ಅಶೋಕನ ಕನಸು ಮತ್ತು ಇಂದಿನ ಭಾರತ
1905ರಲ್ಲಿ ಬ್ರಿಟಿಷ್ ಪುರಾತತ್ವಶಾಸ್ತ್ರಜ್ಞರು ಉತ್ಖನನ ನಡೆಸುವವರೆಗೂ ಸಾರನಾಥದ ಅಶೋಕ ಸ್ತಂಭ ಮತ್ತು ಸಿಂಹ ರಾಜಧಾನಿ ನೆಲದಲ್ಲಿ ಹೂತುಹೋಗಿದ್ದು, ಶತಮಾನಗಳ ಕಾಲ ಮರೆತುಹೋಗಿದ್ದವು. ದಶಕಗಳ ಬಳಿಕ ಹೊಸದಾಗಿ ಸ್ವತಂತ್ರಗೊಂಡಿದ್ದ ಭಾರತದ ಸಂವಿಧಾನ ಸಭೆಯು ರಾಷ್ಟ್ರೀಯ ಚಿಹ್ನೆಗಾಗಿ ಹುಡುಕಾಡುತ್ತಿದ್ದಾಗ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಆ ಕಾರ್ಯವನ್ನು ನಾಗರಿಕ ಸೇವೆಗಳ ಅಧಿಕಾರಿ ಬದ್ರುದ್ದೀನ್ ತ್ಯಾಬ್ಜಿಗೆ ವಹಿಸಿದ್ದರು. ಅವರ ಪತ್ನಿ ಸುರಯ್ಯಿ ತ್ಯಾಬ್ಜಿ ಲಾಂಛನದ ಮೊದಲ ಕರಡು ಚಿತ್ರವನ್ನು ಬಿಡಿಸಿದ್ದರು.
ನೂತನ ಸಂಸತ್ ಕಟ್ಟಡದ ಮೇಲೆ ಬೃಹತ್ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅನಾವರಣಗೊಳಿಸಿದ್ದಾರೆ. ಪೀಠದ ಮೇಲೆ ನಿಂತಿರುವ ನಾಲ್ಕು ಕಂಚಿನ ಸಿಂಹಗಳು 6.5 ಮೀ. ಎತ್ತರವಿದ್ದು, ಪೀಠ ಮತ್ತು ಸಿಂಹಗಳ ಒಟ್ಟು ತೂಕ 9,500 ಕೆ.ಜಿ. ಇದೆ.
ಇದರಲ್ಲೇನೂ ಅಚ್ಚರಿಯಿಲ್ಲ. ಎಲ್ಲವೂ ದೊಡ್ಡದೇ ಆಗಿರಬೇಕು ಎಂಬ ಧೋರಣೆಯ ಪ್ರಸ್ತುತ ಆಡಳಿತವು ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯ ಸ್ಥಾಪನೆ ಮತ್ತು ವಿಶ್ವದ ಅತ್ಯಂತ ದೊಡ್ಡ ಮೂಲಸೌಕರ್ಯ ಯೋಜನೆಯ ಹೆಗ್ಗಳಿಕೆಯನ್ನು ಹೊಂದಿದೆ. 2018ರಲ್ಲಿ ಮೋದಿಯವರು ದಿಲ್ಲಿಯಲ್ಲಿ ಉದ್ಘಾಟಿಸಿದ್ದ ಬಿಜೆಪಿಯ ನೂತನ ಕೇಂದ್ರಕಚೇರಿಯು ವಿಶ್ವದಲ್ಲಿ ರಾಜಕೀಯ ಪಕ್ಷವೊಂದರ ಅತ್ಯಂತ ದೊಡ್ಡ ಕಚೇರಿಯಾಗಿದೆ. ನೂತನ ರಾಷ್ಟ್ರೀಯ ಲಾಂಛನವು ಭಾರತದಲ್ಲಿ ಈವರೆಗಿನ ಅತ್ಯಂತ ದೊಡ್ಡ ರಾಷ್ಟ್ರೀಯ ಲಾಂಛನವಾಗಿರಬಹುದು.
ನೂತನ ರಾಷ್ಟ್ರೀಯ ಲಾಂಛನದಲ್ಲಿಯ ಸಿಂಹಗಳು ಏಕೆ ಸಿಟ್ಟಿನಲ್ಲಿವೆ ಎನ್ನುವುದು ಈಗಿನ ಪ್ರಶ್ನೆಯಾಗಿದೆ. ಅವುಗಳ ಕೋರೆಹಲ್ಲುಗಳು ಸಣ್ಣದೊಂದು ರಾಜಕೀಯ ಬಿರುಗಾಳಿಗೆ ಕಾರಣವಾಗಿವೆ. ಘರ್ಜಿಸುತ್ತಿರುವ, ಸ್ನಾಯುಗಳು ಉಬ್ಬಿಕೊಂಡಿರುವ ಮತ್ತು ರಕ್ತನಾಳಗಳು ಪುಟಿದೆದ್ದಿರುವ ಈ ಸಿಂಹಗಳು ಸಾರನಾಥದಲ್ಲಿರುವ ಅಶೋಕ ಸ್ತಂಭದಲ್ಲಿಯ ಸಿಂಹಗಳಿಗಿಂತ ತುಂಬ ವಿಭಿನ್ನವಾಗಿವೆ.
ಸಾರನಾಥದಲ್ಲಿಯ ಸಿಂಹಗಳು ಸುಮಾರು ಎರಡು ಸಹಸ್ರಮಾನಗಳಿಂದಲೂ ಘರ್ಜಿಸುತ್ತಿವೆ, ಆದರೆ ಅದು ಬಲ ಪ್ರದರ್ಶನಕ್ಕಿಂತ ಹೆಚ್ಚಾಗಿ ಸಾಂಪ್ರದಾಯಿಕ ಘರ್ಜನೆಯಾಗಿದೆ.
ಚಂದ್ರನಿಲ್ಲದ ರಾತ್ರಿಯಲ್ಲಿ ನವಭಾರತದ ಸಿಂಹಗಳೊಂದಿಗೆ ದಾರಿಯನ್ನು ಅಡ್ಡ ಹಾಯಲು ನೀವು ಬಯಸುವುದಿಲ್ಲ.
ಗುಜರಾತಿನ ಸಿಂಹ
ಅನೇಕರು ಗಾಢವಾಗಿ ಗಮನಿಸಿರುವಂತೆ ಸಿಂಹಗಳು ಮತ್ತು ಮೋದಿ ಸರಕಾರದ ಇತಿಹಾಸವನ್ನು ಹೊಂದಿವೆ.
ಮೋದಿಯವರನ್ನು ‘ಗುಜರಾತಿನ ಸಿಂಹ’ ಎಂದು ಬಣ್ಣಿಸಲಾಗಿತ್ತು. ಅವರು ಪ್ರಧಾನಿಯಾಗುವ ಮುನ್ನ 12 ವರ್ಷಗಳ ಕಾಲ ಗುಜರಾತನ್ನು ಆಳಿದ್ದರು. ಸಿಂಹಗಳು ಕಂಡುಬರುವ ದೇಶದ ಏಕೈಕ ರಾಜ್ಯವಾಗಿರುವ ಗುಜರಾತಿನ ರಾಜ್ಯಪ್ರಾಣಿಯೂ ಸಿಂಹವೇ ಆಗಿರುವುದು ಈ ಬಣ್ಣನೆಗೆ ನೆರವಾಗಿತ್ತು. 2014ರ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ‘ಹೂಂಕಾರ (ಘರ್ಜನೆ)’ ರ್ಯಾಲಿಗಳಿಗಾಗಿ ಮೋದಿ ದೇಶಾದ್ಯಂತ ಪ್ರವಾಸ ಮಾಡಿದ್ದರು. ಅವರನ್ನು ‘ವಿಕಾಸ ಪುರುಷ’ ಎಂದು ಬಿಂಬಿಸಲಾಗಿತ್ತು.
ಬಳಿಕ ಮೋದಿ ಸರಕಾರದ ಆರ್ಥಿಕ ಅಜೆಂಡಾಕ್ಕೆ ಸಿಂಹವು ಸಂಕೇತವಾಗಿತ್ತು. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬೆನ್ನಲ್ಲೇ ಗಾಲಿ ಹಲ್ಲುಗಳಿಂದ ಮಾಡಲಾಗಿದ್ದ ಸಿಂಹದ ‘ಮೇಕ್ ಇನ್ ಇಂಡಿಯಾ’ ಲೋಗೊವನ್ನು ಹೊರತಂದಿತ್ತು. ಅದು ಒರಟು ಮೃಗವು ಕೈಗಾರಿಕಾ ಪ್ರಗತಿಯತ್ತ ಸಾಗುತ್ತಿದ್ದಂತಿತ್ತು. ಭಾರತವು ಈಗ ಸರಕಾರಿ ಸಮಾರಂಭಗಳಲ್ಲಿ ಪ್ರತಿಫಲಿಸುತ್ತಿರುವ, ಹೆಚ್ಚುತ್ತಿರುವ ಅಸುರಕ್ಷಿತ ಬಹುಸಂಖ್ಯಾತ ರಾಜಕೀಯದಲ್ಲಿ ಹೆಜ್ಜೆಗಳನ್ನು ಹಾಕುತ್ತಿದ್ದರೆ ಕೈಗಾರಿಕಾ ಪ್ರಗತಿಯು ಅಸ್ತವ್ಯಸ್ತಗೊಂಡಿದೆ. 2020 ಡಿಸೆಂಬರ್‌ನಲ್ಲಿ ನಡೆದ ಭೂಮಿಪೂಜೆಯಲ್ಲಿ ನೂತನ ಸಂಸತ್ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ಮಾಡಲಾಗಿತ್ತು. ಸರ್ವಧರ್ಮೀಯ ಪ್ರಾರ್ಥನೆಯನ್ನು ಹೇಳಲಾಗಿತ್ತಾದರೂ ಬಹುಸಂಖ್ಯಾತರ ಧಾರ್ಮಿಕ ವಿಧಿಗಳು ಪ್ರಾಬಲ್ಯವನ್ನು ಹೊಂದಿದ್ದವು. ಆದರೆ ಸೋಮವಾರ ರಾಷ್ಟ್ರೀಯ ಲಾಂಛನ ಅನಾವರಣ ಸಮಾರಂಭದಲ್ಲಿ ಕೇವಲ ಹಿಂದೂ ಅರ್ಚಕರು ಉಪಸ್ಥಿತರಿದ್ದಂತೆ ಕಂಡು ಬಂದಿತ್ತು.
ಅಶೋಕನ ಶಾಸನಗಳು
ಹಳೆಯ ಕಥೆಯ ಪ್ರಕಾರ ಸಾಮ್ರಾಟ ಅಶೋಕ ಯಾವಾಗಲೂ ಧರ್ಮಭೀರು ಅರಸನಾಗಿರಲಿಲ್ಲ, ಆದರೆ ಕಳಿಂಗ ಯುದ್ಧದಲ್ಲಿಯ ಹತ್ಯಾಕಾಂಡವನ್ನು ನೋಡಿದ ಬಳಿಕ ಪಶ್ಚಾತ್ತಾಪಗೊಂಡಿದ್ದ ಆತ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದ. ಆತ ತನ್ನ ರಾಜ್ಯಾದ್ಯಂತ ಸ್ಥಾಪಿಸಿದ್ದ, ಶಾಸನಗಳನ್ನು ಕೆತ್ತಲಾಗಿದ್ದ ಸ್ತಂಭಗಳು ಹೊಸ ಧರ್ಮದ ಪ್ರಸಾರಕ್ಕಾಗಿದ್ದವು. ಅದು ವ್ಯಕ್ತಿತ್ವ ಬದಲಾವಣೆಯ ಭಾಗವಾಗುವ ಜೊತೆಗೆ ಸಾರ್ವಜನಿಕ ನೀತಿ ಸಂಹಿತೆಯನ್ನು ಸ್ಥಾಪಿಸುವ ಪ್ರಯತ್ನವೂ ಆಗಿತ್ತು.
1905ರಲ್ಲಿ ಬ್ರಿಟಿಷ್ ಪುರಾತತ್ವಶಾಸ್ತ್ರಜ್ಞರು ಉತ್ಖನನ ನಡೆಸುವವರೆಗೂ ಸಾರನಾಥದ ಅಶೋಕ ಸ್ತಂಭ ಮತ್ತು ಸಿಂಹ ರಾಜಧಾನಿ ನೆಲದಲ್ಲಿ ಹೂತುಹೋಗಿದ್ದು, ಶತಮಾನಗಳ ಕಾಲ ಮರೆತುಹೋಗಿದ್ದವು. ದಶಕಗಳ ಬಳಿಕ ಹೊಸದಾಗಿ ಸ್ವತಂತ್ರಗೊಂಡಿದ್ದ ಭಾರತದ ಸಂವಿಧಾನ ಸಭೆಯು ರಾಷ್ಟ್ರೀಯ ಚಿಹ್ನೆಗಾಗಿ ಹುಡುಕಾಡುತ್ತಿದ್ದಾಗ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಆ ಕಾರ್ಯವನ್ನು ನಾಗರಿಕ ಸೇವೆಗಳ ಅಧಿಕಾರಿ ಬದ್ರುದ್ದೀನ್ ತ್ಯಾಬ್ಜಿಗೆ ವಹಿಸಿದ್ದರು. ಅವರ ಪತ್ನಿ ಸುರಯ್ಯಿ ತ್ಯಾಬ್ಜಿ ಲಾಂಛನದ ಮೊದಲ ಕರಡು ಚಿತ್ರವನ್ನು ಬಿಡಿಸಿದ್ದರು.
ಅವರ ಪುತ್ರಿ ಲೈಲಾ ತ್ಯಾಬ್ಜಿ ಬರೆದಿರುವಂತೆ ದಂಪತಿ ವಿಭಜನೆಯ ಆಘಾತದಿಂದ ಬದುಕುಳಿದಿದ್ದರು, ತ್ಯಾಬ್ಜಿ ಸ್ವತಃ ಕೊಲ್ಲಲ್ಪಡುವುದರಿಂದ ಸ್ವಲ್ಪದರಲ್ಲಿ ಪಾರಾಗಿದ್ದರು. ಅವರು ಜಾತ್ಯತೀತ, ಬಹುಸಾಂಸ್ಕೃತಿಕ ಭಾರತಕ್ಕಾಗಿ ಧರ್ಮದ ಆಧಾರದಲ್ಲಿ ದೇಶ ನಿರ್ಮಾಣ ಪರಿಕಲ್ಪನೆಯನ್ನು ತಿರಸ್ಕರಿಸಿ ಪಾಕಿಸ್ತಾನಕ್ಕೆ ವಲಸೆ ಹೋಗಲು ನಿರಾಕರಿಸಿದ್ದರು. ಅವರು ತಮ್ಮ ಮನೆಯೆಂದು ಕರೆಯಲು ಬಯಸಿದ್ದ ಗಣರಾಜ್ಯದ ಲಕ್ಷಣಗಳನ್ನು ನೂತನ ರಾಷ್ಟ್ರೀಯ ಲಾಂಛನದಲ್ಲಿ ಕೆತ್ತಬಹುದಿತ್ತು.
ಅಶೋಕನ ಶಾಸನಗಳು ಕೆತ್ತಲ್ಪಟ್ಟ ವರ್ಷಗಳ ಶತಮಾನಗಳ ಬಳಿಕ ಆಧುನಿಕ ದೇಶಕ್ಕಾಗಿ ಅವುಗಳನ್ನು ನವೀಕರಿಸಲಾಗಿತ್ತು. ತನ್ನ ಆಡಳಿತ ಮತ್ತು ತನ್ನ ಪ್ರಜೆಗಳು ಅಹಿಂಸಾವಾದಿಗಳು, ಸಹಿಷ್ಣುಗಳು, ಉದಾರಿಗಳು ಮತ್ತು ಮಾನವೀಯರಾಗಿದ್ದರು ಹಾಗೂ ತಮ್ಮ ವಿವಿಧತೆಯ ಹೊರತಾಗಿಯೂ ಈ ವೌಲ್ಯಗಳಿಗೆ ಒಂದಾಗಿ ಬದ್ಧರಾಗಿದ್ದರು ಎನ್ನುವುದು ಹೇಗೆ ನೆನಪಿನಲ್ಲಿ ಉಳಿಯಬೇಕು ಎಂದು ಸಾಮ್ರಾಟ ಅಶೋಕ ಬಯಸಿದ್ದ ಎನ್ನುವುದನ್ನು ಈ ಶಾಸನಗಳು ಸೂಚಿಸುತ್ತವೆ.
ಸಾವಿರಾರು ವರ್ಷಗಳ ಬಳಿಕ ಪುರಾತತ್ವ ಶಾಸ್ತ್ರಜ್ಞರು ಈಗ ಸುದ್ದಿಯಾಗಿರುವ ನೂತನ ಕಂಚಿನ ಲಾಂಛನವನ್ನು ಪತ್ತೆ ಮಾಡಿದಾಗ ಅದನ್ನು ನಿರ್ಮಿಸಿದ ಜನರ ಬಗ್ಗೆ ಅವರು ಏನೆಂದು ಭಾವಿಸಬೇಕು? ಅವರು ನಿಜಕ್ಕೂ ಸಿಟ್ಟುಗೊಂಡಿದ್ದರು ಎಂದೇ?
ಕೃಪೆ: Scroll.in