ನಿರ್ಮಲೀಕರಣ ಸಾರ್ವಜನಿಕ ಜವಾಬ್ದಾರಿಯಾಗಲಿ
ಶ್ರೀಮಂತರ ಮನೆಗಳ ಅಡುಗೆ ಕೋಣೆಯಷ್ಟಿರುವ ನಾಲ್ಕು ಗೋಡೆಗಳನ್ನೇ ತಮ್ಮ ‘ಮನೆ’ ಎಂದು ಭಾವಿಸಿ ಬದುಕುತ್ತಿರುವ ಈ ಶ್ರಮಜೀವಿಗಳ ನಿತ್ಯ ಬದುಕಿನ ಬವಣೆಗಳನ್ನು ನಮ್ಮ ಸಮಾಜ ಅಥವಾ ನಮ್ಮ ಜನಪ್ರತಿನಿಧಿಗಳು ಗಮನಿಸುತ್ತಿದ್ದಾರೆಯೇ ಎಂಬ ಜ್ವಲಂತ ಪ್ರಶ್ನೆಯೂ ನಮ್ಮನ್ನು ಕಾಡಬೇಕಲ್ಲವೇ? ಸಾವಿರಾರು ರೂ. ಮೌಲ್ಯದ ಕಮೋಡುಗಳಿಂದ ಬರುವ ಮಲಮೂತ್ರಾದಿ ತ್ಯಾಜ್ಯವಾಗಲಿ, ಬಯಲು ಶೌಚದ ತ್ಯಾಜ್ಯವಾಗಲಿ ಅಥವಾ ಶ್ರೀಮಂತ/ಮಧ್ಯಮ ವರ್ಗಗಳ ಮನೆಯ ಸಾಕುನಾಯಿಗಳು ರಸ್ತೆ ಬದಿಯಲ್ಲಿ ಬಿಟ್ಟು ಹೋಗುವ ತ್ಯಾಜ್ಯವಾಗಲಿ ಎಲ್ಲವನ್ನೂ ಸ್ವಚ್ಛಗೊಳಿಸಲು ಈ ನತದೃಷ್ಟ ಸಮುದಾಯದ ಕಾರ್ಮಿಕರೇ ಬರಬೇಕಲ್ಲವೇ?
ತಳಮಟ್ಟದ ಜನಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಕಿವಿಗೊಡದಂತಿರುವುದು ನವ ಉದಾರವಾದದ ಆಡಳಿತ ವ್ಯವಸ್ಥೆಯಲ್ಲಿ ಬಹುಪಾಲು ಸ್ವೀಕೃತ ಧೋರಣೆಯಾಗಿದೆ. ಜಾಗತೀಕರಣದ ಜಗತ್ತು ಸೃಷ್ಟಿಸಿರುವ ಒಂದು ಸಾಮಾಜಿಕ ಹಿತವಲಯ ಎಲ್ಲ ವರ್ಗಗಳ ಜನರನ್ನೂ ಆಕ್ರಮಿಸಿಕೊಂಡಿದ್ದು, ಪ್ರಚಲಿತ ಆರ್ಥಿಕ ವ್ಯವಸ್ಥೆಯಲ್ಲಿ ತಮ್ಮ ಬದುಕಿನ ಗೋಡೆಗಳಿಂದಾಚೆಗಿನ ವಾಸ್ತವ ಪ್ರಪಂಚದತ್ತ ನೋಡದಂತೆ ಈ ಹಿತವಲಯದ ಮನಸ್ಸುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಮಾರುಕಟ್ಟೆ ಬಂಡವಾಳ ವ್ಯವಸ್ಥೆಯ ಆರ್ಥಿಕ ಫಲಾನುಭವಿಗಳು ಮತ್ತು ಸಾಂವಿಧಾನಿಕ ಸವಲತ್ತುಗಳ ಸಾಮಾಜಿಕ ಫಲಾನುಭವಿಗಳು ಈ ಕಿವಿಗೊಡದ ಆಳುವ ವರ್ಗಗಳಿಗೆ ಒತ್ತಾಸೆಯಾಗಿ ನಿಲ್ಲುತ್ತಿರುವ ಈ ಹೊತ್ತಿನಲ್ಲಿ, ಸಮಸ್ತ ಜನತೆಯ ಉತ್ತಮ ಆರೋಗ್ಯಕ್ಕಾಗಿ ವಾತಾವರಣವನ್ನು ಸ್ವಚ್ಛವಾಗಿರಿಸಲು ಶ್ರಮಿಸುವ ಸಾವಿರಾರು ಕಾರ್ಮಿಕರು ತಮ್ಮ ನೌಕರಿಯ ಖಾಯಮಾತಿಗಾಗಿ ಹೋರಾಡುತ್ತಿದ್ದಾರೆ. ಭಾರತದ ‘ಆಂದೋಲನ ಜೀವಿಗಳ’ ಪೈಕಿ ಅತಿ ನಿಕೃಷ್ಟ ಬದುಕು ಸಾಗಿಸುತ್ತಿರುವ ಈ ವರ್ಗದ ಜನತೆಗೆ ನಮ್ಮ ಸಮಾಜ ಹೇಗೆ ಸ್ಪಂದಿಸುತ್ತಿದೆ ಎನ್ನುವುದರ ಮೇಲೆ ನಾವು ಎಂತಹ ಸಮಾಜದಲ್ಲಿ ಬದುಕುತ್ತಿದ್ದೇವೆ ಎನ್ನುವುದನ್ನೂ ನಿರ್ಧರಿಸಬಹುದು.
ಏಳು ವರ್ಷಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಹಳ ಮಹತ್ವಾಕಾಂಕ್ಷೆಯೊಂದಿಗೆ ಆರಂಭಿಸಿದ ಸ್ವಚ್ಛ ಭಾರತ ಅಭಿಯಾನ ಸ್ವತಂತ್ರ ಭಾರತದ ಒಂದು ಮಹತ್ವದ ಯೋಜನೆಯೇನೋ ಹೌದು. ಆದರೆ ಈ ಅಭಿಯಾನ ಕೇವಲ ಶೌಚಾಲಯ ನಿರ್ಮಾಣ ಮತ್ತು ಬಳಕೆ, ಬಯಲುಶೌಚದ ನಿವಾರಣೆಗಷ್ಟೇ ಸೀಮಿತವಲ್ಲ ಎನ್ನುವುದು ಸರಕಾರಗಳಿಗೂ ತಿಳಿದಿರಬೇಕು. ದೇಶದ ಭೌತಿಕ ಸ್ವಾಸ್ಥ್ಯವನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಆರೋಗ್ಯ ಸೇವೆಯಷ್ಟೇ ಪ್ರಾಮುಖ್ಯತೆಯನ್ನು ನಿರ್ಮಲೀಕರಣದ ಸೇವೆಯೂ ಪಡೆಯುತ್ತದೆ. ಹಾಗೆಯೇ ನಮ್ಮ ಸಮಾಜದ ಬೌದ್ಧಿಕ ಸ್ವಾಸ್ಥ್ಯವೂ ಮುಖ್ಯವಾಗುತ್ತದೆ. ಬೌದ್ಧಿಕವಾಗಿ ಸಂವೇದನೆ, ಸಂಯಮ ಮತ್ತು ಸೌಜನ್ಯವನ್ನು ಕಳೆದುಕೊಳ್ಳುತ್ತಲೇ ಇರುವ ಸುತ್ತಲಿನ ಸಮಾಜದಲ್ಲಿ ತುಳಿತಕ್ಕೊಳಗಾದ ಒಂದು ಬೃಹತ್ ಸಮುದಾಯ ಇಂದು ತಮ್ಮ ಭವಿಷ್ಯದ ಬದುಕಿಗಾಗಿ ‘ಅಂದೋಲನ ಜೀವಿಗಳಾಗಿದ್ದಾರೆ’.
ದುರಂತ ಎಂದರೆ ಆಧುನಿಕ ಜೀವನ ಶೈಲಿಗೆ ಒಗ್ಗಿಹೋಗಿರುವ ಭಾರತೀಯ ಸಮಾಜದ ಒಂದು ವರ್ಗ ಸ್ವಚ್ಛತೆಯನ್ನೂ ಸಾಪೇಕ್ಷ ನೆಲೆಯಲ್ಲೇ ನೋಡುತ್ತದೆ. ‘‘ನಮ್ಮ ಸುತ್ತಲಿನ ಪರಿಸರ’’ ಎನ್ನುವ ಪರಿಕಲ್ಪನೆ ನಾಲ್ಕಾರು ರಸ್ತೆಗಳ ಬಡಾವಣೆಯನ್ನು ದಾಟಿ ಹೋಗುವುದಿಲ್ಲ. ಮರಗಿಡಗಳು, ಅರಣ್ಯ, ಜನಸಂಪನ್ಮೂಲಗಳನ್ನು ಸಂರಕ್ಷಿಸಲು ಕೆಲವೇ ಪ್ರಗತಿಪರ ಹೋರಾಟಗಾರರಿಗೆ ಗುತ್ತಿಗೆ ನೀಡಿರುವ ಸುಶಿಕ್ಷಿತ ಸಮುದಾಯವೂ ನಿರ್ಲಿಪ್ತತೆಯಿಂದಲೇ ತಮ್ಮ ಸುತ್ತಲೂ ಇರುವ ವಾಯುಮಾಲಿನ್ಯ, ಜಲಮಾಲಿನ್ಯ ಮತ್ತು ನಿತ್ಯಜೀವನದ ತ್ಯಾಜ್ಯ ಮಾಲಿನ್ಯವನ್ನು ಸಹಿಸಿಕೊಳ್ಳುತ್ತಲೇ ಇದೆ. ಹಾಗಾಗಿಯೇ ಈ ಸಮುದಾಯವನ್ನೇ ಪ್ರಧಾನವಾಗಿ ಪ್ರತಿನಿಧಿಸುವ ಭಾರತದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯ ದೃಷ್ಟಿಯಲ್ಲೂ ನಿರ್ಮಲೀಕರಣ ಸಾರ್ವಜನಿಕ ಜವಾಬ್ದಾರಿಯಾಗುವುದಕ್ಕಿಂತಲೂ ಹೆಚ್ಚಾಗಿ, ತಳಸಮುದಾಯದ ಒಂದು ವರ್ಗದ ಜವಾಬ್ದಾರಿಯಾಗಿಬಿಡುತ್ತದೆ. ಈ ತಳಸಮುದಾಯವನ್ನೇ ಪ್ರತಿನಿಧಿಸುವ ಲಕ್ಷಾಂತರ ಸ್ವಚ್ಛತಾ ಕಾರ್ಮಿಕರು ಮೇಲ್ವರ್ಗದ ಜನತೆ ವಾಸಿಸುವ ಪರಿಸರವನ್ನು ಸ್ವಚ್ಛಗೊಳಿಸಲು ಮಲಗುಂಡಿಗೂ ಇಳಿಯುತ್ತಾರೆ, ತ್ಯಾಜ್ಯದ ಗುಡ್ಡಗಳನ್ನೇರುತ್ತಾರೆ, ಹರಿದು ಚೆಲ್ಲಿದ ತ್ಯಾಜ್ಯದ ದುರ್ನಾತವನ್ನೂ ಸಹಿಸಿಕೊಂಡು, ರಸ್ತೆಗಳನ್ನು, ಚರಂಡಿಗಳನ್ನು, ಪಾದಚಾರಿ ರಸ್ತೆಗಳನ್ನು, ಖಾಲಿ ನಿವೇಶನಗಳನ್ನು, ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವುದರಲ್ಲಿ ತಮ್ಮ ಜೀವ ಸವೆಸುತ್ತಿರುತ್ತಾರೆ.
ಸ್ವಚ್ಛ ಭಾರತ ಅಭಿಯಾನವನ್ನು ಹೆಮ್ಮೆಯಿಂದ ವೈಭವೀಕರಿಸುವ ನಾಗರಿಕರು ಈ ಸ್ವಚ್ಛತೆಗಾಗಿ ದಿನನಿತ್ಯ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಶ್ರಮಿಸುವ ಲಕ್ಷಾಂತರ ನಿರ್ಮಲೀಕರಣದ ಕಾಲಾಳುಗಳನ್ನು ಲೆಕ್ಕಿಸುವುದೂ ಇಲ್ಲ ಎನ್ನುವುದು ಕಟು ವಾಸ್ತವ. ಏಕೆಂದರೆ ಹಿತವಲಯದ ಜನತೆಗೆ ಕಸ ಹಾಕುವ ಕಲೆ ತಿಳಿದಿದೆ, ಕಸ ಹೆಕ್ಕುವ ಕಸುಬು ತಿಳಿದಿಲ್ಲ. ರಸ್ತೆ ಬದಿಯಲ್ಲೋ, ಖಾಲಿ ನಿವೇಶನಗಳಲ್ಲೋ, ಕೆರೆಯ ದಡದಲ್ಲೋ ಅಥವಾ ಯಾವುದೋ ಖಾಲಿ ಜಾಗದಲ್ಲೋ ತಮ್ಮ ಮನೆಯ ಎಲ್ಲ ತ್ಯಾಜ್ಯವನ್ನೂ ಕಾರುಗಳಲ್ಲಿ ಬಂದು ಸುರಿಯುವ ಮೇಲ್ವರ್ಗದ ಜನತೆಗೆ ಚೀಲದೊಳಗಿನ ತ್ಯಾಜ್ಯ ಮತ್ತೊಂದು ಜೀವಕ್ಕೆ ಹಾನಿ ಉಂಟುಮಾಡುತ್ತದೆ ಎಂಬ ಪರಿಜ್ಞಾನವೂ ಇರುವುದಿಲ್ಲ. ಏಕೆಂದರೆ ಈ ಬಿಸಾಡಿದ ಕಸ ಹೆಕ್ಕಲೆಂದೇ ನಮ್ಮ ಶ್ರೇಣೀಕೃತ ಜಾತಿ ವ್ಯವಸ್ಥೆ ಒಂದು ಸಮುದಾಯವನ್ನೇ ತಯಾರು ಮಾಡಿಬಿಟ್ಟಿದೆ. ಈ ಸಮುದಾಯವೇ ಮಲಮೂತ್ರಗಳನ್ನು ಬಳಿಯುತ್ತಾ, ಕಸದ ತೊಟ್ಟಿಗಳಲ್ಲಿರುವ ಕೊಳೆತ ಕಸವನ್ನೂ ಬರಿಗೈಯಿಂದಲೇ ಬುಟ್ಟಿಗಳಲ್ಲಿ ತುಂಬಿಸಿಕೊಂಡು ಲಾರಿಗಳಿಗೆ ತುಂಬಿಸುತ್ತಾ, ಎಲ್ಲವನ್ನೂ ಸ್ವಚ್ಛಗೊಳಿಸುತ್ತಾ ಹೋಗುತ್ತದೆ. ಒಂದು ಕಸದ ಲಾರಿ ರಸ್ತೆಯಲ್ಲಿ ಹೋಗುತ್ತಿದ್ದರೆ ಅಕ್ಕಪಕ್ಕದ ವಾಹನ ಸವಾರರು ಮೂಗು ಮುಚ್ಚಿಕೊಂಡು ತುಸುದೂರದಲ್ಲೇ ನಿಂತು ಲಾರಿ ದೂರ ಹೋದ ನಂತರ ಮುಂದುವರಿಯುತ್ತಾರೆ. ಆದರೆ ಆ ದುರ್ನಾತ ಬೀರುವ ಲಾರಿಗೆ ಒಬ್ಬ ಚಾಲಕನಿರುತ್ತಾನೆ, ಕಸದ ರಾಶಿಯ ನಡುವೆಯೇ ರಾಜಾರೋಷದಿಂದ ಕುಳಿತಿರುವ ಒಬ್ಬ ಸ್ವಚ್ಛತಾ ಕಾರ್ಮಿಕ ಇರುತ್ತಾನೆ/ಳೆ ಎನ್ನುವುದನ್ನು ಗಮನಿಸುವ ಗೊಡವೆಗೇ ಹೋಗುವುದಿಲ್ಲ.
ಆಧುನಿಕತೆಯನ್ನು ಮೈಗೂಡಿಸಿಕೊಂಡ ಒಂದು ಸಮಾಜ ಹೀಗೆ ತಮ್ಮ ನಿತ್ಯ ಬದುಕಿನ ಸ್ವಚ್ಛತೆಗಾಗಿ ಶ್ರಮಿಸುವ ಪರಿಚಾರಕರನ್ನು ಅಲಕ್ಷಿಸುತ್ತಿರುವುದರಿಂದಲೇ ಆಡಳಿತಾರೂಢ ಸರಕಾರಗಳೂ ಈ ನಿರ್ಮಲೀಕರಣದ ಕಾಲಾಳುಗಳಿಗೆ ಸುರಕ್ಷತಾ ಉಪಕರಣಗಳನ್ನೂ ನೀಡುವುದಿಲ್ಲ. ಕೈಗಳಿಗೆ ಗವಸು, ಮೂಗು ಮುಚ್ಚಿಕೊಳ್ಳುವ ಮುಖಗವಸು , ತಲೆಗೆ ಧರಿಸಬೇಕಾದ ಒಂದು ಟೊಪ್ಪಿಗೆ, ಕಾಲುಗಳಿಗೆ ಬೇಕಾದ ಉದ್ದನೆಯ ಬೂಟು ಮತ್ತು ಒಂದು ಸಮವಸ್ತ್ರ ಇವೆಲ್ಲವೂ ಈ ಸ್ವಚ್ಛತಾ ಕಾರ್ಮಿಕರ ಮೂಲಭೂತ ಹಕ್ಕು ಎಂದು ತಿಳಿದಿದ್ದರೂ ಈ ಪರಿಕರಗಳನ್ನು ಪೂರೈಸುವ ಇಚ್ಛಾಶಕ್ತಿಯೇ ಇಲ್ಲದೆ ಆಡಳಿತ ವ್ಯವಸ್ಥೆ ಸ್ವಚ್ಛ ನಗರಿಯ ಪ್ರಶಸ್ತಿಗಳನ್ನು ಬಾಚಿಕೊಳ್ಳಲು ಸುಶಿಕ್ಷಿತರ ಎಸ್‌ಎಂಎಸ್ ಸಂದೇಶಗಳನ್ನು ಅವಲಂಬಿಸಿರುತ್ತದೆ. ಸ್ವಚ್ಛ ನಗರಿಯ ಪ್ರಶಸ್ತಿಯ ಗರಿ ಮುಡಿಗೇರಿಸಿಕೊಳ್ಳುವ ಒಂದು ನಗರದ ಆಡಳಿತ ವ್ಯವಸ್ಥೆಗೆ ಈ ಪ್ರಶಸ್ತಿಗೆ ಭಾಜನರಾಗಬೇಕಾದವರು ಯಾರು ಎಂಬ ಪರಿಜ್ಞಾನವೇ ಇರುವುದಿಲ್ಲ. ಏಕೆಂದರೆ ಈ ಪ್ರಶಸ್ತಿ ಪಡೆಯಲೆಂದೇ ಇಡೀ ನಗರವನ್ನು ನಳನಳಿಸುವಂತೆ ಸ್ವಚ್ಛಗೊಳಿಸುವ ಸಾವಿರಾರು ಕಾರ್ಮಿಕರು ಅದೇ ಅನೈರ್ಮಲ್ಯದ ಪ್ರಪಂಚದಲ್ಲಿ ಬದುಕು ಸವೆಸುತ್ತಿರುತ್ತಾರೆ. ವ್ಯಕ್ತಿಗತ ನೆಲೆಯಲ್ಲಿ ಯಾವುದೇ ಸುರಕ್ಷತಾ ಕವಚ ಇಲ್ಲದೆ ನಿರ್ಮಲೀಕರಣದ ಕಾರ್ಯದಲ್ಲಿ ತೊಡಗುವ ಈ ನತದೃಷ್ಟ ಕಾರ್ಮಿಕರು, ಕೌಟುಂಬಿಕ ನೆಲೆಯಲ್ಲೂ ಸೂಕ್ತ ಶೌಚ ವ್ಯವಸ್ಥೆಯಿಲ್ಲದ, ವಸತಿ ಸೌಕರ್ಯಗಳಿಲ್ಲದ, ವಿದ್ಯುತ್ ಸಂಪರ್ಕವಿಲ್ಲದ ಮತ್ತು ಆಧುನಿಕ ಸಮಾಜ ಅನುಭೋಗಿಸುವ ಯಾವುದೇ ಹಿತಕರ ಸವಲತ್ತುಗಳಿಲ್ಲದ ಅನಾರೋಗ್ಯಕರ ವಾತಾವರಣದಲ್ಲಿ ತಮ್ಮ ಜೀವನ ಸವೆಸುತ್ತಾರೆ. ಬಹುಶಃ ಪ್ರಶಸ್ತಿಯ ರೂಪದಲ್ಲಿ ಪಡೆಯುವ ಪಾರಿತೋಷಕವನ್ನು ಸ್ಪರ್ಶಿಸುವ ಅವಕಾಶವನ್ನೂ ಈ ಸಮುದಾಯದ ಜನತೆಗೆ ನೀಡಲು ನಮ್ಮ ಸಮಾಜ ಒಪ್ಪುವುದಿಲ್ಲ !!!!
ಈ ಸಾಮಾಜಿಕ ಮನಸ್ಥಿತಿ ಮತ್ತು ಬೌದ್ಧಿಕ ನಿಷ್ಕ್ರಿಯತೆಯ ನಡುವೆಯೇ ರಾಜ್ಯದ ಸಾವಿರಾರು ಸ್ವಚ್ಛತಾ ಕಾರ್ಮಿಕರು, ನಿರ್ಮಲೀಕರಣದ ಕಾಲಾಳುಗಳು ತಮ್ಮ ನೌಕರಿಯ ಖಾಯಮಾತಿಗಾಗಿ ಕೆಲವು ದಿನಗಳಿಂದ ಹೋರಾಡುತ್ತಿದ್ದಾರೆ. ರಾಜ್ಯ ಸರಕಾರ ಈ ಕಾರ್ಮಿಕರನ್ನು ಖಾಯಂಗೊಳಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಆಶ್ವಾಸನೆ ನೀಡಿದ್ದು, ಒಂದು ಸಮಿತಿಯನ್ನು ರಚಿಸಲು ಮುಂದಾಗಿದೆ. ದಿನನಿತ್ಯ ಸಮಸ್ತ ಸಮಾಜದ ಕಣ್ಣೆದುರಿನಲ್ಲೇ ತಮ್ಮ ಕಾರ್ಯನಿರ್ವಹಿಸುತ್ತಾ, ಎಲ್ಲರ ಕಣ್ಣಿಗೆ ಕಾಣುವಂತೆಯೇ ನಿಕೃಷ್ಟ ಜೀವನ ನಡೆಸುತ್ತಾ, ಅನಾರೋಗ್ಯ ಪೀಡಿತರಾಗಿ, ಶಿಕ್ಷಣವಂಚಿತರಾಗಿ ಬಾಳುತ್ತಿರುವ ಶ್ರಮಜೀವಿಗಳ ಖಾಯಮಾತಿಯ ಬೇಡಿಕೆ ನ್ಯಾಯಯುತವಾದದ್ದೇ ಎನ್ನುವುದಾದರೆ, ವರ್ಷಗಟ್ಟಲೆ ಕಾಲ ಹರಣ ಮಾಡುವ ಸಮಿತಿ, ಆಯೋಗಗಳ ರಚನೆ ಏಕೆ ಬೇಕು ? ಭಾರತವನ್ನು ಸ್ವಚ್ಛ ರಾಷ್ಟ್ರವನ್ನಾಗಿ ಮಾಡುವ ಮಹತ್ವಾಕಾಂಕ್ಷೆ ಹೊಂದಿರುವ ಒಂದು ಆಡಳಿತ ವ್ಯವಸ್ಥೆಗೆ ಈ ಸ್ವಚ್ಛತೆಯನ್ನು ಕಾಪಾಡಲು ಅನಿವಾರ್ಯವಾಗಿ ಬೇಕಾಗುವ ಲಕ್ಷಾಂತರ ದುಡಿಯುವ ಕೈಗಳ ಘನತೆ, ಗೌರವ, ಆತ್ಮರಕ್ಷಣೆ, ಸುಸ್ಥಿರ ಬದುಕು, ಉತ್ತಮ ಆರೋಗ್ಯ ಮತ್ತು ಶಿಕ್ಷಣ ಹಾಗೂ ಹಿತಕರವಾದ ಜೀವನ ಇವೆಲ್ಲವೂ ಪ್ರಥಮ ಆದ್ಯತೆಯಾಗಬೇಕಲ್ಲವೇ?
ಆದರೆ ಸ್ವಚ್ಛ ಭಾರತದ ಬಜೆಟ್ ಅನುದಾನದಲ್ಲಿ ಶೌಚಾಲಯ ನಿರ್ಮಾಣಕ್ಕೆ ಇರುವ ಪ್ರಾಶಸ್ತ್ಯ ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಮಿಕರಿಗೆ ನೀಡಲಾಗಿಲ್ಲ ಎನ್ನುವುದು ವಾಸ್ತವ. ಭಾರತ ಸ್ವಚ್ಛ ಭಾರತದ ಅಭಿಯಾನದಿಂದ ಅತ್ಯಂತ ಸ್ವಚ್ಛ ರಾಷ್ಟ್ರವಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲೂ ಆಗದಂತೆ, ಮಲಗುಂಡಿಯಲ್ಲಿ ಇಳಿದು ಸಾಯುತ್ತಿರುವವರ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಸಫಾಯಿ ಕರ್ಮಚಾರಿ ಆಂದೋಲನದ ಬೆಜವಾಡ ವಿಲ್ಸನ್ ಅವರು ಒದಗಿಸುವ ಮಾಹಿತಿಯ ಅನುಸಾರ ಸ್ವಚ್ಛ ಭಾರತ ಅಭಿಯಾನ ಆರಂಭದಾದ ನಂತರ, 2016ರಿಂದ 2020ರ ಅವಧಿಯಲ್ಲಿ 472 ಸ್ವಚ್ಛತಾ ಕಾರ್ಮಿಕರು ಮಲಗುಂಡಿಗಳನ್ನು ಸ್ವಚ್ಛ ಮಾಡುವಾಗಲೇ ಮೃತಪಟ್ಟಿದ್ದಾರೆ. 2021ರಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ರಾಮದಾಸ್ ಅಠಾವಳೆ ಸಂಸತ್ತಿನಲ್ಲಿ ನೀಡಿದ ಮಾಹಿತಿಯ ಅನುಸಾರವೇ ಸರಕಾರದ ದಾಖಲೆಗಳಲ್ಲಿ 66,692 ಕೈದುಡಿಮೆಯ ನಿರ್ಮಲೀಕರಣ ಕಾರ್ಮಿಕರಿದ್ದಾರೆ. ಇವರ ಪೈಕಿ ಶೇ. 99ರಷ್ಟು ಪರಿಶಿಷ್ಟ ಜಾತಿ ಸಮುದಾಯದವರೇ ಇರುವುದು ಭಾರತದ ಜಾತಿ ವ್ಯವಸ್ಥೆಯಲ್ಲಿ ಅಚ್ಚರಿಯೇನಲ್ಲ. ಏಕೆಂದರೆ ಇದು ಈ ತಳಸಮುದಾಯದ ಕಾಯಕ ಎಂದೇ ನಮ್ಮ ಸಮಾಜವೂ ನಿರ್ಧರಿಸಿದೆ. ಈ ಕಾರ್ಮಿಕರು ಸಂಗ್ರಹಿಸುವ ತ್ಯಾಜ್ಯವನ್ನು ದೂರವಿಡುವಂತೆಯೇ ಈ ಸಮುದಾಯದ ಶ್ರಮಜೀವಿಗಳನ್ನೂ ಭೌತಿಕವಾಗಿ, ಬೌದ್ಧಿಕವಾಗಿ ದೂರ ಇಡುವಂತಹ ಒಂದು ಕ್ರೂರ ಜಾತಿ ವ್ಯವಸ್ಥೆಯನ್ನು ನಾವು ಬೆಳೆಸಿಕೊಂಡೇ ಬಂದಿದ್ದೇವಲ್ಲವೇ ?
ಕಳೆದ ಕೆಲವು ದಿನಗಳಿಂದ ಮುಷ್ಕರನಿರತರಾಗಿರುವ ಈ ಕಾರ್ಮಿಕರ ನಡುವೆ ನಾವು ಜಾತಿ ವ್ಯವಸ್ಥೆಯ ಕರಾಳ ಮುಖವನ್ನು ಕಂಡಂತೆಯೇ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಕ್ರೌರ್ಯವನ್ನೂ ಕಾಣಬಹುದು.ರಾಜ್ಯದಲ್ಲಿ 41,373 ಪೌರ ಕಾರ್ಮಿಕರು ಇದ್ದಾರೆ. ಇವರ ಪೈಕಿ ದಿನನಿತ್ಯ ಕಸ ಸಂಗ್ರಹಿಸುವವರು, ವಾಹನ ಚಾಲಕರು, ಮೇಸ್ತ್ರಿಗಳು, ರಸ್ತೆ ಗುಡಿಸುವವರು ಹೀಗೆ ಹಲವು ವಿಭಾಗಗಳೂ ಇವೆ. ದೀರ್ಘ ಹೋರಾಟದ ನಂತರ ಗುತ್ತಿಗೆದಾರರ ಮುಷ್ಟಿಯಿಂದ ಮುಕ್ತಿ ಪಡೆದ ಈ ಕಾರ್ಮಿಕರಿಗೆ ನೇರ ವೇತನ ಪಾವತಿಯ ಸೌಲಭ್ಯವನ್ನೂ ಒದಗಿಸಲಾಗಿದ್ದು 26,349 ಕಾರ್ಮಿಕರಿಗೆ ನೇರ ವೇತನ ಪಾವತಿಯಾಗುತ್ತಿದೆ. 651 ದಿನಗೂಲಿ ನೌಕರರಿದ್ದಾರೆ. ಒಟ್ಟು ಕಾರ್ಮಿಕರ ಪೈಕಿ 10,527 ಸಿಬ್ಬಂದಿಗೆ ನೌಕರಿ ಖಾಯಂ ಆಗಿದೆ. 2,267 ಕಾರ್ಮಿಕರು ಗುತ್ತಿಗೆಯ ಮೇಲೆ ನೇಮಕಗೊಂಡಿದ್ದಾರೆ. 67 ಕಾರ್ಮಿಕರು ಹೊರಗುತ್ತಿಗೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. (ಟೈಮ್ಸ್ ನೌ ವರದಿ).
ಅಂದರೆ 30 ಸಾವಿರಕ್ಕೂ ಹೆಚ್ಚು ಸ್ವಚ್ಛತಾ ಕಾರ್ಮಿಕರು ಸೇವಾ ಖಾಯಮಾತಿಗಾಗಿ ಹೋರಾಡುತ್ತಿದ್ದಾರೆ. ಇದರರ್ಥ ನಾವು ದಿನನಿತ್ಯ ಎದುರುಗೊಳ್ಳುವ ನಾಲ್ಕು ಜನ ಸ್ವಚ್ಛತಾ ಕಾರ್ಮಿಕರ ಪೈಕಿ ಮೂರು ಜನರು ಅನಿಶ್ಚಿತ ಬದುಕು ಎದುರಿಸುತ್ತಿದ್ದಾರೆ. ಇವರಿಗೆ ಕನಿಷ್ಠ ವೇತನವನ್ನೂ ನೀಡಲಾಗುತ್ತಿಲ್ಲ. ತಾತ್ಕಾಲಿಕ ನೌಕರರಾಗಿಯೇ ದುಡಿಯುವ ಇವರಿಗೆ ಇಎಸ್‌ಐ, ವಿಮೆ, ಭವಿಷ್ಯನಿಧಿ ಮುಂತಾದ ಸವಲತ್ತುಗಳೂ ಲಭಿಸುವುದಿಲ್ಲ. ಸಾಮಾನ್ಯವಾಗಿ ಊರಿನ ಹೊರವಲಯದಲ್ಲಿ ತಮ್ಮದೇ ಆದ ಕಾಲನಿಗಳಲ್ಲಿ ವಾಸಿಸುವ ಈ ಕಾರ್ಮಿಕರ ಮಕ್ಕಳಿಗೆ ಶಾಲಾ ಸೌಲಭ್ಯಗಳೂ ಸಮರ್ಪಕವಾಗಿರುವುದಿಲ್ಲ. ತಮ್ಮ ಭವಿಷ್ಯದ ಬದುಕು ರೂಪಿಸಿಕೊಳ್ಳಲು, ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ಉತ್ತಮ ಆರೋಗ್ಯ ಒದಗಿಸಲು ಈ ಸಾವಿರಾರು ಕಾರ್ಮಿಕರು ಮುಷ್ಕರ ಮಾಡಬೇಕಾಗಿರುವುದೇ ನಮ್ಮ ಆಡಳಿತ ವ್ಯವಸ್ಥೆಯೊಳಗಿನ ನಿರ್ದಾಕ್ಷಿಣ್ಯತೆ ಮತ್ತು ನಿರ್ಲಕ್ಷಕ್ಕೆ ಸಾಕ್ಷಿಯಾಗುತ್ತದೆ. ಮಾನ್ಯ ಮುಖ್ಯಮಂತ್ರಿ ನೀಡಿರುವ ಭರವಸೆ ಈಡೇರುವುದೆಂಬ ವಿಶ್ವಾಸವನ್ನೂ ಈ ಕಾರ್ಮಿಕರು ಕಳೆದುಕೊಂಡಿರುವುದಕ್ಕೆ ಕಾರಣ, ನಮ್ಮ ಸರಕಾರಗಳು ಅಂತಹ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿಲ್ಲ. ಬಾಯಿ ಮಾತಿನ ಭರವಸೆಗಳನ್ನೇ ನಂಬಿ 75 ವರ್ಷಗಳನ್ನು ಕಳೆದಿರುವ ಸ್ವತಂತ್ರ ಭಾರತದಲ್ಲಿ, ರಾಜಕೀಯ ಪಕ್ಷಗಳ ಆಲಂಕಾರಿಕ ಆಶ್ವಾಸನೆಗಳು ತಮ್ಮ ಬಣ್ಣ ಕಳೆದುಕೊಳ್ಳುತ್ತಿವೆ ಎನ್ನುವುದನ್ನು ಈ ಕಾರ್ಮಿಕರು ನಿರೂಪಿಸಿದ್ದಾರೆ.
ಖಾಯಮಾತಿ ಮಾಡುವುದರಿಂದಲೇ ಈ ಬೃಹತ್ ಜನಸಮುದಾಯದ ಸಮಸ್ಯೆಗಳೆಲ್ಲವೂ ಬಗೆಹರಿಯುತ್ತದೆ ಎನ್ನಲಾಗುವುದಿಲ್ಲ. ಏಕೆಂದರೆ ನಿತ್ಯ ಕಸ ಸಂಗ್ರಹಣೆ ಮಾಡುವ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಕಾರ್ಯ ನಿರ್ವಹಿಸುವ ಹಾಗೂ ತ್ಯಾಜ್ಯ ಸಾಗಣೆಯ ವಾಹನವನ್ನು ನಿರ್ವಹಿಸುವ ಸಾವಿರಾರು ಕಾರ್ಮಿಕರಿಗೆ ಆರೋಗ್ಯ ರಕ್ಷಣೆಯ ಕವಚಗಳನ್ನೂ ಸರಕಾರಗಳು ಸಮರ್ಪಕವಾಗಿ ಒದಗಿಸುತ್ತಿಲ್ಲ. ಶ್ರೀಮಂತರ ಮನೆಗಳ ಅಡುಗೆ ಕೋಣೆಯಷ್ಟಿರುವ ನಾಲ್ಕು ಗೋಡೆಗಳನ್ನೇ ತಮ್ಮ ‘ಮನೆ’ ಎಂದು ಭಾವಿಸಿ ಬದುಕುತ್ತಿರುವ ಈ ಶ್ರಮಜೀವಿಗಳ ನಿತ್ಯ ಬದುಕಿನ ಬವಣೆಗಳನ್ನು ನಮ್ಮ ಸಮಾಜ ಅಥವಾ ನಮ್ಮ ಜನಪ್ರತಿನಿಧಿಗಳು ಗಮನಿಸುತ್ತಿದ್ದಾರೆಯೇ ಎಂಬ ಜ್ವಲಂತ ಪ್ರಶ್ನೆಯೂ ನಮ್ಮನ್ನು ಕಾಡಬೇಕಲ್ಲವೇ? ಸಾವಿರಾರು ರೂ. ಮೌಲ್ಯದ ಕಮೋಡುಗಳಿಂದ ಬರುವ ಮಲಮೂತ್ರಾದಿ ತ್ಯಾಜ್ಯವಾಗಲಿ, ಬಯಲು ಶೌಚದ ತ್ಯಾಜ್ಯವಾಗಲಿ ಅಥವಾ ಶ್ರೀಮಂತ/ಮಧ್ಯಮ ವರ್ಗಗಳ ಮನೆಯ ಸಾಕುನಾಯಿಗಳು ರಸ್ತೆ ಬದಿಯಲ್ಲಿ ಬಿಟ್ಟು ಹೋಗುವ ತ್ಯಾಜ್ಯವಾಗಲಿ ಎಲ್ಲವನ್ನೂ ಸ್ವಚ್ಛಗೊಳಿಸಲು ಈ ನತದೃಷ್ಟ ಸಮುದಾಯದ ಕಾರ್ಮಿಕರೇ ಬರಬೇಕಲ್ಲವೇ?
ಕನಿಷ್ಠ ಈ ಪಾಪಪ್ರಜ್ಞೆಯಾದರೂ ನಮ್ಮನ್ನು ಕಾಡದೆ ಹೋದರೆ ನಾವು ಇನ್ನೆಂತಹ ನಾಗರಿಕತೆಯನ್ನು ರೂಢಿಸಿಕೊಂಡಿದ್ದೇವೆ? ಸ್ವಚ್ಛತಾ ಕಾರ್ಮಿಕರು ಅತ್ಯಂತ ಬದ್ಧತೆಯಿಂದ, ನಿಷ್ಠೆಯಿಂದ ತಮಗೆ ದೊರೆತುದನ್ನೇ ಪರಮಾನ್ನ ಎಂದು ಭಾವಿಸಿ ಕರ್ತವ್ಯನಿರತರಾಗಿರುತ್ತಾರೆ. ಅವರ ನಿತ್ಯ ಜೀವನಾವಶ್ಯ ಕನಿಷ್ಠ ಸೌಕರ್ಯಗಳ ಬಗ್ಗೆ ಮತ್ತು ಅವರ ದೈಹಿಕ ಆರೋಗ್ಯವನ್ನು, ಬೌದ್ಧಿಕ ವಿಕಾಸವನ್ನು ಗಮನಿಸಬೇಕು ಎನ್ನುವ ಕನಿಷ್ಠ ವ್ಯವಧಾನವಾದರೂ ನಮ್ಮ ಸಮಾಜದಲ್ಲಿ ಇರಬೇಕಲ್ಲವೇ? ಎಷ್ಟು ಜನಪ್ರತಿನಿಧಿಗಳು, ಅಧಿಕಾರಶಾಹಿಯ ಪರಿಚಾರಕರು, ಆಳುವ ವರ್ಗಗಳ ಫಲಾನುಭವಿಗಳು ಈ ಕುರಿತು ಯೋಚಿಸುತ್ತಿದ್ದಾರೆ? ಒಂದೆಡೆ ಜಾತಿ ತಾರತಮ್ಯ ಮತ್ತು ಸದ್ದಿಲ್ಲದ ದೌರ್ಜನ್ಯ ಮತ್ತೊಂದೆಡೆ ವರ್ಗ ತಾರತಮ್ಯ ಮತ್ತು ನೇರವಾದ ಆರ್ಥಿಕ ಶೋಷಣೆ ಈ ಎರಡಲಗಿನ ಕತ್ತಿಯ ಮೇಲೆ ನಡೆಯುತ್ತಲೇ ನಮ್ಮ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿರಿಸಲು ಬೆವರು ಸುರಿಸುತ್ತಿರುವ ಈ ಶ್ರಮಜೀವಿಗಳೇಕೆ ನಮಗೆ ಗೋಚರಿಸುತ್ತಿಲ್ಲ?
ಈ ಜಟಿಲ ಪ್ರಶ್ನೆಗಳ ನಡುವೆಯೇ ನಾವು, ಅಂದರೆ ನಾಗರಿಕರು ಎಂದು ಬೆನ್ನುತಟ್ಟಿಕೊಳ್ಳುವ ಸಮಸ್ತ ಸಮಾಜ, ಕೆಲವು ದಿನಗಳಿಂದ ತಮ್ಮ ನಿಶ್ಚಿತ ಭವಿಷ್ಯಕ್ಕಾಗಿ ಹೋರಾಡುತ್ತಿರುವ ಸಾವಿರಾರು ಶ್ರಮಜೀವಿಗಳತ್ತ ನೋಡಬೇಕಿದೆ. ರಸ್ತೆಗಳಲ್ಲಿ, ಮನೆಗಳಲ್ಲಿ, ಶ್ರೀಮಂತರ ಕಾಂಪೌಂಡುಗಳಲ್ಲಿ ಕೊಳೆತು ನಾರುವ ಕಸದ ಚೀಲಗಳನ್ನು ನೋಡುವಾಗಲಾದರೂ, ಇವುಗಳ ಹಿಂದೆ ಹಸಿದ ಹೊಟ್ಟೆಗಳಿವೆ, ನಿರ್ವಸಿತ ದೇಹಗಳಿವೆ, ನಿರ್ಗತಿಕ ಕುಟುಂಬಗಳಿವೆ, ಶಿಕ್ಷಣವಂಚಿತ ಕೂಸುಗಳಿವೆ, ಆರೋಗ್ಯ ವಂಚಿತ ಹೆಣ್ಣುಮಕ್ಕಳಿದ್ದಾರೆ, ಸ್ಪರ್ಶವಂಚಿತ ಬೃಹತ್ ಸಮುದಾಯವೇ ಇದೆ ಎನ್ನುವ ಸುಡು ಸತ್ಯವನ್ನು ನಾಗಕರಿತೆಯಿರುವ ಸಮಾಜ ಅರ್ಥಮಾಡಿಕೊಳ್ಳಬೇಕು. ಆಳುವ ವರ್ಗಗಳಿಗೆ, ಆಡಳಿತ ವ್ಯವಸ್ಥೆಗೆ ಇದು ಕೇವಲ ಪರಿಹರಿಸಬೇಕಾದ ಸಮಸ್ಯೆಯಾಗಷ್ಟೇ ಕಾಣುತ್ತದೆ. ಆದರೆ ಸಮಾಜದ ದೃಷ್ಟಿಯಲ್ಲಿ ಇದು ಸಮಸ್ಯೆ ಅಲ್ಲ, ನಾವೇ ನಿರ್ಮಿಸಿಕೊಂಡ ಒಂದು ಸಾಮಾಜಿಕ ವ್ಯವಸ್ಥೆಯ ಮೂಲಕ ನಾವೇ ಹೇರಿಕೊಂಡಿರುವ ಒಂದು ಜವಾಬ್ದಾರಿ. ಹೀಗೆ ಭಾವಿಸಿದಾಗ, ನಮ್ಮಾಳಗಿನ ಪ್ರತಿಯೊಂದು ಮನಸ್ಸೂ ಜಾಗೃತವಾಗಿ, ಈ ಸಾವಿರಾರು ‘ಆಂದೋಲನ ಜೀವಿಗಳಿಗೆ’ ಒತ್ತಾಸೆಯಾಗಿ ನಿಲ್ಲಲು ಸಾಧ್ಯ.