varthabharthi


ಅನುಗಾಲ

ಪೊಲೀಸ್ ರಾಜ್ಯವೆಂದರೆ...

ವಾರ್ತಾ ಭಾರತಿ : 14 Jul, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಪೊಲೀಸ್ ರಾಜ್ಯವೆಂದರೆ ಏನು? ಸರ್ವಾಧಿಕಾರವನ್ನು ಬೆಂಬಲಿಸಲು, ಜನಧ್ವನಿಯನ್ನು ಅಡಗಿಸಲು, ಅಕ್ರಮಗಳನ್ನು ಬಯಲಿಗೆ ಬಾರದಂತೆ ತಡೆಯಲು ಸರಕಾರವು ಕೈಗೊಂಡ, ಕೈಗೊಳ್ಳುವ ಅಧಿಕೃತ ಅಸಮಾನ, ಅಸಾಮಾನ್ಯ ಸಂಚು. ಪೊಲೀಸ್ ಇಲಾಖೆ ಸರಕಾರದ ಒಂದು ಇಲಾಖೆಯಾದ್ದರಿಂದ ಅವರಲ್ಲಿ ಆತ್ಮಸಾಕ್ಷಿ ಹೋಗಲಿ, ಸ್ವತಂತ್ರ ಚಿಂತನೆಯನ್ನೂ ಹುಡುಕುವುದು ತಪ್ಪಾಗಬಹುದು.


ಈಚೆಗೆ ಸರ್ವೋಚ್ಚ ನ್ಯಾಯಾಲಯವು ಕ್ರಿಮಿನಲ್ ಪ್ರಕರಣವೊಂದರಲ್ಲಿ ಜಾಮೀನಿನ ಮಹತ್ವವನ್ನು ಪರಿಗಣಿಸುವ ತೀರ್ಪೊಂದರಲ್ಲಿ ಪ್ರಜಾಪ್ರಭುತ್ವ ಮತ್ತು ಪೊಲೀಸ್ ರಾಜ್ಯ ಇವು ಪ್ರತ್ಯೇಕ ಸಿದ್ಧಾಂತಗಳು; ಮತ್ತು ಪ್ರಜಾಪ್ರಭುತ್ವವು ಪೊಲೀಸ್ ರಾಜ್ಯವಾಗಲು ಸಾಧ್ಯವಿಲ್ಲ ಎಂದು ಹೇಳಿತು. ಪೊಲೀಸರು ಇರಬಾರದೆಂದಲ್ಲ. ಆದರೆ ಅವರು ರಾಜಕಾರಣದ ಆಯುಧಗಳಾಗಬಾರದು ಎಂಬುದು ತಾತ್ಪರ್ಯ. ಯಾವ ಆಡಳಿತವು ಪೊಲೀಸ್ ಮೂಲಕ ವ್ಯವಸ್ಥೆಯನ್ನು ಸ್ಥಾಪಿಸಲು ಅಥವಾ ಶಿಸ್ತನ್ನು ಹೇರಲು ಪ್ರಯತ್ನಿಸುತ್ತದೆಯೋ ಆ ಆಡಳಿತಕ್ಕೆ ಪ್ರಜಾಪ್ರಭುತ್ವದ ಕುರಿತು ಮಾತ್ರವಲ್ಲ ತನ್ನ ಬಗ್ಗೆಯೇ ನಂಬಿಕೆಯಿಲ್ಲವೆಂದರ್ಥ. ಪೊಲೀಸ್ ರಾಜ್ಯವೆಂದರೆ ಏನು? ಸರ್ವಾಧಿಕಾರವನ್ನು ಬೆಂಬಲಿಸಲು, ಜನಧ್ವನಿಯನ್ನು ಅಡಗಿಸಲು, ಅಕ್ರಮಗಳನ್ನು ಬಯಲಿಗೆ ಬಾರದಂತೆ ತಡೆಯಲು ಸರಕಾರವು ಕೈಗೊಂಡ, ಕೈಗೊಳ್ಳುವ ಅಧಿಕೃತ ಅಸಮಾನ, ಅಸಾಮಾನ್ಯ ಸಂಚು. ಪೊಲೀಸ್ ಇಲಾಖೆ ಸರಕಾರದ ಒಂದು ಇಲಾಖೆಯಾದ್ದರಿಂದ ಅವರಲ್ಲಿ ಆತ್ಮಸಾಕ್ಷಿ ಹೋಗಲಿ, ಸ್ವತಂತ್ರ ಚಿಂತನೆಯನ್ನೂ ಹುಡುಕುವುದು ತಪ್ಪಾಗಬಹುದು. ಅವರು ಏನಿದ್ದರೂ ಆಳುವವರ ಜೀತದವರಂತೆ ವರ್ತಿಸಬೇಕಾಗುತ್ತದೆ. ಯಾರೇ ಆಡಳಿತದಲ್ಲಿರಲಿ ಅವರ ಇಚ್ಛೆಯಂತೆ ನಡೆದುಕೊಳ್ಳುವವರು. ಬ್ರಿಟಿಷರ ಆಡಳಿತದಲ್ಲಿ ಭಾರತೀಯರ ಮೇಲೆ ದರ್ಪ ತೋರಿದವರು ಇದೇ ಪೊಲೀಸರು.

ಸ್ವಾತಂತ್ರ್ಯ ಸಿಕ್ಕ ಮೇಲೆ ಕಾಂಗ್ರೆಸ್ ಆಡಳಿತದಲ್ಲಿ ಪ್ರತಿಪಕ್ಷಗಳನ್ನು ದಂಡಿಸಿದವರು. ಈಗ ಭಾಜಪ ಸರಕಾರದಲ್ಲಿಯೂ ಅವರು ಪ್ರತಿಪಕ್ಷಗಳನ್ನು ದಂಡಿಸುವವರೇ. ಅವರಲ್ಲಿ ಗುಣಾವಗುಣ ವಿವೇಕ-ವಿವೇಚನೆಯನ್ನು ಹುಡುಕುವುದು ಇಲ್ಲದ ಕಪ್ಪು ಬೆಕ್ಕನ್ನು ಕತ್ತಲ ಕೋಣೆಯಲ್ಲಿ ಹುಡುಕಿದಂತೆಯೇ ಸರಿ. ಪೊಲೀಸ್ ಎಂದರೆ ಪೊಲೀಸ್ ಇಲಾಖೆ ಮಾತ್ರವಲ್ಲ, ಅಧಿಕಾರದ ಮೂಲಕ ಜನರನ್ನು ಹೆದರಿಸಬಲ್ಲ, ನಿಯಂತ್ರಿಸಬಲ್ಲ ಮತ್ತು ಒಂದಲ್ಲ ಒಂದು ರೀತಿಯಲ್ಲಿ ಅಧಿಕಾರವನ್ನು ದುರ್ಬಳಕೆ ಮಾಡಬಲ್ಲ ಅರಣ್ಯ, ಕಂದಾಯ ಮತ್ತಿತರ ಎಲ್ಲ ಇಲಾಖೆಗಳು ಮತ್ತು ಈಗ ಚಾಲ್ತಿಯಲ್ಲಿರುವ ಜಾರಿ ನಿರ್ದೇಶನಾಲಯ, ರಾಷ್ಟ್ರೀಯ ತನಿಖಾ ದಳ, ಸಿಬಿಐಯಂತಹ ಹೆಸರಿಗೆ ಸ್ವಾಯತ್ತವೆಂದುಕೊಳ್ಳುವ ಸಂಸ್ಥೆಗಳು ಮಾತ್ರವಲ್ಲ, ಆಯಕರ ಇಲಾಖೆ ಮುಂತಾದ ಬೇಹುತಂಡಗಳೂ ಸೇರುತ್ತವೆ. ಸೇನೆ, ಗಡಿ ಭದ್ರತಾ ಪಡೆ, ಕೇಂದ್ರ ಮೀಸಲು ಸೇನಾಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಇವುಗಳು ಪ್ರತ್ಯೇಕ ಮತ್ತು ವಿಶಿಷ್ಟ ಕಾರ್ಯಗಳಿಗಾಗಿ ಮೀಸಲಾಗಿರುವವು. ಅದರಲ್ಲೂ ಸೇನೆ ಮತ್ತು ಗಡಿ ಭದ್ರತಾ ಪಡೆ ಇವುಗಳಿಗೆ ದೇಶದೊಳಗೆ ಕೆಲಸವಿಲ್ಲ. ಅವರೇನಿದ್ದರೂ ಬಹಿರ್ಮುಖರಾಗಬೇಕು.

ಕಾಂಗ್ರೆಸ್ ತನ್ನ ಕೊನೆಗಾಲದಲ್ಲಿ ಅಂದರೆ ಇಂದಿರಾ ಅವರ ತುರ್ತು ಪರಿಸ್ಥಿತಿಯಲ್ಲಿ ಈ ಎಲ್ಲ ಪಡೆಗಳನ್ನು (ಮಾತ್ರವಲ್ಲ ಬಹುತೇಕ ಆಡಳಿತ ವ್ಯವಸ್ಥೆಯನ್ನೇ!) ತನ್ನ ಅನುಕೂಲಕ್ಕಾಗಿ ಬಳಸಿಕೊಂಡಿತು. ಈ ತಂಡಗಳೋ ಅವನ್ನು ಶಿರಸಾ ಪಾಲಿಸಿದವು. ಈ ವ್ಯಾಯಾಮದಲ್ಲಿ ಪ್ರಜಾಪ್ರಭುತ್ವ ಸಿದ್ಧಾಂತಗಳು ಚಿಂದಿಯಾದವು. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವವೆಂಬ ಹೆಗ್ಗಳಿಕೆಯು ನಗೆಪಾಟಲಾಯಿತು. ಆನಂತರವೂ ಜನತೆ ತಮ್ಮದೇ ಕಾರಣಗಳಿಗಾಗಿ ಕಾಂಗ್ರೆಸನ್ನು ಒಂಟಿಯಾಗಿ ಅಥವಾ ಜಂಟಿಯಾಗಿ ಗದ್ದುಗೆಗೆ ಏರಿಸಿದರೂ ಅವರಿಗೆ ಈ ಹಿನ್ನಡೆಯಿಂದ ಸಾವರಿಸಿಕೊಳ್ಳಲು ಆಗಲೇ ಇಲ್ಲ. 1998ರ ಕೆಲವು ತಿಂಗಳುಗಳು ಮತ್ತು 1999-2004ರ ಒಂದು ಅವಧಿಯನ್ನು ಹೊರತುಪಡಿಸಿದರೆ 2014ರ ವರೆಗೂ ಕಾಂಗ್ರೆಸ್ ಭಾರತವನ್ನು ಆಳಲು ಶಕ್ತವಾಯಿತು. ಈಗ 2014ರ ಉತ್ತರಯುಗ. ಅಲ್ಲಿಂದೀಚೆಗೆ 8 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಏನು ಮಾಡಬಹುದಿತ್ತೋ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಈ ಆಡಳಿತ ಮಾಡುತ್ತಿದೆ. ಆರಂಭದಲ್ಲಿ ಜನರ ಉತ್ಸಾಹದ ಅಲೆಗಳ ಮೇಲೆ ನಡೆದ ಆಡಳಿತವು ಇವಿಷ್ಟೇ ಸಾಕಾಗುವುದಿಲ್ಲವೆಂದು ಮನಗಂಡು ಧರ್ಮದ ಅಂಧತ್ವದ ಉರಿಯನ್ನು ಬೆಳಕಿನಂತೆ ಪ್ರಯೋಗಿಸಿ ನಡೆಯಲಾರಂಭಿಸಿತು. ರಾಜಕೀಯದ ತಳಮಟ್ಟ ಎಷ್ಟೆಂಬುದನ್ನು ದೇಶಕ್ಕೆ ಮಾತ್ರವಲ್ಲ, ಜಗತ್ತಿಗೇ ಸಾರಿದೆ. ಇಲ್ಲಿನ ಪಕ್ಷಾಂತರಿ ರಾಜಕಾರಣಿಗಳು ಬಿಸ್ಕೆಟಿಗೆ ಹಿಂಬಾಲಿಸುವ ಶುನಕಗಳಿಗಿಂತಲೂ ಕೀಳೆಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ಆದ್ದರಿಂದ ನಮ್ಮ ಜನಪ್ರತಿನಿಧಿಗಳು ಯಾವ ಆಡಳಿತ ಕಟ್ಟಡವನ್ನೂ ಕ್ಷಣಾರ್ಧದಲ್ಲಿ ಬೀಳಿಸಬಲ್ಲರು. ಇಂತಹ ಸಂದರ್ಭದಲ್ಲೆಲ್ಲ ಆಡಳಿತಕ್ಕೆ ನೆರವಾಗುವವರು ಈ ಪೊಲೀಸೆಂಬ ಪರಾರ್ಥ ಇಲಾಖೆ ಮತ್ತು ಇತರ ಸ್ವಾಯತ್ತ ಸಂಸ್ಥೆಗಳು.

ವಿಶೇಷವೆಂದರೆ ಹಿಂದೆಲ್ಲ ಆಡಳಿತ/ಪೊಲೀಸ್ ಸೇವೆಯ ಉನ್ನತ ಮಟ್ಟದಲ್ಲಿ ಸ್ವಲ್ಪಮಟ್ಟಿನ ದಕ್ಷತೆ ಕಾಣುತ್ತಿತ್ತು. ತಮ್ಮ ಹೆಸರಿಗೆ ಅನ್ವರ್ಥವಾಗುವಂತೆ ಸೇವೆಯನ್ನು ಸಲ್ಲಿಸುತ್ತಿದ್ದರು. ಆದರೆ ಈಗ ಈ ಸೇವೆಗಳೆಲ್ಲ ದೇಶದ ಬದಲು ಸರಕಾರದ ಸೇವೆಗೆ ವರ್ಗಾವಣೆಯಾಗಿವೆ. ನಮ್ಮ ಬಹುತೇಕ ಐಎಎಸ್, ಐಪಿಎಸ್‌ಗಳು (ರಾಜ್ಯದ ಮಟ್ಟದಲ್ಲಿ ಕೆಎಎಸ್, ಕೆಪಿಎಸ್ ಹೀಗೆ ಇನ್ನೂ ಹತ್ತಾರು ಇಂತಹ ವುಗಳು!) ಆಯ್ಕೆಯಾಗುವಾಗ ನೀಡುವ ಆದರ್ಶವಾದಿ ಅದ್ಭುತ ಹೇಳಿಕೆಗಳು ಮಳೆಗಾಲದ ಕೆಂಪು ನೀರಿನಂತಿದ್ದು ಅವರವರ ಹುದ್ದೆಗಳಲ್ಲಿ ಖಾಯಂ ಆದೊಡನೆಯೇ ಬೇಸಿಗೆಯ ಹೊಳೆಯಂತೆಯೂ ಇರದೆ ಬತ್ತಿಹೋಗುತ್ತವೆ. ಹೆಚ್ಚಿನವರು ಸಾಕಷ್ಟು ಹಣ, ಪ್ರಭಾವ ಇವುಗಳನ್ನು ಬಳಸಿಯೇ ಹುದ್ದೆಯನ್ನು ಪಡೆದಿರುತ್ತಾರೆ. (ಈಚೆಗೆ ಕರ್ನಾಟಕದಲ್ಲಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯ ಅಕ್ರಮವನ್ನು ನೆನಪಿಸದಿರುವುದೇ ಒಳ್ಳೆಯದು!) ಆದ್ದರಿಂದ ಅವುಗಳನ್ನು ಮರಳಿ ಪಡೆಯುವುದೇ ಅವರ ಉದ್ದೇಶವಾದರೆ ‘ರಾಮರಾಜ್ಯ’ದ ಆದರ್ಶದಲ್ಲಿ ತಪ್ಪಾದರೂ ವಾಸ್ತವದಲ್ಲಿ ತಪ್ಪಲ್ಲ. ಪೊಲೀಸರ ಕಾರ್ಯಕ್ಷಮತೆಯನ್ನು ಅಳೆಯಲು ಯಾವ ನಾಗರಿಕ ಪ್ರಾಧಿಕಾರವೂ ಇಲ್ಲ. ನ್ಯಾಯಾಲಯಗಳೂ ಅನೇಕಬಾರಿ ಇಂತಹ ಕೆಲಸದಲ್ಲಿ ಎಡವುತ್ತವೆ. ಪೊಲೀಸರು ಸಲ್ಲಿಸಿದ ಅಂತಿಮ ವರದಿಯನ್ನು ಅಂಚೆ ಕಚೇರಿ ಯಂತೆ ಸ್ವೀಕರಿಸಿ ಆರೋಪಿಯ ವಿರುದ್ಧ ಸಮನ್ಸ್/ವಾರಂಟ್ ಹೊರಡಿಸುವ ನ್ಯಾಯಾಲಯಗಳಿವೆ. ಪೊಲೀಸರು ತಪ್ಪುಮಾಡಲಾರರು ಅವರು ಸರಕಾರಿ ನೌಕರರು/ಅಧಿಕಾರಿಗಳು ಎಂಬ ರಕ್ಷಣೆಯನ್ನು ಅವರಿಗೆ ನಮ್ಮ ಸಿವಿಲ್ ಮತ್ತು ಕ್ರಿಮಿನಲ್ ಕಾನೂನಿನಡಿ ನೀಡಲಾಗಿದ್ದು ಅವರು ಇದನ್ನು ದುರುಪಯೋಗಪಡಿಸುವ ಸಾಧ್ಯತೆಯೇ ಹೆಚ್ಚು.

ಪ್ರಸಿದ್ಧವಾದ ಝುಬೈರ್ ಪ್ರಕರಣದಲ್ಲಿ ಪೊಲೀಸರು ತಮ್ಮ ಆಡಳಿತದ ಅನುಕೂಲಕ್ಕಾಗಿ ಎಲ್ಲೆಂದರಲ್ಲಿ ಆತನ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದು ಸರ್ವವಿಧಿತ. ಇದರಿಂದಾಗಿ ಜಾಮೀನು ಸಿಕ್ಕಿದರೂ ಅಷ್ಟರಲ್ಲಿ ಇನ್ನೊಂದು ಪ್ರಕರಣ ಸೃಷ್ಟಿಯಾಗಿ ಜಾಮೀನು ಅರ್ಥಹೀನವಾಗುತ್ತದೆ. ವಿಶೇಷವೆಂದರೆ ಇದು ನ್ಯಾಯಾಂಗವನ್ನು ಅವಮಾನಿಸಿದಂತೆ ಎಂದು ನ್ಯಾಯಾಲಯಗಳೇ ಬಗೆಯುವುದಿಲ್ಲ. ಕರ್ನಾಟಕದ ರಾಜ್ಯಪಾಲರಾಗಿದ್ದ ಧರ್ಮವೀರ್ ಅವರು ಒಂದಾರು ತಿಂಗಳು ಪೊಲೀಸರಿಲ್ಲದೆ ಆಡಳಿತ ನಡೆಯುವುದೇ ಒಳ್ಳೆಯದು ಎಂಬರ್ಥದ ಮಾತುಗಳನ್ನಾಡಿದ್ದರು. ಏಕೆಂದರೆ ಇಂದು ಜನತೆ ಪೊಲೀಸರಿಗೆ ಭಯಪಡುವಷ್ಟು ಕಳ್ಳರಿಗೆ ಭಯಪಡುವುದಿಲ್ಲ. ಇಲಾಖೆಯ ಮೈಕಟ್ಟೇ ಹಾಗಿದೆ. ಆಯ್ಕೆಗೆ ಮಾನಸಿಕ, ಬೌದ್ಧಿಕ ಶಕ್ತಿ-ಯುಕ್ತಿಗಿಂತ ದೇಹದಾರ್ಢ್ಯವೇ ಸೊಗಸೆನಿಸುತ್ತದೆ. ಅಧಿಕಾರದಲ್ಲಿ ಮೇಲಧಿಕಾರಿಗಳೆದುರು ಅತೀ ವಿನಯವನ್ನೂ ಕೆಳ ಅಧಿಕಾರಿಗಳಲ್ಲಿ ಅತೀ ದರ್ಪ-ಕೋಪಗಳನ್ನೂ ಪ್ರದರ್ಶಿಸುವುದೇ ಕರ್ತವ್ಯವೆಂದು ಭಾವಿಸಿಕೊಂಡ ಅಧಿಕಾರಿಗಳು ಅಸಂಖ್ಯ. ಬ್ರಿಟಿಷ್ ಆಡಳಿತದಲ್ಲಿದ್ದ ಐಸಿಎಸ್ (ಆಗಿನ ಇಂಡಿಯನ್ ಸಿವಿಲ್ ಸರ್ವಿಸ್-ಈಗ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ ಆಗಿದೆ) ಮತ್ತು ಐಪಿಎಸ್‌ಗಳಿಗೆ ಬ್ರಿಟನ್‌ನಲ್ಲಿ ತರಬೇತಿ ನೀಡುತ್ತಿದ್ದರಂತೆ. ಆಗ ಆಯ್ಕೆಯಾದ ಭಾರತೀಯ ಅಭ್ಯರ್ಥಿಗಳು ಇನ್ನೇನೂ ಕಲಿಯದಿದ್ದರೂ ಕುದುರೆ ಸವಾರಿ, ಬಿಯರ್ ಸೇವನೆ ಮತ್ತು ಗೋಲ್ಫ್- ಇವುಗಳಲ್ಲಿ ಪರಿಣತಿಯನ್ನು ಪಡೆಯುತ್ತಿದ್ದರಂತೆ! ಈ ಸೇವೆಗಳಿಗೆ ಇರುವ ಅಪಾರ ಆಕರ್ಷಣೆಯೆಂದರೆ ಅವುಗಳಲ್ಲಿರುವ ಸಂಬಳ-ಸವಲತ್ತು, ಅಧಿಕಾರ ಮತ್ತು ರಾಜಕಾರಣದ ವ್ಯೆಹಗಳ ಆಯಕಟ್ಟಿನ ಕ್ಷೇತ್ರಗಳ ಪರಿಚಯ ಮಾತ್ರವಲ್ಲ ಒಳನೋಟವೂ ಸಿಗುವ ಅವಕಾಶಗಳು. ಇದರಿಂದಾಗಿ ಅವರ ಹುದ್ದೆಗೆ ಇಷ್ಟವಾದ ಭದ್ರತೆಯೂ ಸಿಗುತ್ತದೆ. ಇದು ಭಾರತೀಯ ಎಂದಲ್ಲ, ಆಯಾಯ ರಾಜ್ಯಗಳ ಹುದ್ದೆಗಳಲ್ಲೂ ಇವೆ.

ಸಾಮಾನ್ಯ ವೃತ್ತ ನಿರೀಕ್ಷಕರೊಬ್ಬರು ಬೆಂಝ್ ಕಾರಿನಲ್ಲಿ (ಚಾಲಕನನ್ನಿಟ್ಟುಕೊಂಡು) ನ್ಯಾಯಾಲಯಕ್ಕೆ ಸಾಕ್ಷ ನೀಡುವುದಕ್ಕೆ ಬಂದಿದ್ದರು. ಇದು ಮಂಜುಗಡ್ಡೆಯ ಮೇಲಣ ತುದಿ ಮಾತ್ರ. ಭ್ರಷ್ಟಾಚಾರದಲ್ಲಿ ಅತೀ ಹೆಚ್ಚು ಪಾತ್ರವಿರುವುದೇ ಇಂತಹ ದುರ್ಬಳಕೆಯಿಂದ. ಎಲ್ಲೋ ಅಪರೂಪಕ್ಕೆ ಕೆಲವು ಅಧಿಕಾರಿಗಳ ಮೇಲೆ ದಾಳಿ ನಡೆದು ರೋಚಕ ಸುದ್ದಿಯಾಗುತ್ತದೆಯೇ ವಿನಾ ಅವು ತಾರ್ಕಿಕ ಅಂತ್ಯ ಕಾಣುವುದಿಲ್ಲ. ನಡುವೆ ಎಲ್ಲೋ ಸರಸ್ವತಿ ನದಿಯಂತೆ ಕಾಣದಾಗುತ್ತದೆ. ಇಂತಹ ಭ್ರಷ್ಟತನವನ್ನು ತೊಡೆದುಹಾಕಲು ಇಲ್ಲವೇ ನಿಯಂತ್ರಿಸಲು ಲೋಕಾಯುಕ್ತವೆಂಬ ಇಲಾಖೆಯನ್ನು ತೆರೆಯಲಾಯಿತು. ಆದರೆ ಅಲ್ಲೂ ಈ ಹೊರಗಿರುವ ಮಂದಿಯೇ ವರ್ಗಾವಣೆಗೊಂಡು ನೇಮಕವಾಗುವುದರಿಂದ ‘ಹಯವದನ’ದ ಕಪಿಲ ದೇವದತ್ತರಂತೆ ತಲೆ/ಮೈ ಪಲ್ಲಟವಾಗುತ್ತದೆಯೇ ವಿನಃ ಪರಿಹಾರ, ಪರಿಣಾಮ ಎರಡೂ ಇಲ್ಲ. ಆದರೂ ಕೆಲವು ರಾಜಕಾರಣಿಗಳಾದರೂ ಇದರಿಂದ ಪರಿತಾಪ ಪಟ್ಟರು. ಆದರೆ ಲೋಕಾಯುಕ್ತವು ಮಾಡಿದ ಕಿಂಚಿತ್‌ಕ್ರಮವನ್ನೂ ನಿರ್ನಾಮಗೊಳಿಸುವಂತೆ 2016ರಲ್ಲಿ (ಆಗಿದ್ದ ಕಾಂಗ್ರೆಸ್ ಸರಕಾರವು) ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಎಂಬ ಇನ್ನೊಂದು ಪಡೆಯನ್ನು ಸೃಷ್ಟಿಸಿತು. ಇದು ನೇರ ಸರಕಾರದ ಕೈಕೆಳಗೆ ಕೆಲಸ ಮಾಡುವ/ಮಾಡದಿರುವ ಪಡೆ. ಈಗ ಭ್ರಷ್ಟಾಚಾರ ನಿಗ್ರಹವೆಂಬುದು ಒಂದು ಪ್ರಹಸನವಾಗುತ್ತಿದೆಯೇ ಹೊರತು ಪರಿಣಾಮಕಾರಿ ಫಲಗಳನ್ನು ಪಡೆಯುತ್ತಿಲ್ಲ. ಕೆಲವು ಕೆಳದರ್ಜೆಯ ನೌಕರರನ್ನು ಅವರು ಪಡೆದಿರಬಹುದಾದ ಕೆಲವು ನೂರು ಅಥವಾ ಕೆಲವೇ ಸಾವಿರ ಲಂಚದ ಕುರಿತ ಪ್ರಕರಣಗಳು ದಾಖಲಾಗುತ್ತಿವೆ. ನ್ಯಾಯಾಲಯದಲ್ಲಿ ಕುಂಟುತ್ತ ಆದರೂ ನಡೆಯುತ್ತಿವೆ.

ಹಿರಿಯ ಅಧಿಕಾರಿಗಳು ಲಕ್ಷ-ಕೋಟಿ ರೂ. ದೋಚಿದರೂ ಅವರ ಮೇಲೆ ಸರಕಾರದ, ರಾಜಕಾರಣಿಗಳ ಪೂರ್ಣಾಶೀರ್ವಾದವಿರುವುದರಿಂದ ಅವರ ವಿರುದ್ಧ ಯಾವ ಪ್ರಕರಣಗಳೂ ದಾಖಲಾಗುತ್ತಿಲ್ಲ. ಒಂದು ವೇಳೆ ದಾಖಲಾದರೂ ಅವು ಮುಂದುವರಿಯುವುದೇ ಇಲ್ಲ. ಈಚೆಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಈ ಪಡೆಗೆ ‘ಕಳಂಕಿತ’ವೆಂಬ ಅಪವಾದವನ್ನು ನೇರ ಹೇರಿತು. ಆಗಷ್ಟೇ ಇಬ್ಬರು ಉನ್ನತ ಅಧಿಕಾರಿಗಳು ದಸ್ತಗಿರಿಯಾದರು. ಬೆಂಕಿಯಿಲ್ಲದೆ ಹೊಗೆಯಿಲ್ಲವೆಂಬಂತೆ ಈ ವಿದ್ಯಮಾನವು ಸರ್ವೋಚ್ಚ ನ್ಯಾಯಾಲಯದ ಗಮನಕ್ಕೂ ಬಂದಿದೆ. ಅಷ್ಟರ ಮಟ್ಟಿಗೆ ಇದು ಸ್ವಾಗತಾರ್ಹ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇವು ತಮಗೆ ಸಂಬಂಧಿಸಿದ ಸಮಸ್ಯೆಗಳೇ ಅಲ್ಲವೇನೋ ಎಂಬಂತೆ ಸುಮ್ಮನಿವೆ. ಇದು ದೇಶದ ಮತ್ತು ಪ್ರಜಾಪ್ರಭುತ್ವದ ದುರಂತ. ಈ ಕಳಂಕ ಭ್ರಷ್ಟಾಚಾರ ಅಂತಲ್ಲ, ಅಧಿಕಾರಶಾಹಿ ಮತ್ತು ರಾಜಶಾಹಿಯ ಎಲ್ಲ ಮಗ್ಗುಲುಗಳಲ್ಲೂ ವಿಜೃಂಭಿಸುತ್ತಿದೆ. ಅದನ್ನು ನೋಡಿ ಸುಮ್ಮನಿರುವವರು ಒಂದು ವರ್ಗವಾದರೆ, ನೋಡಿಯೂ ಅಸಹಾಯಕತೆಯಿಂದ ಮರುಗುವವರು ಇನ್ನೊಂದು ವರ್ಗ. ಅಧಿಕಾರಿಗಳ ಅದರಲ್ಲೂ ಪೊಲೀಸ್‌ರಂತಹ ಕಠಿಣ ಇಲಾಖೆಗಳ ಅಧಿಕಾರಿಗಳ ವಿರುದ್ಧ ಮಾತ್ರವಲ್ಲ, ರಾಜಕಾರಣಿಗಳ ವಿರುದ್ಧ ಕ್ರಮಗಳನ್ನು ನಡೆಸಬೇಕಾದರೆ ಅದೊಂದು ಪ್ರಯಾಸದ ಕೆಲಸ ಮಾತ್ರವಲ್ಲ, ಬದುಕಿಡೀ ಅವರ ಸೇಡಿಗೆ ತುತ್ತಾಗಿ ಮರುಗಬೇಕಾದ ಕೆಲಸ. ನಮ್ಮ ದೇಶದ ಕಾನೂನು ವ್ಯವಸ್ಥೆಯ ತಾಂತ್ರಿಕತೆ, ವಿಳಂಬ, ಅಸಡ್ಡೆ ಮತ್ತು ಅಪಾತ್ರ ಅನುಕಂಪ ಇವೆಲ್ಲ ಪ್ರಜೆಗೆ ವಿರುದ್ಧವಾಗಿ, ಭ್ರಷ್ಟರ ಪರವಾಗಿಯೇ ನಡೆಯುವುದರಿಂದ ಸಾಮಾನ್ಯರಾರೂ ಈ ಸಾಹಸಕ್ಕೆ ಕೈಯಿಕ್ಕುವುದಿಲ್ಲ. ಇಂತಹ ಪ್ರಕರಣಗಳ ಅಂಕಿ-ಅಂಶಗಳನ್ನು ಪರಿಗಣಿಸಿದರೆ ಈ ದೇಶದಲ್ಲಿ ಯಾವ ಅಕ್ರಮವೂ ವರವರರಾವ್, ಸಾಯಿಬಾಬಾರಂತೆ, ಇನ್ನೂ ಅಸಂಖ್ಯ ಪಾಪಗ್ರಸ್ತರಂತೆ ಯಾತನಾಶಿಬಿರಗಳಲ್ಲೇ ಉಳಿಯಬೇಕೇನೋ?

ಮತ್ತೆ ನ್ಯಾಯಾಂಗದ ಕುರಿತೇ ಈ ಚರ್ಚೆ ಮುಂದುವರಿಯುತ್ತದೆ. ಪ್ರಜಾಪ್ರಭುತ್ವ ಮತ್ತು ಪೊಲೀಸ್ ರಾಜ್ಯವು ಒಂದೇ ದೇಶ-ಕಾಲದಲ್ಲಿ ಜೊತೆಯಲ್ಲಿರಲು ಸಾಧ್ಯವಿಲ್ಲವಾದರೆ, ಮತ್ತು ಪ್ರಜಾಪ್ರಭುತ್ವವು ನಮ್ಮ ಸಂವಿಧಾನದ ತಳಹದಿಯಾದರೆ, ಪ್ರಜಾಪ್ರಭುತ್ವವನ್ನು ಮತ್ತು ಸಂವಿಧಾನವನ್ನು ರಕ್ಷಿಸುವವರು ಮೌನವಾದರೆ ಆಥವಾ ಕಿವುಡು/ಕುರುಡಾದರೆ, ಇದಕ್ಕೆ ಶಮನ ನೀತಿಯೇನು? ಅಧಿಕಾರ ಏನೂ ಮಾಡಬಹುದಾದರೆ ಈ ಪ್ರಜಾಪ್ರಭುತ್ವ, ಸಂವಿಧಾನ ಇವೆಲ್ಲ ಇರಬೇಕಾದರೂ ಯಾಕೆ? ಸರ್ವೋಚ್ಚ ನ್ಯಾಯಾಲಯವು ತಾನು ಹೇಳಿದ ಮಾತುಗಳನ್ನು ಸಂಬಂಧಿಸಿದ ಪ್ರಕರಣಕ್ಕೆ ಸೀಮಿತಗೊಳಿಸದೆ ವಿಶಾಲವಾಗಿ ನೋಡಿ ಪರಿಹರಿಸುವುದು ಸಾಧ್ಯವಾದರೆ ಮಾತ್ರ ಅದರ ಮಾತುಗಳಿಗೆ ಬೆಲೆ; ಅರ್ಥ. ದುಃಖಾರ್ತರು, ಬದುಕಲಾಗದ ಬಲವಂತರು, ಇವೆಲ್ಲ ಪುಸ್ತಕಗಳ ಶೀರ್ಷಿಕೆಗಳಾಗಿ ಆಕರ್ಷಕವಾಗಿರುತ್ತವೆ. ಆದರೆ ವಾಸ್ತವ ಜಗತ್ತಿನ ನಡುವಿರುವ ಈ ದೇಶದಲ್ಲಿ ಇವರ ಬದುಕಿಗೆಲ್ಲ ಬೆಲೆಯೆಲ್ಲಿ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)