ಉಚಿತ ಕೊಡುಗೆ ಅಪಾಯಕಾರಿಯೇ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜನಸಾಮಾನ್ಯರ ಯೋಗ ಕ್ಷೇಮ ನೋಡಿಕೊಳ್ಳುವುದು ಕಲ್ಯಾಣ ರಾಜ್ಯದ ಪರಿಕಲ್ಪನೆ ಮಾತ್ರವಲ್ಲ, ನೈತಿಕ ಹೊಣೆಗಾರಿಕೆ. ಆದರೆ ಜಾಗತೀಕರಣದ ಹಾವಳಿ ಆರಂಭವಾದ ನಂತರ ಅಂದರೆ ಮಾರುಕಟ್ಟೆ ಆರ್ಥಿಕ ವ್ಯವಸ್ಥೆ ಬಂದ ನಂತರ ಎಲ್ಲವೂ ಮಾರಾಟದ ಸರಕಾಗಿ ಬದಲಾಯಿತು. ಬಡವರಿಗೆ, ದೀನ ದಲಿತರಿಗೆ ಸಬ್ಸಿಡಿ ಆಹಾರ ಧಾನ್ಯ ಕೊಡುವುದನ್ನು ಕೂಡ ಜಾಗತಿಕ ಹಣಕಾಸು ಸಂಸ್ಥೆ ಆಕ್ಷೇಪಿಸುತ್ತ ಬಂತು. ಆದರೆ ಜನಪ್ರತಿನಿಧಿಗಳು ಈ ಆಕ್ಷೇಪವನ್ನು ಒಪ್ಪಿರಲಿಲ್ಲ. ಆದರೆ ಈಗ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಚುನಾವಣೆಗಾಗಿ ಉಚಿತ ಕೊಡುಗೆಗಳನ್ನು ಘೋಷಿಸುವುದು ಅಪಾಯಕಾರಿ ಎಂದು ಹೇಳಿದ್ದಾರೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯನ್ನು ವಿಶೇಷವಾಗಿ ತಮ್ಮ ಮುಖ್ಯ ಎದುರಾಳಿಯಾದ ಆಮ್‌ಆದ್ಮಿ ಪಕ್ಷವನ್ನು ಗಮನದಲ್ಲಿಟ್ಟುಕೊಂಡು ಅವರು ಈ ಮಾತು ಹೇಳಿದ್ದರೂ ಅವರ ಒಳ ಮನಸಿನಲ್ಲಿ ಏನಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ.
ಜನರಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ, ವಿದ್ಯುತ್, ನೀರು ಒದಗಿಸುವುದು ಮತ್ತು ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರ ಯೋಗ ಕ್ಷೇಮ ನೋಡಿಕೊಳ್ಳುವುದು ಚುನಾಯಿತ ಸರಕಾರದ ಹೊಣೆಗಾರಿಕೆಯಾಗಿದೆ. ಜಗತ್ತಿನ ಅನೇಕ ದೇಶಗಳಲ್ಲಿ ಇಂತಹ ಸೇವೆ ನಾಗರಿಕರಿಗೆ ಸಿಗುತ್ತದೆ. ಪ್ರಜೆಗಳಿಂದ ಜಿಎಸ್‌ಟಿ ಹೆಸರಿನಲ್ಲಿ ಕೋಟಿ ಕೋಟಿ ರೂ. ವಸೂಲಿ ಮಾಡುವ ಸರಕಾರ ಆ ಹಣವನ್ನು ಏನು ಮಾಡುತ್ತದೆ? ಜನರಿಂದ ತೆರಿಗೆ ಮತ್ತು ಕಂದಾಯದ ರೂಪದಲ್ಲಿ ವಸೂಲಿ ಮಾಡಿದ ಹಣವನ್ನು ಜನರಿಗಾಗಿ ಬಳಸುವುದು ಅಪಾಯಕಾರಿ ಎಂದರೆ ಇನ್ಯಾವುದು ಉಪಕಾರಿ ಎಂಬುದನ್ನು ಮೋದಿಯವರು ವಿವರಿಸಬೇಕು.
ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ಕೊಡುವುದು ಅಪಾಯಕಾರಿ ಎಂದು ಹೇಳುವ ಪ್ರಧಾನಿಯವರು ತಮ್ಮ ಖಾಸಾ ಸ್ನೇಹಿತರಾದ ಕಾರ್ಪೊರೇಟ್ ಉದ್ಯಮಿಗಳ ಸಾವಿರಾರು ಕೋಟಿ ರೂಪಾಯಿ ಸಾಲ ಮನ್ನಾ ಮಾಡಿರುವುದು, ತಮ್ಮ ಮಿತ್ರರಿಗಾಗಿ ವಿದೇಶ ಪ್ರವಾಸ ಕೈಗೊಂಡು ಲಕ್ಷಾಂತರ ಕೋಟಿ ರೂ. ಗುತ್ತಿಗೆಯನ್ನು ಉಚಿತ ಕೊಡುಗೆಯನ್ನಾಗಿ ನೀಡಿರುವುದು ಅಪಾಯಕಾರಿ ಅಲ್ಲವೇ? ತಮ್ಮ ಅಧಿಕಾರ ಸ್ಥಾನದ ದುರುಪಯೋಗ ಅಲ್ಲವೇ?
ಉತ್ತರ ಪ್ರದೇಶ ಚುನಾವಣೆಯ ಹಿನ್ನೆಲೆಯಲ್ಲಿ ಅಯೋಧ್ಯೆಯ ಮಂದಿರ ನಿರ್ಮಾಣಕ್ಕಾಗಿ ಕೋಟ್ಯಂತರ ರೂಪಾಯಿ ಅನುದಾನ ನೀಡಿದ್ದು, ಕಾಶಿಯ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸಿದ್ದನ್ನು ಪ್ರಧಾನಿ ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಈ ಯೋಜನೆಯಲ್ಲಿ ವೋಟು ಸಂಪಾದಿಸುವ ಮಸಲತ್ತು ಇರಲಿಲ್ಲವೇ? ಸಾರ್ವಜನಿಕ ಬೊಕ್ಕಸದ ಹಣ ಈ ರೀತಿ ದುರುಪಯೋಗ ಆಗಬಾರದಲ್ಲವೇ?
ಜನಸಾಮಾನ್ಯರಿಗೆ ಉಚಿತ ಕೊಡುಗೆ ನೀಡುವುದು ಅಪಾಯಕಾರಿ ಎಂದು ಹೇಳುವ ಸರಕಾರ ಗಾಯದ ಮೇಲೆ ಬರೆ ಹಾಕಿದಂತೆ ಬೆಲೆ ಏರಿಕೆಯಿಂದ ಬಳಲಿ ಬೆಂಡಾದ ಜನರ ಮೇಲೆ ಗದಾ ಪ್ರಹಾರ ಮಾಡುತ್ತಲೇ ಇದೆ. ಮೊಸರು ಮತ್ತು ಹಾಲಿನ ಉತ್ಪನ್ನಗಳು ಸೇರಿದಂತೆ ಜೀವನಾವಶ್ಯಕ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿರುವುದು ಸಮರ್ಥನೀಯವಲ್ಲ.
ಕಳೆದ ಎರಡು ವರ್ಷಗಳ ಕಾಲಾವಧಿಯಲ್ಲಿ ಕೊರೋನ ಪರಿಣಾಮವಾಗಿ ಜನಸಾಮಾನ್ಯರ ಬದುಕು ಅಸ್ತವ್ಯಸ್ತಗೊಂಡಿದೆ. ಉದ್ಯೋಗ ವಂಚಿತರಾದ ಜನ ಬೀದಿಗೆ ಬಿದ್ದಿದ್ದಾರೆ. ಇನ್ನೇನು ಬದುಕು ಮತ್ತೆ ನೆಲೆ ಕಂಡುಕೊಂಡಿತೆನ್ನುವಾಗಲೇ ಸರಕಾರ ಜಿಎಸ್‌ಟಿ ಹೆಸರಿನಲ್ಲಿ ಉರಿಯುವ ಗಾಯಕ್ಕೆ ಉಪ್ಪಿನ ಹುಡಿಯನ್ನು ಎರಚುತ್ತಿದೆ. ಸರಕಾರ ಉಚಿತವಾಗಿ ಜನರಿಗೆ ಏನನ್ನೂ ನೀಡುವುದು ಬಿಡಿ ಅವರ ಪಾಡಿಗೆ ಅವರನ್ನು ಬಿಟ್ಟರೆ ಸಾಕಾಗಿದೆ.
ಆಹಾರ ಭದ್ರತಾ ಕಾಯ್ದೆಯ ಪ್ರಕಾರ ಎಲ್ಲಾ ಪ್ರಜೆಗಳಿಗೂ ಪೌಷ್ಟಿಕ ಆಹಾರ ಒದಗಿಸುವುದು ಸರಕಾರದ ಕರ್ತವ್ಯ. ಹಾಲು, ಮೊಸರು ಮೊದಲಾದವು ಪೌಷ್ಟಿಕ ಆಹಾರಗಳೇ ಆಗಿವೆ. ಜೀವನಾವಶ್ಯಕ ಪದಾರ್ಥಗಳಾದ ಇವುಗಳ ಬೆಲೆ ಏರಿಸಿ ಆಹಾರ ಭದ್ರತಾ ಕಾಯ್ದೆಯ ಬಗ್ಗೆ ಮಾತಾಡುವುದರಲ್ಲಿ ಅರ್ಥವಿಲ್ಲ.
ವಾಸ್ತವಾಂಶ ಹೀಗಿರುವಾಗ ಪ್ರಧಾನ ಮಂತ್ರಿ ಜನಸಾಮಾನ್ಯರಿಗೆ ಉಚಿತವಾಗಿ ಜೀವನಾವಶ್ಯಕ ಪದಾರ್ಥಗಳನ್ನು ಕೊಡುವುದು ಸರಿಯಲ್ಲ ಎಂದು ಹೇಳುವುದು ನ್ಯಾಯ ಸಮ್ಮತವಲ್ಲ. ಕಾರ್ಪೊರೇಟ್ ಕಂಪೆನಿಗಳ ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡಿ ಬಡವರಿಗೆ ಉಚಿತವಾಗಿ ಕೊಡುಗೆ ನೀಡುವುದು ಸರಿಯಲ್ಲ ಎಂಬ ಮೋದಿಯವರ ಮಾತನ್ನು ಒಪ್ಪಲು ಸಾಧ್ಯವಿಲ್ಲ.
ಬಡವರಿಗೆ ಉಚಿತವಾಗಿ ಏನನ್ನೂ ಕೊಡಬಾರದು ಎಂದು ಹೇಳುವ ಮೋದಿಯವರು ಪರೋಕ್ಷ ತೆರಿಗೆಗಳ ಬಗ್ಗೆ ಮಾತಾಡಲಿ. ಈ ಪರೋಕ್ಷ ತೆರಿಗೆಗಳಿಗೆ ಬಡವ, ಶ್ರೀಮಂತ ಎಂಬ ವ್ಯತ್ಯಾಸವಿಲ್ಲ. ಬಡವರು ಮತ್ತು ಶ್ರೀಮಂತರು ಒಂದೇ ರೀತಿಯ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಈವರೆಗೆ ಬ್ರಾಂಡೆಡ್ ಆಹಾರ ಪದಾರ್ಥಗಳಿಗೆ ಮಾತ್ರ ತೆರಿಗೆ ವಿಧಿಸಿ ಬ್ರಾಂಡೆಡ್ ಅಲ್ಲದ ಪದಾರ್ಥಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಇದರಿಂದ ಬಡವರಿಗೆ ಅಷ್ಟೊಂದು ತೊಂದರೆಯಾಗುತ್ತಿರಲಿಲ್ಲ. ಅಂದರೆ ಬ್ರಾಂಡೆಡ್ ಸಾಮಗ್ರಿಗಳನ್ನು ಖರೀದಿಸುವವರು ಮಾತ್ರ ತೆರಿಗೆ ಪಾವತಿ ಮಾಡುತ್ತಿದ್ದರು.
ಆದರೆ ಜಿಎಸ್‌ಟಿ ಮಂಡಳಿಯ ತೀರ್ಮಾನದಿಂದಾಗಿ ಇನ್ನು ಮುಂದೆ ಬಡವರು ಮತ್ತು ಶ್ರೀಮಂತರು ಆಹಾರ ಧಾನ್ಯಗಳಿಗಾಗಿ ಸಮಾನವಾಗಿ ತೆರಿಗೆ ಕಟ್ಟಬೇಕಾಗಿದೆ. ಇದು ಅನ್ಯಾಯದ ಪರಮಾವಧಿಯಲ್ಲದೆ ಮತ್ತೇನು?
ಇನ್ನೊಂದೆಡೆ ಆಕಾಶಕ್ಕೆ ಏರಿದ ಜೀವನಾವಶ್ಯಕ ಪದಾರ್ಥಗಳ ಬೆಲೆಯನ್ನು ನಿಯಂತ್ರಿಸುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯ ತೈಲ ಸೇರಿದಂತೆ ಪ್ರತಿಯೊಂದರ ಬೆಲೆಯೂ ಹೆಚ್ಚಾಗಿದೆ
ಐಷಾರಾಮಿ ವಸ್ತುಗಳ, ಮದ್ಯ ಪಾನೀಯಗಳ ಬೆಲೆಯನ್ನು ಬೇಕಾದಂತೆ ಏರಿಸಲಿ ಅಭ್ಯಂತರವಿಲ್ಲ. ಆದರೆ ಬಡವರು, ಮಧ್ಯಮವರ್ಗದವರು ಬಳಸುವ ಮೊಸರು, ಮತ್ತಿತರ ಪದಾರ್ಥಗಳ ಬೆಲೆಯನ್ನು ಹೆಚ್ಚಿಸಿರುವುದು ಸಮರ್ಥನೀಯವಲ್ಲ