varthabharthi


ತುಂಬಿ ತಂದ ಗಂಧ

ಅರವತ್ತು ತುಂಬಿದ ಹ್ಯಾಟ್ರಿಕ್ ಹೀರೋ

ವಾರ್ತಾ ಭಾರತಿ : 10 Jul, 2022
ಕೆ.ಪುಟ್ಟಸ್ವಾಮಿ

ಕಾಲಕಾಲಕ್ಕೆ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಮೂಲಕ ಸುದೀರ್ಘಕಾಲ ಜನಪ್ರಿಯತೆ ಉಳಿಸಿಕೊಂಡು ಬಂದಿರುವ ಶಿವರಾಜ್ ಕುಮಾರ್ ಅವರು ಈಗಲೂ ಹೊಸ ಕತೆಗಳಿಗೆ ಹುಡುಕುವ, ಹೊಸ ನಿರ್ದೇಶಕರಿಗೆ ಅವಕಾಶ ನೀಡುವ ಮತ್ತು ಹೊಸ ಬಗೆಯ ಚಿತ್ರಗಳಲ್ಲಿ ತೊಡಗಿಸಿಕೊಳ್ಳುವ ಹಂಬಲವನ್ನು ಬತ್ತದಂತೆ ಕಾಪಾಡಿಕೊಂಡು ಬಂದಿದ್ದಾರೆ. ಸಾರ್ವಜನಿಕ ವರ್ತನೆಯಲ್ಲೂ ತಂದೆ ಡಾ. ರಾಜ್ ಅವರ ಮೌಲ್ಯಗಳನ್ನು ಅನುಸರಿಸುತ್ತಾ, ವಿವಾದಗಳಿಂದ ದೂರವಾಗಿ, ಉದ್ಯಮದ ಬಿಕ್ಕಟ್ಟುಗಳ ಕಾಲದಲ್ಲಿ ದನಿಯೆತ್ತಿ ಸಕ್ರಿಯ ಕಲಾವಿದರಾಗಿ ಉಳಿದಿದ್ದಾರೆ.


ಇದೇ ತಿಂಗಳು ಹನ್ನೆರಡನೇ ತಾರೀಕು ಡಾ. ಶಿವರಾಜ್ ಕುಮಾರ್ ಅವರು ತಮ್ಮ ಅರವತ್ತೊಂದನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. (ಜನನ 12 ಜುಲೈ 1962) ಕಳೆದ ಮೂವತ್ತಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮ ಇರುವನ್ನು ಸ್ಥಾಪಿಸಿ, ಎಲ್ಲ ಅರ್ಥದಲ್ಲೂ ಚಿತ್ರರಂಗದ ನಾಯಕನಾಗಿ ಗೆಲುವಿನ ಹಾದಿಯಲ್ಲಿ ಮುನ್ನಡೆದ ದಾಖಲೆ ಅವರದು. ಶಿವರಾಜ್‌ಕುಮಾರ್ ಅವರ ಚಿತ್ರ ಪಯಣ ಕನ್ನಡ ಚಿತ್ರರಂಗದ ಉತ್ತರಾರ್ಧದ ಚರಿತ್ರೆಯ ಬಹುಮುಖ್ಯ ಘಟನೆ. ಯಾಕೆಂದರೆ ಎಂಬತ್ತರ ದಶಕದ ಉತ್ತರಾರ್ಧದಲ್ಲಿ ಚಿತ್ರರಂಗಕ್ಕೆ ಬಂದ ಭಾರತದ ಯಾವ ಕಲಾವಿದರೂ ಮೂವತ್ತಾರು ವರ್ಷಕಾಲ ಹೀರೋ ಪಟ್ಟವನ್ನು ಈ ಪರಿಯಲ್ಲಿ ಮುಂದುವರಿಸಿದ ದಾಖಲೆಯಿಲ್ಲ. ಇದ್ದರೂ ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ಶತಚಿತ್ರಗಳನ್ನು ಪೂರೈಸಿದವರಿಲ್ಲ. ಶತಚಿತ್ರ ನಾಯಕನಟರ ಪಟ್ಟಿಯಲ್ಲಿ ಸೇರುವ ಕಲಾವಿದರ ಸಂಖ್ಯೆ ಶೂನ್ಯದತ್ತ ಮುಂದುವರಿದಿರುವಾಗ ಶಿವರಾಜ್ ಕುಮಾರ್ ಅವರ ಸಾಧನೆ ಒಂದು ಅಪೂರ್ವ ಘಟನೆ. ಮೂವತ್ತಾರು ವರ್ಷ ಕಳೆದರೂ ಬೇಡಿಕೆ ಕುಗ್ಗದೆ ಅದೇ ಉತ್ಸಾಹದಲ್ಲಿ ವರ್ಷಕ್ಕೆ ಎರಡು ಮೂರು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಅವರು ಕನ್ನಡ ಚಿತ್ರರಂಗದ ಕ್ರಿಯಾಶೀಲ ನಟ. ಜೊತೆಗೆ ಅದೃಷ್ಟದ ಕಿರೀಟ ತಲೆಯಿಂದ ಇಳಿಯದ ಭಾಗ್ಯಶಾಲಿ.

ಹೌದು. ಶಿವರಾಜ್ ಕುಮಾರ್ ಅವರು 1986ರಲ್ಲಿ ‘ಆನಂದ್’ ಚಿತ್ರದ ಮೂಲಕ ನಾಯಕ ನಟರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಸಮಯದಲ್ಲಿ ಅವರಿಗೆ ಒಬ್ಬ ಕಲಾವಿದ ಬಯಸುವ ಎಲ್ಲ ಭಾಗ್ಯಗಳೂ ಇದ್ದವು. ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆ ಡಾ. ರಾಜ್ ಅವರ ಸುಪುತ್ರನೆಂಬ ಹಿನ್ನೆಲೆಯಿತ್ತು. ಕೆ. ಬಾಲಚಂದರ್ ಅವರ ಸಲಹೆಯಂತೆ ತೆರೆಗೆ ಬರುವ ಮುನ್ನ ಚೆನ್ನೈನ ಸಿನೆಮಾ ಶಿಕ್ಷಣ ಸಂಸ್ಥೆಯಲ್ಲಿ ನಟನೆಯ ಪಾಠ ಕಲಿತು ಬಂದಿದ್ದರು. ಸ್ವಲ್ಪಕಾಲ ಕೂಚಿಪುಡಿ ನೃತ್ಯವನ್ನೂ ಗುರುಗಳಲ್ಲಿ ಅಭ್ಯಾಸ ಮಾಡಿದ್ದರು. ಚಿತ್ರರಂಗವನ್ನೇ ಉಸಿರಾಡಿದ ಚಿಕ್ಕಪ್ಪ ಎಸ್.ಪಿ. ವರದರಾಜ್, ಚಿತ್ರವೊಂದರ ಯಶಸ್ಸಿನ ಸೂತ್ರಗಳನ್ನು ಬಲ್ಲ ಕುಟುಂಬದ ಒಡನಾಡಿ, ಸಾಹಿತಿ ಚಿ. ಉದಯಶಂಕರ್ ಮತ್ತು ಪ್ರತಿಭಾವಂತ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ಅವರ ಮಾರ್ಗದರ್ಶನವಿತ್ತು. ಮಿಗಿಲಾಗಿ ಸಮಕಾಲೀನ ಸಂದರ್ಭದಲ್ಲಿ ಯುವ ಚಿತ್ರರಸಿಕರ ಒಲವು ನಿಲುವುಗಳನ್ನು ಅರಿತು ಚಿತ್ರರೂಪಿಸುತ್ತಿದ್ದ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಬೆಂಬಲವೂ ಇತ್ತು. ಇದ್ದ ಒಂದೇ ಅಳುಕೆಂದರೆ ಆ ದಶಕದಲ್ಲೂ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ತಂದೆಯ ಜೊತೆ ಹೋಲಿಸಿ ಈ ನಟನ ಸಾಮರ್ಥ್ಯವನ್ನು ಪ್ರೇಕ್ಷಕರು ತುಲನೆ ಮಾಡಿಬಿಡಬಹುದಾದ ಅಗ್ನಿಪರೀಕ್ಷೆ! ಆದರೆ ಆನಂದ್(1986) ಚಿತ್ರವು ಬಿಡುಗಡೆಯಾದ ನಂತರ ಪ್ರೇಕ್ಷಕರು ಅದನ್ನು ಸ್ವೀಕರಿಸಿದ ರೀತಿ, ಮೆಚ್ಚಿದ ಪರಿಯಿಂದಾಗಿ ಶಿವರಾಜ್ ಕುಮಾರ್ ಅಗ್ನಿಪರೀಕ್ಷೆಯನ್ನು ಗೆದ್ದರು. ಅವರು ತಮ್ಮ ನಟನೆ ಮಾತ್ರವಲ್ಲ, ಆ ಕಾಲಕ್ಕೆ ಯುವಜನರನ್ನು ಮಂತ್ರಮುಗ್ಧವಾಗಿಸಿದ ನೃತ್ಯಗಳಿಂದಲೂ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕಿದರು. ‘‘ಇದು ಓಡುವ ಕುದುರೆ’’ ಎಂಬುದು ಮೊದಲ ಚಿತ್ರದಿಂದಲೇ ಸಾಬೀತಾಯಿತು.

ಈ ಗೆಲುವಿನ ಓಟ ಅಲ್ಲಿಗೇ ನಿಲ್ಲಲಿಲ್ಲ. ಅದು ಎರಡನೇ ಚಿತ್ರ ‘ರಥಸಪ್ತಮಿ’ ಮತ್ತು ನಂತರದ ‘ಮನಮೆಚ್ಚಿದ ಹುಡುಗಿ’ ಚಿತ್ರದಲ್ಲೂ ಮುಂದುವರಿಯಿತು. ಕನ್ನಡ ಚಿತ್ರರಂಗದ ಆಗಸದಲ್ಲಿ ಹ್ಯಾಟ್ರಿಕ್ ಹೀರೋ ನಕ್ಷತ್ರವೊಂದು ಉದಯಿಸಿದ್ದು ಹಾಗೆ. ಅಲ್ಲಿಂದಾಚೆಗೆ ಶಿವರಾಜ್ ಕುಮಾರ್ ಅವರದು ಅಲ್ಲಲ್ಲಿ ಕೆಲವು ಸೋಲುಗಳಿದ್ದರೂ ಗೆಲುವೇ ಪಾರಮ್ಯ ಸಾಧಿಸಿದ ವೃತ್ತಿ ಬದುಕು. ಅವರು ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದಾಗ ಭಾರತೀಯ ಚಿತ್ರರಂಗದಲ್ಲಿ ಯುವಪ್ರತಿಭೆಗಳು ಲಗ್ಗೆಯಿಟ್ಟು ಗೆಲುವು ಸಾಧಿಸುತ್ತಿದ್ದ ಕಾಲ. ಭಾರತೀಯ ಚಿತ್ರರಂಗದಲ್ಲಿ ಹೊಸ ಕಲಾವಿದರು ಯುವಜನಾಂಗದ ಆಶೋತ್ತರಗಳನ್ನು ಪ್ರತಿನಿಧಿಸುವ ಚಿತ್ರಗಳ ಮೂಲಕ ಮನರಂಜನೆಯ ಹೊಸ ಮಾರ್ಗಗಳನ್ನು ರೂಪಿಸುತ್ತಿದ್ದರು. ಹಿಂದಿಯಲ್ಲಿ ಅನಿಲ್ ಕಪೂರ್, ಜಾಕಿ ಶ್ರಾಫ್, ಆಮಿರ್ ಖಾನ್, ಸಲ್ಮಾನ್ ಖಾನ್, ನಾನಾ ಪಾಟೇಕರ್, ತೆಲುಗಿನಲ್ಲಿ ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ತಮಿಳಿನಲ್ಲಿ ಕಮಲ್-ರಜನಿಯಲ್ಲದೆ, ಕೋಕಿಲ ಮೋಹನ್, ಕಾರ್ತಿಕ್, ಪ್ರಭು, ವಿಜಯಕಾಂತ್, ವಿಜಯ್, ಪಾರ್ತಿಬನ್, ಮುರಳಿ, ಅರ್ಜುನ್, ಮಲಯಾಳಂನಲ್ಲಿ ಮೋಹನ್‌ಲಾಲ್, ಸುಕುಮಾರನ್, ಶಂಕರ್ ಮುಂತಾದ ಯುವನಟರು ಮೋಡಿಹಾಕಿದ್ದ ಕಾಲ. ಅದೇ ಕಾಲದಲ್ಲಿಯೇ ಕನ್ನಡದಲ್ಲಿ ಶಿವರಾಜ್ ಕುಮಾರ್, ರವಿಚಂದ್ರನ್‌ರಂಥ ನಟರು ಆ ಮಾರ್ಗದ ಹರಿಕಾರರೆನಿಸಿದರು. ಹಾಗಾಗಿ ಶಿವರಾಜ್ ಕುಮಾರ್ ಅವರು ಸರಿಯಾದ ಕಾಲದಲ್ಲಿ ಸರಿಯಾದ ವೇದಿಕೆಯಲ್ಲಿ ಪ್ರವೇಶಪಡೆದ ಅದೃಷ್ಟಶಾಲಿ. ರವಿಚಂದ್ರನ್ ಅವರ ಆಸಕ್ತಿಗಳು ನಟನೆಯಿಂದಾಚೆಗೆ ನಿರ್ಮಾಣ, ನಿರ್ದೇಶನ, ವಿತರಣೆ, ಸಂಗೀತ, ಸಾಹಸ ಇತ್ಯಾದಿಗಳಿಗೆ ವಿಸ್ತರಿಸಿದ್ದರಿಂದ ಕಲಾವಿದರಾಗಿಯೇ ಶಿವರಾಜ್ ಕುಮಾರ್ ಉಳಿದದ್ದು ಅವರ ವೃತ್ತಿಬದುಕು ಏರುಗತಿಯಲ್ಲಿ ಸಾಗಲು ಒಂದು ಕಾರಣವೆನಿಸಿತು.

ಆದರೆ ಶಿವರಾಜ್ ಕುಮಾರ್ ಅವರ ಯಶಸ್ಸು ಇಷ್ಟೊಂದು ಸರಳವಾಗಿ ಸಾಧ್ಯವಾದ ಸಂಗತಿಯಲ್ಲ. ಅವರ ಕೌಟುಂಬಿಕ ಹಿನ್ನೆಲೆ, ತಂದೆಯ ಖ್ಯಾತಿ, ಒಲಿದ ಅದೃಷ್ಟ- ಇಷ್ಟೇ ಅವರನ್ನು ಈಗಿನ ಎತ್ತರಕ್ಕೆ ತಂದು ನಿಲ್ಲಿಸಲಿಲ್ಲ. ಹಾಗಿದ್ದರೆ ಅವರ ಹಿಂದೆಯೇ ಚಿತ್ರರಂಗಕ್ಕೆ ಆಗಮಿಸಿ ಎರಡು ಮತ್ತು ಮೂರನೆಯ ಚಿತ್ರದಲ್ಲಿ ದಾಖಲೆಗಳನ್ನು ಸೃಷ್ಟಿಸಿದ ‘ನಂಜುಂಡಿ ಕಲ್ಯಾಣ’ ಮತ್ತು ‘ಗಜಪತಿ ಗರ್ವಭಂಗ’ ಸಿನೆಮಾಗಳಲ್ಲಿ ನಟಿಸಿದ ರಾಘವೇಂದ್ರ ರಾಜ್‌ಕುಮಾರ್ ಸಹ ಇಂದು ಅದೇ ಎತ್ತರದಲ್ಲಿರಬೇಕಿತ್ತು. ಹಾಗಾಗಲಿಲ್ಲ. ಹಿನ್ನೆಲೆ ಮತ್ತು ಅದೃಷ್ಟ ಮಾತ್ರವೇ ಒಬ್ಬ ಕಲಾವಿದನ ಹಣೆಯಬರಹ ಬರೆಯಲಾರವು. ಮೂಲಭೂತವಾಗಿ ಆತ ಕಲಾವಿದನಾಗಿ ಜನಮನಕ್ಕೆ ಹತ್ತಿರವಾಗುವ ಪ್ರತಿಭೆಯಿದ್ದರೆ ಮಾತ್ರ ದೀರ್ಘಕಾಲ ಉಳಿಯಲು ಸಾಧ್ಯ ಎಂಬುದು ಶಿವರಾಜ್ ಕುಮಾರ್ ಅವರ ವಿಷಯದಲ್ಲಿ ಸಾಬೀತಾಗಿದೆ. ಅದಕ್ಕೆ ಕಾರಣಗಳಿವೆ.
ಶಿವರಾಜ್ ಕುಮಾರ್ ಅವರ ಗೆಲುವು ಅವರು ನಟಿಸಿದ ಚಿತ್ರಗಳ ವಸ್ತು ಮತ್ತು ಪಾತ್ರಗಳ ವೈವಿಧ್ಯಕ್ಕೂ ಸಲ್ಲುತ್ತದೆ. ತಮ್ಮ ಮೊದಲ ಮೂರು ಸಾಮಾಜಿಕ ಚಿತ್ರಗಳಲ್ಲಿ ಮೂರು ವಿಭಿನ್ನ ಹಿನ್ನೆಲೆಯ ಯುವಕನ ಪಾತ್ರ ವಹಿಸಿ ಗೆಲುವು ಪಡೆದ ನಂತರ ಅವರು ನಟಿಸಿದ್ದು, ಪುರಾಣವನ್ನು ಆಧರಿಸಿದ ‘ಶಿವ ಮೆಚ್ಚಿದ ಕಣ್ಣಪ್ಪ’. ರಾಜ್ ಅವರ ವೃತ್ತಿಬದುಕಿಗೆ ನಾಂದಿ ಹಾಡಿದ ಮಹೋನ್ನತ ಚಿತ್ರವನ್ನು ಮತ್ತೆ ನಿರ್ಮಿಸುವ ಎಂಟೆದೆಗೆ ಜೊತೆಯಾಗುವ ಧೈರ್ಯವನ್ನು ಮೆಚ್ಚಬೇಕಾದದ್ದೆ. ಆದರೆ ಅದು ಯಶಸ್ವಿಯಾಗಲಿಲ್ಲ. ಅಲ್ಲಿಂದಲೇ ಅವರು ಮತ್ತೆ ಸುರಕ್ಷಾವಲಯದ ವಸ್ತುಗಳಿಗೆ ಹೊರಳಿದರು. ತಮ್ಮ ಏಳನೇ ಚಿತ್ರ ‘ರಣರಂಗ’ ಬಿಡುಗಡೆಯಾಗುವ ವೇಳೆಗೆ ಹಾಡು, ಸಂಭಾಷಣೆ ಮೂಲಕ ಅವರ ಕುಟುಂಬದ ಹಿನ್ನೆಲೆಯ ಇಮೇಜಿಗೆ ಹೊಂದಿಸುವ-ಬಂಧಿಸುವ ಕೆಲಸವೂ ನಡೆಯಿತು. ‘‘ಇದು ಗಾಜನೂರಿನ ಗಂಡು ಕಾಣಮ್ಮೋ’’ ...ಕುಣಿಯೋದು ನನಗೆ ತಾತಾ ಬಿಟ್ಟಾ ಉಂಬಳಿ, ಕುಣಿಸೋದು ನನಗೆ ಅಪ್ಪಾ ಕೊಟ್ಟಾ ಬಳುವಳಿ’’ ಅಂಥ ಹಾಡು, ಡೈಲಾಗುಗಳ ಮೂಲಕ ಆ ಕಾರ್ಯ ನಡೆದರೂ ಆ ತೆರೆಯಿಂದ ಬೇಗನೆ ಹೊರಬಂದರು. ಆನಂತರ ಹಾಸ್ಯ (ಆಸೆಗೊಬ್ಬ ಮೀಸೆಗೊಬ್ಬ, ಗಡಿಬಿಡಿ ಅಳಿಯ), ಭಾವತೀವ್ರತೆಯ ದುರಂತ ಕಥೆ(ಮೋಡದ ಮರೆಯಲ್ಲಿ), ರೊಮ್ಯಾಂಟಿಕ್ ಕಥೆಗಳು(ಜಗಮೆಚ್ಚಿದ ಹುಡುಗ, ಚಿರಬಾಂಧವ್ಯ, ಆನಂದಜ್ಯೋತಿ), ಸಸ್ಪೆನ್ಸ್, ಸಾಹಸ, ರೋಮಾಂಚನದ ಕತೆಗಳು(ಸವ್ಯಸಾಚಿ, ಮುತ್ತಣ್ಣ, ಗಂಡುಗಲಿ) -ಹೀಗೆ ವಿವಿಧ ಬಗೆಯ ಚಿತ್ರಗಳಲ್ಲಿ ನಟಿಸುತ್ತ ಅದಾಗಲೇ ಸೃಷ್ಟಿಯಾಗಿದ್ದ ತಮ್ಮದೇ ಅಭಿಮಾನಿ ಬಳಗದ ಜೊತೆಗೆ ಬೇರೆಬೇರೆ ಹಿನ್ನೆಲೆಯ ಪ್ರೇಕ್ಷಕ ವೃಂದಕ್ಕೂ ಹತ್ತಿರವೆನಿಸಿದರು.

ಇದೇ ಸಂದರ್ಭದಲ್ಲಿ ಅವರು ಸವೆದ ಜಾಡು ತೊರೆದ ಬೇರೆ ಬೇರೆ ನಿರ್ದೇಶಕರ ಪ್ರಯೋಗಗಳಿಗೂ ಒಡ್ಡಿಕೊಳ್ಳುವ ಸಾಹಸ ಮಾಡಿದರು. ಅದು ಅವರ ನಟನೆಗೆ ಸಾಣೆ ಹಿಡಿದುದು ಮಾತ್ರವಲ್ಲ, ಜನಪ್ರಿಯತೆಯ ವಿಸ್ತರಣೆಗೂ ಕಾರಣವಾಯಿತು. ಶಿವರಾಜ್ ಕುಮಾರ್ ಅವರ ವೃತ್ತಿಬದುಕಿನಲ್ಲಿ ದೊಡ್ಡ ತಿರುವು ನೀಡಿದ ಚಿತ್ರಗಳಲ್ಲಿ ಉಪೇಂದ್ರ ನಿರ್ದೇಶನದ ‘ಓಂ’ ಸಹ ಒಂದು. ಭೂಗತ ವಸ್ತು ಹೊಸದಲ್ಲವಾದರೂ ನಿಜಜೀವನದ ಭೂಗತ ಸದಸ್ಯರನ್ನೇ ಚಿತ್ರದಲ್ಲಿ ಬಳಸಿದ ಮೊದಲ ಪ್ರಯತ್ನವಾಗಿ ಅದು ಸೃಷ್ಟಿಸಿದ ಸಂಚಲನೆ ಅಗಾಧ. ರಾಜ್ ಅವರ ಕುಟುಂಬದ ನಿರ್ಮಾಣದಲ್ಲಿ ಅಂಥದ್ದೊಂದು ವಸ್ತುವಿನ ಚಿತ್ರ ನಿರೀಕ್ಷಿಸುವುದೇ ಅಸಾಧ್ಯ. ಆದರೆ ಶಿವರಾಜ್ ಕುಮಾರ್ ಒಪ್ಪಿದರು. ಅದರ ಯಶಸ್ಸಿನ ನಂತರ ಮಾಮೂಲಿ ವ್ಯಾಪಾರಿ ಚಿತ್ರಗಳ ನಡುವೆಯೂ ವಿಭಿನ್ನ ಜಾಡಿನ ಚಿತ್ರಗಳಲ್ಲಿ ತೊಡಗಿಸಿಕೊಂಡ ಶಿವರಾಜ್ ಕುಮಾರ್ ಅವರ ವೃತ್ತಿ ಬದುಕು ನಿಂತ ನೀರಾಗದೆ ನಿತ್ಯ ಹರಿಯುವ ಹೊಳೆಯಾಗಿ ಮುಂದುವರಿಯಿತು. ಈ ಪಯಣದಲ್ಲಿ ವೃತ್ತಿಬದುಕು ಅನೇಕ ತಿರುವುಗಳನ್ನು ಕಂಡಿತು. ಅಲ್ಲಲ್ಲಿ ಬಾಕ್ಸ್ ಆಫೀಸ್ ಭೋರ್ಗರೆವ ಜಲಪಾತಗಳಂತೆ ಮೊರೆಯಿತು. ಸೋಲಿನ ಸುಳಿಗಳೂ ಕಂಡವು. ಪ್ರಶಾಂತವಾದ ಹರಹಿನ ಕಥೆಗಳೂ ಪ್ರೇಕ್ಷಕರನ್ನು ರಂಜಿಸಿದವು. ಹೀಗಾಗಿ ಅನೇಕ ದಾಖಲೆಗಳನ್ನು ಮಾಡಿದ, ಓಂ, ಜನುಮದ ಜೋಡಿ, ಜೋಡಿ ಹಕ್ಕಿ, ನಮ್ಮೂರ ಮಂದಾರ ಹೂವೆ, ಎ.ಕೆ.47, ಯಾರೆ ನೀ ಅಭಿಮಾನಿ, ಪ್ರೀತ್ಸೆ, ಗಲಾಟೆ ಅಳಿಯಂದ್ರು, ತವರಿಗೆ ಬಾ ತಂಗಿ, ರಿಷಿ, ಜೋಗಿ, ಮಫ್ತಿ, ಟಗರು, ದಿ ವಿಲನ್, ಭಜರಂಗಿ ಮುಂತಾದ ಚಿತ್ರಗಳು ನಿರ್ಮಾಣಗೊಂಡವು. ಇದಕ್ಕೆ ಶಿವರಾಜ್ ಕುಮಾರ್ ಅವರು ವಿಭಿನ್ನ ವಸ್ತುಗಳಿಗೆ ಒಡ್ಡಿಕೊಂಡದ್ದು ಮತ್ತು ಇಮೇಜಿನ ಹಂಗನ್ನು ತೊರೆದದ್ದು ಕಾರಣ.

ಇದರ ಜೊತೆಗೆ ಅವರು ನಟನಾಗಿ ಕಲಾತ್ಮಕ ಯಶಸ್ಸು ಸಾಧಿಸಿದ ಅನೇಕ ಚಿತ್ರಗಳಿವೆ. ಅಂಡಮಾನ್, ಚಿಗುರಿದ ಕನಸು, ಹಗಲುವೇಷ, ಜನುಮದಾತ, ಭೂಮಿತಾಯಿಯ ಚೊಚ್ಚಲ ಮಗ, ಜೋಡಿ ಹಕ್ಕಿ, ಹೃದಯ ಹೃದಯ, ಆಸೆಗೊಬ್ಬ ಮೀಸೆಗೊಬ್ಬ, ಮೋಡದ ಮರೆಯಲ್ಲಿ, ತಮಸ್ಸು, ಸಂತೆಯಲ್ಲಿ ನಿಂತ ಕಬೀರ, ಜನುಮದ ಜೋಡಿ, ನಮ್ಮೂರ ಮಂದಾರ ಹೂವೆ, ಕಿಲ್ಲಿಂಗ್ ವೀರಪ್ಪನ್ ಚಿತ್ರಗಳಲ್ಲಿ ಅವರಲ್ಲಿನ ಕಲಾವಿದ ವಿಜೃಂಭಿಸಿರುವುದನ್ನು ಕಾಣಬಹುದು. ತೀವ್ರ ಸ್ಪರ್ಧೆಯ ನಡುವೆ ಶಿವರಾಜ್ ಕುಮಾರ್ ಅವರು ದೀರ್ಘಕಾಲ ಉಳಿದು ಬಂದಿರುವುದು ಸಹ ಪವಾಡದಂತೆ ಕಾಣುತ್ತದೆ. ಪ್ರೇಕ್ಷಕರು ಅವರ ಚೇತೋಹಾರಿ ವರ್ತನೆ, ವೈವಿಧ್ಯ ಪಾತ್ರಗಳಲ್ಲಿ ರಾಜ್ ಅವರ ಮುಂದುವರಿಕೆಯನ್ನು ಗುರುತಿಸಿರುವುದು ನಿಜ. ಅವರು ಚಿತ್ರರಂಗಕ್ಕೆ ಪ್ರವೇಶಿಸಿದ ಸಮಯದಲ್ಲಿ ಡಾ. ರಾಜ್ ಅವರೂ ಸೇರಿದಂತೆ, ಹಿರಿಯ ನಟರಾದ ವಿಷ್ಣುವರ್ಧನ್, ಅಂಬರೀಷ್, ಅನಂತನಾಗ್, ಶಂಕರ್ ನಾಗ್, ಪ್ರಭಾಕರ್ ಮೊದಲಾದವರ ಪ್ರಭಾವ ಇನ್ನೂ ಗಾಢವಾಗಿತ್ತು. ಜೊತೆಗೆ ಸರಿ ಸುಮಾರು ಅವರ ಕಾಲದಲ್ಲಿಯೇ ಚಿತ್ರರಂಗಕ್ಕೆ ಆಗಮಿಸಿದ ವಿ. ರವಿಚಂದ್ರನ್, ಸುನೀಲ್, ಮುರಳಿ, ವಿನೋದ್ ಆಳ್ವಾ, ಅರ್ಜುನ್ ಸರ್ಜಾ, ರಮೇಶ್, ರಾಘವೇಂದ್ರ ರಾಜ್‌ಕುಮಾರ್, ಶಶಿಕುಮಾರ್, ಸಾಯಿಕುಮಾರ್ ಮೊದಲಾದ ನಟರ ತೀವ್ರ ಸ್ಪರ್ಧೆಯಿತ್ತು. ಬಳಿಕ ಜಗ್ಗೇಶ್, ಸುದೀಪ್ ನಂತರದ ಹೊಸ ತಲೆಮಾರಿನ ದರ್ಶನ್, ಗಣೇಶ್, ಯಶ್, ಅಷ್ಟೇ ಏಕೆ ಸೋದರ ಪುನೀತ್ ರಾಜ್ ಕುಮಾರ್ ಅವರ ಪ್ರಬಲ ಪೈಪೋಟಿ ಎದುರಾಗಿತ್ತು. ಹೀಗೆ ಮೂರು ತಲೆಮಾರಿನ ಕಲಾವಿದರ ತೀವ್ರ ಸ್ಪರ್ಧೆಯ ನಡುವೆಯೂ ಶಿವರಾಜ್ ಕುಮಾರ್ ಅವರ ಯಶಸ್ಸು ಅಬಾಧಿತವಾಗಿ ಮುಂದುವರಿದದ್ದು ಪವಾಡದಂತೆ ಕಂಡರೆ ಅಚ್ಚರಿಯಿಲ್ಲ.

ಇಷ್ಟು ಸ್ಪರ್ಧೆಯ ನಡುವೆಯೂ ವರ್ಷಕ್ಕೆ ಸರಾಸರಿ ನಾಲ್ಕರಂತೆ ಇಪ್ಪತ್ತೈದು ವರ್ಷಗಳಲ್ಲಿ ನೂರು ಚಿತ್ರಗಳನ್ನು ಪೂರೈಸಿದರು. ಇಂಥದ್ದೊಂದು ದಾಖಲೆ ಇತ್ತೀಚಿನ ದಶಕಗಳಲ್ಲಿ ಸಂಭವಿಸಿಲ್ಲ. ಆದ್ದರಿಂದಲೇ ಅವರು ರಾಜ್ ನಂತರ ಸುದೀರ್ಘವಾಗಿ ನಾಯಕ ನಟನಾಗಿ ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಕಲಾವಿದರೆನಿಸಿಕೊಂಡಿದ್ದಾರೆ. ಮೂವತ್ತಾರು ವರ್ಷಗಳ ನಂತರವೂ ಅದೇ ಬೇಡಿಕೆಯ ನಟರಾಗಿ ಉಳಿದಿದ್ದಾರೆ. ಶಿವರಾಜ್ ಕುಮಾರ್ ಅವರ ಈ ಸುದೀರ್ಘ ಪ್ರಯಾಣದಲ್ಲಿ ಜೊತೆಯಾದ ನಿರ್ದೇಶಕರ ಪಟ್ಟಿಯೂ ಅಷ್ಟೇ ದೊಡ್ಡದು. ಡಾ. ರಾಜ್ ಅವರನ್ನು ಹೊರತುಪಡಿಸಿದರೆ ಇಷ್ಟೊಂದು ವೈವಿಧ್ಯಮಯ ಹಿನ್ನೆಲೆಯ ನಿರ್ದೇಶಕರ ಜೊತೆಯಾದ ಕಲಾವಿದರ ಸಂಖ್ಯೆ ಅಪರೂಪ. ಶಿವರಾಜ್ ಕುಮಾರ್ ಅವರ ಯಶಸ್ಸಿನಲ್ಲಿ ಈ ನಿರ್ದೇಶಕರ ಪಾತ್ರವನ್ನೂ ಮರೆಯುವಂತಿಲ್ಲ. ಅವರ ಅತಿ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಎಂ.ಎಸ್. ರಾಜಶೇಖರ್ ಅವರದ್ದು. ಅದರ ಜೊತೆಗೆ ಹಿರಿಯ ತಲೆಮಾರಿನ ಸಿಂಗೀತಂ ಶ್ರೀನಿವಾಸರಾವ್, ವಿ.ಸೋಮಶೇಖರ್, ವಿಜಯ್, ಭಾರ್ಗವ, ರಾಜೇಂದ್ರ ಸಿಂಗ್ ಬಾಬು, ಡಿ.ರಾಜೇಂದ್ರ ಬಾಬು, ಸಾಯಿಪ್ರಕಾಶ್, ಎಸ್. ನಾರಾಯಣ್, ದಿನೇಶ್ ಬಾಬು, ರೇಲಂಗಿ, ಕೆ.ಎನ್. ಚಂದ್ರಶೇಖರ್, ಶಿವಮಣಿ, ಮಹೇಂದರ್, ಚಿ. ದತ್ತರಾಜ್, ಫಣಿ ರಾಮಚಂದ್ರ, ವೈ.ಎಸ್. ರಮೇಶ್, ಪಿ. ವಾಸು ಅವರಿಂದ ಹಿಡಿದು ಹೊಸ ತಲೆಮಾರಿನ ವಿ. ಮನೋಹರ್, ಪ್ರೇಮ್, ಎ. ಹರ್ಷ, ಚಂದ್ರು, ವಿಜಯ್ ಮಿಲ್ಟನ್‌ವರೆಗೆ ಮುಂದುವರಿಯುತ್ತದೆ. ಜೊತೆಗೆ ಈ ಪಟ್ಟಿ ಸಿದ್ಧಮಾದರಿಗಳನ್ನು ತೊರೆದವರೆಂದು ಹೇಳುವ ನಿರ್ದೇಶಕರಾದ ಟಿ.ಎಸ್. ನಾಗಾಭರಣ, ಸುನೀಲ್ ಕುಮಾರ್ ದೇಸಾಯಿ, ಬರಗೂರು ರಾಮಚಂದ್ರಪ್ಪ, ದುನಿಯಾ ಸೂರಿ, ರಾಮಗೋಪಾಲ್ ವರ್ಮ ಅವರವರೆಗೆ ವ್ಯಾಪಿಸುತ್ತದೆ.

ಈವರೆಗೆ ನೂರ ಇಪ್ಪತ್ತಮೂರು ಚಿತ್ರಗಳಲ್ಲಿ ನಾಯಕರಾಗಿ ನಟಿಸಿರುವ ಅವರ ಚಿತ್ರಗಳಲ್ಲಿ ಸುಮಾರು ಇಪ್ಪತ್ತೈದು ಚಿತ್ರಗಳು ಅನ್ಯಭಾಷೆಯಿಂದ ರೀಮೇಕ್ ಆದ ಚಿತ್ರಗಳು ಎನ್ನುವುದೊಂದು ವಿಚಿತ್ರ. ಬಹುತೇಕ ರೀಮೇಕ್ ಚಿತ್ರಗಳು ಯಶಸ್ಸು ಗಳಿಸಿರುವುದು ಮತ್ತೂ ವಿಚಿತ್ರ. ಆದರೂ ಕಾಲಕಾಲಕ್ಕೆ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಮೂಲಕ ಸುದೀರ್ಘಕಾಲ ಜನಪ್ರಿಯತೆ ಉಳಿಸಿಕೊಂಡು ಬಂದಿರುವ ಶಿವರಾಜ್ ಕುಮಾರ್ ಅವರು ಈಗಲೂ ಹೊಸ ಕತೆಗಳಿಗೆ ಹುಡುಕುವ, ಹೊಸ ನಿರ್ದೇಶಕರಿಗೆ ಅವಕಾಶ ನೀಡುವ ಮತ್ತು ಹೊಸ ಬಗೆಯ ಚಿತ್ರಗಳಲ್ಲಿ ತೊಡಗಿಸಿಕೊಳ್ಳುವ ಹಂಬಲವನ್ನು ಬತ್ತದಂತೆ ಕಾಪಾಡಿಕೊಂಡು ಬಂದಿದ್ದಾರೆ. ಸಾರ್ವಜನಿಕ ವರ್ತನೆಯಲ್ಲೂ ತಂದೆ ಡಾ. ರಾಜ್ ಅವರ ಮೌಲ್ಯಗಳನ್ನು ಅನುಸರಿಸುತ್ತಾ, ವಿವಾದಗಳಿಂದ ದೂರವಾಗಿ, ಉದ್ಯಮದ ಬಿಕ್ಕಟ್ಟುಗಳ ಕಾಲದಲ್ಲಿ ದನಿಯೆತ್ತಿ ಸಕ್ರಿಯ ಕಲಾವಿದರಾಗಿ ಉಳಿದಿದ್ದಾರೆ. ರಾಜ್ ಹಾಕಿಕೊಟ್ಟ ಸತ್ಸಂಪ್ರದಾಯದ ಮುಂದುವರಿದ ಕೊಂಡಿಯಾಗಿ ಶಿವರಾಜ್ ಕುಮಾರ್ ಅವರನ್ನು ಕನ್ನಡ ಪ್ರೇಕ್ಷಕರು ಗುರುತಿಸಿರುವುದೂ ಅವರ ಯಶಸ್ಸಿನ ಭಾಗವಾಗಿರುವುದು ಆಶ್ಚರ್ಯವಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)