ದ್ರೌಪದಿ ಮುರ್ಮು ಆದಿವಾಸಿ ದಲಿತ, ದಮನಿತರ ಪ್ರತಿನಿಧಿಯಾಗುವರೇ?
ಜಾಗತಿಕ ಭಾರೀ ಕಾರ್ಪೊರೇಟ್ ವ್ಯವಸ್ಥೆ ಯೋಜಿತ ಜಾಗತೀಕರಣದ ಪ್ರಕ್ರಿಯೆಗಳನ್ನು ಬಿರುಸುಗೊಳಿಸುವ ಸಂದರ್ಭಗಳಲ್ಲೇ ಸಮಾಜದ ಅಡಿಪಾಯ ಸಮುದಾಯ ಹಿನ್ನೆಲೆಯವರನ್ನು ರಾಷ್ಟ್ರಪತಿಯಂತಹ ಸ್ಥಾನಗಳಲ್ಲಿ ಕೂರಿಸುವ ಕಾರ್ಯಗಳು ನಡೆದಿದ್ದು ಎನ್ನುವುದನ್ನು ನಾವು ಗಮನಿಸಬಹುದು. ಈಗ ನಮ್ಮ ದೇಶದ ರಾಷ್ಟ್ರಪತಿ ಆಗಹೊರಟಿರುವವರು ಹಲವು ಬಾರಿ ಶಾಸಕರಾಗಿ, ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಾ ಬಂದವರು. ಆದರೆ ಮೊನ್ನೆಯಷ್ಟೇ ಅದೂ ರಾಷ್ಟ್ರಪತಿ ಅಭ್ಯರ್ಥಿ ಎಂದು ತೀರ್ಮಾನಿಸಿದ ನಂತರವೇ ಅವರ ಸ್ವಂತ ಊರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು ಎಂದು ಸುದ್ದಿಯಾಯಿತು. ನಮ್ಮ ದೇಶದ ಅಡಿಪಾಯದ ಸಮುದಾಯವನ್ನು ಆಳುವ ವ್ಯವಸ್ಥೆ ಎಷ್ಟೊಂದು ಕ್ರೂರವಾಗಿ ಹಾಗೂ ವ್ಯವಸ್ಥಿತವಾಗಿ ತನ್ನ ಹಿತಾಸಕ್ತಿಗಳಿಗಾಗಿ ಬಳಸುತ್ತಾ ಬರುತ್ತಿದೆ ಎನ್ನಲು ಇದು ಮತ್ತೊಂದು ರೂಪಕವೆನ್ನಬಹುದು.
ಭಾರತದ ಆಳುವ ಶಕ್ತಿಗಳು ಒಬ್ಬ ಆದಿವಾಸಿ ಹಿನ್ನೆಲೆಯವರನ್ನು ರಾಷ್ಟ್ರಪತಿಯಾಗಿಸಿಕೊಳ್ಳಲು ಹೊರಟಿದೆ. ಸಂಘಪರಿವಾರದ ಬಿಜೆಪಿ ಸರಕಾರ ದ್ರೌಪದಿ ಮುರ್ಮು ಎಂಬ ಆದಿವಾಸಿ ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಭವನದಲ್ಲಿ ಪ್ರತಿಷ್ಠಾಪಿಸಲು ತಯಾರಿ ನಡೆಸಿದೆ. ಮುರ್ಮು ರಾಷ್ಟ್ರಪತಿ ಅಭ್ಯರ್ಥಿ ಎಂದು ಪ್ರಚಾರವಾಗುವ ಸಂದರ್ಭದಲ್ಲೇ ಮುರ್ಮು ಗುಡಿಯೊಂದರ ಬಳಿಗೆ ಧಾವಿಸುತ್ತಾ ಹೋಗುವ ವೇಗದಲ್ಲೇ ಕಸಪೊರಕೆಯೊಂದನ್ನು ಕೇಳುವ, ನಂತರ ಸೆರಗು ಸೊಂಟಕ್ಕೆ ಕಟ್ಟಿ ದೇವಸ್ಥಾನದ ಅಂಗಳವನ್ನು ಭಯಭಕ್ತಿಯಿಂದ ಗುಡಿಸುವ ವೀಡಿಯೋ ಕೂಡ ಸಾಕಷ್ಟು ಪ್ರಸಾರವಾಯಿತು. ಈ ದೇಶದ ರಾಷ್ಟ್ರಪತಿ ಹೇಗಿರಬೇಕು ಎಂಬುದನ್ನು ಹೇಳುತ್ತಿರುವ ರೂಪಕವಾಗಿಯೂ ಇದನ್ನು ತಿಳಿಯಬಹುದೇನೋ!.
ನಮ್ಮ ದೇಶಕ್ಕೆ ದಲಿತ ಹಿನ್ನೆಲೆಯ, ಮುಸ್ಲಿಮ್ ಹಿನ್ನೆಲೆಯ, ಮಹಿಳಾ ಹಿನ್ನೆಲೆಯ ರಾಷ್ಟ್ರಪತಿಗಳಾಗಿ ಹೋಗಿದ್ದಾರೆ. ಆಗೆಲ್ಲಾ ರಾಷ್ಟ್ರಪತಿ ಭವನ ಈ ದೇಶದ ದಲಿತದಮನಿತ ಜನಸಾಮಾನ್ಯರಿಗೆ ಸಂವಿಧಾನದತ್ತ ಹಕ್ಕುಗಳು ಸೌಲಭ್ಯಗಳು ಸಿಗುವಂತೆ ಮಾಡಿದ್ದಾಗಲೀ, ಸರಕಾರಗಳು ಸಂವಿಧಾನವನ್ನು ಮುಂದಿಡುತ್ತಾ ದೇಶದ ಜನಸಾಮಾನ್ಯರ ಸಂಪತ್ತುಗಳನ್ನು ಜಾಗತಿಕ ಕಾರ್ಪೊರೇಟ್‌ಗಳಿಗೆ ವರ್ಗಾಯಿಸುವುದನ್ನು ತಡೆಯುವಂತಹ ಕಾರ್ಯ ನಿರ್ವಹಿಸಿದ ಉದಾಹರಣೆಗಳಿಲ್ಲ. ಬದಲಿಗೆ ಇಂತಹ ಹಿನ್ನೆಲೆಯವರು ರಾಷ್ಟ್ರಪತಿಗಳಾಗುವ ಸಂದರ್ಭಗಳಲ್ಲಿ ದೇಶವನ್ನು ಮತ್ತಷ್ಟು ಜಾಗತಿಕ ಭಾರೀ ಕಾರ್ಪೊರೇಟ್‌ಗಳ ಹಿಡಿತಕ್ಕೆ ಸರಿಸುವಂತಹ ಕಾರ್ಯಗಳೇ ಹೆಚ್ಚಾಗಿ ನಡೆದವು ಎನ್ನುವುದನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬೇಕಾಗಿದೆ. ಹಿಂದೆ ರಾಷ್ಟ್ರಪತಿಯಾಗಿದ್ದ ಗ್ಯಾನಿ ಜೈಲ್ ಸಿಂಗ್ ತಮ್ಮದೇ ಆದ ಕೆಲವು ರಾಜಕೀಯ ಕಾರಣಗಳಿಗಾಗಿ ಆಗಿನ ರಾಜೀವ್ ಗಾಂಧಿ ಸರಕಾರದ ಕೆಲವು ನೀತಿಗಳನ್ನು ಹಾಗೂ ಆ ಸರಕಾರ ಅನುಮೋದಿಸಿದ ಕೆಲವು ಕಾನೂನುಗಳಿಗೆ ಸಹಿ ಹಾಕದೆ ಮರಳಿಸಿದ್ದು ಬಿಟ್ಟರೆ ಉಳಿದಂತೆ ಬಹುತೇಕ ರಾಷ್ಟ್ರಪತಿಗಳು ಆಳುವ ಸರಕಾರಗಳ ಜೊತೆಗೆ ತಕರಾರಿಲ್ಲದೆ ಕಾರ್ಯ ನಿರ್ವಹಿಸಿದ್ದರು. ನಮ್ಮ ದೇಶದಲ್ಲಿ ರಾಷ್ಟ್ರಪತಿ ಸಂವಿಧಾನಾತ್ಮಕ ಹುದ್ದೆಯಾಗಿದ್ದರೂ ಆ ಹುದ್ದೆಗಿರುವ ಸಾಂವಿಧಾನಿಕ ಅಧಿಕಾರ ಬಹಳ ಸೀಮಿತವಾದುದು.
ಜಾಗತಿಕ ಭಾರೀ ಕಾರ್ಪೊರೇಟ್ ವ್ಯವಸ್ಥೆ ಯೋಜಿತ ಜಾಗತೀಕರಣದ ಪ್ರಕ್ರಿಯೆಗಳನ್ನು ಬಿರುಸುಗೊಳಿಸುವ ಸಂದರ್ಭಗಳಲ್ಲೇ ಸಮಾಜದ ಅಡಿಪಾಯ ಸಮುದಾಯ ಹಿನ್ನೆಲೆಯವರನ್ನು ರಾಷ್ಟ್ರಪತಿಯಂತಹ ಸ್ಥಾನಗಳಲ್ಲಿ ಕೂರಿಸುವ ಕಾರ್ಯಗಳು ನಡೆದಿದ್ದು ಎನ್ನುವುದನ್ನು ನಾವು ಗಮನಿಸಬಹುದು. ಈಗ ನಮ್ಮ ದೇಶದ ರಾಷ್ಟ್ರಪತಿ ಆಗಹೊರಟಿರುವವರು ಹಲವು ಬಾರಿ ಶಾಸಕರಾಗಿ, ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಾ ಬಂದವರು. ಆದರೆ ಮೊನ್ನೆಯಷ್ಟೇ ಅದೂ ರಾಷ್ಟ್ರಪತಿ ಅಭ್ಯರ್ಥಿ ಎಂದು ತೀರ್ಮಾನಿಸಿದ ನಂತರವೇ ಅವರ ಸ್ವಂತ ಊರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು ಎಂದು ಸುದ್ದಿಯಾಯಿತು. ನಮ್ಮ ದೇಶದ ಅಡಿಪಾಯದ ಸಮುದಾಯವನ್ನು ಆಳುವ ವ್ಯವಸ್ಥೆ ಎಷ್ಟೊಂದು ಕ್ರೂರವಾಗಿ ಹಾಗೂ ವ್ಯವಸ್ಥಿತವಾಗಿ ತನ್ನ ಹಿತಾಸಕ್ತಿಗಳಿಗಾಗಿ ಬಳಸುತ್ತಾ ಬರುತ್ತಿದೆ ಎನ್ನಲು ಇದು ಮತ್ತೊಂದು ರೂಪಕವೆನ್ನಬಹುದು. ಬಂಗಾಳದ ಜನಪರ ಸಾಹಿತಿ ಮಹಾ ಶ್ವೇತಾದೇವಿ ತಮ್ಮದೊಂದು ಕಥೆಯ ನಾಯಕಿಯನ್ನಾಗಿ ದೋಪ್ದಿ ಎಂಬ ಆದಿವಾಸಿ ಮಹಿಳೆಯನ್ನು ಮಾಡಿದ್ದರು. ಅವರ ಕಥಾಸಂಕಲನಕ್ಕೂ 'ದೋಪ್ದಿ ಮತ್ತು ಇತರ ಕತೆಗಳು' ಎಂಬ ಹೆಸರಿತ್ತು. ಅದು ಕನ್ನಡಕ್ಕೂ ಅನುವಾದಗೊಂಡಿದೆ. ಅವರ ಕತಾ ನಾಯಕಿ ದೋಪ್ದಿ ಆಳುವ ವ್ಯವಸ್ಥೆಯ ಜನರ ಮೇಲಿನ ಕ್ರೂರ ದಮನದ ವಿರುದ್ಧ ರಾಜಿರಹಿತವಾಗಿ ಸಿಡಿದು ನಿಂತ ಧೀರ ನಾಯಕಿ. ಸರಕಾರದ ಜನವಿರೋಧಿತನವನ್ನು ಪ್ರಶ್ನಿಸಿ ಹೋರಾಡಿದ ಕಾರಣಕ್ಕೆ, ಅದೂ ಅಲ್ಲದೆ ಹೆಣ್ಣು ಎಂಬ ಕಾರಣಕ್ಕಾಗಿಯೇ ತನ್ನ ಶರೀರದ ಮೇಲೆಯೇ ಸರಕಾರಿ ಪಡೆಗಳು ಕ್ರೂರವಾಗಿ ದಾಳಿ ನಡೆಸುವಾಗಲೂ ಎದುರಿಸಿ ಸೆಡ್ಡು ಹೊಡೆದು ನಿಲ್ಲುವ ಗಟ್ಟಿಗಿತ್ತಿಯಾದ ನಾಯಕಿ ದೋಪ್ದಿ. ಆಳುವ ವ್ಯವಸ್ಥೆ ಅಭಿವೃದ್ಧಿ ಮತ್ತು ಪರಿಸರ ರಕ್ಷಣೆಯ ಹೆಸರಿನಲ್ಲಿ ಯಾವ ಮಟ್ಟದ ಕ್ರೌರ್ಯವನ್ನು ಈ ದೇಶದ ಆದಿವಾಸಿ ಸಮುದಾಯಗಳ ಮೇಲೆ, ಮಹಿಳೆಯರ ಮೇಲೆ ಹರಿಬಿಡುತ್ತಾ ಅವರ ಬದುಕುಗಳನ್ನು ಮೂರಾಬಟ್ಟೆ ಮಾಡುತ್ತಾ ಬರಲಾಗಿದೆ ಎನ್ನುವುದನ್ನು ಮಹಾಶ್ವೇತಾದೇವಿಯರ ಈ ಕಥೆೆ ಕಣ್ಣಿಗೆ ಕಟ್ಟುವಂತೆ ತೆರೆದಿಡುತ್ತದೆ. ಅದು ಕೇವಲ ಕಥೆಯಲ್ಲ ಈ ದೇಶದ ಬಹುಸಂಖ್ಯಾತ ಆದಿವಾಸಿ ಬುಡಕಟ್ಟು ಸಮುದಾಯಗಳು ಈಗಲೂ ಇರುವ ಪರಿಸ್ಥಿತಿಯೇ ಆಗಿದೆ.
ಬ್ರಿಟಿಷ್ ಆಡಳಿತ ಇಲ್ಲಿನ ಹಲವಾರು ಬುಡಕಟ್ಟು ಸಮುದಾಯಗಳನ್ನು ಅಪರಾಧಿ ಬುಡಕಟ್ಟುಗಳೆಂದೇ (criminal tribes) ದಾಖಲಿಸಿ ದಮನಿಸಲು ಶ್ರಮಿಸಿತ್ತು. ಕಾರಣ ಈ ಸಮುದಾಯಗಳು ಬ್ರಿಟಿಷ್ ಆಡಳಿತಕ್ಕೆ ಒಡ್ಡಿದ ಸೆಡ್ಡು ಅಂತಹುದಾಗಿತ್ತು. ಈಗಲೂ ನಮ್ಮ ಹಾಲಿ ಆಡಳಿತ ವ್ಯವಸ್ಥೆಯಡಿ ಕೂಡ ಅವೇ ನೀತಿಗಳು ಮುಂದುವರಿದಿವೆ. ಬ್ರಿಟಿಷ್ ಆಡಳಿತಕ್ಕೆ ಆದಿವಾಸಿ ಸಶಸ್ತ್ರ ಬಂಡಾಯಗಳನ್ನು ಹತ್ತಿಕ್ಕಲು ಸಾಧ್ಯವೇ ಆಗಿರಲಿಲ್ಲ. ಚೋಟಾ ನಾಗಪುರದ ಬಿರ್ಸಾ ಮುಂಡಾ, ಛತ್ತೀಸ್‌ಗಡದ ನಾರಾಯಣ ಸಿಂಗ್, ಆಂಧ್ರದ ಅಲ್ಲೂರಿ ಸೀತಾರಾಮರಾಜು, ನಾಗಾ ಬುಡಕಟ್ಟು ನಾಯಕಿ ರಾಣಿ ಗಯಿಧಿನಿಲ್ಯೂ, ಸಂತಾಲ್ ಬುಡಕಟ್ಟು ನಾಯಕರಾದ ಸಿಧು ಮುರ್ಮು ಮತ್ತು ಕಾನು ಮುರ್ಮು ಮೊದಲಾದ ಬುಡಕಟ್ಟು ಹಿನ್ನೆಲೆಯ ನಾಯಕರು ಬ್ರಿಟಿಷ್ ಆಡಳಿತದ ನಿದ್ದೆ ಕೆಡಿಸಿದ್ದರು. ಹಲವಾರು ಬುಡಕಟ್ಟು ನಾಯಕರನ್ನು ಬ್ರಿಟಿಷ್ ಆಡಳಿತ ಸೆರೆಹಿಡಿದು ಅತ್ಯಂತ ಕ್ರೂರವಾಗಿ ಕೊಂದು ಹಾಕಿದ್ದರೂ ಬುಡಕಟ್ಟು ಸಶಸ್ತ್ರ ಬಂಡಾಯಗಳು ದೇಶದ ಉದ್ದಗಲಕ್ಕೂ ಸಿಡಿಯುತ್ತಲೇ ಇದ್ದವು. ಚಕ್ಮ, ಗೊಂಡ, ಹಾಲ್ಬ, ಪಹಾರಿಯಾ, ಕೋಲಿ, ಚೌರ, ಭೂಮಿಜ್, ಮಿಜೋ, ಕೋಯಾ, ಭಿಲ್, ಕರ್ನಾಟಕದ ಹಲಗಲಿಯ ಬೇಡ ಬುಡಕಟ್ಟು... ಇತ್ಯಾದಿ ನೂರಾರು ಬುಡಕಟ್ಟುಗಳು ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟಗಳನ್ನು ನಡೆಸಿದ್ದವು. ಇದಕ್ಕೆ ಪ್ರಧಾನ ಕಾರಣ ಬ್ರಿಟಿಷರು ನಡೆಸುತ್ತಿದ್ದ ಅರಣ್ಯ ಹಾಗೂ ಪರಿಸರ ಸಂಪತ್ತಿನ ಲೂಟಿ ಮತ್ತು ಬುಡಕಟ್ಟು ಪ್ರದೇಶಗಳ ಮೇಲಿನ ಆಕ್ರಮಣಗಳಾಗಿದ್ದವು. ಇದಕ್ಕೆ ಸ್ಥಳೀಯ ಭೂಮಾಲಕ ವರ್ಗ ಸಾಥ್ ನೀಡುತ್ತಿತ್ತು. ಈ ಭೂಮಾಲಕ ವರ್ಗ ಆ ಮೂಲಕ ಆದಿವಾಸಿ ಬುಡಕಟ್ಟು ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಕಾರ್ಯ ನಡೆಸುತ್ತಾ ಬಂದಿತ್ತು.
ನಮ್ಮ ದೇಶದ ನೀರಾವರಿ, ವಿದ್ಯುತ್ ಉತ್ಪಾದನೆ ಮೊದಲಾದ ಅಭಿವೃದ್ಧಿಗೆ ಆರಂಭವೆಂದು ಬಣ್ಣಿಸುತ್ತಾ ಬಂದಿರುವ ಜಗತ್ತಿನ ಬೃಹತ್ ಯೋಜನೆಗಳಲ್ಲಿ ಒಂದೆಂದು ಪರಿಗಣಿತವಾಗಿದ್ದ ಮೊದಲನೇ ಪಂಚವಾರ್ಷಿಕ ಯೋಜನೆಯ ಬಾಕ್ರಾ-ನಂಗಲ್ ಯೋಜನೆಯಿಂದ ಹಿಡಿದು ಇದುವರೆಗಿನ ಅಭಿವೃದ್ಧಿ ಹೆಸರಿನ ಯೋಜನೆಗಳ ನೆಪದಲ್ಲಿ ಮಿಲಿಯಾಂತರ ಜನಸಾಮಾನ್ಯರನ್ನು ಒಕ್ಕಲೆಬ್ಬಿಸಲಾಗಿದೆ. ಪ್ರವಾಹ ನಿಯಂತ್ರಣದ ನೆಪದಲ್ಲೂ ಹಲವಾರು ಜಲಾಶಯಗಳನ್ನು ಕಟ್ಟಲಾಗಿದೆ. ಇಂಡಿಯನ್ ಸೋಷಿಯಲ್ ಇನ್‌ಸ್ಟಿಟ್ಯೂಟ್ ಪ್ರಕಾರವೇ 1998ರ ವೇಳೆಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ಸುಮಾರು 21.3 ದಶಲಕ್ಷ ಜನರನ್ನು ಒಕ್ಕಲೆಬ್ಬಿಸಲಾಗಿದೆ. ಇದರಲ್ಲಿ ಭಾರೀ ಜಲಾಶಯಗಳು, ಗಣಿಗಾರಿಕೆಗಳು, ಕೈಗಾರಿಕಾ ಅಭಿವೃದ್ಧಿ, ವನ್ಯಜೀವಿ ಸಂರಕ್ಷಣೆ ಮತ್ತು ರಾಷ್ಟ್ರೀಯ ಉದ್ಯಾನವನಗಳು ಸೇರಿವೆ. ಒಕ್ಕಲೆಬ್ಬಿಸಿದವರಲ್ಲಿ ಬಹುಸಂಖ್ಯಾತರು ಆದಿವಾಸಿ ಬುಡಕಟ್ಟು ಸಮೂಹಗಳಿಗೆ ಸೇರಿದವರು ಮತ್ತು ಇತರ ಬಡ ಜನಸಮುದಾಯಗಳು ಎನ್ನುವುದರಲ್ಲಿ ಅನುಮಾನ ಬೇಕಿಲ್ಲ. ಈ ಅಂಕಿಅಂಶಗಳು ಪರಿಸ್ಥಿತಿಯ ಪೂರ್ಣ ಚಿತ್ರಣವನ್ನು ನೀಡುತ್ತಿದೆ ಎಂದು ಇದರ ಅರ್ಥವಲ್ಲ. ಇದರ ಹಲವುಪಟ್ಟು ಗಂಭೀರವಾದ ಪ್ರತ್ಯಕ್ಷ ಹಾಗೂ ಪರೋಕ್ಷ ಹಾನಿಗಳನ್ನು ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ಇನ್ನಿತರ ಜನಸಾಮಾನ್ಯರಿಗೆ ಹಾಗೂ ಪರಿಸರಕ್ಕೆ ಆಳುವ ವ್ಯವಸ್ಥೆ ಮಾಡುತ್ತಾ ಬಂದಿದೆ. ಅದರ ಪರಿಣಾಮಗಳನ್ನು ನಾವಿಂದು ಅನುಭವಿಸುತ್ತಲೂ ಇದ್ದೇವೆ.
ಒಕ್ಕಲೆಬ್ಬಿಸಿದವರಿಗೆ ನೀಡಿದ್ದ ಭರವಸೆಯಂತೆ ನ್ಯಾಯಯುತ ಪರಿಹಾರ ಕಲ್ಪಿಸಿ, ಕೃಷಿಯೋಗ್ಯ ಭೂಮಿ, ಉದ್ಯೋಗ, ಮೂಲಭೂತ ಸೌಲಭ್ಯ ನೀಡಿರುವ ಬಗ್ಗೆ ಗಮನಿಸಿದರೆ ಬಹಳ ಗಾಬರಿಯಾಗುತ್ತದೆ. ನಮ್ಮ ಆಳುವ ವ್ಯವಸ್ಥೆಯು ಹೇರುತ್ತಿರುವ ಅಭಿವೃದ್ಧಿಯು ಎಷ್ಟು ಮಟ್ಟಕ್ಕೆ ಬಹುಸಂಖ್ಯಾತರಾಗಿರುವ ಈ ದೇಶದ ಅಡಿಪಾಯದ ಸಮುದಾಯಗಳ ವಿರುದ್ಧವಾಗಿದೆ ಎನ್ನುವುದು ಕಣ್ಣಿಗೆ ರಾಚುತ್ತದೆ. 1950-1990ರವರೆಗಿನ ಒಂದು ಅಂಕಿಅಂಶದಂತೆ ಜಲಾಶಯ, ಗಣಿಗಾರಿಕೆ, ಬೃಹತ್ ಕೈಗಾರಿಕೆ, ವನ್ಯಜೀವಿ ಸಂರಕ್ಷಣೆ ಹಾಗೂ ರಾಷ್ಟ್ರೀಯ ಉದ್ಯಾನವನ ಹೆಸರಿನ ಅಭಿವೃದ್ಧಿ ಯೋಜನೆಗಳಲ್ಲಿ ಒಟ್ಟು ನಿರ್ವಸಿತರಾದವರಲ್ಲಿ ಶೇ.25ರಿಂದ 30ರಷ್ಟು ಜನರಿಗೆ ಪುನರ್ವಸತಿ ಎಂದು ಹೆಸರಿಗೆ ಮಾತ್ರ ಪರಿಹಾರ ಹಾಗೂ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಅದು ಕೂಡ ಸರಿಯಾದ ಪರ್ಯಾಯವಲ್ಲ. ಬಂಜರು ಭೂಮಿ, ನೀರಿನ ಸೌಲಭ್ಯ ಇಲ್ಲದ ಭೂಮಿಗೆ ಅವರನ್ನೆಲ್ಲಾ ತಳ್ಳಿಹಾಕಿರುವುದು ಕಣ್ಣಿಗೆ ರಾಚುತ್ತದೆ. ಆದರೆ ಹಾಗೆ ನಿರ್ವಸಿತರಾದವರಲ್ಲಿ ಶೇ.80ಕ್ಕೂ ಹೆಚ್ಚುಭಾಗ ಆದಿವಾಸಿ ಬುಡಕಟ್ಟು ಸಮುದಾಯಗಳಾಗಿದ್ದರೆ ಪರಿಹಾರ ಪುನರ್ವಸತಿ ಕಲ್ಪಿಸಿದ್ದು ಅವರ ಶೇ.2ರಿಂದ 2.5ರಷ್ಟು ಜನರಿಗೆ ಮಾತ್ರ. ಉಳಿದ ಶೇ.97ಕ್ಕೂ ಹೆಚ್ಚಿನ ನಿರ್ವಸಿತ ಆದಿವಾಸಿ ಬುಡಕಟ್ಟು ಸಮುದಾಯಗಳು ತಮ್ಮ ಮೂಲಸ್ಥಳಗಳಿಂದ ದಿಕ್ಕಾ ಪಾಲಾಗಿ ಎಲ್ಲೆಂದರಲ್ಲಿ ಹೋಗಿ ತಮ್ಮ ಬದುಕುಗಳನ್ನು ಹೊಸದಾಗಿ ಕಟ್ಟಿಕೊಳ್ಳಬೇಕಾಯಿತು. ಅವರಿಗೆ ಯಾವುದೇ ಭೂಮಿ, ಹಕ್ಕುಪತ್ರ ಇನ್ನಿತರ ಸೌಲಭ್ಯಗಳನ್ನು ಇದುವರೆಗೂ ಆಳುತ್ತಾ ಬಂದ ಸರಕಾರಗಳು ಕಲ್ಪಿಸದೆ ಅವರ ಬದುಕುಗಳನ್ನು ಮೂರಾಬಟ್ಟೆ ಮಾಡಿವೆ. ಹಾಗೆ ವಲಸೆಹೋದ ಜನಸಮುದಾಯಗಳನ್ನು ಪದೇ ಪದೇ ಒಕ್ಕಲೆಬ್ಬಿಸುತ್ತಾ ಹೋದ ಉದಾಹರಣೆಗಳು ಸಾಕಷ್ಟಿವೆ. ಬ್ರಿಟಿಷರ ನೇರ ಆಡಳಿತ ಕೊನೆಗೊಂಡ ನಂತರದಿಂದ 1990ರವರೆಗೆ ಸುಮಾರು 60ದಶಲಕ್ಷಕ್ಕೂ ಹೆಚ್ಚು ಜನರನ್ನು ಒಕ್ಕಲೆಬ್ಬಿಸಿ ಬಿಸಾಕಲಾಗಿದೆ. ಇದರಲ್ಲಿ ಹೆಚ್ಚಿನವರು ಆದಿವಾಸಿ ಬುಡಕಟ್ಟು ಸಮುದಾಯಗಳೇ ಆಗಿವೆ. ನಮ್ಮ ಕರ್ನಾಟಕದ ಉದಾಹರಣೆಗಳೂ ಸಾಕಷ್ಟಿವೆ. ಕೈಗಾ, ಸೀಬರ್ಡ್ ನೌಕಾನೆಲೆ, ಬೇಡ್ತಿ, ವರಾಹಿ, ಚಕ್ರಾ, ನಾಗರಹೊಳೆ, ಬಂಡಿಪುರ, ಭದ್ರ ಅಭಯಾರಣ್ಯ, ಉಡುಪಿಯ ನಂದಿಕೂರಿನ ಉಷ್ಣ ವಿದ್ಯುತ್ ಸ್ಥಾವರ ಇತ್ಯಾದಿಗಳನ್ನು ನೋಡಬಹುದು. ಈ ಯೋಜನೆಗಳ ನೆಪದಲ್ಲಿ ಒಕ್ಕಲೆಬ್ಬಿಸಿದವರಿಗೆ ಇದುವರೆಗೂ ಸರಿಯಾದ ಪರಿಹಾರವಾಗಲೀ, ಪರ್ಯಾಯ ಭೂಮಿಯಾಗಲೀ ನೀಡಿಲ್ಲ. ಆದರೆ ಉತ್ತರಭಾರತದ ಒಕ್ಕಲೆಬ್ಬಿಸಿದವರ ಕತೆಗಳೂ ಕರ್ನಾಟಕಕ್ಕಿಂತಲೂ ಬಹಳ ಭೀಕರವಾಗಿವೆ.
ಈ ಎಲ್ಲಾ ಯೋಜನೆಗಳು ಭಾರೀ ಪ್ರಚಾರದೊಂದಿಗೆ ಹೇಳಿಕೊಂಡು ಬಂದ ಉದ್ದೇಶಗಳನ್ನು ಇದುವರೆಗೂ ಪೂರೈಸಿಲ್ಲ. ಕೃಷಿಗೆ ನೀರಾವರಿಯೆಂದು ಹೇಳಿ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ಭಾರೀ ಮಟ್ಟದಲ್ಲಿ ಮಣ್ಣು ತನ್ನ ಆರೋಗ್ಯ ಕಳೆದುಕೊಂಡು ಬಂಜರಾಗತೊಡಗಿದೆ. ಮಿತಿಯಿಲ್ಲದ ರಾಸಾಯನಿಕ ಗೊಬ್ಬರ ಹಾಗೂ ವಿಷಕಾರಕಗಳನ್ನು ಬಳಸಬೇಕಾದ ಒತ್ತಡ ಹೇರಿದ್ದರಿಂದಾಗಿ ಸಾವಿರಾರು ಜೀವ ಜಂತುಗಳು ನಾಶವಾಗಿ ಪಾರಿಸಾರಿಕ ಏರುಪೇರುಗಳಿಗೆ ಕಾರಣವಾಗಿವೆ. ಪ್ರವಾಹ ತಡೆಯಲೆಂದು ಜಲಾಶಯಗಳೆಂದು ಹೇಳಿಕೊಂಡಿದ್ದರೂ ಇಂತಹ ಜಲಾಶಯಗಳಿಂದಾಗಿಯೇ ಪ್ರವಾಹಗಳು ಮತ್ತಷ್ಟು ಹೆಚ್ಚಾಗಿ ನಿಯಂತ್ರಣವಿಲ್ಲದೆ ಜಲಪ್ರಳಯಗಳು ಸಂಭವಿಸುತ್ತಿವೆ. ಭಾರೀ ಭೂಕುಸಿತಗಳಿಗೂ ಕಾರಣವಾಗುತ್ತಾ ಮಾನವ ಸಂಪನ್ಮೂಲ ಹಾಗೂ ಪ್ರಾಕೃತಿಕ ಸಂಪನ್ಮೂಲಗಳ ವಿನಾಶಕ್ಕೆ ಕಾರಣವಾಗುತ್ತಿವೆ. ಭೂಕಂಪನಗಳಿಗೂ ಕಾರಣವಾಗುತ್ತಿವೆ. ಅಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿ, ಭಾರೀ ಜಲಪ್ರಳಯಗಳು, ಭೂಕುಸಿತಗಳು ಈಗ ಮಾಮೂಲಿ ಸಂಗತಿಗಳಾಗಿವೆ. ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ ಎನ್ನುವುದು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವಿಲ್ಲ.
ಮೂಲನಿವಾಸಿ ಬುಡಕಟ್ಟು ಸಮುದಾಯಗಳ ಇರುವಿಕೆಯಿಲ್ಲದೆ ಪರಿಸರ ರಕ್ಷಣೆಯಾಗಲು ಅಸಾಧ್ಯ. ಅರಣ್ಯ ಹಾಗೂ ಪರಿಸರ ರಕ್ಷಣೆಯಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಗಳು ಇನ್ನಿತರ ಸ್ಥಳೀಯ ಜನಸಾಮಾನ್ಯರ ಪಾತ್ರ ಬಹಳ ಮುಖ್ಯವಾದುದು. ನೀರು, ಕಾಡು, ಭೂಮಿ ಹಾಗೂ ತಮ್ಮ ಸ್ವಾತಂತ್ರ್ಯ ರಕ್ಷಣೆಗಾಗಿ ಈ ದೇಶದ ಆದಿವಾಸಿ ಬುಡಕಟ್ಟು ಸಮುದಾಯಗಳು ಅಪಾರ ತ್ಯಾಗ ಹಾಗೂ ಬಲಿದಾನಪೂರಿತವಾದ ಸಂಗ್ರಾಮ ನಡೆಸುತ್ತಾ ಬಂದಿರುವುದನ್ನು ನಾವು ನೋಡಿದ್ದೇವೆ. ಈಗಲೂ ಮಧ್ಯ ಭಾರತ ಹಾಗೂ ಈಶಾನ್ಯ ಭಾರತದಲ್ಲಿ ಮೂಲನಿವಾಸಿ ಬುಡಕಟ್ಟು ಸಮುದಾಯಗಳು ಇವೇ ಕಾರಣಗಳಿಗಾಗಿಯೇ ಆಳುವ ಸರಕಾರಗಳ ವಿರುದ್ಧ ಸಂಗ್ರಾಮ ನಡೆಸುತ್ತಿವೆ ಎನ್ನುವುದನ್ನೂ ಗಮನಿಸಬೇಕಾದ ಅಗತ್ಯವಿದೆ.
ಕೈಗಾರಿಕಾ ಅಭಿವೃದ್ಧಿ ಹೆಸರಿನ ಯೋಜನೆಗಳು ಕೂಡ ಕೃಷಿಭೂಮಿ ಹಾಗೂ ಜಲಮೂಲಗಳನ್ನು ನಾಶಮಾಡುತ್ತಾ ವಿಷಾನಿಲ ಹೊರಹಾಕುವ ಮರಣಶಯ್ಯೆಗಳನ್ನು ಹುಟ್ಟುಹಾಕಿವೆ. ಜೊತೆಗೆ ಸ್ಥಳೀಯವಾಗಿ ವಿಕೇಂದ್ರಿತ ಕೈಗಾರಿಕಾ ಬೆಳವಣಿಗೆಗೆ ತಡೆಯೊಡ್ಡಿ ಸ್ಥಳೀಯ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಸ್ವಾವಲಂಬನೆ ಸಾಧಿಸಲಾಗದಂತೆ ಮಾಡಿಟ್ಟಿವೆ.
ಇದೇ ವೇಳೆಯಲ್ಲಿ ಈ ಎಲ್ಲಾ ಬೃಹತ್ ಯೋಜನೆಗಳಿಂದಾಗಿ ಸಿಮೆಂಟ್, ಕಬ್ಬಿಣ, ವಾಹನ ಹಾಗೂ ಯಂತ್ರೋಪಕರಣಗಳ ತಯಾರಕರಾದ ಜಾಗತಿಕ ಭಾರೀ ಕಾರ್ಪೊರೇಟ್‌ಗಳು ಮತ್ತು ಅವರ ದಲ್ಲಾಳಿಗಳು ಹಲವಾರು ಪಟ್ಟು ಸೂಪರ್ ಲಾಭ ಗಳಿಸುತ್ತಾ ತಮ್ಮ ಸಂಪತ್ತುಗಳನ್ನು ವೃದ್ಧಿಸಿಕೊಂಡವು. ಇವುಗಳ ಜೊತೆಗೆ ದೊಡ್ಡ ರಾಸಾಯನಿಕ ಕಾರ್ಪೊರೇಟ್‌ಗಳು ಸೇರಿಕೊಂಡವು. ಹಸಿರು ಕ್ರಾಂತಿಯ ಪರಿಕಲ್ಪನೆ ಕೂಡ ಇವರ ಯೋಜನೆಯೇ ಆಗಿತ್ತು. ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ಹಸಿರು ಕ್ರಾಂತಿಯ ನೀರಾವರಿ ಪ್ರದೇಶಗಳು ಮತ್ತು ಅಲ್ಲಿನ ರೈತರು ಹಾಗೂ ಇನ್ನಿತರ ಜನಸಾಮಾನ್ಯರು ಇಂದು ಅನುಭವಿಸುತ್ತಿರುವ ಪಡಿಪಾಟಲುಗಳನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. ಬೆಳೆಗೆ ತಕ್ಕ ಬೆಲೆಯಿಲ್ಲದೆ ಸಾಲ ಇನ್ನಿತರ ಕಿತ್ತು ತಿನ್ನುವ ಸಮಸ್ಯೆಗಳನ್ನು ತಾಳಲಾಗದೆ ನಮ್ಮ ದೇಶದ ಲಕ್ಷಾಂತರ ರೈತರು ಆತ್ಮಹತ್ಯೆಗಳಿಗೆ ಇಳಿಯಬೇಕಾಗಿ ಬಂದಿದ್ದು ಕೂಡ ಪ್ರಧಾನವಾಗಿ ಇವೇ ಕಾರಣಗಳಿಂದಾಗಿ ಎನ್ನುವುದನ್ನು ಮರೆಯಬಾರದು.
ಆದಿವಾಸಿ ಬುಡಕಟ್ಟು ಪ್ರದೇಶಗಳಲ್ಲಿರುವ ಸಮೃದ್ಧ ಪ್ರಾಕೃತಿಕ ಸಂಪತ್ತುಗಳನ್ನು ಭಾರೀ ಕಾರ್ಪೊರೇಟ್‌ಗಳಿಗೆ ಧಾರೆಯೆರೆಯುವ ಕಾಯಕದಲ್ಲಿ ಇದುವರೆಗೂ ಆಳುತ್ತಾ ಬಂದಿರುವ ಯಾವ ಸರಕಾರಗಳೂ ಹಿಂದೆ ಬಿದ್ದ ಉದಾಹರಣೆಯಿಲ್ಲ. ಚತ್ತೀಸ್‌ಗಡದಲ್ಲಿ ಬಿಜೆಪಿಯ ಕಾರ್ಪೊರೇಟ್‌ಪರ ನೀತಿಗಳನ್ನು ಟೀಕಿಸುತ್ತಾ ಕಾಂಗ್ರೆಸ್ ಬಂದಿತ್ತು. ನಂತರ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ ಕಾಂಗ್ರೆಸ್ ಸರಕಾರ ರಚಿಸಿದ ಒಂದೆರಡು ತಿಂಗಳುಗಳಲ್ಲೇ ಆದಿವಾಸಿ ಬುಡಕಟ್ಟುಗಳಿರುವ ಸುಮಾರು 70,000 ಹೆಕ್ಟೇರುಗಳಷ್ಟು ಅರಣ್ಯ ಪ್ರದೇಶವನ್ನು ಗಣಿಗಾರಿಕೆಗಾಗಿ ಕಾರ್ಪೊರೇಟ್‌ಗಳಿಗೆ ಹಸ್ತಾಂತರಿಸಿದ್ದನ್ನು ನಾವಿಲ್ಲಿ ಗಮನಿಸಬಹುದು. ಇದೀಗ ಯೂನಿಯನ್ ಸರಕಾರ ದ್ರೌಪದಿ ಮುರ್ಮುರನ್ನು ರಾಷ್ಟ್ರಪತಿಯನ್ನಾಗಿಸುತ್ತಿದೆ. ದಲಿತಪರ, ಬಹುಜನಪರ ಎಂದು ಬಿಂಬಿಸಿಕೊಂಡಿರುವ ಬಿಎಸ್‌ಪಿಯ ಮಾಯಾವತಿ ಈಗಾಗಲೇ ಮುರ್ಮುಗೆ ತನ್ನ ಬೆಂಬಲವನ್ನು ಘೋಷಿಸಿಯಾಗಿದೆ. ಆ ಮೂಲಕ ಬಿಜೆಪಿಯ ಜೊತೆಗಿನ ಸಹಪಯಣ ತನ್ನದೆಂದು ಮತ್ತೊಮ್ಮೆ ತೋರಿಸಿಕೊಂಡಿದ್ದಾರೆ. ಇನ್ನು ಕೆಲವು ಪಕ್ಷಗಳು ಆದಿವಾಸಿ ಕಾರ್ಡ್ ಅನ್ನು ತಮ್ಮ ಚುನಾವಣಾ ಲಾಭಗಳಿಗೆ ಬಳಸಿಕೊಳ್ಳುವ ಉದ್ದೇಶದಿಂದಲೂ ಬಿಜೆಪಿ ಜೊತೆಸೇರಿ ತಮ್ಮ ಲಾಭಗಳನ್ನು ಪಡೆಯಲು ದ್ರೌಪದಿ ಮುರ್ಮುರನ್ನು ರಾಷ್ಟ್ರಪತಿಯನ್ನಾಗಿಸಲು ಬೆಂಬಲಿಸಬಹುದು.
nandakumarnandana67@gmail.com