varthabharthi


Social Media

ಅಭಿಮಾನಿಗಳ ಅಭಿಮಾನಕ್ಕೆ ಮಣಿದ ಟ್ವಿಟರ್: ಪುನೀತ್ ಟ್ವಿಟರ್ ಖಾತೆಗೆ ಮತ್ತೆ ಬ್ಲೂ ಟಿಕ್

ವಾರ್ತಾ ಭಾರತಿ : 18 Jul, 2022

ಬೆಂಗಳೂರು, ಜು.18: ಖ್ಯಾತ ಚಲನಚಿತ್ರ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಟ್ವಿಟರ್‌ ಖಾತೆಗೆ ಟ್ವಿಟರ್‌ ಸಂಸ್ಥೆ ಮತ್ತೆ ಬ್ಲೂ ಟಿಕ್‌ ನೀಡಿದೆ.

ಪುನೀತ್ ನಿಧನರಾದ ಬಳಿಕ ಅವರ ಟ್ವಿಟರ್ ಖಾತೆಯಲ್ಲಿ ಚಟುವಟಿಕೆ ಇಲ್ಲದ್ದರಿಂದ ಇತ್ತೀಚೆಗೆ ಟ್ವಿಟರ್‌ ಖಾತೆಯಿಂದ ಬ್ಲೂ ಟಿಕ್‌ ಅನ್ನು ತೆಗೆದು ಹಾಕಲಾಗಿತ್ತು. ಇದು ಪುನೀತ್‌ ಅಭಿಮಾನಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಅವರ ಅಭಿಮಾನಿಗಳು #ReverifyPuneethRajkumarTwitter ಹ್ಯಾಶ್ ಟ್ಯಾಗ್ ಮೂಲಕ ಅಭಿಯಾನವನ್ನೇ ಆರಂಭಿಸಿದ್ದರು. ಇದನ್ನು ಬೆಂಬಲಿಸಿ ಕನ್ನಡ ಚಿತ್ರರಂಗದ ಹಲವು ಕಲಾವಿದರು ಟ್ವೀಟ್ ಮಾಡಿದ್ದರು. ಇದೀಗ ಅಭಿಮಾನಿಗಳ ಭಾವನೆಗೆ ಗೌರವ ಕೊಟ್ಟ ಟ್ವಿಟರ್ ಸಂಸ್ಥೆ ಅಪ್ಪು ಟ್ವಿಟರ್​ ಖಾತೆಗೆ ಬ್ಲೂ ಟಿಕ್​ ಮರಳಿ ನೀಡಿದೆ.

ಸೆಲೆಬ್ರಿಟಿಗಳ ಅಧಿಕೃತ ಟ್ವಿಟರ್‌ ಖಾತೆಗೆ, ಟ್ವಿಟರ್‌ ಸಂಸ್ಥೆಯು ಬ್ಲೂಟಿಕ್‌ ನೀಡುತ್ತದೆ. ಇದರಿಂದ ನಕಲಿ ಮತ್ತು ಅಸಲಿ ಖಾತೆಗಳನ್ನು ಗುರುತಿಸಲು ಸಹಾಯವಾಗುತ್ತದೆ. 2021ರ ಅಕ್ಟೋಬರ್‌ 29ರಂದು ಪುನೀತ್‌ ತಮ್ಮ ಖಾತೆಯಿಂದ ಕೊನೆಯ ಟ್ವೀಟ್‌ ಮಾಡಿದ್ದರು. ಅದೇ ದಿನ ಮಧ್ಯಾಹ್ನ ಅವರು ಹೃದಯಸ್ತಂಭನದಿಂದ ಮೃತಪಟ್ಟಿದ್ದರು. ಆ ಬಳಿಕ ಅವರ ಟ್ವಿಟರ್‌ ಖಾತೆ ನಿಷ್ಕ್ರಿಯವಾಗಿದ್ದ ಕಾರಣ ಟ್ವಿಟರ್‌ ಸಂಸ್ಥೆಯು ಬ್ಲೂಟಿಕ್‌ ಹಿಂಪಡೆದಿತ್ತು ಎನ್ನಲಾಗಿದೆ.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)