ನ್ಯಾಯಾಲಯದಲ್ಲಿ ಮಂಡೇಲಾ ಓದಿದ ಒಂದು ಚಾರಿತ್ರಿಕ ರಕ್ಷಣಾ ಪ್ರಕರಣ
ಭಾಗ-02
ನೆಲ್ಸನ್ ಮಂಡೇಲಾ ಅವರ ಆತ್ಮಕಥೆ ("LONG WALK TO FREEDOM") ಜಗತ್ತಿನ ನೊಂದ ಜನರ ಇತಿಹಾಸದ ಒಂದು ಕರಾಳ ಅಧ್ಯಾಯವಾಗಿದೆ. ಆಫ್ರಿಕಾದ ಬಿಳಿಯರ ಸರಕಾರ ಮಂಡೇಲಾರನ್ನು 27 ವರ್ಷಗಳ ಕಾಲ ಜೈಲಿನಲ್ಲಿ ಕೂಡಿ ಹಾಕಿತ್ತು. ಇದರ ನಡುವೆ ಮಂಡೇಲಾ ಅವರು ನ್ಯಾಯಾಲಯದಲ್ಲಿ ಓದಿದ ಒಂದು ಚಾರಿತ್ರಿಕ ರಕ್ಷಣಾ ಪ್ರಕರಣವನ್ನು ಅವರ ಆತ್ಮಕಥೆಯಿಂದ ತೆಗೆದುಕೊಳ್ಳಲಾಗಿದೆ.
ನಾನು ಗೆರಿಲ್ಲಾ ಯುದ್ಧ ತರಬೇತಿ ಪಡೆದಿದ್ದೇನೆ. ಒಂದು ವೇಳೆ ಗೆರಿಲ್ಲಾ ಯುದ್ಧ ನಡೆದರೆ ನಾನು ನನ್ನ ಜನರ ಪರವಾಗಿ ಹೋರಾಡ ಬೇಕಿದೆ. ವಿಧ್ವಂಸಕ ಕೃತ್ಯಗಳು ಯಾವ ಪ್ರಯೋಜನಕ್ಕೂ ಬಂದಿಲ್ಲದ ಕಾರಣ ಬೇರೆ ರೀತಿಯಲ್ಲಿ ಆಲೋಚಿಸಬೇಕಿದೆ. ಎಎನ್‌ಸಿ ಮತ್ತು ಎಂ.ಕೆ. ಎರಡೂ ಸಂಘಟನೆಗಳು ಪ್ರತ್ಯೇಕವಾಗಿರಲು ಉತ್ತಮ ಪ್ರಯತ್ನಗಳನ್ನು ಮಾಡಿದ್ದೇವೆ. ಇದು ನಮ್ಮ ನೀತಿ ಮತ್ತು ಆಚರಣೆಯಾದರೂ ಅದು ಸುಲಭದ ಕೆಲಸವಾಗಿಲ್ಲ. ಎರಡೂ ಸಂಘಟನೆಗಳ ಕಾರ್ಯಕರ್ತರನ್ನು ಸರಕಾರ ಆಗಾಗ ಬಂಧಿಸಿ, ನಿಷೇಧಿಸಿ ಸೆರೆಮನೆಗೆ ಕಳುಹಿಸಿ ಶಿಕ್ಷೆಗೆ ಒಳಪಡಿಸುತ್ತಿತ್ತು. ಒಂದೇ ಧ್ಯೇಯ ಇರುವ ಜನರು ಎರಡು ಸಂಘಟನೆಗಳಲ್ಲಿ ಕೆಲಸ ಮಾಡುವುದು ಕಷ್ಟದ ಕೆಲಸವಾಗಿತ್ತು. ಇದು ನಮ್ಮ ನಡುವೆ ವ್ಯತ್ಯಾಸಗಳನ್ನು ತಂದರೂ ಅದು ನಿವಾರಣೆಯಾಗುತ್ತಿತ್ತು. ಸರಕಾರ ನಮ್ಮ ಮತ್ತು ಕಮ್ಯುನಿಸ್ಟರ ಮಧ್ಯೆ ವಿವಾದಗಳನ್ನು ತಂದರೂ ನಮ್ಮ ಗುರಿ ಮಾತ್ರ ಒಂದೇ ಆಗಿತ್ತು. ನಮ್ಮೆಲ್ಲರ ಸಿದ್ಧಾಂತ ನಂಬಿಕೆ, ಆಫ್ರಿಕನ್ ರಾಷ್ಟ್ರೀಯತಾವಾದದ ನಂಬಿಕೆಯಾಗಿತ್ತು. ಬಿಳಿಯ ಸರಕಾರವನ್ನು ಸಮುದ್ರಕ್ಕೆ ತಳ್ಳಲು ಆಫ್ರಿಕನ್ ಜನರ ರಾಷ್ಟ್ರೀಯತೆಗಾಗಿ ಎಎನ್‌ಸಿ ಟೊಂಕಕಟ್ಟಿ ನಿಂತಿದೆ.
ಎಎನ್‌ಸಿ ಅಳವಡಿಸಿಕೊಂಡ ಅತ್ಯಂತ ಪ್ರಮುಖವಾದ ರಾಜಕೀಯ ಪಾತ್ರವೆಂದರೆ ಸ್ವಾತಂತ್ರ ಚಾರ್ಟರ್. ಇದು ಸಮಾಜವಾದಿ ದೇಶಕ್ಕಾಗಿ ರೂಪಿಸಿದ ಒಂದು ನೀಲನಕ್ಷೆಯಾಗಿದೆ. ಎಎನ್‌ಸಿ ತನ್ನ ಇತಿಹಾಸದಲ್ಲಿ ಯಾವುದೇ ಸಮಯದಲ್ಲೂ ದೇಶದ ಆರ್ಥಿಕ ರಚನೆಯಲ್ಲಿ ಪಾಲ್ಗೊಳ್ಳಲಿಲ್ಲ ಅಥವಾ ನನಗೆ ಜ್ಞಾಪಕವಿದ್ದಂತೆ ಬಂಡವಾಳ ಸಮಾಜವನ್ನು ಖಂಡಿಸಲಿಲ್ಲ. ಕಮ್ಯುನಿಸ್ಟ್ ಪಕ್ಷ ಎಎನ್‌ಸಿ ಆಫ್ರಿಕನ್ನರನ್ನು ಮಾತ್ರ ಸದಸ್ಯರನ್ನಾಗಿ ಒಪ್ಪಿಕೊಂಡಿದೆ. ಎಎನ್‌ಸಿಯ ಮುಖ್ಯ ಗುರಿ ಬಿಳಿಯರ ಸರಕಾರವನ್ನು ಅಧಿಕಾರದಿಂದ ಇಳಿಸುವುದಾದರೆ, ಕಮ್ಯುನಿಸ್ಟರ ಗುರಿ ಬಂಡವಾಳಶಾಹಿಗಳನ್ನು ತೆಗೆದುಹಾಕಿ ಕಾರ್ಮಿಕ ವರ್ಗದ ಪರವಾದ ಸರಕಾರವನ್ನು ಸ್ಥಾಪಿಸುವುದು. ಕಮ್ಯುನಿಸ್ಟ್, ವರ್ಗಗಳ ಮಧ್ಯೆ ಭೇದಭಾವ ನಿವಾರಿಸಿದರೆ ಎಎನ್‌ಸಿ ಸಮಾಜದ ಮಧ್ಯೆ ಸಾಮರಸ್ಯವನ್ನು ಸ್ಥಾಪಿಸಲು ಕೆಲಸ ಮಾಡುತ್ತದೆ. ಕಮ್ಯುನಿಸ್ಟ್ ಮತ್ತು ಎಎನ್‌ಸಿ ಮಧ್ಯೆ ನಿಕಟ ರೀತಿಯ ಸಹಕಾರ ಬೆಳೆದಿದೆ. ಆದರೆ ಬಿಳಿಯರ ಪ್ರಾಬಲ್ಯವನ್ನು ತೆಗೆದುಹಾಕುವ ಮತ್ತು ಸಮುದಾಯಗಳ ಸಂಪೂರ್ಣ ಹಿತಾಸಕ್ತಿಗಳೇ ನೆಲೆಗೊಳ್ಳಲಿಲ್ಲ. ಜಗತ್ತಿನ ಇತಿಹಾಸದ ಉದ್ದಕ್ಕೂ ಇದೇ ರೀತಿಯ ಉದಾಹರಣೆಗಳಿವೆ. ಗ್ರೇಟ್ ಬ್ರಿಟನ್, ಯುಎಸ್‌ಎ ಮತ್ತು ಸೋವಿಯತ್ ಯೂನಿಯನ್‌ಗಳ ನಡುವಿನ ಸಹಕಾರ ಹಿಟ್ಲರ್ ವಿರುದ್ಧ ನಡೆಸಿದ ಯುದ್ಧವೂ ಇದೇ ಬಗೆಯ ಒಂದು ಉದಾಹರಣೆಯಾಗಿದೆ. ಅಂತಹ ಸಹಕಾರವು ಚರ್ಚಿಲ್ ಅಥವಾ ರೂಸ್‌ವೆಲ್ಟ್‌ರನ್ನು ಕಮ್ಯುನಿಸ್ಟರು ಅಥವಾ ಕಮ್ಯುನಿಸ್ಟ್ ಉಪಕರಣಗಳಾಗಿ ಪರಿವರ್ತಿಸಿತು ಅಥವಾ ಬ್ರಿಟನ್ ಮತ್ತು ಅಮೆರಿಕಗಳು ಕಮ್ಯುನಿಸ್ಟ್ ಜಗತ್ತನ್ನು ತರಲು ಕೆಲಸ ಮಾಡುತ್ತಿವೆ ಎಂದು ಹಿಟ್ಲರ್ ಧೈರ್ಯ ಮಾಡಿದ್ದನು... ಕಮ್ಯುನಿಸಮ್ ವಿರುದ್ಧ ಬೇರುಬಿಟ್ಟ ಪೂರ್ವಗ್ರಹದೊಂದಿಗೆ, ಆಫ್ರಿಕನ್ ರಾಜಕಾರಣಿಗಳು ಏಕೆ ಕಮ್ಯುನಿಸ್ಟರನ್ನು ತಮ್ಮ ಸ್ನೇಹಿತರನ್ನಾಗಿ ಒಪ್ಪಿಕೊಂಡಿದ್ದಾರೆಂಬುದನ್ನು ತಿಳಿದುಕೊಳ್ಳಲು ಬಿಳಿ ದಕ್ಷಿಣ ಆಫ್ರಿಕನ್ನರಿಗೆ ಬಹುಶಃ ಅರ್ಥಮಾಡಿಕೊಳ್ಳಲು ಕಷ್ಟಸಾಧ್ಯ. ಆದರೆ ಅದರ ಕಾರಣದ ಬಗ್ಗೆ ನಮಗೆ ಸ್ಪಷ್ಟತೆ ಇದೆ. ದಬ್ಬಾಳಿಕೆಯ ವಿರುದ್ಧ ಹೋರಾಡುವಾಗ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಈ ಹಂತದಲ್ಲಿ ನಮಗೆ ಬೇಕಾಗಿಲ್ಲ. ಹಲವು ದಶಕಗಳಿಂದ ಕಮ್ಯುನಿಸ್ಟರು ಎಲ್ಲಾ ಮನುಷ್ಯರು ಸಮಾನರು ಎಂಬುದಾಗಿ ಆಫ್ರಿಕನ್ನರನ್ನು ಪರಿಗಣಿಸಿದ ಒಂದೇ ಒಂದು ಪಕ್ಷವಾಗಿದೆ. ಅವರು ನಮ್ಮ ಜೊತೆಗೆ ಮಾತನಾಡಿದ್ದಾರೆ, ಕುಳಿತು ಆಹಾರ ಸೇವಿಸಿದ್ದಾರೆ, ಒಟ್ಟಾಗಿ ಕೆಲಸ ಮಾಡಿದ್ದಾರೆ ಮತ್ತು ನಮ್ಮ ಜೊತೆಗೆ ವಾಸಮಾಡಿದ್ದಾರೆ. ಇದರಿಂದ ಇಂದಿನ ಅನೇಕ ಕಮ್ಯುನಿಸ್ಟರೊಂದಿಗೆ ಸ್ವಾತಂತ್ರವನ್ನು ಸಮರ್ಪಿಸುವ ಅನೇಕ ಆಫ್ರಿಕನ್ನರು ಇದ್ದಾರೆ. ನಾನು ಕಮ್ಯುನಿಸ್ಟ್ ಅಲ್ಲ. ನಾನು ಯಾವಾಗಲೂ ಆಫ್ರಿಕನ್ ದೇಶಭಕ್ತನಾಗಿದ್ದೇನೆಂದು ನ್ಯಾಯಾಲಯಕ್ಕೆ ತಿಳಿಸುತ್ತೇನೆ... ನಾನು ವರ್ಗರಹಿತ ಸಮಾಜದ ಕಲ್ಪನೆಯಿಂದ ಅಥವಾ ಮಾಕ್ಸ್‌ರ್ ವಾದಿ ಚಿಂತನೆಯಿಂದ ಪ್ರಭಾವಿತನಾಗಿಲ್ಲ ಎಂದು ಹೇಳಲಾರೆ. ಪಶ್ಚಿಮದ ಮುಂದುವರಿದ ದೇಶಗಳೊಂದಿಗೆ ತಮ್ಮ ಜನರನ್ನು ಸೆಳೆಯಲು, ಶಕ್ತಗೊಳಿಸಲು ಕೆಲವು ರೀತಿಯ ಸಮಾಜವಾದದ ಅಗತ್ಯಗಳನ್ನು ಸ್ವೀಕರಿಸಿದ ಅನೇಕ ದೇಶಗಳ ನಾಯಕರ ಬಗ್ಗೆ ಇದು ನಿಜವಾಗಿದೆ. ಮಾರ್ಕ್ಸ್‌ವಾದಿ ಸಾಹಿತ್ಯ ಓದಿದ ಮತ್ತು ಮಾರ್ಕ್ಸ್‌ನ ಚಿಂತನೆಗಳಿಂದ ಕಮ್ಯುನಿಸ್ಟರು ಪಶ್ಚಿಮದ ಸಂಸತ್ತಿನ ವ್ಯವಸ್ಥೆಯನ್ನು ಪ್ರಜಾಪ್ರಭುತ್ವವಾದಿ ಮತ್ತು ಪ್ರತಿಗಾಮಿಯೆಂದು ಪರಿಗಣಿಸುತ್ತಾರೆ ಎಂಬ ಅಭಿಪ್ರಾಯವನ್ನು ಹೊಂದಿದ್ದೇನೆ. ಆದರೆ ನಾನು ಇದಕ್ಕೆ ವ್ಯತಿರಿಕ್ತವಾದ ಅಂತಹ ವ್ಯವಸ್ಥೆಯನ್ನು ಮೆಚ್ಚುತ್ತೇನೆ. ಮ್ಯಾಗ್ನಾಕಾರ್ಟಾ ಹಕ್ಕುಗಳ ಮನವಿ ಮತ್ತು ಹಕ್ಕುಗಳ ಮಸೂದೆಗಳು ವಿಶ್ವದಾದ್ಯಂತ ಪ್ರಜಾಪ್ರಭುತ್ವವಾದಿಗಳಿಂದ ಪೂಜಿಸುವ ದಾಖಲೆಗಳಾಗಿವೆ. ಬ್ರಿಟಿಷ್ ರಾಜಕೀಯ ಸಂಸ್ಥೆಗಳು ಮತ್ತು ದೇಶದ ನ್ಯಾಯವ್ಯವಸ್ಥೆಯ ಬಗ್ಗೆ ನನಗೆ ಗೌರವವಿದೆ. ನಾನು ಬ್ರಿಟನ್‌ನ ಸಂಸತ್ತನ್ನು ವಿಶ್ವದಲ್ಲೇ ಅತ್ಯಂತ ಪ್ರಜಾಪ್ರಭುತ್ವ ಸಂಸ್ಥೆ ಎಂದು ಪರಿಗಣಿಸುತ್ತೇನೆ. ಅದರ ನ್ಯಾಯಾಂಗತ್ವದ ಸ್ವಾತಂತ್ರ ಮತ್ತು ನಿಷ್ಪಕ್ಷಪಾತವು ನನಗೆ ಮೆಚ್ಚಿಗೆಯಾಗಿದೆ. ಅಮೆರಿಕದ ಕಾಂಗ್ರೆಸ್, ಅಧಿಕಾರವನ್ನು ಬೇರ್ಪಡಿಸುವ ದೇಶದ ಸಿದ್ಧಾಂತ ಮತ್ತು ಅದರ ನ್ಯಾಯಾಂಗತ್ವದ ಸ್ವಾತಂತ್ರ ಭಾವನೆಗಳು ನನ್ನಲ್ಲಿ ಬಿಂಬಿಸುತ್ತವೆ. ದಕ್ಷಿಣ ಆಫ್ರಿಕಾದ ಬಿಳಿಯರು ಮತ್ತು ಕಪ್ಪುಜನರ ನಡುವೆ ಭೀಕರ ಅಸಾಮಾನತೆಗಳಿವೆ. ಶಿಕ್ಷಣ, ಆರೋಗ್ಯ, ಆದಾಯ, ಜೀವನದ ಪ್ರತಿಯೊಂದು ಮಗ್ಗಲುಗಳಲ್ಲಿ ಕರಿಯರು ಬದುಕುಳಿಯುವ ಹಂತದಲ್ಲಿದ್ದರೂ ಬಿಳಿಯರು ವಿಶ್ವದಲ್ಲಿಯೇ ಅತ್ಯುನ್ನತ ಮಾನದಂಡಗಳನ್ನು ಹೊಂದಿದ್ದರು ಮತ್ತು ಅದನ್ನ ಅದೇ ರೀತಿ ಮುಂದುವರಿಸುವ ಗುರಿಯನ್ನು ಹೊಂದಿದ್ದಾರೆ...
ಯಾವುದೇ ಕೆಲಸವನ್ನು ಮಾಡಬೇಕಾದರೂ, ಶುಚಿಗೊಳಿಸುವ ಕೆಲಸಗಳೂ ಸೇರಿದಂತೆ ಅವೆಲ್ಲಕ್ಕೂ ಬಿಳಿಯರು ನಮ್ಮ ಜನರನ್ನು ಉಪಯೋಗಿಸಿಕೊಳ್ಳುತ್ತಾರೆ. ಆಫ್ರಿಕನ್ನರು ಬಹುವಿಧ ಕೆಲಸಗಳನ್ನು ಮಾಡುತ್ತಾರೆ. ಬಡತನ ಮತ್ತು ಕುಟುಂಬಗಳಲ್ಲಿ ಒಡಕು ಮೂಡುವುದು ಆಫ್ರಿಕನ್ನರ ಇನ್ನೊಂದು ಸಮಸ್ಯೆಯಾಗಿದೆ. ಮಕ್ಕಳು ಶಾಲೆಗಳಿಗೆ ಹೋಗಲಾರದೆ ಬೀದಿಗಳಲ್ಲಿ ಅಲೆದಾಡುತ್ತಿರುತ್ತಾರೆ. ಪೋಷಕರ ಹತ್ತಿರ ಹಣವಿಲ್ಲದೆ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಆಗುತ್ತಿಲ್ಲ. ಮಕ್ಕಳನ್ನು ನೋಡಿಕೊಳ್ಳಲು ಅವರ ಪೋಷಕರು ಮನೆಗಳಲ್ಲಿ ಇರುವುದಿಲ್ಲ. ಏಕೆಂದರೆ, ಅವರು ಬದುಕಬೇಕಾದರೆ ಪ್ರತಿದಿನ ದುಡಿಯಲು ಹೊರಗೆ ಹೋಗಲೇಬೇಕಾಗುತ್ತದೆ. ಇದರಿಂದ ನೈತಿಕ ಮಾನದಂಡಗಳು ಕುಗ್ಗಿ ವಿಘಟನೆಗೆ ದಾರಿಯಾಗಿದೆ. ಪರಿಣಾಮ ಹಿಂಸೆ ಎಲ್ಲೆಡೆಯೂ ಉಲ್ಬಣಗೊಳ್ಳುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ನಾವು ಭದ್ರತೆ ಮತ್ತು ಸಮಾಜದಲ್ಲಿ ಪಾಲನ್ನು ಬಯಸುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ಸಮಾನ ರಾಜಕೀಯ ಹಕ್ಕುಗಳನ್ನು ಬಯಸುತ್ತೇವೆ. ಏಕೆಂದರೆ, ಇವು ಯಾವವೂ ನಮಗೆ ದೊರಕದಿದ್ದಲ್ಲಿ ನಮ್ಮ ಅಂಗವೈಕಲ್ಯ ಶಾಶ್ವತವಾಗುತ್ತದೆ ಎಂದು ನನಗೆ ತಿಳಿದಿದೆ. ಇದು ಬಿಳಿಯರಿಗೆ ಕ್ರಾಂತಿಕಾರಿಯಾದ ವಿಷಯವಾಗಿದೆ. ಬಹುಪಾಲು ಮತದಾರರು ಆಫ್ರಿಕನ್ನರಾಗಿದ್ದಾರೆ. ಇದು ಬಿಳಿ ಮನುಷ್ಯರ ಪ್ರಜಾಪ್ರಭುತ್ವದಲ್ಲಿ ಭಯವನ್ನು ಉಂಟುಮಾಡುತ್ತಿದೆ. ನಮ್ಮ ಹೋರಾಟ ನಿಜವಾದ ಹೋರಾಟವಾಗಿದೆ. ಆಫ್ರಿಕನ್ ಜನರ ಹೋರಾಟವಾಗಿದೆ. ಇದಕ್ಕೆ ನಮ್ಮ ಸ್ವಂತ ಅನುಭವಗಳು ಮತ್ತು ಪ್ರೇರಣೆ ಇದೆ. ಇದು ನಮ್ಮ ಸಾವುಬದುಕಿನ ಹೋರಾಟವಾಗಿದೆ...’’
ಮಂಡೇಲಾ ಭಾಷಣವನ್ನು ಓದಿದ ಮೇಲೆ ತನ್ನ ಕೈಯಲ್ಲಿದ್ದ ಪತ್ರಗಳನ್ನು ರಕ್ಷಣಾ ನ್ಯಾಯಾಧೀಶರ ಮೇಜಿನ ಮೇಲೆ ಇರಿಸಿದರು. ನ್ಯಾಯಾಲಯ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಕೊನೆ ಮಾತುಗಳನ್ನು ಮಂಡೇಲಾ ಪತ್ರ ನೋಡದೆ ನ್ಯಾಯಾಧೀಶರ ಕಡೆಗೆ ನೋಡುತ್ತ ಹೇಳಿದರು: ‘‘ನನ್ನ ಜೀವಿತಾವಧಿಯನ್ನು ನಾನು ಆಫ್ರಿಕನ್ ಜನರ ಹೋರಾಟಕ್ಕೆ ಅರ್ಪಿಸಿಕೊಂಡಿದ್ದೇನೆ. ನಾನು ಬಿಳಿಯರ ಪ್ರಾಬಲ್ಯದ ವಿರುದ್ಧ ಹೋರಾಡಿದ್ದೇನೆ. ಎಲ್ಲಾ ವ್ಯಕ್ತಿಗಳು ಸಮಂಜಸವಾಗಿ ಮತ್ತು ಸಮಾನ ಅವಕಾಶಗಳೊಂದಿಗೆ ಒಟ್ಟಿಗೆ ವಾಸಿಸುವ ಪ್ರಜಾಪ್ರಭುತ್ವದ ಮತ್ತು ಮುಕ್ತಸಮಾಜದ ಆದರ್ಶವನ್ನು ನಾನು ಪ್ರೀತಿಸುತ್ತೇನೆ. ಇದು ನಾನು ಬದುಕಲು ಮತ್ತು ಸಾಧಿಸಲು ಆಶಿಸುವ ಒಂದ ಆದರ್ಶವಾಗಿದೆ. ಅವಶ್ಯಕತೆ ಇದ್ದಲ್ಲಿ ನಾನು ಸಾಯುವುದಕ್ಕೂ ಸಿದ್ಧನಾಗಿದ್ದೇನೆ’’ ಎಂದು ತನ್ನ ಅಹವಾಲನ್ನು ಮುಗಿಸುತ್ತ ಮಂಡೇಲಾ ಸುಮ್ಮನೆ ವೌನವಾಗಿ ಕುರ್ಚಿಯ ಮೇಲೆ ಕುಳಿತುಕೊಂಡರು, ಗ್ಯಾಲರಿ ಕಡೆಗೆ ನೋಡಲಿಲ್ಲ. ಆದರೆ ಜನರ ನೋಟವೆಲ್ಲ ಮಂಡೇಲಾ ಮೇಲೆ ನೆಟ್ಟಿತ್ತು. ಮಂಡೇಲಾ ನಿರಂತರವಾಗಿ ನಾಲ್ಕು ಗಂಟೆಗಳ ಕಾಲ ಓದಿ ಮುಗಿಸಿದ್ದರು. ಈಗ ಗ್ಯಾಲರಿಯಿಂದ ಸಾಮೂಹಿಕವಾಗಿ ಮಹಿಳೆಯರ ಅಳು ಮತ್ತು ರೋದನೆ ಕೇಳಿಬರುತ್ತಿತ್ತು. (Long walk to freedom, Nelson Mandela, little brown, U.K.p.347&352. 1995)