varthabharthi


ಕರ್ನಾಟಕ

ಬಿಜೆಪಿಗೆ ಸವಾಲಾಗಿರುವ ವಿರೋಧ ಪಕ್ಷಗಳ ನಾಯಕರ ಮೇಲೆ ಈಡಿ, ಸಿಬಿಐ ದಾಳಿ: ಡಿ.ಕೆ.ಶಿವಕುಮಾರ್

ವಾರ್ತಾ ಭಾರತಿ : 27 Jun, 2022

ಕೊಪ್ಪಳ, ಜೂ.27: ಬಿಜೆಪಿ ಪಕ್ಷ ಹಾಗೂ ಸರಕಾರಕ್ಕೆ ಸವಾಲೆಸೆಯುವ ವಿರೋಧ ಪಕ್ಷಗಳ ನಾಯಕರ ವಿರುದ್ಧ ಈ.ಡಿ, ಸಿಬಿಐ ಸೇರಿದಂತೆ ಇತರೆ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ದುರ್ಬಳಕೆ ಮಾಡಿಕೊಂಡು ದಿನನಿತ್ಯ ಕೊಡಬಾರದ ಕಿರುಕುಳ ನೀಡುತ್ತಿದ್ದಾರೆ. ನಮಗೆ ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ಕೊಪ್ಪಳ ಜಿಲ್ಲೆಯ ಗಿಣಗೇರದ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬಿಜೆಪಿ ಸರಕಾರದ ವಿರುದ್ಧ ಧ್ವನಿ ಎತ್ತುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಿ.ಚಿದಂಬರಂ ಸೇರಿದಂತೆ ದೇಶದಾದ್ಯಂತ ವಿರೋಧ ಪಕ್ಷಗಳ ಪ್ರಬಲ ನಾಯಕರ ಮೇಲೆ ಈ ದಾಳಿ ನಡೆಯುತ್ತಿದೆ ಎಂದರು.

ಸಾಮಾನ್ಯವಾಗಿ ಬಂಧನವಾದ 60 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗುವುದು. ನನಗೆ 60 ದಿನಗಳ ಮುಂಚಿತವಾಗಿ ಜಾಮೀನು ಸಿಕ್ಕಿತು. 6 ತಿಂಗಳಲ್ಲಿ ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಸಬಹುದಾಗಿತ್ತು. ಆದರೆ ಈಗ ಆರೋಪಪಟ್ಟಿ ಸಲ್ಲಿಸಿ ಜುಲೈ 1ರಂದು ನನ್ನನ್ನು ಕರೆದಿದ್ದಾರೆ. ಹೈಕೋರ್ಟ್‍ನಲ್ಲಿ ಜಾಮೀನು ಪಡೆದಿದ್ದೇನೆ. ಈ.ಡಿ.ಸಮನ್ಸ್‍ಗೆ ಗೌರವ ಕೊಟ್ಟು ಹೋಗುತ್ತೇನೆ. ರಾಜಕೀಯ ದುರುದ್ದೇಶದಿಂದ ದಾಖಲಿಸಿರುವ ಪ್ರಕರಣಗಳನ್ನು ಎದುರಿಸಬೇಕು, ಎದುರಿಸೋಣ. 3 ವರ್ಷದ ಹಿಂದೆ ಸಲ್ಲಿಸಬಹುದಾಗಿದ್ದ ಆರೋಪಪಟ್ಟಿಯನ್ನು ಈಗ ದಾಖಲಿಸಿರುವುದೇಕೆ? ಎಂದು ಅವರು ಪ್ರಶ್ನಿಸಿದರು.

ಚುನಾವಣೆ ತಯಾರಿಯಲ್ಲಿ ತೊಡಗಿಸಿಕೊಳ್ಳಲು ಸಮಯ ನೀಡಬಾರದು ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ನನ್ನ ಕುಟುಂಬದ ಸದಸ್ಯರು, ಸ್ನೇಹಿತರಿಗೆ ದಿನನಿತ್ಯ ಈ.ಡಿ, ಸಿಬಿಐ ನೋಟಿಸ್ ಬರುತ್ತಿದೆ. ದೇಶದಲ್ಲಿ ಯಾರ ಮೇಲೂ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಇಲ್ಲ ಎಂದು ಈ ಸರಕಾರ ಈ ವಿಚಾರಣೆಯನ್ನು ಸಿಬಿಐಗೆ ವಹಿಸಿದೆ. ಬಿಜೆಪಿ ನಾಯಕರ ವಿಚಾರ ನನಗೆ ಗೊತ್ತಿದೆ. ಆ ಬಗ್ಗೆ ನಾನು ನಂತರ ಮಾತನಾಡುತ್ತೇನೆ. ಕೇಂದ್ರ ಸರಕಾರ ಎಲ್ಲ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಶಿವಕುಮಾರ್ ಆರೋಪಿಸಿದರು.

ಮಹಾರಾಷ್ಟ್ರದ ರಾಜಕೀಯ ವಿದ್ಯಮಾನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದೆಲ್ಲವೂ ಬಿಜೆಪಿಯವರ ನಾಟಕ.ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ರಚಿಸಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಲಿಲ್ಲವೇ? ಯಾವ ಸೈದ್ಧಾಂತಿಕ ಗೊಂದಲ? ಇಷ್ಟು ದಿನ ಜತೆಯಾಗಿ ಅಧಿಕಾರ ಮಾಡಿದ್ದೇಕೆ? ಕಾಂಗ್ರೆಸ್ ಹಾಗೂ ಎನ್‍ಸಿಪಿ ಜತೆ ಸರಕಾರ ಮಾಡುತ್ತೇವೆ ಎಂದು ಹೇಳಿದ್ದವರು ಇದೇ ಬಂಡಾಯ ಶಾಸಕರು. ನಮ್ಮ ರಾಜ್ಯದಲ್ಲಿ ಮಾಡಿದ ರೀತಿಯಲ್ಲೇ ಅಲ್ಲಿಯೂ ಆಪರೇಷನ್ ಕಮಲ ಮಾಡಿದ್ದಾರೆ. ಕಾಲ ಬಂದಾಗ ಜನ ಎಲ್ಲವನ್ನು ತೀರ್ಮಾನ ಮಾಡುತ್ತಾರೆ ಎಂದು ಉತ್ತರಿಸಿದರು. 

ಆರೆಸೆಸ್ಸ್ ನಾಯಕರಿಗೆ ಬಿಜೆಪಿ ಶಾಸಕರು ಹಾಗೂ ಸಚಿವರಿಂದ ಹಣ ರವಾನೆಯಾಗುತ್ತಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ಯಾರಿಂದ ಯಾರಿಗೆ ಕಮಿಷನ್ ಹೋಗುತ್ತಿದೆಯೋ ಗೊತ್ತಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಈ ಸರಕಾರ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ ಎಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪಿಎಸ್‍ಐ ನೇಮಕ ಅಕ್ರಮದಿಂದ ಹಿಡಿದು ಎಲ್ಲ ಇಲಾಖೆ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಇದರಲ್ಲಿ ಸಚಿವರಿಗೆ ಹಾಗೂ ಸಚಿವರ ಕಚೇರಿಗೆ ಹಣ ನೀಡಿರುವುದಾಗಿ ಅಭ್ಯರ್ಥಿಗಳೇ ತಿಳಿಸಿದ್ದಾರೆ ಎಂದರು.

ಸಿಐಡಿ ಅಧಿಕಾರಿಗಳು ಸಣ್ಣಪುಟ್ಟ ಅಧಿಕಾರಿಗಳನ್ನು ಹಿಡಿದಿದ್ದಾರೆಯೇ ಹೊರತು, ಇದರಲ್ಲಿ ಭಾಗಿಯಾಗಿರುವ ದೊಡ್ಡ ಮಂತ್ರಿಗಳು, ಅಧಿಕಾರಿಗಳನ್ನು ಹಿಡಿದಿಲ್ಲ. ಖಾನಾವಳಿಗಳಲ್ಲಿ ರೊಟ್ಟಿ, ಊಟ, ಬೊಂಡಕ್ಕೆ ದರ ನಿಗದಿ ಮಾಡಿರುವಂತೆ ಈ ಸರಕಾರ ಒಂದೊಂದು ಹುದ್ದೆಗೆ ಒಂದೊಂದು ದರ ನಿಗದಿ ಮಾಡಿದೆ. ವರ್ಗಾವಣೆ, ನೇಮಕಾತಿ, ವಿವಿಧ ಹುದ್ದೆಗೆ ಒಂದೊಂದು ದರ ನಿಗದಿಯಾಗಿದೆ. ಯುವಕರ ಪರಿಸ್ಥಿತಿ ನೋಡಿದರೆ ಹೊಟ್ಟೆ ಉರಿಯುತ್ತಿದೆ ಎಂದು ಶಿವಕುಮಾರ್ ಹೇಳಿದರು.

ಮುನಿಸು ನಮಗಿಲ್ಲ: ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಣ ಮುನಿಸು ಪಕ್ಷದ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ ಎಂಬ ಪ್ರಶ್ನೆಗೆ, ‘ನಿಮಗೆ ಮುನಿಸಿರಬಹುದು, ನಮಗಿಲ್ಲ. ನನಗೆ ನನ್ನದೇ ಆದ ಕಾರ್ಯಕ್ರಮಗಳ ವೇಳಾಪಟ್ಟಿ ಇದೆ. ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲೂ ನಾನು ಭಾಗಿಯಾಗಬೇಕು. ನಾನು ಬೇಗ ತೆರಳಬೇಕಿದ್ದು, ಅದಕ್ಕಾಗಿಯೇ ಬೇಗ ಬಂದಿದ್ದೇನೆ. ಅದೇ ರೀತಿ ಸಿದ್ದರಾಮಯಯ್ಯ ಅವರ ಕಾರ್ಯಕ್ರಮಗಳು ಬೇರೆ ಇರುತ್ತವೆ. ನಾನು ನಿನ್ನೆ ತುಮಕೂರಿನಲ್ಲಿದ್ದೆ, ಅಲ್ಲಿಂದ ಬರುತ್ತಿದ್ದು, ಅವರು ಮಂಡ್ಯ, ಮೈಸೂರಿನಲ್ಲಿದ್ದರು, ಅಲ್ಲಿಂದ ಬರುತ್ತಿದ್ದಾರೆ ಎಂದು ಅವರು ಹೇಳಿದರು.

ನಾವು ಎಲ್ಲ ಕಡೆ ಓಡಾಟ ಮಾಡಬೇಕಿದೆ. ಎಲ್ಲಿ ಒಟ್ಟಾಗಿ ಕೆಲಸ ಮಾಡಬೇಕೋ ಅಲ್ಲಿ ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಾವು ದಿನಬೆಳಗಾದರೆ ಒಟ್ಟಿಗೆ ಪಕ್ಷ ಕಟ್ಟುತ್ತಾ ತಿಂಡಿ ಊಟ ಮಾಡುತ್ತಿದ್ದೇವೆ. ಇಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭೇಟಿ ಮಾಡಬೇಕು ಎಂಬುದೇನಿದೆ? ನಮ್ಮ ವಿಚಾರದಲ್ಲಿ ಬಿಜೆಪಿಯವರಿಗಿಂತ ನಿಮಗೆ ಕಷ್ಟ ಹೆಚ್ಚಾದಂತೆ ಕಾಣುತ್ತಿದೆ ಎಂದು ಶಿವಕುಮಾರ್ ಕಿಚಾಯಿಸಿದರು.

2023ರ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಚುನಾವಣೆಗೆ ನಾವು ಈಗಾಗಲೇ ತಯಾರಿ ನಡೆಸುತ್ತಿದ್ದೇವೆ. ನಮ್ಮ ಜಿಲ್ಲಾ ನಾಯಕರ ಅಭಿಪ್ರಾಯ ತೆಗೆದುಕೊಳ್ಳುತ್ತಿದ್ದು, ಸಮೀಕ್ಷೆಗಳನ್ನು ನಡೆಸಿದ್ದು, ನಮಗೆ ಉತ್ತಮ ವರದಿ ಸಿಗುತ್ತಿದೆ. ಜನ ನಮಗೆ ಆಶೀರ್ವಾದ ಮಾಡುತ್ತಿದ್ದಾರೆ. ಈ ಸರಕಾರವನ್ನು ಕಿತ್ತೊಗೆಯಬೇಕು ಎಂದು ಜನರೇ ತೀರ್ಮಾನಿಸಿದ್ದಾರೆ. ನಾವು ಚುನಾವಣೆಯಲ್ಲಿ ಮುಂಚಿತವಾಗಿ ನಮ್ಮ ಅಭ್ಯರ್ಥಿಗಳನ್ನು ಪ್ರಕಟಿಸುತ್ತೇವೆ ಎಂದು ಅವರು ಉತ್ತರಿಸಿದರು.

ಅಗ್ನಿಪಥ್ ಯೋಜನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ದೇಶದಾದ್ಯಂತ ಯುವಕರು ಈ ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಯುವಕರನ್ನು ಬಿಜೆಪಿ ಕಚೇರಿ ಸೆಕ್ಯುರಿಟಿ ಗಾರ್ಡ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರು ಬೇಕಾದರೆ ತಮ್ಮ ಸಚಿವರ ಮಕ್ಕಳನ್ನು ಸೇರಿಸಲಿ, ನಮ್ಮ ಮಕ್ಕಳು ಇಂಜಿನಿಯರ್, ವೈದ್ಯರಾಗಲು ಬಿಡಿ. ಇದುವರೆಗೂ ಇದ್ದ ಮಾದರಿಯಲ್ಲೇ ಸೇನೆ ನೇಮಕಾತಿ ಮಾಡಲಿ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)