ಅನುಗಾಲ
ಅಡ್ಡ ಗೋಡೆಯ ಮೇಲೆ ಸಾಲುದೀಪ

ಅಡ್ಡ ಗೋಡೆಯ ಮೇಲೆ ನ್ಯಾಯದೀಪವಿದೆ; ಜ್ಞಾನದೀಪವೂ ಇದೆ. ಈ ದೀಪಗಳೆಲ್ಲ ತಮ್ಮ ಸಮತೋಲವನ್ನು ಕಾಯ್ದುಕೊಂಡು ಬೇಳೆಬೇಯಿಸಿಕೊಳ್ಳಲು ಹೇಗೆ ಹವಣಿಸಿದರೂ ಗಾಳಿ ಅಥವಾ ಭೂಕಂಪಕ್ಕೆ ಅಳಿಯಲೇ ಬೇಕು. ಎಲ್ಲ ಕ್ರಾಂತಿಗಳ ಉದ್ದೇಶವೂ ಶಾಂತಿಯೇ ಆದ್ದರಿಂದ ಶಾಂತಿ ಕದಡಿದಾಗೆಲ್ಲ ಕ್ರಾಂತಿ ಅನಿವಾರ್ಯವಾಗಲಿದೆ.
ಲಜ್ಜೆಗೇಡಿಗಳು, ಹಿಂಸಾಪ್ರಿಯರು ಮಾತ್ರ ಈ ದೇಶದ ಮತ್ತು ಇದರ ನಾಯಕತ್ವದ ಕುರಿತು ಹೆಮ್ಮೆ ಪಡುವ ಪರಿಸ್ಥಿತಿ ದೇಶದಲ್ಲಿದೆ. ವರುಷಗಳ ಕಾಲ ಸ್ಥಿತಿ ಹದಗೆಡುತ್ತಿದ್ದರೂ ಅವಕ್ಕೆಲ್ಲ ಗಿಲೀಟು ಹಚ್ಚಿ ಸಂತೆಯ ಜಾತ್ರೆಯಲ್ಲಿ ತಾಜ್‌ಮಹಲ್, ಕುತುಬ್‌ಮಿನಾರುಗಳನ್ನು ಬಣ್ಣದ ಕನ್ನಡಕಗಳ ಮೂಲಕ ತೋರಿಸಿ ಹಣಕೀಳುವವರಂತೆ ಭಾಷಣಗಳ ಮೂಲಕ, ಸುಳ್ಳು ಅಂಕಿ-ಸಂಖ್ಯೆಗಳ ಮೂಲಕ, ಈ ದೇಶದ ಬಹುಮತದ ವಿದ್ಯಾವಂತ ಅವಿದ್ಯಾವಂತ ಮೂರ್ಖರ ಮೂಲಕ ಅಧಿಕಾರದ ಚುಕ್ಕಾಣಿಯನ್ನು ಹಿಡಿದವರೀಗ ತಮ್ಮನ್ನು ಹೊತ್ತವರ ಮತ್ತು ಹೊರದವರ ಕತ್ತುಹಿಸುಕಿ ಕೇಕೆ ಹಾಕುತ್ತಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಭಾರತವೆಂಬ ಕೊಡೆಯ ಎಲ್ಲ ದಿಕ್ಕುಗಳ ಎಂಟು ಕಡ್ಡಿಗಳನ್ನೂ ಮುರಿದು, ಈಗ ಜನರಿಗೆ ನಿಮ್ಮ ತಲೆಯಮೇಲೆ ಬೀಳುತ್ತಿರುವುದು ತಂಪಾದ ಬಿಸಿಲು ಮತ್ತು ಕಾರಂಜಿಯ ಹನಿ ಎಂದು ಸುಳ್ಳು ಹೇಳುವುದು ಮಾತ್ರವಲ್ಲ ಅದನ್ನು ನಂಬಿಸಲು ಯಶಸ್ವಿಯಾಗಿರುವುದು ಸಾವಿರಾರು ವರ್ಷಗಳ ಇತಿಹಾಸದ ಈ ದೇಶದಲ್ಲಿ ಈ ವರೆಗೂ ನಡೆಯದ ಒಂದು ದಾಖಲೆಯೇ ಸರಿ. ಪುರಾಣಗಳನ್ನು ನಂಬುವವರು ಈಗ ಕಲಿಯುಗ ನಡೆಯುತ್ತಿದೆಯೆಂದೂ ಧರ್ಮ ಒಂಟಿಕಾಲಿನಲ್ಲಿ ನಿಂತಿದೆಯೆಂದೂ ಹೇಳುವುದುಂಟು. ಆದರೆ ಈಗ ನಡೆಯುತ್ತಿರುವುದನ್ನು ಗಮನಿಸಿದರೆ ಈ ಒಂಟಿ ಕಾಲು ಕೂಡಾ ಪೈಶಾಚಿಕ ವೈಖರಿಯಲ್ಲಿ ಪಾದವನ್ನು ಹಿಂದುಮುಂದಾಗಿ ಇಟ್ಟಿದೆಯೆಂದು ಕಾಣುತ್ತದೆ. ಇಲ್ಲದ ಆ ಇನ್ನೊಂದು ಕಾಲು ಪುಣ್ಯ ಮಾಡಿದೆ. ಇತಿಹಾಸದಲ್ಲಿ ಹುದುಗಿಹೋಗಿದೆ.
ಸ್ವತಂತ್ರಭಾರತವನ್ನು ಹಿಂದೂ ರಾಷ್ಟ್ರವಾಗಿಸಲು ಹೆಣಗಿದ ಭೀಷ್ಮಾಚಾರ್ಯರು ಗಳು ಮುಚ್ಚಿಕೊಳ್ಳುತ್ತಿರುವ ತಮ್ಮ ಕಣ್ಣ ರೆಪ್ಪೆಗಳನ್ನು ಮೇಲಕ್ಕೆತ್ತಿ ಕಟ್ಟಿ ತೆರೆಯಿಸಿ ದ್ರೌಪದಿ ವಸ್ತ್ರಾಪಹಾರವನ್ನು ನೋಡಿ ಆನಂದಿಸಿ ಈಗ ಅದು ತಮ್ಮ ಅಳಿದುಳಿದ ನೆನಪಿನಿಂದ ಮರೆಯಾಗದಂತೆ ತಮ್ಮ ತಮ್ಮ ತಪೋವನಗಳಲ್ಲಿ ಧ್ಯಾನಸ್ಥ ಕುಳಿತಿದ್ದಾರೆ. ಜೈವಿಕ ವಂಶವಾಹಿನಿಯ ನಾಯಕತ್ವವನ್ನು ಸದೆಬಡಿದು ಈಗ ಅದೇನಿದ್ದರೂ ಹೊಸತಾಗಿ ಹುಟ್ಟಿಕೊಂಡ ಬೌದ್ಧಿಕವಲ್ಲದ, ಪ್ರಚೋದನಾತ್ಮಕ ಭಾವನೆಯ ವಂಶವಾಗಿ ಉಳಿಸಿದ್ದಾರೆ. ದೇಶದೆಲ್ಲೆಡೆ ಇಂತಹ ಋಷಿವೀರ್ಯದ ವಂಶೋದ್ಧಾರಕರು ಜಗದೋದ್ಧಾರರಾಗಿದ್ದಾರೆ. ಹೀಗಾಗಿ ಇಲ್ಲಿ ಎಲ್ಲವೂ ಹೇಳುವುದಕ್ಕೆ. ಹಿಂಸೆ, ಕ್ರೌರ್ಯ, ಲೈಂಗಿಕತೆ, ಮಸಾಲೆಯ ಸಿನೆಮಾಗಳಲ್ಲಿ ಕಾವಿ-ಖಾದಿ- ಖಾಕಿ ಬಟ್ಟೆಯ ಮುನಿಪೋತ್ತಮರು, ಗಡ್ಡಧಾರಿಗಳು, ಶ್ವೇತವಸ್ತ್ರಧಾರಿಗಳು, ಭಾಷಣ/ಸಂದರ್ಶನ/ಪ್ರವಚನಗಳಲ್ಲಿ ಶುಭಸಮನ್ವಯವನ್ನು, ಶಾಂತಿಯನ್ನು ಹಾರೈಸಿ, ಅಂತಃಪುರದಲ್ಲಿ ಕೊಲೆ, ಸುಲಿಗೆ, ಮಾನಹರಣ ನಡೆಸುವುದನ್ನು ನೋಡಿ, ನಡೆಯುವ ಸಮಾಜ ಕುಧಾರಣೆಗಳನ್ನು ಅವು ಬೆಳ್ಳಿಪರದೆಯೆಂದು ನಂಬಿದವರಿಗೆ ಅದೀಗ ಧುತ್ತನೇ ತಮ್ಮ ಟಿವಿ ಪರದೆಗಳಲ್ಲಿ ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸ್‌ಆ್ಯಪ್, ಫೇಸ್‌ಬುಕ್ ಮುಂತಾದ ಅರ್ಜಿನಮೂನೆಗಳಲ್ಲಿ ಮತ್ತು ಪ್ರಚಾರಮಾಧ್ಯಮಗಳಲ್ಲಿ ಶೋಭಿಸುತ್ತಿರುವುದನ್ನು ನೋಡಿ ನಾಲಗೆ ಕೀಳದೆಯೂ ಮಾತನಾಡಲಾರದ ಪರಿಸ್ಥಿತಿ ಉಂಟಾಗಿದೆ.
ಇವೆಲ್ಲದರ ನಡುವೆ ಮಾತು ಬಲ್ಲವರೂ ಹಂಸಗೀತೆಯ ವೆಂಕಟಸುಬ್ಬಯ್ಯನ ಹಾಗೆ ಆದರೆ ಬೇರೆಯೇ ಕಾರಣಕ್ಕೆ-ತಾವು ಮಾತನಾಡಿದರೆ ತಮಗೆ ಬರಬಹು ದಾದ, ಬರಲೇಬೇಕಾದ, ಪ್ರಶಸ್ತಿ-ಪುರಸ್ಕಾರಗಳು ಎಲ್ಲಿ ತಪ್ಪಿಹೋಗುತ್ತವೋ, ಯಾವ ಅಪಾಯ ಕಾದಿದೆಯೋ, ಎಲ್ಲಿ ವರ್ಗಾವಣೆಯಿಂದಾಗಿ ಸಂಸಾರದ ಸರಿಗಮದ ಶ್ರುತಿ ದಾರಿತಪ್ಪುತ್ತದೆಯೋ ಎಂದು ಆತಂಕಿತರಾಗಿ-ನಾಲಗೆ ಕಿತ್ತುಕೊಂಡಿದ್ದಾರೆ. ಇವರೆಲ್ಲರ ಮಧ್ಯೆ ತಾನು ಹಾಳಾಗಿ ಹೋದರೂ ದೇಶ ಹಾಳಾಗಕೂಡದೆಂಬ ಹುಚ್ಚು ನಿಲುವಿನಲ್ಲಿ ದುಡಿಯುವ ಬುದ್ಧಿಹೀನರು ಒಂದಷ್ಟು ಮಂದಿ ಪ್ರವಾಹದ ವಿರುದ್ಧ ಕೊಚ್ಚಿಹೋಗುತ್ತಿದ್ದಾರೆ. ಭಾರತಮಾತೆ ತನ್ನ ಮಕ್ಕಳಿಂದ ಪಾರಾಗಿ ಮಾನವುಳಿಸಿಕೊಳ್ಳಲು ಎಲ್ಲಿಗೆ ಓಡಿಹೋಗಲು ಸಾಧ್ಯ? ಇವೆಲ್ಲ ಕಲ್ಪನೆಯ ಭಯಾನಕ ಕನಸುಗಳು. ಈಗ ಸ್ವಲ್ಪವಾಸ್ತವದ ಕಡೆಗೆ ಹೊರಳೋಣ: ಕಳೆದ ಕೆಲವು ದಿನಗಳಲ್ಲಿ ಧಾರ್ಮಿಕ, ಮತೀಯ ಧ್ರುವೀಕರಣ ಅತಿಯಾಗಿ ವಿಜೃಂಭಿಸುತ್ತಿದೆ. ನೂಪುರ್ ಶರ್ಮಾ ಪ್ರಸಂಗ ಅಂತಹ ಹಲವು ಪ್ರಸಂಗಗಳ ಮುನ್ನಡೆಯೇ ಹೊರತು ಅದೇ ಆರಂಭವಲ್ಲ. ಆದರೆ ಈ ವರೆಗೂ ಆಕೆಯ ದಸ್ತಗಿರಿಯಾಗಿಲ್ಲ. ಆಕೆಗೆ ರಕ್ಷಣೆ ನೀಡಲಾಗಿದೆ. ಆದರೆ ಆಕೆಯ ವಿರುದ್ಧ ನ್ಯಾಯವಾದ ಹೋರಾಟವನ್ನು ನಡೆಸುವವರ ಮೇಲೆ ಪ್ರಕರಣಗಳನ್ನು ಹೇರಲಾಗಿದೆ; ಅವರನ್ನು ಬಂಧಿಸಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಹಲವು ವಿಧದಲ್ಲಿ ಪ್ರಯತ್ನಿಸಲಾಗುತ್ತಿದೆ. ವ್ಯಂಗ್ಯವೆಂದರೆ ಪ್ರಸಾರದಿಂದ ಪ್ರಚಾರಕ್ಕೆ ಬದಲಾದ ನಮ್ಮ ಮಾಧ್ಯಮಗಳ ಬಾಯಿಗೆ ಬೀಗಹಾಕಿದ್ದನ್ನು ಬಹುತೇಕ ಮಾಧ್ಯಮಗಳು ಬೆಂಬಲಿಸುವುದು ಅತ್ಯಂತ ದಯನೀಯ, ಶೋಚನೀಯ ವೈಪರೀತ್ಯ. ಗುಜರಾತಿನ ಹತ್ಯಾಕಾಂಡದಲ್ಲಿ ಕೊಲೆಯಾದ ಎಹ್ಸಾನ್ ಜಾಫ್ರಿಯ ಪತ್ನಿ ನ್ಯಾಯಕ್ಕಾಗಿ ನಡೆಸಿದ ಕೊನೆಯ ಹೋರಾಟವು ಮೊನ್ನೆಯಷ್ಟೇ ಸರ್ವೋಚ್ಚ ನ್ಯಾಯಾಲಯದಲ್ಲಿ ಕೊನೆಕಂಡಿದೆ. 1975ರಲ್ಲಿ ಇದ್ದಂತಹ ಆಡಳಿತ ಸರಕಾರಕ್ಕೆ ಬದ್ಧವಾದ ನ್ಯಾಯಾಂಗವು ಮರುಕಳಿಸುತ್ತಿದೆಯೇನೋ ಎಂಬಂತಿದೆ. ಆಡಳಿತ ಅಧಿಕಾರಿಗಳ ಜಡತೆಯನ್ನು ಸಂಚಿನ ಭಾಗವೆಂದು ಭಾವಿಸುವಂತಿಲ್ಲವೆಂದಿದೆ. ಆದರೆ ಆಗ ಇಂತಹ ಘೋರ ಕೃತ್ಯಗಳಿಗೆ ಅನುಕೂಲವಾದ ವಾತಾವರಣ, ಪ್ರೋತ್ಸಾಹ ನೀಡಿದವರು ಯಾರೆಂಬ ಬಗ್ಗೆ ಚಕಾರವೆತ್ತಿಲ್ಲ. ಬದಲಾಗಿ ತಾನೇ ನೇಮಿಸಿದ ವಿಶೇಷ ತನಿಖಾ ತಂಡಕ್ಕೆ (ತನ್ನ ಕಾವ್ಯಕೆ ತಾಂ ಮಹಾಕವಿ ಮಣಿದಂತೆ?) ಶಹಭಾಸ್‌ಗಿರಿ ನೀಡಿತು.
ಇದರಲ್ಲಿ ಆಗಿನ ಮುಖ್ಯಮಂತ್ರಿ ಮೋದಿಯವರ ಪಾತ್ರದ ಬಗ್ಗೆ ತೀರ್ಪು ಏನೇ ಇರಲಿ, ಅದರಲ್ಲಿ ಪಕ್ಷಕಾರರಲ್ಲದ ಸಾಮಾಜಿಕ ಕಾರ್ಯಕರ್ತೆ ಟೀಸ್ತಾ ಸೆಟಲ್ವಾಡ್ ಮತ್ತು ಆಗಿನ ಡಿಜಿಪಿ ಶ್ರೀಕುಮಾರ್, ಈಗ ಜೈಲಿನಲ್ಲಿ ಕೊಳೆಯುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ಸಂಜೀವ ಭಟ್ ಇವರ ಕುರಿತು ನೇತ್ಯಾತ್ಮಕ ಹಾಗೂ ಕಠಿಣ ಟೀಕೆಗಳನ್ನುಮಾಡಿತು. ಅವರ ವಿರುದ್ಧದ ಪ್ರಕರಣ ಇದಲ್ಲವಾದರೂ ಸಿನೆಮಾದ ನ್ಯಾಯಾಲಯಗಳಂತೆ ಆರೋಪಿಗಳನ್ನು ಬಿಡುಗಡೆಗೊಳಿಸಿ ಈ ಇತರರನ್ನು ಕಟಕಟೆಯೊಳಗಿರಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿತು. ತಕ್ಷಣದಲ್ಲೇ ಗೃಹಮಂತ್ರಿ ಶಾ ಎಚ್ಚರಾದರು. ಅವರ ಪ್ರಭಾವದಿಂದ ಈ ಮೂವರಲ್ಲಿ ಹೊರಗಿರುವ ಇಬ್ಬರನ್ನೂ ಬಂಧಿಸಲಾಯಿತು. ಪೊಲೀಸರು ತುದಿಗಾಲಲ್ಲಿ ಇಂತಹ ಆದೇಶವನ್ನು ಕಾಯುತ್ತಿದ್ದರೆಂಬಂತೆ ನಡೆದುಕೊಂಡರು. ಸರ್ವೋಚ್ಚ ನ್ಯಾಯಾಲಯವೇ ಹಲವು ತೀರ್ಪುಗಳಲ್ಲಿ ಯಾವುದೇ ಪ್ರಕರಣಗಳಲ್ಲಿ ಪಕ್ಷಕಾರರಲ್ಲದವರ ವಿರುದ್ಧ ಅವರ ಅಹವಾಲನ್ನು ಕೇಳದ ವಿನಹ ಟೀಕಿಸಬಾರದು, ವ್ಯಕ್ತಿತ್ವ ಹರಣ ಮಾಡಬಾರದು ಎಂದು ಹೇಳಿದ್ದರೂ ಅದನ್ನು ಅಲಕ್ಷಿಸಿದೆ. ಈ ಬಂಧನಗಳಿಂದಾಗಿ ನ್ಯಾಯವಿಧಾನದ ಮತ್ತು ಪರಿಣಾಮದ ಕುರಿತು ಸಂಶಯ ಮಾತ್ರವಲ್ಲ, ಭಯ, ಆತಂಕ ಹುಟ್ಟಿದೆ. ಗುಲ್ಬರ್ಗ್ ಸೊಸೈಟಿಯ ಈ ಹತ್ಯಾಕಾಂಡದ ತನಿಖೆೆಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕಾಗಿ ಗುಜರಾತಿನ ಪೊಲೀಸರು ಮರೆಮಾಚಿದ ವಿಚಾರ, ಘಟನೆಗಳ ಕುರಿತು, ಸರ್ವೋಚ್ಚ ನ್ಯಾಯಾಲಯವು ತನ್ನ 452 ಪುಟಗಳ ತೀರ್ಪಿನಲ್ಲಿ ಮೌನತಾಳಿದೆ. ಹೇಗಿದ್ದರೂ ತನ್ನ ಈ ತೀರ್ಪು ಯಾರ ವಿರುದ್ಧವೂ ಅಲ್ಲ ಮತ್ತು ಇದೇ ಕಾರಣಕ್ಕೆ ಯಾರನ್ನೂ ತಕ್ಷೀರಿಗೆ ಗುರಿಪಡಿಸುವಂತಿಲ್ಲವೆಂಬುದನ್ನು ಹೇಳಲು ನ್ಯಾಯಮೂರ್ತಿಗಳು ಮರೆತರು. ಆದರೆ ಸ್ವತಃ ಎಂಟು ತಿಂಗಳು ಜೈಲುವಾಸಿಯಾಗಿದ್ದ ಗೃಹಮಂತ್ರಿ ಇದರ ಅಂತಸ್ಸತ್ವವನ್ನು ಮರೆಯಲಿಲ್ಲ. ಇವೆಲ್ಲವು ನಡೆದದ್ದು ಮೊನ್ನೆಯಷ್ಟೇ ವಿದೇಶ ಪ್ರವಾಸದಲ್ಲಿ ಭಾರತದ ಸರ್ವೋಚ್ಚ ನ್ಯಾಯಮೂರ್ತಿಗಳು ಭಾರತದ ನ್ಯಾಯವಿಧಾನದ ಬಗ್ಗೆ, ನ್ಯಾಯಾಲಯಗಳ ಬಗ್ಗೆ ಅಪಾರ ನಂಬಿಕೆಯನ್ನು ವ್ಯಕ್ತಪಡಿಸಿ ಎಲ್ಲರೂ ಭಾರತದ ನ್ಯಾಯಾಂಗವನ್ನು ನಂಬಬೇಕು ಎಂದು ಹೇಳಿದ ಮೇಲೆ. ನಮ್ಮ ಪ್ರಧಾನಿ ಜಿ-7 ಶೃಂಗಸಭೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ‘ಎತ್ತಿಹಿಡಿಯುವ’ ಘೋಷಣೆಯನ್ನು ಹಾಕಿದ ಹೊತ್ತಿನಲ್ಲೇ ಇಲ್ಲಿ ಆಲ್ಟ್ ನ್ಯೂಸ್ ಜಂಟಿ ಮಾಲಕರಾದ ಮುಹಮ್ಮದ್ ಝುಬೈರ್ ಅವರನ್ನು ಹಳೆಯ ಟ್ವೀಟ್ ಒಂದರ ನೆಪದಲ್ಲಿ ಬಂಧಿಸಲಾಗಿದೆ. ತಮಾಷೆಯೆಂದರೆ ಅವರ ಮೇಲೆ ವಿಧಿಸಲಾದ ಕಲಮುಗಳು ಭಾರತೀಯ ದಂಡ ಸಂಹಿತೆಯ 153ಎ ಮತ್ತು 295ಎ. ಇಂದು ತಮಗಾಗದವರನ್ನು ಯಾವ ಸರಕಾರವೂ ಈ ಕಲಮುಗಳಡಿ ಬಂಧಿಸಬಹುದು. ಸಮನ್ವಯ, ಸಾಮರಸ್ಯವನ್ನು ಕದಡುವವರ ವಿರುದ್ಧ ಹೇರಬೇಕಾದ ಈ ಕಲಮು ಅಂತಹ ಘಟನೆಗಳನ್ನು ವಿರೋಧಿಸುವವರ ವಿರುದ್ಧ ಹೇರುವುದನ್ನು ನೋಡಿದರೆ ಇಂತಹ ಶಕ್ತಿಗಳ ವಿನಾಶಕ್ಕೆ ಇನ್ನೊಬ್ಬ ಪ್ರಹ್ಲಾದ ಮತ್ತು ಅವನ ಕರೆಗೆ ಓಗೊಡುವ ನರಸಿಂಹನೊಬ್ಬ ಬೇಕಾಗಬಹುದೇನೋ? ಇವನ್ನು ನೋಡಿ ಪೊಲೀಸರಿಗೆ ಸಿಕ್ಕದ ಆದರೆ ಸರಕಾರದ ದ್ರತೆಯಲ್ಲಿರುವ ನೂಪುರ್ ಶರ್ಮಾ ಅವರ ದೇಹ ಮತ್ತು ಆತ್ಮ ಎಲ್ಲೇ ಇರಲಿ ನಗುತ್ತಿರಬಹುದು!
ಇನ್ನೂ ವ್ಯಂಗ್ಯವೆಂದರೆ ಇವೆಲ್ಲವೂ ನಡೆದದ್ದು, ನಡೆಯುತ್ತಿರುವುದು 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ ಜೂನ್ 25ರ ಆಸುಪಾಸಿನಲ್ಲಿ. ನಮ್ಮ ಪ್ರಧಾನಿ ಇಂತಹ ಅವಕಾಶವನ್ನು ಕಳೆದುಕೊಳ್ಳುವವರಲ್ಲ. ವಿದೇಶದಲ್ಲೂ ತುರ್ತು ಪರಿಸ್ಥಿತಿಯ ಕುರಿತು ಟೀಕಿಸಿ ಭಾರತವೆಂಬ ಅತೀ ದೊಡ್ಡ ಪ್ರಜಾಪ್ರಭುತ್ವವು ಹೇಗೆ ಅದನ್ನು ಎದುರಿಸಿ ಮರುಹುಟ್ಟು ಪಡೆಯಿತು ಎಂದು ಬೆನ್ನುತಟ್ಟಿಕೊಂಡರು. ಆದರೆ ಈಗ ಅದೇ ಪರಿಸ್ಥಿತಿಯ ಅಂತಹ ಘೋಷಣೆಯಿಲ್ಲದೆಯೂ ಭಾರತದಲ್ಲಿ ನಡೆಯುತ್ತಿದೆಯೆಂಬುದನ್ನು ಗುಡಿಸಿಹಾಕಿ ಅದರ ಮೇಲೆ ಮೇಕಪ್ಪುಹಚ್ಚಿದರು. ಈ ಬಾರಿ ‘‘ಅಬ್ ಕೀ ಬಾರ್’’ ಎಂದು ಹೇಳುವ ಮತ್ತು ಹೇಳಿಸಿಕೊಳ್ಳುವ ಸರಕಾರಗಳು ಅಲ್ಲಿರಲಿಲ್ಲ!
ಇಷ್ಟಾದರೂ ವಿದೇಶ ಸುತ್ತುವ ಹುಚ್ಚಿಗೆ ನಮ್ಮ ಪ್ರಧಾನಿ ಸೂಕ್ತವೆಂಬಷ್ಟರ ಮಟ್ಟಿಗೆ ವಿದೇಶಗಳು ಅವರನ್ನು ತಾಳಿಕೊಂಡಿವೆ. ಇದಕ್ಕೆ ಕಾರಣವೆಂದರೆ ವಿಶ್ವ ರಾಜಕೀಯ. ರಶ್ಯ-ಚೀನಾದಂತಹ ಬಲಿಷ್ಠ ಎಡಪಂಥದ ರಾಷ್ಟ್ರಗಳನ್ನು ಎದುರಿಸಲು ಭಾರತದೊಂದಿಗೆ ಕೈಜೋಡಿಸುವುದು ಅವಕ್ಕೆ ಅನಿವಾರ್ಯ. ರಶ್ಯದ ಮೇಲೆ ಅರ್ಥಿಕದಿಗ್ಬಂಧನ ಹೇರಿದ ಮೇಲೂ ರಶ್ಯದಿಂದ ಭಾರತವು ತೈಲದ ಆಮದನ್ನು ಮಾಡಿದಾಗ ಈ ರಾಷ್ಟ್ರಗಳು ಸುಮ್ಮನಿದ್ದವು. ಇದು ಭಾರತದ ಸಾಮರ್ಥ್ಯವೆಂದು ಹೇಳುವುದಕ್ಕಿಂತಲೂ ವಿಶ್ವರಾಜಕಾರಣದ ಕರಾಳ ಮುಖವೆನ್ನಬಹುದು. ಇಂದು ವಿಶ್ವದ ಯಾವ ರಾಷ್ಟ್ರವೂ ಇನ್ನೊಂದು ರಾಷ್ಟ್ರದೊಂದಿಗೆ ಶಾಶ್ವತವೆಂಬಂತಹ ಸಂಬಂಧವನ್ನು ವೃದ್ಧಿಸಲು ಹೋಗುವುದಿಲ್ಲ. ಆಯಾ ಕಾಲಕ್ಕೆ ಆಯಾ ಪರಿಸ್ಥಿತಿಗೆ ತಕ್ಕಂತಹ ಜೋಡಣೆಗಳನ್ನು ಮಾಡುತ್ತಿವೆ. ರಾಜಕೀಯದ ಮೂಲಮಂತ್ರವಾದ ಶಾಶ್ವತ ಮಿತ್ರರಿಲ್ಲ, ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಹಿತಾಸಕ್ತಿಗಳು ಮಾತ್ರ ಎಂಬುದು ಜಾಗತಿಕ ನಿಯಮವಾಗಿದೆ. ಇದೇ ಸದ್ಯಕ್ಕೆ ಭಾರತದ ಗಿಲೀಟು ಮುಖದ ಯಶಸ್ಸಿಗೆ ಕಾರಣ. ಈಗ ಎಲ್ಲೆಡೆ ಶಾಂತಿ ಕದಡಿದೆ. ನೂಪುರ್ ಶರ್ಮಾ ಎಷ್ಟೇ ಸುರಕ್ಷಿತಳಾದರೂ ಆಕೆಯನ್ನು ಬೆಂಬಲಿಸಿದ ಅಮಾಯಕನೊಬ್ಬನ ಕ್ರೂರ ವಧೆಯಾಗಿದೆ. ಇನ್ನೊಂದೆಡೆ ದೇಶದೆಲ್ಲೆಡೆ ಜನರೇ ಕಾನೂನನ್ನು ಕೈಗೆತ್ತಿಕೊಂಡು ಯಾದವರ ಒನಕೆಯ ನೆಪವೂ ಇಲ್ಲದೆ ಹೊಡೆದಾಡಿಕೊಳ್ಳುತ್ತಿದ್ದಾರೆ. ಇವೆಲ್ಲ ಜಾತೀಯವಲ್ಲ; ಜಾತ್ಯತೀತ! ಮತೀಯವಲ್ಲ; ಮತಾತೀತ! ಕಾರ್ಯಕಾರಣಗಳಿಲ್ಲದ ಅಪೂರ್ವ ನಟನೆ!
ಈಗ ನಡೆಯುತ್ತಿರುವ ಎಲ್ಲ ಭಯಾನಕ ಅಧಿಕಾರಗ್ರಸ್ತ ನಡೆನುಡಿಗಳು ಭಯದ ಮೂಲದಿಂದಲೇ ಹುಟ್ಟಿದವುಗಳು. ಹುಲಿಸವಾರಿಗೆ ಹೊರಟ ಸರಕಾರಕ್ಕೆ ಅಲ್ಲಿಂದ ಇಳಿದರೆ ಅಥವಾ ಎಸೆಯಲ್ಪಟ್ಟರೆ ಏನಾಗುತ್ತದೆಯೋ ಎಂಬ ಭಯವಿದೆ. 1975ರ ತುರ್ತುಪರಿಸ್ಥಿತಿಯ ವಿರುದ್ಧ ಹೋರಾಡಿದವರ ಗುಣಗಾನ ಮಾಡಿದ ಪ್ರಧಾನಿಗಳು ನಿಜಕ್ಕೂ ಆತಂಕಿತರಾದದ್ದು ಅದಕ್ಕೇ; ಭಯಪಡಬೇಕಾದದ್ದು ಅಂತಹದೇ ಭಾರತಕ್ಕೆ; ಅಂತಹದೇ ಜನರಿಗೆ. ಏಕೆಂದರೆ ಯಾರೂ ಶಾಶ್ವತರಲ್ಲ. ಯಾವುದೂ ಶಾಶ್ವತವಲ್ಲ. ತುರ್ತುಪರಿಸ್ಥಿತಿ ಮುಂಬಾ ಗಿಲಲ್ಲಿ ಬಂದರೂ ಅಷ್ಟೇ; ಹಿಂಬಾಗಿಲಲ್ಲಿ ತಂದರೂ ಅಷ್ಟೇ. ಸತ್ಯ ಹೇಳುವವನು ಒಬ್ಬನೆ ಆದರೂ ಅವನೆದುರು ಖಳನಾಯಕರ ತಾಮಸಶಕ್ತಿ ನಡೆಯುವುದಿಲ್ಲ. ಜನರಿಗೆ ಎರಡು ಕತ್ತಲುಗಳ ನಡುವಣ ಹಗಲು ಮತ್ತು ಎರಡು ಹಗಲುಗಳ ನಡುವಣ ಕತ್ತಲು-ಈ ವ್ಯತ್ಯಾಸವನ್ನು ಯಾರೂ ಹೇಳಿಕೊಡಬೇಕಾದ್ದಿಲ್ಲ. ಕೆಲವು ಸಮವಸ್ತ್ರದ ಕಟ್ಟಪ್ಪಗಳಿವೆ; ಅಡ್ಡ ಗೋಡೆಯ ಮೇಲೆ ನ್ಯಾಯದೀಪವಿದೆ; ಜ್ಞಾನದೀಪವೂ ಇದೆ. ಈ ದೀಪಗಳೆಲ್ಲ ತಮ್ಮ ಸಮತೋಲವನ್ನು ಕಾಯ್ದುಕೊಂಡು ಬೇಳೆಬೇಯಿಸಿಕೊಳ್ಳಲು ಹೇಗೆ ಹವಣಿಸಿದರೂ ಗಾಳಿ ಅಥವಾ ಭೂಕಂಪಕ್ಕೆ ಅಳಿಯಲೇ ಬೇಕು. ಎಲ್ಲ ಕ್ರಾಂತಿಗಳ ಉದ್ದೇಶವೂ ಶಾಂತಿಯೇ ಆದ್ದರಿಂದ ಶಾಂತಿ ಕದಡಿದಾಗೆಲ್ಲ ಕ್ರಾಂತಿ ಅನಿವಾರ್ಯವಾಗಲಿದೆ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ