varthabharthi


ಅನುಗಾಲ

ಕಟಕಟೆಯಲ್ಲಿ ನ್ಯಾಯಾಂಗ

ವಾರ್ತಾ ಭಾರತಿ : 7 Jul, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ನ್ಯಾಯಾಂಗವು ತನ್ನ ಮೇಲೆ ಅಂಟಿದ ಕಿಲುಬುಗಳನ್ನು ತೊಳೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಇದರಿಂದಾಗಿ ಇಂದಿಗೂ ನ್ಯಾಯಾಲಯಗಳು ಬಿಟ್ಟರೆ ಮನುಷ್ಯ ಜೀವಕ್ಕೂ, ಜೀವನಕ್ಕೂ ಬೇರೆಡೆ ಬೆಲೆಯಿಲ್ಲವೆಂದಾಗಿದೆ. ಆದರೆ ಇವಿಷ್ಟೇ ಸಾಕೇ? ನ್ಯಾಯಾಲಯಗಳು ಹೇಳಿದುದೆಲ್ಲವೂ ಸರಿಯೆಂದಲ್ಲ. ಆದರೆ ಕಾನೂನು ಎಂಬ ಒಂದು ವಿಚಾರ ಮತ್ತು ವ್ಯವಸ್ಥೆಯಿಲ್ಲದಿದ್ದರೆ ಸಮಾಜಕ್ಕೆ ಚೌಕಟ್ಟೇ ಇರುತ್ತಿರಲಿಲ್ಲ. ಆಗ ಎಲ್ಲವೂ ಎಲ್ಲಕಡೆ ಹರಿಹಂಚಾಗುತ್ತಿತ್ತು. ಸಾಕಷ್ಟು ಯೋಚಿಸಿಯೇ ಸಮಾಜವು ವಿಧಿ-ವಿಧಾನಗಳನ್ನು, ನೀತಿ-ನಿಯಮಗಳನ್ನು ರೂಪಿಸಿದೆ. ಲೋಕ ನ್ಯಾಯದಿಂದ ಸಂಹಿತಾ ನ್ಯಾಯದೆಡೆಗೆ ಸಮಾಜವೂ ದೇಶವೂ ಕಾಲವೂ ಸರಿದಿದೆ. ನ್ಯಾಯದ ಕಲ್ಪನೆ ಬದಲಾಗದಿದ್ದರೂ ಕಾನೂನಿನ ಸ್ವರೂಪವನ್ನು ಕಾಲಕಾಲಕ್ಕೆ ಬದಲಾಯಿಸುವುದು ಅಗತ್ಯ. ಆದರೆ ಮೂಲ ವಿಗ್ರಹದ ಸ್ವರೂಪಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಾದದ್ದು ಪ್ರತಿಯೊಬ್ಬ ಸಾಮಾಜಿಕನ ಕರ್ತವ್ಯ. ಯಾವುದನ್ನೂ ಒಪ್ಪದಿದ್ದರೆ ಸಮಾಜಕ್ಕೆ ಶಿಸ್ತೆಂಬ ಶುಚಿತ್ವವೇ ಇರುವುದಿಲ್ಲ. ಲಾರ್ಡ್ ಡೆನ್ನಿಂಗ್ ಹೇಳಿದ ಮತ್ತು ಬಹುವಾಗಿ ಉಲ್ಲೇಖಿತವಾದ ಒಂದು ಮಾತಿದೆ: ‘‘ನೀನೆಷ್ಟೇ ಎತ್ತರದಲ್ಲಿರು; ಕಾನೂನು ನಿನಗಿಂತ ಎತ್ತರದಲ್ಲಿರುತ್ತದೆ.’’ ಹೀಗೆ ಎತ್ತರದಲ್ಲಿರುವ ಕಾನೂನು ಸದ್ದು ಮಾಡುವುದಿಲ್ಲ. ಅದರಷ್ಟಕ್ಕೆ ಕಾರ್ಯಮಗ್ನವಾಗಿರುತ್ತದೆ. ಸದ್ದು-ಪ್ರಸಾರ-ಪ್ರಚಾರ ಏನಿದ್ದರೂ ಇತರ ಅಂಗಗಳ ಲಕ್ಷಣ. ನ್ಯಾಯಾಂಗವು ತಾನಾಗಿ ಯಾವುದನ್ನೂ ಮಾತನಾಡುವುದಿಲ್ಲ. ಅದನ್ನು ಪ್ರಕರಣಗಳು ತೀರ್ಪಿನ ಮೂಲಕ ಮಾತನಾಡಿಸುತ್ತವೆ. ನ್ಯಾಯಾಂಗವೆಂಬ ಪದವು ಇನ್ನೂ ಉಳಿದುಕೊಂಡಿದ್ದರೆ ಅದಕ್ಕೆ ಕಾರಣ ಕಾನೂನಿನ ಆಧಾರದಲ್ಲಿ ನ್ಯಾಯನಿರ್ಣಯ ನೀಡುವ ಅದರ ಹಕ್ಕು, ಕರ್ತವ್ಯ ಮತ್ತು ಜವಾಬ್ದಾರಿ. ನ್ಯಾಯ ಲೌಕಿಕ ಅಥವಾ ಪ್ರಾಕೃತಿಕ ನ್ಯಾಯವಾಗಿ ಉಳಿದಿಲ್ಲ.

ಅದೀಗ ಸಾಂವಿಧಾನಿಕ ನ್ಯಾಯವಾಗಿ ಉಚ್ಚ ಮತ್ತು ಅತ್ಯುಚ್ಚ ಮಟ್ಟದಲ್ಲಷ್ಟೇ ನಡೆಯುತ್ತಿದೆ; ಉಳಿದೆಡೆ ಅಂದರೆ ಅಧೀನನ್ಯಾಯಾಲಯಗಳಲ್ಲಿ ಕಾನೂನಿನನ್ವಯವಷ್ಟೇ ನಡೆಯುತ್ತಿದೆ. ಆದ್ದರಿಂದ ಕಾನೂನನ್ನು ಗೌರವಿಸುವುದು, ಪಾಲಿಸುವುದು ಅಗತ್ಯ ಮತ್ತು ಅನಿವಾರ್ಯ. ಪಾಲಿಸದವರನ್ನು ಪಾಲಿಸುವಂತೆ ಮಾಡುವುದು ಕಾನೂನಿನ ಹಕ್ಕು ಮತ್ತು ಕಾರ್ಯ. ದಯವಿಟ್ಟು ಕಾನೂನನ್ನು ಪಾಲಿಸಿ ಎನ್ನುವುದು ಒಂದು ಸೌಜನ್ಯವೇ ಹೊರತು ಅದರಲ್ಲಿ ಆಯ್ಕೆಯನ್ನು ನೀಡಲಾಗುವುದಿಲ್ಲ. ಭಾರತೀಯ ನ್ಯಾಯಾಂಗಕ್ಕೆ ಮಹತ್ವದ ಇತಿಹಾಸವಿದೆ. ಅದರ ಬೇರುಗಳಿರುವುದು ಭಾರತೀಯ ನ್ಯಾಯ ಪದ್ಧತಿಯಲ್ಲಿ. ಇಂದಿಗೂ ಸ್ಮತಿ-ಶೃತಿಗಳು ಅಪ್ರಸ್ತುತವಾಗಿಲ್ಲ. ಆದರೆ ಇತಿಹಾಸದುದ್ದಕ್ಕೂ ಭಾರತದ ಭೂಭಾಗವು ಹಲವು ದಾಳಿಗಳಿಗೆ, ಆಡಳಿತಗಳಿಗೆ, ವಸ್ತುವಾದ್ದರಿಂದ ಅದರ ರೂಪುರೇಖೆ ಆಯಾಯ ಸಂದರ್ಭಗಳಿಗನುಗುಣವಾಗಿ ಬದಲಾಗಿದೆ. ಸ್ವಾತಂತ್ರ್ಯ ಸಿಗುವ ಮೊದಲು ಬ್ರಿಟಿಷರು ಈ ದೇಶದ ವಿವಿಧ ಭೂಭಾಗಗಳನ್ನು ಆಳಿದ್ದರಿಂದ ಮತ್ತು ಎಲ್ಲಕ್ಕೂ ಸಮಾನವಾದ ಲಿಖಿತ ಕಾಯ್ದೆಗಳನ್ನು ತಂದದ್ದರಿಂದ ಇಲ್ಲಿ ಒಂದು ಸಮಸ್ವರೂಪದ ಕಾನೂನು ಜಾರಿಯಾಯಿತು. ಮೊದಮೊದಲು ಇವು ಅಪರಿಚಿತವಾಗಿದ್ದರೂ ಜನರು ಇವಕ್ಕೆ (ಅನಿವಾರ್ಯವಾಗಿ) ಒಗ್ಗಿಹೋಗಿ ಅದರಲ್ಲೇ ಸುಖ ಕಂಡರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ಇವುಗಳಲ್ಲಿ ಬಹುಪಾಲನ್ನು ಮುಂದುವರಿಸಲಾಯಿತು. ಹೀಗೆ ಮುಂದುವರಿಸಿದ್ದರಲ್ಲಿ ಒಂದು ಉದ್ದೇಶ ಮತ್ತು ಜಾಣತನವಿತ್ತು: ಪ್ರಜೆಗಳಿಗೆ ಒಂದೇ ಬಾರಿ ಪ್ರಾಥಮಿಕ ಹಂತದಲ್ಲೇ ಪರಿಚಿತ ಹಳೆಯ ಯುಗಾಂತ್ಯವಾದಂತೆ ಮತ್ತು ಅಪರಿಚಿತವಾದ ಹೊಸತೊಂದು ಯುಗಾರಂಭವಾದಂತೆ ಭಾಸವಾಗದಿರುವುದು; ಮತ್ತು ವಿದೇಶಿಯರು ಹೇರಿದ ಕಾಯ್ದೆಗಳನ್ನು ನಮ್ಮದಲ್ಲದ್ದು ಎಂಬ ಕಾರಣಕ್ಕೆ ಅಥವಾ ವಿನಾ ಕಾರಣಕ್ಕೆ ತಿರಸ್ಕರಿಸದಿರುವುದು. ಎಲ್ಲ ಕಡೆಯಿಂದಲೂ ಒಳ್ಳೆಯ ವಿಚಾರಗಳು ನಮ್ಮ ಕಡೆ ಬರಲಿ ಮತ್ತು ನಮ್ಮಲ್ಲಿರಲಿ ಎಂಬ ಉಪನಿಷತ್ತಿನ ಅಥವಾ ಭಾರತೀಯತೆಯ ಸಾರ ಇದರಲ್ಲಿತ್ತು. ಇವೆಲ್ಲ ನ್ಯಾಯಾಂಗದ ಅರ್ಥಪೂರ್ಣ ವೈಭವದ ತುಣುಕುಗಳು. ಅದಕ್ಕೇ ನಮ್ಮ ನ್ಯಾಯಾಲಯಗಳು ಇನ್ನೂ ನ್ಯಾಯಾಲಯಗಳಾಗಿ ಉಳಿದಿವೆ; ಕಾನೂನಾಲಯವಾಗಿಲ್ಲ. ಸದ್ಯ ಕೆಲವು ಸಮಯದಿಂದ ಭಾರತೀಯ ನ್ಯಾಯಾಂಗವು ತನ್ನದಲ್ಲದ, ಆದರೆ ಪ್ರಜಾಪ್ರಭುತ್ವದ ಇತರ ಅಂಗಗಳ ಕಾರಣದಿಂದ ಸುದ್ದಿಯಲ್ಲಿದೆ. ಕೆಲವು ಸಮಯದಿಂದ ಎಂಬುದೂ ತಪ್ಪಾಗಬಹುದು.

ಏಕೆಂದರೆ 1975ರ ತುರ್ತು ಪರಿಸ್ಥಿತಿಗೆ ಕಾರಣವಾದ ತೀರ್ಪಿನಿಂದ ಮೊದಲ್ಗೊಂಡು, ಸರಕಾರದಿಂದಲೇ ಮೂಲಭೂತಹಕ್ಕುಗಳ ಉಲ್ಲಂಘನೆ, ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಹಿರಿಯ ಮತ್ತು ಅರ್ಹ ನ್ಯಾಯಮೂರ್ತಿಗಳ ಅವಗಣನೆ, ಕಿರಿಯ ನ್ಯಾಯಮೂರ್ತಿಯೊಬ್ಬರನ್ನು ಮುಖ್ಯ ನ್ಯಾಯಮೂರ್ತಿಗಳಾಗಿ ಆಯ್ಕೆ, ಜೇಷ್ಠತೆಯನ್ನು ಕಡೆಗಣಿಸಿದ್ದಕ್ಕಾಗಿ ಜೇಷ್ಠ ನ್ಯಾಯಮೂರ್ತಿಗಳ ರಾಜೀನಾಮೆ, ಹೀಗೆ ಪ್ರಜಾಪ್ರಭುತ್ವಕ್ಕೆ ಕೊಡಲಿಯೇಟು ನೀಡಿದ ಪ್ರಸಂಗಗಳು ನಡೆದವು. ಈ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವನ್ನು ಟೀಕಿಸಿದವರೂ ಇದ್ದರು; ಹೊಗಳಿದವರೂ ಇದ್ದರು. ಇವೆಲ್ಲವೂ ಸರಿಯಾಯಿತೆಂದು ತಿಳಿದರೆ ತಪ್ಪಾಗುತ್ತದೆ. ಆನಂತರ ಇಂತಹ ತಪ್ಪುಗಳನ್ನು ಅನೇಕ ಬಾರಿ ಅನುಸರಿಸಲಾಯಿತು. ತಾನಾಗಿ ಬಂದ ಸುಯೋಗ ಸಂಯೋಗವನ್ನು ಯಾವ ನ್ಯಾಯಮೂರ್ತಿಯೂ ಸಂವಿಧಾನಬದ್ಧವಲ್ಲವೆಂದು ತಿರಸ್ಕರಿಸಲಿಲ್ಲ. ಮನುಷ್ಯನ ಸಹಜ ಲೋಪದೋಷಗಳು ಯಾವ ಹುದ್ದೆಯನ್ನೂ ಆಕ್ರಮಿಸಿಕೊಳ್ಳಬಲ್ಲವಾದ್ದರಿಂದ ಮತ್ತು ರಾಜಕೀಯದಲ್ಲಿ, ಅಧಿಕಾರಶಾಹಿಯಲ್ಲಿ ಇವೆಲ್ಲವೂ ಸಹಜವೆಂದು ಭಾವಿಸಲಾಗಿರುವುದರಿಂದ ನ್ಯಾಯಾಂಗವನ್ನು ಹೊರತುಪಡಿಸಿ ಉಳಿದೆಡೆ ಇಂತಹ ಲೋಪದೋಷಗಳನ್ನು ಸಹಿಸಿಕೊಳ್ಳಲಾಗಿದೆ ಅಥವಾ ಕಡೆಗಣಿಸಲಾಗಿದೆ. ನ್ಯಾಯಮೂರ್ತಿಗಳು ನಿವೃತ್ತರಾದ ಬಳಿಕ ಅವರಿಗೇ ಮೀಸಲಾದ ಕೆಲವು ಹುದ್ದೆಗಳಿವೆ. ಉದಾಹರಣೆಗೆ ದೇಶದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ನಿವೃತ್ತ ಸರ್ವೋಚ್ಚ ನ್ಯಾಯಮೂರ್ತಿಗಳೇ ಆಗಿರಬೇಕು. ಲೋಕಾಯುಕ್ತರಾಗಿ, ಉಪಲೋಕಾಯುಕ್ತರಾಗಿ, ಉಚ್ಚನ್ಯಾಯಮೂರ್ತಿಗಳೇ ಆಗಿರಬೇಕು. ಇನ್ನು ಕೆಲವು ಬಾರಿ ವಿಶೇಷ ಆಯೋಗಗಳ, ನಿಯೋಗಗಳ ಮುಖ್ಯಸ್ಥರಾಗಿ ನಿವೃತ್ತ ನ್ಯಾಯಮೂರ್ತಿಗಳೇ ಆಗಬೇಕು. ಕೆಳಹಂತದಲ್ಲಿಯೂ ಇದು ನಿರ್ಣಾಯಕವಾಗಿದೆ. ಇಲ್ಲೂ ಉದಾಹರಣೆಗೆ ಕಾನೂನು ಇಲಾಖೆಯ ಮುಖ್ಯಸ್ಥರಾಗಿ ಜಿಲ್ಲಾ ನ್ಯಾಯಾಧೀಶರ ಮಟ್ಟದ ಅಧಿಕಾರಿಯನ್ನೇ ನೇಮಿಸಲಾಗುತ್ತದೆ.

ಕಾಲಕ್ರಮದಲ್ಲಿ ಇವರು ಮತ್ತೆ ಜಿಲ್ಲಾ ನ್ಯಾಯಾಧೀಶರಾಗಿ ವರ್ಗಾವಣೆಗೊಳ್ಳಲೂಬಹುದು. ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಮತ್ತಿತರ ಪದವಿಗೆ ಜಿಲ್ಲಾ ನ್ಯಾಯಾಧೀಶರನ್ನೇ ನೇಮಿಸಲಾಗುತ್ತದೆ. ಇಲ್ಲಿ ಅವರು ಕಾರ್ಯಾಂಗದ ಪಾಲಾಗುವುದಿಲ್ಲ. ಇದು ಅರ್ಹತೆ ಮತ್ತು ಅನುಭವದ ಪ್ರಶ್ನೆಯಾದ್ದರಿಂದ ಇದರಲ್ಲಿ ವಿವಾದ ಉದ್ಭವಿಸುವುದಿಲ್ಲ. ಇದನ್ನು ಇತರರು ಪಡೆಯುವಂತೆಯೇ ಇಲ್ಲ. ಆದ್ದರಿಂದ ಇದನ್ನು ಬಯಸಿ ಯಾವ ನ್ಯಾಯಮೂರ್ತಿಯೂ ಸರಕಾರದ ಪರ ಅಥವಾ ವಿರೋಧವಾಗಿ ನಿಲುವನ್ನು ತಳೆಯುವುದಿಲ್ಲ. ಈಚೆಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳೊಬ್ಬರು (ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಭಾರತದ ಸರ್ವೋಚ್ಚ ನ್ಯಾಯಮೂರ್ತಿಗಳೂ, ರಾಜ್ಯಗಳ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಆ ರಾಜ್ಯದ ಮುಖ್ಯ ನ್ಯಾಯಮೂರ್ತಿಗಳೂ ಹೌದು!) ನಿವೃತ್ತಿಯಾದ ತಕ್ಷಣ ರಾಜ್ಯಸಭೆಗೆ ನಾಮಕರಣಗೊಂಡದ್ದು ವಿವಾದವನ್ನು ಸೃಷ್ಟಿಸಿತು. ಆದರೆ ಇಂತಹ ಘಟನೆ ಇದೇ ಮೊದಲಲ್ಲ. ಕಾಂಗ್ರೆಸ್ ಸರಕಾರವಿದ್ದಾಗಲೂ ಇಂತಹ ನ್ಯಾಯೋಚಿತವಲ್ಲದ ನೇಮಕಗಳು ನಡೆದಿವೆ. ಇಂತಹ ನೇಮಕಾತಿಗಳನ್ನು ಖಂಡಿಸಿದ ಭಾರತೀಯ ಜನತಾ ಪಕ್ಷವೇ ಕಾಂಗ್ರೆಸನ್ನು ಹಿರಿಯಣ್ಣನೆಂದು ಬಗೆದು ಅದರ ನೀತಿಯನ್ನು ಶ್ರದ್ಧಾಭಕ್ತಿಯಿಂದ ಅನುಸರಿಸಿದೆ. ವಿಷಾದವೆಂದರೆ ಆಡಳಿತದ ಸೂತ್ರವನ್ನು ಹಿಡಿದವರೆಲ್ಲ ಒಂದೇ ಬಗೆಯ (ಅ)ನ್ಯಾಯವನ್ನು ಅನುಷ್ಠಾನಗೊಳಿಸುವುದು. ಬಿಜೆಪಿ ನಾಯಕ ವಾಜಪೇಯಿ ಹೇಳಿದಂತೆ ವಿರೋಧಪಕ್ಷಗಳಿಗೆಲ್ಲ ತಮ್ಮ ವಿರೋಧೀ ನ್ಯಾಯವಿದ್ದಂತೆ ಆಳುವವರಿಗೆಲ್ಲ ತಮ್ಮದೇ ನ್ಯಾಯ. ಪ್ರಾಯಃ ಅನುಕೂಲ ನ್ಯಾಯ!

 ಇನ್ನೊಬ್ಬ ರಾಜಕಾರಣಿ ದಿವಂಗತ ಅರುಣ್ ಜೇಟ್ಲಿಯವರು ಹೇಳಿದಂತೆ ನಿವೃತ್ತ ನ್ಯಾಯಾಧೀಶರಿಗೂ, ನ್ಯಾಯಮೂರ್ತಿಗಳಿಗೂ ಯಾವುದೇ ಹುದ್ದೆ ನೀಡಬಾರದು. ಅದು ಅವರ ನಿವೃತ್ತಿಯ ಅಂಚಿನಲ್ಲಿ ವೈಯಕ್ತಿಕ ಮತ್ತು ಆಸೆಯ ಕಣ್ಣುಗಳ ಪಟ್ಟಭದ್ರ ಹಿತಾಸಕ್ತಿಯನ್ನು ಹುಟ್ಟಿಸುತ್ತದೆ. ಇದು ಅವರ ಕೊನೆಕೊನೆಯ ತೀರ್ಪುಗಳನ್ನೂ ಬಾಧಿಸಬಹುದು. ನ್ಯಾಯಮೂರ್ತಿ ಗೊಗೊಯಿಯವರ ಇಂತಹ ನೇಮಕವನ್ನು ಮಾಡಿದ್ದು ಮತ್ತು ನಿವೃತ್ತಿಪೂರ್ವ ಕೆಲವು ತೀರ್ಪುಗಳ ನ್ಯಾಯೋಚಿತ್ಯ ವಿವಾದವನ್ನು ಹುಟ್ಟಿಸಿದೆ. ಏನೇ ಇರಲಿ, ಅದು ಕಾನೂನು ರೀತ್ಯಾ ಅನುಲ್ಲಂಘನೀಯ ಮತ್ತು ಪಾಲನಾಪಕ್ವವಾದದ್ದು. ಆದ್ದರಿಂದ ಅವನ್ನು ಟೀಕಿಸಬಹುದಾದರೂ ಅನೂರ್ಜಿತಗೊಳಿಸಲಾಗದು. ಇಂತಹ ತೀರ್ಪುಗಳು ಇತಿಹಾಸದುದ್ದಕ್ಕೂ ವಿಶ್ವಾದ್ಯಂತ ನಡೆದಿವೆ. ಕಾಲಕ್ರಮದಲ್ಲಿ ಅದಕ್ಕಾಗಿ ಸಮಾಜ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದ್ದೂ ಇದೆ.

ಈಚೆಗೆ ಸರ್ವೋಚ್ಚ ನ್ಯಾಯಾಲಯವು ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಈಗಿನ ಪ್ರಧಾನಿ ಮತ್ತು ಆಗಿನ ಮುಖ್ಯಮಂತ್ರಿ ಮೋದಿಯವರಿಗೆ ‘ಕ್ಲೀನ್ ಚಿಟ್’ ನೀಡಿದ್ದು ಮಾತ್ರವಲ್ಲ ಅದರಲ್ಲಿ ಪಕ್ಷಕಾರರಲ್ಲದವರ ಕುರಿತು ಕ್ರಮಕೈಗೊಳ್ಳಲು ಏಕಕಪಕ್ಷೀಯವಾಗಿ ಶಿಫಾರಸು ಮಾಡಿದ್ದು ಸಾಕಷ್ಟು ವಿವಾದವನ್ನು ಸೃಷ್ಟಿಸಿತು. ತೀರ್ಪಿನ ಔಚಿತ್ಯವನ್ನು ಕಾನೂನಿನಲ್ಲಿ ಪ್ರಶ್ನಿಸಲಾಗದು. ಇತರರ ವಿರುದ್ಧ ತೀರ್ಪು ನೀಡಿದ್ದು ಸರಿಯೇ ಎಂಬುದನ್ನು ಪುನರ್ವಿಮರ್ಶಿಸಲು ಅಲ್ಲೇ ಪ್ರಶ್ನಿಸಬೇಕಾಗಿತ್ತು. ಅದಿನ್ನೂ ನಡೆದಿಲ್ಲ. ಆದ್ದರಿಂದ ಅದರ ಸರಿ-ತಪ್ಪುಗಳನ್ನು ಚರ್ಚಿಸಬಹುದಾದರೂ ನಿರ್ಣಯಿಸುವಂತಿಲ್ಲ.

ಇದಾದ ಬಳಿಕ ನೂಪುರ್ ಶರ್ಮಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಆಕೆಯನ್ನು ಟೀಕಿಸಿ ಆಕೆ ಆಡಿದಳೆನ್ನಲಾದ ಮಾತಿಗೆ ಪ್ರತಿಕ್ರಿಯೆಯಾಗಿ ಆಕೆ ದೇಶದ ಕ್ಷಮೆ ಕೋರಬೇಕೆಂಬ ಭಾವನೆಯನ್ನು ವ್ಯಕ್ತಪಡಿಸಿತು. ಆಕೆಯ ಜಾಮೀನು ಅರ್ಜಿಗೆ ಇಷ್ಟೆಲ್ಲ ಬೇಕೇ ಎಂಬುದನ್ನು ಬಹಳಷ್ಟು ಮಂದಿ ನ್ಯಾಯಾಲಯದ ಹೊರಗೆ ಪ್ರಶ್ನಿಸಿದರು. ಈ ಕುರಿತು ತೀರ್ಪಿನಲ್ಲಿ ಬಾಧಕ ಅಭಿಪ್ರಾಯಗಳಿಲ್ಲವೆಂದು ವರದಿಯಾಗಿದೆ. ಇದನ್ನೂ ಕಾನೂನು ರೀತ್ಯಾ ಪ್ರಶ್ನಿಸಬೇಕೇ ಹೊರತು ಅದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಬಾರದು. ಕರ್ನಾಟಕದ ನ್ಯಾಯಮೂರ್ತಿಯೊಬ್ಬರು ಭ್ರಷ್ಟಾಚಾರದ ವಿರುದ್ಧ ಭಾವನಾತ್ಮಕವಾಗಿ ಕೆಂಡಕಾರಿದರು. ಇವೆಲ್ಲ ‘ನ್ಯಾಯಾಂಗದ ಗಮನ’ (ಜುಡಿಶಿಯಲ್ ನೋಟೀಸ್) ಎಂಬ ತತ್ವಕ್ಕೆ ಬದ್ಧವಾಗಿದೆಯೇ ಹೊರತು ಅದೇ ತೀರ್ಪಲ್ಲ. ಹೀಗೆ ತೀರ್ಪು ಮತ್ತು ಅಭಿಪ್ರಾಯಗಳು ಬೇರೆಬೇರೆ. ನ್ಯಾಯಮೂರ್ತಿಗಳು ನ್ಯಾಯಾಂಗದ ಪರವಾಗಿ ಅಥವಾ ವೈಯಕ್ತಿಕವಾಗಿ ಏನೇ ಅಭಿಪ್ರಾಯವನ್ನು ನೀಡಿದರೂ ಅದನ್ನು ಅನುಭವದ ಮಾತೆಂದು ಸ್ವೀಕರಿಸಬೇಕೇ ಹೊರತು ಅವರ ಜಾತಕವನ್ನು ಜಾಲಾಡಿಸುವುದು ದೇಶದ್ರೋಹದಷ್ಟೇ ದೊಡ್ಡ ತಪ್ಪು.

ವಿಷಾದಕರ ಸಂಗತಿಯೆಂದರೆ ದ್ವೇಷಭಕ್ತಿಯನ್ನು ಬೆಳೆಸುವ ಭಾಜಪ ಸರಕಾರವು ಸಾಂವಿಧಾನಿಕ ಸಂಸ್ಥೆಗಳನ್ನು ಅಸಮರ್ಥಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ನೂಪುರ್ ಶರ್ಮಾ ಪ್ರಕರಣದಲ್ಲಿ ನ್ಯಾಯಾಲಯದ ಅಭಿಪ್ರಾಯದ ಕುರಿತು ಪ್ರಧಾನಿಯವರಾಗಲೀ, ಕಾನೂನು ಸಚಿವರಾಗಲೀ ಏನೂ ಹೇಳುತ್ತಿಲ್ಲ. ಕಾನೂನು ಸಚಿವರು ಇದಕ್ಕೆ ಬದಲಾಗಿ ತಾನು ಕಾನೂನು ಸಚಿವನಾಗಿ ಈ ಬಗ್ಗೆ ಏನೂ ಹೇಳುವಂತಿಲ್ಲವೆಂಬ ಜಾಣತನದ ಮಾತನ್ನಾಡಿ ನೂಪುರ್ ಶರ್ಮಾರನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಆಕೆ ಇನ್ನೂ ದಸ್ತಗಿರಿಯಾಗಿಲ್ಲವೇಕೆಂಬ ಪ್ರಶ್ನೆಗೆ ಅವರಲ್ಲಾಗಲಿ, ಪ್ರಧಾನಿಯಲ್ಲಾಗಲಿ ಉತ್ತರವಿಲ್ಲ. ಮೌನವೇ ಅವರ ಆಭರಣವಾಗಿದೆ.

ಬಹಳಷ್ಟು ಪ್ರಜೆಗಳು-ಇವರಲ್ಲಿ ಅವಿದ್ಯಾವಂತ ಮತ್ತು ವಿದ್ಯಾವಂತರೆಂಬ ಭೇದ ಸಲ್ಲದು- ಹಂದಿಯ ಮಾಲಕತ್ವಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಕ್ಷಿದಾರನು ಹೇಳಬಹುದಾದ ತೀರ್ಪು ಹೇಗೇ ಇರಲಿ ಹಂದಿ ತನಗೆ ಸಿಗಬೇಕು ಎಂಬ ಹುಂಬವಾದದ ಸರದಾರರು.

ಈ ಮತ್ತು ಇಂತಹ ಹಗರಣಗಳ ಹಾಗೂ ಸಾರ್ವಜನಿಕ ಟೀಕೆಗಳ ಕುರಿತು ಈಗಿನ ಮುಖ್ಯ ನ್ಯಾಯಮೂರ್ತಿ ಮಾನ್ಯ ಎನ್.ವಿ.ರಮಣ ಅವರು ‘‘ಅಧಿಕಾರದಲ್ಲಿರುವ ರಾಜಕೀಯ ಪಕ್ಷವು ಪ್ರತಿಯೊಂದು ಸರಕಾರೀ ಕ್ರಮವನ್ನೂ ನ್ಯಾಯಾಂಗವು ಬೆಂಬಲಿಸಬೇಕೆಂದು ಬಯಸುತ್ತದೆ. ಪ್ರತಿಪಕ್ಷಗಳೂ ಅವರವರ ರಾಜಕೀಯ ಸ್ಥಿತಿ ಮತ್ತು ನಿಲುವುಗಳನ್ನು ನ್ಯಾಯಾಂಗವು ಬೆಂಬಲಿಸಬೇಕೆಂದು ಬಯಸುತ್ತವೆ. ಜನಸಾಮಾನ್ಯರಿಗೆ ಸಂವಿಧಾನದ ಕುರಿತು ಅರಿವಿನ ಕೊರತೆಯೇ ಇದಕ್ಕೆ ಕಾರಣವಾಗಿ ಇಂತಹ ತಪ್ಪುಚಿಂತನೆಗಳನ್ನು ಹೆಚ್ಚಿಸುತ್ತದೆ. ಪ್ರಚೋದಿಸಿ ಹೆಚ್ಚಿಸಿದ ಇಂತಹ ಜನರ ಅಜ್ಞಾನವೇ ಈ ಅನಿಷ್ಟ ಶಕ್ತಿಗಳ ಸಹಾಯಕ್ಕೊದಗುತ್ತದೆ ಮತ್ತು ಸ್ವತಂತ್ರವಾಗಿ ಚಿಂತಿಸುವ, ಕಾರ್ಯೋನ್ಮುಖವಾಗಿರುವ ನ್ಯಾಯಾಂಗವನ್ನು ಅಶಕ್ತಗೊಳಿಸಲು ಸಹಕರಿಸುತ್ತದೆ. ನಾವು (ಅಂದರೆ ನ್ಯಾಯಾಂಗವು) ಸಂವಿಧಾನಕ್ಕೆ ಮತ್ತು ಸಂವಿಧಾನಕ್ಕೆ ಮಾತ್ರ ಉತ್ತರದಾಯಿತ್ವವನ್ನು ಹೊಂದಿದ್ದೇವೆ.’’ ಎಂದು ಪ್ರತಿಕ್ರಿಯಿಸಿದ್ದಾರೆ.
ಅವರು ಹೇಳಿದ್ದು ನ್ಯಾಯತತ್ವದಡಿ ಸರಿಯಾಗಿಯೇ ಇದೆ. ಸಾಂವಿಧಾನಿಕವಾಗಿ ಕಾನೂನನ್ನು ಎತ್ತಿಹಿಡಿಯುವುದು ನ್ಯಾಯಾಂಗದ ಕರ್ತವ್ಯ. ಎಲ್ಲರನ್ನೂ ನ್ಯಾಯಾಂಗವು ತೃಪ್ತಿಪಡಿಸಲಾಗದು. ಬಹುಜನ ಹಿತಾಯಃ ಬಹುಜನ ಸುಖಾಯಃ.

ನ್ಯಾಯಾಂಗವು ತನ್ನ ಮೇಲೆ ಅಂಟಿದ ಕಿಲುಬುಗಳನ್ನು ತೊಳೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಇದರಿಂದಾಗಿ ಇಂದಿಗೂ ನ್ಯಾಯಾಲಯಗಳು ಬಿಟ್ಟರೆ ಮನುಷ್ಯ ಜೀವಕ್ಕೂ, ಜೀವನಕ್ಕೂ ಬೇರೆಡೆ ಬೆಲೆಯಿಲ್ಲವೆಂದಾಗಿದೆ. ಆದರೆ ಇವಿಷ್ಟೇ ಸಾಕೇ? ನ್ಯಾಯಾಲಯಗಳು ಸಂಕೇತಿಸುವ ಕಣ್ಣುಕಟ್ಟಿದ ನ್ಯಾಯಮೂರ್ತಿಯ ಕಣ್ಣಪಟ್ಟಿಯನ್ನು ಆದಷ್ಟು ಜರೂರಾಗಿ ತೆಗೆಯದೇ ಹೋದರೆ ದೇಶದೆಲ್ಲೆಡೆ ನಡೆಯುವ ಅಕ್ರಮ-ಅನ್ಯಾಯಗಳನ್ನು ಸರಿಪಡಿಸುವ ಅವಕಾಶ ಕಡಿಮೆಯಾಗಲಿದೆ. ಮಗು ಅಳಬೇಕೆಂದು ತಾಯಿ ಕಾಯಬಬಾರದು. ಆದರೆ ನಮ್ಮ ಸಮಾಜದ ಕುಂತಿಯರು ಜಾಣತನದಿಂದ ಅಳುವ ಮಗುವಿಗೆ ಮಾತ್ರ ಹಾಲು ಎಂಬ ನುಡಿಗಟ್ಟನ್ನು ಗಂಗೆಯಲ್ಲಿ ತೇಲಿಬಿಟ್ಟಿದ್ದಾರೆ. ಸೂರ್ಯನಾದರೋ ಇಡೀ ಜಗತ್ತನ್ನು ನೋಡುತ್ತಿದ್ದಾನಾದರೂ ಇಂತಹ ಅನ್ಯಾಯವನ್ನು ಸರಿಪಡಿಸಲಾರನು. ಆದ್ದರಿಂದ ನ್ಯಾಯಾಂಗವೂ ಒಂದು ಮಿತಿಯಲ್ಲೇ ವರ್ತಿಸುವುದರಿಂದ ಕರ್ಣನಿಗೆ ನ್ಯಾಯ ಸಿಕ್ಕದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)