varthabharthi


ತುಂಬಿ ತಂದ ಗಂಧ

ಬೆಳದಿಂಗಳ ಸುಂದರಿಯ ಸಿನಿಕಥನ

ವಾರ್ತಾ ಭಾರತಿ : 17 Jul, 2022

ಮಧುಬಾಲಾ ಅವರ ಬದುಕು ಕುತೂಹಲ ಹುಟ್ಟಿಸುವ, ಆಸಕ್ತಿಯನ್ನು ಕೆರಳಿಸುವ ಅನೇಕ ಘಟನೆಗಳ ಮೊತ್ತ. ಕಠೋರ ಶಿಸ್ತಿನ ತಂದೆ, ದಾರುಣವಾದ ಬಾಲ್ಯ, ಕಲಿಯಬೇಕಾದ ವಯಸ್ಸಿನಲ್ಲಿ ದುಡಿಯಬೇಕಾದ ಅನಿವಾರ್ಯ, ಬೆಳ್ಳಿ ತೆರೆಯಲ್ಲಿ ಒಲಿದ ಅದೃಷ್ಟ, ಕೈಗೂಡದ ಪ್ರೀತಿ, ವಾಸಿಯಾಗದ ಕಾಯಿಲೆ- ಹೀಗೆ ಹಲವು ಬಗೆಯ ವಿದ್ಯಮಾನ ತುಂಬಿದ ಮಧುಬಾಲಾ ಅವರ ಬದುಕು ಎಂದಿಗೂ ಸೆಳೆಯುವ ಕಥನವೇ!ಭಾರತೀಯ ಚಿತ್ರರಂಗದಲ್ಲಿ ನಾಯಕನಟರ ಪ್ರಾಬಲ್ಯದ ನಡುವೆಯೂ ಹಲವು ನಟಿಯರು ತಮ್ಮ ವಿಶಿಷ್ಟ ಅಭಿನಯ ಮತ್ತು ಸೌಂದರ್ಯದಿಂದ ಚಿತ್ರರಸಿಕರ ಎದೆಯಲ್ಲಿ ಶಾಶ್ವತಸ್ಥಾನ ಪಡೆದಿರುವ ಅನೇಕ ಉದಾಹರಣೆಗಳಿವೆ. ನಟಿಯರ ಜನಪ್ರಿಯತೆ ಮತ್ತು ಅಭಿನಯವೇ ಹಲವು ಚಿತ್ರಗಳ ಅಭೂತಪೂರ್ವ ಯಶಸ್ಸಿಗೆ ಕಾರಣವಾಗಿವೆ. ಅಂತಹ ನಟಿಯರ ಪ್ರಖರ ಪ್ರತಿಭೆಯೆದುರು ನಾಯಕನಟರೂ ಮಂಕಾಗಿರುವ, ನಟಿಸಲು ಹೆದರಿರುವ ದೃಷ್ಟಾಂತಗಳೂ ಇವೆ. ಅನೇಕವೇಳೆ ಅಂತಹ ನಟಿಯರ ಮನಕಲಕುವ ಖಾಸಗಿ ಬದುಕು ಸಹ ಅವರ ಆಕರ್ಷಣೆಗೆ ವಿಚಿತ್ರವಾದ ಪ್ರಭೆ ಒದಗಿಸಿದೆ. ಇದಕ್ಕೆ ನೂರಾರು ನಟಿಯರನ್ನು ಉದಾಹರಿಸಬಹುದು. ಆದರೆ ತನ್ನ ಅನುಪಮ ಸೌಂದರ್ಯ, ಭಾವಾಭಿವ್ಯಕ್ತಿ ಮತ್ತು ಮನಸ್ಸನ್ನು ಆವರಿಸಿಕೊಳ್ಳುವ ವ್ಯಕ್ತಿತ್ವದ ಮೂಲಕ ಭಾರತೀಯ ಚಿತ್ರರಂಗವನ್ನು ಎರಡು ದಶಕ ಆಳಿ ಹಠಾತ್ತನೆ ಮರೆಯಾದರೂ ಚಿತ್ರರಸಿಕರ ಎದೆಯಲ್ಲಿ ಶಾಶ್ವತವಾಗಿ ಉಳಿದ ತಾರೆಯರ ಸಮೂಹದಲ್ಲಿ ಮಧುಬಾಲಾ ಅಗ್ರಗಣ್ಯರು.
ತಮ್ಮ ಇಪ್ಪತ್ತೆರಡು ವರ್ಷದ ವೃತ್ತಿಬದುಕಿನಲ್ಲಿ ಮಧುಬಾಲಾ ನಟಿಸಿದ ಚಿತ್ರಗಳ ಸಂಖ್ಯೆ ಎಪ್ಪತ್ತೆರಡು. ಆಕೆ ಬದುಕಿದ್ದು ಕೇವಲ ಮೂವತ್ತಾರು ವರ್ಷ. ಎರಡು ದಶಕಗಳ ಕಾಲ ಆಕೆ ಭಾರತೀಯ ಚಿತ್ರರಂಗವನ್ನು ಇನ್ನಿಲ್ಲದಂತೆ ಆಳಿದರು. ರಸಿಕರೆದೆಯಲ್ಲಿ ಕಿಚ್ಚು ಹಬ್ಬಿಸಿದರು. ಆದರೆ ಮಾಯದ ಗಾಯವೊಂದು ಮೂಡಿಸುವ ದುರಂತವನ್ನು ಕಂಡ ಈ ಎಲ್ಲ ಕಾರಣಗಳಿಂದ ಮಧುಬಾಲಾ ಎಂದರೆ ಸಂತಸದ ಬುಗ್ಗೆ; ಸೌಂದರ್ಯದ ಹೊನಲು; ಅವ್ಯಕ್ತ ಸಂಕಟ; ನೂರಾರು ಭಾವಗಳ ಸಂಘರ್ಷದ ನೆನಪು.
ಅನೇಕ ನಾಟಕೀಯ ತಿರುವುಗಳಿರುವ ಚಿತ್ರಕಥನದಂತೆ ಮಧುಬಾಲಾ ಅವರ ಬದುಕು. ಅವರ ಚಿತ್ರಪಯಣ ಪ್ರಶಾಂತವಾಗಿ ಹರಿಯುವ ನದಿಯಲ್ಲಿನ ಯಾನವಾದರೆ ವಾಸ್ತವ ಬದುಕು ಸಂಕಟಗಳ ಸುಳಿಗೆ ಸಿಕ್ಕ ಪ್ರಯಾಣ. ವೃತ್ತಿಬದುಕು ಆನಂದದ ತೆರೆಗಳ ಮೇಲೆ ತೇಲಿದ ದೋಣಿಯಾದರೆ, ಖಾಸಗಿ ಬದುಕು ಅಳಲು, ಯಾತನೆ, ನೋವಿನ ಮಡುವಿನಲ್ಲಿ ಸಿಲುಕಿದ ನಾವೆ. ಸಮಾನಾಂತರವಾಗಿ ನಡೆಯುವ ಅವರ ಬದುಕಿನ ಈ ಯಾನಗಳ ಪಥಗಳು ಎಂದೂ ಪರಸ್ಪರ ಸಂಧಿಸದಿರುವುದೇ ಆಕೆಯ ಬದುಕಿನ ವಿಶಿಷ್ಟತೆ.
ಮಧುಬಾಲಾ ಅವರ ಬದುಕು ಕುತೂಹಲ ಹುಟ್ಟಿಸುವ, ಆಸಕ್ತಿಯನ್ನು ಕೆರಳಿಸುವ ಅನೇಕ ಘಟನೆಗಳ ಮೊತ್ತ. ಕಠೋರ ಶಿಸ್ತಿನ ತಂದೆ, ದಾರುಣವಾದ ಬಾಲ್ಯ, ಕಲಿಯಬೇಕಾದ ವಯಸ್ಸಿನಲ್ಲಿ ದುಡಿಯಬೇಕಾದ ಅನಿವಾರ್ಯ, ಬೆಳ್ಳಿ ತೆರೆಯಲ್ಲಿ ಒಲಿದ ಅದೃಷ್ಟ, ಕೈಗೂಡದ ಪ್ರೀತಿ, ವಾಸಿಯಾಗದ ಕಾಯಿಲೆ- ಹೀಗೆ ಹಲವು ಬಗೆಯ ವಿದ್ಯಮಾನ ತುಂಬಿದ ಮಧುಬಾಲಾ ಅವರ ಬದುಕು ಎಂದಿಗೂ ಸೆಳೆಯುವ ಕಥನವೇ!

 ಇಂತಹ ವಿಶಿಷ್ಟ ನಟಿಯ ಬದುಕನ್ನು ರಮೇಶ ಅರೋಲಿ ಅವರು ‘ಮಧುಬಾಲಾ, ಬೆಳ್ಳಿತೆರೆಗೆ ಕಾಲ ಬರೆದ ಕಾಗದ’ ಎಂಬ ಕೃತಿಯ ಮೂಲಕ ಕನ್ನಡಕ್ಕೆ ಕಟ್ಟಿಕೊಟ್ಟಿದ್ದಾರೆ. ಅಭಿಜಾತ ಕಲಾವಿದೆ ಮಧುಬಾಲಾ ಅವರ ಬಗ್ಗೆ ಕನ್ನಡದಲ್ಲಿ ಈವರೆಗೂ ಬಂದಿರುವ ಕೃತಿಗಳು ಕಮ್ಮಿ. ನನಗೆ ತಿಳಿದಿರುವಂತೆ ಚಂದ್ರಶೇಖರ ಆಲೂರು ಅವರ ಬರೆದ ಮಧುಬಾಲಾ ಮತ್ತು ಮೀನಾಕುಮಾರಿ-ದುರಂತ ನಟಿಯರಿಬ್ಬರ ಬದುಕಿನ ಕೆಲವು ಪುಟಗಳು ಕೃತಿಯನ್ನು ಹೊರತುಪಡಿಸಿದರೆ ಮತ್ತೊಂದು ನನ್ನ ಗಮನಕ್ಕೆ ಬಂದ ಕೃತಿಯ ಹೆಸರನ್ನೇ ಹೇಳಲು ಅಸಹ್ಯ. ತಮ್ಮ ಸಿನೆಮಾಪ್ರಿಯ, ಕಲಾವಿದ ಅಜ್ಜ ಪೆದ್ದಿಂಟಿ ಪೆದ್ದ ಹನುಮಂತಪ್ಪಹೇಳುತ್ತಿದ್ದ ತನ್ನ ಕಾಲದ ಸಿನೆಮಾಗಳು ಮತ್ತು ಕಲಾವಿದರ ಬದುಕಿನ ಕಥೆಗಳಲ್ಲಿ ಮಧುಬಾಲಾ ಅವರ ಬಿಂಬವನ್ನು ಎದೆಗಿಳಿಸಿಕೊಂಡ ಲೇಖಕ ಅರೋಲಿ ಅವರು ಕಾಲಕಳೆದಂತೆ ಆ ಬಿಂಬದ ಸುತ್ತ ಆಕೆಯ ಬದುಕನ್ನು ಅನ್ವೇಷಿಸಿರುವ ವೃತ್ತಾಂತ ಇದಾಗಿದೆ. ನಟಿಯ ಬಗೆಗಿನ ಆರಾಧನಾ ಭಾವದ ಲೇಖಕ ಇತಿಹಾಸಕಾರನೊಬ್ಬನಂತೆ ಸಮಚಿತ್ತದ ನಿರೂಪಣೆ ಮಾಡಿರುವುದು ಈ ಕೃತಿಯ ಹೆಗ್ಗಳಿಕೆ. ತನ್ನ ಎದೆಗಿಳಿದ ನಟಿಯನ್ನು ಉದ್ದಕ್ಕೂ ಕಾಪಾಡಿಕೊಂಡು ಬಂದ ಬರಹಗಾರರು ಭಾವುಕತೆಯ ಮಡುವಿಗೆ ಬೀಳದೆ ಆಕೆಯ ಬದುಕಿನ ವಿವರಗಳನ್ನು ಅನೇಕ ಮೂಲಗಳಿಂದ ಸಂಗ್ರಹಿಸಿದ್ದಾರೆ. ನಟಿಯ ಬದುಕನ್ನು ಸಮಗ್ರವಾಗಿ ಕಟ್ಟಿಕೊಡಬೇಕೆಂಬ ಹಂಬಲ ಈ ಕೃತಿಯ ಉದ್ದಕ್ಕೂ ಅಂತರ್ಜಲವಾಗಿ ಪ್ರವಹಿಸಿರುವುದು ಗೋಚರಿಸುತ್ತದೆ.
ಮಧುಬಾಲಾ ಎಂಬ ಪವಾಡಸದೃಶ ನಟಿಯ ಬದುಕಿನ ಸಾಕಷ್ಟು ವಿವರಗಳನ್ನು ಸಂಗ್ರಹಿಸಿರುವ ಲೇಖಕರು ಆಕೆಯ ಬಡತನದ ಬಾಲ್ಯ, ಕಠೋರ ಶಿಸ್ತಿನ ಅಪ್ಪನ ನಿಯಂತ್ರಣ, ವೃತ್ತಿ ಬದುಕಿನ ಪ್ರಗತಿ, ಬದುಕಿನ ನಿರ್ಧಾರಗಳು, ಕ್ರೂರ ವಿಧಿಗೆ ಬಲಿಯಾಗುವ ದುರಂತವನ್ನು ಅನುಕ್ರಮಣಿಕೆಯಲ್ಲಿ ಕಟ್ಟಿದ್ದಾರೆ. ಸಮಾನಾಂತರವಾಗಿ ಆಕೆಯ ವೃತ್ತಿಬದುಕಿನ ಹಲವು ಮೈಲುಗಲ್ಲುಗಳನ್ನು ಗುರುತಿಸಿದ್ದಾರೆ.
ಆಟವಾಡಬೇಕಾದ ವಯಸ್ಸಿನಲ್ಲಿ ಊಟಕ್ಕೆ ಪರದಾಡುವ ಮುಮ್ತಾಝ್ ಜಿಹನ್ ಬೇಗಂ ದೆಹಲ್ವಿ (ತೆರೆಯ ಹೆಸರು ಮಧುಬಾಲಾ) ಎಂಬ ಪುಟ್ಟ ಹುಡುಗಿಯು ಎಳೆಯ ವಯಸ್ಸಿನಲ್ಲಿಯೇ ದುಡಿಯಬೇಕಾದ ಅನಿವಾರ್ಯವನ್ನು ಲೇಖಕರು ವಿವರಿಸಿದ್ದಾರೆ. ಅಖಂಡ ಭಾರತದ ಪೇಶಾವರ ಮೂಲದ ಅತಾವುಲ್ಲಾ ಖಾನ್, ಅತಿ ಶಿಸ್ತಿನ ಮನುಷ್ಯ. ಗಂಡಾಳ್ವಿಕೆಯ ಪ್ರತಿನಿಧಿ. ತನ್ನ ಬಿಗಿ ನಿಲುವಿನಿಂದಲೇ ಇದ್ದ ಕೆಲಸವನ್ನು ಕಳೆದುಕೊಂಡು ದಿಲ್ಲಿಗೆ ಬಂದು ಪರದಾಡುವ ಖಾನ್ ಅವರದು ಆರು ಮಕ್ಕಳ ದೊಡ್ಡ ಸಂಸಾರ. ದಿಲ್ಲಿಯಿಂದ ಮುಂಬೈಗೆ ಬಂದು ಮತ್ತೆ ದಿಲ್ಲಿಗೆ ಮರಳಿ, ನಂತರ ಮಗಳ ಭವಿಷ್ಯ ಕಟ್ಟಲು ಪುನಃ ಮುಂಬೈಗೆ ಬರುವ ಯಾತ್ರೆ ಆತನ ಬದುಕಿನ ಹೊಯ್ದೆಟವನ್ನು ಹೇಳುತ್ತದೆ. ಕೊನೆಗೂ ಮಧುಬಾಲಾ ಬಾಲನಟಿಯಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆದ ನಂತರ ಹೊಯ್ದೆಡುತ್ತಿದ್ದ ಸಂಸಾರದ ಹಡಗು ತಹಬಂದಿಗೆ ಬರುತ್ತದೆ. ಇಡೀ ಸಂಸಾರಕ್ಕೆ ಮಗಳ ವೃತ್ತಿಯ ಗಳಿಕೆಯೇ ಆಧಾರ. ಮಧ್ಯಮವರ್ಗದ ಸಂಪ್ರದಾಯ ಕುಟುಂಬದ ಮನೆಯ ಹೆಣ್ಣು ಮಕ್ಕಳು ಸಿನೆಮಾ ರಂಗಕ್ಕೆ ಬರಲು ಹಿಂಜರಿಯುತ್ತಿದ್ದ ಸಮಯದಲ್ಲಿ ಕೇವಲ ಹೊಟ್ಟೆಪಾಡಿಗಾಗಿ ಕಲಾವೃತ್ತಿಯನ್ನು ಆಯ್ದುಕೊಂಡ ವಿದ್ಯೆಯಿಲ್ಲದ ಬಾಲಕಿ, ತನ್ನಲ್ಲಿದ್ದ ಅಪಾರ ಆಸಕ್ತಿ, ಉತ್ಸಾಹ ಮತ್ತು ಕಲಿಯುವ ಕುತೂಹಲದಿಂದ ಚಲನಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾಳೆ. ಕೊನೆಗೆ ಉಜ್ವಲ ಪ್ರಕಾಶದ ತಾರೆಯಾಗಿ ಬೆಳಗುವ ವೃತ್ತಾಂತವನ್ನು ಲೇಖಕರು ನಿರೂಪಿಸಿದ್ದಾರೆ.

ಎರಡನೇ ಮಹಾಯುದ್ಧ ಮತ್ತು ದೇಶದ ಮಹಾವಿಭಜನೆಯ ನಂತರ ದೇಶ ಮತ್ತು ಮನಸ್ಸು ಛಿದ್ರಗೊಂಡ ಸಮಯದಲ್ಲಿ ಅನೇಕ ಧರ್ಮ ಸಮುದಾಯಗಳಿಗೆ ಸೇರಿದ ಕಲಾವಿದರು, ನಿರ್ದೇಶಕರು, ಸಾಹಿತಿಗಳು, ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳಲು ಮನರಂಜನೆಯ ಮಾಧ್ಯಮವಾದ ಸಿನೆಮಾ ಮೂಲಕ ಒದಗಿಬಂದ ರೀತಿಯನ್ನು ಈ ಕೃತಿ ಬಿಡಿಸಿಡುತ್ತದೆ. ಆ ಮೂಲಕ ಮಧುಬಾಲಾ ಅವರ ಬದುಕನ್ನು ಹೇಳುವ ನೆಪದಲ್ಲಿ ಒಡೆದ ಮನಸ್ಸುಗಳನ್ನು ಕೂಡಿಸಿ ದೇಶ ಕಟ್ಟಿದ ಬಗೆಯನ್ನು ಸಹ ಈ ಕೃತಿ ವಿವೇಚಿಸಿದೆ. ಮುಸ್ಲಿಮ್ ಸಮುದಾಯದ ಕಲಾವಿದೆಯು ಜಾತಿ, ಧರ್ಮಗಳನ್ನು ಮೀರಿ ಭಾರತೀಯರೆದೆಯಲ್ಲಿ ಸಂತೋಷದ ಹೊನಲನ್ನು ಹರಿಸಿದ ಕಾಣಿಕೆಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ.

ಕೃತಿಯ ಮತ್ತೊಂದು ಹೆಗ್ಗಳಿಕೆಯೆಂದರೆ, ಮಧುಬಾಲಾ ಆ ಕಾಲದ ಪ್ರಸಿದ್ಧ ನಟರೊಡನೆ ನಟಿಸಿದ ಆಯ್ದ ಚಿತ್ರಗಳ ವಿಶ್ಲೇಷಣೆ. ಹದಿನಾಲ್ಕನೇ ವಯಸ್ಸಿನಲ್ಲಿ ರಾಜ್‌ಕಪೂರ್ ಜೊತೆ ‘ನೀಲ್‌ಕಮಲ್’ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿ ಯಶಸ್ಸು ಕಂಡ ಮಧುಬಾಲಾ ಆ ಕಾಲದ ಜನಪ್ರಿಯ ನಟರೆಲ್ಲರ ಚಿತ್ರದಲ್ಲಿ ನಟಿಸಿದ ಬಹುಬೇಡಿಕೆಯ ನಟಿ. ರಾಜ್‌ಕಪೂರ್, ಅಶೋಕ್‌ಕುಮಾರ್, ದೇವಾನಂದ್, ದಿಲೀಪ್‌ಕುಮಾರ್, ಪ್ರೇಂನಾಥ್, ಶಮ್ಮಿಕಪೂರ್, ಭರತ್‌ಭೂಷಣ್, ಪ್ರದೀಪ್‌ಕುಮಾರ್, ಗುರುದತ್ ಮೊದಲಾದ ನಾಯಕ ನಟರೊಡನೆ ನಟಿಸಿಯೂ ಪ್ರತೀ ಚಿತ್ರದಲ್ಲಿ ತನ್ನ ಛಾಪನ್ನು ಮೂಡಿಸಿದ ರೀತಿ ಇಲ್ಲಿ ವಿಶ್ಲೇಷಣೆಗೊಳಗಾಗಿದೆ. ಜಾನಪದ, ಅರೆ ಐತಿಹಾಸಿಕ, ಸಾಮಾಜಿಕ ವಸ್ತುಗಳ ಚಿತ್ರಗಳಲ್ಲಿ ಹಲವು ಬಗೆಯ ಪಾತ್ರಗಳನ್ನು ವಹಿಸಿ ಮಧುಬಾಲಾ ಕಂಡ ಯಶಸ್ಸು ಅದ್ಭುತವೇ ಸರಿ! ಆದರೆ ಈ ಭಾಗ ಇನ್ನಷ್ಟು ಸಮಗ್ರವಾಗಿರಬೇಕಿತ್ತು ಎನಿಸುತ್ತದೆ.

ಮಧುಬಾಲಾ ಕಥನ ಎಂದಮೇಲೆ ‘ಮೊಘಲ್-ಎ-ಆಝಂ’ ಮತ್ತು ದಿಲೀಪ್‌ಕುಮಾರ್ ಅವರ ಪ್ರಸ್ತಾಪವಿಲ್ಲದಿದ್ದರೆ ಅದು ಅಪೂರ್ಣ. ಈ ವಿಷಯಗಳನ್ನು ಅರೋಲಿ ಅವರು ವಿಸ್ತಾರವಾಗಿ ಪ್ರಸ್ತಾಪಿಸಿದ್ದಾರೆ. ತಮ್ಮ ಅಭಿನಯದಿಂದ ತೆರೆಯ ಮೇಲೆ ಪ್ರಣಯಕಾವ್ಯವನ್ನು ಅರಳಿಸಿದ ಮಧುಬಾಲಾ-ದಿಲೀಪ್‌ಕುಮಾರ್ ಅವರು ದಂಪತಿಯಾಗುವ ಹೊತ್ತಿನಲ್ಲಿ ಪ್ರಿಯಕರನ ತಾತ್ವಿಕ ಬದ್ಧತೆ ಮತ್ತು ತಂದೆಯ ಜಿದ್ದಿನ ಮನಸ್ಸಿನ ಸಂಗ್ರಾಮದಲ್ಲಿ ತಂದೆಯ ಅಂಕೆಯಲ್ಲಿ ಬೆಳೆದಿದ್ದ ಮಧುಬಾಲಾ ಪ್ರಿಯಕರನನ್ನು ತ್ಯಾಗ ಮಾಡಬೇಕಾಯಿತು. ‘ಪ್ಯಾರ್ ಕಿಯಾತೋ ಢರ್ನಾ ಕ್ಯಾ?’ ಎಂದು ಪ್ರಭುತ್ವದ ಪ್ರತಿನಿಧಿಯನ್ನು ತೆರೆಯ ಮೇಲೆ ಪ್ರಶ್ನಿಸುವಷ್ಟು ಧೈರ್ಯ, ಸಂಕಲ್ಪ ನಿಜ ಬದುಕಿನಲ್ಲಿ ಇರುವುದು ಅಪರೂಪ ಎಂಬ ನಂಬಿಕೆ ಮಧುಬಾಲಾ ಅವರ ಬದುಕಲ್ಲಿ ನಿಜವಾಯಿತು.

ಪ್ರೀತಿಯ ತ್ಯಾಗದ ನಂತರ ಛಿದ್ರಗೊಂಡ ಗೂಡನ್ನು ಕಂಡು ಅಳುವ ಹಕ್ಕಿಯಂತೆ ತನ್ನೆಲ್ಲಾ ನೋವು ನುಂಗಿದ ಆಕೆ ತನ್ನ ಸಂಕಟಗಳನ್ನು ನಗೆಯಾಗಿ ಪರಿವರ್ತಿಸಬಲ್ಲ ನಟ-ಗಾಯಕ ಕಿಶೋರ್ ಕುಮಾರ್‌ನ ಎರಡನೇ ಸಂಬಂಧವನ್ನು ಒಪ್ಪಿಕೊಂಡಳು. ಮದುವೆಯಾದ ನಂತರದಲ್ಲಿ ಹೃದಯದ ಕಾಯಿಲೆ ಉಲ್ಬಣಿಸಿದಾಗ ಗಂಡನ ಆರ್ಥಿಕ ಬೆಂಬಲ ದೊರೆಯಿತೇ ಹೊರತು ಎದೆಯಾಳದ ನೋವಿಗೆ ಆಸರೆ ಮತ್ತು ಸಾಂತ್ವನ ಬಯಸಿದ ಮಧುಬಾಲಾ ಅವರಿಗೆ ಸಿಕ್ಕಿದ್ದು ಅದೇ ನಿರಾಶೆ, ಯಾತನೆ, ನೋವು. ಅಷ್ಟು ಸಂಕಟಗಳ ನಡುವೆಯೂ ತಾನು ಬದುಕಬೇಕೆಂಬ ಹಂಬಲ ತೀವ್ರವಾಗಿ ದೇವರನ್ನು ಪ್ರಾರ್ಥಿಸುವ ಆಕೆಯ ಆರ್ತನಾದ ಓದುಗನ ಸಂಕಟವನ್ನು ಹೆಚ್ಚಿಸುತ್ತದೆ.

ಎರಡು ದಶಕಗಳ ಕಾಲ ಬೆಳ್ಳಿ ತೆರೆಯನ್ನು ಆಳಿದ ಮಧುಬಾಲಾ ಅಪ್ಪಟ ಕಲಾವಿದೆ, ವೃತ್ತಿ ಬದುಕಿಗೆ ತ್ರಿಕರಣ ಶುದ್ಧಿಯಿಂದ ಅರ್ಪಿಸಿಕೊಂಡ ಪ್ರತಿಭಾವಂತೆ ಎಂಬ ಅಂಶವನ್ನು ಲೇಖಕರು ಅನೇಕ ದೃಷ್ಟಾಂತಗಳ ಮೂಲಕ ನಿರೂಪಿಸಿದ್ದಾರೆ. ಶಿಸ್ತು, ಸಮಯಪ್ರಜ್ಞೆ ಮತ್ತು ಹೊಸತನ್ನು ಕಲಿಯುವ ಕುತೂಹಲ ಆಕೆಯಲ್ಲಿ ಜಾಗೃತವಾಗಿದ್ದುದನ್ನು ಈ ದೃಷ್ಟಾಂತಗಳು ನಿರೂಪಿಸುತ್ತವೆ. ಮಹಾಮಳೆಗೆ ಮುಂಬೈಯ ಸ್ಟುಡಿಯೋ ಜಲಾವೃತವಾಗಿದ್ದರೂ, ಚಿತ್ರೀಕರಣಕ್ಕೆ ಸರಿಯಾದ ಸಮಯಕ್ಕೆ ಹಾಜರಾಗುವ, ‘ಮೊಘಲ್-ಎ-ಆಝಂ’ ಚಿತ್ರದ ಪ್ರಣಯ ಸನ್ನಿವೇಶಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡ ಭಾಗಗಳು ಮಧುಬಾಲಾ ಅವರ ವೃತ್ತಿಪರತೆಯ ಪುರಾವೆಗಳು. ಎದುರು ಸಿಕ್ಕರೂ ನಗದ, ಪರಸ್ಪರ ಮಾತಿಲ್ಲದ ಮಾಜಿ ಪ್ರೇಮಿಗಳಾದ ದಿಲೀಪ್‌ಕುಮಾರ್-ಮಧುಬಾಲಾ ‘ಮೊಘಲ್-ಎ-ಆಝಂ’ನಲ್ಲಿ ಚಿತ್ರಜಗತ್ತಿನಲ್ಲಿ ಅಜರಾಮರವಾದ ಪ್ರಣಯ ದೃಶ್ಯಗಳಲ್ಲಿ ಪಾಲ್ಗೊಂಡು ತೆರೆಗೆ ವಿರಹದ ಉರಿಯನ್ನು ಹಚ್ಚಿದ್ದು ಎಂದೆಂದಿಗೂ ವಿಸ್ಮಯವೇ! ಜೊತೆಗೆ ಮಧುಬಾಲಾ ಅವರ ಚಿತ್ರಗಳಲ್ಲಿ ಆಕೆ ಪಾಲ್ಗೊಂಡ ಅಮರವಾದ ಮಧುರಗೀತೆಗಳ ಬಗ್ಗೆ ಇರುವ ವಿವರಗಳು ಕೃತಿಯ ಇನ್ನೊಂದು ಬೋನಸ್.

ತಾನು ಬದುಕಿದಷ್ಟೂ ಅವಧಿ ಮಾತ್ರವಲ್ಲದೆ ಅದರಾಚೆಗೂ ಚಿತ್ರರಸಿಕರ ಭಾವಭಿತ್ತಿಯಲ್ಲಿ ಜೀವಂತ ಚಿತ್ರವಾಗಿ ಉಳಿದಿರುವ ಮಧುಬಾಲಾ ಯಶಸ್ಸಿನ ಗುಟ್ಟೇನು? ತರ್ಕಕ್ಕೆ ಸಿಗದ ಪ್ರಶ್ನೆಯಿದು. ಆಕೆಯ ಮಾಸದ ಸೌಂದರ್ಯ ಮತ್ತು ಅಭಿನಯ ವೈವಿಧ್ಯದ ವಿದ್ಯುದಾಲಿಂಗನವು ತೆರೆಯ ಮೇಲೆ ಮೂಡಿಸಿದ ಮಾಂತ್ರಿಕತೆಯಲ್ಲಿ ಆಕೆಯ ಯಶಸ್ಸಿರಬಹುದು. ಒಂದು ವಿಚಾರದಲ್ಲಿ ಆಕೆ ನಿಜಕ್ಕೂ ಅದೃಷ್ಟವಂತೆ. ನಿರಾಭರಣ ಸುಂದರಿಯಾದ ಆಕೆಯ ಮುಖದಲ್ಲಿ ಮಾಸದ ನಗು, ನೂರು ಭಾವಗಳನ್ನು ಅಭಿವ್ಯಕ್ತಿಸಬಲ್ಲ ಕಣ್ಣುಗಳು ಆಕೆಯ ಆಸ್ತಿ. ತೆರೆಯ ಮೇಲೆ ಅರಳಿದ ತುಟಿಗಳು ಹೊಮ್ಮಿಸುವ ನಗೆಗೆ ಚಿತ್ರಮಂದಿರದಲ್ಲಿ ಸಾಂಕ್ರಾಮಿಕಗೊಳಿಸುವ ಶಕ್ತಿಯಿತ್ತು. ಎಲ್ಲ ಬಗೆಯ ಪಾತ್ರಗಳ ಸ್ವಭಾವವನ್ನು ತನ್ನ ಭಾವ ತುಂಬಿದ ಮುಖ ಮತ್ತು ಆಂಗಿಕ ಚಲನೆಯಿಂದಲೇ ಮೂರ್ತಗೊಳಿಸುವ ಪ್ರತಿಭೆ ಆಕೆಗಿತ್ತು. ‘ಹೌರಾ ಬ್ರಿಡ್ಜ್’ ಚಿತ್ರದಲ್ಲಿ ಐಟಂ ಸಾಂಗ್‌ನಂತೆ ಇರುವ ‘‘ಆಯಿಯೇ ಮೆಹರ್ಬಾನ್’’ ಹಾಡಿನಲ್ಲಿ ಮೈತುಂಬ ಬಟ್ಟೆ ಧರಿಸಿ ಮುಖ, ಕಣ್ಣುಗಳಿಂದಲೇ ಮಾದಕತೆಯನ್ನು ಸುರಿಸಿದ ಆಕೆಯ ಸೌಂದರ್ಯಕ್ಕೆ ಮರುಳಾಗದವರು ಇಲ್ಲವೇ ಇಲ್ಲ. ‘ಹಣ್ಣೆಲೆ ಚಿಗುರಿದಾಗ’ ಚಿತ್ರದ ‘‘ಹಾಲಲಿ ಮಿಂದವಳೋ, ದಂತದ ಮೈಯವಳೋ, ಹುಣ್ಣಿಮೆ ಹೆಣ್ಣಾದಳೋ’’ ಹಾಡನ್ನು ಬಹುಶಃ ಆರ್.ಎನ್. ಜಯಗೋಪಾಲ್ ಅವರು ಮಧುಬಾಲಾ ಅವರಿಗಾಗಿಯೇ ಕಟ್ಟಿದ ಹಾಡಿರಬೇಕೆಂದು ನನಗೆ ಗುಮಾನಿ! ಆದರೂ ಸೌಂದರ್ಯದ ಬಗೆಗಿನ ಎಲ್ಲ ಗುಣವಾಚಕಗಳೂ ವರ್ಣಿಸಲಾಗದೆ ತಲೆತಗ್ಗಿಸುವಂತಹ ಚೆಲುವಿನ ಖನಿ ಆಕೆ! ಅದೇ ಆಕೆಯ ಯಶಸ್ಸಿನ ಗುಟ್ಟಿರಬಹುದೇನೋ!

ಪ್ರೇಮಿಗಳ ದಿನದಂದೇ 1933ರಲ್ಲಿ ಜನಿಸಿದ ಮಧುಬಾಲಾ ಕೊನೆಗೂ ಪ್ರೀತಿಯಿಂದ ವಂಚಿತವಾದ ಒಂದು ಸುಂದರಸ್ವಪ್ನ. ಅರೆ ಹೊಟ್ಟೆಯಲ್ಲಿ ಕಾಲಕಳೆದು, ಜೀವನಕ್ಕೆ ಪರದಾಡುತ್ತಿದ್ದ ಕುಟುಂಬಕ್ಕೆ ಆಸರೆಯಾಗಿ, ಬೆಳ್ಳಿ ತೆರೆಗೆ ತನ್ನ ಸೌಂದರ್ಯದಿಂದ ಕೊಳ್ಳಿ ಇಟ್ಟು, ರಸಿಕರೆದೆಯಲ್ಲಿ ನೂರಾರು ಭಾವಗಳನ್ನು ಉದ್ದೀಪಿಸಿ, ವಿಧಿಯ ಕ್ರೂರ ಆಟಕ್ಕೆ ಬಲಿಯಾದ ಮಧುಬಾಲಾ ಅವರ ಜೀವನ ಚರಿತ್ರೆ ಕನ್ನಡಕ್ಕೆ ಅಗತ್ಯವಾಗಿತ್ತು. ಅದನ್ನು ಉತ್ಕಟವಾದ ಪ್ರೀತಿಯಿಂದ ಕಟ್ಟಿರುವ ರಮೇಶ ಅರೋಲಿ ಅವರಿಗೆ ಅಭಿನಂದನೆಗಳು. (ಸಂಗಾತ ಪುಸ್ತಕ ಪ್ರಕಟಿಸಿರುವ, ರಮೇಶ ಅರೋಲಿ ಅವರ ‘ಮಧುಬಾಲಾ, ಬೆಳ್ಳಿತೆರೆಗೆ ಕಾಲ ಬರೆದ ಕಾಗದ’ ಕೃತಿಗೆ ಬರೆದ ಮುನ್ನುಡಿ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)