ತನಿಖಾ ಸಂಸ್ಥೆಗಳೇ ಶಿಕ್ಷೆ ಘೋಷಿಸಿದರೆ ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇತ್ತೀಚೆಗೆ ಜಾಮೀನು ಮಂಜೂರಾತಿಗೆ ಸಂಬಂಧಿಸಿ ತನಿಖಾ ಸಂಸ್ಥೆಗಳು ಮತ್ತು ಅಧೀನ ನ್ಯಾಯಾಲಯಗಳಿಗೆ ಮಹತ್ವದ ನಿರ್ದೇಶನಗಳನ್ನು ಹೊರಡಿಸಿರುವ ಸರ್ವೋಚ್ಚ ನ್ಯಾಯಾಲಯವು, 'ಬಂಧನವು ಸ್ವಾತಂತ್ರವನ್ನು ಮೊಟಕುಗೊಳಿಸುವ ಕರಾಳ ಕ್ರಮವಾಗಿದೆೆ. ಮತ್ತು ಅದನ್ನು ಮಿತವಾಗಿ ಬಳಸಬೇಕು' ಎಂದು ಸಲಹೆ ನೀಡಿದೆ. 'ಪ್ರಜಾಪ್ರಭುತ್ವ ಮತ್ತು ಪೊಲೀಸ್ ರಾಜ್ ಎರಡೂ ವಿರುದ್ಧಾತ್ಮಕವಾದುದು. ಪ್ರಜಾಪ್ರಭುತ್ವದಲ್ಲಿ ಪೊಲೀಸ್ ರಾಜ್ ಭಾವನೆಗಳು ಬರಬಾರದು' ಎಂದೂ ನ್ಯಾಯಾಲಯ ಎಚ್ಚರಿಸಿದೆ. ಪ್ರಕರಣವೊಂದರಲ್ಲಿ ಆರೋಪ ಸಿದ್ಧವಾಗುವವರೆಗೆ ವ್ಯಕ್ತಿ ನಿರಪರಾಧಿಯಾಗಿರುತ್ತಾನೆ ಎನ್ನುವ ಪ್ರಜ್ಞೆಯನ್ನು ತನಿಖಾ ಸಂಸ್ಥೆಗಳು ಹೊಂದಿರಬೇಕು ಎನ್ನುವ ಕಿವಿ ಮಾತನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ಹೇಳಿದೆ. 'ಜಾಮೀನು ಮಂಜೂರಾತಿಯನ್ನು ಕ್ರಮಬದ್ಧಗೊಳಿಸಲು ಜಾಮೀನು ಕಾಯ್ದೆಯ ಸ್ವರೂಪದಲ್ಲಿ ಪ್ರತ್ಯೇಕ ಶಾಸನವೊಂದನ್ನು ತರುವ ಬಗ್ಗೆ ಪರಿಶೀಲಿಸಬೇಕು' ಎಂದು ಸರಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಸುಪ್ರೀಂಕೋರ್ಟ್ ಇವೆಲ್ಲವನ್ನು ತನಿಖಾ ಸಂಸ್ಥೆಗಳಿಗೆ ಪದೇ ಪದೇ ನೆನಪಿಸುವಂತಹ ಸ್ಥಿತಿ ಇಂದು ದೇಶದಲ್ಲಿ ನಿರ್ಮಾಣವಾಗಿರುವ ಬಗ್ಗೆ ನಾವಿಂದು ವಿಷಾದಿಸಬೇಕಾಗಿದೆ. ಪೊಲೀಸ್ ಇಲಾಖೆಯೂ ಸೇರಿದಂತೆ ದೇಶದ ತನಿಖಾ ಸಂಸ್ಥೆಗಳು ತಮ್ಮ ವ್ಯಾಪ್ತಿಯಾಚೆಗೆ ಅಂದರೆ ನ್ಯಾಯಾಲಯ ನಿರ್ವಹಿಸುವ ಕಾರ್ಯದೊಳಗೆ ಹಸ್ತಕ್ಷೇಪ ನಡೆಸುತ್ತಿದೆ. ಅಂದರೆ ಆರೋಪಿಯನ್ನು ಬಂಧಿಸುವುದರ ಜೊತೆ ಜೊತೆಗೇ ಆತನ ವಿರುದ್ಧ ತೀರ್ಪನ್ನೂ ಘೋಷಿಸುತ್ತಿದೆ. ಪರಿಣಾಮವಾಗಿಯೇ ಆರೋಪಿ ವಿಚಾರಣೆಯೇ ಇಲ್ಲದೆ ಶಿಕ್ಷೆಯನ್ನು ಅನುಭವಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ದೇಶದಲ್ಲಿ ಜೈಲೊಳಗಿರುವ ನಾಲ್ಕು ಕೈದಿಗಳಲ್ಲಿ ಮೂವರು ವಿಚಾರಣಾಧೀನ ಕೈದಿಗಳು ಎನ್ನುವುದು 2020ರ ಸರಕಾರಿ ಅಂಕಿ ಅಂಶಗಳು ಹೇಳುತ್ತವೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ 2020ರಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆಯಲ್ಲಿ ಶೇ.12ರಷ್ಟು ಹೆಚ್ಚಾಗಿದೆ. ಇವರಲ್ಲಿ ಅರ್ಧದಷ್ಟು ಕೈದಿಗಳು ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಒಂದು ಜಿಲ್ಲಾ ಕಾರಾಗೃಹದಲ್ಲಿ ಅದರ ಸಾಮರ್ಥ್ಯಕ್ಕಿಂತ ಶೇ. 136 ಕೈದಿಗಳಿದ್ದಾರೆ ಎನ್ನುವುದನ್ನು ಅಂಕಿಅಂಶಗಳು ವಿವರಿಸುತ್ತವೆೆ. ವಿಚಾರಣಾಧೀನ ಕೈದಿಗಳೆಂದರೆ, ಆರೋಪಗಳನ್ನು ಹೊತ್ತುಕೊಂಡವರೇ ಹೊರತು, ಅವರು ಅಪರಾಧಿಗಳೆನ್ನುವುದು ನ್ಯಾಯಾಲಯದ ಮೂಲಕ ಸಾಬೀತಾಗಿಲ್ಲ. ಇವರಲ್ಲಿ ದೊಡ್ಡ ಸಂಖ್ಯೆ ನಿರಪರಾಧಿಗಳಿರಬಹುದು. ಪೊಲೀಸರ ತನಿಖೆಯ ತಪ್ಪುಗಳಿಂದ ಆರೋಪಿಗಳಾಗಿ ಜೈಲು ಸೇರಿರಬಹುದು ಅಥವಾ ರಾಜಕಾರಣಿಗಳ, ಶ್ರೀಮಂತರ ಒತ್ತಡಗಳಿಂದ ಪೊಲೀಸರೇ ಇವರನ್ನು ಜೈಲಿಗೆ ತಳ್ಳಿರಬಹುದು. ತನಿಖೆಯ ಗೊಂದಲಗಳಿಂದ ಆಕಸ್ಮಿಕವಾಗಿ ಜೈಲು ಸೇರಿದವರೂ ಇರಬಹುದು. ತನಿಖೆಯನ್ನು 'ಮುಗಿಸುವುದಕ್ಕಾಗಿಯೇ' ಪೊಲೀಸರೇ ಆರೋಪಿಗಳನ್ನು ಸ್ವಯಂ ಸೃಷ್ಟಿಸಿರಬಹುದು. ಆದುದರಿಂದ, ನ್ಯಾಯಾಲಯ ಆರೋಪಿಯೆಂದು ಘೋಷಿಸುವವರೆಗೂ ಇವರಿಗೆ ಎಲ್ಲರಂತೆ ಘನತೆಯಿಂದ ಬದುಕುವ ಹಕ್ಕು ಇದ್ದೇ ಇದೆ.
ದುರದೃಷ್ಟವಶಾತ್ ಇಂದು ನ್ಯಾಯಾಲಯದಲ್ಲಿ ಜಾಮೀನನ್ನು ತನ್ನದಾಗಿಸಿಕೊಳ್ಳುವುದು ಸಾಮಾನ್ಯ ವ್ಯಕ್ತಿಯೊಬ್ಬನಿಗೆ ಅಷ್ಟು ಸುಲಭದ ವಿಷಯವಲ್ಲ. ಹಣ, ಯೋಗ್ಯ ವಕೀಲರಿಲ್ಲದೆ ಜಾಮೀನನನ್ನು ತನ್ನದಾಗಿಸಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿಯಿದೆ. ಇಂದಿಗೂ ಈ ದೇಶದ ಜೈಲುಗಳಲ್ಲಿ ಜಾಮೀನು ನೀಡಲು ಜನರೇ ಇಲ್ಲದೆ ಕೊಳೆಯುತ್ತಿರುವ ಕೈದಿಗಳ ಸಂಖ್ಯೆ ದೊಡ್ಡದಿದೆ. ಎಂದೋ ಒಂದು ದಿನ ಇವರನ್ನು ನ್ಯಾಯಾಲಯ 'ನಿರಪರಾಧಿಗಳು' ಎಂದು ಘೋಷಿಸಿ ಬಿಡುಗಡೆ ಮಾಡಬಹುದು. ಆದರೆ ಅಷ್ಟು ಹೊತ್ತಿಗೆ ಅವರು ತಾವು ಮಾಡದ ತಪ್ಪಿಗಾಗಿ ಶಿಕ್ಷೆಯನ್ನು ಅನುಭವಿಸಿರುತ್ತಾರೆ ಮತ್ತು ಇದಕ್ಕಾಗಿ ಅವರನ್ನು ತಪ್ಪು ಕಾರಣಗಳಿಗೆ ಬಂಧಿಸಿದ ಪೊಲೀಸರು ಶಿಕ್ಷಿಸಲ್ಪಡುವುದಿಲ್ಲ. ಕನಿಷ್ಠ, ಈ ಅಮಾಯಕರಿಗೆ ನ್ಯಾಯಾಲಯದಿಂದ ಪರಿಹಾರವೂ ಸಿಗುವುದಿಲ್ಲ. ಹಾಗೆ ಪರಿಹಾರ ನೀಡುವ ವ್ಯವಸ್ಥೆಯೊಂದು ನಮ್ಮಲ್ಲಿದ್ದಿದ್ದರೆ, ಇಂದು ಈ ದೇಶದ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರಲಿಲ್ಲ. ಹೀಗೆ ಜಾಮೀನು ಇಲ್ಲದೆ, ನ್ಯಾಯಾಲಯದಿಂದ ಅಪರಾಧಿಯೆಂದು ಘೋಷಣೆಯೂ ಆಗದೆ ಕೊಳೆಯುತ್ತಿರುವ ಕೈದಿಗಳಲ್ಲಿ ಬಹುತೇಕರು ದಲಿತರು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೆನ್ನುವುದನ್ನು ಇನ್ನೊಂದು ಆತಂಕಕಾರಿ ಅಂಶ.
ಜೈಲಿನಲ್ಲಿರುವ ಪ್ರತಿ ಮೂವರು ಕೈದಿಗಳಲ್ಲಿ ಇಬ್ಬರು ದಲಿತ ಅಥವಾ ಹಿಂದುಳಿದ ಜಾತಿಗಳಿಗೆ ಸೇರಿದವರು. ಐವರು ವಿಚಾರಣಾಧೀನ ಕೈದಿಗಳ ಪೈಕಿ ಇಬ್ಬರು 10ನೇ ತರಗತಿಗಿಂತ ಕಡಿಮೆ ಶಿಕ್ಷಣ ಪಡೆದವರು. ಕಾಲುಭಾಗಕ್ಕಿಂತ ಹೆಚ್ಚಿನವರು ಅನಕ್ಷರಸ್ಥರು. ಜೊತೆಗೆ ಜಾತಿಯ ಕುರಿತ ಪೂರ್ವಾಗ್ರಹಗಳು ಇವರು ಜೈಲಿನಲ್ಲೇ ಕೊಳೆಯುವುದಕ್ಕೆ ಪ್ರಮುಖ ಕಾರಣಗಳಾಗಿವೆ. ಶ್ರೀಮಂತ ಅಥವಾ ಮೇಲ್ಜಾತಿಯ ಸಮುದಾಯದಿಂದ ಬಂದ ಆರೋಪಿಗಳು ಅದೆಷ್ಟು ದೊಡ್ಡ ಪ್ರಮಾಣದ ಆರೋಪಗಳನ್ನೇ ಹೊತ್ತ್ತುಕೊಂಡಿರಲಿ, ಅವರಿಗೆ ಸುಲಭದಲ್ಲಿ ಜಾಮೀನು ಸಿಕ್ಕಿ ಬಿಡುತ್ತದೆ ಎನ್ನುವುದನ್ನು ಸಮೀಕ್ಷೆಗಳು ಹೇಳುತ್ತವೆ. ಅಂದರೆ ಈ ದೇಶದಲ್ಲಿ ಕೆಳಜಾತಿಗೆ ಸೇರಿದವರು, ಅನಕ್ಷರಸ್ಥರು ಮತ್ತು ಬಡವರು ಹುಟ್ಟಿನಿಂದಲೇ ಅಪರಾಧಿಗಳು ಎನ್ನುವ ಮನಸ್ಥಿತಿ ಇಲ್ಲಿ ಕೆಲಸ ಮಾಡುತ್ತಿವೆ. 2020ರಲ್ಲಿ ಶೇ. 2ರಷ್ಟು ಕೈದಿಗಳು ಐದು ವರ್ಷಕ್ಕಿಂತಲೂ ಅಧಿಕ ಕಾಲ ಜೈಲಿನಲ್ಲಿ ಕಳೆದಿದ್ದಾರೆ. ಯಾವುದೇ ನ್ಯಾಯಾಲಯದ ಆದೇಶಗಳಿಲ್ಲದೆಯೇ, ಇವರು ಐದು ವರ್ಷಗಳ ಶಿಕ್ಷೆಯನ್ನು ಅನುಭವಿಸಿ ಒಂದು ದಿನ, ನಿರಪರಾಧಿಗಳಾಗಿ ಜೈಲಿನಿಂದ ಹೊರ ಬರುತ್ತಾರೆ. ಅಮಾಯಕನೊಬ್ಬ ತಪ್ಪು ಕಾರಣಗಳಿಂದ ಜೈಲು ಪಾಲಾಗಿ ಐದು ವರ್ಷ ಮಾಡದ ತಪ್ಪಿಗೆ ಜೈಲಿನಲ್ಲಿ ಕಳೆದು ಹೊರ ಬರುವಾಗ ಆತ ಕ್ರಿಮಿನಲ್ ಆಗಿ ರೂಪುಗೊಂಡರೆ ಅದರಲ್ಲಿ ಅದಕ್ಕೆ ನಮ್ಮ ವ್ಯವಸ್ಥೆಯೇ ಹೊಣೆ. ಹೀಗೆ, ಅಪರಾಧಿಗಳನ್ನು ತಿದ್ದಬೇಕಾದ ಜೈಲುಗಳು, ಅಮಾಯಕರನ್ನು ಕ್ರಿಮಿನಲ್‌ಗಳಾಗಿ ಪರಿವರ್ತಿಸುವ ಕಾರ್ಯದಲ್ಲಿ ತಿಳಿದೋ ತಿಳಿಯದೆಯೋ ತೊಡಗಿಕೊಂಡು ಬರುತ್ತಿವೆ.
ಆದರೆ ಕಳೆದ ಕೆಲವು ವರ್ಷಗಳಿಂದ ನಮ್ಮ ಜೈಲು 'ಅಕ್ಷರಸ್ಥರನ್ನು' ಕೂಡ ಗುರುತಿಸಿ 'ಶಿಕ್ಷೆ ಘೋಷಿಸಲು' ಶುರು ಹಚ್ಚಿದೆ. ಸರಕಾರದ ವಿರುದ್ಧ ಆರೋಪಗಳನ್ನು ಮಾಡುವುದು, ಸರಕಾರದ ನೀತಿಗಳನ್ನು ವಿರೋಧಿಸುವುದು, ಸಂತ್ರಸ್ತ ಜನರ ಪರವಾಗಿ ಮಾತನಾಡುವುದು ಇವೆಲ್ಲವನ್ನು 'ಪೊಲೀಸ್ ಇಲಾಖೆಗಳು ಮತ್ತು ತನಿಖಾ ಸಂಸ್ಥೆಗಳು' ಜಂಟಿಯಾಗಿ 'ಅಪರಾಧ'ಗಳ ಪಟ್ಟಿಯಲ್ಲಿ ಸೇರಿಸಿ ಬಿಟ್ಟಂತಿದೆ. ಪರಿಣಾಮವಾಗಿ, ಇಲ್ಲಿ ಅತ್ಯಾಚಾರಗೈದ ಆರೋಪಿಗಳು ಬೀದಿಯಲ್ಲಿ ನಿಶ್ಚಿಂತೆಯಿಂದ ಓಡಾಡುತ್ತಾರೆ. ಆದರೆ ಅದನ್ನು ವರದಿ ಮಾಡಲು ಹೋದ ಪತ್ರಕರ್ತ ವರ್ಷಗಟ್ಟಲೆ ಜೈಲಿನಲ್ಲಿ ಕಳೆಯುತ್ತಾನೆ. ನ್ಯಾಯಾಲಯವಿನ್ನೂ ಅಪರಾಧಿಯೆಂದು ಘೋಷಿಸದ ಸ್ಟಾನ್ ಸ್ವಾಮಿ ಜೈಲಿನಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಮೃತಪಡುತ್ತಾರೆ. ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ನೀಡುವ ಮೊದಲೇ, ತನಿಖಾ ಸಂಸ್ಥೆಗಳು ವಿಧಿಸಿದ ಮರಣದಂಡನೆ ಇದು. ಭಯೋತ್ಪಾದನೆಯ ಆರೋಪದಲ್ಲಿ ಈ ದೇಶದಲ್ಲಿ ಯಾರನ್ನೂ ಬಂಧಿಸಬಹುದು ಮತ್ತು ಅದನ್ನು ಯಾರು ಪ್ರಶ್ನಿಸಲೇ ಬಾರದು ಎನ್ನುವ ಅಘೋಷಿತ ನಿಯಮವೊಂದು ಕಳೆದ ಒಂದು ದಶಕದಿಂದ ಜಾರಿಯಲ್ಲಿದೆ. ಪ್ರಜಾಪ್ರಭುತ್ವದ ನೆರಳಿನಲ್ಲೇ 'ಪೊಲೀಸ್ ರಾಜ್' ತಲೆಯೆತ್ತಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆಯಾದರೂ, ಅದೂ ಅಸಹಾಯಕವಾಗಿದೆ.
ಪೊಲೀಸರಿಗೆ ಕಿವಿಮಾತು, ಎಚ್ಚರಿಕೆಗಳನ್ನಷ್ಟೇ ನೀಡಿ ತನ್ನ ಹೊಣೆಗಾರಿಕೆಗಳಿಂದ ಜಾರಿಕೊಳ್ಳುತ್ತಿದೆ. ಇಂದು ಪ್ರಜಾಸತ್ತೆಯೊಳಗೆ ಅಘೋಷಿತ ಪೊಲೀಸ್‌ರಾಜ್ ಸ್ಥಾಪನೆಯಾಗಿರುವುದಕ್ಕೆ ಕೇವಲ ರಾಜಕೀಯ ನಾಯಕರನ್ನು ಹೊಣೆ ಮಾಡಿ ಸುಮ್ಮನಿರುವಂತಿಲ್ಲ. ನ್ಯಾಯ ವ್ಯವಸ್ಥೆಯು ಇಂದು ಸೂತ್ರದ ಗೊಂಬೆಯಂತೆ ವರ್ತಿಸುತ್ತಿರುವುದರ ಪರಿಣಾಮವನ್ನು ಪ್ರಜಾಪ್ರಭುತ್ವ ಅನುಭವಿಸಬೇಕಾಗಿದೆ. ಪೊಲೀಸ್ ವ್ಯವಸ್ಥೆಯನ್ನು ಟೀಕಿಸುವ ಮೊದಲು, ನ್ಯಾಯ ವ್ಯವಸ್ಥೆ ತನ್ನನ್ನು ತಾನೇ ವಿಮರ್ಶಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಆಲ್ಟ್ ನ್ಯೂಸ್‌ನ ಪತ್ರಕರ್ತನ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಸುಪ್ರೀಂಕೋರ್ಟ್ ನೀಡಿದ ಆದೇಶ ನಮ್ಮ ನ್ಯಾಯವ್ಯವಸ್ಥೆಗೆ ಮಾದರಿಯಾಗಬೇಕಾಗಿದೆ. ನೂರು ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿ ಶಿಕ್ಷೆ ಅನುಭವಿಸುವಂತಾಗಬಾರದು ಎನ್ನುವ ಸಾಲಿಗೆ ನ್ಯಾಯಾಲಯ ಬದ್ಧವಾಗಿದ್ದಾಗ ಮಾತ್ರ, ತನಿಖಾ ಸಂಸ್ಥೆಗಳು ಸರಿದಾರಿಗೆ ಬರಬಹುದು.