ವಿಷ ವಿದ್ಯಾಲಯದ ಕ್ಯಾಂಟೀನ್‌ನಲ್ಲಿ ಪಂಕ್ತಿ ವ್ಯವಸ್ಥೆ!
ನುಂಗಲೂರು ವಿಷ ವಿದ್ಯಾಲಯದ ಗುರುಕುಲ ಪತಿ ಹೊಡಿಬಡಿತ್ತಾಯರು ತಮ್ಮ ಮಂಟಪದಲ್ಲಿ ಪದ್ಮಾಸನ ಹಾಕಿ ಕುಳಿತಿರಲು ಅವರ ಪಾದ ಪುಷ್ಪಂಗಳ ಬಳಿ ಕುಳ ಸಚಿವ ಅಧರ್ಮಾಧಿಪತಿಗಳು ಕುಳಿತು ಪಾದಸೇವೆ ಮಾಡುತ್ತಿರುವಾಗ ಅಲ್ಲಿಗೆ ಪತ್ರಕರ್ತ ಎಂಜಲು ಕಾಸಿಯ ಪ್ರವೇಶವಾಯಿತು.
‘‘ನಿಮ್ಮನ್ನು ಯಾರು ಒಳ ಬಿಟ್ಟವರು...ಗುರುಕುಲ ಪತಿಗಳು ಮಡಿಯಲ್ಲಿದ್ದಾರೆ....ವಿಷವಿದ್ಯಾಲಯವನ್ನು ಪ್ರವೇಶಿಸುವ ಮೊದಲು ನಿಮ್ಮ ಪೂರ್ಣ ವಿವರವನ್ನು ಕುಲ, ಜಾತಿ, ನಕ್ಷತ್ರ ಎಲ್ಲ ವಿವರಗಳನ್ನು ಬರೆದು ಅದನ್ನು ಕಂಪ್ಯೂಟರ್‌ನಲ್ಲಿ ಹಾಕಿ, ಬಳಿಕ ನಮ್ಮ ಪತಿಗಳು ನೀವು ಒಳಬರುವವರೋ ಅಲ್ಲವೋ ಎನ್ನುವುದನ್ನು ನಿರ್ಧರಿಸುತ್ತಾರೆ...ಜೊತೆಗೆ ಸಮಾನ ಪಂಕ್ತಿಯಲ್ಲಿ ತಿಂಡಿ ತಿನ್ನಬಹುದಾದವರೋ ಅಲ್ಲವೋ ಎನ್ನುವುದನ್ನು ಗುರುತಿಸುತ್ತಾರೆ....’’ ಎಂದು ಕುಳ ಸಚಿವರು ಆತಂಕದಿಂದ ವಿವರಿಸತೊಡಗಿದರು.
ಪತ್ರಕರ್ತ ಎಂಜಲು ಕಾಸಿ ಅದಾಗಲೇ ನುಂಗಲೂರು ವಿಷ ವಿದ್ಯಾಲಯದೊಳಗೆ ಕಾಲಿಟ್ಟು ಯೂನಿವರ್ಸಿಟಿಯನ್ನು ಕುಲಗೆಡಿಸಿರುವುದರಿಂದ ‘‘ಹೋಗಲಿ ಬಿಡಿ ಕುಳ್ಳ ಸಚಿವರೇ....ಒಳಗೆ ಬಂದಾಯಿತು....ಹೇಗೂ ಶುಚಿಗೊಳಿಸಲೇ ಬೇಕು...ಬಂದ ಕಾರ್ಯ ಮುಗಿಸಿ ಹೋಗಲಿ...’’ ಎಂದು ಹೊಡಿಬಡಿತ್ತಾಯರು ಸಮಾಧಾನಿಸಿದರು.
ಕಾಸಿಗೂ ಸಮಾಧಾನವಾಯಿತು. ‘‘ಸಾರ್....ಇತ್ತೀಚೆಗೆ ನುಂಗಲೂರು ವಿಷ ವಿದ್ಯಾಲಯ ಸುದ್ದಿಯಲ್ಲಿದೆ....ನುಂಗಲೂರು ವಿಷ ವಿದ್ಯಾಲಯವನ್ನು ಶುದ್ಧೀಕರಿಸಿ, ಅದಕ್ಕೆ ಜನಿವಾರ ಹಾಕಿ ಅಪ್ಪಟ ಭಾರತೀಯ ಗುರುಕುಲ ಮಾಡುವ ಉದ್ದೇಶ ಹೊಂದಿದ್ದೀರಂತೆ...ಹೌದೇ?’’ ತನ್ನ ಪ್ರಶ್ನೆ ಮುಂದಿಟ್ಟ.
ಹೊಡಿ ಬಡಿತ್ತಾಯರು ತಡಬಡಿಸದೆ ತಲೆಯಾಡಿಸಿದರು ‘‘ಹೌದು...ಇದು ಭಾರತ ವಿಶ್ವ ಗುರುವಾಗಿರುವ ಸಮಯ. ಆದುದರಿಂದ ನಮ್ಮ ನುಂಗಲೂರು ವಿಶ್ವವಿದ್ಯಾಲಯವನ್ನು ಪ್ರಾತಿನಿಧಿಕವಾಗಿ ವಿಶ್ವಗುರುವಿಗೆ ಪೂರಕವಾದ ವಿಶ್ವವಿದ್ಯಾಲಯವಾಗಿ ಪರಿವರ್ತಿಸುವ ಉದ್ದೇಶವಿದೆ...’’
‘‘ಇತ್ತೀಚೆಗೆ ವಿಶ್ವವಿದ್ಯಾಲಯಕ್ಕೆ ಕೊಲ್ಲಡ್ಕ ಭಟ್ಟರು ಆಗಮಿಸಿರುವ ಬಗ್ಗೆ....ಮಾಧ್ಯಮಗಳಲ್ಲಿ ಸುದ್ದಿಯಾಗಿದೆಯಲ್ಲ’’ ಕಾಸಿ ಪೀಠಿಕೆಯಿಟ್ಟ.
‘‘ನೋಡಿ, ಕೊಲ್ಲುವುದು ಒಂದು ಕಲೆಯೇ ಆಗಿದೆ. ಅಂತಹ ಕಲಾವಿದರಿಗೆ ನಾವು ‘ಕೊಲಾವಿದರು’ ಎಂದು ಬಿರುದು ನೀಡಿ ಗೌರವ ಡಾಕ್ಟರೇಟ್ ನೀಡಲಿದ್ದೇವೆ....‘ಕರಾವಳಿಯ ಸಂರಚನೆಯಲ್ಲಿ ಕೊಲಾವಿದರ ಪಾತ್ರ’ ಎನ್ನುವುದರ ಬಗ್ಗೆ ನಮ್ಮ ವಿದ್ಯಾರ್ಥಿಯೊಬ್ಬರು ಪಿಎಚ್‌ಡಿ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿ ಎಂದು ಅವರನ್ನು ನಾವು ಕರೆಸಿದ್ದೇವೆ....ಸದ್ಯಕ್ಕೆ ವಿಶ್ವವಿದ್ಯಾಲಯಗಳಲ್ಲಿ ಇಂತಹ ಕೊಲಾವಿದರನ್ನು ರೂಪಿಸುವುದಕ್ಕಾಗಿ ವಿಶೇಷ ಪೀಠವೊಂದನ್ನು ಸ್ಥಾಪಿಸಲಿದ್ದೇವೆ....’’ ಹೊಡಿ ಬಡಿತ್ತಾಯರು ವಿವರಿಸಿದರು.
‘‘ನುಂಗಲೂರು ವಿಷ ವಿದ್ಯಾಲಯವನ್ನು ಯಾವ ಬಗೆಯಲ್ಲಿ ಅಭಿವೃದ್ಧಿ ಪಡಿಸಲಿದ್ದೀರಿ...ಅವುಗಳನ್ನು ಸ್ವಲ್ಪ ವಿಷ-ದವಾಗಿ ವಿವರಿಸುತ್ತೀರಾ?’’ ಕಾಸಿ ವಿಷ-ಯ ಮಂಡನೆ ಮಾಡಿದ.
‘‘ಮುಖ್ಯವಾಗಿ ವಿಷ ವಿದ್ಯಾಲಯದ ಕ್ಯಾಂಟೀನ್‌ನಲ್ಲಿ ಪಂಕ್ತಿ ಭೇದವನ್ನು ಆರಂಭಿಸಿ, ಅಲ್ಲಿ ಭಾರತೀಯ ಸಂಸ್ಕೃತಿಯನ್ನು ಪುನರುತ್ಥಾನಗೊಳಿಸುವ ಬಗ್ಗೆ ಯೋಜನೆಯನ್ನು ರೂಪಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಸಮಾನತೆ ಬೆಳೆಯುತ್ತದೆ. ಆಹಾರದ ಕುರಿತಂತೆ ಇನ್ನೊಬ್ಬರ ಭಾವನೆಗಳನ್ನು ಗೌರವಿಸುವುದಕ್ಕಾಗಿ ಇದನ್ನು ಆರಂಭಿಸಿದ್ದೇವೆ....ಹಾಗೆಯೇ ಶಾಲೆ ವಿದ್ಯಾ ದೇಗುಲವಾಗಿರುವುದರಿಂದ, ದೇಗುಲದೊಳಗೆ ಯಾವುದೇ ತಾಮಸ ಆಹಾರವನ್ನು ಸೇವಿಸಿ ಬರದಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗುತ್ತದೆ. ಹೊಟ್ಟೆಯೊಳಗೆ ಯಾವ ಆಹಾರವಿದೆ ಎನ್ನುವುದನ್ನು ತಪಾಸಣೆ ನಡೆಸಲು ಬೇಕಾದ ಯಂತ್ರೋಪಕರಣಗಳನ್ನು ಒದಗಿಸುವ ಬಗ್ಗೆ ಈಗಾಗಲೇ ರಾಜ್ಯಪಾಲರು ಭರವಸೆ ನೀಡಿದ್ದಾರೆ....’’ ಎನ್ನುತ್ತಾ ಹೊಡಿಬಡಿತ್ತಾಯರು ಹೊಟ್ಟೆ ಸವರುತ್ತಾ ಹುಳಿ ತೇಗು ಬಿಟ್ಟರು. ಅದನ್ನು ಪಕ್ಕದಲ್ಲೇ ಕುಳಿತ ಕುಳ ಸಚಿವರು ಆಸ್ವಾದಿಸತೊಡಗಿದರು.
ಕಾಸಿಗೆ ಒಳಗೊಳಗೆ ಇರಿಸು ಮುರಿಸು. ಅವನ ಹೊಟ್ಟೆಯೊಳಗೆ ಮಧ್ಯಾಹ್ನ ಉಂಡ ಕೋಳಿ ಸಾರು ಕೊಕ್ಕೊಕೊಕ್ಕೋ ಎನ್ನುತ್ತಿತ್ತು. ‘‘ವಿಷ ವಿದ್ಯಾಲಯದ ಉದ್ಧಾರಕ್ಕೆ ಇನ್ನೇನೇನು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ....’’ ಕಾಸಿ ವಿಷಯಾಂತರ ಮಾಡಿದ.
‘‘ಪಠ್ಯ ಪರಿಷ್ಕರಣೆಯ ಮೂಲಕ ಹೊಸ ಇತಿಹಾಸವನ್ನೇ ಬರೆದು, ಜನಿವಾರೀಕರಣದ ಹೆಬ್ಬಾಗಿಲನ್ನು ತೆರೆದ, ವೈದಿಕ ಸುವರ್ಣ ಯುಗವನ್ನು ಸ್ಥಾಪಿಸಿದ ವಕ್ರ ಪು-ರೋಹಿತರ ಪ್ರತಿಮೆಯೊಂದನ್ನು ವಿಷ ವಿದ್ಯಾಲಯದ ಅಂಗಳದಲ್ಲಿ ಸ್ಥಾಪಿಸಬೇಕು ಎಂದಿದ್ದೇವೆ....ಮತ್ತು ಅದಕ್ಕೆ ಕುಳ ಸಚಿವರ ನೇತೃತ್ವದಲ್ಲಿ ಪ್ರತಿದಿನ ಪೂಜೆ ಪುನಸ್ಕಾರ ನಡೆಯಲಿದೆ...’’
‘‘ಅಂದರೆ...ಅದರ ಅರ್ಚಕ ಸ್ಥಾನವನ್ನು ಕುಳ್ಳ ಸಚಿವರೇ ವಹಿಸಲಿದ್ದಾರೆಯೇ...?’’ ಕಾಸಿ ಪ್ರಶ್ನಿಸಿದ. ‘‘ಛೆ... ಹಾಗಲ್ಲ....ಕುಳ ಸಚಿವರ ಕುಲ ಪರಿಶೀಲನೆಯ ಬಳಿಕ ಅದನ್ನು ನಿರ್ಣಯಿಸಲಾಗುತ್ತದೆ....ಅದರಲ್ಲಿ ಉತ್ತೀರ್ಣರಾಗದೆ ಇದ್ದರೆ ಅವರನ್ನು ಹಗಲು ರಾತ್ರಿ ಪ್ರತಿಮೆಯ ಕಾವಲಿಗೆ ನಿಲ್ಲಿಸಲಾಗುವುದು. ಕುಳ ಸಚಿವರಿಗೆ ಪ್ರತ್ಯೇಕ ಯೂನಿಫಾರ್ಮನ್ನೂ ನೀಡಲಾಗುವುದು...’’ ಎಂದು ಕುಳ ಸಚಿವರ ಕಡೆಗೆ ಓರೆ ನೋಟ ಬೀರಿದರು. ಕುಳ ಸಚಿವರು ಸಂಭ್ರಮದಿಂದ ಒಳಗೊಳಗೆ ಕುಣಿಯುತ್ತಿದ್ದರು.
‘‘ಸಾರ್...ಗುರುಕುಲ ಶಿಕ್ಷಣ....’’
‘‘ಹಾ... ಹೌದು...ಅದನ್ನು ಮರೆತೇ ಬಿಟ್ಟಿದ್ದೆ. ಆಯಾ ಕುಲಗೋತ್ರಗಳ ವಿದ್ಯಾರ್ಥಿಗಳ ಕುಲಕಸುಬುಗಳಿಗೆ ಅನುಗುಣವಾಗಿ ವಿದ್ಯೆಯನ್ನು ಕಲಿಸಲಾಗುವುದು. ಆ ಮೂಲಕ ವೃತ್ತಿ ಶಿಕ್ಷಣವನ್ನು ಮತ್ತೆ ಮನು ಮೀಸಲಾತಿಯ ಆಧಾರದಲ್ಲಿ ವಿತರಿಸಲಾಗುವುದು. ಯಾಕೆಂದರೆ ವೃತ್ತಿ ಆಯಾ ವಿದ್ಯಾರ್ಥಿಗಳ ಕುಲದ ಹಕ್ಕು. ಅದನ್ನು ಇನ್ನೊಬ್ಬ ವಿದ್ಯಾರ್ಥಿ ಕಸಿಯುವಂತಿಲ್ಲ....ಅದಿರಲಿ...ನಿಮ್ಮದು ಊಟ ಆಯಿತೋ...ಕ್ಯಾಂಟೀನ್‌ನಲ್ಲಿ... ಪ್ರಸಾದ ವ್ಯವಸ್ಥೆ ಮಾಡಲಾಗಿದೆ...ನಿಮ್ಮ ಜಾತಕದ ಝೆರಾಕ್ಸ್ ಪ್ರತಿಯನ್ನು ಅಲ್ಲಿ ತೋರಿಸಿ, ನಿಮ್ಮ ಪಂಕ್ತಿಯನ್ನು ಆರಿಸಿಕೊಂಡು ಪ್ರಸಾದ ಉಂಡು ಹೋಗಿ....’’ ಎನ್ನುತ್ತಾ ಸಂದರ್ಶನ ಮುಗಿಯಿತು ಎನ್ನುವ ಸೂಚನೆ ನೀಡಿದರು.
ಹೊರಗೆ ಬಂದ ಕಾಸಿಗೆ ಕ್ಯಾಂಟೀನ್‌ನ ‘ಪ್ರಸಾದ’ವನ್ನು ನೆನೆದು ವಾಕರಿಕೆ ಬಂದಂತಾಗಿ...ನುಂಗಲೂರಿನ ವಿಶೇಷ ಮೀನಿನ ಹೊಟೇಲು ಹುಡುಕುತ್ತಾ ನುಂಗಲೂರು ಭೇಟಿಯನ್ನು ಸಾರ್ಥಕ ಪಡಿಸಲು ಮುಂದಾದ.
* ಚೇಳಯ್ಯ
chelayya@gmail.com