ಇಂದಿನ ಸಂದರ್ಭಕ್ಕೆ ಮದ್ದಾಗಬಲ್ಲ ಪ್ರಜ್ಞಾವಂತ ನಾಸಿರುದ್ದೀನ್ ಶಾ
ಇಂದು ನಾಸಿರುದ್ದೀನ್ ಶಾ ಜನ್ಮದಿನ
ಇತ್ತೀಚೆಗೆ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಎಂಬ ಮಹಿಳೆ, ಮುಖಂಡರ ಮನಸ್ಸಂತೋಷಪಡಿಸಲೋ ಅಥವಾ ಭವಿಷ್ಯದ ಬದುಕನ್ನು ಭದ್ರಪಡಿಸಿಕೊಳ್ಳುವ ಸ್ವಾರ್ಥದಿಂದಲೋ, ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದರು. ಸಹಜವಾಗಿಯೇ ಅದು ವೈರಲ್ ಆಯಿತು. ಉತ್ತರ ಭಾರತದ ಕೆಲವು ಕಡೆ ಉದ್ವಿಗ್ನ ವಾತಾವರಣ ನಿರ್ಮಿಸಿತು, ಕೋಮು ಸಂಘರ್ಷಕ್ಕೆ ಕಾರಣವಾಯಿತು, ಸಾವು-ನೋವು ಕೂಡ ಸಂಭವಿಸಿತು.
ಇಷ್ಟಾದರೂ ಆಡಳಿತ ಪಕ್ಷ ಬಿಜೆಪಿ ನೂಪುರ್ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಬದಲಿಗೆ, ಆಕೆಯ ಪರ ವಕಾಲತ್ತು ವಹಿಸಿ ಕೋರ್ಟನ್ನು ಗುರಾಣಿಯನ್ನಾಗಿ ಬಳಸತೊಡಗಿತು. ಆಗ ಎನ್‌ಡಿ ಟಿವಿಯೊಂದಿಗೆ ಮಾತನಾಡಿದ ಜನಪ್ರಿಯ ನಟ ನಾಸಿರುದ್ದೀನ್ ಶಾ, ನೂಪುರ್ ಶರ್ಮಾಳ ದ್ವೇಷ ಕಾರುವ ಮಾತುಗಳನ್ನು ವೇನಂಗೆ ಹೋಲಿಸಿ, ಅತ್ಯಂತ ಕಟು ಶಬ್ದಗಳಿಂದ ಟೀಕಿಸಿದರು. ಸರಕಾರದ ನಡೆಯನ್ನು ಕೂಡ ಲೇವಡಿ ಮಾಡಿದರು. ಸಹಜವಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಒಳಗಾಗಿ ವೈರಲ್ ಆದರು. ಆದರೆ ನಾಸಿರುದ್ದೀನ್ ಶಾ, ತಾವು ಹೇಳಬೇಕಾದ್ದನ್ನು ಹೇಳಿಯೇ ತೀರುತ್ತೇನೆ, ಅದು ನನ್ನ ನಿಲುವು, ಬದ್ಧತೆ ಎಂದರು. ಬದ್ಧರಾಗಿಲ್ಲದ, ಧರ್ಮದ್ವೇಷದ ದಳ್ಳುರಿಯಲ್ಲಿ ದೇಶ ಬೇಯುತ್ತಿರುವ ಸಂಕಷ್ಟದ ಸಂದರ್ಭದಲ್ಲೂ ಮಾತನಾಡದ ಶಾರುಕ್, ಸಲ್ಮಾನ್ ಮತ್ತು ಆಮಿರ್ ಖಾನ್‌ರನ್ನು ಕುರಿತು ‘‘ನಾನು ಅವರ ಪರವಾಗಿ ಮಾತನಾಡಲಾರೆ. ಅವರು ಇರುವ ಸ್ಥಿತಿಯಲ್ಲಿ ನಾನಿಲ್ಲ. ಅವರು ತಾವು ತುಂಬಾ ಅಪಾಯಕ್ಕೆ ಒಳಗಾಗುತ್ತಿದ್ದೇವೆ ಎಂದು ಭಾವಿಸಿ ಮೌನವಾಗಿರಬಹುದು. ಆದರೆ ನಂತರದ ದಿನಗಳಲ್ಲಿ ಅವರು ಇದಕ್ಕಿಂತ ಹೆಚ್ಚಿನದನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಲಿದ್ದಾರೆ’’ ಎಂದು, ಮೌನವೆಷ್ಟು ಮಾರಕ ಎನ್ನುವುದನ್ನು ಮಾರ್ಮಿಕವಾಗಿ ಹೇಳಿದರು. ನೂಪುರ್ ಘಟನೆಗೂ ಸ್ವಲ್ಪಹಿಂದಕ್ಕೆ, ಇಡೀ ದೇಶವೇ ‘ದ ಕಾಶ್ಮೀರ್ ಫೈಲ್ಸ್’ ಎಂಬ ಚಿತ್ರದ ಕುರಿತು ಕಣ್ಣೀರು ಸುರಿಸುತ್ತಿದ್ದಾಗಲೂ ನಾಸಿರುದ್ದೀನ್ ಶಾ ಹೀಗೆಯೇ ಖಡಕ್ಕಾಗಿ ಮಾತನಾಡಿದ್ದರು. ‘‘ಆ ಸಿನೆಮಾ ಕಾಶ್ಮೀರಿ ಹಿಂದೂಗಳ ಸಂಕಟದ ಕಾಲ್ಪನಿಕ ಕತೆ, ಸರಕಾರ ಅದನ್ನು ಪ್ರಚಾರ ಮಾಡುವ ಮೂಲಕ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ, ಇದು ಪ್ರಜಾಪ್ರಭುತ್ವದ ಅಣಕ’’ ಎಂದು ಬಿಜೆಪಿಯ ಹಿಡನ್ ಅಜೆಂಡಾವನ್ನು ಬಯಲುಗೊಳಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದನಂತರ, ದೇಶಭಕ್ತಿ, ಇತಿಹಾಸ ಪುರುಷರ ಕತೆಗಳ ಸಿನೆಮಾಗಳು ಎಂದು ಪರಿಗಣಿಸಲ್ಪಡುವ ಪ್ರಾಜೆಕ್ಟ್‌ಗಳಲ್ಲಿ ತೊಡಗಿಕೊಂಡಿರುವ ನಟರು ಮತ್ತು ನಿರ್ಮಾಪಕರ ಬಗ್ಗೆಯೂ ನಾಸಿರುದ್ದೀನ್ ಶಾ ಕಟುವಾಗಿ ಕುಟುಕಿದರು. ಅಕ್ಷಯ್ ಕುಮಾರ್ ಅವರ ಇತ್ತೀಚಿನ ಸಿನೆಮಾಗಳ ಕುರಿತು ಮಾತನಾಡುತ್ತಾ, ‘‘ಅವರು ಗೆಲ್ಲುವ ಪಕ್ಷದ ಕಡೆ ಇರಲು ಬಯಸುತ್ತಾರೆ’’ ಎಂದು ಅಕ್ಷಯ್‌ನ ‘ಕಲಾ ಕೌಶಲ್ಯ’ವನ್ನು ಕಳಚಿಟ್ಟಿದ್ದರು. ಅಷ್ಟೇ ಅಲ್ಲ, ‘‘ಭವಿಷ್ಯದಲ್ಲಿ ಹುಸಿ ದೇಶ ಪ್ರೇಮದ ಸಿನೆಮಾ’’ಗಳು ಇನ್ನಷ್ಟು ಹೆಚ್ಚಲಿವೆ ಎಂದು ದೇಶದ ದುರ್ಗತಿಯ ಬಗ್ಗೆ ಭವಿಷ್ಯ ನುಡಿದಿದ್ದರು. ಹೀಗೆ ಕಾಲಕ್ಕೆ ತಕ್ಕಂತೆ ಸ್ಪಂದಿಸುತ್ತ ದೇಶ, ಧರ್ಮ ಮತ್ತು ಪ್ರಭುತ್ವ ಕುರಿತ ಮಾತನಾಡುತ್ತಲೇ ಬಂದ ನಾಸಿರುದ್ದೀನ್ ಶಾ, ತಾವು ಬೆಳೆದುಬಂದ ಸಿನಿ ಜಗತ್ತಿನ ಬಗ್ಗೆ ಜನಮಾನಸದಲ್ಲಿರಬಹುದಾದ ಭಾವನೆಗಳನ್ನು, ಭ್ರಮೆಗಳನ್ನು, ಕಲ್ಪನೆಗಳನ್ನು ಸಹ ಕಳಚಿಟ್ಟರು.
‘‘ನಟರು ತಮಗೆ ತಾವೇ ಸ್ಟಾರ್‌ಗಳೆಂದು, ಜಗತ್ತಿನ ಜನರನ್ನು ಸೆಳೆಯಬಲ್ಲ ಸೂಜಿಗಲ್ಲುಗಳೆಂದು ಭ್ರಮಿಸಿರುತ್ತಾರೆ. ನಟ ಅಂದರೆ ಯಾರು- ನಾವು ನೀವು. ನಟನೆ ಎಂದರೆ ಏನು- ಇತರ ಕೆಲಸಗಳಂತೆಯೇ ಅದು ಒಂದು. ಶ್ರದ್ಧೆ, ಕುಶಲತೆ, ಮನಸ್ಸು ಇದ್ದರೆ ಯಾರು ಬೇಕಾದರೂ ನಟರಾಗಬಹುದು’’ ಎಂದರು. ‘‘ನಟರಾರೂ ಕಲಾಸೇವಕರಲ್ಲ. ನಟನಾಗಬೇಕೆಂಬುದಿದ್ದರೆ ಅದು ನೀವು ಜನಪ್ರಿಯ ವ್ಯಕ್ತಿಯಾಗಬೇಕೆಂಬ ಆಸೆಯಿಂದ, ಹುಡುಗಿಯರು ಸಿಗುತ್ತಾರೆಂಬ ಸ್ವಾರ್ಥದಿಂದ, ಜನ ನಿಮ್ಮ ಮಾತು ಕೇಳುತ್ತಾರೆಂಬ ಭ್ರಮೆಯಿಂದ...’’ ಎಂಬ ಕಟುಸತ್ಯವನ್ನು ನುಡಿದು ಕಲಾವಿದರ ಸಿಟ್ಟನ್ನೂ ಶ್ರೀಸಾಮಾನ್ಯರ ಪ್ರೀತಿಯನ್ನೂ ಒಟ್ಟೊಟ್ಟಿಗೆ ಪಡೆದರು. ಅಷ್ಟೇ ಅಲ್ಲ, ‘‘ಭಾರತೀಯ ಚಿತ್ರರಂಗದಲ್ಲಿ ಅಮಿತಾಬ್ ಬಚ್ಚನ್‌ಗೆ ಬಹಳ ಎತ್ತರದ ಸ್ಥಾನ-ಮಾನವಿದೆ. ನನಗೂ ಇದೆ. ಅವರಿಗೆ ಕಮರ್ಷಿಯಲ್ ಚಿತ್ರಗಳಲ್ಲಿದ್ದರೆ, ನನಗೆ ಪರ್ಯಾಯ ಚಿತ್ರಗಳಲ್ಲಿ...’’ ಎಂದು ಹೇಳುವ ನಾಸಿರುದ್ದೀನ್, ‘‘ಸ್ಟಾರ್ ಎಂದಾಕ್ಷಣ ಅವನಿಗೆ ಇಂಥದೇ ಕುರ್ಚಿ ಹಾಕಬೇಕು ಎನ್ನುವುದು, ಕತೆಯನ್ನು ಸ್ಟಾರ್ ಸುತ್ತ ಹೆಣೆಯುವುದು, ಪರೇಶ್ ರಾವಲ್ ಎಂದಾಕ್ಷಣ ಹಾಸ್ಯ ಎನ್ನುವುದು, ಅಮರೀಶ್ ಪುರಿ ಎಂದಾಕ್ಷಣ ಕೊಲೆಗಡುಕ ಎನ್ನುವುದು... ಎಲ್ಲ ನಾನ್ಸೆನ್ಸ್’’ ಎಂದು ಚಿತ್ರರಂಗದ ಐಲಾಟಗಳ ಬಗ್ಗೆ, ಸ್ಟೀರಿಯೋಟೈಪ್ ಮೀಡಿಯಾ ವಿಶ್ಲೇಷಣೆಗಳ ಬಗ್ಗೆ ಯಾವ ಮುಲಾಜು ಇಲ್ಲದೆ ಸಾರ್ವಜನಿಕವಾಗಿ ಹೇಳುವ ಧೈರ್ಯವನ್ನೂ ಮೈಗೂಡಿಸಿಕೊಂಡರು.
ಹಾಗೆ ನೋಡಿದರೆ, ಅಮಿತಾಬ್ ರೀತಿ ಇವರು ಕೂಡ ಅದೆಷ್ಟೋ ಚಿಲ್ಲರೆ ಚಿತ್ರಗಳಲ್ಲಿ ಹೀರೋ ಆಗಿದ್ದಾರೆ. ಮರ ಸುತ್ತಿ, ಹಾಡಿ ಕುಣಿದಿದ್ದಾರೆ. ಗಾಸಿಪ್ ಕಾಲಂಗಳಲ್ಲಿ ಮಿಂಚಿದ್ದಾರೆ. ಕಪ್ಪುಕನ್ನಡಕ, ಬಿಳಿ ಸೂಟುಬೂಟುಗಳನ್ನು ತೊಟ್ಟು ಮಿರಿ ಮಿರಿ ಮಿಂಚಿದ್ದಾರೆ. ಗಜಗಾಂಭೀರ್ಯವನ್ನು ಪ್ರದರ್ಶಿಸಿದ್ದಾರೆ. ಆದರೆ ಆ ಕ್ಷಣವೇ ಸ್ಟಾರ್ ಎಂಬ ಹ್ಯಾಂಗೋವರ್‌ನಿಂದ ಹೊರಬಂದು ಶ್ರೀಸಾಮಾನ್ಯನಾಗಿದ್ದಾರೆ. ಮೊಹ್ರಾ, ಸರ್ಫರೋಶ್, ಕ್ರಿಶ್‌ಗಳಂತಹ ಪಕ್ಕಾ ಕಮರ್ಷಿಯಲ್ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿ, ಹಾಸ್ಯಾಸ್ಪದ ಹಾವಭಾವಗಳ ನಟನೆ ನೀಡಿ ‘ಇದೆಲ್ಲ ಬ್ಯಾಂಕ್ ಬ್ಯಾಲೆನ್ಸ್ ಗಾಗಿ’ ಎಂದು ಬದುಕಿನ ಕಟುವಾಸ್ತವವನ್ನು ತೆರೆದಿಟ್ಟಿದ್ದಾರೆ. ಇವರು ಕೂಡ ಎಲ್ಲರಂತೆಯೇ ಮಗನನ್ನು ಹೀರೋ ಮಾಡಲು ಕೈಯಲ್ಲಿದ್ದ ಹಣ ಹೂಡಿ, ಚಿತ್ರ ಮಾಡಿ, ತಮ್ಮ ಅನುಭವ ಮತ್ತು ಹಿರಿತನವನ್ನು ಅಡ ಇಟ್ಟು ಪ್ರಚಾರ ಮಾಡಿ, ನಾನೂ ನಿಮ್ಮಂತೆಯೇ ಎಂದಿದ್ದಾರೆ. ಕಲಾತ್ಮಕ-ಕಮರ್ಷಿಯಲ್ ಎರಡೂ ರೀತಿಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಾಸಿರುದ್ದೀನ್ ಶಾ ಹುಟ್ಟಿದ್ದು(ಜುಲೈ 20, 1950) ದೇಶ-ಭಾಷೆ-ಗಡಿಗಳನ್ನು ಮೀರಿದ ಕುಟುಂಬದಲ್ಲಿ. ಉತ್ತರಪ್ರದೇಶದ ಬಾರಬಂಕಿಯಲ್ಲಿ. ಆಫ್ಘಾನ್ ಮೂಲದ, ಪಾಕಿಸ್ತಾನದೊಂದಿಗೂ ಕರುಳುಬಳ್ಳಿ ಸಂಬಂಧವಿದ್ದ ಶ್ರೀಮಂತ ಕುಟುಂಬದಲ್ಲಿ. ಆ ಕಾರಣದಿಂದಾಗಿಯೇ ಅಜ್ಮೀರ್, ನೈನಿತಾಲ್, ಅಲಿಗಡ, ಡೆಲ್ಲಿಗಳಂತಹ ಪ್ರತಿಷ್ಠಿತ ನಗರಗಳಲ್ಲಿ ಅತ್ಯುತ್ತಮ ಶಿಕ್ಷಣವೇ ಸಿಕ್ಕಿತ್ತು. ಸಾಂಸ್ಕೃತಿಕವಾಗಿ ಸಮೃದ್ಧವಾಗಿದ್ದ ಕುಟುಂಬದಲ್ಲಿ ಹತ್ತು ಹಲವು ಕ್ಷೇತ್ರಗಳ ದಿಗ್ಗಜರೊಂದಿಗೆ ಬೆರೆತು ಬೆಳೆಯುವ ಜೊತೆ ಜೊತೆಗೇ ಶಾಲಾ ಕಾಲೇಜುಗಳಲ್ಲಿ ಸಿಕ್ಕ ಗುರುಗಳು ನಾಸಿರುದ್ದೀನ್ ಶಾರ ಬೌದ್ಧಿಕ ಜಗತ್ತನ್ನು ವಿಸ್ತರಿಸಿದರು. ಹಾಗೆಯೇ ದೇಶ, ಧರ್ಮ, ಭಾಷೆಗಳನ್ನು ಮೀರಿ ಯೋಚಿಸುವ ಚಿಂತನಾಕ್ರಮವನ್ನು ಕಲಿಸಿದರು.
ಹಾಗಾಗಿಯೇ ನಾಸಿರುದ್ದೀನ್ ಶಾ ಎಂದರೆ ಕೇವಲ ಬಾಲಿವುಡ್ ನಟನಲ್ಲ; ದೇಶ, ಭಾಷೆ, ಧರ್ಮಗಳನ್ನು ಮೀರಿದ ಮನುಷ್ಯ. 73ಕ್ಕೆ ಕಾಲಿಡುತ್ತಿರುವ ಈ ಹೊತ್ತಿನಲ್ಲೂ ವಿಭಿನ್ನವಾಗಿ ಯೋಚಿಸುವ, ಆರೋಗ್ಯಕರವಾಗಿ ಚಿಂತಿಸುವ, ಹಿಂದೂ-ಮುಸ್ಲಿಮ್ ಸಮಸ್ಯೆಗಳಿಗೆ ಸ್ಪಂದಿಸುವ ನಾಸಿರುದ್ದೀನ್ ಶಾ, ಇವತ್ತಿನ ಸಂದರ್ಭಕ್ಕೆ ಮದ್ದಾಗಬಲ್ಲ ಪ್ರಜ್ಞಾವಂತ ಮನಸ್ಸು. ಈ ಮಾಗಿದ ಘಾಟಿ ಮುದುಕನ ನಡೆ ಮತ್ತು ನುಡಿ ಬಹುತ್ವ ಭಾರತವನ್ನು ಮುನ್ನಡೆಸಬಲ್ಲ ಬೆಳಕಾಗಲಿ, ನಾಸಿರ್... ನೂರ್ಕಾಲ ಬಾಳಲಿ.