varthabharthi


ಅನುಗಾಲ

ಮಾತಿನ ಅಂಕೆ ಮತ್ತು ಅಕ್ಷರ

ವಾರ್ತಾ ಭಾರತಿ : 21 Jul, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ನಾದಗಳೂ ನುಡಿಯಾಗುವ ಪ್ರಕೃತಿಯ ಸಹಜ ವ್ಯಾಪಾರದಲ್ಲಿ ಶೂನ್ಯವನ್ನು ಅಂಕೆಯೇ ಅಕ್ಷರವೇ ಎಂದು ತೀರ್ಮಾನಿಸಲು ಸಾಧ್ಯವಾಗದ ಅಥವಾ ಸಾಧ್ಯವಾಗುವವರೆಗೂ ಹೀಗೆಯೇ ಮಾತನಾಡಬೇಕು ಅಥವಾ ಈ ಪದಗಳನ್ನೇ ಮಾತನಾಡಬೇಕು ಮತ್ತು ಇಂತಹ ಪದಗಳನ್ನು ಬಳಸಬಾರದು ಎಂದು ಹೇಳುವುದು ತಪ್ಪಾಗಬಹುದು. ''ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್'' ಎಂಬುದು ಮನುಷ್ಯನಿಗೆ ಮಾತ್ರವಲ್ಲ ಆತನು ಮಾತನಾಡುವ ಭಾಷೆಗೂ ಅನ್ವಯಿಸುತ್ತದೆ. ಸಂಸತ್ತು 'ಗಲಿಬಿಲಿ ಮಂಟಪ'ವಾಗದೆ 'ಅನುಭವ ಮಂಟಪ'ವಾದಾಗ ಈಗ ಹುಟ್ಟಿಕೊಂಡ ಗೊಂದಲವಿರಲಾರದು.


ಮಾತು ಮತ್ತು ಮೌನದ ನಡುವೆ ಇರುವ ವ್ಯತ್ಯಾಸ ಗೊತ್ತಾಗುವುದು ಮಾತನ್ನು ನಿರ್ಬಂಧಿಸಿದಾಗ. ಮಾತು ಬಾರದವರಿಗೆ ಮಾತಿನ ಚಿಂತೆಯಿಲ್ಲ. ಮಾತು ತಿಳಿಯದವನಿಗೆ ಯಾರ ಹಂಗೂ ಇಲ್ಲ. ಮಾತು ಬಲ್ಲವನಿಗೆ ಅದನ್ನು ಬಳಸುವ ವಿಧಾನ ಗೊತ್ತಿರಬೇಕು. ಕೆಟ್ಟದಾಗಿ ಬಳಸಿದರೆ ಅದರ ಪರಿಣಾಮ ಗೊತ್ತಿರಬೇಕು ಮತ್ತು ಅದನ್ನು ಎದುರಿಸಲು ಸಿದ್ಧನಾಗಿರಬೇಕು. ಆದ್ದರಿಂದ ಮಾತು ಬಲ್ಲವರಿಗೆಲ್ಲ ಜಗಳವಿಲ್ಲ ಎಂಬ ಸೂಕ್ತಿ ಸರಿಯಾಗಲಾರದು. ನನಗೆ ಅನೇಕ ಬಾರಿ ಸೋಜಿಗವುಂಟಾಗಿರುವುದು ವಿಭಿನ್ನ ಪ್ರಕಾರಗಳಲ್ಲಿ ಸಂಚರಿಸುವ ಆದರೆ ಸ್ವತಂತ್ರವಾಗಿ ಬೆಲೆಯಿಲ್ಲದ ಈ '0' ಎಂಬ ಅಂಕೆ ಮತ್ತು 'ಂ' ಎಂಬ ಕನ್ನಡ ಅಕ್ಷರ. ಇವಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲದಿದ್ದರೂ ಇತರ ಸಂಖ್ಯೆಗಳನ್ನು, ಪದಗಳನ್ನು, ಜೋಡಿಸುವುದಕ್ಕೆ ಇವು ಬೇಕು. ಚಿಂತೆ ಮತ್ತು ಚಿತೆಗಳ ವ್ಯತ್ಯಾಸ! ನಾವು ಚಿಕ್ಕವರಾಗಿದ್ದಾಗ, ಅಂದರೆ ಈಗೊಂದು ಐದಾರು ದಶಕಗಳ ಹಿಂದೆ ಮೂಗನ್ನು ಕೈಯಲ್ಲೊತ್ತಿಕೊಂಡು ''ಗೋಳಿಮರದಡಿ ಸತ್ತೆ'' ಎಂದು ಗಟ್ಟಿಯಾಗಿ ಹೇಳುವ ಆಟ ಆಡುತ್ತಿದ್ದೆವು. ಅದು ''ಗೋಳಿಮರದಡಿ ಸಂತೆ'' ಎಂದು ಕೇಳುತ್ತಿತ್ತು. ನಂಬದಿದ್ದರೆ ಪ್ರಯೋಗ ಮಾಡಿ ನೋಡಿ!

'ವಿಶ್ವಕ್ಕೆ ಭಾರತದ ಕೊಡುಗೆ ಸೊನ್ನೆ' ಎಂದು ಹೇಳುವ ಕ್ರಮವಿತ್ತು. ಸೊನ್ನೆಯೆಂಬುದು ಅಂಕೆಯೋ ಸಂಖ್ಯೆಯೋ ಅಥವಾ ಅಕ್ಷರವೋ ಅಂತೂ ಇದೆಲ್ಲ ಸೇರಿದ ಒಂದು ವೃತ್ತ. ಅಂಕೆ ಎಂದರೆ ಮಿತಿ ಎಂದರ್ಥ. ಅಕ್ಷರ ಎಂದರೆ ನಾಶವಿಲ್ಲದ್ದು ಎಂದರ್ಥ. ಇವನ್ನು ಸಾಂದರ್ಭಿಕವಾಗಿ ಅನ್ಯಾರ್ಥಗಳಲ್ಲಿ ಬಳಸುತ್ತೇವೆ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳಿದರೆ ವ್ಯಂಗ್ಯವಾಗಿ, ಹಾಸ್ಯವಾಗಿ ಅರ್ಥ ನೀಡುತ್ತದೆ. ಹೀಗೆ ವ್ಯತಿರಿಕ್ತ ಅರ್ಥ ನೀಡುವ ರೀತಿಯಲ್ಲಿ ಹೇಳುವುದೂ ಒಂದು ಪ್ರತಿಭೆಯೇ ಸರಿ. 'ಶೂನ್ಯ ಸಂಪಾದನೆ' ಎಂಬ ಮಹತ್ವದ ಮಾತನ್ನು ಗಣಿತದಲ್ಲಿ ಹೇಳುವ ಕ್ರಮವಿದೆ. ಅವನಿಗೆ ಎಲ್ಲ ವಿಷಯಗಳಲ್ಲೂ ಶೂನ್ಯ ಸಂಪಾದನೆ ಎಂದು ಹೇಳಿ ಲೇವಡಿ ಮಾಡುವುದುಂಟು. ಆದರೆ 'ಶೂನ್ಯ ಸಂಪಾದನೆ' ಎಂಬ ಪದ ಹಾಸ್ಯಮೂಲದ್ದಲ್ಲ. ಅದು 'ಶರಣರು ರೂಪಿಸಿದ ಶೂನ್ಯತತ್ವ ಪರಿಕಲ್ಪನೆಯನ್ನು ಅವರ ವಚನಗಳ ಮೂಲಕ ಕಟ್ಟಿಕೊಡುವ ಒಂದು ಅಪೂರ್ವ ಪಠ್ಯಗ್ರಂಥ'. 'ಶೂನ್ಯ'ಕ್ಕೆ 'ಬ್ರಹ್ಮತತ್ವ'ವೆಂದು (''ಓಮ್ ಪೂರ್ಣಮಿದ...'' ಮಂತ್ರವನ್ನು ಉಲ್ಲೇಖಿಸಬಹುದು.) ಉಪನಿಷತ್ಕಾರರು ಹೇಳಿದರೆ 'ಬಯಲು', 'ನಿರವಯ' ಎಂದು ('ತಾನೆನ್ನದೆ ಇದಿರೆನ್ನದೆ ಏನೂ ಎನ್ನಲಿಲ್ಲದ ಅನಿರ್ವಾಚ್ಯವಾಗಿದ್ದ ವಸ್ತು...')ವಚನಕಾರರು ಹೇಳಿದ್ದಾರೆ. ನನಗೆ ಈ ಪದದ(ಗಳ) ಇನ್ನೊಂದು ಮುಖವನ್ನು ಅರಸುವ ಪ್ರೇರಣೆ ಸಿಕ್ಕಿದ್ದು 'ಶೂನ್ಯ ಸಂಪಾದನೆಗಳ ಸಂಖ್ಯಾ ನಿರ್ಣಯ ಮತ್ತು ಸ್ವರೂಪ' ಎಂಬ ಅಧ್ಯಯನದಿಂದ. ಸೊನ್ನೆಯ ಸುತ್ತ ಹೇಗೆ ಬೇಕಾದರೂ ಸುತ್ತಬಹುದು. ಅದೊಂದು ರೀತಿಯಲ್ಲಿ ನಮ್ಮ ಮಾಧ್ಯಮಗಳು ಪದೇಪದೇ ಉಪಯೋಗಿಸುವ ಹಾಗೆ 'ಸಂಶಯದ ಹುತ್ತ'. ಸೊನ್ನೆಯೆಂಬ ಅಂಕೆಯನ್ನು ಯಾವುದೇ ಇತರ ಸಂಖ್ಯೆಯ ಅಥವಾ ಅಂಕೆಯ ನಂತರ ಬಳಸಿದರೆ ಅದರ ಗಾತ್ರ ಮತ್ತು ತೂಕ ಒಟ್ಟಿನಲ್ಲಿ ಮಹತ್ವ ಹೆಚ್ಚುತ್ತದೆ. ಬೆರಳಚ್ಚುಗಾರರ ಪ್ರತಿಭೆಯಿಂದಲೇ ಹಲವಾರು ಅಂಕಿ-ಅಂಶಗಳು ಗಾತ್ರವನ್ನು ಹೆಚ್ಚಿಸಿಕೊಂಡದ್ದನ್ನು ಕಾಣುತ್ತೇವೆ. ಸರಕಾರದಲ್ಲಿ ಇದನ್ನು ವಿಶೇಷವಾಗಿ

ಕಾಣಬಹುದು. ಈ ಶೂನ್ಯವೆಂಬ ಪದ ಮತ್ತು ಅಂಕೆಗೇ ಇಷ್ಟು ಮಹತ್ವವಿರಬೇಕಾದರೆ ಉಳಿದ ಸ್ವರ ಮತ್ತು ವ್ಯಂಜನಗಳಿಗೆ ಎಷ್ಟು ಬೆಲೆಯಿರಬಹುದು!
ಪದಗಳಿಲ್ಲದೆ, ಶಬ್ದವಿಲ್ಲದೆ ಬದುಕು, ಜಗತ್ತು ಹೇಗೆ ಸಾಗೀತು? ಶೂನ್ಯದಲ್ಲಿ? ಯಾರಿಗೆ ಯಾವುದು ಹಿತವೋ ಅದನ್ನಷ್ಟೇ ಬಳಸುವುದು ಹೇಗೆ? ನದಿ ಇದೇ ರೀತಿ ಸದ್ದುಮಾಡಬೇಕೆಂದು, ಹಕ್ಕಿಗಳು, ಪ್ರಾಣಿಗಳು ಹೀಗೆಯೇ ಧ್ವನಿಸಬೇಕೆಂದು ನಿಯಂತ್ರಿಸುವುದು ಹೇಗೆ? ಕಾಗೆಯೂ ಕಪ್ಪು, ಕೋಗಿಲೆಯೂ ಕಪ್ಪು, ವಸಂತಕಾಲವು ಬಂದಾಗ ಕಾಗೆ ಕಾಗೆಯೇ, ಕೋಗಿಲೆ ಕೋಗಿಲೆಯೇ ಎಂದವರು ಈ ಪದ-ನಿಷೇಧದಡಿ ಹೇಗೆ ಬದುಕಬಹುದು?

ಮಹಾರಾಜನನ್ನು 'ಕತ್ತೆ' ಎಂದು ಬೈದದ್ದಕ್ಕೆ ಒಬ್ಬನಿಗೆ ಶಿಕ್ಷೆಯಾಯಿತಂತೆ. ಆತ ಶಿಕ್ಷೆ ಅನುಭವಿಸಿದರೂ ತನ್ನ ಹಾಸ್ಯಪ್ರಜ್ಞೆಯನ್ನು ಕಳೆದುಕೊಳ್ಳಲಿಲ್ಲ. ಹೊರಗೆ ಬಂದೊಡನೇ ಮತ್ತೆ ಮಹಾರಾಜನಿಗೆ ''ತಮ್ಮನ್ನು ಕತ್ತೆಯೆಂದು ಹೇಳಿದ್ದಕ್ಕೆ ನನಗೆ ಶಿಕ್ಷೆ ನೀಡಿದಿರಿ; ಕತ್ತೆಯನ್ನು ಮಹಾರಾಜನೆಂದು ಕರೆದರೆ ಅದು ಮಾನಹಾನಿಯಾಗುತ್ತದೆಯೇ?'' ಎಂದು ಕೇಳಿದನಂತೆ. ಮಹಾರಾಜನು ತಬ್ಬಿಬ್ಬಾಗಿ ''ಇಲ್ಲ''ವೆಂದನಂತೆ. ಆಗ ಆ ಪ್ರಜೆಯು ಪಕ್ಕದಲ್ಲಿದ್ದ ಒಂದು ಕತ್ತೆಯನ್ನು ''ಮಹಾರಾಜರೇ'' ಎಂದು ಕರೆದನಂತೆ! ಹೀಗೆ ಪದಗಳನ್ನು ಹೇಗೂ ಯಾವ ಉದ್ದೇಶಕ್ಕೂ ಬಳಸಬಹುದು. ಶೂನ್ಯದಿಂದ ಆರಂಭವಾದ ಭಾಷೆ ಮತ್ತು ಗಣಿತ ಮತ್ತೆ ಶೂನ್ಯವನ್ನು ತಲುಪುವವರೆಗೆ ಮಾತಿನ ಬದುಕು. ಭಾಷೆಯ ಬಳಕೆಯನ್ನು ತೀರಾ ಹಗುರಾಗಿಯೂ ಅತ್ಯಂತ ಗಂಭೀರವಾಗಿಯೂ ಚಿಂತಿಸಬಹುದು. ಇದು ಚಿಂತೆಯೇ ಅಥವಾ ಚಿಂತನೆಯೇ ಎಂದು ಹೇಳುವುದೂ ಕಷ್ಟ. ತ.ರಾ.ಸು. ಅವರ ಕಥೆ '0-0=0' ಒಂದು ಮಾರ್ಮಿಕ ಕಥೆ. ಒಂದರ್ಥದಲ್ಲಿ ಕನ್ನಡದ ಮೊದಲ ನವ್ಯ ಹಾಗೂ ಅಸಂಗತ ಕಥೆ. ಈ ಸೊನ್ನೆ ಅಂಕೆಯೇ ಅಥವಾ ಅಕ್ಷರವೇ ಎಂಬ ಜಿಜ್ಞಾಸೆ ಹುಟ್ಟಿದರೆ ಅದರಿಂದ ಹೊರಬರುವುದು ಕಷ್ಟ.

ಇದೀಗ ಸಂಸತ್ತಿನಲ್ಲಿ ಪ್ರಯೋಗಿಸಬಾರದೆಂಬ ಒಂದಷ್ಟು ಪದಗಳು ಬೀದಿಗೆ ಬಿದ್ದಿವೆ. ಅವು ಈ ವರೆಗೂ ಅಷ್ಟಾಗಿ ಸಾರ್ವಜನಿಕ ಮನ್ನಣೆಯನ್ನಾಗಲೀ, ಗಮನವನ್ನಾಗಲೀ ಸೆಳೆೆದಿರಲಿಲ್ಲ. ವಿದ್ಯಾರ್ಥಿಗಳು ತೀರ ಅಸಭ್ಯವಾಗಿ ವರ್ತಿಸತೊಡಗಿದರೆ ''ಇದು ಪಾರ್ಲಿಮೆಂಟಲ್ಲ'' ಎಂದು ನಮ್ಮ ಅಧ್ಯಾಪಕರೊಬ್ಬರು ನಮಗೆ ಬೈಯುತ್ತಿದ್ದರು! ಆಗ ಜನರಾಗಲೀ ಸರಕಾರವಾಗಲೀ ಈಗಿನಷ್ಟು ತೆಳು ಚರ್ಮದ ಹೊದಿಕೆಯನ್ನು ಹಾಕಿರಲಿಲ್ಲವಾದ್ದರಿಂದ ಅವೆಲ್ಲ ತಿಳಿಹಾಸ್ಯವಾಗಿ ದಾಟಿಹೋಗುತ್ತಿದ್ದವು. ಈಗ ಅಂತಹ ಮಾತು ಬಂದರೆ ತಕ್ಷಣ ಶಾಸಕರೋ ಸಂಸದರೋ 'ಹಕ್ಕು ಚ್ಯುತಿ'ಯ ಪ್ರಶ್ನೆಯನ್ನೊಡ್ಡಿ ದೊಡ್ಡ ವಿವಾದವಾಗಿಸಿ ತಮ್ಮ ಹತ್ತು ಹಲವು ಹಗರಣಗಳನ್ನು ಮುಚ್ಚಿಹಾಕಬಲ್ಲವಾಗಿದ್ದವು!

ಇಷ್ಟಕ್ಕೂ ಈಗ ಪ್ರತಿಬಂಧವಾಗಿರುವ ಪದಗಳು ಯಾವುವು? ಭ್ರಷ್ಟ, ಲಜ್ಜೆಗೆಟ್ಟ, ಆಷಾಢಭೂತಿ, ಸರ್ವಾಧಿಕಾರ, ನಾಟಕ, ಅಹಂಕಾರ/ದರ್ಪ, ಪ್ರದರ್ಶನ, ಅಸತ್ಯ/ಸುಳ್ಳು, ವಿನಾಶಪುರುಷ, ಮೊಸಳೆ ಕಣ್ಣೀರು, ಚೇಲ, ದ್ವಿಮುಖ ವ್ಯಕ್ತಿತ್ವ, ಜಯಚಂದ, ಬಾಲಬುದ್ಧಿ ಮುಂತಾದವುಗಳು. ಇವೆಲ್ಲ ಸಾಂದರ್ಭಿಕ ಉದ್ಗಾರಗಳು. ಇವನ್ನು ಬಳಸದಿದ್ದರೆ ಭಾಷೆ ತನ್ನ ಸೊಗಸನ್ನೂ ಸೊಗಡನ್ನೂ ಕಳೆದುಕೊಂಡೀತು. ಪ್ರಾಯಃ ಸರಕಾರವು ತನ್ನ ಚರ್ಮವನ್ನು ತೆಳುಗೊಳಿಸಿದೆ ಅಥವಾ ಇಂತಹ ಎಲ್ಲ ಪದಗಳೂ ತನಗೇ ಅನ್ವಯಿಸುತ್ತದೆಯೆಂಬ ಸುಪ್ತ ಅರಿವಿನ ಬಾಧೆಗೊಳಗಾಗಿದೆ. ಈಗ ಅದು ನೇರ ಚುಚ್ಚುತ್ತಿರಬೇಕು. ಈ ಮತ್ತು ಇಂತಹ ಪದಗಳಿಲ್ಲದೆ ಯಾವ ಮಾತೂ ಕೃತಿಯೂ ಪರಿಣಾಮಕಾರಿಯಾಗದು. ಇವು ರೂಪಕಗಳಂತೆ, ಉಪಮೆಗಳಂತೆ ಆಲಂಕಾರಿಕವಾಗಿ ಬಳಸಲ್ಪಡುತ್ತವೆ. ನಮ್ಮ ಸಾಹಿತಿಗಳು ಇವುಗಳನ್ನು ತೊರೆದು ಬರೀ ಸಾತ್ವಿಕ, ನಿರುಪದ್ರವಿ ಪದಗಳನ್ನು ಆಯ್ಕೆಮಾಡಿ ಪ್ರಯೋಗಿಸಿದರೆ ಅದನ್ನು ಓದುವುದೇ ಸಾಧ್ಯವಾಗದು. (ಈಗಿನ ರಾಜಕತೆಯ ಸಾಹಿತಿಗಳು ಇವನ್ನು ತೊರೆಯಬಹುದು. ಅವರಲ್ಲಿ ಬಹಳಷ್ಟು ಮಂದಿ ಸರಕಾರಕ್ಕೆ ''ತೊರೆದು ಜೀವಿಸಬಹುದೆ ನಿಮ್ಮ ಚರಣಗಳ'' ಎನ್ನುವ ಹಂತ ತಲುಪಿದ್ದಾರೆ!)

ಶಶಿ ತರೂರ್ ಅವರಂಥವರು ಬಳಸುವ ಕ್ಲಿಷ್ಟಪದಗಳನ್ನು ಇನ್ನೂ ನಿಷೇಧಿಸಿಲ್ಲ; ಅವು ಅರ್ಥವಾಗಿರಲಿಕ್ಕಿಲ್ಲ! ಆಳುವವರಿಗೆ ತಮ್ಮ ಅಧಿಕಾರವನ್ನು ಮುಂದುವರಿಸುವುದಷ್ಟೇ ಮುಖ್ಯವಾಗಿರುತ್ತದೆ. ಆ ವ್ಯಾಯಾಮದಲ್ಲಿ ಪ್ರಜೆಗಳಿಗೆ ಒಳ್ಳೆಯದಾದರೆ ಅದು ಪ್ರಜೆಗಳ ಪುಣ್ಯ; ದೇಶದ ಪುಣ್ಯ. ಆಳುವವರು ತಮಗೆ ನೂರು ಅಂಕಗಳು ಲಭಿಸಬೇಕೆಂದು ಮತ್ತು ಆಳಿಸಿಕೊಳ್ಳುವವನಿಗೆ ಶೂನ್ಯ ಅಂಕ ಪ್ರಾಪ್ತವಾದರೂ ಸಾಕೆಂಬ ನಿಲುವು ಇರುತ್ತದೆ. ವಸಾಹತುಶಾಹಿ ಆಡಳಿತದಲ್ಲೇ ಇದನ್ನು ಜನರು ತಡೆದುಕೊಳ್ಳಲಿಲ್ಲ. ಸೆಟೆದು ನಿಂತರು. ಅಪಾರವಾದ ಬೆಲೆ ತೆತ್ತಾದರೂ ಇದನ್ನು ಉಳಿಸಿಕೊಂಡರು. ಅಂದಮೇಲೆ ಸ್ವತಂತ್ರ (ಹಾಗೊಂದಿದ್ದರೆ) ಆಳ್ವಿಕೆಯಲ್ಲಿ ತಡೆದುಕೊಂಡಾರೇ? ಸರಕಾರಕ್ಕೆ (ಅಂದರೆ ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಸಂಬಂಧಿಸಿದ ಎಲ್ಲ ರಾಜಕಾರಣಿಗಳು ಮತ್ತು ಅಧಿಕಾರಿಗಳು) ಮತ್ತು ಇತರ ಜನಪ್ರತಿನಿಧಿಗಳಿಗೆ, ರಾಜಕಾರಣಿಗಳಿಗೆ, ಗೊತ್ತಿರಬೇಕಾದ ಮತ್ತು ಅವರು ಇತರರ ಸಂದರ್ಭದಲ್ಲಿ ಅಷ್ಟಾಗಿ ಗಮನಿಸದ ಅಂಶವೆಂದರೆ ಭಾರತೀಯ ಸಂವಿಧಾನದ ವಿಧಿ 19 ವಾಕ್ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ನೀಡಿದೆ. ಇದು ಯಾರೊಬ್ಬನ ಕೃಪೆಯೂ ಅಲ್ಲ. ಸಂವಿಧಾನವೆಂಬ ಸರ್ವೋಚ್ಚ ಶಕ್ತಿಯ ಕೃಪೆ.

ಈ ವಿಧಿಯ (2) ನೇ ಅಂಗವು ರಾಷ್ಟ್ರದ ಸಾರ್ವಭೌಮತೆ, ಏಕತೆ, ರಾಷ್ಟ್ರದ ಭದ್ರತೆ, ವಿದೇಶಗಳೊಂದಿಗೆ ಸೌಹಾರ್ದ ಸಂಬಂಧ, ಸಾರ್ವಜನಿಕ ಶಿಸ್ತು, ಶಿಷ್ಟತೆ ಅಥವಾ ನೈತಿಕತೆ ಅಥವಾ ನ್ಯಾಯಾಲಯ ನಿಂದನೆಗೆ ಸಂಬಂಧಿಸಿದಂತೆ ಮಾನಹಾನಿ ಅಥವಾ ಯಾವುದಾದರೂ ಅಪರಾಧಕ್ಕೆ ಪ್ರಚೋದನೆ ಇವನ್ನು ಯುಕ್ತ ರೀತಿಯಲ್ಲಿ ನಿರ್ಬಂಧಿಸುವ ಹಕ್ಕಿನ ಚಲಾವಣೆಗೆ ಆಡಳಿತಕ್ಕೆ ಅವಕಾಶ ನೀಡುತ್ತದೆ. ಇನ್ನುಳಿದಂತೆ ಸೂಕ್ತ ಕಾನೂನಿನ ಪ್ರಕ್ರಿಯೆಗಳ ಕುರಿತು (3), (4) (5) ಮತ್ತು (6) ಉಪವಿಧಿಗಳು ವಿವರಿಸುತ್ತವೆ. ಪ್ರಜಾಪ್ರಭುತ್ವದ ಅಡಿಗಲ್ಲಾದ ಈ ವಿಧಿಯು ಈ ಚೌಕಟ್ಟಿನೊಳಗೆ ಅನಿರ್ಬಂಧಿತ ಸ್ವಾತಂತ್ರ್ಯವನ್ನು ನೀಡುತ್ತದೆ. ಇವು ಆಡಳಿತ ಮತ್ತು ಪ್ರಜೆಯ ನಡುವೆ ತಾಕಲಾಟ ತಂದಾಗಲೆಲ್ಲ ನ್ಯಾಯಾಂಗವು ಈ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದೆ. ಈ ಸ್ವಾತಂತ್ರ್ಯದಡಿ ಮಾಹಿತಿ ತಂತ್ರಜ್ಞಾನ, 2000ದ ಕಲಮು 66-ಎಯನ್ನು ಸಂವಿಧಾನ ವಿರೋಧಿಯೆಂದು ಸರ್ವೋಚ್ಚ ನ್ಯಾಯಾಲಯವು ಅನೂರ್ಜಿತಗೊಳಿಸಿದೆ. ಕಳೆದ ಸುಮಾರು ಏಳು ದಶಕಗಳ ಹಾದಿಯಲ್ಲಿ ಪ್ರಜೆಗಳು ಅನೇಕ ಕಂಟಕಗಳನ್ನು ಎದುರಿಸಿದಾಗಲೂ ಮತ್ತೆ ಅವುಗಳಿಂದ ಪಾರಾಗಿದ್ದರೆ ಅದು ಸಂವಿಧಾನದ ಕೃಪೆಯಿಂದಲೇ ಹೊರತು ಆಳುವವರ ವಿವೇಕದಿಂದಲ್ಲ.

ಇದು ಸಾಮಾಜಿಕ ಜಾಲತಾಣಗಳ ಕಾಲ. ಶಬ್ದ ನಿರ್ಬಂಧಗಳ ಕಾಲವೂ ಹೌದು. ಆದರೆ ತಮಾಷೆಯೆಂದರೆ ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟರ್‌ನಂತಹ ಜಾಲತಾಣಗಳು ಭಾರೀ ರೋಚಕ ವಿಚಾರಗಳಲ್ಲಷ್ಟೇ ಅಶ್ಲೀಲತೆ, ಅಸಭ್ಯತೆ, ಅನೈತಿಕತೆಗಳನ್ನು ನಿಯಂತ್ರಿಸುತ್ತವೆಯೇ ಹೊರತು ಸಾಮಾನ್ಯರ ಬದುಕಿಗಿನ್ನೂ ಪ್ರವೇಶಿಸಿಲ್ಲ. ಆದರೆ ಅವೂ ಸರಕಾರಕ್ಕೆ ತಲೆಬಾಗುವ ಶೋಚನೀಯ ನಿರ್ಧಾರಗಳನ್ನು ಕೈಗೊಳ್ಳುತ್ತವೆ. ಅಧಿಕಾರಸ್ಥರನ್ನು ಎದುರುಹಾಕಿಕೊಳ್ಳುವುದು ತುಂಬಾ ತ್ರಾಸದಾಯಕ ವಿಚಾರ. ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸಬಹುದು. ಆದರೆ ಸರಕಾರವು ಪ್ರಜೆಗಳ ತೆರಿಗೆ ಹಣದಲ್ಲಿ ತನ್ನ ಅಧಿಕಾರವನ್ನು ಬಳಸುತ್ತದೆ. ಪ್ರಶ್ನಿಸುವ ಯಾರೊಬ್ಬನಾದರೂ ತನ್ನದೇ ಸಮಯ, ಹಣ ಮತ್ತು ಶ್ರಮವನ್ನು ಬಳಸಬೇಕಿದೆ. ಪರಿಸ್ಥಿತಿ ಹೀಗಿರುವಾಗ ಸಂಸತ್ತು ಕಾನೂನಿನ ಮೂಲಕ ಶಬ್ದಗಳನ್ನು ಅರ್ಥಕೋಶದಿಂದ, ಮಾತಿನ ಕೋಶದಿಂದ ತೆಗೆದುಹಾಕಬೇಕೇ ಹೊರತು ಅಧಿಸೂಚನೆಗಳಿಂದಲ್ಲ. ಇದೇ ಶಬ್ದಗಳನ್ನು ಬಳಸಬೇಕು, ಇದನ್ನು ಬಳಸಬಾರದು ಎಂದೆಲ್ಲ ಘೋಷಿಸುವುದು, ಸೂಚಿಸುವುದು ಅವಿವೇಕದ ಪರಮಾವಧಿ. ಅದು ಬುದ್ಧಿಶೂನ್ಯತೆಯನ್ನು ತೊರಿಸುತ್ತದೆಯೇ ಹೊರತು ಪೂರ್ಣತೆಯನ್ನಲ್ಲ.

ಪೂರ್ಣತೆಯೆಂಬುದು ಒಂದು ಆದರ್ಶ. ಅದನ್ನು ಸಾಧಿಸುವುದು ಸಾಧ್ಯವಾಗದು. ಆದರೆ ಅದರೆಡೆಗೆ ಏರಲು ಪ್ರಾಮಾಣಿಕ, ವೈಯಕ್ತಿಕ ಮತ್ತು ಸಾಮೂಹಿಕ ಪ್ರಯತ್ನವನ್ನು ನಡೆಸುವುದು ಸಮಾಜದ ಗುರುತರ ಕರ್ತವ್ಯ. ಜನಪ್ರತಿನಿಧಿಗಳಿಗೆ- ಅದು ಸಂಸತ್ತಾದರೂ ಸರಿ, ಶಾಸನ ಸಭೆ/ಪರಿಷತ್ತಾದರೂ ಸರಿ, ಅಲ್ಲಿ ಶೂನ್ಯಚಿಂತನೆಗಳಿಗೆ ಅವಕಾಶವಿರಬಾರದು. ಹೇಳುವವನು ಹೇಗಾದರೂ ಹೇಳಿಯೇ ಹೇಳುತ್ತಾನೆ. ಸಂಕೇತಾಕ್ಷರಗಳು ಚಾಲ್ತಿಗೆ ಬಂದದ್ದೇ ಇಂತಹ ನಿರ್ಬಂಧಗಳಿಂದ. ''ಆತ ಸತ್ಯ ಹರಿಶ್ಚಂದ್ರ!'' ಎಂಬ ಪದಗಳು ಭಿನ್ನ ಅರ್ಥ ಸ್ಫುರಿಸುವಂತೆ ಮಾತನಾಡಬಹುದು. ಸಂಸದ ಶಶಿತರೂರ್ ಅವರು ಬಳಸುವ ವಿಶಿಷ್ಟ/ವಿಚಿತ್ರ ಆದರೆ ಅರ್ಥಕೋಶವನ್ನು ಮೀರದ ಪದಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಸರಕಾರ ಗೂಗಲ್ ಮೊರೆಹೋಗಬೇಕಾದೀತು. ಕರ್ನಾಟಕದ ಜನಪದರಾಡುವ ಮಾತು ಸುಶಿಕ್ಷಿತರಿಗೆ ಅಸಭ್ಯವೆಂದು ಅನ್ನಿಸಬಹುದು. ಆದರೆ ಅವು ಸಹಜ ಸಂವಹನ. ಮಾತನ್ನಾಡುವವನಿಗೂ ಅದನ್ನು ಸ್ವೀಕರಿಸುವವನಿಗೂ ಅದು ವಿಚಿತ್ರವೆನ್ನಿಸುವುದಿಲ್ಲ. ಜನರೇ ಹೀಗಿರಬೇಕಾದರೆ ನಮ್ಮನ್ನು ಪ್ರತಿನಿಧಿಸುವವರು ಯಾಕೆ ಇಂತಹ ಹುಂಬತನವನ್ನು ಪ್ರದರ್ಶಿಸುತ್ತಾರೋ?

ಒಟ್ಟಾರೆ ನೋಡಿದರೆ ನಾದಗಳೂ ನುಡಿಯಾಗುವ ಪ್ರಕೃತಿಯ ಸಹಜ ವ್ಯಾಪಾರದಲ್ಲಿ ಶೂನ್ಯವನ್ನು ಅಂಕೆಯೇ ಅಕ್ಷರವೇ ಎಂದು ತೀರ್ಮಾನಿಸಲು ಸಾಧ್ಯವಾಗದ ಅಥವಾ ಸಾಧ್ಯವಾಗುವವರೆಗೂ ಹೀಗೆಯೇ ಮಾತನಾಡಬೇಕು ಅಥವಾ ಈ ಪದಗಳನ್ನೇ ಮಾತನಾಡಬೇಕು ಮತ್ತು ಇಂತಹ ಪದಗಳನ್ನು ಬಳಸಬಾರದು ಎಂದು ಹೇಳುವುದು ತಪ್ಪಾಗಬಹುದು. ''ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್'' ಎಂಬುದು ಮನುಷ್ಯನಿಗೆ ಮಾತ್ರವಲ್ಲ ಆತನು ಮಾತನಾಡುವ ಭಾಷೆಗೂ ಅನ್ವಯಿಸುತ್ತದೆ. ಸಂಸತ್ತು 'ಗಲಿಬಿಲಿ ಮಂಟಪ'ವಾಗದೆ 'ಅನುಭವ ಮಂಟಪ'ವಾದಾಗ ಈಗ ಹುಟ್ಟಿಕೊಂಡ ಗೊಂದಲವಿರಲಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)