ಬಾಹ್ಯಾಕಾಶ ಪ್ರವಾಸೋದ್ಯಮ ಮತ್ತು ಓರೆನ್ ಸವಕಳಿ
ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರಗಳು ಬಹುತೇಕವಾಗಿ ಮಾನವರಿಗೆ ಒಳಿತನ್ನೇ ಮಾಡುತ್ತವೆ. ಆದರೆ ಅದರ ಬಳಕೆಯ ವಿಧಾನಗಳಲ್ಲಿ ಅತಿಯಾದಾಗ ಆವಿಷ್ಕಾರದಿಂದ ಒಳಿತಾಗುವ ಬದಲು ಕೆಡುಕಾಗುತ್ತದೆ. ಉದಾಹರಣೆಗೆ ದೂರದಲ್ಲಿದ್ದವರೊಂದಿಗೆ ಸಂಭಾಷಣೆ ಮಾಡುವ ಉದ್ದೇಶದಿಂದ ದೂರವಾಣಿ ಬಳಕೆಗೆ ಬಂತು. ನಂತರ ಸ್ಥಿರದೂರವಾಣಿಯ ಸ್ಥಾನವನ್ನು ಮೊಬೈಲ್ ಆಕ್ರಮಿಸಿತು. ಯಾವಾಗ ಮೊಬೈಲ್ ಮಾನವನ ಅವಿಭಾಜ್ಯ ಅಂಗ ಎನ್ನುವಂತಾಯಿತೋ ಅಂದಿನಿಂದ ಅವನ ಜ್ಞಾನದ ಅವನತಿಯೂ ಕುಸಿಯತೊಡಗಿತು. ಹೀಗೆ ಕೆಲ ಆವಿಷ್ಕಾರಗಳು ಮಾನವನ ಜೀವನಕ್ಕೆ ಮುಳುವಾಗಿವೆ. ಈಗ ಅವುಗಳ ಸಾಲಿಗೆ ಬಾಹ್ಯಾಕಾಶ ಪ್ರಯಾಣವೂ ಸೇರಿದೆ.
ಬಾಹ್ಯಾಕಾಶ ಪ್ರವಾಸೋದ್ಯಮದ ಒಂದು ಸಾಮಾನ್ಯ ವಿಭಾಗವಾದ ಬಾಹ್ಯಾಕಾಶ ಪ್ರಯಾಣವು ಸಾಮಾನ್ಯ ಜನರಿಗೆ ಮನರಂಜನೆ, ವಿರಾಮ ಅಥವಾ ವ್ಯಾಪಾರ ಉದ್ದೇಶಗಳಿಗಾಗಿ ಬಾಹ್ಯಾಕಾಶಕ್ಕೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಗಗನಯಾತ್ರಿಗಳಲ್ಲದ ಮತ್ತು ವೈಜ್ಞಾನಿಕವಲ್ಲದ ಕಾರಣಗಳಿಗಾಗಿ ಬಾಹ್ಯಾಕಾಶಕ್ಕೆ ಪ್ರಯಾಣಿಸಲು ಬಯಸುವ ಜನರಿಗೆ ಬಾಹ್ಯಾಕಾಶವನ್ನು ಪ್ರವೇಶಿಸುವಂತೆ ಮಾಡುವುದು ಈ ಪ್ರಯಾಣದ ಗುರಿಯಾಗಿದೆ. 20ನೇ ಶತಮಾನದಲ್ಲಿ ಸೋವಿಯತ್ ಒಕ್ಕೂಟ ಮತ್ತು ಯುನೈಟೆಡ್ ಸ್ಟೇಟ್ಸ್‌ಗಳು ಬಾಹ್ಯಾಕಾಶ ಹಾರಾಟದ ತಂತ್ರಜ್ಞಾನಗಳ ಸಂಪೂರ್ಣ ಪ್ರಾಬಲ್ಯವನ್ನು ಸಾಧಿಸಲು ತೀವ್ರವಾದ ಸ್ಪರ್ಧೆಯಲ್ಲಿ ತೊಡಗಿದ್ದವು. ಇಂದು ಅನೇಕ ಖಾಸಗಿ ಕಂಪೆನಿಗಳು ತಮ್ಮದೇ ಆದ ವಾಣಿಜ್ಯ ಬಾಹ್ಯಾಕಾಶ ಹಾರಾಟ ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ. ಬಾಹ್ಯಾಕಾಶ ಪ್ರಯಾಣ ಕಲ್ಪಿಸಲು ದೈತ್ಯ ವಾಣಿಜ್ಯ ಕಂಪೆನಿಗಳಾದ ವರ್ಜಿನ್ ಗ್ಯಾಲಕ್ಟಿಕ್, ಸ್ಪೇಸ್‌ಎಕ್ಸ್ ಮತ್ತು ಬ್ಲೂ ಒರಿಜಿನ್‌ನಂತಹ ಕೆಲ ಸಂಸ್ಥೆಗಳು ಪೈಪೋಟಿ ನಡೆಸಿವೆ. ಇದಕ್ಕಾಗಿ ವಿವಿಧ ಕಂಪೆನಿಗಳು ಕಿರು ವಿಮಾನಗಳು, ಗಗನಯಾತ್ರಿ ಬೂಟ್ ಕ್ಯಾಂಪ್‌ಗಳು ಮತ್ತು ಶೂನ್ಯ ಗುರುತ್ವಾಕರ್ಷಣೆಯ ವಿಮಾನಗಳು, ಶೂನ್ಯ ಒತ್ತಡದ ಬಲೂನ್ ಟ್ರಿಪ್‌ಗಳಿಗೆ ಬುಕಿಂಗ್‌ಗಳನ್ನು ಆಹ್ವಾನಿಸುತ್ತವೆ. ಸದ್ಯಕ್ಕೆ ಬಾಹ್ಯಾಕಾಶ ಉದ್ಯಮವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಲಯಗಳಲ್ಲಿ ಒಂದಾಗಿದೆ.
2019ರಲ್ಲಿ ರೂ. 27,713 ಕೋಟಿಯಷ್ಟಿದ್ದ ಉದ್ಯಮವು 2040ರ ವೇಳೆಗೆ 79,26,010 ಕೋಟಿಯಷ್ಟು ಬೆಳೆಯುವ ನಿರೀಕ್ಷೆ ಇದೆ. ಬಾಹ್ಯಾಕಾಶ ವೀಕ್ಷಣೆಯಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಜೀವನದಲ್ಲಿ ಒಮ್ಮೆಯಾದರೂ ಬಾಹ್ಯಾಕಾಶ ಪ್ರಯಾಣ ಮಾಡುವ ಆಸೆ ಇದ್ದೇ ಇರುತ್ತದೆ. ಬಾಹ್ಯಾಕಾಶ ಪ್ರಯಾಣದ ಉದ್ದೇಶ ಸಂಶೋಧನೆ, ಮನೋರಂಜನೆ ಅಥವಾ ತಿಳುವಳಿಕೆಯೂ ಆಗಿರಬಹುದು. ಇದಕ್ಕಾಗಿ ಅಪಾರ ಮೊತ್ತದ ಹಣ ವ್ಯಯಮಾಡಿಕೊಳ್ಳಲೂ ಸಿದ್ಧರಿರುವ ಜನರಿದ್ದಾರೆ. ಇದು ಒಂದು ರೀತಿಯಲ್ಲಿ ಒಳ್ಳೆಯದೇ ಎಂದು ಭಾವಿಸೋಣ. ಆದರೆ ಬಾಹ್ಯಾಕಾಶ ಪ್ರಯಾಣ ಎನ್ನುವುದು ಇನ್ನೊಂದು ರೀತಿಯಲ್ಲಿ ಭೂ ಪರಿಸರಕ್ಕೆ ಮಾರಕ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ದೃಢಪಟ್ಟಿದೆ. ಬಾಹ್ಯಾಕಾಶ ಪ್ರಯಾಣಕ್ಕೂ, ಭೂ ಪರಿಸರಕ್ಕೂ ಎತ್ತಣಿಂದೆತ್ತ ಸಂಬಂಧ ಎನ್ನುವ ಪ್ರಶ್ನೆ ಮೂಡುವುದು ಸಹಜ. ಭೂಮಿಯಲ್ಲಿನ ಪ್ರಯಾಣಕ್ಕೆ ಸಾರಿಗೆ ವ್ಯವಸ್ಥೆ ಇರುವಂತೆ ಬಾಹ್ಯಾಕಾಶಕ್ಕೂ ಸಾರಿಗೆ ವ್ಯವಸ್ಥೆ ಇರುವುದು ಎಲ್ಲರಿಗೂ ತಿಳಿದ ವಿಷಯ. ಬಾಹ್ಯಾಕಾಶ ಪ್ರಯಾಣಕ್ಕೆಂದೇ ರಾಕೆಟ್‌ಗಳನ್ನು ರೂಪಿಸಿ ಉಡಾವಣೆ ಮಾಡಲಾಗುತ್ತದೆ. ರಾಕೆಟ್‌ಗಳ ಉಡಾವಣೆಯ ಆವಿಷ್ಕಾರ ಆದಾಗಿನಿಂದ ಇಲ್ಲಿಯವರೆಗೂ ಸಾಕಷ್ಟು ಸಂಖ್ಯೆಯಲ್ಲಿ ವಿವಿಧೋದ್ದೇಶಗಳಿಗಾಗಿ ರಾಕೆಟ್‌ಗಳನ್ನು ಬಾಹ್ಯಾಕಾಶಕ್ಕೆ ಕಳಿಸಲಾಗಿದೆ. ಬೆಳೆಯುತ್ತಿರುವ ಬಾಹ್ಯಾಕಾಶ ಪ್ರವಾಸೋದ್ಯಮದ ರಾಕೆಟ್ ಉಡಾವಣೆಯು ಹವಾಮಾನ ಮತ್ತು ಓರೆನ್ ಪದರದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ.
ಜೂನ್ 9ರ ಸಂಚಿಕೆಯ ಅರ್ಥ್ಸ್ ಫ್ಯೂಚರ್ ಜರ್ನಲ್‌ನಲ್ಲಿ ಪ್ರಕಟವಾದ ಲೇಖನವೊಂದು ಬಾಹ್ಯಾಕಾಶ ಪ್ರಯಾಣದಿಂದಾಗುವ ಅಪಾಯಗಳ ಕುರಿತ ಎಚ್ಚರಿಕೆಯನ್ನು ನೀಡಿದೆ. ಯೂನಿವರ್ಸಿಟಿ ಕಾಲೇಜ್ ಲಂಡನ್ (UCL), ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)ಯ ಸಂಶೋಧಕರು ರಾಕೆಟ್ ಉಡಾವಣೆಗಳಿಂದ ಹೊರಸೂಸುವ ಮಸಿಯು ಹವಾಮಾನ ಮತ್ತು ಓರೆನ್ ಪದರದ ಮೇಲೆ ಬೀರುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಿವೆ. ವೇಗವಾಗಿ ಬೆಳೆಯುತ್ತಿರುವ ಬಾಹ್ಯಾಕಾಶ ಪ್ರವಾಸೋದ್ಯಮ ದಿಂದಾದ ಉಡಾವಣೆಗಳು ಓರೆನ್ ಸವಕಳಿಯನ್ನು ಹಿಮ್ಮೆಟ್ಟಿಸುವಲ್ಲಿ ಮಾಂಟ್ರಿಯಲ್ ಪ್ರೋಟೋಕಾಲ್ ಮಾಡಿದ ಪ್ರಗತಿಯನ್ನು ದುರ್ಬಲಗೊಳಿಸಬಹುದು ಎಂದು ಸಂಶೋಧಕರು ಹೇಳುತ್ತಾರೆ.
ಸಂಶೋಧನೆಗಳನ್ನು ಲೆಕ್ಕಾಚಾರ ಮಾಡಲು, ಸಂಶೋಧಕರು ಪ್ರಪಂಚದಾದ್ಯಂತ 2019ರಲ್ಲಿ ಉಡಾವಣೆಯಾದ ಎಲ್ಲಾ 103 ರಾಕೆಟ್‌ಗಳಿಂದ ರಾಸಾಯನಿಕಗಳ ಮಾಹಿತಿಯನ್ನು ಸಂಗ್ರಹಿಸಿದರು. ಹಾಗೆಯೇ ಮರುಬಳಕೆ ಮಾಡಬಹುದಾದ ರಾಕೆಟ್ ಮತ್ತು ಬಾಹ್ಯಾಕಾಶ ಜಂಕ್ ಮರು ಪ್ರವೇಶದ ಡೇಟಾವನ್ನು ಸಹ ಸಂಗ್ರಹಿಸಿದರು. ಬಾಹ್ಯಾಕಾಶ ಪ್ರವಾಸೋದ್ಯಮಿಗಳ ಇತ್ತೀಚಿನ ಕನಿಷ್ಠ ದೈನಂದಿನ ಉಡಾವಣೆಗಳ ಆಧಾರದ ಮೇಲೆ ವಾರ್ಷಿಕ ಕೊಡುಗೆಗಳನ್ನು ಲೆಕ್ಕಾಚಾರ ಹಾಕಿದೆ. ಮಾಲಿನ್ಯದ ಇತರ ಮೂಲಗಳಿಗಿಂತ ಭಿನ್ನವಾಗಿ, ರಾಕೆಟ್‌ಗಳು ಅನಿಲ ಮತ್ತು ಘನ ರಾಸಾಯನಿಕಗಳನ್ನು ನೇರವಾಗಿ ಮೇಲಿನ ವಾತಾವರಣಕ್ಕೆ ಹೊರಸೂಸುವುದರಿಂದ ಹೆಚ್ಚು ಪರಿಸರ ಹಾನಿ ಉಂಟಾಗುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಬಾಹ್ಯಾಕಾಶ ಪ್ರವಾಸೋದ್ಯಮದ ಪ್ರಸ್ತುತ ಬೆಳವಣಿಗೆಯ ಪ್ರವೃತ್ತಿಗಳು ಓರೆನ್ ಪದರದ ಸವಕಳಿಯ ಸಂಭಾವ್ಯತೆಯನ್ನು ಸೂಚಿಸುತ್ತವೆ. ಏಕೆಂದರೆ ರಾಕೆಟ್ ಇಂಧನದಿಂದ ಉಂಟಾಗುವ ಮಾಲಿನ್ಯಕಾರಕಗಳು ಮತ್ತು ಬಾಹ್ಯಾಕಾಶ ನೌಕೆಯು ಭೂಮಿಗೆ ಮರಳುವುದರಿಂದ ಉಂಟಾಗುವ ತಾಪನ, ಜೊತೆಗೆ ವಿಮಾನಗಳಿಂದ ಉಂಟಾದ ಅವಶೇಷಗಳು ವಿಶೇಷವಾಗಿ ಓರೆನ್ ಪದರಕ್ಕೆ ಹಾನಿಕಾರಕವಾಗಿದೆ ಎಂದು ಯೂನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಎಲ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ರಾಕೆಟ್‌ಗಳಿಂದ ನೇರವಾಗಿ ವಾತಾವರಣಕ್ಕೆ ಹೊರಸೂಸುವ ಕಪ್ಪು ಇಂಗಾಲದ ಮಸಿ ಬಹಳ ಕಳವಳಕಾರಿಯಾಗಿದೆ. ಈ ಮಸಿ ಕಣಗಳು ಹವಾಮಾನದ ಮೇಲೆ ಎಲ್ಲಾ ಇತರ ಮೂಲಗಳ ಸಂಯೋಜನೆಗಿಂತ ಹೆಚ್ಚಿನ ಪ್ರಭಾವವನ್ನು ಹೊಂದಿವೆ. ಏಕೆಂದರೆ ಬಿಸಿಯಾದ ಇಂಗಾಲ ಕಣಗಳು ಶಾಖವನ್ನು ಉಳಿಸಿಕೊಳ್ಳುವಲ್ಲಿ ಸುಮಾರು 500 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ.
ಮಸಿಯೊಂದಿಗಿನ ಸಮಸ್ಯೆಯೆಂದರೆ ಅದು ನೇರಳಾತೀತ ಬೆಳಕನ್ನು ಹೀರಿಕೊಳ್ಳುತ್ತದೆ ಮತ್ತು ಅದು ವಾಯುಮಂಡಲವನ್ನು ಬಿಸಿಮಾಡುತ್ತದೆ. ವಾಯುಮಂಡಲ ಬಿಸಿಯಾಗಲು ಪ್ರಾರಂಭವಾದಾಗ ಟ್ರೋಪೋಸ್ಪಿಯರ್‌ನ ಮೇಲಿರುವ ಪದರದ ವಾಯುಮಂಡಲದಲ್ಲಿ ಚಲನೆ ಬದಲಾಗಲು ಪ್ರಾರಂಭವಾಗುತ್ತದೆ. ಇದು ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತದೆ ಎಂದು ಸಂಶೋಧನಾ ತಂಡ ಹೇಳಿದೆ.
ಹೈಡ್ರೋಕಾರ್ಬನ್ ಇಂಧನಗಳನ್ನು ಸುಡುವ ಎಲ್ಲಾ ರಾಕೆಟ್ ಮೋಟಾರ್‌ಗಳು ಮಸಿಯನ್ನು ಉತ್ಪಾದಿಸುತ್ತವೆ. ನಾಸಾದ ಬಾಹ್ಯಾಕಾಶ ನೌಕೆಯ ಬೂಸ್ಟರ್‌ಗಳಲ್ಲಿ ಹಿಂದೆ ಬಳಸಿದಂತಹ ಘನ ರಾಕೆಟ್ ಇಂಜಿನ್‌ಗಳು ಲೋಹೀಯ ಸಂಯುಕ್ತಗಳನ್ನು ಸುಟ್ಟು ಅಲ್ಯೂಮಿನಿಯಂ ಆಕ್ಸೈಡ್ ಕಣಗಳನ್ನು ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಹೊರಸೂಸುತ್ತವೆ. ಇವೆರಡೂ ವಾತಾವರಣದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತವೆ ಎಂದು ಸಂಶೋಧನೆಯಲ್ಲಿ ವರದಿ ಮಾಡಲಾಗಿದೆ. ಬ್ಲೂ ಒರಿಜಿನ್‌ನ ನ್ಯೂ ಶೆಪರ್ಡ್ ಸಬ್‌ಆರ್ಬಿಟಲ್ ವಾಹನಕ್ಕೆ ಶಕ್ತಿ ನೀಡುವ BE-3 ಇಂಜಿನ್ ದ್ರವ ಹೈಡ್ರೋಜನ್ ಮತ್ತು ದ್ರವ ಆಮ್ಲಜನಕವನ್ನು ಸಂಯೋಜಿಸಿ ಒತ್ತಡವನ್ನು ಸೃಷ್ಟಿಸುತ್ತದೆ. ಇತರ ರಾಕೆಟ್ ಇಂಜಿನ್‌ಗಳಿಗೆ ಹೋಲಿಸಿದರೆ BE-3 ದೊಡ್ಡ ಮಾಲಿನ್ಯಕಾರಕವಲ್ಲ. ಕೆಲವು ಸಣ್ಣ ದಹನ ಉತ್ಪನ್ನಗಳೊಂದಿಗೆ ಮುಖ್ಯವಾಗಿ ನೀರನ್ನು ಹೊರಸೂಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕೇವಲ 3 ವರ್ಷಗಳಲ್ಲಿ ಬಿಡುಗಡೆಯಾದ ಮಸಿಯಿಂದಾಗಿ ಬೆಚ್ಚಗಾಗುವ ದರವು ಎರಡು ಪಟ್ಟು ಹೆಚ್ಚಾಗಿದೆ ಎಂದು ಸಂಶೋಧಕರ ತಂಡವು ತೋರಿಸಿದೆ. ಉಡಾವಣೆಗಾಗಿ ಸ್ಪೇಸ್ ಎಕ್ಸ್ ಬಳಸುವ ಸೀಮೆಎಣ್ಣೆ, ವರ್ಜಿನ್ ಗ್ಯಾಲಕ್ಟಿಕ್ ಬಳಸುವ ಸಿಂಥೆಟಿಕ್ ರಬ್ಬರ್ ಇಂಧನಗಳು ಮಸಿಯ ಬಿಸಿಗೆ ಕಾರಣವಾಗಿವೆ. ಪ್ರಸ್ತುತ ರಾಕೆಟ್ ಉಡಾವಣೆಗಳಿಂದ ಓರೆನ್ ನಷ್ಟವು ಸಣ್ಣ ಪ್ರಮಾಣದಲ್ಲಿದೆ ನಿಜ. ಆದರೆ ಭವಿಷ್ಯದಲ್ಲಿ ಸಾಪ್ತಾಹಿಕ ಅಥವಾ ದೈನಂದಿನ ಬಾಹ್ಯಾಕಾಶ ಪ್ರವಾಸೋದ್ಯಮ ರಾಕೆಟ್ ಉಡಾವಣೆಗಳ ಸಾಧ್ಯತೆಯಲ್ಲಿ, ಮಾಂಟ್ರಿಯಲ್ ಪ್ರೋಟೋಕಾಲ್‌ನಿಂದ ಉಂಟಾಗುವ ಓರೆನ್ ಪದರದ ಚೇತರಿಕೆಯು ದುರ್ಬಲಗೊಳ್ಳಬಹುದು ಎಂದು ಸಂಶೋಧಕರು ವಾದಿಸುತ್ತಾರೆ.
''ಮಾಂಟ್ರಿಯಲ್ ಪ್ರೋಟೋಕಾಲ್ ನಂತರದ ಪ್ರಬಲ ಓರೆನ್ ಚೇತರಿಕೆ ತೋರಿಸುವ ವಾತಾವರಣದ ಏಕೈಕ ಭಾಗವೆಂದರೆ ಮೇಲಿನ ವಾಯುಮಂಡಲ. ರಾಕೆಟ್ ಹೊರಸೂಸುವಿಕೆಯ ಪ್ರಭಾವವು ನಿಖರವಾಗಿ ಅಲ್ಲಿಯೇ ಇರುತ್ತದೆ. ಈ ಪ್ರಮಾಣದ ಓರೆನ್ ಬದಲಾವಣೆಗಳನ್ನು ನಾವು ನಿರೀಕ್ಷಿಸಿರಲಿಲ್ಲ, ಓರೆನ್ ಚೇತರಿಕೆಯ ಪ್ರಗತಿಯನ್ನು ಇದು ಭಯಭೀತಗೊಳಿಸಿದೆ'' ಎಂದು ಅಧ್ಯಯನದ ಸಹ ಲೇಖಕ ಡಾ.ರಾಬರ್ಟ್ ರಯಾನ್ ತಿಳಿಸಿದ್ದಾರೆ.
ಮಾಂಟ್ರಿಯಲ್ ಶಿಷ್ಟಾಚಾರವು 1987ರಲ್ಲಿ ಮಾಂಟ್ರಿಯಲ್‌ನಲ್ಲಿ ಅಂಗೀಕರಿಸಲ್ಪಟ್ಟ ಒಂದು ಮಹತ್ವದ ಅಂತರ್‌ರಾಷ್ಟ್ರೀಯ ಒಪ್ಪಂದವಾಗಿದೆ. ಓರೆನ್ ಡಿಪ್ಲೀಟಿಂಗ್ ಪದಾರ್ಥಗಳು (ODS) ಎಂದು ಕರೆಯಲ್ಪಡುವ ಸುಮಾರು 100 ರಾಸಾಯನಿಕಗಳ ಉತ್ಪಾದನೆ ಮತ್ತು ಬಳಕೆಯನ್ನು ನಿಯಂತ್ರಿಸುವ ಮೂಲಕ ಭೂಮಿಯ ಓರೆನ್ ಪದರವನ್ನು ರಕ್ಷಿಸುವ ಗುರಿಯನ್ನು ಇದು ಹೊಂದಿದೆ.
ಮಾಂಟ್ರಿಯಲ್ ಒಪ್ಪಂದದ ಪ್ರಕಾರ, ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿದ ದೇಶಗಳು ಸಮಾನ ಮತ್ತು ವಿಭಿನ್ನ ಜವಾಬ್ದಾರಿಗಳನ್ನು ಹೊಂದಿವೆ. ಆದಾಗ್ಯೂ ಎಲ್ಲಾ ದೇಶಗಳು ಸಮಯ ಉದ್ದೇಶಿತ ಮತ್ತು ಅಳೆಯಬಹುದಾದ ಬದ್ಧತೆಗಳನ್ನು ಅನುಸರಿಸಬೇಕು. ಈ ಒಪ್ಪಂದವನ್ನು ಜಾಗತಿಕ ಮಟ್ಟದಲ್ಲಿ ಅತ್ಯಂತ ಯಶಸ್ವಿ ಪರಿಸರ ಮಧ್ಯಸ್ಥಿಕೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು ವಿಶ್ವದ ಎಲ್ಲಾ ದೇಶಗಳಿಂದ ಸಾರ್ವತ್ರಿಕ ಅನುಮೋದನೆಯನ್ನು ಸಾಧಿಸಿದ ಮೊದಲ ಒಪ್ಪಂದವಾಗಿದೆ. ಈ ಒಪ್ಪಂದವಿಲ್ಲದಿದ್ದರೆ 2050ರ ವೇಳೆಗೆ ಓರೆನ್ ಸವಕಳಿಯು ಹತ್ತು ಪಟ್ಟು ಹೆಚ್ಚಾಗುತ್ತದೆ ಎಂದು ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ ಹೇಳಿದೆ.
ಮಾಂಟ್ರಿಯಲ್ ಪ್ರೋಟೋಕಾಲ್ ಉಂಟಾಗುವ ಓರೆನ್ ಪದರದ ಚೇತರಿಕೆಯು ಪ್ರತೀ ವರ್ಷ ಸುಮಾರು 2 ಮಿಲಿಯನ್ ಜನರನ್ನು ಚರ್ಮದ ಕ್ಯಾನ್ಸರ್‌ನಿಂದ ಉಳಿಸುತ್ತದೆ ಎಂದು ಅಂದಾಜಿಸಲಾಗಿದೆ. 1990-2010 ರ ನಡುವೆ, ಒಪ್ಪಂದವು ಹಸಿರುಮನೆ ಅನಿಲ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ಅಂದಾಜು 135 ಗಿಗಾಟನ್‌ಗಳಷ್ಟು ಕಡಿಮೆ ಮಾಡಲು ಕಾರಣವಾಯಿತು ಎಂದು ಸಂಶೋಧಕರು ಹೇಳಿದ್ದಾರೆ. ರಾಕೆಟ್‌ಗಳು ವಾತಾವರಣದ ಹೆಚ್ಚಿನ ಪದರಗಳನ್ನು ಮಾಲಿನ್ಯಗೊಳಿಸುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಅಮೆರಿಕದ ನ್ಯಾಷನಲ್ ಓಷಿಯಾನಿಕ್ ಆ್ಯಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್‌ನ ಕೆಮಿಕಲ್ ಸೈನ್ಸ್ ಲ್ಯಾಬೊರೇಟರಿಯ ಹಿರಿಯ ವಿಜ್ಞಾನಿ ಕರೆನ್ ರೋಸೆನ್‌ಲೋಫ್ ಹೇಳುತ್ತಾರೆ. ವಾಯುಮಂಡಲವು ಭೂಮಿಯಿಂದ ಸುಮಾರು 6.2 ಮೈಲುಗಳಷ್ಟು ಎತ್ತರದಲ್ಲಿ ಪ್ರಾರಂಭವಾಗುತ್ತದೆ (10 ಕಿ.ಮೀ.) ಮತ್ತು ಮಧ್ಯಗೋಲವು (ಮೆಸೋಸ್ಫಿಯರ್) 31 ಮೈಲಿಗಳಿಂದ (50 ಕಿ.ಮೀ.) ಮೇಲೆ ಇದೆ. ಇಲ್ಲಿಯವರೆಗೆ ಭೂ ವಾತಾವರಣದ ಮೇಲೆ ರಾಕೆಟ್ ಉಡಾವಣೆಗಳ ಪ್ರಭಾವವು ಅತ್ಯಲ್ಪವಾಗಿತ್ತು. ಇತ್ತೀಚಿನ ದಿನಗಳಲ್ಲಿ ಸಬಾರ್ಬಿಟಲ್ ಪ್ರವಾಸೋದ್ಯಮಕ್ಕೆ ಬೇಡಿಕೆ ತುಂಬಾ ಹೆಚ್ಚಾಗಿದೆ. ಕಂಪೆನಿಗಳು ನೀಡುವ ಆಕರ್ಷಕ ಕೊಡುಗೆಗಳ ಫಲವಾಗಿ ಸಾಕಷ್ಟು ಗ್ರಾಹಕರು ಬಾಹ್ಯಾಕಾಶ ಪ್ರಯಾಣ ಆರಂಭಿಸಲು ಮನಸ್ಸು ಮಾಡುತ್ತಿದ್ದಾರೆ. ಅದಕ್ಕಾಗಿ ಕಂಪೆನಿಗಳು ಅಲ್ಪಾವಧಿಯ ವಿಮಾನಗಳಂತೆ ರಾಕೆಟ್‌ಗಳನ್ನು ಹಾರಿಸಲು ಬಯಸುತ್ತಾರೆ. ಇದರ ಜೊತೆಗೆ ಉಪಗ್ರಹಗಳನ್ನು ಕಕ್ಷೆಗೆ ತಲುಪಿಸುವ ರಾಕೆಟ್ ಉಡಾವಣೆಗಳ ದರವೂ ಬೆಳೆಯುವ ನಿರೀಕ್ಷೆಯಿದೆ. ಇದು ಸರಕು ವಿಮಾನ ಮತ್ತು ಪ್ರಯಾಣಿಕರ ವಿಮಾನದ ನಡುವಿನ ವ್ಯತ್ಯಾಸದಂತಿದೆ. ಹಾಗಾಗಿ ಹೆಚ್ಚು ಹೆಚ್ಚು ಪ್ರಯಾಣಿಕರು ಬಾಹ್ಯಾಕಾಶಕ್ಕೆ ಹಾರಲು ಬಯಸುತ್ತಿದ್ದಾರೆ.
ವಾಯುಮಂಡಲದ ಓರೆನ್ ಪದರ ಮತ್ತು ಹವಾಮಾನಕ್ಕೆ ಹಾನಿಯನ್ನು ಕಡಿಮೆ ಮಾಡಲು ಬಾಹ್ಯಾಕಾಶ ಉಡಾವಣಾ ಉದ್ಯಮದ ಪ್ರಭಾವವನ್ನು ನಿಯಂತ್ರಿಸುವುದು ಹಾಗೂ ಪರಿಸರಕ್ಕೆ ಪೂರಕವಾದ ಪರ್ಯಾಯ ಇಂಧನಗಳ ಬಳಕೆಗೆ ಒತ್ತು ನೀಡಬೇಕು ಎಂದು ಸಂಶೋಧನಾ ವರದಿಯಲ್ಲಿ ಸಲಹೆ ನೀಡಲಾಗಿದೆ. ಇಂತಹ ಸಲಹೆಗಳು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತವೆ ಎಂಬುದನ್ನು ಕಾದುನೋಡಬೇಕಿದೆ.