ಶಾಂತಿ-ಸಹನೆ-ತ್ಯಾಗ : ಈದುಲ್ ಅಝ್‌ಹಾ
ಪ್ರವಾದಿ ಇಬ್ರಾಹೀಮರು ಮನುಷ್ಯನ ಆಂತರ್ಯದಲ್ಲಿ ಅಡಗಿರುವ ಎಲ್ಲಾ ಕಲ್ಮಶಗಳನ್ನು ಹೊರಹಾಕಿ ನಿಶ್ಕಲ್ಮಶವಾಗಿ ತನ್ನನ್ನು ತಾನು ದೇವನಿಗೆ ಸಮರ್ಪಿಸಿದ ಪರಿಯಿಂದಾಗಿ ಸರ್ವ ಕಠಿಣ ಪರೀಕ್ಷೆಗಳನ್ನು ಗೆದ್ದರು. ಅಂದಿನ ಸರ್ವಾಧಿಕಾರಿಗಳ ಎದುರು ತನ್ನ ಸಹನಾ ಶಕ್ತಿಯಿಂದ ಅಧೀರರಾಗದೆ ನಿಂತರು. ತನಗೆ, ತನ್ನ ದೇವನಿಗೆ ಕಠೋರ ಮಾತುಗಳಿಂದ ನಿಂದಿಸಿದಾಗಲೂ ಸಂಯಮದಿಂದ ತನ್ನ ದೇವನ ಸಂದೇಶವನ್ನು ತಿಳಿಹೇಳಿದರು. ಶಾಂತಿ-ಸಹನೆ-ತ್ಯಾಗ ಇದು ಹಝ್ರತ್ ಇಬ್ರಾಹೀಮ್(ಅ) ಅವರ ಅಸ್ತ್ರಗಳಾಗಿದ್ದವು.
ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ನಡೆದಿರುವ ದೇವ ಸಂಪ್ರೀತಿಯ ಬದುಕಿನ ಘಟನೆಯನ್ನು ಸಹಸ್ರ ಸಹಸ್ರ ವರ್ಷಗಳ ನಂತರವೂ ಸ್ಮರಿಸಿ ಅದರಿಂದ ಪ್ರೇರಿತರಾಗಿ ದುರ್ಗುಣಗಳನ್ನು ದೂರೀಕರಿಸುವ ಮೂಲಕ ಸಂತಸಪಡುವ ದಿನವೇ ಈದುಲ್ ಅಝ್‌ಹಾ (ಬಕ್ರೀದ್).
ಈದುಲ್ ಫಿತ್ರ್ (ರಮಝಾನ್ ಹಬ್ಬ) ರಮಝಾನ್ ತಿಂಗಳ ಉಪವಾಸದೊಂದಿಗೆ ಬೆರೆತು ಹೋಗಿದ್ದರೆ ಈದುಲ್ ಅಝ್‌ಹಾ ಹಝ್ರತ್ ಪ್ರವಾದಿ ಇಬ್ರಾಹೀಮ್ (ಅ) ಅವರ ಬದುಕಿನ ಘಟನೆಯೊಂದಿಗೆ ಸಂಬಂಧ ಹೊಂದಿದೆ. ನಾಲ್ಕು ಸಾವಿರ ವರ್ಷಗಳ ಹಿಂದಿನ ಕಾಲ.
ಇರಾಕಿನ ಪ್ರಾಚೀನ ಉರ್ ಎಂಬ ಪ್ರದೇಶದಲ್ಲಿ ಹಝ್ರತ್ ಇಬ್ರಾಹೀಮ್ (ಅ)ಅವರ ಜನನವಾಯಿತು.
ಅದು ಧಾರ್ಮಿಕವಾಗಿ ಅಂಧಕಾರದಿಂದ ಕೂಡಿದ್ದ ಕಾಲವಾಗಿತ್ತು. ರಾಜಕೀಯವಾಗಿ ಸರ್ವಾಧಿಕಾರದಿಂದ ಕೂಡಿದ್ದ ಕಾಲವದು. ಸಾಮಾಜಿಕವಾಗಿ ಮೌಢ್ಯ ಮನೆ ಮಾಡಿತ್ತು. ರಾಜನೇ ದೇವನು ಎಂಬ ಅಲಿಖಿತವಾದ ನಿಯಮ ರೂಢಿಯಲ್ಲಿತ್ತು. ರಾಜ ತನ್ನನ್ನು ತಾನು ದೇವತ್ವಕ್ಕೆ ಏರಿಸಿಕೊಂಡು ಪ್ರಜೆಗಳ ಮುಗ್ಧತೆಯನ್ನು ಬಳಸಿಕೊಂಡು ಆಳ್ವಿಕೆ ಮಾಡುತ್ತಿದ್ದ ಕಾಲವಾಗಿತ್ತು ಅದು. ಇಂತಹ ಕಾಲಘಟ್ಟದಲ್ಲಿ ಪ್ರವಾದಿ ಇಬ್ರಾಹೀಮ(ಅ)ರು ಓರ್ವ ಪುರೋಹಿತರ ಮನೆಯಲ್ಲಿ ಜನಿಸಿ ಬಾಲಕನಾಗಿದ್ದಾಗಲೇ ತನ್ನ ಮನೆಯಲ್ಲಿ ತನ್ನ ಹೆತ್ತವರು ಹೊಂದಿದ್ದ ಅಂಧಶ್ರದ್ಧೆಯನ್ನು ದೂರೀಕರಿಸುವ ಪ್ರಯತ್ನ ಮಾಡಿದರು. ಅಂದಿನ ಅವರ ಆರಾಧನಾ ಕ್ರಮ, ಮೂಢನಂಬಿಕೆಗಳನ್ನು ತನ್ನ ತಂದೆ- ತಾಯಿಯ ಬಳಿ ಚರ್ಚಿಸುವ ಮೂಲಕ ವಿರೋಧಿಸಿದರು. ಅದು ಫಲ ಕೊಡದೆ ಇದ್ದಾಗ ಅವರೊಂದಿಗೆ ತರ್ಕ ಮಾಡಿ ಮನವರಿಕೆ ಮಾಡಲು ಪ್ರಯತ್ನಿಸಿದರು. ಯಾವುದಕ್ಕೂ ಅವರು ಇಬ್ರಾಹೀಮ್(ಅ) ಅವರ ಮಾತನ್ನು ಒಪ್ಪಲು ಸಿದ್ಧರಿಲ್ಲದಿದ್ದಾಗ ತನ್ನ ಜನಾಂಗದ ಇತರ ಜನರ ಬಳಿ ಸತ್ಯ ಸಂದೇಶವನ್ನು ಪ್ರಚುರಪಡಿಸಿದರು.
ಅದು ಬ್ಯಾಬಿಲೋನಿಯಾ ನಾಗರಿಕತೆಯ ಕಾಲ. ಯೂಪ್ರೆಟಿಸ್ ಮತ್ತು ಟೈಗ್ರಿಸ್ ನದಿಗಳ ನಡುವಿನ ವಿಶಾಲ ಪ್ರದೇಶಗಳಲ್ಲಿ ನಾಗರಿಕತೆ ಬೆಳೆಯುತ್ತಿತ್ತು.
ಆ ಪ್ರದೇಶ ನಮ್ರೂದ್ ಎಂಬ ಸರ್ವಾಧಿಕಾರಿಯ ಆಡಳಿತದ ಬಿಗಿ ಹಿಡಿತದಲ್ಲಿತ್ತು. ಯುವಕನೊಬ್ಬ (ಇಬ್ರಾಹೀಮ್) ಜನಸಮುದಾಯದ ನಡುವೆ ಹೊಸ ಸಿದ್ಧಾಂತವನ್ನು ಪ್ರಚುರಪಡಿಸುತ್ತಿದ್ದಾನೆ. ಬಹುದೇವತ್ವದಿಂದ ಏಕದೇವತ್ವದೆಡೆಗೆ ಜನರನ್ನು ಸೆಳೆಯುತ್ತಿದ್ದಾನೆ. ಅಂದಿನ ಧಾರ್ಮಿಕ ಆಚರಣೆಗಳನ್ನು ವಿರೋಧಿಸುತ್ತಿದ್ದಾನೆ. ಕಣ್ಣಿಗೆ ಕಾಣುವ ಮಾನವ ನಿರ್ಮಿತ ರಚನೆಗಳಾಗಲೀ, ಪ್ರಕೃತಿಯ ಬಗೆಬಗೆಯ ಅಂಶಗಳಾಗಲೀ ದೇವರಲ್ಲ ಬದಲಿಗೆ ಅವೆಲ್ಲವೂ ದೇವರ ಸೃಷ್ಟಿಯೆಂದು ಬೋಧಿಸುತ್ತಿದ್ದಾನೆ. ಅಲ್ಲಾಹನು ಇಡೀ ಜಗತ್ತಿನ ಒಡೆಯನು ಮತ್ತು ಆತನ ನಿಯಂತ್ರಣದಲ್ಲೇ ಎಲ್ಲವೂ ಇದೆ ಎಂದು ಹೇಳುತ್ತಿದ್ದಾನೆ ಎಂಬ ದೂರು ಚಕ್ರವರ್ತಿ ನಮ್ರೂದನಿಗೆ ತಲುಪುತ್ತದೆ.ತಾನು ರಾಜನು ಮಾತ್ರವಲ್ಲ ದೇವಸಮಾನ ಎಂದು ಬಿಂಬಿಸಿದ್ದ ನಮ್ರೂದನಿಗೆ ಈ ಯುವಕನ ಹೊಸ ತತ್ವ ಪ್ರಚಾರದ ಸುದ್ದಿ ಕೇಳಿ ಆಕ್ರೋಶದಿಂದ ಆ ಯುವಕನನ್ನು ತನ್ನ ಅರಮನೆಗೆ ಬರಹೇಳಿದನು. ನಿನ್ನ ದೇವನಾರು? ಎಂದು ಚಕ್ರವರ್ತಿ ಕೇಳಿದಾಗ ಇಬ್ರಾಹೀಮ್(ಅ) ಅವರು ತನ್ನ ಬದುಕು ಮತ್ತು ಮರಣವನ್ನು ನಿರ್ಧರಿಸುವವನೇ ನನ್ನ ದೇವನು, ಆತನೇ ಅಲ್ಲಾಹು ಎಂದು ಉತ್ತರಿಸಿದರು. ಅದಕ್ಕೆ ಪ್ರತಿಯಾಗಿ ನಮ್ರೂದನು ನಾನು ಇಲ್ಲಿ ಸೇರಿರುವ ಜನರ ಪ್ರಾಣವನ್ನು ನಿರ್ಧರಿಸಬಲ್ಲೆ, ಬೇಕಾದರೆ ನಿಮ್ಮ ಪೈಕಿ ಯಾರಿಗಾದರೂ ಮರಣದಂಡನೆ ವಿಧಿಸಬಲ್ಲೆ ಅಥವಾ ಉಳಿಸಬಲ್ಲೆ ಎಂದಾಗ ಪ್ರವಾದಿ ಇಬ್ರಾಹೀಮ್(ಅ)ರು ಹಾಗಾದರೆ ನೀನು ದೇವ ಅಥವಾ ದೇವಸಮಾನವಾದಲ್ಲಿ ನಿರ್ದಿಷ್ಟ ದಿಕ್ಕಿನಲ್ಲಿ ಉದಯಿಸುವ ಸೂರ್ಯನನ್ನು ವಿರುದ್ಧ ದಿಕ್ಕಿನಲ್ಲಿ ಉದಯಿಸುವಂತೆ ಮಾಡು ಎಂದು ಸವಾಲು ಹಾಕಿದರು. ಇದರಿಂದ ವಿಚಲಿತನಾದ ಚಕ್ರವರ್ತಿಯು ಈ ಯುವಕನಲ್ಲಿ ಅದೇನೋ ವಿಶೇಷತೆಯಿದೆಯೆಂದು ಮನಗಂಡು ಈತನನ್ನು ಬಿಟ್ಟರೆ ನಮ್ಮ ಯಥಾಸ್ಥಿತಿವಾದ ಉಳಿಯಲಾರದು ಎಂದು ತಿಳಿದು ಕಠಿಣ ಶಿಕ್ಷೆ ವಿಧಿಸುವ ತೀರ್ಮಾನ ಮಾಡಿದನು. ಉರಿಯುತ್ತಿರುವ ಅಗ್ನಿಕುಂಡಕ್ಕೆ ಪ್ರವಾದಿಯವರನ್ನು ಎಸೆಯುವ ಶಿಕ್ಷೆಯದು.
ಆದರೆ ಅಂತಹ ಘೋರಶಿಕ್ಷೆಯಿಂದ ಪ್ರವಾದಿ ಇಬ್ರಾಹೀಮ್ (ಅ)ರು ಪವಾಡಸದೃಶವಾಗಿ ಪಾರಾಗಿ ಬರುತ್ತಾರೆ. ಆಡಳಿತಗಾರರ ದೌರ್ಜನ್ಯ, ಜನರ ಅಸಹಕಾರದಿಂದಾಗಿ ತನ್ನ ಊರನ್ನು ಬಿಟ್ಟು ವಲಸೆ ಹೋಗಲು ನಿರ್ಧರಿಸಿದ ಪ್ರವಾದಿಯವರು ತನ್ನ ಪತ್ನಿ ಸಾರಾ ಮತ್ತು ಸಹೋದರ ಪುತ್ರನೊಂದಿಗೆ ಈಜಿಪ್ಟ್ ಕಡೆಗೆ ಪ್ರಯಾಣ ಬೆಳೆಸಿದರು. ನೈಲ್ ನದಿಯನ್ನು ವರವಾಗಿ ಪಡೆದಿದ್ದ ಈಜಿಪ್ಟ್ ಅಂದು ಸಮೃದ್ಧ ದೇಶವಾಗಿತ್ತು. ಪ್ರವಾದಿ ಇಬ್ರಾಹೀಮ್(ಅ) ಅವರು ಹೊಸ ಕರ್ಮಭೂಮಿಯಲ್ಲಿ ಇಸ್ಲಾಮಿನ ಸಂದೇಶ ಪ್ರಚುರಪಡಿಸಿದರು. ವರ್ಷಗಳು ಉರುಳುತ್ತಿತ್ತು. ಪ್ರವಾದಿಯವರಿಗೆ ಮಕ್ಕಳಾಗಿರಲಿಲ್ಲ.
ಆ ಕೊರಗು ದಂಪತಿಯಲ್ಲಿ ಕಾಡುತ್ತಿತ್ತು. ಆನಂತರ ಹಾಜಿರಾ ಎಂಬ ಮಹಿಳೆಯನ್ನು ಎರಡನೇ ವಿವಾಹವಾದ ಪ್ರವಾದಿಯವರು ತನಗೆ ಸದ್ಗುಣಶೀಲ ಮಗುವೊಂದನ್ನು ದಯಪಾಲಿಸುವಂತೆ ಅಲ್ಲಾಹನಲ್ಲಿ ನಿರಂತರ ಪ್ರಾರ್ಥಿಸುತ್ತಿದ್ದರು. ಈ ಪ್ರಾರ್ಥನೆಗೆ ಉತ್ತರವಾಗಿ ಪ್ರವಾದಿಯವರಿಗೆ ಓರ್ವ ಸಹನಶೀಲ ಮಗುವನ್ನು ದಯಪಾಲಿಸಲಾಯಿತು ಎಂದು ಪವಿತ್ರ ಕುರ್‌ಆನ್ ಹೇಳುತ್ತದೆ. ಇಬ್ರಾಹೀಮ(ಅ)ರು ಇಳಿವಯಸ್ಸು ತಲುಪಿದಾಗ ಅಚ್ಚರಿ ಎಂಬಂತೆ ಎರಡನೇ ಪತ್ನಿ ಹಾಜಿರಾ ಅವರ ಮೂಲಕ ಒಂದು ಗಂಡುಮಗುವನ್ನು ಪಡೆದರು. ಬೈಬಲ್ ಪ್ರಕಾರ ಈ ಹಂತದಲ್ಲಿ ಪ್ರವಾದಿಯವರ ವಯಸ್ಸು ಸುಮಾರು ಎಂಭತ್ತಾರು ಎಂದಿದೆ. ಮಗುವಾಗಿದ್ದಾಗಲೇ ಮಾದರಿಯಾದ ಗುಣಲಕ್ಷಣಗಳಿಂದ ಕೂಡಿದ್ದ ಇಸ್ಮಾಯೀಲ್(ಅ) ತಂದೆ ತಾಯಿಯ ಪ್ರೀತಿಯ ಕಣ್ಮಣಿಯಾಗಿದ್ದರು.
ಅಗ್ನಿಕುಂಡದಂತಹ ಪರೀಕ್ಷೆಗಳನ್ನು ಎದುರಿಸಿದ್ದ ಪ್ರವಾದಿ ಇಬ್ರಾಹೀಮರಿಗೆ ಇದೀಗ ಅಲ್ಲಾಹನ ಕಡೆಯಿಂದ ಮತ್ತೊಂದು ಪರೀಕ್ಷೆ ಎದುರಾಯಿತು.
ತನ್ನ ಪತ್ನಿ ಮತ್ತು ಮುದ್ದಾದ ಮಗುವನ್ನು ದೂರದ ನಿರ್ಜನ ಪ್ರದೇಶವಾದ ಮಕ್ಕಾದಲ್ಲಿ ಬಿಟ್ಟು ಬರಬೇಕೆಂಬ ಆದೇಶವಾಯಿತು. ಇದರಿಂದ ವಿಚಲಿತರಾಗದ ಇಬ್ರಾಹೀಮರು ಇದು ಅಲ್ಲಾಹನ ಆದೇಶ, ಆತನೇ ತನ್ನ ಪತ್ನಿ ಮತ್ತು ಮಗುವಿಗೆ ಸಂರಕ್ಷಕ ಎಂಬ ಅಚಲ ವಿಶ್ವಾಸದಿಂದ ಇಬ್ಬರನ್ನೂ ಮರುಭೂಮಿಯಾದ ಮಕ್ಕಾದಲ್ಲಿ ಬಿಟ್ಟುಬರುವರು.
ಜನರಿಲ್ಲದ, ನೀರಿಲ್ಲದ ಅಂದಿನ ಮಕ್ಕಾದಲ್ಲಿ ಒಂದು ತೊಟ್ಟು ನೀರಿಗಾಗಿ ಬೆಂಗಾಡಿನಲ್ಲಿ ತಾಯಿ ಹಾಜಿರಾ ಓಡಾಡುವರು. ಸಫಾ ಮತ್ತು ಮರ್ವಾ ಎಂಬ ಬೆಟ್ಟಗಳನ್ನು ಹತ್ತಿ ಇಳಿಯುವರು. ಆದರೆ ನೀರಿನ ಹನಿಯೂ ಸಿಗಲಾರದು. ಮಗು ನೀರಿಗಾಗಿ ಪರಿತಪಿಸುತ್ತಿತ್ತು. ತಾಯಿ ಹಾಜಿರಾ ನೀರಿಲ್ಲದೆ ಬಸವಳಿದು ಮಗುವಿನ ಬಳಿ ಬಂದಾಗ ಅಲ್ಲಿ ಒಂದು ಪವಾಡವೇ ನಡೆದಿತ್ತು. ಮಗುವಿನ ಕೋಮಲ ಕಾಲುಗಳು ತಾಗಿದ ನೆಲದಲ್ಲಿ ಪುಟಿದೆದ್ದ ನೀರು ಚಿಮ್ಮ ತೊಡಗಿತ್ತು. ನೀರಿಲ್ಲದೆ ಮರುಭೂಮಿಯಾಗಿದ್ದ ಆ ಮಕ್ಕಾದ ನೆಲದಲ್ಲಿ ಈ ನೀರಿನ ಬುಗ್ಗೆ ಎಣೆಯಿಲ್ಲದೆ ಹರಿದಾಡಿತು. ‘ಝಂ ಝಂ’ ಎಂದು ಕರೆಯಲ್ಪಡುವ ಆ ನೀರಿನ ಕೊಳ ಸಾವಿರಾರು ವರ್ಷಗಳ ನಂತರವೂ ಮಕ್ಕಾದಲ್ಲಿ ಪವಿತ್ರ ಜಲವಾಗಿ ಇಂದಿಗೂ ಯಥೇಚ್ಛವಾಗಿ ಲಭ್ಯವಿರುವುದು ಸೃಷ್ಟಿಕರ್ತನ ಪವಾಡವೇ ಸರಿ. ಈ ನೀರಿನಿಂದ ಆ ಪ್ರದೇಶದಲ್ಲಿ ಸಸ್ಯ ಸಂಕುಲಗಳು ಬೆಳೆಯತೊಡಗಿತು. ಪ್ರಾಣಿಪಕ್ಷಿಗಳು ನೆಲೆನಿಂತವು. ಪತ್ನಿ ಮತ್ತು ಮಗ ಇಸ್ಮಾಯೀಲ್(ಅ) ರನ್ನು ನೋಡಿಕೊಂಡು ಹೋಗಲು ಇಬ್ರಾಹೀಮ್(ಅ)ಅವರು ಆಗಾಗ ಬಂದು ಹೋಗುತ್ತಿದ್ದರು.
ಮಗನಿಗೆ ಸುಮಾರು ಹದಿನಾಲ್ಕು-ಹದಿನೈದು ವರ್ಷ ಪ್ರಾಯವಾದಾಗ ತಂದೆ ಇಬ್ರಾಹೀಮ್(ಅ)ರಿಗೆ ಮಗುವನ್ನು ಅಲ್ಲಾಹನ ಮಾರ್ಗದಲ್ಲಿ ಬಲಿ ನೀಡಬೇಕೆಂಬ ಆದೇಶವಾಯಿತು. ಇದೊಂದು ಅತ್ಯಂತ ಕಠಿಣ ಪರೀಕ್ಷೆಯಾಗಿತ್ತು. ಇಳಿವಯಸ್ಸಿನಲ್ಲಿ ಪ್ರಾಪ್ತಿಯಾದ ಏಕೈಕ ಮಗನನ್ನು ಬಲಿನೀಡಬೇಕೆಂಬ ವಾಣಿ ಅಲ್ಲಾಹನ ಕಡೆಯಿಂದ ಬಂದಾಗ ಪ್ರವಾದಿಯವರು ಇದು ತನಗೆ ಒದಗಿದ ಪರೀಕ್ಷೆ ಎಂದೇ ಭಾವಿಸಿದರು. ಅಲ್ಲಾಹನೇ ನೀಡಿದ ಮಗುವನ್ನು ಅಲ್ಲಾಹನಿಗೆ ಮರಳಿಸಲು ಅವರು ನಿರ್ಧರಿಸಿದರು.
ಅವರು ಸಂಶಯಪಡಲಿಲ್ಲ. ಅಧೀರರಾಗಲಿಲ್ಲ.
ಯಾಕಾಗಿ ನನಗೆ ಈ ಶಿಕ್ಷೆ ಎಂದು ಪರಿತಪಿಸಲಿಲ್ಲ.
ವಿಧಿಯನ್ನು ಹಳಿಯಲಿಲ್ಲ. ತನ್ನ ಪುತ್ರನಿಗೆ ಈ ವಿಷಯವನ್ನು ಅರುಹಿದಾಗ ಬಾಲಕ ಇಸ್ಮಾಯೀಲ್(ಅ)ಅತ್ಯಂತ ಉಜ್ವಲವಾದ ದೇವಭಕ್ತಿಯನ್ನು ತೋರಿದರು. ಯಾವುದೇ ಹಿಂಜರಿಕೆಯಿಲ್ಲದೆ ಅಲ್ಲಾಹನ ಇಚ್ಛಾನುಸಾರ ತನ್ನನ್ನು ಬಲಿನೀಡಲು ಒಪ್ಪಿಗೆ ಸೂಚಿಸಿದ ಬಾಲಕ ಇಸ್ಮಾಯೀಲ್(ಅ) ಅಚಲವಾದ ದೇವನಿಷ್ಠೆಯನ್ನು ವ್ಯಕ್ತಪಡಿಸಿದರು. ಪ್ರವಾದಿ ಇಬ್ರಾಹೀಮ್(ಅ)ರು ತನ್ನ ಪುತ್ರನನ್ನು ಬಲಿಪೀಠದಲ್ಲಿರಿಸಿ ಬಲಿನೀಡಲು ಮುಂದಾದಾಗ ಅಲ್ಲಾಹನು ತನ್ನ ದೇವಚರರ ಮೂಲಕ ಒಂದು ಟಗರನ್ನು ಬಾಲಕನ ಬದಲಿಗೆ ಕಳುಹಿಸಿ ನೀವು ಅಲ್ಲಾಹನಿಗಾಗಿ ಸಂಪೂರ್ಣ ಸಮರ್ಪಣೆಯ ಪರೀಕ್ಷೆಯಲ್ಲಿ ವಿಜಯಿಯಾಗಿದ್ದೀರಿ. ಅಲ್ಲಾಹನಿಗೆ ಯಾವುದೇ ಮಾನವ ಬಲಿಯ ಅಗತ್ಯವಿಲ್ಲ ಬದಲಿಗೆ ನಿಮ್ಮ ಅಚಲವಾದ ನಂಬಿಕೆ, ವಿಶ್ವಾಸ, ಸಮರ್ಪಣಾಭಾವ ಮಾತ್ರ ಬೇಕಾಗಿತ್ತು ಎಂಬ ಸಂದೇಶವನ್ನು ನೀಡಿದನು. ಅಲ್ಲಿ ಒಂದು ಪ್ರಾಣಿಯ ಸಾಂಕೇತಿಕ ಬಲಿ ನೀಡುವ ಮೂಲಕ ಇಸ್ಮಾಯೀಲ್(ಅ) ಅವರ ಬಲಿ ನಿರ್ಧಾರವನ್ನು ಒಂದು ಮಹಾ ತ್ಯಾಗದ ಸಂಕೇತವಾಗಿ ಅಲ್ಲಾಹನು ಸ್ವೀಕರಿಸಿದನು. ಈ ರೀತಿ ಪ್ರವಾದಿ ಇಬ್ರಾಹೀಮರು ಅಲ್ಲಾಹನ ಪ್ರತಿಯೊಂದು ಕಠಿಣ ಪರೀಕ್ಷೆಗಳಲ್ಲೂ ತನ್ನ ತ್ಯಾಗದ ಮೂಲಕ ವಿಜಯಿಯಾಗುತ್ತಾರೆ. ಅಲ್ಲಾಹನು ಇಬ್ರಾಹೀಮ್ (ಅ) ಅವರನ್ನು ತನ್ನ ಆಪ್ತಸ್ನೇಹಿತ ಎಂದು ಘೋಷಿಸಿದ್ದಾನೆ.
ಮಾನವನ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠವಾದ ತ್ಯಾಗಕ್ಕೆ ನಿದರ್ಶನವಾದ ಈ ಘಟನೆಯ ನೆನಪಿನಲ್ಲಿ ಈದುಲ್ ಅಝ್‌ಹಾವನ್ನು ಜಾಗತಿಕವಾಗಿ ಮುಸಲ್ಮಾನರು ಆಚರಿಸುತ್ತಾರೆ. ಅಲ್ಲದೆ ತಂದೆ ಇಬ್ರಾಹೀಮ್ (ಅ) ಮತ್ತು ಮಗ ಇಸ್ಮಾಯೀಲ್(ಅ)ರವರು ಜೊತೆ ಸೇರಿ ನಿರ್ಮಿಸಿದ ಮಕ್ಕಾದ ಕಅಬಾ ಭವನವು ಮೊದಲ ಆರಾಧನಾಲಯವಾಯಿತು. ಅಂದು ಜನರಿಲ್ಲದ ಬೆಂಗಾಡಾಗಿದ್ದ ಮಕ್ಕಾ ಪ್ರದೇಶದಲ್ಲಿ ಕಅಬಾ ನಿರ್ಮಾಣದ ನಂತರ ಜನರು ವಾಸಮಾಡತೊಡಗಿದರು. ಮುಂದೆ ಇಸ್ಲಾಮಿನ ಐದನೇ ಮೂಲಭೂತ ತತ್ವವಾದ ಹಜ್ ನಿರ್ವಹಣೆಯ ಕೇಂದ್ರವಾಗಿ ಈ ಕಅಬಾ ಮಾರ್ಪಟ್ಟಿತು. ಅಲ್ಲದೆ ದೈನಂದಿನ ನಮಾಝಿನ ದಿಕ್ಕಾಗಿಯೂ ಬದಲಾಯಿತು.
ಪ್ರವಾದಿಗಳ, ಸಾಧು-ಸಂತರ ಮೂಲಕ ಮನುಷ್ಯನನ್ನು ಸುಧಾರಿಸಲು ಈ ಜಗತ್ತಿನಲ್ಲಿ ಸಾವಿರಾರು ಪ್ರಯತ್ನವಾಗಿವೆ.ಮನುಷ್ಯನಿಗೆ ಅವನ ಷಡ್ವರ್ಗಗಳೇ ಶತ್ರುಗಳು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಈ ಆರು ಶತ್ರುಗಳು ಮಾನವನನ್ನು ದಾನವನನ್ನಾಗಿ ಮಾಡುತ್ತವೆ. ಈ ಶತ್ರುಗಳನ್ನು ಗೆಲ್ಲವುದು ಅಷ್ಟು ಸುಲಭದ ವಿಚಾರವಲ್ಲ. ಈ ಆರು ಶತ್ರುಗಳನ್ನು ಗೆದ್ದರೆ ಅವನೇ ಶ್ರೇಷ್ಠ ಮನುಷ್ಯ.
ಪ್ರವಾದಿ ಇಬ್ರಾಹೀಮರು ಮನುಷ್ಯನ ಆಂತರ್ಯದಲ್ಲಿ ಅಡಗಿರುವ ಎಲ್ಲಾ ಕಲ್ಮಶಗಳನ್ನು ಹೊರಹಾಕಿ ನಿಶ್ಕಲ್ಮಶವಾಗಿ ತನ್ನನ್ನು ತಾನು ದೇವನಿಗೆ ಸಮರ್ಪಿಸಿದ ಪರಿಯಿಂದಾಗಿ ಸರ್ವ ಕಠಿಣ ಪರೀಕ್ಷೆಗಳನ್ನು ಗೆದ್ದರು. ಅಂದಿನ ಸರ್ವಾಧಿಕಾರಿಗಳ ಎದುರು ತನ್ನ ಸಹನಾ ಶಕ್ತಿಯಿಂದ ಅಧೀರರಾಗದೆ ನಿಂತರು. ತನಗೆ, ತನ್ನ ದೇವನಿಗೆ ಕಠೋರ ಮಾತುಗಳಿಂದ ನಿಂದಿಸಿದಾಗಲೂ ಸಂಯಮದಿಂದ ತನ್ನ ದೇವನ ಸಂದೇಶವನ್ನು ತಿಳಿಹೇಳಿದರು. ಶಾಂತಿ-ಸಹನೆ-ತ್ಯಾಗ ಇದು ಹಝ್ರತ್ ಇಬ್ರಾಹೀಮ್(ಅ) ಅವರ ಅಸ್ತ್ರಗಳಾಗಿದ್ದವು. ಪ್ರವಾದಿ ಇಬ್ರಾಹೀಮ್(ಅ) ಅವರು ಗತಿಸಿ ನಾಲ್ಕು ಸಾವಿರ ವರ್ಷಗಳು ಕಳೆದು ಹೋಗಿವೆ.
ಅವರ ನೆನಪಿನಲ್ಲಿ ಇಂದಿಗೂ ಜಗತ್ತಿನಾದ್ಯಂತ ಈದುಲ್ ಅಝ್‌ಹಾ ಆಚರಿಸುವ ಸಂದರ್ಭದಲ್ಲಿ ಕೇವಲ ಬಾಹ್ಯ ಶುದ್ಧೀಕರಣ ಮಾತ್ರವಲ್ಲದೆ ಅಂತರಂಗದ ದುಷ್ಟ ಆಲೋಚನೆಗಳನ್ನು ಬಲಿ ನೀಡುವ ಮೂಲಕ ನಮ್ಮನ್ನು ನಾವು ಸುಧಾರಿಸಿದರೆ ಅದುವೇ ಶ್ರೇಷ್ಠವಾದ ಈದ್( ಹಬ್ಬ). ಮಾನವ ಹತ್ಯೆ, ಅತ್ಯಾಚಾರ, ದ್ರೋಹ, ಗಲಭೆ, ಕೊಳ್ಳಿ ಇಡುವಿಕೆ, ಪರಸ್ಪರ ನಿಂದನೆ, ದೂಷಣೆ, ವಂಚನೆ, ಅಪರಾಧಿ ಚಟುವಟಿಕೆಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ನಮ್ಮನ್ನು ಸುಧಾರಿಸಲು, ಸನ್ಮಾರ್ಗದೆಡೆಗೆ ಕರೆದೊಯ್ಯಲು ಮತ್ತೊಬ್ಬ ಪ್ರವಾದಿ ಹುಟ್ಟಿ ಬರಲಾರರು. ಕಳೆದು ಹೋದ ದಿನಗಳಲ್ಲಿ ಬದುಕಿದ್ದ ಪ್ರವಾದಿಗಳ ಆದರ್ಶಗಳನ್ನು ಪರಿಪಾಲಿಸುವ ಮೂಲಕ ನಮ್ಮಿಳಗಿನ ಅರಿಷಡ್ವರ್ಗಗಳನ್ನು ಬಲಿ ನೀಡುವ ಮೂಲಕ ಸಮಸಮಾಜದ ಆಶಯದೊಂದಿಗೆ ಈದ್ ಆಚರಿಸಿದರೆ ಅದು ಅಲ್ಲಾಹನಿಗೆ ಇಷ್ಟದ ಕಾರ್ಯವೂ ಹೌದು, ಪ್ರವಾದಿ ಇಬ್ರಾಹೀಮ(ಅ)ರಿಗೆ ನೀಡುವ ಗೌರವವೂ ಹೌದು.