ಹಿರಿಯ ನಟ ಜೋ ಟರ್ಕೆಲ್ ನಿಧನ
ವಾಷಿಂಗ್ಟನ್, ಜು.2: ‘ದಿ ಶೈನಿಂಗ್’, ‘ಬ್ಲೇಡ್ ರನ್ನರ್’ ಸಿನಿಮಾಗಳ ಪಾತ್ರಗಳಿಂದ ಜನಪ್ರಿಯಗೊಂಡಿದ್ದ ಹಾಲಿವುಡ್ನ ಹಿರಿಯ ನಟ ಜೋ ಟರ್ಕಲ್ (94 ವರ್ಷ) ನಿಧನರಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ವೃದ್ಧಾಪ್ಯದ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರನ್ನು ಕ್ಯಾಲಿಫೋರ್ನಿಯಾದ ಸೈಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ ಅವರು ಕೊನೆಯುಸಿರೆಳೆದರು. ಸ್ಟ್ಯಾನ್ಲಿ ಕ್ಯೂಬ್ರಿಕ್ ಅವರ ಸಿನೆಮಾಗಳಲ್ಲಿ ಪೋಷಕ ನಟರಾಗಿ ಖ್ಯಾತಿ ಪಡೆದ ಅವರು, ‘ದಿ ಕಿಲ್ಲಿಂಗ್, ಪಾಥ್ಸ್ ಆಫ್ ಗ್ಲೋರಿ, ದಿ ಶೈನಿಂಗ್’ ಸಿನೆಮಾಗಳಲ್ಲಿ ನಟಿಸಿದ್ದರು.
1982ರ ‘ಬ್ಲೇಡ್ ರನ್ನರ್’ ಸಿನೆಮಾದ ಪಾತ್ರ ಅವರನ್ನು ಜನಪ್ರಿಯಗೊಳಿಸಿತು. ಟರ್ಕೆಲ್ ಟಿವಿ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದರು. ‘ದಿ ಲೈಫ್ ಆ್ಯಂಡ್ ಲೆಜೆಂಡ್ ಆಫ್ ವ್ಯಾಟ್ ಇಯರ್ಪ್, ಸ್ಕೈ ಕಿಂಗ್, ಟೇಲ್ಸ್ ಫ್ರಂ ದಿ ಡಾರ್ಕ್ಸೈಡ್, ದಿ ಲೋನ್ ರೇಂಜರ್, ಆ್ಯಡಂ-12, ಐರನ್ಸೈಡ್, ದಿ ಆ್ಯಂಡಿ ಗ್ರಿಫಿತ್ ಶೋ, ಬೆನ್ ಕೇಸಿ, ದಿ ಅನ್ಟಚೆಬಲ್ಸ್, ಡ್ರ್ಯಾಗ್ನೆಟ್, ಮಿಯಾಮಿ ವೈಸ್, ಬೊನಾನ್ಝ’ ಅವರು ನಟಿಸಿದ್ದ ಕೆಲವು ಟಿವಿ ಧಾರಾವಾಹಿಗಳು. 1997ರಲ್ಲಿ ‘ಬ್ಲೇಡ್ರನ್ನರ್’ ವೀಡಿಯೊಗೇಮ್ಗೆ ಹಿನ್ನೆಲೆ ಧ್ವನಿ ನೀಡಿದ ಬಳಿಕ ನಟನೆಯಿಂದ ನಿವೃತ್ತರಾಗಿದ್ದರು.
ನಟನಾ ಕ್ಷೇತ್ರಕ್ಕೆ ಬರುವ ಮುನ್ನ ತಮ್ಮ 17ನೆಯ ವಯಸ್ಸಿನಲ್ಲಿ ಅಮೆರಿಕ ಸೇನೆಗೆ ಸೇರ್ಪಡೆಗೊಂಡು 2ನೇ ವಿಶ್ವಯುದ್ಧದ ಸಂದರ್ಭ ಯುರೋಪ್ನಲ್ಲಿ ಕಾರ್ಯ ನಿರ್ವಹಿಸಿದ್ದರು.