ಭಾಷೆ ಜನರ ಆಯ್ಕೆಯಾಗಲಿ
ಹಿಂದಿ ಭಾಷೆಯನ್ನು ದೇಶದಲ್ಲಿ ಇತರ ಭಾಷೆಗಳ ಮೇಲೆ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹೇರಲು ಕೇಂದ್ರ ಸರಕಾರ ಮಾಡುತ್ತಿರುವ ಹುನ್ನಾರದ ವಿರುದ್ಧ ಹಾಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್‌ರವರು 2017ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಆಡಿದ್ದ ಮಾತುಗಳ ಆಯ್ದ ಭಾಗ
ಸನ್ಮಾನ್ಯರೇ, ಎಂಟನೇ ಪರಿಚ್ಛೇದವು ಸಂವಿಧಾನದ ಅನುಚ್ಛೇದ 344 ಮತ್ತು 351ಕ್ಕೆ ಸಂಬಂಧಿಸಿದ್ದು ಎಂದು ನಾನು ಈಗಾಗಲೇ ಹೇಳಿರುವೆ. ಅನುಚ್ಛೇದ 351 ನೇರವಾಗಿ ‘‘ಹಿಂದಿಯ ಉನ್ನತಿ, ರಕ್ಷಣೆ, ಪ್ರಚಾರ’’ವನ್ನು ಪ್ರತಿಪಾದಿಸುತ್ತದೆ. ಈ ಬಗ್ಗೆ ನನ್ನ ತಕರಾರು ಏನೂ ಇಲ್ಲ. ನಾನು ಹೇಳಿದಂತೆ ಓರ್ವ ಕಾಂಗ್ರೆಸಿಗನಾಗಿ ನನಗೆ ಹಿಂದಿ ಮಾತನಾಡಲು ಹೆಮ್ಮೆಯಿದೆ. ಇಲ್ಲಿರುವ ನನ್ನ ಕೆಲವು ಗೆಳೆಯರಿಗಿಂತ ಚೆನ್ನಾಗಿ ನಾನು ಹಿಂದಿ ಮಾತನಾಡಬಲ್ಲೆ. ಇದರ ಅರ್ಥ ನಮ್ಮ ಮೇಲೆ ಯಾವುದೋ ಭಾಷೆಯನ್ನು ಯಾರೋ ಹೇರಬಹುದು ಎಂದಲ್ಲ. 2001ರ ಜನಗಣತಿ ವರದಿ ಪ್ರಕಾರ ದೇಶದಲ್ಲಿ ಹಿಂದಿ ಮಾತನಾಡುವ ಜನರ ಸಂಖ್ಯೆ ಶೇಕಡಾ 45ರಷ್ಟಿದೆ. ಹಿಂದಿ ಮಾತನಾಡುವವರು ಹೆಚ್ಚಿರುವ ಕಾರಣ ಅದನ್ನು ಅಧಿಕೃತವಾಗಿ ಪರಿಗಣಿಸಲಾಗಿದೆ. ಆದರೆ ಅದು ರಾಷ್ಟ್ರೀಯ ಭಾಷೆಯಾಗಲು ಸಾಧ್ಯವಿಲ್ಲ.
2010ರಲ್ಲೇ ಗುಜರಾತ್ ನ್ಯಾಯಾಲಯ ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಲೇವಾರಿ ಮಾಡುತ್ತಾ, ‘ಹಿಂದಿ ಭಾರತದ ರಾಷ್ಟ್ರಭಾಷೆ ಅಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ. ಹಿಂದಿಯಲ್ಲಿ ಕಡ್ಡಾಯವಾಗಿ ದಾಖಲೆಗಳನ್ನು ಮುದ್ರಿಸುವಂತೆ ಕೇಂದ್ರ ರಾಜ್ಯಕ್ಕೆ ಸೂಚಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಆದರೆ ನ್ಯಾಯಾಲಯ ಇದನ್ನು ನಿರಾಕರಿಸುತ್ತಾ, ‘ಸಾಮಾನ್ಯವಾಗಿ ಭಾರತದಲ್ಲಿ ಬಹುಪಾಲು ಜನ ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿ ಒಪ್ಪಿದ್ದಾರೆ, ಬಹಳಷ್ಟು ಜನ ಹಿಂದಿಯಲ್ಲಿ ಮಾತನಾಡುತ್ತಾರೆ. ಬರವಣಿಗೆಗೆ ದೇವನಾಗರಿ ಭಾಷೆಗಳನ್ನು ಬಳಸುತ್ತಾರೆ. ಆದರೆ ಹಿಂದಿಯನ್ನು ದೇಶದ ರಾಷ್ಟ್ರೀಯ ಭಾಷೆಯಾಗಿ ಘೋಷಣೆ ಮಾಡಿರುವುದಕ್ಕೆ ಯಾವುದೇ ಪುರಾವೆ, ಆದೇಶಗಳು ಇಲ್ಲ’ ಎಂದು ನ್ಯಾಯಾಲಯ ಹೇಳಿದೆ. ಸಹಜವಾಗಿಯೇ ಜವಾಬ್ದಾರಿಯುತ ಸಚಿವರು ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಕರೆದರೆ ಇತರ 22 ಭಾಷೆಗಳ ಜನ ನಾವು ಏನು ಕಡಿಮೆ ಎಂದು ಖಂಡಿತವಾಗಿ ಭಾವಿಸುತ್ತಾರೆ. ಆದ್ದರಿಂದಲೇ ನಾನು ಈ ವಿಧೇಯಕ ಮಂಡಿಸಿರುವೆ.
ಸನ್ಮಾನ್ಯರೇ, ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ತುಳುಭಾಷೆ ಕರ್ನಾಟಕದಲ್ಲಿ ಮಾತ್ರ ಬಳಕೆಯಲ್ಲಿರುವುದಲ್ಲ, ಈ ಭಾಷೆಯನ್ನು ಮುಂಬೈಯ ಕೆಲವು ಭಾಗಗಳು, ಚೆನ್ನೈ-ಮಧ್ಯಪ್ರಾಚ್ಯಗಳಲ್ಲೂ ಮಾತನಾಡುತ್ತಾರೆ. ಕರ್ನಾಟಕದಲ್ಲಿ ವಿಶೇಷ ಭಾಷಾ ಗುಣಲಕ್ಷಣಗಳಿವೆ. ರಾಜ್ಯಭಾಷೆಯಾಗಿ ನಾವು ಕನ್ನಡ ಮಾತನಾಡುತ್ತೇವೆ. ಇದೇ ಸಂದರ್ಭದಲ್ಲಿ ತುಳು, ಕೊಡವ, ಕೊಂಕಣಿ ಭಾಷೆಗಳಲ್ಲಿ ಮಾತನಾಡುತ್ತೇವೆ. ಈಗಾಗಲೇ ತ್ರಿಭಾಷಾ ಸೂತ್ರ ಜಾರಿಯಲ್ಲಿದ್ದು, ಹಿಂದಿಯ ಬದಲು ಸ್ಥಳೀಯವಾದ ನಮ್ಮ ಒಂದು ಭಾಷೆಯನ್ನು ಜಾರಿಗೆ ತರಬಹುದಿತ್ತು. ಇಂಗ್ಲಿಷ್ ಭಾಷೆಯನ್ನು ದೇಶದಲ್ಲಿ ಯಾರೂ ಹೇರುತ್ತಿಲ್ಲ. ಜನರು ತಮ್ಮಿಂದ ತಾವೇ ಇಂಗ್ಲಿಷ್ ಕಲಿಯುತ್ತಾರೆ. ಹಿಂದಿ ಕಲಿಯುವುದರಿಂದ ರಾಷ್ಟ್ರದ ಪ್ರಗತಿಗೆ ಅನುಕೂಲ ಎಂದು ಹೇಳಲಾಗುತ್ತಿದೆ. ಇದು ನಿಜಕ್ಕೂ ಆಶ್ಚರ್ಯದ ವಿಚಾರ. ಹಿಂದಿ ಮಾತನಾಡುವ ಪ್ರದೇಶಗಳನ್ನು ದಕ್ಷಿಣ ಭಾರತ ರಾಜ್ಯಗಳೊಂದಿಗೆ ಹೋಲಿಸಿ ನೋಡಿ, ಚೆನ್ನೈಯನ್ನೇ ಉದಾಹರಣೆಯಾಗಿ ನೋಡಿ, ನಮ್ಮ ಪ್ರಧಾನಿ ‘ಗುಜರಾತ್ ಮಾದರಿ’ ಬಗ್ಗೆ ಮಾತನಾಡುತ್ತಾರೆ. ಈಗಲೂ ನನಗೆ ಅರ್ಥವಾಗಿಲ್ಲ ಗುಜರಾತ್ ಮಾದರಿ ಎಂದರೆ ಏನೆಂದು, ಚೆನ್ನೈಗೆ ಹೋಗಿ ನೋಡಿ. ಅದು ಕಾಂಗ್ರೆಸ್ ಆಡಳಿತದ ರಾಜ್ಯವಲ್ಲ. ಇತರ ಪಕ್ಷಗಳೂ ಅಲ್ಲಿ ಕ್ಷೀಣ. ಅಲ್ಲಿ ನಿರಂತರವಾಗಿ ಆಡಳಿತದಲ್ಲಿರುವುದು ದ್ರಾವಿಡ ಪಕ್ಷಗಳು, ಅದು ನಿಜಕ್ಕೂ ಮಾದರಿ. ಯಾವುದೇ ಕೈಗಾರಿಕೆಗಳಿರಲಿ ಅದು ತಮಿಳುನಾಡಿನಲ್ಲಿದೆ. ಇಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಬಟ್ಟೆ ಗಿರಣಿ, ಯಂತ್ರಗಾರಗಳು ಯಾವುದೇ ಇರಲಿ ಎಲ್ಲವೂ ಅಲ್ಲಿದೆ. ಇದನ್ನು ಪ್ರಗತಿ ಎನ್ನುತ್ತಾರೆ ಮತ್ತು ಇದು ದೇಶಕ್ಕೆ ಮಾದರಿಯಾಗುತ್ತದೆ. ನಾವು ದ್ರಾವಿಡ ಭಾಷೆಗಳನ್ನು ಮಾತನಾಡುವ ಕಾರಣದಿಂದ ಪ್ರಗತಿ ಕಾಣಲು ಸಾಧ್ಯವಿಲ್ಲ ಎನ್ನಲಾಗದು.
ಜಗತ್ತಿನ ಯಾವುದೇ ಭಾಗವನ್ನು ಗಮನಿಸಿ, ಅದು ಅಮೆರಿಕ ಇರಲಿ, ಐರೋಪ್ಯ ರಾಷ್ಟ್ರಗಳಿರಲಿ ಅಲ್ಲಿ ಇರುವ ಭಾರತೀಯ ವೈದ್ಯರು, ಇಂಜಿನಿಯರುಗಳೆಲ್ಲ ದಕ್ಷಿಣ ಭಾರತದವರೇ ಆಗಿರುತ್ತಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸುವ ಬಹುಪಾಲು ಮಂದಿ ದಕ್ಷಿಣ ಭಾರತದವರು. ಅದರಲ್ಲೂ ವಿಶೇಷವಾಗಿ ಕೇರಳದವರು. ಕರ್ನಾಟಕಕ್ಕೆ ಬಂದರೆ ಹಿಂದಿ ಮಾತನಾಡುವವರು ಕೇವಲ ಶೇಕಡಾ ನಾಲ್ಕಕ್ಕೂ ಕಡಿಮೆ ಮಂದಿ. ಕನ್ನಡ ಹೊರತುಪಡಿಸಿದರೆ ಅಲ್ಲಿನ ಜನರಲ್ಲಿ ಶೇ. 14ರಷ್ಟು ತೆಲುಗು, 12ರಷ್ಟು ಮಂದಿ ತಮಿಳು, ಶೇ. 9ರಷ್ಟು ಉರ್ದು ಭಾಷೆ ಮಾತನಾಡುತ್ತಾರೆ. ಆದರೆ ಈ ಭಾಷೆಗಳ ಬಗ್ಗೆ ಉಲ್ಲೇಖವೇ ಇಲ್ಲ.
ಇರಲಿ, ಅವರು ಹಿಂದಿಯನ್ನು ರಾಷ್ಟ್ರಭಾಷೆ ಮಾಡಬೇಕೆನ್ನುತ್ತಾರೆ. ಇತರರು ಹಿಂದಿ ಕಲಿಯಬೇಕೆನ್ನುತ್ತಾರೆ. ತಮಿಳು ಮತ್ತು ತೆಲುಗು ಕೂಡ ರಾಷ್ಟ್ರದಲ್ಲಿ ಹೆಚ್ಚು ಜನ ಮಾತನಾಡುವ ಭಾಷೆಯಾಗಿದೆ. ದಕ್ಷಿಣ ಭಾರತದಲ್ಲಿ ಹಿಂದಿಯನ್ನು ಕಲಿಯಬೇಕಾದ ಕಡ್ಡಾಯ ಭಾಷೆ ಎಂದು ಮಾಡಿ. ಅಲ್ಲಿನ ವಿದ್ಯಾರ್ಥಿಗಳಿಗೆ ಅದು ಅಗತ್ಯವೆಂದರೆ ಕಲಿಯುತ್ತಾರೆ. ಇದೇ ಸಂದರ್ಭದಲ್ಲಿ ಉತ್ತರ ಭಾರತದ ಹಿಂದಿ ಪ್ರದೇಶದ ಜನ ಕಡ್ಡಾಯವಾಗಿ ದಕ್ಷಿಣ ಭಾರತದ ಒಂದು ಭಾಷೆಯನ್ನು ಕಲಿಯಬೇಕೆಂದು ಆದೇಶ ಹೊರಡಿಸಿ. ಆಗ ನಾವು ಅದನ್ನು ಒಪ್ಪುತ್ತೇವೆ. ಆದರೆ ನೀವು ನಮ್ಮ ಭಾಷೆ ಒಪ್ಪಲು ತಯಾರಿಲ್ಲ. ಆದರೆ ನಾವು ಎಲ್ಲಾ ಭಾಷೆ ಕಲಿಯ ಬೇಕೆಂದು ಬಯಸುತ್ತೀರಿ. ಇದು ಸಾಧ್ಯವಿಲ್ಲ. ಇದು ಅತ್ಯಂತ ಸೂಕ್ಷ್ಮ ವಿಚಾರ. ಕಿರಣ್ ರಿಜಿಜುರವರು ಹೇಳಿದಂತೆ ಇದನ್ನು ಜಾಗ್ರತೆಯಿಂದ ನಿರ್ವಹಿಸಬೇಕು. ಸಣ್ಣ ತಪ್ಪಾದರೂ ಕೂಡ ಅತ್ಯಂತ ದುಬಾರಿ ಬೆಲೆ ತೆರಬೇಕಾದೀತು.
ಈಶಾನ್ಯ ಭಾರತದಲ್ಲಿ ಎಲ್ಲಾ ಜನರಿಗೆ ಬೆಂಗಾಲಿ ಭಾಷೆ ಅರ್ಥವಾಗುತ್ತದೆ. ಆದರೆ ಅವರ ಮೇಲೆ ಬೆಂಗಾಲಿ ಭಾಷೆ ಹೇರಲಾಗದು. ಯಾರೂ ಅಲ್ಲಿ ಬೆಂಗಾಲಿ ಭಾಷೆಯನ್ನು ಹೇರಿಲ್ಲ. ಇಡೀ ದಕ್ಷಿಣ ಭಾರತದಲ್ಲಿ ಜನರಿಗೆ ತಮಿಳು, ತೆಲುಗು, ಮಲಯಾಳಂ, ಕನ್ನಡ ಭಾಷೆ ಬರುತ್ತದೆ. ಆದರೆ ಈ ಭಾಷೆಗಳನ್ನು ಉತ್ತರ ಭಾರತದ ಜನರ ಮೇಲೆ ಹೇರಲು ಸಾಧ್ಯವಿಲ್ಲ. ವಿಸ್ತಾರವಾದ ವೈವಿಧ್ಯತೆ ಇರುವ ಮಾದರಿ ದೇಶ ನಮ್ಮದು. ಈಗ ಇಲ್ಲಿ ಮತ್ತೆ ಜವಾಬ್ದಾರಿಯುತ ಜನರೇ ಈ ವಿಚಾರವನ್ನು ಕೆದಕುತ್ತಿದ್ದಾರೆ. ತುಳು ಮತ್ತು ಕೊಡವ ಭಾಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸುವುದರಿಂದ ಯಾವ ಅನುಕೂಲವಿದೆ ಎಂದು ಗಣೇಶನ್‌ರವರು ಕೇಳುತ್ತಿದ್ದಾರೆ. ಇದು ಅನುಕೂಲದ ಪ್ರಶ್ನೆಯಲ್ಲ.
ಸಂವಿಧಾನದ ಅನುಚ್ಛೇದ 351ರ ಪ್ರಕಾರ ಹಿಂದಿ ಪ್ರಚಾರ ಪಡಿಸಲು, ಕಲಿಯಲು ಅವಕಾಶವಿದೆ, ಎಲ್ಲಾ ರೀತಿಯ ಬೆಂಬಲವೂ ಇದೆ. ನಮಗೆ ಈ ಮಾದರಿಯ ಯಾವ ಬೆಂಬಲವೂ ಬೇಕಿಲ್ಲ, ಸಾವಿರಾರು ವರ್ಷಗಳಿಂದ ನಮ್ಮ ನೆಲದಲ್ಲಿ ಗಟ್ಟಿಯಾಗಿ ನೆಲೆಸಿದ್ದೇವೆ, ಮುಂದೆಯೂ ನಿಲ್ಲುತ್ತೇವೆ, ಆದರೆ ನಾವು ನಮ್ಮ ಭಾಷೆ, ಸಂಸ್ಕೃತಿ ಉಳಿಸಬೇಕಿದೆ. ಇದು ಪ್ರಮುಖ ವಿಚಾರ. ನಮ್ಮದು ಏಕೀಕೃತ ರಾಷ್ಟ್ರವಲ್ಲ, ವೈವಿಧ್ಯತೆಯಲ್ಲೇ ದೇಶ ಹುಟ್ಟಿತು. ಅದನ್ನು ಕಾಪಾಡಿ ರಕ್ಷಿಸಬೇಕಾಗಿದೆ. ಕೆಲವರು ಇತರ ಭಾಷೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಕೇವಲ ತುಳು ಮತ್ತು ಕೊಡವ ಭಾಷೆಗೆ ಮಿತಿ ಗೊಂಡಿಲ್ಲ. ಇತರ ಭಾಷೆಗಳೂ ಇವೆ. ಗೆಳೆಯ ಶುಕ್ಲಾಜಿಯವರು ಹೇಳಿದಂತೆ 12 ಕೋಟಿ ಜನರು ಭೋಜ್‌ಪುರಿ ಭಾಷೆ ಮಾತನಾಡುತ್ತಾರೆ. ನೇಪಾಳಿ ಭಾಷೆ ಎಷ್ಟು ಜನ ಮಾತನಾಡುತ್ತಾರೆ? ಎಂಟನೇ ಪರಿಚ್ಛೇದದಲ್ಲಿರುವ ಇತರ ಭಾಷೆಗಳನ್ನು ಅದೆಷ್ಟು ಜನ ಮಾತನಾಡುತ್ತಾರೆ?
ಭೋಜ್ ಪುರಿಗೆ ಹೋಲಿಸಿದಾಗ ಅವರು ಸಣ್ಣ ಅಲ್ಪಸಂಖ್ಯಾತ ಸಮುದಾಯ, ಇತರ ಭಾಷೆಗಳೆಂದರೆ ಅಂಗಿಕ, ಅವಧಿ, ಬುಂದೇಲಿ, ಛತ್ತೀಸ್‌ಘರಿ, ಹರಿಯಾನ್ವಿ, ಹಿಂದುಸ್ತಾನಿ, ಕನೌಜಿ, ಮಗಧಿ, ಮಾರ್ವಾರಿ, ಭಿಲ್, ಗೋಂಡಿ. ಆಂಧ್ರಪ್ರದೇಶಕ್ಕೆ ಹೋದರೆ ಅಲ್ಲಿನ ಗೋಂಡಿಗಳು ನಿಜವಾದ ಆದಿವಾಸಿಗಳು, ಅವರ ಭಾಷೆಗೆ ಲಿಪಿ ಇಲ್ಲ. ಗೋಂಡಿ ಮತ್ತು ಕೊಂಡಮಾಮಾಗಳು ಆಯುರ್ವೇದದ ಪಂಡಿತರು. ಆದರೆ ಅವರಿಗೆ ಮಾನ್ಯತೆ ಇಲ್ಲ. ಅವರು ಮತ್ತು ಕೋಯ ಸಮುದಾಯವೂ ಅಲೆಮಾರಿಗಳು. ಆದ್ದರಿಂದ ಎಂಟನೇ ಪರಿಚ್ಛೇದಕ್ಕೆ ಭಾಷೆಗಳನ್ನು ಸೇರಿಸುವಾಗ ಮಾನದಂಡಗಳಿರಬೇಕು. ಗೌರವಾನ್ವಿತ ಗೃಹಸಚಿವರು ಹೇಳಿದಂತೆ, ಪ್ರಸ್ತುತ ನಿಗದಿತ ಉದ್ದೇಶ ಅಥವಾ ಮಾನದಂಡ ಈ ಕುರಿತಂತೆ ಇಲ್ಲ. ಈ ಕುರಿತಾದ ಮೊದಲ ಆಯೋಗ 1956ರಷ್ಟು ಹಿಂದೆಯೇ ರಚನೆಯಾಗಿತ್ತು. ಆದರೆ ಆ ಬಳಿಕ ಭಾಷೆಗಳ ಕುರಿತು ಹಲವು ಆಯೋಗ ರಚನೆಯಾದರೂ ಅವುಗಳು ಹೆಚ್ಚಿನ ಸಾಧನೆ ಮಾಡಲಿಲ್ಲ. ಭಾರತದ ಇನ್ನೂ 38 ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಅಧಿಕೃತ ಭಾಷೆಗಳಾಗಿ ಸೇರ್ಪಡೆಗೊಳಿಸಲು ಒತ್ತಾಯವಿರುವುದು ವಾಸ್ತವ. ಈ ಕುರಿತು ಒಡಿಶಾದ ಸೀತಾರಾಮ್ ಮೊಹಪಾತ್ರರವರು ವರದಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ಈ ಕುರಿತು ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಈಗಾಗಲೇ ರಿಜಿಜುರವರು ತಿಳಿಸಿದ್ದಾರೆ. ಆದ್ದರಿಂದ ಭಾಷೆಗಳನ್ನು ಎಂಟನೇ ಪರಿಚ್ಛೇದಕ್ಕೆ ಅಳವಡಿಸಲು ಮಾನದಂಡಗಳನ್ನು ನಿಗದಿಪಡಿಸಿ ಅದು ಪಾರದರ್ಶಕವಾಗಿ, ರಾಜಕೀಯೇತರವಾಗಿ ನಡೆಯಲು ಸಾಧ್ಯವಾಗಬೇಕು.
ಅಪಾಯದಲ್ಲಿರುವ ಕೆಲವು ಭಾಷೆಗಳ ಬಗ್ಗೆ ನಾನು ಕೆಲವು ಅಂಕಿಸಂಖ್ಯೆಗಳನ್ನು ನೀಡಲು ಬಯಸುವೆ. 2001ರ ಜನಗಣತಿ ಪ್ರಕಾರ ಭಾರತದಲ್ಲಿ ಸರಿಸುಮಾರು 1,635 ಮಾತೃ ಭಾಷೆಗಳಿವೆ. ಭಾರತದ ಸಂವಿಧಾನದಲ್ಲಿ ಅಳವಡಿಕೆಯಾಗಿರುವ 22 ಭಾಷೆಗಳನ್ನು ಶೇ. 96.65ರಷ್ಟು ಮಂದಿ ಮಾತನಾಡುತ್ತಾರೆ. ಅಂದರೆ ಉಳಿದ 3.4 ರಷ್ಟು ಜನರು ಅವರ ಮಾತೃಭಾಷೆಗಳಾದ 1,613 ಭಾಷೆಗಳಲ್ಲಿ ಮಾತನಾಡುತ್ತಾರೆ. ಈ ಭಾಷೆಗಳನ್ನು ರಕ್ಷಿಸಲಾಗದಿದ್ದರೆ ನಮ್ಮ ಭಾಷಾ ವೈವಿಧ್ಯತೆ ನಾಶವಾಗಲಿದೆ. ಭಾಷಾ ಸಂಶೋಧನಾ ಮತ್ತು ಪ್ರಕಟಣಾ ಕೇಂದ್ರವು ನಡೆಸಿದ ಭಾರತದ ಜನರ ಭಾಷಾ ಸಮೀಕ್ಷೆ ಪ್ರಕಾರ, ಕಳೆದ 50 ವರ್ಷಗಳಲ್ಲಿ ಆಂಧ್ರಪ್ರದೇಶ ಒಂದರಲ್ಲೇ 20 ಸ್ಥಳೀಯ ಭಾಷೆಗಳು ನಾಮಾವಶೇಷ ಗೊಂಡಿವೆ. ರಾಜ್ಯದ ಆದಿವಾಸಿ ಭಾಷೆಗಳಾದ ಕೊಂಡ, ಡೋರಾ, ಕೊಲ್ಮಿ, ಗೋಂಡಿಗಳು ಅಳಿವಿನ ಅಂಚಿನಲ್ಲಿವೆ. ದೇಶದ ಏಕತೆ ಕಾಪಾಡಲು ಒಂದೇ ಭಾಷೆಯ ಬಳಕೆ ಅನುಕೂಲಕರ ಎಂದು ರಾಮ್ ವಿಚಾರ್ ನೇತಮ್ ಪ್ರತಿಪಾದಿಸುತ್ತಿದ್ದಾರೆ. ಕ್ಷಮೆ ಇರಲಿ, ಅವರ ಮಾತು ಆಲಿಸಿದಾಗ ಅವರ ಮನದಾಳದಲ್ಲಿ ಛತ್ತೀಸ್ ಘರಿ ಭಾಷೆಯೇ ಸರ್ವಶ್ರೇಷ್ಠ ಎನ್ನುವಂತಿತ್ತು. ನೀವು ಬೇರೆಡೆ ತೆರಳಿದರೂ ‘ಜೈ ಮಹಾರಾಷ್ಟ್ರ’, ‘ಜೈ ಕರ್ನಾಟಕ’, ‘ಜೈ ತಮಿಳುನಾಡು’, ‘ಜೈ ತೆಲುಗು’ ಮೊದಲಾದ ಅವರವರ ಘೋಷಣೆ ಮೊಳಗುತ್ತವೆ. ಅಪ್ರಜ್ಞಾಪೂರ್ವಕವಾಗಿ ಅವರು ಅವರ ಭಾಷೆಯ ಬಗ್ಗೆ ಹೆಮ್ಮೆಯನ್ನು ಹೊರಹಾಕುತ್ತಾರೆ. ಇದನ್ನು ಅಪ್ರಜ್ಞಾಪೂರ್ವಕ ಅಥವಾ ಉಪರಾಷ್ಟ್ರೀಯತೆಯೆಂದು ನೀವು ಕರೆಯುವಿರೋ? ಆದ್ದರಿಂದ ಈ ವಿಚಾರದಲ್ಲಿ ಇನ್ನಷ್ಟು ಗೊಂದಲ ಸೃಷ್ಟಿಸಬೇಡಿ, ನಾನು ಹೇಳಿದ ಎಲ್ಲಾ ಭಾಷೆಗಳು ಅವರವರ ಮಾತೃಭಾಷೆಗಳೇ ಆಗಿವೆ. ಇವುಗಳಲ್ಲಿ ಬಹುತೇಕ ಭಾಷೆಗಳು ನನಗೆ ಅರಿಯದು. ಆದರೆ ಇವು ಹಿಂದಿಯೇತರ ಭಾಷೆಗಳು. ಈಶಾನ್ಯ ರಾಜ್ಯದ ತುತ್ತತುದಿಯಿಂದ ಅಥವಾ ದಕ್ಷಿಣ ಭಾರತದ ಅಂಚಿನಿಂದ ದಿಲ್ಲಿ ತಲುಪಬೇಕಾದರೆ ರೈಲಿನಲ್ಲಿ 48 ಗಂಟೆ ಬೇಕಾಗುತ್ತದೆ. ಯಾವುದೇ ಕೆಲಸವಿರಲಿ, ಸರಕಾರದಿಂದ ಅವರಿಗೆ ಏನಾದರೂ ಬೇಕಿದ್ದರೆ ಅವರು ಇಲ್ಲಿಗೆ ಬರಬೇಕು. ಇದು ತೀರಾ ತ್ರಾಸಿನ ಕೆಲಸ, ಆದ್ದರಿಂದ ಜನರಿಗೆ ಅನುಕೂಲವಾಗುವ ಅವರ ಭಾಷೆ, ಸಂಸ್ಕೃತಿಗಳನ್ನು ಸಂರಕ್ಷಿಸಬೇಕು.
ಹಿಂದಿ ರಾಷ್ಟ್ರ ಭಾಷೆ ಅಲ್ಲ, ಅದೊಂದು ಅಧಿಕೃತ ಭಾಷೆ ಎನ್ನುವುದನ್ನು ಅವರು ಸ್ಪಷ್ಟಪಡಿಸಬೇಕು. ಭಾರತದ ಯಾವುದೇ ಭಾಗದಲ್ಲಿ ಹಿಂದಿಯನ್ನು ಜನರ ಒಪ್ಪಿಗೆ ಇಲ್ಲದೆ ಹೇರಲಾಗುವುದಿಲ್ಲ, ಒಪ್ಪಿಗೆ ಇದ್ದರೂ ಅದನ್ನು ಹೇರಲಾಗದು ಎಂಬ ಭರವಸೆ ನೀಡಬೇಕು. ಭಾಷೆ ಜನರ ಆಯ್ಕೆ.
ಭಾರತವು ಒಂದು ಮುಕ್ತ ಪ್ರಜಾಪ್ರಭುತ್ವ ದೇಶ. ಭಾರತದ ಜನ ತಮಗೆ ಬೇಕಾದ ಯಾವುದೇ ಭಾಷೆಯನ್ನು ಕಲಿಯಲು ಸಂವಿಧಾನ ಅವರಿಗೆ ಅವಕಾಶ ನೀಡಿದೆ. ಆದ್ದರಿಂದ ಕಿರಣ್ ರಿಜಿಜುರವರಲ್ಲಿ ನನ್ನ ಮನವಿ ಏನೆಂದರೆ, ದೇಶದ ಯಾರ ಮೇಲೂ ಯಾವ ಭಾಷೆಯನ್ನೂ ಹೇರುವುದಿಲ್ಲ ಎಂಬ ಭರವಸೆ ಕೊಡಬೇಕು. ಅವರು ಹೇಳಿದಂತೆ ತುಳು, ಕೊಡವ ಭಾಷೆಗಳನ್ನಷ್ಟೇ ಪ್ರತ್ಯೇಕವಾಗಿ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಅಳವಡಿಸಲು ಸಾಧ್ಯವಿಲ್ಲ ಎನ್ನುವುದಾದರೆ, ಅವರು ಪ್ರತ್ಯೇಕ ವಿಧೇಯಕ ಒಂದನ್ನು ತಂದು ಪರಿಚ್ಛೇದಕ್ಕೆ ಸೇರದೆ ಉಳಿದಿರುವ ಎಲ್ಲಾ 38 ಭಾಷೆಗಳನ್ನು ಅಳವಡಿಸಲು ಕ್ರಮವಹಿಸಲಿ.
ಹಾಗೆ ನೋಡಿದರೆ 8ನೇ ಪರಿಚ್ಛೇದ ಎನ್ನುವುದು ತನ್ನ ಮಹತ್ವವನ್ನು ಕಳೆದುಕೊಂಡಿದೆ. ಆದರೆ ಈ ಎಲ್ಲಾ ಭಾಷೆಗಳ ಚಾರಿತ್ರಿಕ ಸಾಂಸ್ಕೃತಿಕ ಮಹತ್ವ ಉಳಿಸಲು ಈ ಕ್ರಮದ ಅಗತ್ಯವಿದೆ. ಇದಕ್ಕೆ ಕೇಂದ್ರ ಸರಕಾರ ಮುಂದಾಗಬೇಕು. ಅವರು ಈ ಭರವಸೆ ಕೊಡುವುದಾದರೆ ನಾನು ಮಂಡಿಸಿರುವ ವಿಧೇಯಕವನ್ನು ವಾಪಸ್ ಪಡೆಯಲು ನನ್ನ ಅಭ್ಯಂತರವಿಲ್ಲ.