ರೂಢಿಯ ಬೇಡಿಯಲ್ಲಿ
ಸುತ್ತುಬಳಸು ಏಕೆ? ನಮ್ಮ ಪ್ರತಿಯೊಂದು ಚಲನವಲನ, ಕ್ರಿಯೆ ಮತ್ತು ಪ್ರತಿಕ್ರಿಯೆಗಳು ರೂಢಿಯ ಮೇಲೆ ಆಧರಿಸಿವೆ. ಅದನ್ನು ನಾವೇ ಮಾಡಿಕೊಂಡಿರುವುದು ಅಥವಾ ಇತರರಿಂದ ಮಾಡಿಸಲ್ಪಟ್ಟಿರುವುದು. ರೂಢಿ ಅನ್ನಿ, ಅಭ್ಯಾಸ ಅನ್ನಿ, ಹ್ಯಾಬಿಟ್ ಅನ್ನಿ; ಏನೇ ಅಂದರೂ ಅದೇ. ಪದೇ ಪದೇ ಮಾಡಿ ಮಾಡಿ ಅದು ನಮ್ಮನ್ನು ಬಿಡದು, ನಾವೇ ಅದನ್ನು ಬಿಡಲಾರೆವು. ಕಾಫಿ ಕುಡಿಯುವ ರೂಢಿ, ತಣ್ಣೀರಲ್ಲೇ ಸ್ನಾನ ಮಾಡುವ ರೂಢಿ, ಮಾಂಸಾಹಾರದ ರೂಢಿ, ಸಸ್ಯಾಹಾರದ ರೂಢಿ, ಮೈ ತುಂಬಾ ಬಟ್ಟೆ ಹಾಕಿಕೊಳ್ಳುವ ರೂಢಿ; ಇಷ್ಟೇ ಅಲ್ಲ, ಕೋಪಿಸಿಕೊಳ್ಳುವುದು, ನೆನಪಿನಲ್ಲಿಟ್ಟುಕೊಳ್ಳುವುದು, ಎಲ್ಲದಕ್ಕೂ ಥಟ್ ಅಂತ ರೇಗುವುದು, ಯಾರು ಏನು ಹೇಳಿದರೂ ತಲೆ ಕೆಡಿಸಿಕೊಳ್ಳದಿರುವುದು, ಯಾರಾದರೂ ಕಷ್ಟಾಂತ ಅಂದಾಗ ಅಯ್ಯೋ ಅನ್ನುವುದು, ಏನೇ ಕಷ್ಟ ಬಂದರೂ ಎದುರಿಸುವುದು, ಚಿಕ್ಕ ಚಿಕ್ಕ ವಿಚಾರಗಳಿಗೆಲ್ಲಾ ತಲೆ ಕೆಡಿಸಿಕೊಂಡು ಅಯ್ಯೋ ಅಂತ ಉಸುರ್ ಅನ್ನುತ್ತಿರುವುದು, ಸಿಗರೇಟು ಸೇದುವುದು, ಯಾರನ್ನು ನೋಡಿದರೂ ಅವರನ್ನು ಕಾಮುಕವಾಗಿಯೇ ಕಾಣುವುದು, ಎಲ್ಲರ ಜೊತೆ ಬೆರೆಯುವುದು, ಬೆರೆಯದೇ ಇರುವುದು, ಅಹಂಕಾರ ತೋರುವುದು, ವಿನಯವಂತಿಕೆಯಿಂದ ಇರುವುದು, ಬಕೆಟ್ ಹಿಡಿಯುವುದು, ಇಷ್ಟನ್ನು ಅಷ್ಟಾಗಿ ಭಾವಿಸುವುದು, ಸುಳ್ಳು ಹೇಳುವುದು, ಚಾಡಿ ಹೇಳುವುದು, ಗಾಸಿಪ್ ಮಾಡುವುದು; ಇವೂ ಕೂಡಾ ರೂಢಿಯೇ. ಒಟ್ಟಿನಲ್ಲಿ ಸರಳವಾದ ರೂಢಿ ಎನ್ನುವುದು ಪದೇ ಪದೇ ಪುನರಾವರ್ತಿತವಾಗಿ ನಮ್ಮ ಮೇಲೆ ನಮಗೇ ನಿಯಂತ್ರಣವಿರದಂತಾದಾಗ ಅದನ್ನು ವ್ಯಸನ, ಚಟ, ಗೀಳು; ಇತ್ಯಾದಿ ಏನೆಲ್ಲಾ ರೂಪಗಳನ್ನು ತಾಳುತ್ತಾ ಕೊನೆಗೆ ಮಾನಸಿಕ ಸಮಸ್ಯೆಯಾಗಿ ಬಂದು ನಿಂತುಬಿಡುತ್ತದೆ.
ಒಟ್ಟಾರೆ ರೂಢಿ ಅನ್ನೋದು ಮನುಷ್ಯನ ಜೀವನವನ್ನೇ ತನ್ನ ಅಧೀನದಲ್ಲಿರುವಷ್ಟರ ಮಟ್ಟಿಗೆ ಬಲಶಾಲಿಯಾಗಿರುವುದು. ಎಷ್ಟೋ ಸಲ ಜಾಗೃತಗೊಂಡಿರದ ಮನಸ್ಸು ಈ ಕೆಲಸ ಮಾಡುವುದು ಬೇಡ, ಹೀಗೆ ಆಡುವುದು ಬೇಡ, ನಾನು ಇದನ್ನು ಮಾಡಕೂಡದು, ಹೀಗೆ ವರ್ತಿಸಕೂಡದು; ಎಂದೆಲ್ಲಾ ಆಲೋಚಿಸಿದರೂ ಆ ಒಂದು ಸಮಯಕ್ಕೆ ಅದು ಮರೆತು ಹೋಗಿರುತ್ತದೆ ಮತ್ತು ಅದು ಆಗಿಯೇ ಹೋಗಿರುತ್ತದೆ. ನಂತರ ಇನ್ನೊಂದು ಸಲ ಹೀಗೆ ಮಾಡಲ್ಲ ಎಂದುಕೊಳ್ಳುವುದೂ ಉಂಟು. ಅದು ಮತ್ತೆ ಪುನರಾವರ್ತಿತವಾಗುತ್ತಿರುತ್ತದೆ. ಈ ರೂಢಿ ಎನ್ನುವುದರ ನಕಾರಾತ್ಮಕ ಪರಿಣಾಮಗಳ ಅರಿವಾಗಿರುವವರು ಇದರಿಂದ ಹೊರಗೆ ಬರಬೇಕೆಂದು ಯತ್ನಿಸುತ್ತಾರೆ. ಸಕಾರಾತ್ಮಕ ಪರಿಣಾಮ ಆಗಲಿ ಆಗದೇ ಇರಲಿ, ಹೆಚ್ಚೇನೂ ಹಾನಿಗೊಳಗಾಗದಿದ್ದರೆ ಅದರಿಂದ ಹೊರಗೆ ಬರುವ ಬದಲು ಅದನ್ನೇ ಸಮರ್ಥಿಸಿಕೊಳ್ಳಲು ಜನ ಪ್ರಾರಂಭಿಸುತ್ತಾರೆ. ಇದರಿಂದ ಅದು ಹೆಚ್ಚುತ್ತಾ ಹೋಗುತ್ತದೆ. ಎಷ್ಟೋ ಸಲ ಅದೇ ರೂಢಿ ಇರುವವರು ಇತರ ರೂಢಿಗರಿಗೆ ಒತ್ತಾಸೆಯಾಗಿ ನಿಲ್ಲುತ್ತಾರೆ. ಕುಡುಕರು ಕುಡುಕರಿಗೆ, ಸ್ತ್ರೀವಿರೋಧಿಗಳು ಸ್ತ್ರೀವಿರೋಧಿಗಳಿಗೆ, ದ್ವೇಷಿಸುವವರು ದ್ವೇಷಿಸುವವರಿಗೆ, ಕಾಫಿ ಕುಡಿವವರು ಕಾಫಿ ಕುಡಿವವರಿಗೆ; ಹೀಗೆ. ಇದರಿಂದ ಜನ ಬೆಂಬಲ ಸಿಕ್ಕಾಗ ‘ಈ ಸಮಸ್ಯೆ ಇರುವುದು ನನಗೆ ಮಾತ್ರ ಅಲ್ಲ, ಎಲ್ಲರಿಗೂ ಇದೆ’ ಅಂತಾನೋ, ಅಥವಾ ‘ಇದೊಂದು ಎಲ್ಲರಿಗೂ ಇರುವ ಸಾಮಾನ್ಯ ವಿಷಯ’ ಎಂದೋ ಮನವರಿಕೆ ಮಾಡಿಕೊಂಡು ಆ ರೂಢಿಯನ್ನು ಮುಂದುವರಿಸುತ್ತಾರೆ. ಇದೇ ರೂಢಿ ಎನ್ನುವುದು ಮುಂದೆ ಗೀಳಾಗಿ ಪರಿಣಮಿಸುತ್ತದೆ.
ಒಸಿಡಿ, ಅಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ ಅಥವಾ ಗೀಳಿನ ರೋಗ. ಗೀಳಿನ ರೋಗ ಎಂದರೆ ಪದೇ ಪದೇ ಕೈ ತೊಳೆದುಕೊಳ್ಳುವುದು, ಬೀಗ ಹಾಕಿರುವ ಬಾಗಿಲನ್ನೇ ಪದೇ ಪದೇ ಪರೀಕ್ಷಿಸುವುದು, ಹಸ್ತಮೈಥುನ ಅಥವಾ ಇತರ ಲೈಂಗಿಕ ಚಟುವಟಿಕೆಗಳಂತದ್ದೋ ಮಾತ್ರವೇ ಅಲ್ಲ. ಸದಾ ದ್ವೇಷಿಸುತ್ತಿರುವುದು, ನಕಾರಾತ್ಮಕವಾಗಿಯೇ ಸಮುದಾಯವನ್ನೋ, ಸಂಸ್ಕೃತಿಯನ್ನೋ ಅಥವಾ ಇತರ ಸಂಬಂಧಿತ ವ್ಯಕ್ತಿಗಳನ್ನು ನೋಡುತ್ತಿರುವುದು, ಯಾರೇನೇ ಮಾಡಿದರೂ ಮೆಚ್ಚದಿರುವುದು, ವ್ಯಕ್ತಿಪೂಜೆ, ಸಾಂಪ್ರದಾಯಿಕ ಧೋರಣೆ, ಮಡಿ, ಮೈಲಿಗೆ, ಮಕ್ಕಳನ್ನು ಅಥವಾ ಯುವಜನರನ್ನು ಹಿರಿಯರು ತಿರಸ್ಕಾರದಿಂದ ಕಾಣುವುದು, ಒಬ್ಬರು ಮತ್ತೊಬ್ಬರನ್ನು ಅನುಮಾನಿಸುತ್ತಿರುವುದು, ಅಪಮಾನಿಸುತ್ತಲೇ ಇರುವುದು; ಇವೆಲ್ಲವೂ ಕೂಡಾ ಗೀಳು ರೋಗದ ವ್ಯಾಪ್ತಿಗೇ ಬರುವುದು. ಒಬ್ಬೊಬ್ಬ ವ್ಯಕ್ತಿಯ ಮನಸ್ಥಿತಿ ಆರೋಗ್ಯಪೂರ್ಣವಾದರೆ ಇಡೀ ಸಮಾಜದ ಸ್ವಾಸ್ಥ್ಯವನ್ನು ಕಾಣಬಹುದು. ತಮ್ಮದೇ ಮನೋಭಾವಗಳ ಅರಿವು ಆಯಾ ವ್ಯಕ್ತಿಗೆ ಆಗಲೇ ಬೇಕಾಗಿರುವ ಜ್ಞಾನೋದಯ. ನಿರ್ವಾಣ, ಕೈವಲ್ಯ, ಮೋಕ್ಷ, ಮುಕ್ತಿ; ಏನಾದರೂ ಹೇಳಿ, ಅದು ರೂಢಿಯ ಬೇಡಿಯಿಂದ ಬಿಡುಗಡೆ ಹೊಂದುವುದೇ ಆಗಿದೆ.