ಪಾಠ ಕಲಿಯದ ರಾಜ್ಯ ಕಾಂಗ್ರೆಸ್!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ೭೫ನೇ ಜನ್ಮದಿನಾಚರಣೆಯ ಪ್ರಯುಕ್ತ ದಾವಣಗೆರೆಯಲ್ಲಿ ಆ.೩ರಂದು ಸಿದ್ದರಾಮಯ್ಯ ಅಭಿಮಾನಿಗಳು ‘ಸಿದ್ದರಾಮಯ್ಯ ಅಮೃತ ಮಹೋತ್ಸವ’ ಹೆಸರಿನಲ್ಲಿ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಆದರೆ, ಹಿಂದುಳಿದ ವರ್ಗದಿಂದ ಬಂದ ಒಬ್ಬ ಮುತ್ಸದ್ದಿ ನಾಯಕನಿಗೆ ನಾಡು ಸಲ್ಲಿಸುವ ಗೌರವವಾಗಿ ಮೂಡಿ ಬರಬೇಕಾಗಿದ್ದ ಅಮೃತಮಹೋತ್ಸವ, ಕಾಂಗ್ರೆಸ್‌ನೊಳಗಿನ ಮುಖ್ಯಮಂತ್ರಿ ಗಾದಿಗಾಗಿ ಒಳಗೊಳಗೆ ನಡೆಯುತ್ತಿರುವ ಹಗ್ಗಜಗ್ಗಾಟದ ಮಟ್ಟಕ್ಕೆ ಸೀಮಿತಗೊಳ್ಳುತ್ತಿರುವುದು ಮಾತ್ರ ವಿಷಾದನೀಯವಾಗಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಈ ರಾಜ್ಯಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಎರಡು ಮಾತಿಲ್ಲ. ಸಮಾಜವಾದಿ ಹಿನ್ನೆಲೆಯಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವ ಮೊದಲೇ ವಿತ್ತ ಸಚಿವರಾಗಿ, ರಾಜ್ಯದಲ್ಲಿ ಜನಪರ ಆರ್ಥಿಕ ನೀತಿಗಳಿಗೆ ತನ್ನದೇ ಕೊಡುಗೆಗಳನ್ನು ಕೊಟ್ಟವರು. ಅವರ ಸುದೀರ್ಘ ರಾಜಕೀಯ ಅನುಭವ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ನೆರವಾಯಿತು. ಐದು ವರ್ಷಗಳ ಕಾಲ ಅವರು ಜನಪರ ಆಡಳಿತ ನೀಡಿದರು. ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಗರಿಷ್ಠ ಮಟ್ಟದಲ್ಲಿ ಶ್ರಮಿಸಿದರು. ಜನರ ಕಷ್ಟಸುಖಗಳಿಗಾಗಿ ಮಿಡಿದರು. ಬಡವರಿಗಾಗಿ ಅವರು ಘೋಷಿಸಿದ ಯೋಜನೆಗಳೇ ಟೀಕೆಗೆ ಕಾರಣವಾದವು.‘‘ಜನರನ್ನು ಸೋಮಾರಿಗಳಾಗಿಸುತ್ತಿದ್ದಾರೆ’’ ಎಂದು ಉಳ್ಳವರು ವ್ಯಂಗ್ಯವಾಡಿದಾಗ, ಅದನ್ನು ಅಷ್ಟೇ ತೀವ್ರವಾಗಿ ಎದುರಿಸಿದರು. ವಿಪರ್ಯಾಸವೆಂದರೆ, ಸಿದ್ದರಾಮಯ್ಯ ಕೊಟ್ಟ ಐದು ವರ್ಷಗಳ ಜನಪರ ಆಡಳಿತವನ್ನು ಚುನಾವಣೆಯಲ್ಲಿ ಮತಗಳಾಗಿ ಪರಿವರ್ತಿಸಲು ಕಾಂಗ್ರೆಸ್ ಸಂಪೂರ್ಣ ವಿಫಲವಾಯಿತು. ಕಾಂಗ್ರೆಸ್ ಮತ್ತೆ ದೊಡ್ಡ ಮಟ್ಟದಲ್ಲಿ ಗೆದ್ದು ಬಂದರೆ, ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಬೇರು ಇನ್ನೂ ಆಳಕ್ಕಿಳಿಯುವ ಭಯದಿಂದ, ಪಕ್ಷದೊಳಗೆ ಭಿನ್ನಮತಗಳು ಸೃಷ್ಟಿಯಾದವು. ಸಿದ್ದರಾಮಯ್ಯರೇನೂ ಈ ಬಣ ರಾಜಕೀಯದಲ್ಲಿ ಹಿಂದೆ ಬೀಳಲಿಲ್ಲ. ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸುವ ಆತುರದಲ್ಲಿ ಸಿದ್ದರಾಮಯ್ಯ ಕೂಡ ತಮ್ಮ ಬುಡಕ್ಕೆ ಕಲ್ಲು ಹಾಕಿಕೊಂಡರು. ಅಂತಿಮವಾಗಿ, ಚುನಾವಣೆಯಲ್ಲಿ ಸುಮಾರು ೫೦ ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಳ್ಳಬೇಕಾಯಿತು. ಸಿದ್ದರಾಮಯ್ಯ ವಿಧಾನಸಭೆಗೆ ಆಯ್ಕೆಯಾದದ್ದೇ ದೊಡ್ಡ ವಿಷಯ ಎನ್ನುವಂತಾಯಿತು.
ಇದೀಗ ಮತ್ತೆ ಕಾಂಗ್ರೆಸ್ ಚುನಾವಣೆಗೆ ಅಣಿಯಾಗುತ್ತಿದೆ. ಕಳೆದ ಚುನಾವಣೆಯ ಫಲಿತಾಂಶದಿಂದ ಪಾಠ ಕಲಿತಿರುವ ಕಾಂಗ್ರೆಸ್ ಈ ಬಾರಿ, ತಳಸ್ತರದಲ್ಲಿ ಕಾರ್ಯಕರ್ತರನ್ನು ಸಂಘಟಿಸುತ್ತಾ, ಒಂದಾಗಿ ಚುನಾವಣೆಯನ್ನು ಎದುರಿಸಬಹುದು ಎನ್ನುವ ನಿರೀಕ್ಷೆ ಹುಸಿಯಾಗುತ್ತಿದೆ. ‘ಸಿದ್ದರಾಮಯ್ಯ ಅಮೃತ ಮಹೋತ್ಸವ’ ಕಾರ್ಯಕ್ರಮ ಕಾಂಗ್ರೆಸ್‌ನ ಫಲಿತಾಂಶಕ್ಕೆ ಪೂರಕವಾಗುವ ಬದಲು, ತಿರುಗುಬಾಣವಾಗುವ ಸಾಧ್ಯತೆಗಳು ಕಾಣುತ್ತಿವೆ. ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಕನಿಷ್ಠ ರಾಜ್ಯ ಕಾಂಗ್ರೆಸ್‌ನೊಳಗಿರುವ ನಾಯಕರೂ ಕೈಜೋಡಿಸುವ ಸೂಚನೆಗಳಿಲ್ಲ ಎನ್ನುವುದಕ್ಕೆ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ ಸಾಕ್ಷಿಯಾಗಿದೆ. ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲೇ ಅಮೃತಕ್ಕೆ ಹುಳಿ ಬಿದ್ದಿದೆ. ಸಭೆಗೆ ಡಿ.ಕೆ. ಶಿವಕುಮಾರ್, ಹರಿಪ್ರಸಾದ್‌ರಂತಹ ನಾಯಕರೇ ಗೈರು ಹಾಜರಾಗಿದ್ದಾರೆ. ಹಾಗೆಯೇ, ಸಭೆಯಲ್ಲಿ ಭಾಗವಹಿಸಿದ ಡಿ.ಕೆ. ಸುರೇಶ್, ಅಮೃತಮಹೋತ್ಸವದ ಬಗ್ಗೆ ಪರೋಕ್ಷ ಎಚ್ಚರಿಕೆಯನ್ನು ನೀಡಿದ್ದಾರೆ. ‘‘ಕಾರ್ಯಕ್ರಮ ಕಾರ್ಯಕರ್ತರಿಗೆ ಕೆಟ್ಟ ಸಂದೇಶವನ್ನು ನೀಡಬಾರದು. ಮಾಧ್ಯಮಗಳು ಕಾರ್ಯಕ್ರಮದ ಬಗ್ಗೆ ಈಗಾಗಲೇ ತಪ್ಪು ಪ್ರಚಾರಗಳನ್ನು ಮಾಡುತ್ತಿವೆ’’ ಎಂದು ತಮ್ಮ ಭಾಷಣದಲ್ಲಿ ಸೂಚ್ಯವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವೆಲ್ಲದರ ಅರ್ಥ ಸ್ಪಷ್ಟ. ‘ಸಿದ್ದರಾಮಯ್ಯ ಅಮೃತಮಹೋತ್ಸವ’ದ ಕುರಿತಂತೆ ಕಾಂಗ್ರೆಸ್‌ನೊಳಗಿರುವ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರಿಗೆ ತಪ್ಪು ಅಭಿಪ್ರಾಯಗಳಿವೆ. ಸಿದ್ದರಾಮಯ್ಯ ಈ ಉತ್ಸವದ ಮೂಲಕ ವರಿಷ್ಠರಿಗೆ ತನ್ನ ಬಲಪ್ರದರ್ಶನ ಮಾಡಲು ಹೊರಟಿದ್ದಾರೆ ಎನ್ನುವ ಅಸಮಾಧಾನಗಳು ಅವರಲ್ಲಿವೆ. ಕನಿಷ್ಠ ತನ್ನ ಪಕ್ಷದ ನಾಯಕರನ್ನು ಒಂದು ವೇದಿಕೆಯೊಳಗೆ ತರಲು ಸಾಧ್ಯವಾಗದೇ ಇದ್ದ ಮೇಲೆ, ಇಂತಹದೊಂದು ಉತ್ಸವವನ್ನು ಕಾಂಗ್ರೆಸ್ ಪಕ್ಷ ಯಾರನ್ನು ಮೆಚ್ಚಿಸುವುದಕ್ಕೆ ಹಮ್ಮಿಕೊಂಡಿದೆ ಎಂಬ ಪ್ರಶ್ನೆ ಕಾರ್ಯಕರ್ತರ ತಲೆಯನ್ನು ಕೊರೆಯುವುದು ಸಹಜವೇ ಆಗಿದೆ.
ವಿತ್ತ ಸಚಿವರಾಗಿ ಆರು ಜನಪರ ಬಜೆಟ್‌ಗಳನ್ನು ಮಂಡಿಸಿ, ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಯಶಸ್ವಿ ಜನಪರ ಯೋಜನೆಗಳನ್ನು ಹಮ್ಮಿಕೊಂಡ ಸಿದ್ದರಾಮಯ್ಯ ಅವರಿಗೆ ೭೫ ವರ್ಷ ಪೂರ್ತಿಯಾದ ಹಿನ್ನೆಲೆಯಲ್ಲಿ ಅಮೃತಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅಭಿನಂದನಾರ್ಹ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಇಂತಹದೊಂದು ಅಮೃತಮಹೋತ್ಸವ ಅರ್ಥಪೂರ್ಣವಾಗುವುದು, ಅವರು ರಾಜಕೀಯವನ್ನು ಅಧಿಕೃತವಾಗಿ ತೊರೆದಾಗ ಮಾತ್ರ. ಆಗ ಆ ಸಮಾವೇಶವನ್ನು ರಾಜಕೀಯ ರಹಿತವಾಗಿ ಹಮ್ಮಿಕೊಳ್ಳಲು ಅನುಕೂಲವಾಗುತ್ತದೆ. ಎಲ್ಲ ಪಕ್ಷಗಳು ಅದರಲ್ಲಿ ಒಳಗೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರೂ ಉತ್ಸವದಲ್ಲಿ ಭಾಗವಹಿಸಿ ತಮ್ಮ ಹೃದಯದ ಮಾತುಗಳನ್ನು ಪ್ರಾಮಾಣಿಕವಾಗಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಒಂದು ನಿರ್ದಿಷ್ಟ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗುವುದಕ್ಕೆ ಬಯಸುತ್ತಾ ಚುನಾವಣೆಯ ಹೊತ್ತಿಗೆ ಇಂತಹ ಉತ್ಸವ ಹಮ್ಮಿಕೊಂಡರೆ, ಅದು ತನ್ನ ಉದ್ದೇಶವನ್ನು ಸಾಧಿಸಿಕೊಳ್ಳಲಾರದು. ‘ರಾಜಕೀಯೇತರ ಉತ್ಸವ’ ಎಂದು ಅದೆಷ್ಟು ಬಾರಿ ಘೋಷಣೆ ಮಾಡಿದರೂ, ಇದು ಅಂತಿಮವಾಗಿ ರಾಜಕೀಯ ಉತ್ಸವವಾಗಿಯೇ ಮುಗಿಯಲಿದೆ.
ಸೈದ್ಧಾಂತಿಕವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಉಳಿದುಕೊಂಡಿರುವುದು ಸಿದ್ದರಾಮಯ್ಯರ ಮುಖಾಂತರ. ಇದೇ ಸಂದರ್ಭದಲ್ಲಿ ಡಿಕೆಶಿಯ ಹಣ ಬಲ ಮತ್ತು ಜನಬಲವನ್ನು ಬಿಟ್ಟು ಸಿದ್ದರಾಮಯ್ಯರ ಹಿಂದೆ ಹೋಗುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯ ವೇದಿಕೆಯಲ್ಲಿ ಅದೆಷ್ಟು ಸನಿಹದಲ್ಲಿ ಕುಳಿತರೂ, ಪರಸ್ಪರ ಒಂದಾಗುವುದಕ್ಕೆ ಸಾಧ್ಯವೇ ಇಲ್ಲದ ವ್ಯಕ್ತಿತ್ವ. ಬ್ರಾಹ್ಮಣ್ಯ ಮತ್ತು ಆರೆಸ್ಸೆಸ್‌ನ ವಿರುದ್ಧ ಖಂಡತುಂಡವಾಗಿ ಮಾತನಾಡುವ ಸಿದ್ದರಾಮಯ್ಯ ಕುರಿತಂತೆ ಕಾಂಗ್ರೆಸ್‌ನೊಳಗಿರುವ ನಾಯಕರಿಗೇ ಸಣ್ಣದೊಂದು ಆತಂಕವಿದೆ. ಕಾಂಗ್ರೆಸ್‌ನೊಳಗಿರುವ ಬಹುತೇಕ ನಾಯಕರು ಮೃದು ಹಿಂದುತ್ವದ ಮೇಲೆ ನಂಬಿಕೆಯಿಟ್ಟವರು. ಹಿಂದುತ್ವದ ಮತಗಳಿಗಾಗಿ ಹಲ್ಲು ಗಿಂಜುತ್ತಿರುವ ಕಾಂಗ್ರೆಸ್ಸಿಗರಿಗೆ, ಎಲ್ಲಿ ಸಿದ್ದರಾಮಯ್ಯರಿಂದಾಗಿ ಅವುಗಳನ್ನು ಕಳೆದುಕೊಳ್ಳುತ್ತೇವೆಯೋ ಎನ್ನುವ ಭಯವಿದೆ. ಈ ಸೈದ್ಧಾಂತಿಕ ಗೊಂದಲಗಳು ಕಾಂಗ್ರೆಸ್‌ನ್ನು ಈ ಬಾರಿಯ ಚುನಾವಣೆಯಲ್ಲೂ ಬೇಟೆಯಾಡಲಿದೆ. ಇಂತಹ ಹೊತ್ತಿನಲ್ಲಿ ಸಿದ್ದರಾಮಯ್ಯ ಪರವಾಗಿ ಹಮ್ಮಿಕೊಂಡಿರುವ ಈ ಸಮಾವೇಶ, ಕಾಂಗ್ರೆಸ್‌ಗೆ ಇನ್ನಷ್ಟು ನಷ್ಟಗಳನ್ನು ತರಲಿದೆ.
ಬಿಜೆಪಿಯನ್ನು ಸೋಲಿಸುವುದಕ್ಕೆ ಬೇಕಾದ ತಳಮಟ್ಟದಲ್ಲಿ ಯಾವ ಸಿದ್ಧತೆಯನ್ನು ಕಾಂಗ್ರೆಸ್ ಮಾಡಿಕೊಂಡಿಲ್ಲ. ಚುನಾವಣೆಯಲ್ಲಿ ಬಿಜೆಪಿ ಆತ್ಮಹತ್ಯೆ ಮಾಡಿಕೊಳ್ಳುತ್ತದೆ ಎಂದು ಕಾಂಗ್ರೆಸ್ ಮಂಡಿಗೆ ತಿನ್ನುತ್ತಿರುವಂತಿದೆ. ಈಗಾಗಲೇ ತಾವೇ ಮಾಡಿಸಿರುವ ಚುನಾವಣಾ ಸಮೀಕ್ಷೆಯನ್ನು ನಂಬಿರುವ ಕಾಂಗ್ರೆಸ್ ನಾಯಕರು, ಚುನಾವಣೆಯಲ್ಲಿ ಗೆದ್ದೇ ಬಿಟ್ಟಿದ್ದೇವೆ ಎಂಬಂತೆ ವರ್ತಿಸುತ್ತಿದ್ದಾರೆ. ಅದನ್ನು ನಂಬಿಯೇ ಕಾಂಗ್ರೆಸ್‌ನೊಳಗಿರುವ ನಾಯಕರು ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಟ್ಟೆಯನ್ನು ಹೊಲಿಯಲು ಹಾಕಿದ್ದಾರೆ. ‘ಅಮೃತ ಮಹೋತ್ಸವ’ ಎನ್ನುವುದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಗಾದಿಗಾಗಿಯೇ ಸಿದ್ಧಗೊಳಿಸುತ್ತಿರುವ ಹೊಸ ಬಟ್ಟೆ ಎಂದು ಕಾಂಗ್ರೆಸ್‌ನೊಳಗಿರುವ ಮಂದಿ ಒಳಗೊಳಗೆ ಬುಸುಗುಟ್ಟುತ್ತಿರುವುದು ಈ ಕಾರಣಕ್ಕೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ತನ್ನ ಮೌನವನ್ನು ಮುರಿಯಬೇಕಾಗಿದೆ. ರಾಜ್ಯ ಕಾಂಗ್ರೆಸ್‌ಗೆ ತನ್ನ ಒಳಗಿನ ಇಂಗಿತವನ್ನು ಸ್ಪಷ್ಟಪಡಿಸಬೇಕಾಗಿದೆ. ಅಮೃತ ಉತ್ಸವ ನಿಜಕ್ಕೂ ರಾಜಕೀಯ ಉತ್ಸವವಾಗಿ ಮುಗಿದರೆ, ಅದರಿಂದ ಸಿದ್ದರಾಮಯ್ಯರಿಗೂ, ಕಾಂಗ್ರೆಸ್‌ಗೂ ಬಹಳಷ್ಟು ನಷ್ಟಗಳಿವೆ.