ವೈದ್ಯರೂ ಮನುಷ್ಯರಲ್ಲವೇ?
ಇಂದು ವಿಶ್ವ ವೈದ್ಯರ ದಿನ
ಭಾರತ ಕಂಡಂತಹ ಒಬ್ಬ ಮಹಾನ್ ವೈದ್ಯ, ಅಪ್ರತಿಮ ಮಾನವತಾವಾದಿ ಅಪ್ಪಟ ದೇಶ ಭಕ್ತ, ಪ್ರಾಮಾಣಿಕ ರಾಜಕಾರಣಿ, ಮಹಾನ್ ಸ್ವಾತಂತ್ರ ಹೋರಾಟಗಾರ. ಶಿಕ್ಷಣ ತಜ್ಞ ಡಾ. ಬಿದನ್ ಚಂದ್ರ ರಾಯ್ ಅವರು ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯವಾದ ಕೊಡುಗೆಗಳನ್ನು ಸ್ಮರಿಸುವ ಸಲುವಾಗಿ ಅವರು ಹುಟ್ಟಿದ ದಿನವಾದ ಜುಲೈ 1ರಂದು ರಾಷ್ಟ್ರಾದ್ಯಂತ ರಾಷ್ಟ್ರೀಯ ವೈದ್ಯರ ದಿನ ಎಂದು ಆಚರಿಸಲಾಗುತ್ತದೆ. 1882, ಜುಲೈ ಒಂದರಂದು ಅವರು ಜನಿಸಿ 80 ವರ್ಷಗಳ ತುಂಬು ಜೀವನ ನಡೆಸಿ, 1962 ಜುಲೈ 1ರಂದು ನಿಧನರಾದರು. ಜೀವನದುದ್ದಕ್ಕೂ ಅವರು ಬಡವರ ಮತ್ತು ನಿರಾಶ್ರಿತರ ಸೇವೆಗಾಗಿ ತಮ್ಮ ಬದುಕನ್ನು ಶ್ರೀಗಂಧದ ಕೊರಡಿನಂತೆ ಸವೆದರು. ಅವರ ಅಪ್ರತಿಮ ಸೇವೆಗಾಗಿ 1961ರಲ್ಲಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಯಿತು. 1976ರಿಂದ ವೈದ್ಯಕೀಯ ರಂಗದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ವೈದ್ಯರಿಗಾಗಿ ಬಿ.ಸಿ. ರಾಯ್ ಪ್ರಶಸ್ತಿಯನ್ನು ಆರಂಭಿಸಿ ಅವರ ಹೆಸರನ್ನು ಚಿರಸ್ಥಾಯಿಯಾಗುವಂತೆ ಮಾಡಲಾಯಿತು. ‘‘ಬಡವರೇ ನನ್ನ ರೋಗಿಗಳು, ಅವರ ಸೇವೆಗೆ ಮೌಲ್ಯವನ್ನು ದೇವರೇ ನೀಡುತ್ತಾರೆ’’ ಎಂಬ ಉಕ್ತಿಯನ್ನು ತಮ್ಮ ಜೀವಿತದುದ್ದಕ್ಕೂ ನಂಬಿ, ಬಾಳಿ ಬದುಕಿ, ಜೀವನ ಪರ್ಯಂತ ಬಡ ಜನರ ಮತ್ತು ಸಮಾಜದ ಕೆಳಸ್ತರದ ಜನರ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಈಗಿನ ಕಾಲಘಟ್ಟದಲ್ಲಿ ಎಲ್ಲವೂ ವ್ಯಾಪಾರೀಕರಣ ಆಗಿದೆ. ತಂದೆ ಮಕ್ಕಳ ಸಂಬಂಧ, ಗಂಡ ಹೆಂಡತಿ ಸಂಬಂಧ, ವೈದ್ಯ ರೋಗಿಯ ಸಂಬಂಧ ಎಲ್ಲವೂ ಮೌಲ್ಯಾಧಾರಿತ ಸಂಬಂಧವಾಗಿ ಬದಲಾಗಿದೆ. ಮಾನವೀಯ ಸಂಬಂಧಗಳು ಹಳಸಿ ಹೋಗಿದೆ. ವೈದ್ಯ ರೋಗಿಯ ಸಂಬಂಧವೂ ಬಹಳಷ್ಟು ಬದಲಾಗಿದೆ. ವೈದ್ಯರೇ ದೇವರು ಎಂಬ ವಿಚಾರ ಎಂದೋ ಹಳಿತಪ್ಪಿದೆ. ವೈದ್ಯರು ಮನುಷ್ಯರೇ ಅಲ್ಲ ಎಂಬ ವಾತಾವರಣ ಸೃಷ್ಟಿಯಾಗಿದೆ. ವೈದ್ಯರು ಜೀವ ಉಳಿಸುವವರು ಎಂಬ ಭಾವನೆಗಿಂತಲೂ ಅವರು ರಕ್ತಪಿಪಾಸುಗಳು, ಕಲ್ಲು ಹೃದಯದವರು ಮತ್ತು ವ್ಯಾಪಾರಿಗಳು ಎಂದು ಬಿಂಬಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ವೈದ್ಯರು ಮಾಡಿದ ಸಾವಿರ ಒಳ್ಳೆಯ ಕೆಲಸಗಳನ್ನು ಬದಿಗಿರಿಸಿ, ಎಲ್ಲೋ ಒಮ್ಮೆ ಅಚಾತುರ್ಯದಿಂದಾಗಿ ಘಟಿಸಿದ ಘಟನೆಯನ್ನು ವೈಭವೀಕರಿಸಿ ಎಲ್ಲಾ ವೈದ್ಯರನ್ನು ಒಂದೇ ತಕ್ಕಡಿಯಲ್ಲಿ ಅಳೆದು, ವೈದ್ಯರನ್ನೇ ಖಳನಾಯಕನಂತೆ ಬಿಂಬಿಸುವ ಪ್ರಯತ್ನ ಎಗ್ಗಿಲ್ಲದೆ ನಡೆಯುತ್ತಿದೆ.
ಸಣ್ಣ ಪುಟ್ಟ ಕಾರಣಗಳನ್ನು ನೀಡಿ ವೈದ್ಯರ ಮೇಲೆ ದಾಳಿಮಾಡುವಂತಹ ಆತಂಕಕಾರಿ ಘಟನೆಗಳು ದಿನೇ ದಿನೇ ಘಟಿಸುತ್ತವೆ. ಎಲ್ಲಾ ಸೌಲಭ್ಯಗಳು ಲಭ್ಯವಿರುವ ಈಗಿನ ಕಾಲದಲ್ಲಿಯೂ, ತಮ್ಮದೇ ನಿರ್ಲಕ್ಷದಿಂದಾಗಿ ಮತ್ತು ಉಡಾಫೆ ಧೋರಣೆಯಿಂದ ಸ್ವಯಂ ಮದ್ದುಗಾರಿಕೆ ಮತ್ತು ಅವೈಜ್ಞಾನಿಕ ಹಳ್ಳಿ ಮದ್ದುಗಳನ್ನು ಬಳಸಿ ರೋಗ ಉಲ್ಬಣಿಸಿ, ಇನ್ನೇನು ರೋಗಿ ಸಾಯುತ್ತಾನೆ ಎಂಬ ಹಂತಕ್ಕೆ ಬಂದಾಗ ರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಮೃತಪಟ್ಟಾಗ ಅದೇ ವೈದ್ಯರ ಮೇಲೆ ದಾಳಿಮಾಡಿ ತಮ್ಮ ತೀಟೆ ತೀರಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಂತು ಅಲ್ಲವೇ ಅಲ್ಲ. ಪ್ರಾಣಿಗಳ ಮೇಲೆ ದೌರ್ಜನ್ಯವಾದಾಗ ಬೊಬ್ಬಿರಿಯುವ ಜನ, ಹಗಲಿರುಳು ರೋಗಿಗಳ ಸೇವೆಗಾಗಿ ತಮ್ಮ ಜೀವನವನ್ನೇ ಪಣವಾಗಿಟ್ಟು, ಸೇವೆ ಮಾಡುವ ವೈದ್ಯರ ಮೇಲೆ ಮಾರಣಾಂತಿಕ ದಾಳಿ ಆದಾಗ ಜಾಣ ಮೌನ ವಹಿಸಿರುವುದು ನಾಗರಿಕ ಸಮಾಜದ ಲಕ್ಷಣವಲ್ಲ. ಈ ಎಲ್ಲಾ ಹಿನ್ನಲೆಯಲ್ಲಿ ವೈದ್ಯರ ದಿನ ಎನ್ನುವುದು ಎಲ್ಲಾ ವೈದ್ಯರಿಗೂ ಒಂದು ರೀತಿಯಲ್ಲಿ ತಮ್ಮ ವೃತ್ತಿ ಜೀವನದ ಏಳು ಬೀಳುಗಳತ್ತ ಸಿಂಹಾವಲೋಕನ ಮಾಡಿ, ತಮ್ಮ ತನು ಮನಗಳನ್ನು ಮಗದೊಮ್ಮೆ ವೃತ್ತಿಜೀವನಕ್ಕೆ ಪುನಃ ಅರ್ಪಿಸಿಕೊಳ್ಳುವ ದಿನ ಎಂದರೂ ತಪ್ಪಾಗಲಾರದು. ಹಾಗೆಯೇ ರೋಗಿಗಳೂ ತಾವು ತಮ್ಮ ದೇಹದ ಆರೋಗ್ಯದಲ್ಲಿ ಏರುಪೇರಾಗಿ ಜೀವನ್ಮರಣದ ನಡುವೆ ಬದುಕಲು ಹೆಣಗಾಡುತ್ತಿರುವಾಗ ನೋವು ನಿವಾರಿಸಿ, ಆತ್ಮ ವಿಶ್ವಾಸ, ಧೈರ್ಯ ತುಂಬಿ, ಜೀವ ಉಳಿಸಿ, ಬಾಳಿಗೆ ಬೆಳಕು ನೀಡಿದ ವೈದ್ಯರನ್ನು ಸ್ಮರಿಸಿ ಧನ್ಯವಾದ ಸಮರ್ಪಿಸುವ ಸುದಿನ. ಅದು ಕೇವಲ ಅಲೋಪತಿ ಮಾತ್ರವಲ್ಲ ಯುನಾನಿ, ಆಯುರ್ವೇದ, ಹೋಮಿಯೋಪತಿ ಹೀಗೆ ಹತ್ತಾರು ವಿಧಾನಗಳ ಮೂಲಕ ತಮ್ಮನ್ನೇ ನಂಬಿದ ರೋಗಿಗಳ ಚಿಕಿತ್ಸೆಗಾಗಿ ತಮ್ಮನ್ನು ಸಮರ್ಪಿಸಿಕೊಂಡ ವೈದ್ಯರನ್ನು ಅಭಿನಂದಿಸುವ ಮತ್ತು ಕೃತಜ್ಞತೆ ಸಲ್ಲಿಸುವ ವಿಶೇಷ ದಿನವಾಗಿರುತ್ತದೆ. ಬದಲಾಗುತ್ತಿರುವ ವೈದ್ಯಕೀಯ ಕ್ಷೇತ್ರ
‘ಡಾಕ್ಟರ್’ ಎಂಬ ಶಬ್ದ ‘ಡೆಕ್’ ಎಂಬ ಶಬ್ದದಿಂದ ಉಗಮವಾಗಿದ್ದು, ಇದರ ಅರ್ಥ ಉಪಯುಕ್ತಕರ ಇಲ್ಲವೇ ಒಪ್ಪುಗೆಯಾಗುವಂತಹ ಎಂಬುದಾಗಿದೆ. ಇದು ಲ್ಯಾಟಿನ್ನಲ್ಲಿ ‘ಡೊಸೇರ್’ ಎಂದಾಯಿತು. ಅದರ ಅರ್ಥ ಕಲಿಸು ಎಂಬುದಾಗಿದೆ. ಈ ಕಾರಣದಿಂದಲೇ ವೈದ್ಯರಿಗೆ ಗುರುವಿನ ಸ್ಥಾನವೂ ದಕ್ಕಿತು. ಹಾಗೆಯೇ ‘ಡೊಸೇರ್’ ಎಂದರೆ ಕಲಿ ಅಥವಾ ಶಿಷ್ಯ ಎಂಬರ್ಥ ನೀಡುತ್ತದೆ. ಗ್ರೀಕ್ನಲ್ಲಿ ಇದು ‘ಒಪ್ಪಿಗೆಯಾಗುವಂತೆ ಕಲಿಸುವಿಕೆ’ ಎಂಬ ಅರ್ಥ ನೀಡುತ್ತದೆ. ಒಟ್ಟಿನಲ್ಲಿ ವೈದ್ಯನಾದವನು ನಿರಂತರವಾಗಿ ಕಲಿಯುತ್ತಾ, ಕಲಿಸುತ್ತಾ, ವೈದ್ಯ ಮತ್ತು ಗುರುವಿನ ಸ್ಥಾನವನ್ನು ಪಡೆಯುತ್ತಾನೆ. ವೈದ್ಯಕೀಯ ವೃತ್ತಿಯು ಅತ್ಯಂತ ಗೌರವಯುತ ವೃತ್ತಿಯೆಂದು ಪರಿಗಣಿತವಾಗಿದೆ.
ಹಿಂದೆಲ್ಲಾ ಊರಿಗೊಬ್ಬರೇ ವೈದ್ಯರಿದ್ದರು. ಅವರು ಕುಟುಂಬ ವೈದ್ಯರಾಗಿ, ಕುಟುಂಬದ ಎಲ್ಲ ಸದಸ್ಯರ ಎಲ್ಲ ಬಗೆಯ ರೋಗಗಳಿಗೆ ಚಿಕಿತ್ಸೆ ಕೊಡಬಲ್ಲವರಾಗಿದ್ದರು. ರೋಗಿಯ ಚರಿತ್ರೆ, ಹಿನ್ನೆಲೆ, ಶಿಕ್ಷಣ, ಸಾಮಾಜಿಕ ಸಂಬಂಧಗಳು, ಕೌಟುಂಬಿಕ ಹಿನ್ನೆಲೆ ಹೀಗೆ ಎಲ್ಲವನ್ನೂ ಆಮೂಲಾಗ್ರವಾಗಿ ತಿಳಿದು ಆತ್ಮೀಯತೆಯಿಂದ ಸಲಹೆ ನೀಡಬಲ್ಲ ಹಿತೈಷಿಯಾಗಿರುತ್ತಿದ್ದರು. ಅವರು ಕೇವಲ ವೈದ್ಯರಾಗಿರದೆ, ಸ್ನೇಹಿತ, ಬಂಧು ಮತ್ತು ಗುರುವಿನಂತೆ ಇರುತ್ತಿದ್ದರು. ಕೇವಲ ತನ್ನ ಸ್ಟೆತೋಸ್ಕೋಪ್, ನಾಡಿಬಡಿತ ಮತ್ತು ರೋಗದ ಲಕ್ಷಣ ಹಾಗೂ ರೋಗದ ಚರಿತ್ರೆಗಳಿಂದ ರೋಗ ನಿರ್ಣಯ ಮಾಡುವ ಕಲೆಯನ್ನು ಅವರು ಹೊಂದಿದ್ದರು. ಪ್ರೀತಿಯಿಂದ ಮಾತನಾಡಿ ಬೆನ್ನು ಸವರಿ, ಒಂದಿಷ್ಟು ಕಷಾಯದಂತಹ ಔಷಧಿ ನೀಡಿ, ನಾಲ್ಕು ಸಾಂತ್ವನದ ನುಡಿ ಆಡಿದರೂ ಅರ್ಧ ರೋಗ ಮಾಯವಾಗುತ್ತಿತ್ತು. ಈಗ ವೈದ್ಯರಿಗೆ CT, MRI, ರಕ್ತ ಪರೀಕ್ಷೆ ಹೀಗೆ ಬಗೆಬಗೆಯ ಯಂತ್ರಗಳು ಮತ್ತು ನೂರಾರು ಪರೀಕ್ಷೆಗಳು ಲಭ್ಯವಿದೆ. ಈಗ ಪ್ರತೀ ರೋಗಕ್ಕೆ ಒಬ್ಬರಂತೆ ವೈದ್ಯರಿದ್ದಾರೆ. ರೋಗಿಯನ್ನು ನೋಡದೆ, ರೋಗಿಯನ್ನು ಮುಟ್ಟದೆ ಬರೀ ಪರೀಕ್ಷೆಯ ವರದಿ ನೋಡಿ, ಯಂತ್ರಗಳ ಸಂದೇಶ ಆಧರಿಸಿ ರೋಗ ನಿರ್ಣಯ ಮಾಡಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವಿದ್ದೇವೆ. ಕೋವಿಡ್-19 ಎಂಬ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ರೋಗಿ ಮತ್ತು ವೈದ್ಯರ ನಡುವೆ ಒಂದು ಗೋಡೆ ಬಂದು ನಿಂತಿದೆ. ಎಲ್ಲವೂ ಆನ್ಲೈನ್ ಮೂಲಕವೇ ನಡೆಯುತ್ತಿದೆ.
ಟೆಲಿಫೋನ್ ಮುಖಾಂತರ ಮಾತನಾಡಿ, ವಾಟ್ಸ್ಆ್ಯಪ್ ಮುಖಾಂತರ ರೋಗಿಯ ಚಿತ್ರ ಕಳುಹಿಸಿ, ವೀಡಿಯೊ ಕಾಲ್ ಮುಖಾಂತರ ಚರಿತ್ರೆ ಪಡೆದು ಕಂಪ್ಯೂಟರ್ ಮುಖಾಂತರ ಔಷಧಿ ನೀಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ರೋಗಿ ಮತ್ತು ವೈದ್ಯರ ನಡುವಿನ ಆತ್ಮೀಯತೆ, ಸಂಬಂಧ ಮತ್ತು ಒಟನಾಟ ಮೊದಲಿನಂತಿಲ್ಲ. ಎಲ್ಲವೂ ವ್ಯಾಪಾರೀಕರಣವಾಗಿದೆ. ಈಗ ವೈದ್ಯ ಮತ್ತು ರೋಗಿ ನಡುವೆ ಕೇವಲ ವ್ಯಾವಹಾರಿಕ ಸಂಬಂಧವಾಗಿ ಬದಲಾಗುತ್ತಿದೆ. ಒಬ್ಬ ರೋಗಿ ಒಂದೇ ವೈದ್ಯನ ಬಳಿ ಹೋಗುವುದಿಲ್ಲ. ನಾಲ್ಕು ವೈದ್ಯರನ್ನು ಸಂದರ್ಶಿಸಿ, ತಮಗಿಷ್ಟವಾದ ತಮ್ಮ ಅಭಿರುಚಿಗೆ ಹೊಂದುವ ವೈದ್ಯರನ್ನು ಆಯ್ಕೆ ಮಾಡಿಕೊಳ್ಳುವಷ್ಟು ಸ್ವಾತಂತ್ರ್ಯವನ್ನು ಹೊಂದಿದ್ದಾನೆ. ತಮಗೆ ವೈದ್ಯರು ನೀಡಿದ ಚಿಕಿತ್ಸೆ ಹಿತವಾಗಿಲ್ಲ ಅಥವಾ ತೃಪ್ತಿಕರವಾಗಿಲ್ಲ ಎಂದಲ್ಲಿ ವೈದ್ಯರನ್ನು ಕೋರ್ಟಿನ ಕಟೆಕಟೆಗೂ ಎಳೆದು ತರುವ ಸಾಮರ್ಥ್ಯ ಹೊಂದಿದ್ದಾನೆ. ಅಲ್ಲಿಯವರೆಗೂ ಕಾಯುವ ವ್ಯವಧಾನ ಇಲ್ಲದಿದ್ದಲ್ಲಿ ತಕ್ಷಣವೇ ವೈದ್ಯರ ಮೇಲೆ ದಾಳಿ ಮಾಡಿ ತನ್ನ ತೀಟೆ ತೀರಿಸಿಕೊಳ್ಳುವಷ್ಟು ಸ್ವೇಚ್ಛಾಚಾರವನ್ನು ರೋಗಿ ಮತ್ತು ಆತನ ಸಂಬಂಧಿಕರು ಹೊಂದಿರುವುದು ಅಪಾಯಕಾರಿ ಬೆಳವಣಿಗೆ. ಕೊನೆಮಾತು
ವೈದ್ಯರಿಗೆ ಸಮಾಜ ಉನ್ನತ ಸ್ಥಾನವನ್ನು ನೀಡಿದೆ. ವೈದ್ಯಕೀಯ ಜಗತ್ತಿನಲ್ಲಿ ವೇಗ ಗತಿಯಿಂದ ಆಗುತ್ತಿರುವ ಆವಿಷ್ಕಾರ ಮತ್ತು ಸಂಶೋಧನೆಗಳು ರೋಗ ಪತ್ತೆ ಹಚ್ಚುವಲ್ಲಿ ಮತ್ತು ರೋಗಿಯ ಚಿಕಿತ್ಸೆಯಲ್ಲಿ ಹೊಸ ಹಾದಿಯನ್ನು ತೆರೆದಿರಿಸಿದೆ. ವೈದ್ಯರು, ರೋಗದಿಂದ ನರಳುತ್ತಿರುವ ರೋಗಿಯು ತೋರ್ಪಡಿಸುವ ಲಕ್ಷಣ, ಪೂರ್ವಪರ ಇತಿಹಾಸ, ವೈಯಕ್ತಿಕ ಚಟುವಟಿಕೆಗಳು ಆತನ ಜೀವನ ಶೈಲಿ, ಉದ್ಯೋಗ, ಆರ್ಥಿಕ ಸ್ಥಿತಿಗಳ ಎಲ್ಲಾ ವಿವರಗಳನ್ನು ಪಡೆದು ಆತನ ಆಮೂಲಾಗ್ರ ಪರೀಕ್ಷೆ ಮಾಡಿ ಅತೀ ಅಗತ್ಯವಿರುವ ಪ್ರಾಯೋಗಿಕ ಮತ್ತು ರಕ್ತ ಪರೀಕ್ಷೆಗಳನ್ನು ಮಾಡಿ ಮಾನವೀಯ ಅನುಕಂಪದೊಂದಿಗೆ ಚಿಕಿತ್ಸೆ ನೀಡುತ್ತಾರೆ. ಅಂತಹ ವೈದ್ಯರೇ ಸಮಾಜದಲ್ಲಿ ಹೆಚ್ಚಿನ ಗೌರವ, ಪ್ರೀತಿ, ಆದರ ಮತ್ತು ಮನ್ನಣೆ ಗಳಿಸುತ್ತಾರೆ. ವೈದ್ಯ ರೋಗಿಗೆ ಔಷಧ ನೀಡುವಾಗ ಔಷಧಿಗಳ ಅಡ್ಡ ಪರಿಣಾಮದ ಬಗ್ಗೆಯೂ ಒಂದು ಕಣ್ಣು ಇಡಲೇ ಬೇಕು. ರೋಗಿಯನ್ನು ಕೇವಲ ರೋಗಿಯಾಗಿ ನೋಡದೆ ಒಬ್ಬ ಮನುಷ್ಯನನ್ನಾಗಿ ನೋಡಿ ರೋಗಿಗೆ ಚಿಕಿತ್ಸೆ ನೀಡಿದಲ್ಲಿ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗುವುದರಲ್ಲಿ ಸಂದೇಹವೇ ಇಲ್ಲ. ಒಬ್ಬ ವೈದ್ಯರ ಚಿಕಿತ್ಸೆ ಪರಿಣಾಮಕಾರಿಯಾಗಬೇಕಾದಲ್ಲಿ ನಂಬಿಕೆ ಬಹಳ ಮುಖ್ಯ ಭೂಮಿಕೆ ವಹಿಸುತ್ತದೆ. ಈ ನಿಟ್ಟಿನಲ್ಲಿ ವೈದ್ಯ ಮತ್ತು ರೋಗಿಗಳು ಇಬ್ಬರೂ ತಮ್ಮನ್ನು ಪುನರ್ ವಿಮರ್ಶಿಸಿಕೊಳ್ಳಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವಿದ್ದೇವೆ. ಬಂದ ಎಲ್ಲಾ ರೋಗಿಗಳು ಜೀವ ಉಳಿಸಲು ಸಾಧ್ಯವಿಲ್ಲ ಎಂಬ ಕಟುಸತ್ಯವನ್ನು ರೋಗಿಗಳ ಕಡೆಯವರು ಅರಿಯಬೇಕು. ಹಾಗೆಯೇ ತನ್ನ ಬಳಿ ಬರುವ ಎಲ್ಲಾ ರೋಗಿಗಳಿಗೆ ತಿಳಿ ಹೇಳಿ ವಾಸ್ತವ ಸ್ಥಿತಿಯನ್ನು ಅರಿವು ಮೂಡಿಸುವ ಕೆಲಸ ವೈದ್ಯ ಮಾಡಬೇಕು. ಹಾಗಾದಲ್ಲಿ ಮಾತ್ರ ವೈದ್ಯ ರೋಗಿಯ ಸಂಬಂಧ ಮೊದಲಿನಂತಾಗಿ ಒಂದು ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗಬಹುದು.