ಪರಿಶಿಷ್ಟ ಜಾತಿ ವಿದ್ಯಾರ್ಥಿ ನಿಲಯಕ್ಕೆ ಮೀಸಲಾದ ಜಮೀನಿನ ಮೇಲೆ ಕಣ್ಣು
ಬಿಜೆಪಿ ತಾಲೂಕು ಕಚೇರಿ ಕಟ್ಟಡ ನಿರ್ಮಾಣ
ಬೆಂಗಳೂರು: ಸಾವಿರಾರು ಕೋಟಿ ರೂ. ದೇಣಿಗೆ ಪಡೆಯುತ್ತಿರುವ ಭಾರತೀಯ ಜನತಾ ಪಾರ್ಟಿಯು ತಾಲೂಕು ಪ್ರದೇಶಗಳಲ್ಲಿ ಸ್ವಂತ ಕಚೇರಿಗಾಗಿ ಕಟ್ಟಡ ನಿರ್ಮಾಣ ಮಾಡಲು ಪರಿಶಿಷ್ಟ ಜಾತಿಯ ಸರಕಾರಿ ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿರುವ ನಿವೇಶನ, ಜಮೀನುಗಳ ಮೇಲೆ ಕಣ್ಣು ಹಾಕಿದೆ.
ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ್ದ ನಿವೇಶನಗಳನ್ನು ಪಕ್ಷದ ಸ್ವಂತ ಕಚೇರಿಗಾಗಿ ಮಂಜೂರು ಮಾಡಿಸಿಕೊಳ್ಳಲು ಕಂದಾಯ ಇಲಾಖೆಗೆ ವಿವಿಧ ಜಿಲ್ಲೆಗಳಿಂದ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.
ಕಾನೂನು ಇಲಾಖೆಯ ಅಸಮ್ಮತಿ ನಡುವೆಯೂ ರಾಷ್ಟ್ರೋತ್ಥಾನ ಪರಿಷತ್ಗೆ ಗೋಮಾಳ ಮಂಜೂರು ಮಾಡಿರುವ ಬೆನ್ನಲ್ಲೇ ಹಲವು ಸಚಿವರು ತಾಲೂಕು ಪ್ರದೇಶಗಳಲ್ಲಿ ಪಕ್ಷಕ್ಕೆ ಸ್ವಂತ ಕಚೇರಿಗಾಗಿ ನಾಗರಿಕ ನಿವೇಶನ, ಇತರ ಇಲಾಖೆಗಳು ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿರುವ, ಮೀಸಲಿರಿಸಿರುವ ನಿವೇಶನಗಳನ್ನು ಮಂಜೂರು ಮಾಡಲು ಸಲ್ಲಿಸಿರುವ ಅರ್ಜಿಗಳತ್ತ ಕಂದಾಯ ಇಲಾಖೆಯು ಅತ್ಯುತ್ಸಾಹ ವಹಿಸಿರುವುದು ಮುನ್ನೆಲೆಗೆ ಬಂದಿದೆ.
ಹಾಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಪ್ರತಿನಿಧಿಸಿರುವ ಮುಧೋಳ ನಗರದಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿ ಕಟ್ಟಡ ನಿರ್ಮಾಣ ಸಂಬಂಧ ನಿವೇಶನ ಮಂಜೂರು ಮಾಡಬೇಕು ಎಂಬ ಅರ್ಜಿ ಸಲ್ಲಿಕೆಯಾಗಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಯು 2022ರ ಜೂನ್ 9ರಂದು ಬಾಗಲಕೋಟೆ ಜಿಲ್ಲಾಧಿಕಾರಿಗೆ ಪತ್ರ ಬರೆದು ವರದಿ ಸಲ್ಲಿಸಲು ಸೂಚಿಸಿದ್ದಾರೆ. ಈ ಪತ್ರದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
ಪರಿಶಿಷ್ಟ ಜಾತಿಯ ಸರಕಾರಿ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಸಂಬಂಧ ಕಾಯ್ದಿರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ವರದಿ ನೀಡಿದ್ದರೂ ಇದೇ ಜಾಗದಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿ ಕಟ್ಟಡ ನಿರ್ಮಾಣ ಮಾಡಲು ಖಾಲಿ ನಿವೇಶನ ಮಂಜೂರು ಮಾಡಲು ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿರುವುದು ಗೊತ್ತಾಗಿದೆ. 2019-20ನೇ ಸಾಲಿನಲ್ಲಿ ಬಿಜೆಪಿ ರಾಷ್ಟ್ರೀಯ ಘಟಕವು 4,848 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದನ್ನು ಪ್ರಕಟಿಸಿತ್ತು. ಅದೇ ರೀತಿ 2020-21ರಲ್ಲಿ ಬಿಜೆಪಿಯ ಕರ್ನಾಟಕ ಘಟಕವು 22.44 ಕೋಟಿ ರೂ.ನಷ್ಟು ದೇಣಿಗೆ ಸಂಗ್ರಹಿಸಿತ್ತು ಎಂದು ಎಡಿಆರ್ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.
ಮುಧೋಳ ನಗರದ ಮಂಟೂರು ರಸ್ತೆಯಲ್ಲಿ ಬಿಜೆಪಿ ಕಚೇರಿ ಕಟ್ಟಡಕ್ಕಾಗಿ ಗುರುತಿಸಿರುವ ಖಾಲಿ ನಿವೇಶನವು(ಆರ್ಎಸ್ ನಂ212 ಮತ್ತು ಸಿಟಿಎಸ್ ನಂ2588, 134.00 ಚ.ಮೀ.) ಸಮಾಜ ಇಲಾಖೆಯ ಹೆಸರಿನಲ್ಲಿದೆ. ಅಲ್ಲದೆ ಪರಿಶಿಷ್ಟ ಜಾತಿಯ ಸರಕಾರಿ ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣ ಸಂಬಂಧ ಕಾಯ್ದಿರಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಈಗಾಗಲೇ ಕಂದಾಯ ಇಲಾಖೆಯ ಪತ್ರ ಮುಖೇನ ಗಮನಕ್ಕೆ ತಂದಿರುವುದು ಸರಕಾರದ ಪ್ರಧಾನ ಕಾರ್ಯದರ್ಶಿ ಪತ್ರದಿಂದ ತಿಳಿದು ಬಂದಿದೆ.