮತ್ತು ಇತರ ವಿನ್ಯಾಸಗಳ ರಂಗ ನಾಟಕಗಳನ್ನು ಸಿದ್ಧಮಾಡಿ, ವೃತ್ತಿ ಕಂಪೆನಿಗಳ ರೀತಿಯಲ್ಲಿ ಒಂದೇ ಪ್ರಯೋಗವನ್ನು ಪ್ರತಿದಿನ ಮಾಡುತ್ತಾ ಹೋದಲ್ಲಿ, ರಂಗ ನಟ, ತಾಂತ್ರಿಕ ವರ್ಗ ಎಲ್ಲರಿಗೂ ಹೆಚ್ಚಿನ ಕಲಿಕೆ ಸಾಧ್ಯವಾಗುತ್ತದೆ. ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ಪ್ರಯೋಗ ನೀಡಲು ಸಹಕಾರಿಯಾಗುತ್ತದೆ. ನಟರಿಗೆ, ತಂತ್ರಜ್ಞರಿಗೆ ಹೊಸ ರೀತಿಯ ಬದ್ಧತೆ ಉಂಟಾಗಿ, ಪ್ರತಿಯೊಬ್ಬರೂ ಪ್ರೊಫೆಷನಲ್ಸ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಅನ್ನುವ ಉದ್ದೇಶದಿಂದ ರಂಗನಿರಂತರ 150 ಯೋಜನೆಗೆ ಮನಸ್ಸು ಮಾಡಿದೆ ಎಂದು ಸ್ವತಃ ಸಿಜಿಕೆ ರಂಗನಿರಂತರ 150ರ ಸ್ಮರಣ ಸಂಚಿಕೆಯಲ್ಲಿ ದಾಖಲಿಸಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ತಂಡಗಳ ಮತ್ತು ನಿರ್ದೇಶಕರ ಸಭೆಯನ್ನು ಸಿಜಿಕೆ ಕಲಾಕ್ಷೇತ್ರದ ವಿಶ್ರಾಂತಿ ಗೃಹದಲ್ಲಿ ನಡೆಸಿದಾಗ ಸಭೆಗೆ ಬಂದ ಎಲ್ಲರೂ ಯೋಜನೆಯನ್ನು ಅನುಮೋದಿಸಿದರು. ಯೋಜನೆಯಲ್ಲಿ ಹೊಸ ನಾಟಕಕಾರರ, ನಿರ್ದೇಶಕರ ನಾಟಕಗಳ ಕನಸನ್ನು ಕಾಣುತಿದ್ದ ಸಿಜಿಕೆ, ಯುವ ಪೀಳಿಗೆಯ ಹೊಸ ಚಿಂತನೆಗಳ ನಿರ್ದೇಶಕರು ಮತ್ತು ನಾಟಕಕಾರರನ್ನು ಸೃಷ್ಟಿಸಿ, ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸುವ ಅವಕಾಶ ಸಿಜಿಕೆಗೆ ಒದಗಿತು. ಹೀಗಾಗಿ, ಹವ್ಯಾಸಿ ರಂಗಭೂಮಿಗೆ ಸಾಕಷ್ಟು ಜನ ಹೊಸ ನಟರು, ನಿರ್ದೇಶಕರು, ನಾಟಕಕಾರರು ಹಾಗೂ ತಂತ್ರಜ್ಙರು ಬೆಳಕಿಗೆ ಬಂದರು. ಇಂದಿಗೂ ಅವರಲ್ಲಿ ಸಾಕಷ್ಟು ಜನ ತಮ್ಮ ಈ ರಂಗಚಟುವಟಿಕೆಯಲ್ಲಿ ಮುಂದುವರಿಯುತ್ತಾ ಉತ್ತಮ ಹೆಸರನ್ನು ಮಾಡಿದ್ದಾರೆ, ಬದುಕನ್ನು ಕಟ್ಟಿಕೊಂಡಿದ್ದಾರೆ.

ಯೋಜನೆಯ ಬಗ್ಗೆ ಸಿಜಿಕೆ ಆಡಿದ ಉತ್ಸಾಹದ ಮಾತುಗಳನ್ನು ನಂಬಿಕೊಂಡು, ವಿಶ್ವಣ್ಣ (ಮೈಕೋ ವಿಶ್ವನಾಥ), ಉಮಾಶಂಕರ ಸ್ವಾಮಿ, ಕತ್ಲು ಸತ್ಯ, ಗಾಂಧಿ ಗೋಪಿ, ಸೂರಿ ಚವ್ಹಾಣ್ ರಾಜೇಂದ್ರ ಮುಂತಾದವರು ಸಂಪೂರ್ಣವಾಗಿ, ಪೂರ್ಣಪ್ರಮಾಣದ ಕಾರ್ಯಕರ್ತರಾಗಿ ರಂಗನಿರಂತರ 150ರಲ್ಲಿ ತೊಡಗಿಸಿಕೊಂಡರು. ಉಮಾಶಂಕರ ಸ್ವಾಮಿ ಅವರನ್ನು ಹೊರತು ಪಡಿಸಿ, ಮಿಕ್ಕವರಿಗೆ ಅದುವರೆಗೂ ರಂಗಭೂಮಿ ಅಥವಾ ಚಿತ್ರರಂಗದ ಯಾವ ಅನುಭವವೂ ಇರಲಿಲ್ಲ ಮತ್ತು ಬೇರೆ ಉದ್ಯೋಗವೂ ಇರಲಿಲ್ಲ.

ವಿಶ್ವಣ್ಣ ಈ ಪೂರ್ಣಾವಧಿ ಕಾರ್ಯಕರ್ತರ ಎಲ್ಲ ಬೇಕು-ಬೇಡಗಳನ್ನು ರಂಗ ನಿರಂತರ ರೂವಾರಿ ಸಿಜಿಕೆಯ ಗಮನಕ್ಕೂ ಬಾರದ ರೀತಿಯಲ್ಲಿ ಮಾತೃಹೃದಯಿಯಾಗಿ ನೋಡಿಕೊಂಡ ಅಪರೂಪದ ಸಂಘಟಕ. ಇವರೊಟ್ಟಿಗೆ ರಂಗ ಸಂಪದದ ಚಂದ್ರಕಾಂತ, ರಾಮಚಂದ್ರ ಮತ್ತು ಅವನ ಶ್ರೀಮತಿ ಕಮಲಾ; ಬೆನಕದ ಕಲ್ಪನಾ, ಬೆನಕ ಕಿಟ್ಟಿ ಮುಂತಾದವರು ರಂಗ ನಿರಂತರದ ಚಟುವಟಿಕೆಗಳ ಜೊತೆಗೆ ನಿಂತರು. ಅಂದಿನ ಬಹಳ ಖ್ಯಾತ ಮತ್ತು ಮನೋಜ್ಞ ನಟ ಸತ್ಯಸಂಧನ ಅಕಾಲಿಕ ಅಗಲಿಕೆಗೆ ಇಡೀ ರಂಗನಿರಂತರ 150 ಪ್ರದರ್ಶನಗಳು ಸಮರ್ಪಣೆಯಾಯಿತು. ರಂಗನಿರಂತರ 150 ದಿನಗಳ ಎಲ್ಲ ಪ್ರಯೋಗಗಳಲ್ಲ್ಲಿ, ಅವಶ್ಯಕತೆ ಇದ್ದ ನಾಟಕಗಳಿಗೆ ರಂಗ ಸಜ್ಜಿಕೆ ಮತ್ತು ರಂಗ ಪರಿಕರಗಳನ್ನು ಸಂಪೂರ್ಣವಾಗಿ ನಿಭಾಯಿಸಿದ್ದು ಪದ್ದಣ್ಣ, ಶಶಿ ಅಡಪ ಮತ್ತು ಅಪ್ಪಯ್ಯ; ಎಲ್ಲ ನಾಟಕಗಳಿಗೆ ಬೆಳಕಿನ ವಿನ್ಯಾನ, ಮೊದಲ ಬಾರಿಗೆ ಬೆಳಕನ್ನು ಅಪ್ಪಿಕೊಂಡ ಅ.ನ.ರಮೇಶ; ಧ್ವನಿ ವ್ಯವಸ್ಥೆ ಕಾಪಾಡಿಕೊಂಡವರು ಟ್ಯೂಬ್ ಕೃಷ್ಣ; ಅವಶ್ಯಕತೆಯ ನಾಟಕಗಳಿಗೆ ವಸ್ತ್ರಾಲಂಕಾರವನ್ನು ಪುಕ್ಕಟ್ಟೆಯಾಗಿ ಮಾಡಿದವರು ರಾಜೇಶ್ವರಿ, ವಸ್ತ್ರಾಲಂಕಾರದ ಶಿವಣ್ಣ; ಎಲ್ಲ ನಾಟಕಗಳ ಪ್ರಸಾಧನವನ್ನು ಯಾವ ಸಂಭಾವನೆಯ ನಿರೀಕ್ಷೆಯಿಲ್ಲದೆ ಮಾಡಿದವರು ಸೀನಿಯರ್ ರಾಮಕೃಷ್ಣ. ಕಲಾಕ್ಷೇತ್ರದ ತಾಂತ್ರಿಕ ಸಿಬ್ಬಂದಿ ವರ್ಗ ಕೂಡಾ ರಂಗ ನಿರಂತರದ ನೇಪಥ್ಯದಲ್ಲಿ ಅವಶ್ಯಕತೆ ಇದ್ದಾಗಲೆಲ್ಲ ಕಾರ್ಯ ನಿರ್ವಹಿಸಿತು. ಪ್ರತೀ ನಾಟಕಕ್ಕೂ ಪ್ರವೇಶ ಧನ ಕೇವಲ 05 ಮತ್ತು 03 ರೂ.ಗಳು ಇದ್ದವು. ರಂಗ ಮಂದಿರ ತುಂಬಿದರೂ ಬರುತ್ತಿದ್ದ ಅಂದಾಜು ಆದಾಯ ಪ್ರತೀ ಪ್ರದರ್ಶನಕ್ಕೆ ಕೇವಲ 300 ಅಥವಾ 400 ರೂ. ಮಾತ್ರ. ಆದರೆ, ಪ್ರತೀ ದಿನ ತುಂಬಿದ ಗೃಹಕ್ಕೆ ನಾಟಕಗಳು ಪ್ರದರ್ಶನವಾಗುತ್ತಿರಲಿಲ್ಲ. ಪ್ರತೀ ಹೊಸ ನಾಟಕ ಪ್ರಯೋಗದ ಮೊದಲನೇ ಮತ್ತು ಎರಡನೇ ದಿನಕ್ಕೆ 25-30 ಜನ ಬರುತ್ತಿದ್ದರು. ಮುಂದಿನ 5 ಪ್ರಯೋಗಗಳನ್ನು ಅತಿ ಕಡಿಮೆ ಸಂಖ್ಯೆಯ ಪ್ರೇಕ್ಷಕರಿಗೆ, ಬಂದಷ್ಟು ಜನಗಳಿಗೆ ಪ್ರದರ್ಶನ ನೀಡಬೇಕಾಗುತ್ತಿತ್ತು. ಒಂದೆರಡು ನಾಟಕಗಳನ್ನು ಕೇವಲ ಇಬ್ಬರು ಪ್ರೇಕ್ಷಕರಿಗೆ ತೋರಿಸಿದ ಉದಾಹರಣೆಯೂ ನಮ್ಮ ಮುಂದೆ ಇದೆ.

ರಂಗ ಮಂಚದ ಮೇಲೆ 4 ಜನ ಕಲಾವಿದರು; ಪ್ರೇಕ್ಷಕರಾಗಿ ಕೇವಲ ಇಬ್ಬರು. ಅಂದು ಸಿಜಿಕೆ ತಾನು ತಪ್ಪುಮಾಡಿದೆ ಎಂದು ಪರಿತಪಿಸಿಕೊಂಡು ಅತ್ತಿದ್ದೂ ಉಂಟು. ಸಿಜಿಕೆಯ ಈ ವಿನೂತನ ಕಲ್ಪನೆಯ ರಂಗ ನಿರಂತರ ಯೋಜನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ನಾಟಕ ಅಕಾಡಮಿ ಆರ್ಥಿಕವಾಗಿ ಧನ ಸಹಾಯವನ್ನು ನೀಡಿತ್ತು. ಈ ಧನ ಸಹಾಯ ರಂಗನಿರಂತರ 150 ಯೋಜನೆಗೆ ಪೂರ್ಣ ಪ್ರಮಾಣದಲ್ಲಿ ಸಾಕಾಗಲಿಲ್ಲ. ಪೂರ್ಣಾವಧಿ ಕಾರ್ಯಕರ್ತರಿಗೆ ಕನಿಷ್ಠ ಪ್ರತಿಯೊಬ್ಬರಿಗೂ 500 ರೂ.ಗಳನ್ನಾದರೂ ಪ್ರತೀ ತಿಂಗಳೂ ಕೊಡದೆ, ಹೇಗೆ ಅವರಿಂದ ಕೆಲಸವನ್ನು ನಿರೀಕ್ಷಿಸಲು ಸಾಧ್ಯ? ಪ್ರತೀ ಪ್ರದರ್ಶನಕ್ಕೂ ಒದಗಿಬರುವ ಕನಿಷ್ಠ ಖರ್ಚನ್ನೂ ರಂಗ ನಿರಂತರ ಸಂಸ್ಥೆ ನಿಭಾಯಿಸದಿದ್ದರೆ ಹೇಗೆ? ರಂಗ ನಿರಂತರದ ವೇದಿಕೆಯನ್ನೇ ಹಾಸಿ, ಹೊದ್ದು ಮಲಗುತ್ತಿದ್ದ ಪೂರ್ಣಾವಧಿ ಕಾರ್ಯಕರ್ತರಿಗೆ ಊಟ-ತಿಂಡಿ, ಓಡಾಟದ ಖರ್ಚು ನೀಡದಿದ್ದರೆ ಹೇಗೆ? ಈ ಆರ್ಥಿಕ ಸಮಸ್ಯೆಗಳ ಜೊತೆಗೆ ಹೊಸ ಪ್ರಯೋಗವನ್ನು ಸಿದ್ಧಪಡಿಸಲು ಒದಗುತ್ತಿದ್ದ ಖರ್ಚುಗಳು... ಆರ್ಥಿಕವಾಗಿ ರಂಗ ನಿರಂತರ ಸಮರ್ಥವಾಗಿರಲಿಲ್ಲ; ಸಿಜಿಕೆ ವೈಯಕ್ತಿಕವಾಗಿ ಬಳಲಿದ, ಒಂದು ಸಮಯದಲ್ಲಿ ಹತಾಶನಾಗಿದ್ದೂ ಸತ್ಯ... ರಾಜ್ಯದ ಎಲ್ಲ ಪ್ರಮುಖ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ‘ರಂಗ ನಿರಂತರ 150’ ಯೋಜನೆಯನ್ನು ಮೆಚ್ಚಿ, ಹೊಗಳಿ ವಿವರವಾದ ಮಾಹಿತಿ ಪ್ರಕಟವಾದರೂ, ಅದು ಪ್ರೇಕ್ಷಕರನ್ನು ಕರೆತರಲಿಲ್ಲ. ಆರ್ಥಿಕವಾಗಿ ಸಮಾಧಾನದ ನಿಟ್ಟುಸಿರು ಬಿಡಲು ಸಾಧ್ಯವಾಗಲಿಲ್ಲ. ಸಿಜಿಕೆ ತನ್ನ ಎಲ್ಲ ಸಂಬಂಧಗಳನ್ನು ದುಡಿಸಿಕೊಳ್ಳಬೇಕಾಯಿತು- ತನ್ನ ಖಾಸಗಿ ಸ್ನೇಹಿತರ ಸಂಬಂಧಗಳನ್ನು ಬಳಸಿಕೊಂಡು ದೇಣಿಗೆಯನ್ನೂ ಪಡೆದು 150 ದಿನಗಳನ್ನು ಪೂರೈಸಬೇಕಾಯಿತು.

ರಂಗ ನಿರಂತರ ಸಿಜಿಕೆಗೆ ವ್ಯಸನವಾಯಿತು; ನಾಟಕಗಳ ಪ್ರಯೋಗ, ಹೊಸ ನಾಟಕಗಳ ಸಿದ್ಧತೆ, ಸಂಘಟನೆಯ ಸಭೆಗಳು, ನಟ-ನಿರ್ದೇಶಕರ ಜೊತೆಗಿನ ಮಾತುಕತೆಗಳು ಇವುಗಳೇ ಸಿಜಿಕೆಗೆ ಆವರಿಸಿಕೊಂಡಿತು; ಮನೆಗೆ ಹೋಗಲು ಮನಸ್ಸು ಮತ್ತು ಸಮಯ ಸಿಗುತ್ತಿರಲಿಲ್ಲ; ತನ್ನ ಪ್ರೊಫೆಸರ್‌ಗಿರಿಯ ತಿಂಗಳ ವೇತನವನ್ನೆಲ್ಲಾ ಈ ರಂಗನಿರಂತರ ಪ್ರಯೋಗಗಳಿಗೆ ವಿನಿಯೋಗಿಸಿದರು. ಕುಟುಂಬದ ಆರ್ಥಿಕ ವ್ಯವಸ್ಥೆ ಹದಗೆಟ್ಟಿತು. ಸಿಜಿಕೆ ಅವರ ಶ್ರೀಮತಿ ಜಯಲಕ್ಷ್ಮೀ ಅವರಿಂದ, ಸಿಜಿಕೆಯವರ ಅಕ್ಕ-ಭಾವಂದಿರ ಸಹಕಾರದಿಂದ ಹೇಗೋ ಕುಟುಂಬ ನಡೆಯುತ್ತಿತ್ತು. ಸಿಜಿಕೆಯ ಕುಟುಂಬ, ಶ್ರೀಮತಿ ಜಯಲಕ್ಷ್ಮೀ ಅವರ ಸಹಕಾರ ಮತ್ತು ಸಂಯಮಕ್ಕೆ, ನಾವೆಲ್ಲರೂ ಚಿರಋಣಿಯಾಗಿರಬೇಕು. ಆದರೆ, ಸಿಜಿಕೆ ಆಶಾವಾದಿ, ಅದಕ್ಕೂ ಹೆಚ್ಚಾಗಿ ಛಲವಾದಿ. ನಿರಂತರವಾಗಿ ದೇಣಿಗೆಯ ಜೋಳಿಗೆ ಹಿಡಿದು ಹೊರಟರು. ಅವರ ಅವಿರತ ಪ್ರಯತ್ನದಿಂದ ಎಲ್ಲೆಲ್ಲಿಂದಲೋ, ಹೇಗೋ, ಅನಿರೀಕ್ಷಿತವಾಗಿ ದೇಣಿಗೆಗಳು ಬಂತು. ಏನೇ ಕಷ್ಟ ಬಂದರೂ ರಂಗನಿರಂತರವನ್ನು ಅರ್ಧಕ್ಕೆ ನಿಲ್ಲಿಸದೆ ಸಂಪೂರ್ಣವಾಗಿ ಮುಗಿಸಿದರು. ಯಶಸ್ವಿ 150 ದಿನಗಳ ಪ್ರಯೋಗಗಳನ್ನು ಕಂಡು, ಈ ಪ್ರಾಯೋಗಿಕ ರಂಗ ಯೋಜನೆ ಸಂಪನ್ನವಾಯಿತು. ಈಗ ಹಿಂದಿರುಗಿ ನೋಡಿದಾಗ, ‘ರಂಗ ನಿರಂತರ 150’ ಎನ್ನುವ ಪರಿಕಲ್ಪನೆಯ ಯೋಜನೆ ಬೆಂಗಳೂರು ಹವ್ಯಾಸಿ ರಂಗಭೂಮಿಗೆ ಕೇವಲ ಮತ್ತೊಂದು ಪ್ರಯೋಗವಾಗಿ ನಡೆಯಿತು ಅಷ್ಟೇ ಎನ್ನಬಹುದು.

ಬಯಲು ನಾಟಕೋತ್ಸವದಿಂದ ಪ್ರಾರಂಭವಾದ ಕನ್ನಡ ರಂಗಭೂಮಿಯ ಹೊಸ ಪ್ರಯೋಗಶೀಲತೆ, ಕೈಲಾಸಂ ಅವರ ಹಾಸ್ಯ ಮತ್ತು ವ್ಯಂಗ್ಯ ನಾಟಕಗಳಿಂದ, ಶ್ರೀರಂಗರ ಗಂಭೀರ ನಾಟಕಗಳಿಗೆ, ಮಧುರವಾದ ರಂಗ ಸಂಗೀತ ಮತ್ತು ತಾಳಕ್ಕೆ ಹಾಕುವ ಗೆಜ್ಜೆಯ ಕುಣಿತದ ನಾಟಕಗಳಿಂದ ಪ್ರಗತಿಪರ, ಸಾಮಾಜಿಕ ಕಳಕಳಿಯ ನಾಟಕಗಳ ಪ್ರಯೋಗಗಳಿಗೆ, ಬೀದಿ ನಾಟಕಗಳ ಪ್ರಯೋಗ ಮತ್ತು ಚಳವಳಿಗಳಿಗೆ, ಖ್ಯಾತ ಕಥೆಗಾರರ ಕಥೆಗಳನ್ನು ರಂಗ ಪ್ರಯೋಗವನ್ನಾಗಿ ಮಾಡಿದ ಕನ್ನಡದ ಹವ್ಯಾಸಿ ರಂಗಭೂಮಿಯ ಚರಿತ್ರೆಗೆ ರಂಗ ನಿರಂತರ 150 ಎನ್ನುವ ಒಂದು ಹೊಸ ಪ್ರಯೋಗಶೀಲ ಅಧ್ಯಾಯವು ರಾಷ್ಟ್ರಮಟ್ಟದಲ್ಲಿ ನಮ್ಮ ರಾಜ್ಯದಲ್ಲಿ ಆಯಿತು ಎನ್ನುವ ಸಮಾಧಾನ ಮತ್ತು ಹೆಮ್ಮೆ ಅಂದಿನ ರಂಗ ಪ್ರವರ್ತಕರಿಗೆ ದಕ್ಕಿದ್ದು ಇತಿಹಾಸ. ಒಂದಷ್ಟು ಜನ ಹೊಸ ಆಲೋಚನೆಯ ನಾಟಕಕಾರರು, ವಿನೂತನ ಪರಿಕಲ್ಷನೆಯ ವಿನ್ಯಾಸದ ನಾಟಕವನ್ನು ಕಟ್ಟಬಲ್ಲ ನಿರ್ದೇಶಕರು ಕನ್ನಡ ರಂಗಭೂಮಿಗೆ ದಕ್ಕಿದ್ದು ಈ ಯೋಜನೆಯಿಂದ ಮತ್ತು ವಿಶೇಷವಾಗಿ ಯುವ ಪೀಳಿಗೆಯನ್ನು ಬೆಳೆಸುವ ಸಿಜಿಕೆಯ ನಿರಂತರ ರಂಗಬದ್ಧತೆಯಿಂದ ಎಂದು ನಾವು ಇಂದಿಗೂ ಸಮಾಧಾನ ಮತ್ತು ತೃಪ್ತಿ ಪಟ್ಟುಕೊಳ್ಳಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)