ಗುಜರಾತ್ ಹತ್ಯಾಕಾಂಡ: ಉಜ್ಜಿದಷ್ಟು ಅಂಟಿಕೊಳ್ಳುತ್ತಿರುವ ಕಳಂಕದ ಕಲೆಗಳು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘‘ಇಡೀ ಅರೇಬಿಯಾದ ಸುಗಂಧ ದ್ರವ್ಯಗಳೂ ನನ್ನ ಕೈಯ ರಕ್ತದ ಕಲೆಗಳ ವಾಸನೆಯನ್ನು ಹೋಗಲಾಡಿಸಲು ಅಶಕ್ತವಾಗಿವೆ’’ ಇದು ಶೇಕ್ಸ್‌ಪಿಯರ್‌ನ ‘ಮ್ಯಾಕ್‌ಬೆತ್’ ನಾಟಕವೊಂದರಲ್ಲಿ ‘ಲೇಡಿ ಮ್ಯಾಕ್‌ಬೆತ್’ನ ಅಳಲು. ತನ್ನ ಗಂಡನನ್ನು ರಾಜನನ್ನಾಗಿಸಲು ಆಕೆ ಮಾಡಿಸುವ ಒಂದು ಕೊಲೆ, ಅದನ್ನು ಮುಚ್ಚಿ ಹಾಕಲು ಆಕೆ ಮಾಡುವ ಇನ್ನಷ್ಟು ಕೊಲೆಗಳಿಗೆ ಕಾರಣವಾಗುತ್ತದೆ. ರಕ್ತದ ಹೊಳೆಯನ್ನೇ ಹರಿಸುತ್ತದೆ. ಕೊನೆಗೆ ರಕ್ತದ ಕಲೆಗಳಿಂದ ಪಾರಾಗುವ ಆಕೆಯ ಅಸಹಾಯಕತೆ ಮತ್ತು ದುರಂತವನ್ನು ಆ ನಾಟಕದಲ್ಲಿ ಕಟ್ಟಿಕೊಡಲಾಗುತ್ತದೆ. ಗುಜರಾತ್ ಹತ್ಯಾಕಾಂಡದಿಂದಾಗಿ ಮೆತ್ತಿಕೊಂಡ ಕಳಂಕಗಳನ್ನು ತೊಳೆದುಕೊಳ್ಳುವ ಮೋದಿ ಮತ್ತು ಅವರ ಸಹವರ್ತಿಗಳ ಇತ್ತೀಚಿನ ನಡೆಗಳು ‘ಮ್ಯಾಕ್‌ಬೆತ್’ನ ದುರಂತ ನಾಟಕವನ್ನು ಹೋಲುತ್ತಿದೆ. ಗುಜರಾತ್ ಹತ್ಯಾಕಾಂಡವನ್ನು ಗೈದವರು ಯಾರು? ಅದರ ಸಂಚುಗಳನ್ನು ರೂಪಿಸಿದವರು ಯಾರು? ಎನ್ನುವುದನ್ನು ಜಗತ್ತಿಗೆ ಬಹಿರಂಗ ಪಡಿಸಿ ಆರೋಪಿಗಳಿಗೆ ತಕ್ಕ ಶಿಕ್ಷೆಯನ್ನು ನೀಡಬೇಕಾಗಿರುವ ಪೊಲೀಸ್ ವ್ಯವಸ್ಥೆ, ಗುಜರಾತ್ ಹತ್ಯಾಕಾಂಡದಲ್ಲಿ ಮೋದಿಯವರ ‘ನಿರಪರಾಧಿತ್ವ’ವನ್ನು ಸಾಬೀತು ಪಡಿಸುವುದಕ್ಕೆ ತನ್ನನ್ನು ಸೀಮಿತಗೊಳಿಸಿದೆ. ಮೋದಿಯವರ ಮೇಲೆ ಅಂಟಿದ ಆರೋಪಗಳ ಕಲೆಗಳನ್ನು ತೊಳೆಯುವ ಭಾಗವಾಗಿ, ‘‘ಎರಡು ವರ್ಷಗಳ ಹಿಂದೆ ನಿಧನರಾದ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಮತ್ತು ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಜೊತೆಗೂಡಿ ಮೋದಿಯವರನ್ನು 2002ರ ಗುಜರಾತ್ ಗಲಭೆಯಲ್ಲಿ ಸಿಲುಕಿಸಲು ನೋಡಿದ್ದರು’’ ಎಂದು ಗುಜರಾತ್ ಪೊಲೀಸರು ಅಹ್ಮದಾಬಾದ್ ಸೆಶನ್ಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪೊಲೀಸರ ವರದಿಯನ್ನು ಓದಿದವರಿಗೆ, ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಯಾರು? ಅಹ್ಮದ್ ಪಟೇಲ್ ಮುಖ್ಯಮಂತ್ರಿಯಾಗಿದ್ದು, ತೀಸ್ತಾ ಸೆಟಲ್ವಾಡ್ ಅವರೇನಾದರೂ ಗೃಹ ಸಚಿವರಾಗಿದ್ದರೆ? ಎನ್ನುವ ಅನುಮಾನ ಕಾಡಬೇಕು. ಗುಜರಾತ್ ಹತ್ಯಾಕಾಂಡದ ಕಳಂಕವನ್ನು ನರೇಂದ್ರ ಮೋದಿಯ ತಲೆಗೆ ಯಾಕೆ ಕಟ್ಟಲಾಗಿದೆಯೆಂದರೆ, ಅಂದು ಅಲ್ಲಿನ ಮುಖ್ಯಮಂತ್ರಿಯಾಗಿದ್ದವರು ನರೇಂದ್ರ ಮೋದಿ. ಆ ಬಳಿಕ ಗೃಹ ಸಚಿವರಾಗಿದ್ದವರು ಅಮಿತ್ ಶಾ. ಇಡೀ ವಿಶ್ವವನ್ನೇ ಆಘಾತಕ್ಕೆ ತಳ್ಳಿದ ಹತ್ಯಾಕಾಂಡದ ವೈಫಲ್ಯವನ್ನು ಆ ಸರಕಾರ ಹೊರಲೇ ಬೇಕಾಗಿದೆ. ಗುಜರಾತ್ ಹತ್ಯಾಕಾಂಡಕ್ಕೆ ನಾಚಿ, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೇ ರಾಜೀನಾಮೆ ನೀಡಲು ಮುಂದಾಗಿದ್ದ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಎಲ್.ಕೆ. ಅಡ್ವಾಣಿಯವರು ಅವರನ್ನು ರಾಜೀನಾಮೆ ನೀಡದಂತೆ ತಡೆದಿದ್ದರು. ಇಷ್ಟಕ್ಕೂ ನರೇಂದ್ರ ಮೋದಿಯವರ ವೈಫಲ್ಯವನ್ನು ಕೇವಲ ಅಹ್ಮದ್ ಪಟೇಲ್ ಅಥವಾ ತೀಸ್ತಾ ಅವರಷ್ಟೇ ಪ್ರಶ್ನಿಸಿರುವುದಲ್ಲ. ನಾಡಿನ ಹತ್ತು ಹಲವು ಪತ್ರಿಕೆಗಳು ಕೋಮುಗಲಭೆಯಲ್ಲಿ ಸರಕಾರದ ನಿಷ್ಕ್ರಿಯತೆಯ ಬಗ್ಗೆ ಬೆಳಕು ಚೆಲ್ಲಿವೆ. ಅಂತರ್‌ರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲೂ ಇವು ಪ್ರಕಟವಾಗಿವೆ. ‘ಗುಜರಾತ್ ಹತ್ಯಾಕಾಂಡವನ್ನು, ಹಿಂದೂ ಸಂಸ್ಕೃತಿಯ ಪುನರುತ್ಥಾನ’ವೆಂದು ಎಂದು ಕೆಲವು ಸಂಘಪರಿವಾರದ ನಾಯಕರು ಬಣ್ಣಿಸಿದ್ದರು. ಇಲ್ಲಿ ಸರಕಾರದ ವೈಫಲ್ಯಗಳಷ್ಟೇ ಅಲ್ಲ, ಗುಜರಾತ್ ಗಲಭೆಯಲ್ಲಿ ಪೊಲೀಸರು ಪರೋಕ್ಷವಾಗಿ ದುಷ್ಕರ್ಮಿಗಳಿಗೆ ಸಹಕರಿಸಿದ್ದರು ಎನ್ನುವ ಆರೋಪಗಳೂ ಕೇಳಿ ಬಂದಿವೆ. ಹಾಗೆಯೇ, ಹತ್ಯಾಕಾಂಡದಲ್ಲಿ ಸಂಘಪರಿವಾರದ ಪಾತ್ರಗಳನ್ನು ಹಲವು ಕುಟುಕು ಕಾರ್ಯಾಚರಣೆಗಳು ಬಯಲಿಗೆಳೆದಿವೆ. ಕಾನೂನು ಸುವ್ಯವಸ್ಥೆ ಬಿಗಿಯಾಗಿದ್ದರೆ ಅಂದಿನ ಹತ್ಯಾಕಾಂಡ ಸಂಭವಿಸುತ್ತಿರಲಿಲ್ಲ ಎನ್ನುವುದು ಬಹುತೇಕ ವಿಶ್ಲೇಷಕರ ಅಭಿಪ್ರಾಯವಾಗಿತ್ತು. ಆ ಕಾರಣದಿಂದಲೇ, ಅಂದು ಗುಜರಾತ್ ರಾಜ್ಯವನ್ನು ಆಳುತ್ತಿದ್ದ ನಾಯಕರು, ಗಲಭೆಯ ಹೊಣೆಗಾರಿಕೆಯಿಂದ ಯಾವ ಕಾರಣಕ್ಕೂ ನುಣುಚಿಕೊಳ್ಳುವಂತಿಲ್ಲ. ನಿಜಕ್ಕೂ ಆ ಕಳಂಕದಿಂದ ಪಾರಾಗಬೇಕಾದರೆ ಮೋದಿಯವರಿಗೆ ಇರುವ ದಾರಿ ಒಂದೇ. ಕನಿಷ್ಠ ಹತ್ಯಾಕಾಂಡದಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು. ಆದರೆ ಹತ್ಯಾಕಾಂಡದ ಸಂಚುಗಾರರಿಗೆ, ನೇರವಾಗಿ ಭಾಗವಹಿಸಿದ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವುದರ ಬದಲು, ಹತ್ಯಾಕಾಂಡದಿಂದ ಸಂತ್ರಸ್ತರಾದವರ ಪರ ಹೊರಾಟ ನಡೆಸಿದವರು ಜೈಲು ಸೇರುತ್ತಿದ್ದಾರೆ.
ಈಗಾಗಲೇ ಇಹಲೋಕ ತ್ಯಜಿಸಿರುವ ಪಟೇಲ್ ಅಥವಾ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಳ್ಳಲು ಹಗಲಿರುಳು ಹೋರಾಡಿರುವ ತೀಸ್ತಾರಂತಹ ಸಾಮಾಜಿಕ ಹೋರಾಟಗಾರರನ್ನು ಜೈಲಿಗೆ ತಳ್ಳುವುದರಿಂದ ಮೋದಿಯವರ ಮೈಗೆ ಅಂಟಿಕೊಂಡ ಗುಜರಾತ್ ಹತ್ಯಾಕಾಂಡದ ಕಳಂಕವನ್ನು ತೊಳೆಯಲು ಸಾಧ್ಯವಿಲ್ಲ. ಬದಲಿಗೆ, ಒಂದು ಕಳಂಕದಿಂದ ಪಾರಾಗಲು ಹೊರಟು ಇನ್ನಷ್ಟು ಕಳಂಕಗಳನ್ನು ಮೈಮೇಲೆ ಬಳಿದುಕೊಳ್ಳಲು ಮುಂದಾಗಿದ್ದಾರೆ ಮೋದಿ ಮತ್ತು ಅವರ ಸಂಗಡಿಗರು. ಒಂದು ಬೃಹತ್ ಹತ್ಯಾಕಾಂಡ ನಡೆದಾಗ ಕನಿಷ್ಠ ಅದರ ಬಗ್ಗೆ ಮಾತನಾಡುವುದು, ಅದಕ್ಕೆ ಕಾರಣರಾದವರು ಯಾರು ಎನ್ನುವುದನ್ನು ಸಾರ್ವಜನಿಕವಾಗಿ ಚರ್ಚೆ ನಡೆಸುವುದು ಹೇಗೆ ತಾನೆ ಅಪರಾಧವಾಗುತ್ತದೆ? ಅದನ್ನು ಅಪರಾಧ ಎನ್ನುವ ಮೂಲಕ ಮುಂದಿನ ದಿನಗಳಲ್ಲಿ ನಡೆಯಬಹುದಾದ ಯಾವುದೇ ಗಲಭೆ, ದೊಂಬಿಗಳಿಗೆ ಸಂಬಂಧಿಸಿ ಸರಕಾರದ ವಿರುದ್ಧ ಮಾತನಾಡದಂತೆ ಸಾಮಾಜಿಕ ಹೋರಾಟಗಾರರ ಬಾಯಿ ಮುಚ್ಚಿಸಲು ಹೊರಟಂತಿದೆ.
ಇಂದು ವಿಶ್ವ ಪ್ರಶ್ನಿಸುತ್ತಿರುವುದು ‘ಮೋದಿಯವರ ವಿರುದ್ಧ ಆರೋಪ ಹೊರಿಸಿದ ಸಂಚುಕೋರರ ಕುರಿತಂತೆ’ ಅಲ್ಲ. ಗುಜರಾತ್ ಹತ್ಯಾಕಾಂಡದ ಹಿಂದಿರುವ ಶಕ್ತಿಗಳ ಕುರಿತಂತೆ. ಗುಜರಾತ್ ಹತ್ಯಾಕಾಂಡಕ್ಕೆ ಪೂರ್ವದಲ್ಲಿ ನಿರಂತರವಾಗಿ ಜನರನ್ನು ತಮ್ಮ ಭಾಷಣಗಳ ಮೂಲಕ ಪ್ರಚೋದಿಸುತ್ತಿದ್ದ ಸಂಘಪರಿವಾರ ನಾಯಕರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವುದನ್ನು ಜಗತ್ತು ಪ್ರಶ್ನಿಸುತ್ತಿದೆ. ಅವುಗಳಿಗೆ ಉತ್ತರ ನೀಡಲು ವಿಫಲರಾಗಿರುವ ಮೋದಿಯವರು, ಇದೀಗ ತನ್ನದೇ ಪೊಲೀಸರ ಮೂಲಕ ತನಗೆ ಕ್ಲೀನ್‌ಚಿಟ್ ನೀಡಿಕೊಂಡಿದ್ದಾರೆ. ಇದು ಹತ್ಯಾಕಾಂಡದಲ್ಲಿ ಮೋದಿಯವರ ಪಾತ್ರದ ಕುರಿತಂತೆ ಇನ್ನಷ್ಟು ಸಂಶಯಗಳನ್ನು ಮೂಡಿಸಿದೆ. ಇದೇ ಸಂದರ್ಭದಲ್ಲಿ ಗೋಧ್ರಾ ರೈಲಿನ ಮೇಲೆ ನಡೆದ ದಾಳಿಯ ಬಗ್ಗೆಯೂ ಮಾಧ್ಯಮಗಳು ತಮ್ಮ ಸಂಶಯಗಳನ್ನು ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಬೇಕಾಗಿದೆ. ಬೆಂಕಿ ಬಿದ್ದಿರುವುದು ರೈಲಿನ ಹೊರಗಿನಿಂದಲ್ಲ, ಒಳಗಿನಿಂದಲೇ ಬೆಂಕಿ ಹಬ್ಬಿದೆ ಎನ್ನುವ ವರದಿಯನ್ನು ಬ್ಯಾನರ್ಜಿ ಸಮಿತಿ ಹೇಳಿತ್ತು. ಗೋಧ್ರಾ ಬೆಂಕಿ ಅವಘಡವನ್ನು ಕೆಲವು ಮಾಧ್ಯಮಗಳು ಹತ್ಯಾಕಾಂಡಕ್ಕೆ ಪೂರಕವಾಗಿ ಬಳಸಿಕೊಂಡವು, ವದಂತಿಗಳನ್ನು ಹಬ್ಬಿಸಿ ಜನರನ್ನು ಕೆರಳಿಸಿದವು ಎಂಬ ಆರೋಪಗಳಿವೆ. ಗೋಧ್ರಾ ರೈಲಿಗೆ ಬೆಂಕಿ ಬಿದ್ದಾಗ ಸುಳ್ಳು ಸುದ್ದಿಗಳನ್ನು, ಸುಳ್ಳು ಭಾಷಣಗಳನ್ನು, ಉದ್ವಿಗ್ನಕಾರಿ ಹೇಳಿಕೆಗಳನ್ನು ನೀಡಿದ ಎಷ್ಟು ಮಂದಿಯನ್ನು ಗುಜರಾತ್ ಹತ್ಯಾಕಾಂಡದ ಸಂಚಿನಲ್ಲಿ ಬಂಧಿಸಲಾಗಿದೆ ಎನ್ನುವುದಕ್ಕೆ ಉತ್ತರ ಸಿಗುವವರೆಗೂ ಮೋದಿ ತನ್ನ ಮೇಲಿರುವ ಕಳಂಕದ ಕಲೆಗಳಿಂದ ಮುಕ್ತಿಯನ್ನು ಪಡೆಯುವುದು ಸಾಧ್ಯವಿಲ್ಲ.