ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ನಿಧನ
ದಲ್ಬೀರ್ ಕೌರ್
ಹೊಸದಿಲ್ಲಿ, ಜೂ. 26: ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದ ಕಾರಾಗೃಹ ಸೇರಿ ಹತ್ಯೆಗೀಡಾದ ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್ ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪಂಜಾಬ್ ನಿವಾಸಿಯಾಗಿದ್ದ ಸರಬ್ಜಿತ್ ಸಿಂಗ್ ಅವರನ್ನು ಪಾಕಿಸ್ತಾನದಿಂದ ಭಾರತಕ್ಕೆ ಕರೆ ತರಲು ದಲ್ಬೀರ್ ಕೌರ್ ಅಭಿಯಾನ ನಡೆಸಿದ್ದರು.
ಭಯೋತ್ಪಾದನೆ ಹಾಗೂ ಬೇಹುಗಾರಿಕೆ ಪ್ರಕರಣದಲ್ಲಿ ಸರಬ್ಜಿತ್ ಸಿಂಗ್ ದೋಷಿ ಎಂದು ಪಾಕಿಸ್ತಾನ ನ್ಯಾಯಾಲಯ ಪರಿಗಣಿಸಿತ್ತು ಹಾಗೂ ಅವರಿಗೆ 1991ರಲ್ಲಿ ಮರಣ ದಂಡನೆ ವಿಧಿಸಿತ್ತು. ಆದರೆ, 2008ರಲ್ಲಿ ಸರಕಾರ ಅವರ ಮರಣದಂಡನೆಗೆ ಅನಿರ್ದಿಷ್ಟಾವಧಿ ಕಾಲ ತಡೆ ನೀಡಿತ್ತು.
ಕಾರಾಗೃಹದಲ್ಲಿ 2013ರಲ್ಲಿ ಸರಬ್ಜಿತ್ ಅವರನ್ನು ಸಹ ಕೈದಿಗಳು ಹತ್ಯೆಗೈದಿದ್ದರು.
Next Story