ಮುಕೇಶ್: ವಾಯ್ಸ್ ಆಫ್ ದಿ ಮಿಲೇನಿಯಂ!
ಇಂದು ಮುಕೇಶ್‌ರ 99ನೇ ಜನ್ಮದಿನ
ಮುಕೇಶ್ ಒಂದು ಬಗೆಯಲ್ಲಿ ಒಳ್ಳೆಯ ವ್ಯಕ್ತಿತ್ವದ ಮನುಷ್ಯ. ಇನ್ನೊಂದು ಬಗೆಯಲ್ಲಿ ಒಳ್ಳೆಯ ಹಾಡುಗಾರ, ಹಾಡಲಿಕ್ಕಾಗಿಯೇ ಬದುಕಿದ ವ್ಯಕ್ತಿ. ತನ್ನ ಕಂಠದ ಮೂಲಕ ಭಾವನೆಗಳನ್ನು ಬಸಿದು ಕೊಡುತ್ತಿದ್ದಂತಹ ಭಾವಜೀವಿ. ವಾಯ್ಸಿ ಆಫ್ ದಿ ಮಿಲೇನಿಯಂ, ಟ್ರಾಜಿಡಿ ಕಿಂಗ್ ಎಂದೆಲ್ಲ ಕರೆಸಿಕೊಳ್ಳುತ್ತಿದ್ದ ಮುಕೇಶ್ ತರಹ ಹಾಡಲು ಎಲ್ಲರೂ ತುಡಿಯುತ್ತಿದ್ದುದರಲ್ಲಿ ಆಶ್ಚರ್ಯವಿಲ್ಲ. ಆತನ ಗಾಯನ ಮೇಲುನೋಟಕ್ಕೆ ಸರಳವಾಗಿ ಕಾಣುತ್ತಿತ್ತು. ಆದರೆ, ಅದು ಹಾಗಿರಲಿಲ್ಲ. ಅದೇ ಮುಕೇಶ್‌ಗಿದ್ದ ತಾಕತ್ತು. ಹೃದಯ ಶಿವ
‘‘ಆತನ ಧ್ವನಿ ನಂಗಿಷ್ಟ, ಅಮ್ಮಾ! ಆತ ಬಂದು ನನಗಾಗಿ ಹಾಡಿದರೆ ನಾನು ಗುಣಮುಖಳಾಗುತ್ತೇನೆ.’’ ಪುಟಾಣಿ ಮನೋರೋಗಿ ಹುಡುಗಿ ನಿದ್ದೆಗಣ್ಣಿನಲ್ಲಿ ತೊದಲಿತ್ತು. ‘‘ತಮಾಷೆ ಮಾಡಬೇಡ! ನಿನಗೇನಾದರೂ ಹುಚ್ಚು ಹಿಡಿದಿದೆಯಾ? ಆತನೊಬ್ಬ ದೊಡ್ಡ ವ್ಯಕ್ತಿ...’’ ಅಮ್ಮನ ಮಾತಿನಲ್ಲಿ ವಾಸ್ತವಿಕ ಪ್ರಜ್ಞೆ ಇತ್ತು. ‘‘ಅವರು ಒಂದು ಹಾಡನ್ನು ಹಾಡಲು ಎಷ್ಟು ಚಾರ್ಜ್ ಮಾಡುತ್ತಾರೆ ಅಂತ ನಿನಗೆ ಗೊತ್ತಾ?’’ ಅಲ್ಲಿ ಯಾರೋ ಗೊಣಗಿದರು, ‘‘ಆ ವ್ಯಕ್ತಿ ಯಾವಾಗಲೂ ಬ್ಯುಸಿ ಇರುತ್ತಾರೆ.’’
‘‘ಅದೆಲ್ಲ ನನಗೆ ಬೇಕಾಗಿಲ್ಲ, ಆ ವ್ಯಕ್ತಿ ನನಗಾಗಿ ಹಾಡಬೇಕು.. ನನ್ನ ಕಣ್ಣೆದುರೇ ಹಾಡಬೇಕು’’ ಆ ಪುಟ್ಟ ಹುಡುಗಿಯ ಗದ್ಗದಿತ ದನಿಯಲ್ಲಿ ಹಂಬಲ ಮತ್ತು ಆ ಗಾಯಕನ ಬಗೆಗಿನ ಅತೀವವಾದ ಅಭಿಮಾನವಿತ್ತು. ದಿನಗಳೆದಂತೆ ಆ ಪುಟಾಣಿ ಹುಡುಗಿಯ ಆರೋಗ್ಯ ಸುಧಾರಣೆಯಾಗಲೇ ಇಲ್ಲ. ಇನ್ನು ಬಿಗಡಾಯಿಸುತ್ತಲೇ ಸಾಗಿತು. ಆ ಹುಡುಗಿಗೆ ಚಿಕಿತ್ಸೆ ನೀಡುತ್ತಿದ್ದ ಪ್ರಸಿದ್ಧ ಮನೋವಿಶ್ಲೇಷಕ ಸುಧೀರ್ ಕಕ್ಕರ್ ಬೇರೆ ದಾರಿ ಕಾಣದೆ ಆ ಪ್ರಖ್ಯಾತ ಗಾಯಕನನ್ನು ಭೇಟಿ ಮಾಡಿ ಆ ರೋಗಗ್ರಸ್ತ ಮಗುವಿನ ಮನಸ್ಥಿತಿ, ಹಂಬಲವನ್ನು ವಿವರಿಸುತ್ತಾ, ‘‘ತಾವು ಬಂದು ಹಾಡಿದರೆ ಆ ಮಗುವಿನ ಆರೋಗ್ಯ ಚೇತರಿಸಿಕೊಳ್ಳುತ್ತದೆ’’ ಎಂದು ಹೇಳಿದಾಗ ಆ ಗಾಯಕ, ‘‘ಆಗಲಿ, ನಾನು ಇಂದೇ ಬಂದು ಆ ಮಗುವಿಗಾಗಿ ಹಾಡುತ್ತೇನೆ. ಸ್ವಲ್ಪತಡವಾಗಬಹುದು. ಹೆಚ್ಚು ತಡವಾಗಲಾರದು!’’ ಅಂದರು. ಕೊಟ್ಟ ಮಾತಿನಂತೆ ಆ ಗಾಯಕ ಬಂದು ಆ ಮಗುವಿಗಾಗಿ ಹಾಡಿದರು, ಆ ಮಗುವಿನ ಮನಸ್ಸನ್ನು ಖುಷಿ ಪಡಿಸಿದರು. ಅಂದಿನ ಹಿಂದಿ ಸಂಗೀತ ಲೋಕದ ಕೀರ್ತಿಯ ಶಿಖರವೇರಿದ್ದ ಆ ಲೆಜೆಂಡ್ ಹಾಡುವುದನ್ನು ಇಡೀ ಆಸ್ಪತ್ರೆಯ ಸಿಬ್ಬಂದಿ ಕಣ್ತುಂಬಿಕೊಂಡಿತು. ತನ್ನ ಕಣ್ಣನ್ನು ತಾನೇ ನಂಬದಾಯಿತು. ಆ ಗಾಯಕ ಎಷ್ಟು ಸರಳ, ಎಷ್ಟು ವಿರಳ ಅನ್ನುವುದಕ್ಕೆ ಮಾರನೆಯ ದಿನ ಆ ಪ್ರಸಿದ್ಧ ಗಾಯಕ ತನ್ನ ಆತ್ಮೀಯರಲ್ಲಿ ‘‘ಆ ಪುಟ್ಟ ಹುಡುಗಿಗಿಂತ ನಾನೇ ಹೆಚ್ಚು ಸುಖಿ!’’ ಎಂದು ಹೇಳಿಕೊಂಡ ಮಾತು ಸಾಕ್ಷಿಯಾಗುತ್ತದೆ.
ಆ ಪ್ರಖ್ಯಾತ ಗಾಯಕ ಬೇರಾರೂ ಅಲ್ಲ. ಆ ವ್ಯಕ್ತಿಯ ಹೆಸರು ಮುಕೇಶ್. ನಟ ಮೋತಿಲಾಲ್ ಮೂಲಕ ಬೆಳಕಿಗೆ ಬಂದ ಈ ವ್ಯಕ್ತಿ ಬದುಕಿದ್ದರೆ ಇಂದಿಗೆ ಬರೋಬ್ಬರಿ ತೊಂಬತ್ತೊಂಭತ್ತು ತುಂಬುತ್ತಿತ್ತು! ತನ್ನ ಗಾಯನಕ್ಕಾಗಿ ಒಮ್ಮೆ ರಾಷ್ಟ್ರಪ್ರಶಸ್ತಿ, ನಾಲ್ಕು ಬಾರಿ ಫಿಲಂ ಫೇರ್ ಪ್ರಶಸ್ತಿ ಗಳಿಸಿದ ಇಂತಹ ಮೇರುಗಾಯಕನನ್ನು ಜ್ಞಾಪಿಸಿಕೊಳ್ಳುವ ಸಲುವಾಗಿಯೇ ಈ ಬರಹ. ಮುಕೇಶ್ ಒಂದು ಬಗೆಯಲ್ಲಿ ಒಳ್ಳೆಯ ವ್ಯಕ್ತಿತ್ವದ ಮನುಷ್ಯ. ಇನ್ನೊಂದು ಬಗೆಯಲ್ಲಿ ಒಳ್ಳೆಯ ಹಾಡುಗಾರ, ಹಾಡಲಿಕ್ಕಾಗಿಯೇ ಬದುಕಿದ ವ್ಯಕ್ತಿ. ತನ್ನ ಕಂಠದ ಮೂಲಕ ಭಾವನೆಗಳನ್ನು ಬಸಿದು ಕೊಡುತ್ತಿದ್ದಂತಹ ಭಾವಜೀವಿ. ವಾಯ್ಸಿ ಆಫ್ ದಿ ಮಿಲೇನಿಯಂ, ಟ್ರಾಜಿಡಿ ಕಿಂಗ್ ಎಂದೆಲ್ಲ ಕರೆಸಿಕೊಳ್ಳುತ್ತಿದ್ದ ಮುಕೇಶ್ ತರಹ ಹಾಡಲು ಎಲ್ಲರೂ ತುಡಿಯುತ್ತಿದ್ದುದರಲ್ಲಿ ಆಶ್ಚರ್ಯವಿಲ್ಲ. ಆತನ ಗಾಯನ ಮೇಲುನೋಟಕ್ಕೆ ಸರಳವಾಗಿ ಕಾಣುತ್ತಿತ್ತು. ಆದರೆ, ಅದು ಹಾಗಿರಲಿಲ್ಲ. ಅದೇ ಮುಕೇಶ್‌ಗಿದ್ದ ತಾಕತ್ತು.
ಇಂತಹ ಮುಕೇಶ್ ಬಾಲ್ಯ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಇವರ ತಂದೆಯ ಹೆಸರು ಜೋರಾವರ್, ತಾಯಿ ಇಂದ್ರಾಣಿ. ಮನೆಯ ಹತ್ತು ಮಕ್ಕಳಲ್ಲಿ ಈತ ಆರನೇ ಮಗು. ಹತ್ತನೇ ಕ್ಲಾಸಿನಲ್ಲಿ ಓದುತ್ತಿರುವಾಗಲೇ ಶಾಲೆಯನ್ನು ಬಿಟ್ಟ ಮುಕೇಶ್ ಚಿಕ್ಕಂದಿನಿಂದಲೇ ಸುಂದರ್ ಪ್ಯಾರಿ ಅನ್ನುವವರ ಮಾರ್ಗದರ್ಶನದಲ್ಲಿ ತಮ್ಮ ಮನೆಯಲ್ಲೇ ಸಂಗೀತಾಭ್ಯಾಸ ಶುರು ಮಾಡಿದರು. ಇಷ್ಟಕ್ಕೂ ಸುಂದರ್ ಪ್ಯಾರಿ ಮುಕೇಶ್ ಸಹೋದರಿಗೆ ಸಂಗೀತ ಕಲಿಸಲೆಂದು ಬಂದು ಮುಕೇಶ್ ಒಳಗೆ ಸುಪ್ತವಾಗಿ ಅಡಗಿದ್ದ ಹಾಡುಗಾರನನ್ನು ಪತ್ತೆ ಮಾಡಿ ಸರಿಯಾದ ಮಾರ್ಗದರ್ಶನ, ಅಭ್ಯಾಸ ಶುರು ಮಾಡಿದರು, ಸಂಗೀತ ವಾದ್ಯಗಳನ್ನು ಹೇಗೆ ನುಡಿಸಬೇಕು ಅನ್ನುವುದರ ಪ್ರಾಥಮಿಕ ಪಾಠ ಶುರು ಮಾಡಿದರು. ಕಾಲ ಉರುಳುತ್ತಾ ಹೋದಂತೆ ಮುಕೇಶ್ ಒಳಗಿದ್ದ ಹಾಡುಗಾರ ಚಿಗುರುತ್ತಾ ಹೋದ.
ಅವರಿಗಿದ್ದ ಶ್ರದ್ಧೆ, ಪ್ರತಿಭೆ, ಆಸಕ್ತಿಯನ್ನು ಗಮನಿಸಿದ ದೂರದ ಸಂಬಂಧಿ ನಟ ಮೋತಿಲಾಲ್ ಹೆಚ್ಚಿನ ಕಲಿಕೆಗಾಗಿ ಮುಕೇಶ್ ಅವರನ್ನು ಮುಂಬೈಗೆ ಕರೆದೊಯ್ದು ಪಂಡಿತ್ ಜಗನ್ನಾಥ್ ಪ್ರಸಾದ್ ಹತ್ತಿರ ಕಲಿಯಲು ದಾರಿ ಮಾಡಿಕೊಟ್ಟರು. ಇದೇ ವೇಳೆಗೆ ಅಂದರೆ 1941ರಲ್ಲಿ ತೆರೆಗೆ ಬಂದ ‘ನಿರ್ದೋಶ್’ ಚಿತ್ರದಲ್ಲಿ ತಾವೇ ಹಾಡಿದ ಹಾಡಿಗೆ ತಾವೇ ಅಭಿನಯಿಸುವ ಅವಕಾಶ ಮುಕೇಶ್‌ಗೆ ಸಿಕ್ಕಿತು. ಆದರೆ ಒಬ್ಬ ಹಿನ್ನೆಲೆ ಗಾಯಕನಾಗಿ ಬ್ರೇಕ್ ಸಿಕ್ಕಿದ್ದು 1945ರಲ್ಲಿ ಬಿಡುಗಡೆಯಾದ ‘ಪೆಹಲಿ ನಜರ್’ ಚಿತ್ರದ ಅನಿಲ್ ಬಿಸ್ವಾಸ್ ಸಂಗೀತದ ‘ದಿಲ್ ಜಲ್ತಾ ಹೈ ತೋ ಜಲ್ನೇ ದೇ’ ಹಾಡಿನ ಮೂಲಕ. ಮುಹಮ್ಮದ್ ರಫಿ, ಕಿಶೋರ್ ಕುಮಾರ್ ನಡುವೆಯೇ ಹಿಂದಿ ಸಂಗೀತ ಲೋಕದಲ್ಲಿ ಮುಕೇಶ್ ಅನ್ನುವ ಹೆಸರು ಇನ್ನಷ್ಟೇ ಪ್ರಚಲಿತವಾಗುವ ಕಾಲದಲ್ಲೇ ಮುಕೇಶ್ ತಮ್ಮ ಇಪ್ಪತ್ತ ಮೂರನೆಯ ಜನ್ಮದಿನದಂದು ಅಂದರೆ 22 ಜುಲೈ 1946ರಂದು ರವಿಚಂದ್ ತ್ರಿವೇದಿ ಅನ್ನುವ ಆಗರ್ಭ ಶ್ರೀಮಂತನ ಮಗಳು ಸರಳಾದೇವಿಯನ್ನು ದೇವಸ್ಥಾನವೊಂದರಲ್ಲಿ ಸರಳವಾಗಿ ಲಗ್ನವಾದರು. ನೆಟ್ಟಗೆ ಕೆಲಸವಿಲ್ಲದ, ಸೂಕ್ತ ಸಂಬಳವಿಲ್ಲದ ಮುಕೇಶ್ ಬಗ್ಗೆ ಸರಳಾದೇವಿಯ ತಂದೆಗೆ ಅಸಮಾಧಾನವಿತ್ತು. ಸಿನೆಮಾಗಳಿಗೆ ಹಾಡುವುದು ಯಾವ ಸೀಮೆಯ ಕೆಲಸವೆಂದು ಇವರನ್ನು ತುಚ್ಛವಾಗಿ ಕಂಡರು. ಇದೆಲ್ಲವನ್ನು ಮೀರಿ ಐದು ಮಕ್ಕಳ ತಂದೆಯಾದ ಮುಕೇಶ್ ದಾಂಪತ್ಯ ಜೀವನದಲ್ಲಿ ಸುಖ, ನೆಮ್ಮದಿ ಕನಸಾಯಿತು. ಕಡೆಗೆ ವಿಚ್ಛೇದನ ಕೊಡಬೇಕಾಯಿತು.
ನಟ ಮೋತಿಲಾಲ್ ಮುಕೇಶ್‌ಗೆ ಆತ್ಮಸ್ಥೈರ್ಯ ತುಂಬಿ ಜೊತೆಗೆ ನಿಂತರು. ದುಃಖ ದುಮ್ಮಾನಗಳಿಗೆ ಕಿವಿಯಾದರು, ಕಣ್ಣೀರಿಗೆ ಭುಜ ಕೊಟ್ಟರು. ಆದರೆ ಮುಕೇಶ್ ಅಮೆರಿಕಕ್ಕೆ ಹೊರಡುವ ಮುನ್ನ, ಅಂದರೆ 22 ಜುಲೈ, 1976ರಲ್ಲಿ ತಮ್ಮ ವಿಚ್ಛೇದಿತ ಹೆಂಡತಿ ಜೊತೆ ತಮ್ಮ ಮೂವತ್ತನೇ ವಿವಾಹ ವಾರ್ಷಿಕೋತ್ಸವವನ್ನು ಆತ್ಮೀಯರ ಒತ್ತಾಯದ ಮೇರೆಗೆ ಆಚರಿಸಿಕೊಂಡರು. ವಿಪರ್ಯಾಸವೆಂದರೆ ಅದಾದ ಒಂದೇ ತಿಂಗಳಲ್ಲಿ ಅಂದರೆ 27 ಆಗಸ್ಟ್ 1976ರಂದು ಅಮೆರಿಕದ ಡೆಟ್ರಾಯಿಟ್‌ನಲ್ಲಿ ಕಾರ್ಯಕ್ರಮವೊಂದನ್ನು ನೀಡಲು ಹೋಗಿದ್ದಾಗ ಹೃದಯಾಘಾತದಿಂದ ಮುಕೇಶ್ ಮರಣ ಹೊಂದಿದರು. ಅವರು ತೀರಿಕೊಂಡ ಸಲುವಾಗಿ ಕಾರ್ಯಕ್ರಮವನ್ನು ಲತಾ ಮಂಗೇಶ್ಕರ್, ಮುಕೇಶ್ ಅವರ ಪುತ್ರ ನಿತಿನ್ ಮುಕೇಶ್ ಜೊತೆಗೂಡಿ ಮುಗಿಸಿಕೊಟ್ಟರು. ಕ್ರಮೇಣ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತಂದು ಅವರಿಗೆ ಸಲ್ಲಬೇಕಾದ ಸಕಲ ಗೌರವಗಳನ್ನು ಸಲ್ಲಿಸಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಭಾರತೀಯ ಚಿತ್ರರಂಗದ ಅನೇಕರು ಅಲ್ಲಿ ನೆರೆದು ಮುಕೇಶ್ ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾದರು. ಕಂಬನಿಗರೆದರು. ಮುಕೇಶ್ ತನ್ನ ಚಿತ್ರಗಳಿಗೆ ಹಾಡಿದ್ದ ಎವರ್ ಗ್ರೀನ್ ಹಾಡುಗಳಾದ ‘ಜೀನಾ ಯಹಾ ಮರ್ನಾ ಯಹಾ’, ‘ಕೆಹ್ತಾ ಹೈ ಜೋಕರ್’ ಮತ್ತು ‘ಜಾನೆ ಕಹಾ ಗಯೇ ವೋ ದಿನ್’ ಮುಂತಾದ ಹಾಡುಗಳನ್ನು ನೆನೆದು ‘‘ಧ್ವನಿಯನ್ನು ನಾನು ಕಳೆದುಕೊಂಡೆ’’ ಎಂದು ರಾಜ್ ಕಪೂರ್ ಗೋಳಾಡಿದರು. ‘‘ನಾನು ಶರೀರವಷ್ಟೇ, ಮುಕೇಶ್ ನನ್ನ ಆತ್ಮ!’’ ಅನ್ನುವ ತಮ್ಮದೇ ಮಾತನ್ನು ನೆನೆದು ಗಳಗಳನೆ ಅತ್ತರು. ತಮಗೆ ಹಾಡಿದ್ದ ‘ದಿಲ್ ತಡಪ್ ತಡಪ್ ಕೆ ಕೆಹ್ ರಹಾ’ ನೆನೆದು ದಿಲೀಪ್ ಕುಮಾರ್ ಕಣ್ಣೀರಿಟ್ಟರು. ಮುಕೇಶ್ ಸರಿ ಸುಮಾರು ನೂರ ಹತ್ತು ಹಾಡುಗಳನ್ನು ರಾಜ್ ಕಪೂರ್ ಚಿತ್ರಗಳಿಗೆ, ಸುಮಾರು ಹತ್ತೊಂಭತ್ತು ಹಾಡುಗಳನ್ನು ದಿಲೀಪ್ ಕುಮಾರ್ ಚಿತ್ರಗಳಿಗೆ ಹಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇಂಜಿನಿಯರ್ ಒಬ್ಬನ ಮಗನಾಗಿ ಹುಟ್ಟಿದ ಮುಕೇಶ್ ತನ್ನ ಐವತ್ತ ಮೂರನೇ ವಯಸ್ಸಿಗೆ ತೀರಿಕೊಂಡರು. ಅದಕ್ಕೂ ಮೊದಲು ಹಾಡುವುದರ ಜೊತೆಗೆ ‘ಮಶೂಕ’ ಅನ್ನುವ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದರು. ಜೊತೆಗೆ ‘ಅನುರಾಗ್’ ಅನ್ನುವ ಸಿನೆಮಾದಲ್ಲಿ ಸುರೈಯಾ ಜೊತೆಗೆ ಡ್ಯುಯೆಟ್ ಹಾಡಿದ ಇವರು ಆ ಚಿತ್ರಕ್ಕೆ ಸಹ-ನಿರ್ಮಾಣ ಮತ್ತು ಸಂಗೀತದ ಹೊಣೆಯನ್ನೂ ಹೊತ್ತಿದ್ದರು. ಅದೇಕೋ ಆ ನಿಟ್ಟಿನಲ್ಲಿ ಅವರು ಗೆಲ್ಲಲು ಸಾಧ್ಯವಾಗಲಿಲ್ಲ. ಗಾಯಕರಾಗಿ ಗಳಿಸಿದ ಜನಪ್ರಿಯತೆ ಅಲ್ಲಿ ಸಿಗಲಿಲ್ಲ. ಅದಿರಲಿ, ಮುಕೇಶ್ ಹಾಡುಗಳು ಯಾಕೆ ಅಷ್ಟು ಜನಪ್ರಿಯವೆಂದು ಆಲೋಚಿಸುವಾಗ ಆತ ಒಂದು ಹಾಡನ್ನು ಹಾಡುವ ಮುನ್ನ ತಾನು ಮಾಡಿಕೊಳ್ಳುತ್ತಿದ್ದ ಸಿದ್ಧತೆಗಳನ್ನು ಅರಿಯಬೇಕಾಗುತ್ತದೆ. ಸಾಹಿತ್ಯವನ್ನು, ಒಂದೊಂದು ಪದದೊಳಗಿನ ಭಾವನೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಆ ಸಾಲುಗಳನ್ನು ತಮ್ಮ ಆಳಕ್ಕೆ ಇಳಿಸಿಕೊಂಡು, ಹಾಡಿನ ಸನ್ನಿವೇಶವನ್ನು ಅರ್ಥ ಮಾಡಿಕೊಂಡು ತಾವೇ ಪಾತ್ರವಾಗುತ್ತಾ... ನಂತರ ಹಾಡುತ್ತಿದ್ದರು. ಈ ಕಾರಣದಿಂದಲೇ ಅವರ ಶೇ. 90ರಷ್ಟು ಹಾಡುಗಳು ಸೂಪರ್ ಹಿಟ್ ಆದವು. ಅವರ ಹಾಡುಗಳಲ್ಲಿ ನೋವಿದೆ, ದುರಂತವಿದೆ, ಮಾನವನ ತೊಳಲಾಟ, ಅಸಹಾಯಕತೆ, ಭಾವುಕತೆ, ಆಳದ ವ್ಯಥೆ, ಒಂಟಿತನದ ದುಗುಡ, ಏಕಾಂತದ ಸ್ವಗತ, ಅಂತರ್ಮುಖತೆಯ ಧ್ಯಾನ, ಮೌನ... ಇತ್ಯಾದಿ ಇತ್ಯಾದಿ. ಹಾಗಂತ ಮುಕೇಶ್ ಹಾಡುಗಾರಿಕೆ ಬಗ್ಗೆ ತಕರಾರುಗಳೇ ಇರಲಿಲ್ಲವೆಂದಲ್ಲ. ಮುಕೇಶ್ ತಾಳಕ್ಕೆ, ಶ್ರುತಿಗೆ ಹಾಡುವುದಿಲ್ಲ.. ನೋಟೇಷನ್ ಬಿಟ್ಟು ತಮಗೆ ಬೇಕಾದ ಹಾಗೆ ಹಾಡುತ್ತಾರೆ, ಹೈ ಪಿಚ್‌ನಲ್ಲಿ ಹಾಡಲು ಅವರಿಂದ ಸಾಧ್ಯವಾಗುವುದಿಲ್ಲ... ಅನ್ನುವ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದವು.
ಈ ಕುರಿತು ತಮ್ಮ ಮತ್ತು ಮುಕೇಶ್ ಕಾಂಬಿನೇಷನ್ ನಲ್ಲಿ ‘ಮುಝಕೋ ಇಸ್ ರಾತ್ ಕಿ ತನ್ಹಾಯಿ ಮೇ’, ‘ವಖ್ತ್ ಕರ್ತಾ ಜೋ ವಫಾ’, ‘ಮೈ ತೊ ಇಕ್ ಖ್ವಾಬ್ ಹೂ’ ತರಹದ ಮಾಸ್ಟರ್ ಪೀಸ್‌ಗಳನ್ನು ನೀಡಿದ ಪ್ರಖ್ಯಾತ ಸಂಗೀತ ನಿರ್ದೇಶಕ ಕಲ್ಯಾಣ್‌ಜಿ ಹೇಳುವುದಿಷ್ಟೇ: ‘‘ಹೃದಯದಿಂದ ನೇರವಾಗಿ ಬರುವ ಯಾವುದೇ ವಿಷಯ ನಿಮ್ಮನ್ನು ಟಚ್ ಮಾಡುತ್ತದೆ. ನಿಮಗೆ ಕನೆಕ್ಟ್ ಆಗುತ್ತದೆ. ಮುಕೇಶ್ ಅವರ ಗಾಯನವೂ ಹಾಗೆ ಇತ್ತು. ತನ್ನ ಸರಳತೆ, ನೇರವಂತಿಕೆ ಮೂಲಕ ತನ್ನೆಲ್ಲ ನ್ಯೂನ್ಯತೆಗಳ ಹೊರತಾಗಿಯೂ ಅದು ಉತ್ತಮ ಪರಿಣಾಮವನ್ನು ಬೀರುತ್ತಿತ್ತು. ಮುಕೇಶ್ ಎನಿಗ್ಮಾಗೆ ನಾನು ಕಂಡುಕೊಂಡ ಉತ್ತರವಿಷ್ಟೇ!’’
ತನ್ನ ಗಾಯನದ ನ್ಯೂನ್ಯತೆಗಳ ಬಗ್ಗೆ ಅರಿತಿದ್ದ ಮುಕೇಶ್ ಟಿವಿ ಸಂದರ್ಶನವೊಂದರಲ್ಲಿ ‘‘ಲತಾ ಮಂಗೇಶ್ಕರ್ ಅವರನ್ನು ಶ್ರೇಷ್ಠ ಗಾಯಕಿ ಅಂತ ಯಾಕೆ ಪರಿಗಣಿಸಲಾಗುತ್ತದೆ ಗೊತ್ತಾ? ಪಕ್ಕಾ ಶ್ರುತಿಯಲ್ಲಿ, ತಾಳದಲ್ಲಿ ಹಾಡಲಾಗದ ನನ್ನಂಥ ಗಾಯಕನ ಜೊತೆಗೆ ಹಾಡುತ್ತಾರಲ್ಲ... ಅದಕ್ಕೆ’’ ಎಂದು ತಮಾಷೆ ಮಾಡಿದ್ದರು. ಮುಕೇಶ್ ಅವರ ಈ ಮಾತನ್ನು ಸ್ಮರಿಸಿಕೊಳ್ಳುವ ಈ ಸಂದರ್ಭದಲ್ಲಿ ಮುಕೇಶ್-ಲತಾ ಜೋಡಿ ನೀಡಿದ ‘ಕಭೀ ಕಭೀ ಮೇರೆ ದಿಲ್ ಮೇ’, ‘ದಿಲ್ ಕಿ ನಝರ್ ಸೆ’, ‘ದಿಲ್ ತಡಪ್ ತಡಪ್ ಕೆ ಕೆಹ್ ರಹಾ ಹೈ’, ‘ಫೂಲ್ ತುಂಹೆ ಬೇಜಾ ಹೈ ಖತ್ ಮೇ’ ತರಹದ ಸೂಪರ್ ಹಿಟ್ ಹಾಡುಗಳನ್ನು ನೆನೆಯದಿದ್ದರೆ ಅಪರಾಧವಾಗುತ್ತದೆ.
ಇದಕ್ಕೆ ಪೂರಕವಾಗಿ ಒಂದು ಘಟನೆಯನ್ನು ಇಲ್ಲಿ ನೆನಪಿಸುತ್ತ, ಮುಕೇಶ್ ಇನ್ನಷ್ಟು ಕಾಲ ಬದುಕಿದ್ದರೆ ಅವರ ಇನ್ನಷ್ಟು ಹಾಡುಗಳು ನಮಗೆ ಕೇಳಲು ಸಿಗುತ್ತಿದ್ದವು, ಆ ಸಿರಿಕಂಠವನ್ನು ನಾವು ಬೇಗನೆ ಮಿಸ್ ಮಾಡಿಕೊಂಡೆವು ಅನ್ನುವ ನೋವನ್ನು ನನ್ನೊಳಗೆ ಅಡಗಿಸಿಕೊಂಡು ಈ ಬರಹವನ್ನು ಮುಗಿಸುತ್ತೇನೆ. ಅದಕ್ಕೂ ಮುನ್ನ ಸಕತ್ ಮಜವಿರುವ ಈ ಪ್ಯಾರಾ ಓದಿ... ಹೀಗೆ ಒಮ್ಮೆ ಕಲ್ಯಾಣ್‌ಜಿ ಸಂಗೀತವಿದ್ದ ಗೀತೆಯೊಂದರ ರೆಕಾರ್ಡಿಂಗ್ ಮುಗಿದ ನಂತರ ಮುಕೇಶ್ ಸ್ಟುಡಿಯೋದಿಂದ ಹೊರ ನಡೆಯುತ್ತಾರೆ. ತಮ್ಮ ಮರ್ಸಿಡಿಸ್ ಕಾರಿನಲ್ಲಿ ಕುಳಿತು ಹೋಗುತ್ತಾರೆ. ಮುಕೇಶ್ ಹೋಗುವುದನ್ನೇ ಕಾಯುತ್ತಿದ್ದ, ಅಲ್ಲೇ ಇದ್ದ ಶಾಸ್ತ್ರೀಯ ಸಂಗೀತ ವಿದ್ವಾನ್ ಒಬ್ಬ ಕಲ್ಯಾಣ್‌ಜಿ ಅವರನ್ನು ಉದ್ದೇಶಿಸಿ ‘‘ವಿಪರ್ಯಾಸ ನೋಡಿ! ಆ ವ್ಯಕ್ತಿಗೆ ಶಾಸ್ತ್ರೀಯವಾಗಿ ಸ್ವರಜ್ಞಾನವಿದೆಯೇ? ರಾಗಜ್ಞಾನವಿದೆಯೇ? ಆತ ಮರ್ಸಿಡಿಸ್ ಕಾರಿನಲ್ಲಿ ಜಮ್ಮಂತ ಸುತ್ತಾಡ್ತಾನೆ. ಎಲ್ಲ ಜ್ಞಾನವಿದ್ದರೂ ನಾನು ಬಸ್ಸಿನಲ್ಲೇ ಹೋಗಬೇಕು... ಉಫ್’’ ಅಂದಾಗ ಆ ವ್ಯಕ್ತಿಯನ್ನು ತಮ್ಮ ಪಕ್ಕದಲ್ಲಿ ಕೂರುವಂತೆ ಕಲ್ಯಾಣ್‌ಜಿ ಸನ್ನೆ ಮಾಡುತ್ತಾರೆ. ಆ ವ್ಯಕ್ತಿ ಕಲ್ಯಾಣ್‌ಜಿ ಪಕ್ಕದಲ್ಲಿ ಬಂದು ಕೂರುತ್ತಾನೆ. ಆಗ ‘ಸರಸ್ವತಿಚಂದ್ರ’ ಚಿತ್ರಕ್ಕಾಗಿ ಮುಕೇಶ್ ಹಾಡಿದ್ದ ‘ಚಂದನ್ ಸ ಬದನ್ ಚಂಚಲ್ ಚಿತ್ವಾನ್’ ಹಾಡನ್ನು ತಮ್ಮ ಹಾರ್ಮೋನಿಯಂ ಜೊತೆ ಹಾಡುವಂತೆ ಹೇಳಿ ಹಾರ್ಮೋನಿಯಂ ನುಡಿಸಲು ಶುರು ಮಾಡುತ್ತಾರೆ. ಆ ವ್ಯಕ್ತಿ ತಾನು ಕಲಿತಿದ್ದ ಮುರ್ಕಿ (ಹರ್ಕತ್) ಬಳಸಿ ಅಗತ್ಯಕ್ಕಿಂತ ಹೆಚ್ಚಿನ ರೀತಿಯಲ್ಲಿ ಅತಿಯಾಗಿ ಹಾಡಲೆತ್ನಿಸಿ ಕಲ್ಯಾಣ್ ಜಿ ಹೇಳಿದ್ದ ನೋಟ್ಸ್ ಅನ್ನು ಕೈ ಬಿಟ್ಟಿರುತ್ತಾನೆ! ಕಲ್ಯಾಣ್‌ಜಿ ಮತ್ತೊಮ್ಮೆ ಹಾಡಿನ ಸಂಗೀತದ ನೋಟ್ಸ್ ಅನ್ನು ವಿವರಿಸಿ ಹಾಡಿ ತೋರಿಸುತ್ತಾರೆ. ಜಪ್ಪಯ್ಯ ಅಂದರೂ ಆ ಶಾಸ್ತ್ರೀಯ ಸಂಗೀತ ವಿದ್ವಾನ್‌ನಿಂದ ಕಲ್ಯಾಣ್‌ಜಿ ಹೇಳಿದ ನೋಟ್ಸ್‌ನ ಅನುಸಾರ ಹೃದಯಸ್ಪರ್ಶಿಯಾಗಿ ಹಾಡಲು ಸಾಧ್ಯವಾಗಲಿಲ್ಲ. ಆಗ ಕಲ್ಯಾಣ್‌ಜಿ ತಮ್ಮ ಕಾರಿನಲ್ಲಿ ಆ ವ್ಯಕ್ತಿಯನ್ನು ಆತ ಹೇಳುವ ರೂಟ್ ಪ್ರಕಾರ ಆತನ ಮನೆಗೆ ಕರೆದೊಯ್ದು ಕಾರಿನಿಂದ ಇಳಿಸುವಾಗ ಆ ವಿದ್ವಾನ್‌ಗೆ ವಿನಮ್ರವಾಗಿ ‘‘ಈಗ ಅರ್ಥವಾಯ್ತಾ.. ಆತ ಮರ್ಸಿಡಿಸ್ ಕಾರಿನಲ್ಲಿ ಯಾಕೆ ಸುತ್ತಾಡ್ತಾನೆ ಅಂತ!’’ ಅನ್ನುತ್ತಾರೆ. ದಟ್ ಇಸ್ ಮುಕೇಶ್ !!