varthabharthi


ರಾಷ್ಟ್ರೀಯ

ಫಾಸ್ಟ್ಯಾಗ್ ಹಣವನ್ನು ಕದಿಯಲು ಸಾಧ್ಯವೇ?: ವೈರಲ್ ವೀಡಿಯೋ ಕುರಿತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಹೇಳಿದ್ದೇನು?

ವಾರ್ತಾ ಭಾರತಿ : 27 Jun, 2022

Photo: Viral Video screengrab

ಹೊಸದಿಲ್ಲಿ: ಹೆದ್ದಾರಿಗಳಲ್ಲಿ ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದಿರಬೇಕು ಹಾಗೂ ಕಾರುಗಳ ಗಾಜು ಒರೆಸುವ ನೆಪದಲ್ಲಿ ಫ್ಯಾಸ್ಟ್ಯಾಗ್ ಅನ್ನೂ ತೆಗೆದು ವಾಹನ ಮಾಲೀಕರಿಗೆ ವಂಚಿಸಬಹುದು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋ ʼಆಧಾರರಹಿತ ಹಾಗೂ ಸುಳ್ಳುʼ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಪ್ ಇಂಡಿಯಾ ಇಂದು ಸ್ಪಷ್ಟೀಕರಣ ನೀಡಿ ಹೇಳಿಕೆ ಬಿಡುಗಡೆಗೊಳಿಸಿದೆ.

ಬಹಿರಂಗ ಇಂಟರ್ನೆಟ್ ಸಂಪರ್ಕತೆ ಬಳಸಿ ಯಾವುದೇ ಹಣಕಾಸು ವ್ಯವಹಾರಗಳನ್ನು ಮಾಡಲು ಸಾಧ್ಯವಿಲ್ಲ. ಈ ಪ್ರಕ್ರಿಯೆ ಎಂಡ್-ಟು-ಎಂಡ್ ಸುರಕ್ಷಿತವಾಗಿರಲು ಭದ್ರತಾ ಪ್ರೊಟೋಕಾಲ್‍ಗಳ ಹಲವು ಪದರಗಳಿವೆ ಎಂದು ಅದು ಹೇಳಿದೆ.

ಫ್ಯಾಸ್ಟ್ಯಾಗ್‍ನಿಂದ ಹಣವನ್ನು ಯಾರಿಗೂ ಕದಿಯಲು ಸಾಧ್ಯವಿಲ್ಲ ಎಂಬುದಕ್ಕೆ ಇಲ್ಲಿವೆ ಕಾರಣಗಳು.

*ಫಾಸ್ಟ್ಯಾಗ್ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ತಂತ್ರಜ್ಞಾನವನ್ನು ಬಳಸಿ ಟೋಲ್ ಪ್ಲಾಝಾಗಳಲ್ಲಿರುವ ಸ್ಕ್ಯಾನರ್‍ನೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ವಾಹನ ಟೋಲ್ ಪ್ಲಾಝಾ ದಾಟಿದ ಕೂಡಲೇ ಟೋಲ್ ಹಣ ಕಡಿತದ ಸಂದೇಶ ಬರುತ್ತದೆ.

*ಫಾಸ್ಟ್ಯಾಗ್ ಅನ್ನು ಪರ್ಸನ್-ಟು-ಮರ್ಚಂಟ್ (ಪಿ2ಎಂ) ವ್ಯವಹಾರಗಳಿಗೆ ಮಾತ್ರ ಬಳಸಬಹುದಾಗಿದೆಯಲ್ಲದೆ ಬೇರೆ ವ್ಯಕ್ತಿಗಳಿಗೆ ಈ ಹಣ ಪಡೆಯಲು ಸಾಧ್ಯವಿಲ್ಲ.

*ಟೋಲ್ ಪ್ಲಾಝಾಗಳಲ್ಲಿ ಅಧಿಕೃತ ಸಿಸ್ಟಂ ಇಂಟಗ್ರೇಟರ್‍ಗಳಿಗೆ ಮಾತ್ರ ಹಣ ಪಡೆಯಲು ಅಧಿಕಾರವಿದೆ. ಇಲ್ಲಿ ಅನುಮತಿ ಹೊಂದಿದ ಐಪಿಎಲ್ ವಿಳಾಸಗಳು ಮತ್ತು ಯುಆರ್ಎಲ್‍ಗಳಿಗೆ ಮಾತ್ರ ಪ್ರವೇಶವಿದೆ.

*ಟೋಲ್ ಪ್ಲಾಝಾಗಳಲ್ಲಿರುವ ಹಾರ್ಡ್‍ವೇರ್,  ಹಾರ್ಡ್‍ವೇರ್ ಸೆಕ್ಯುರಿಟಿ ಮೊಡ್ಯೂಲ್ ಮೂಲಕ ಭದ್ರವಾಗಿದೆ ಹಾಗೂ ಮೂರನೇ ವ್ಯಕ್ತಿಗೆ ಇದನ್ನು ಪ್ರವೇಶಿಸಲು ಸಾಧ್ಯವಿಲ್ಲ.

*ಎನ್‍ಸಿಪಿಐ ಟೋಲ್ ಸಂಗ್ರಹಿಸಲು ಅಧಿಕಾರ ನೀಡುವ ಟೋಲ್ ಪ್ಲಾಝಾಗಳಿಗೆ ವಿಶಿಷ್ಟ ಪ್ಲಾಝಾ ಕೋಡ್ ನೀಡುತ್ತದೆ ಹಾಗೂ ಈ ಹಣವನ್ನು ನಿರ್ದಿಷ್ಟ ಹಾಗೂ ಅಕ್ವೈರ್ ಐಡಿ ಹೊಂದಿದ ಬ್ಯಾಂಕ್‍ಗಳಿಗೆ  ಮಾತ್ರ ಸ್ವೀಕರಿಸಬಹುದಾಗಿದೆ. ಹೀಗಿರುವಾಗ ಯಾವುದೇ ಮೂರನೇ ವ್ಯಕ್ತಿ ಅಥವಾ ಸಂಸ್ಥೆಗೆ ಟೋಲ್ ಹಣ ಅಥವಾ ವಾಹನ ಸವಾರರ ಫಾಸ್ಟ್ಯಾಗ್ ಖಾತೆಯಲ್ಲಿರುವ ಹಣವನ್ನು ಲಪಟಾಯಿಸಲು ಸಾಧ್ಯವಿಲ್ಲ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಸ್ಪಷ್ಟನೆ ನೀಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)