ರಾಷ್ಟ್ರೀಯ
ಉದಯಪುರ ಹತ್ಯೆ ಪ್ರಕರಣ : ತನಿಖೆ ಎನ್‌ಐಎಗೆ ಹಸ್ತಾಂತರ

ಜೈಪುರ, ಜೂ. 29: ರಾಜಸ್ಥಾನದ ಉದಯಪುರದಲ್ಲಿ ಮಂಗಳವಾರ ನಡೆದ ಟೈಲರ್ ಕನ್ಹಯ್ಯ ಲಾಲ್ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಬುಧವಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗಿದೆ.
‘‘ಈ ಪ್ರಕರಣದಲ್ಲಿ ಭಾಗಿಯಾಗಿರುವ ಯಾವುದೇ ಸಂಘಟನೆ ಹಾಗೂ ಅಂತಾರಾಷ್ಟ್ರೀಯ ನಂಟನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗುವುದು’’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯ ಟ್ವೀಟ್ ಹೇಳಿದೆ.
ಈ ನಡುವೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್‌ನಲ್ಲಿ, ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಹತ್ಯೆ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ. ರಾಜಸ್ಥಾನ ಎಟಿಎಸ್ ಹಾಗೂ ರಾಜ್ಯ ಪೊಲೀಸರು ಎನ್‌ಐಎಗೆ ಸಹಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಭಯೋತ್ಪಾದನೆಯನ್ನು ಹರಡುವ ಉದ್ದೇಶದಿಂದ ಈ ಹತ್ಯೆ ನಡೆಸಲಾಗಿದೆ ಎಂಬುದು ಪೊಲೀಸರ ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಗೆಹ್ಲೋಟ್ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಈ ನಡುವೆ ಲಾಲ್ ಹತ್ಯೆ ಘಟನೆಯಲ್ಲಿ ನಿರ್ಲಕ್ಷ್ಯದ ಆರೋಪದಲ್ಲಿ ಉದಯಪುರದ ಧಾನ್ ಮಂಡಿ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್‌ರನ್ನು ಅಮಾನತುಗೊಳಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಶೇರ್ ಮಾಡಿರುವುದಕ್ಕೆ ಸಂಬಂಧಿಸಿ ಲಾಲ್ ವಿರುದ್ಧ ಜೂನ್ 11ರಂದು ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿತ್ತು. ಅನಂತರ ಅವರನ್ನು ಬಂಧಿಸಲಾಗಿತ್ತು ಎಂದು ಹೆಚ್ಚುವರಿ ಡಿಜಿಪಿ (ಕಾನೂನು ಹಾಗೂ ಸುವ್ಯವಸ್ಥೆ) ಹವಾ ಸಿಂಗ್ ಘುಮರಿಯಾ ಅವರು ತಿಳಿಸಿದ್ದಾರೆ.
ಜೂನ್ 15ರಂದು ಲಾಲ್ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ಅನಂತರ ಅವರು ಬೆದರಿಕೆ ಕರೆ ಸ್ವೀಕರಿಸಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳೀಯ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅವರನ್ನು ಹಾಗೂ ಎರಡೂ ಸಮುದಾಯದ ಕೆಲವರನ್ನು ಪೊಲೀಸ್ ಠಾಣೆಗೆ ಕರೆಸಿ ವಿವಾದವನ್ನು ಅಂತ್ಯಗೊಳಿಸಿದ್ದರು ಎಂದು ಘುಮರಿಯಾ ತಿಳಿಸಿದ್ದಾರೆ.
ಕನ್ಹಯ್ಯ ಲಾಲ್ ವ್ಯಕ್ತಪಡಿಸಿರುವ ಆತಂಕದ ಬಗ್ಗೆ ಅಸೆಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಬನ್ವಾರ್ ಲಾಲ್ ಅವರು ಗಮನ ಹರಿಸಲಿಲ್ಲ ಎಂದು ಉದಯಪುರದ ಐಜಿಪಿ ಹಿಂಗಲಾಲ್ ದಾನ್ ಅವರು ತಿಳಿಸಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ