‘ದ ಟೆಲಿಗ್ರಾಫ್’ ಮತ್ತು ನಾನು
1982 ಜುಲೈ 8ರಂದು ‘ದ ಟೆಲಿಗ್ರಾಫ್’ ಪತ್ರಿಕೆಯ ಮೊದಲ ಸಂಚಿಕೆ ಹೊರಬಂದಾಗ ನಾನು ನೆಮ್ಮದಿ ಮತ್ತು ಉತ್ಸಾಹದಿಂದ ಬರಮಾಡಿಕೊಂಡೆ. ನಮ್ಮ ಕಾಲೇಜಿನ ಆವರಣದಲ್ಲಿ ಪತ್ರಿಕೆಗಳನ್ನು ವಿತರಿಸಿದ ಯುವಕನೂ ನನ್ನಷ್ಟೇ ಉತ್ಸಾಹದಲ್ಲಿದ್ದ. ಆ ಯುವಕ ಪತ್ರಿಕೆಯನ್ನು ಬೀಸುತ್ತಾ ‘ಟೆಲಿಗ್ರಾಮ್! ಟೆಲಿಗ್ರಾಮ್!’ ಎಂದು ಹೇಳುತ್ತಾ ನಮ್ಮ ಹಾಸ್ಟೆಲ್‌ಗೆ ಬಂದ (ಪತ್ರಿಕೆಯನ್ನು ‘ಉತ್ಪನ್ನ’ ಎಂಬುದಾಗಿ ಭಾವಿಸುವ ಹಂತಕ್ಕೆ ಆಗ ನಾವಿನ್ನೂ ಬಂದಿರಲಿಲ್ಲ). ಅದೊಂದು (‘ಟೆಲಿಗ್ರಾಫ್’ನ್ನು ‘ಟೆಲಿಗ್ರಾಮ್’ ಎಂದು ಕರೆದದ್ದು) ಅಪ್ಯಾಯಮಾನ ತಪ್ಪಾಗಿತ್ತು. ಈಗಲೂ ನನ್ನ ಒಂದು ಮನಸ್ಸು ಈ ಪತ್ರಿಕೆಯನ್ನು ‘ಟೆಲಿಗ್ರಾಮ್’ ಅಲ್ಲದೆ ಬೇರೆ ಹೆಸರಿನಿಂದ ಕರೆಯುವುದನ್ನು ಯೋಚಿಸುವುದೂ ಇಲ್ಲ!
ನಾನು ಉತ್ತರ ಭಾರತದಲ್ಲಿ ಬೆಳೆದೆನಾದರೂ, ನಮ್ಮ ಮನೆಗೆ ಬರುತ್ತಿದ್ದದ್ದು ಅಂದು ಕಲ್ಕತ್ತಾ ಎಂದು ಕರೆಯಲ್ಪಡುತ್ತಿದ್ದ ಶ್ರೇಷ್ಠ ನಗರದಲ್ಲಿ ಪ್ರಧಾನ ಕಚೇರಿ ಹೊಂದಿದ್ದ ಪತ್ರಿಕೆ ‘ದ ಸ್ಟೇಟ್ಸ್‌ಮನ್’. ಅದರ ಪ್ರಧಾನ ಆವೃತ್ತಿ ಪ್ರಕಟಗೊಳ್ಳುತ್ತಿದ್ದದ್ದು ಬ್ರಿಟಿಷ್ ಭಾರತದ ಮೊದಲ ರಾಜಧಾನಿಯಲ್ಲಿ. ಆದರೂ, ಅದರ ಸಣ್ಣ ಉಪ ಆವೃತ್ತಿಯೊಂದು ಬ್ರಿಟಿಷ್ ರಾಜ್‌ನ ಎರಡನೇ ಹಾಗೂ ಕೊನೆಯ ರಾಜಧಾನಿ ದಿಲ್ಲಿಯಲ್ಲಿ ಪ್ರಕಟಗೊಳ್ಳುತ್ತಿತ್ತು. ಇದೇ ದಿಲ್ಲಿ ಆವೃತ್ತಿಯ ಪತ್ರಿಕೆಯು ಡೆಹ್ರಾಡೂನ್‌ನಲ್ಲಿರುವ ನಮ್ಮ ಮನೆಗೆ ಬರುತ್ತಿತ್ತು. ಪತ್ರಿಕೆಯು ರಸ್ತೆ, ರೈಲು ಮತ್ತು ಅಂತಿಮವಾಗಿ ಸೈಕಲ್‌ನಲ್ಲಿ ಮಾನವ ಕಾಲುಗಳು ಮತ್ತು ಕೈಗಳ ಮೂಲಕ ನಮ್ಮ ಮನೆ ತಲುಪುವಾಗ ಮಧ್ಯಾಹ್ನವಾಗುತ್ತಿತ್ತು.
ನನ್ನ ತಂದೆ ಮೂರು ಕಾರಣಗಳಿಗಾಗಿ ‘ದ ಸ್ಟೇಟ್ಸ್‌ಮನ್’ನ ಚಂದಾದಾರರಾಗಿದ್ದರು. ಅವುಗಳೆಂದರೆ: 1. ಇಂಗ್ಲಿಷ್‌ನಲ್ಲಿ ಪ್ರಕಟಗೊಳ್ಳುತ್ತಿದ್ದ ಭಾರತೀಯ ಪತ್ರಿಕೆಗಳ ಪೈಕಿ ಅದರಲ್ಲಿ ಕಡಿಮೆ ವ್ಯಾಕರಣ ದೋಷಗಳು ಇದ್ದವು ಎಂದು ಅವರು ಭಾವಿಸಿದ್ದರು; 2. ಅದರಲ್ಲಿ ಕಡಿಮೆ ಮುದ್ರಣ ದೋಷಗಳಿದ್ದವು ಮತ್ತು 3. ಅವರ ಪ್ರೀತಿಯ ಸೋದರಳಿಯನೊಬ್ಬ ಆ ಪತ್ರಿಕೆಯಲ್ಲಿ ಒಮ್ಮೆ ಕೆಲಸ ಮಾಡಿದ್ದರು.
ನಾನು ಕೂಡ ಬೆಳೆಯುತ್ತಾ ಹೋದಂತೆ ಅದೇ ಪತ್ರಿಕೆಯನ್ನು ಇಷ್ಟ ಪಟ್ಟೆ. ಅದಕ್ಕೆ ನನ್ನದೇ ಆದ ಕಾರಣಗಳಿದ್ದವು. ಅವುಗಳೆಂದರೆ: ಅದು ಹೆಚ್ಚೆಚ್ಚು ವಿದೇಶಿ ಸುದ್ದಿಗಳನ್ನು ಕೊಡುತ್ತಿತ್ತು (ಜೇಮ್ಸ್ ಕೌಲಿ ಅವರ ‘ಲಂಡನ್ ಲೆಟರ್’ ಅಂಕಣವನ್ನು ನಾನೀಗಲೂ ಆರ್ದ್ರ ಹೃದಯದಿಂದ ಜ್ಞಾಪಿಸಿಕೊಳ್ಳುತ್ತೇನೆ) ಮತ್ತು ಅದರಲ್ಲಿ ಇಂಗ್ಲಿಷ್ ಗದ್ಯ ನಿಪುಣ ಎಮ್. ಕೃಷ್ಣನ್ ಅಂಕಣಕಾರರಾಗಿದ್ದರು.
ಬಳಿಕ, ನಾನು ದಿಲ್ಲಿ ವಿಶ್ವವಿದ್ಯಾನಿಲಯಕ್ಕೆ ಹೋದಾಗಲೂ ‘ದ ಸ್ಟೇಟ್ಸ್‌ಮನ್’ ಓದುವುದನ್ನು ಮುಂದುವರಿಸಿದೆ. ಆದರೆ, ನಾನು ಅರ್ಥಶಾಸ್ತ್ರದಲ್ಲಿ ಎರಡು ಪದವಿಗಳನ್ನು ಗಳಿಸಿದ ಐದು ವರ್ಷಗಳ ಅವಧಿಯಲ್ಲಿ ಪತ್ರಿಕೆಯು ನಿರಂತರವಾಗಿ ಅವನತಿಯತ್ತ ಸಾಗುತ್ತಿರುವುದನ್ನು ಗಮನಿಸಿದೆ. ಕೃಷ್ಣನ್ ಪತ್ರಿಕೆಯಲ್ಲಿ ಮುಂದುವರಿದಿದ್ದರೂ, ಕೌಲಿ ಬಿಟ್ಟಿದ್ದರು. ನಾನು ಒಂದು ಕಾಲದಲ್ಲಿ ಇಷ್ಟ ಪಟ್ಟು ಓದುತ್ತಿದ್ದ ಹಲವು ಲೇಖಕರೂ ಪತ್ರಿಕೆಯಿಂದ ಹೊರಹೋಗಿದ್ದರು. ಎಲ್ಲಕ್ಕಿಂತ ಹೆಚ್ಚು ಕಳವಳದ ಸಂಗತಿಯೆಂದರೆ, ಸಂಪಾದಕೀಯ ಮತ್ತು ಆಡಳಿತದ ನಡುವಿನ ಗೋಡೆ ಒಡೆದಿತ್ತು. ಪತ್ರಿಕೆಯ ಹಿರಿಯ ಅಧಿಕಾರಿಯೊಬ್ಬರು ಮುಖಪುಟದಲ್ಲಿ ತನ್ನದೇ ಆದ ಅಂಕಣವೊಂದನ್ನು ತನ್ನ ಸಹಿಯೊಂದಿಗೆ ಬರೆಯಲು ಆರಂಭಿಸಿದರು. ಈ ಮೂಲಕ, ಆ ಅಧಿಕಾರಿಯು ಸಂಪ್ರದಾಯ ಮತ್ತು ಔಚಿತ್ಯವನ್ನೇ ಉಲ್ಲಂಘಿಸಿದರು. ಆದರೆ, ಅವರ ಅಂಕಣವನ್ನು ಓದಲು ಸಾಧ್ಯವಾಗುತ್ತಿರಲಿಲ್ಲ.
1980ರಲ್ಲಿ, ನಾನು ಸಮಾಜಶಾಸ್ತ್ರದಲ್ಲಿ ಡಾಕ್ಟರೇಟ್ ಮಾಡಲು ಕಲ್ಕತ್ತಾಗೆ ಹೋದೆ. ನಾನು ಹೊಸದಿಲ್ಲಿಯಲ್ಲೇ ಉಳಿದಿದ್ದರೆ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಚಂದಾದಾರನಾಗುತ್ತಿದ್ದೆ. ಆ ಪತ್ರಿಕೆಯು ಕಲ್ಕತ್ತಾ ಆವೃತ್ತಿಯನ್ನು ಹೊಂದಿರಲಿಲ್ಲ. ಹಾಗಾಗಿ, ನಾನು ‘ದ ಸ್ಟೇಟ್ಸ್‌ಮನ್’ ನ್ನೇ ಮುಂದುವರಿಸಬೇಕಾಯಿತು. ಅದು ಆಗ ಮರಣಶಯ್ಯೆಯಲ್ಲಿತ್ತು. ಆದರೂ, ಪ್ರತಿದಿನ ಮಾರುಕಟ್ಟೆಗೆ ಬರುತ್ತಿತ್ತು.
1982 ಜುಲೈ 8ರಂದು ‘ದ ಟೆಲಿಗ್ರಾಫ್’ ಪತ್ರಿಕೆಯ ಮೊದಲ ಸಂಚಿಕೆ ಹೊರಬಂದಾಗ ನಾನು ನೆಮ್ಮದಿ ಮತ್ತು ಉತ್ಸಾಹದಿಂದ ಬರಮಾಡಿಕೊಂಡೆ. ನಮ್ಮ ಕಾಲೇಜಿನ ಆವರಣದಲ್ಲಿ ಪತ್ರಿಕೆಗಳನ್ನು ವಿತರಿಸಿದ ಯುವಕನೂ ನನ್ನಷ್ಟೇ ಉತ್ಸಾಹದಲ್ಲಿದ್ದ. ಆ ಯುವಕ ಪತ್ರಿಕೆಯನ್ನು ಬೀಸುತ್ತಾ ‘ಟೆಲಿಗ್ರಾಮ್! ಟೆಲಿಗ್ರಾಮ್!’ ಎಂದು ಹೇಳುತ್ತಾ ನಮ್ಮ ಹಾಸ್ಟೆಲ್‌ಗೆ ಬಂದ (ಪತ್ರಿಕೆಯನ್ನು ‘ಉತ್ಪನ್ನ’ ಎಂಬುದಾಗಿ ಭಾವಿಸುವ ಹಂತಕ್ಕೆ ಆಗ ನಾವಿನ್ನೂ ಬಂದಿರಲಿಲ್ಲ). ಅದೊಂದು (‘ಟೆಲಿಗ್ರಾಫ್’ನ್ನು ‘ಟೆಲಿಗ್ರಾಮ್’ ಎಂದು ಕರೆದದ್ದು) ಅಪ್ಯಾಯಮಾನ ತಪ್ಪಾಗಿತ್ತು. ಈಗಲೂ ನನ್ನ ಒಂದು ಮನಸ್ಸು ಈ ಪತ್ರಿಕೆಯನ್ನು ‘ಟೆಲಿಗ್ರಾಮ್’ ಅಲ್ಲದೆ ಬೇರೆ ಹೆಸರಿನಿಂದ ಕರೆಯುವುದನ್ನು ಯೋಚಿಸುವುದೂ ಇಲ್ಲ!
‘ಟೆಲಿಗ್ರಾಫ್’ ಪತ್ರಿಕೆಯನ್ನು ನೋಡಿದಾಗ ನನಗೆ ಮೊದಲ ಬಾರಿ ಅನಿಸಿದ್ದು, ಅದನ್ನು ಎಷ್ಟು ಸೊಗಸಾಗಿ ಸೃಷ್ಟಿಸಲಾಗಿದೆ ಎಂದು. ನನ್ನ ಸೌಂದರ್ಯ ಪ್ರಜ್ಞೆಯು ಹಿಂದೆ ನಿಷ್ಕ್ರಿಯವಾಗಿತ್ತು. ಕೆಲವು ವರ್ಷಗಳ ಹಿಂದೆ ಅಹ್ಮದಾಬಾದ್‌ನಲ್ಲಿ ಗ್ರಾಫಿಕ್ ಡಿಸೈನ್ ಕಲಿಯುತ್ತಿದ್ದ ಬೆಂಗಳೂರಿನ ಹುಡುಗಿಯೊಬ್ಬಳೊಂದಿಗಿನ ಸ್ನೇಹವು ನನ್ನ ಸೌಂದರ್ಯ ಪ್ರಜ್ಞೆಯನ್ನು ಬಡಿದೆಬ್ಬಿಸಿತ್ತು. ಆದರೆ, ಈಗ ಆ ಸಂಬಂಧದ ಸಹಾಯವಿಲ್ಲದೆಯೇ, ‘ದ ಸ್ಟೇಟ್ಸ್‌ಮನ್’ ಮಾತ್ರವಲ್ಲ, ‘ಟೈಮ್ಸ್ ಆಫ್ ಇಂಡಿಯಾ’ ಮತ್ತು ‘ಇಂಡಿಯನ್ ಎಕ್ಸ್‌ಪ್ರೆಸ್’ಗಿಂತಲೂ ‘ದ ಟೆಲಿಗ್ರಾಫ್’ ಹಿಡಿಯಲು, ಅನುಭವಿಸಲು ಮತ್ತು ನೋಡಲು ಹೆಚ್ಚು ಆಕರ್ಷಕವಾಗಿದೆ ಎನ್ನುವುದನ್ನು ಮನಗಾಣಲು ನನಗೆ ಸಾಧ್ಯವಾಗಿತ್ತು. ‘ದ ಟೆಲಿಗ್ರಾಫ್’ನ ಮುದ್ರಣವು ಆ ಕಾಲದ ಇತರ ಯಾವುದೇ ಭಾರತೀಯ ಪತ್ರಿಕೆಗಿಂತ ನೋಡಲು ಉತ್ತಮವಾಗಿತ್ತು ಮತ್ತು ಓದಲು ಸುಲಭವಾಗಿತ್ತು. ಪತ್ರಿಕೆಯ ಹೆಸರು ಎದ್ದು ಕಾಣುತ್ತಿತ್ತಾದರೂ, ‘ಮುಖಕ್ಕೆ ರಾಚುವಂತಿರಲಿಲ್ಲ’. ಚಿತ್ರಗಳನ್ನು ಇತರ ಪತ್ರಿಕೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಅತ್ಯುತ್ತಮವಾಗಿ ಬಳಸಲಾಗುತ್ತಿತ್ತು. ಪತ್ರಿಕೆಯ ಬಾಹ್ಯ ರೂಪಕ್ಕೆ ಅದರ ಆಂತರ್ಯವೂ ಸರಿಗಟ್ಟಿದೆ ಎನ್ನುವುದನ್ನು ನಾನು ಶೀಘ್ರವೇ ಕಂಡುಕೊಂಡೆ. ಪತ್ರಿಕೆಯ ವರದಿಗಳು, ಕಾಮೆಂಟರಿಗಳು ಮತ್ತು ಸಂಪಾದಕೀಯಗಳು ಅತ್ಯುತ್ತಮವಾಗಿದ್ದವು.
‘ದ ಟೆಲಿಗ್ರಾಫ್’ನ ಸ್ಥಾಪಕ ತಂಡದಲ್ಲಿ ನನ್ನ ಕಾಲೇಜಿನ ಹಳೆಯ ಸ್ನೇಹಿತ ಪರಂಜಯ್ ಗುಹಾ ತಾಕುರ್ಟ ಇದ್ದರು. ನಾನು ಕೆಲವು ಸಲ ಜೋಕದಲ್ಲಿರುವ ನನ್ನ ಇನ್‌ಸ್ಟಿಟ್ಯೂಟ್‌ನಿಂದ ಪ್ರಫುಲ್ಲ ಸರಕಾರ್ ರಸ್ತೆಯಲ್ಲಿರುವ ಪತ್ರಿಕೆಯ ಕಚೇರಿಗೆ ‘ತಾಕ್’ (ಪರಂಜಯ್ ಗುಹಾ ತಾಕುರ್ಟರನ್ನು ನಾವು ಹೀಗೆ ಕರೆಯುತ್ತಿದ್ದೆವು)ರನ್ನು ನೋಡಲು ಹೋಗುತ್ತಿದ್ದೆ. ಬಸ್, ಟ್ರಾಮ್, ಮಿನಿಬಸ್ ಮತ್ತು ನನ್ನದೇ ಎರಡು ಕಾಲುಗಳ ಮೂಲಕ ಆ ಸುದೀರ್ಘ ಯಾನವನ್ನು ಕೈಗೊಳ್ಳುತ್ತಿದ್ದೆ.
ಪತ್ರಿಕೆಯ ಸುದ್ದಿ ಮನೆಯು ಲವಲವಿಕೆ ಮತ್ತು ಉತ್ಸಾಹದ ಗೂಡಾಗಿತ್ತು. ಅಲ್ಲಿ ‘ದ ಸ್ಟೇಟ್ಸ್‌ಮನ್’ನ ಕೋಟೆಯನ್ನು ಒಡೆದು ‘ದ ಟೆಲಿಗ್ರಾಫ್’ನ್ನು ಕಲ್ಕತ್ತಾದ ನೆಚ್ಚಿನ ಇಂಗ್ಲಿಷ್ ಪತ್ರಿಕೆಯಾಗಿಸಲು ದೃಢ ನಿರ್ಧಾರ ಮಾಡಿರುವ ಯುವಕರ ತಂಡವೊಂದಿತ್ತು. ಪತ್ರಿಕೆಯ ಪ್ರಭಾವವನ್ನು ಭಾರತದಾದ್ಯಂತ ಪಸರಿಸುವ ಯೋಜನೆಯನ್ನೂ ಅವರು ಹೊಂದಿದ್ದರು.
ಪತ್ರಿಕೆಗೆ ಕೊಡಲು ಏನಾದರೂ ಲೇಖನವಿದೆಯೇ ಎಂದು ತಾಕ್ ಕೇಳಿದರು. ಆ ಸಮಯದಲ್ಲಿ ಭಾರತ ಸರಕಾರವು ನೂತನ ಅರಣ್ಯ ಮಸೂದೆಯ ಕರಡನ್ನು ರೂಪಿಸಿತ್ತು. ನಾನು ಅದನ್ನು ಕಟುವಾಗಿ ವಿರೋಧಿಸಿ ಲೇಖನವೊಂದನ್ನು ಬರೆದಿದ್ದೆ. ಸಂಪಾದಕೀಯ ಪುಟದಲ್ಲಿ ಪ್ರಕಟನೆಗಾಗಿ ಲೇಖನವನ್ನು ‘ದ ಟೆಲಿಗ್ರಾಫ್’ಗೆ ಕೊಡುವಂತೆ ತಾಕ್ ನನ್ನನ್ನು ಒತ್ತಾಯಿಸಿದರು. ನಾನು ಹಾಗೆಯೇ ಮಾಡಿದೆ ಹಾಗೂ ಲೇಖನ ಅಂಗೀಕಾರವೂ ಆಯಿತು.
ಆದರೆ ಆ ಲೇಖನ ಪ್ರಕಟಗೊಳ್ಳುವ ಒಂದು ದಿನ ಮೊದಲು, ‘ಕೂಲೀ’ ಚಿತ್ರದ ಚಿತ್ರೀಕರಣದ ವೇಳೆ ಅಮಿತಾಭ್ ಬಚ್ಚನ್ ಗಂಭೀರವಾಗಿ ಗಾಯಗೊಂಡರು. ಭಾರತದ ಅತ್ಯಂತ ಪ್ರಸಿದ್ಧ ಪುರುಷನು (ಆಗ ಪ್ರಧಾನಿ ಮಹಿಳೆಯಾಗಿದ್ದರು) ಸಾವು ಮತ್ತು ಬದುಕಿನ ಹೋರಾಟದಲ್ಲಿರುವಾಗ, ಕೆಲವರು ಮಾತ್ರ ಅರ್ಥೈಸಿಕೊಳ್ಳಬಲ್ಲ ವಿಷಯಕ್ಕೆ ಸಂಬಂಧಿಸಿದ ನನ್ನ ಲೇಖನದ ಪ್ರಕಟನೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಕೊನೆಗೂ, ತಾಕ್‌ರ ಸಲಹೆಯಂತೆ ನಾನು ಅದನ್ನು ‘ಬಿಝ್ನೆಸ್ ಸ್ಟಾಂಡರ್ಡ್’ಗೆ ಕಳುಹಿಸಿದೆ ಹಾಗೂ ಅದು ಆ ಪತ್ರಿಕೆಯಲ್ಲಿ ಪ್ರಕಟವೂ ಆಯಿತು. ‘ಬಿಝ್ನೆಸ್ ಸ್ಟಾಂಡರ್ಡ್’ ಆಗ ‘ದ ಟೆಲಿಗ್ರಾಫ್’ನ ಸಹೋದರ ಪತ್ರಿಕೆಯಾಗಿತ್ತು ಹಾಗೂ ಎರಡೂ ಪತ್ರಿಕೆಗಳ ಮಾಲಕರು ಒಬ್ಬರೇ ಆಗಿದ್ದರು.
ಅಂದು ಅಮಿತಾಭ್ ಬಚ್ಚನ್ ಚಿತ್ರದ ಸೆಟ್‌ನಲ್ಲಿ ಗಾಯಗೊಳ್ಳದೇ ಇದ್ದಿದ್ದರೆ, ನನ್ನ ಲೇಖನವೊಂದು ‘ದ ಟೆಲಿಗ್ರಾಫ್’ ಪತ್ರಿಕೆಯಲ್ಲಿ ಅದು ಹುಟ್ಟಿದ ತಿಂಗಳಲ್ಲೇ ಪ್ರಕಟಗೊಳ್ಳುತ್ತಿತ್ತು. ಅಂತಿಮವಾಗಿ, ನನ್ನ ಮೊದಲ ಲೇಖನ ಆ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು ಒಂದು ದಶಕದ ಬಳಿಕ. ಮಾನವಶಾಸ್ತ್ರಜ್ಞ ವೆರಿಯರ್ ಎಲ್ವಿನ್‌ರ 90ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ನಾನು ಬರೆದ ಲೇಖನವು ಪತ್ರಿಕೆಯಲ್ಲಿ 1992 ಆಗಸ್ಟ್ 29ರಂದು ಪ್ರಕಟಗೊಂಡಿತು. 90ರ ದಶಕದಲ್ಲಿ ನಾನು ಘಟನೆ ಆಧಾರಿತವಾಗಿ ಆ ಪತ್ರಿಕೆಗೆ ಲೇಖನಗಳನ್ನು ಬರೆಯಲು ಆರಂಭಿಸಿದೆ. ಬಹುಷಃ ವರ್ಷಕ್ಕೆ 8 ಅಥವಾ 10 ಲೇಖನಗಳನ್ನು ಬರೆದೆ. ಬಳಿಕ, 2003 ನವೆಂಬರ್ 15ರಂದು ‘ದ ಟೆಲಿಗ್ರಾಫ್’ನಲ್ಲಿ ‘ಪಾಲಿಟಿಕ್ಸ್ ಆ್ಯಂಡ್ ಪ್ಲೇ’ ಎಂಬ ಪಾಕ್ಷಿಕ (ಎರಡು ವಾರಗಳಿಗೊಮ್ಮೆ) ಅಂಕಣವನ್ನು ಆರಂಭಿಸಿದೆ. ಇದು ಅದೇ ಅಂಕಣವಾಗಿದ್ದು, (ನನ್ನ ಲೆಕ್ಕದ ಪ್ರಕಾರ) 483ನೇ ಕಂತಾಗಿದೆ.
ಸುಮಾರು ಎರಡು ದಶಕಗಳ ಕಾಲ ‘ದ ಟೆಲಿಗ್ರಾಫ್’ಗೆ ಅಂಕಣವೊಂದನ್ನು ಬರೆಯುವ ಅವಕಾಶ ನನಗೆ ಸಿಕ್ಕಿದೆ. ಈ ಅವಧಿಯಲ್ಲಿ, ಭಾರತದ ಇತರ ಮೂರು ಪತ್ರಿಕೆಗಳಲ್ಲಿಯೂ ನಿಯಮಿತವಾಗಿ ಅಂಕಣಗಳನ್ನು ಬರೆದಿದ್ದೇನೆ. ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವುದರಿಂದ, ಸಂಶೋಧನೆ ಮಾಡಲು ಮತ್ತು ನನ್ನ ಪುಸ್ತಕಗಳನ್ನು ಬರೆಯಲು ನನಗೆ ಸಾಕಷ್ಟು ಸಮಯ ಸಿಗುತ್ತಿಲ್ಲ ಎಂದು ನನಗೆ ಅನಿಸಿದಾಗ, ನಾನು ಒಂದರ ನಂತರ ಒಂದರಂತೆ ಇತರ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವುದನ್ನು ನಿಲ್ಲಿಸಿದೆ. ಆದರೆ, ‘ದ ಟೆಲಿಗ್ರಾಫ್’ನೊಂದಿಗಿನ ನನ್ನ ಸಂಬಂಧವನ್ನು ಮುಂದುವರಿಸಿದೆ. ಅಂಕಣಗಳನ್ನು ಬರೆಯಲು ವಿದೇಶಿ ಪತ್ರಿಕೆಗಳಿಂದ ಬಂದ ಆಹ್ವಾನಗಳನ್ನೂ ತಿರಸ್ಕರಿಸಿದ್ದೇನೆ. ನನ್ನೆಲ್ಲ ಶಕ್ತಿಯನ್ನು ಈ ಅಂಕಣಕ್ಕೆ ಧಾರೆಯೆರೆಯಲು ತೀರ್ಮಾನಿಸಿದ್ದೇನೆ.
ಓರ್ವ ಓದುಗನಾಗಿ, ‘ದ ಟೆಲಿಗ್ರಾಫ್’ ಹಲವು ಕಾರಣಗಳಿಗೆ ನನ್ನ ಮೊದಲ ಆಯ್ಕೆಯ ಪತ್ರಿಕೆಯಾಗಿದೆ. ಕೆಲವು ಕಾರಣಗಳನ್ನು ಹೆಸರಿಸುವುದಾದರೆೆ: ಪತ್ರಿಕೆಯ ಬರಹದ ಚೈತನ್ಯ ಮತ್ತು ಜೀವಂತಿಕೆ, ಅದರ ಅಂಕಣಕಾರರ ವೈಚಾರಿಕ/ಸೈದ್ಧಾಂತಿಕ ವ್ಯಾಪ್ತಿ, ಪ್ರತೀ ವಾರ ಒಂದು ಇಡೀ ಪುಟವನ್ನು ಪುಸ್ತಕಗಳಿಗಾಗಿ ಮೀಸಲಿಡುವ ಅದರ ನಿಲುವು ಮತ್ತು ಅದರ ತಲೆಬರಹಗಳಲ್ಲಿನ ವಿನೋದ ಮತ್ತು ತುಂಟತನ. ಅದೂ ಅಲ್ಲದೆ, ‘ದ ಟೆಲಿಗ್ರಾಫ್’ ಈ ದೇಶದಲ್ಲಿ ಮುದ್ರಣವಾಗುವ ಇತರ ಎಲ್ಲ ಪತ್ರಿಕೆಗಳಿಗಿಂತ ನೋಡಲು ಹೆಚ್ಚು ಹಿತವಾಗುತ್ತದೆ.
ಓರ್ವ ಅಂಕಣಕಾರನಾಗಿ ‘ದ ಟೆಲಿಗ್ರಾಫ್’ನ್ನು ನಾನು ಯಾಕೆ ವಿಶೇಷವಾಗಿ ಇಷ್ಟಪಡುತ್ತೇನೆ ಎನ್ನುವುದನ್ನೂ ನಾನಿಲ್ಲಿ ವಿವರಿಸಬೇಕಾಗಿದೆ. ಅದಕ್ಕೆ ಮೂರು ಕಾರಣಗಳಿವೆ. ಆ ಕಾರಣಗಳನ್ನು ಪ್ರಾಮುಖ್ಯತೆಯ ಆಧಾರದಲ್ಲಿ ಕೆಳಗಿನಿಂದ ಮೇಲಕ್ಕೆ ವಿವರಿಸಿದ್ದೇನೆ. ಮೊದಲನೆಯದು, ಇತರ ಹೆಚ್ಚಿನ ಭಾರತೀಯ ಮುದ್ರಣ ಸಂಸ್ಥೆಗಳಂತಲ್ಲದೆ, ‘ದ ಟೆಲಿಗ್ರಾಫ್’ ತನ್ನ ಲೇಖಕರಿಗೆ ನಿಯಮಿತವಾಗಿ ಸಂಭಾವನೆ ನೀಡುತ್ತದೆ. ಎರಡನೆಯದು, ಓರ್ವ ವಿದ್ವಾಂಸನಾಗಲು ನನಗೆ ಅವಕಾಶ ನೀಡಿದ್ದು ಕಲ್ಕತ್ತಾ ಆಗಿರುವುದರಿಂದ ಈ ನಗರಕ್ಕೆ (ಮತ್ತು ವೈಚಾರಿಕ ಸಂಸ್ಕೃತಿಗೆ) ನಾನು ಹೊಂದಿರುವ ಋಣವನ್ನು ಈ ಪತ್ರಿಕೆಯನ್ನು ಓದುವ ಮೂಲಕ ತೀರಿಸಬೇಕೆನ್ನುವುದು ನನ್ನ ಆಶಯವಾಗಿದೆ. ಮೂರನೆಯದು, ಇತರ ಭಾರತೀಯ ಮಾಧ್ಯಮ ಸಂಸ್ಥೆಗಳಂತಲ್ಲದೆ, ಈ ಪತ್ರಿಕೆಯು ತನ್ನ ಅಂಕಣಕಾರರ ನಿಲುವಿಗೆ ಸಂಬಂಧಿಸಿ ಯಾವುದೇ ರೀತಿಯ ರಾಜಕೀಯ ಅಥವಾ ಆರ್ಥಿಕ ಅಥವಾ ಸಾಮಾಜಿಕ ಒತ್ತಡಕ್ಕೆ ಮಣಿಯುವುದಿಲ್ಲ.
ನಾನು ‘ದ ಟೆಲಿಗ್ರಾಫ್’ನಲ್ಲಿ ಅಂಕಣಗಳನ್ನು ಬರೆಯವುದನ್ನು ಮುಂದುವರಿಸಿರುವುದು ಯಾಕೆಂದರೆ, ಭಾರತೀಯ ರಾಜಕಾರಣಿಗಳು, ಉದ್ಯಮಿಗಳು, ಸೇನಾಧಿಕಾರಿಗಳು, ಸರಕಾರಿ ಅಧಿಕಾರಿಗಳು ಮತ್ತು ಕ್ರಿಕೆಟಿಗರ ಬಗ್ಗೆ ಈ ಪತ್ರಿಕೆಯಲ್ಲಿ ನಾನು ನನ್ನ ಅಭಿಪ್ರಾಯಗಳನ್ನು ಬರೆಯಬಹುದಾಗಿದೆ. ನಾನು ಹೇಳುವ ವಿಷಯಗಳು ಸತ್ಯವಾಗಿದ್ದರೂ ಇತರ ಭಾರತೀಯ ನಗರಗಳಲ್ಲಿ ಮುದ್ರಣಗೊಳ್ಳುವ ಬೇರೆ ರೀತಿಯ ಜನರ ಮಾಲಕತ್ವದ ಇಂಗ್ಲಿಷ್ ಪತ್ರಿಕೆಗಳಲ್ಲಿ ಕೆಲವು ಸಲ ಅವುಗಳನ್ನು ಹೇಳಲು ಸಾಧ್ಯವಾಗುವುದಿಲ್ಲ.
‘ದ ಟೆಲಿಗ್ರಾಫ್’ನ ಸ್ವತಂತ್ರ ನಿಲುವು ಅದರ ಸ್ಥಾಪಕ ಅವೀಕ್ ಸರಕಾರ್‌ರಿಂದ ಬಳುವಳಿಯಾಗಿ ಬಂದಿದೆ. ಅವರೊಬ್ಬ ಭಾರತೀಯ ಪತ್ರಿಕೆಯೊಂದರ ಅಪರೂಪದ ಸಂಪಾದಕ/ಮಾಲಕರಾಗಿದ್ದಾರೆ. ಅವರು ತನ್ನನ್ನು ಅರಸಿಕೊಂಡು ಬಂದ ರಾಜ್ಯಸಭಾ ಸ್ಥಾನ ಅಥವಾ ಇತರ ಯಾವುದೇ ಸರಕಾರಿ ಮಾನ್ಯತೆಯನ್ನು ತಿರಸ್ಕರಿಸಿದವರು. ಪತ್ರಿಕೆಯೊಂದು ಎಲ್ಲಾ ಮಾದರಿಗಳ ವೈಚಾರಿಕ ಮತ್ತು ರಾಜಕೀಯ ಅಭಿಪ್ರಾಯಗಳನ್ನು ಪ್ರತಿಫಲಿಸಬೇಕೆಂದು ನಂಬಿದವರು ಅವರು. ಅವರು ಕಡು ಕಮ್ಯುನಿಸ್ಟ್ ವಿರೋಧಿಯಾಗಿದ್ದರೂ, ಪ್ರಮುಖ ಮಾರ್ಕ್ಸ್‌ವಾದಿ ವಿದ್ವಾಂಸರಿಗೂ ಪತ್ರಿಕೆಯಲ್ಲಿ ಅಂಕಣಗಳನ್ನು ಬರೆಯಲು ಅವಕಾಶ ಒದಗಿಸಿದ್ದಾರೆ. ಅವರ ಜೊತೆಗೆ ಸಂಪ್ರದಾಯವಾದಿಗಳು ಮತ್ತು ಪ್ರತಿಗಾಮಿಗಳು ಹಾಗೂ ನನ್ನಂಥ ಪ್ರಗತಿಪರರೂ ಅಂಕಣಗಳನ್ನು ಬರೆಯುತ್ತಿದ್ದಾರೆ.
ಒಂದು ಕಾಲದಲ್ಲಿ, ಬೆಂಗಳೂರಿನಲ್ಲಿರುವ ಕೆ.ಸಿ. ದಾಸ್ ಶಾಖೆಯ ಹೊರಗಿರುವ ಪತ್ರಿಕಾ ಮಾರಾಟಗಾರರಿಂದ ನಾನು ‘ದ ಟೆಲಿಗ್ರಾಫ್’ ನ ಪ್ರತಿಯನ್ನು ಪಡೆಯಲು ಕಾಯುತ್ತಿದ್ದೆ. ಆಗ ಪತ್ರಿಕೆಯು ನನ್ನ ಕಣ್ಣುಗಳಿಗೆ ‘ಸೊಂದೇಶ್’ ಮತ್ತು ‘ರೊಸೊಮಲೈ’ಯಂತೆ ಕಾಣುತ್ತಿತ್ತು. ಬೇಸರದ ಸಂಗತಿಯೆಂದರೆ, ಆ ಪತ್ರಿಕಾ ಮಾರಾಟದ ಅಂಗಡಿ ಮುಚ್ಚಿ ಈಗ ತುಂಬಾ ಸಮಯವಾಯಿತು. ಈಗ ನಾನು ಪತ್ರಿಕೆಯನ್ನು ಆನ್‌ಲೈನ್‌ನಲ್ಲೇ ಓದಬೇಕಾಗಿದೆ. ನಾಲ್ಕು ದಶಕಗಳಿಂದ ನಾನು ಈ ಪತ್ರಿಕೆಯ ಅತ್ಯಂತ ಸಮರ್ಪಿತ ಓದುಗರ ಪೈಕಿ ಒಬ್ಬನಾಗಿದ್ದೇನೆ ಹಾಗೂ ಅದರ ಅರ್ಧದಷ್ಟು ಅವಧಿಯಲ್ಲಿ ಪತ್ರಿಕೆಯ ನಿಯಮಿತ ಲೇಖಕನಾಗಿದ್ದೇನೆ. ಈ ಎರಡೂ ಆಗಿ (ಆದರೆ ಮುಖ್ಯವಾಗಿ ಓದುಗನಾಗಿ) ‘ದ ಟೆಲಿಗ್ರಾಫ್’ಗೆ ನಾನು 40ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತೇನೆ.
ವಿಶೇಷ ಸೂಚನೆ: ‘ದ ಟೆಲಿಗ್ರಾಫ್’ ಪತ್ರಿಕೆಗೆ ನಾನು ಬರೆಯುತ್ತಿರುವ ಈ ಮೂವತ್ತು ವರ್ಷಗಳ ಅವಧಿಯಲ್ಲಿ, ಪತ್ರಿಕೆಯ ಸಂಪಾದಕರು ನನ್ನ ಲೇಖನವನ್ನು ಪ್ರಕಟಿಸಲು ಹಿಂಜರಿದಿರುವುದು ಒಮ್ಮೆ ಮಾತ್ರ. ಅವರು ಪ್ರಕಟಿಸಲು ಹಿಂಜರಿದಿರುವುದು ಇದೇ ಲೇಖನವನ್ನು. ಪತ್ರಿಕೆಯೊಂದಿಗಿನ ನನ್ನ ಬಾಂಧವ್ಯದ ಬಗ್ಗೆ ನಾನು ಬೇರೆ ಕಡೆ ಬರೆಯಬೇಕು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಆದರೆ, ಅದು ಇದೇ ಪತ್ರಿಕೆಯಲ್ಲಿ ಪ್ರಕಟಗೊಳ್ಳಬೇಕೆಂದು ನಾನು ಒತ್ತಾಯಿಸಿದ್ದೇನೆ. ಯಾಕೆಂದರೆ ಈ ಲೇಖನವನ್ನು ‘ಸೆನ್ಸಾರ್‌ಗೊಳಪಡಿಸುವುದು’ ತನಗೆ ಅನಿಸಿದ್ದನ್ನು ಬರೆಯುವ ಅಂಕಣಕಾರನೊಬ್ಬನ ಅಧಿಕಾರದ ಮೇಲೆ ನಡೆಯುವ ದಾಳಿಯಾಗಿದೆ. ಅದೂ ಅಲ್ಲದೆ, ಹಸ್ತಕ್ಷೇಪ ನಡೆಸದಿರುವ ಪತ್ರಿಕೆಯ ಪರಂಪರೆಯ ಉಲ್ಲಂಘನೆಯೂ ಆಗುತ್ತದೆ.