ಬಂಡಾಯ ಸಾಹಿತ್ಯ; ಸೇಫರ್ ಝೋನ್ ಚಿಂತಕರಿಂದ ಮುಕ್ತಗೊಳ್ಳಲಿ
ಸುಮಾರು ಹತ್ತು ವರ್ಷಗಳಿಗೂ ಹೆಚ್ಚು ಕಾಲ ರಾಜ್ಯ ಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನ ಜರುಗಿದ ನೆನಪಿಲ್ಲ. ಪ್ರಾಯಶಃ ಶಿವಮೊಗ್ಗದ ಸಮ್ಮೇಳನವೇ ಈ ಹಿಂದಿನದಿರಬಹುದು.? ಆದರೆ ಬಂಡಾಯ ಸಾಹಿತ್ಯ ಸಂಘಟನೆಯ ಚಟುವಟಿಕೆಗಳು ನಿರಂತರ ಅಲ್ಲದಿದ್ದರೂ ಅಲ್ಲಲ್ಲಿ ಆಗಾಗ ಜರುಗಿರುವುದನ್ನು ಅಲ್ಲಗಳೆಯಲಾಗದು. ಬೆಂಗಳೂರು, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ... ಹೀಗೆ ನಾಡಿನ ನಾನಾ ಕಡೆ ಹತ್ತು ಹಲವು ಕಾರ್ಯಾಗಾರ, ಸಾಂಸ್ಕೃತಿಕ ಸಮಾವೇಶಗಳು ಜರುಗಿದ ದಟ್ಟ ನೆನಪಿದೆ. ಇದೀಗ ಇದೇ ಜುಲೈ 23 ಮತ್ತು 24 ರಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಕನ್ನಡ ಭವನದಲ್ಲಿ ಬಂಡಾಯದ ಸಂಗಾತಿಗಳಾದ ಬಿ. ಎನ್. ಮಲ್ಲೇಶ್ ಮತ್ತು ಎ. ಬಿ. ರಾಮಚಂದ್ರಪ್ಪಸಂಚಾಲಕತ್ವದಲ್ಲಿ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನ ಜರುಗಲಿದೆ.
ಇದು ದಾವಣಗೆರೆಯಲ್ಲಿ ಜರುಗುತ್ತಿರುವ ಬಂಡಾಯ ಸಾಹಿತ್ಯದ ಎರಡನೇ ಸಮ್ಮೇಳನ. ಮುವತ್ತಾರು ವರ್ಷಗಳ ಹಿಂದೆ 1986ರಲ್ಲಿ ನಗರದ ರಾಜನಹಳ್ಳಿ ಹನುಮಂತಪ್ಪಛತ್ರದಲ್ಲಿ ಆರನೇ ಬಂಡಾಯ ಸಾಹಿತ್ಯ ಸಮ್ಮೇಳನ ಮೊದಲ ಬಾರಿಗೆ ಜರುಗಿತ್ತು. ಅಂದು ಕಾಂ. ಪಂಪಾಪತಿ, ಕಾಂ. ಎಚ್.ಕೆ. ರಾಮಚಂದ್ರಪ್ಪ, ಕಾಂ. ಎಂ.ಜಿ. ತಿಪ್ಪೇಸ್ವಾಮಿ ಇನ್ನೂ ಅನೇಕ ಎಡಪಂಥೀಯ ಚಿಂತನೆಗಳ ಹಿರಿಯರು ಅಂದಿನ ಬಂಡಾಯ ಸಾಹಿತ್ಯ ಸಮ್ಮೇಳನದ ಉಸ್ತುವಾರಿಗಳಾಗಿದ್ದರು. ಹಾಗೆ ನೋಡಿದರೆ ದಾವಣಗೆರೆ ನಗರ ಸಮ್ಮೇಳನಗಳ ಮಹಾನಗರ. ಸಾಹಿತ್ಯ, ಸಂಗೀತ, ರಂಗಭೂಮಿ, ಜನಪದ ಹೀಗೆ ಅನೇಕ ಸಾಂಸ್ಕೃತಿಕ ಸಮ್ಮೇಳನಗಳು ಈ ಊರಲ್ಲಿ ಜರುಗುವಷ್ಟು ಬೇರೆಲ್ಲೂ ಜರುಗಲಾರವು. ಅಲ್ಲದೆ ಪ್ರಗತಿಪರ ಸಮಾಲೋಚನೆಯ ಸಮಾವೇಶಗಳು ಕರ್ನಾಟಕದ ನಡುನಾಡೇ ಆಗಿರುವ ದಾವಣಗೆರೆಯಲ್ಲಿ ಜರುಗುತ್ತವೆ. ಎಪ್ಪತ್ತರ ದಶಕದಲ್ಲಿ ನಿರಂಜನ ಮತ್ತು ಬಸವರಾಜ ಕಟ್ಟೀಮನಿ ಅವರು ಕಟ್ಟಿದ ಪ್ರಗತಿಪರ ಆಶಯಗಳ ಪ್ರಗತಿಪಂಥ ಸಾಹಿತ್ಯ ಸಮ್ಮೇಳನ 1976 ರಲ್ಲಿ ದಾವಣಗೆರೆಯ ಸುನಂದರಂಗ ಮಂಟಪದಲ್ಲಿ ಯಶಸ್ವಿಯಾಗಿ ಜರುಗಿದೆ. ರಶ್ಯದ ಸಂಸ್ಕೃತಿ ಚಿಂತಕ ಮತ್ವಂತೀನ್ ದಷ್ಕೋ ಎಂಬವರು ಪ್ರಗತಿಪಂಥ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ನೆನಪು ನನ್ನದು. ಆ ಸಂದರ್ಭದಲ್ಲಿ ಪತ್ರಿಕೋದ್ಯಮಿ ಎಚ್.ಎನ್. ಷಡಕ್ಷರಪ್ಪ ಸಂಪಾದಕತ್ವದಲ್ಲಿ ಸ್ಮರಣಸಂಚಿಕೆ ಪ್ರಕಟಗೊಂಡಿದೆ. ಸಾಹಿತ್ಯ, ಸಂಸ್ಕೃತಿ ಮಾತ್ರವಲ್ಲದೆ ಈ ಊರಲ್ಲಿ ಮಹತ್ವದ ಕೆಲವು ರಾಜಕೀಯ ಸಮ್ಮೇಳನಗಳು ಜರುಗಿವೆ. ತನ್ಮೂಲಕ ಕರ್ನಾಟಕ ರಾಜಕೀಯದ ಐತಿಹಾಸಿಕ ತಿರುವುಗಳಿಗೆ ಅವು ಕಾರಣವಾಗಿವೆ.
1979ರ ಮಾರ್ಚ್ ತಿಂಗಳು, ಬೆಂಗಳೂರಿನ ಸಂಪಂಗಿ ರಾಮನಗರದ ದೇವಾಂಗ ಹಾಸ್ಟೆಲ್ ಸಭಾಂಗಣವೇ ಬಂಡಾಯ ಸಾಹಿತ್ಯ ಸಂಘಟನೆಯ ಜನ್ಮಸ್ಥಳ. ಅದೊಂದು ಚಾರಿತ್ರಿಕ ಹುಟ್ಟು. ಧರ್ಮಸ್ಥಳದಲ್ಲಿ ಅಂದು ಜರುಗುತ್ತಲಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯ ಗೋಷ್ಠಿಯೊಂದನ್ನು ಏರ್ಪಡಿಸಬೇಕೆಂಬ ಕಲಬುರ್ಗಿಯ ಕವಿ ಡಾ. ಚೆನ್ನಣ್ಣ ವಾಲೀಕಾರ ಮತ್ತು ಕೆಲವರ ಮನವಿಯನ್ನು ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ತಿರಸ್ಕರಿಸಿದರು. ಸಾಹಿತ್ಯದಲ್ಲಿ ದಲಿತ, ಬಲಿತ, ಕಲಿತ ಎಂಬುದಿಲ್ಲ ಎಂದು ಕ.ಸಾ.ಪ. ಅಧ್ಯಕ್ಷರು ಕುಹಕವಾಡಿದ ಪರಿಣಾಮವೇ ಬಂಡಾಯ ಸಾಹಿತ್ಯ ಸಂಘಟನೆಯ ಉಗಮಕ್ಕೆ ಮಹಾನ್ ಕಾರಣವಾಯಿತು. ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೆಡ್ಡು ಹೊಡೆದು ಬಂಡಾಯ ಸಾಹಿತ್ಯ ಸಂಘಟನೆ ಮೊತ್ತ ಮೊದಲ ಬಾರಿಗೆ ಜನಪರ ಸಾಹಿತ್ಯ ಚಳವಳಿಯಾಗಿ ರೂಪುಗೊಂಡಿತು. ವಿಮೋಚನಾ ಕಾವ್ಯದ ತೆಲುಗಿನ ಕವಿ ಶ್ರೀಶ್ರೀ ಬಂಡಾಯ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಮಾಡಿದರು. ಮರಾಠಿ ಸಾಹಿತ್ಯದ ವೈಚಾರಿಕ ಲೇಖಕಿ, ‘ಮಾನವ ಎಚ್ಚೆತ್ತಾಗ’ ಕೃತಿಯ ಗೋದಾವರಿ ಪರುಳೇಕರ್ ಸಮಾರೋಪ ಸಮಾರಂಭದ ಮುಖ್ಯ ಭಾಷಣಕಾರರು. ಅಂತಹದ್ದೊಂದು ಸಾಹಿತ್ಯ ಆಂದೋಲನದಲ್ಲಿ ಸಮಾಜವಾದಿಗಳು, ಮಾರ್ಕ್ಸ್‌ವಾದಿಗಳು, ಗಾಂಧಿವಾದಿಗಳು, ಅಂಬೇಡ್ಕರ್ ವಾದಿಗಳು ಸೇರಿದ್ದರು. ಆ ಎಲ್ಲರೂ ಪ್ರಜಾಸತ್ತಾತ್ಮಕವಾಗಿ ಕೂಡಿ ಕಟ್ಟಿದ ಜನಪರ ಮತ್ತು ಜೀವಪರ ಸಾಹಿತ್ಯದ ಮನೋಧರ್ಮವಾಗಿ ಬಂಡಾಯ ಹೊರಹೊಮ್ಮಿತು.
ಅಂದಿನಿಂದ ಈಗಿನ ದಾವಣಗೆರೆ ಸಮ್ಮೇಳನದವರೆಗೂ ಪ್ರೊ. ಬರಗೂರು ರಾಮಚಂದ್ರಪ್ಪಬಂಡಾಯ ಸಾಹಿತ್ಯ ಸಂಘಟನೆಯ ಮುಕ್ಕು ಮತ್ತು ಮುಪ್ಪರಿಯದ ಮಹಾ ಚೇತನದಂತೆ ಬಂಡಾಯ ಸಾಹಿತ್ಯದ ಸಂವೇದನೆಗಳನ್ನು ಕಾಪಿಟ್ಟುಕೊಂಡು ಬಂದಿದ್ದಾರೆ. ಏಕೆಂದರೆ ಸಮಾಜವಾದಿ ಸಾಹಿತಿ ಪಿ. ಲಂಕೇಶ್ ಅಂಥವರು ಬಂಡಾಯ ಸಾಹಿತ್ಯ ಸಂಘಟನೆಯನ್ನು ‘ಡಂಬಾಯ’ವೆಂದು ಗೇಲಿ ಮಾಡಿ ಪತ್ರಿಕೆಯಲ್ಲಿ ಬರೆದು ಪ್ರಕಟಿಸಿದಾಗಲೂ ಬರಗೂರು ಧೃತಿಗೆಡದೆ ಬಂಡಾಯ ಸಾಹಿತ್ಯ ಸಂಘಟನೆ ಕಟ್ಟಿ ಬೆಳೆಸಿದ ಕಟ್ಟಾಳು. ಅವರೊಂದಿಗೆ ಅನೇಕರು ಇದ್ದಾರೆ. ಬಂಡಾಯ ಸಾಹಿತ್ಯ ಸಂಘಟನೆಯ ಯಾವುದೇ ಸಮಾರಂಭ, ಸಮಾವೇಶಗಳಿರಲಿ ಉದ್ಘಾಟನಾ ಸಮಾರಂಭದಲ್ಲಿ ಆರಂಭಕ್ಕೆ ಬರಗೂರು ಅವರಿಂದ ಪ್ರಾಸ್ತಾವಿಕ ಮಾತುಗಳು ಖಾಯಂ. ಹಾಗೆಯೇ ಮುಕ್ತಾಯ ಸಮಾರಂಭಕ್ಕೆ ಚಂಪಾ ಅವರಿಂದ ಸಮಾರೋಪ ಮಾತುಗಳು ಖಾಯಂ. ಇದು ಸಾಂಪ್ರದಾಯಿಕ ಪದ್ಧತಿ ಅಲ್ಲದಿದ್ದರೂ ಸಾಂಸ್ಕೃತಿಕ ಪರಂಪರೆಯಂತೆ ಬೆಳೆದು ಬಂದ ಹಕೀಕತ್ತು. ಈಗ ಚಂದ್ರಶೇಖರ ಪಾಟೀಲರು ನಮ್ಮ ನಡುವೆ ಇಲ್ಲ. ದಾವಣಗೆರೆಯಲ್ಲಿ ಈ ಮೊದಲು ಜರುಗಿದ ಸಮ್ಮೇಳನ ಸಮಯದಲ್ಲಿ ಚಂಪಾ ಇದ್ದರು. ಚೆನ್ನಣ್ಣ ವಾಲೀಕಾರ ಇದ್ದರು. ಆರ್.ವಿ. ಭಂಡಾರಿ ಇದ್ದರು. ಡಿ.ಆರ್. ನಾಗರಾಜ್ ಇದ್ದರು. ರಂಗಾರೆಡ್ಡಿ, ಬೋಳ ಬಂಡೆಪ್ಪ, ಜಂಬಣ್ಣ ಅಮರಚಿಂತ, ಗೀತಾ ನಾಗಭೂಷಣ, ಸಿದ್ಧಲಿಂಗಯ್ಯ, ದೇವಯ್ಯ ಹರವೆ, ಕೆ.ಬಿ. ಸಿದ್ದಯ್ಯ, ಬೆಸಗರಹಳ್ಳಿ ಅವರಂತಹ ಅನೇಕ ಹಿರಿಯರನ್ನು ಬಂಡಾಯ ಸಾಹಿತ್ಯ ಸಂಘಟನೆ ಈಗ ಕಳೆದುಕೊಂಡಿದೆ. ಅದರಿಂದ ಅದು ಬಡವಾಗಿದೆ. ಹೌದು ಬಂಡಾಯ ಸಂಘಟನಾತ್ಮಕವಾಗಿ ಸೊರಗಿರಬಹುದು. ಆದರೆ ಸಾಹಿತ್ಯದ ಇಳುವರಿ ಬೆಳಸಿನಲ್ಲಿ ಅದು ಸೋತಿಲ್ಲ, ಸೊರಗಿಲ್ಲ. ಲಿಂಗತ್ವದ ಭೇದವಿಲ್ಲದೆ ಲೋಕದ ಜೀವಧಾತುವಿನಂತೆ ಬಂಡಾಯದ ಬೇರುಗಳು ಭೂಮಿ ಮೂಲಕ್ಕಿಳಿದಿವೆ. ಅಂತಹ ಮಣ್ಣಿನಲ್ಲಿ ಹುಟ್ಟಿ ಬಂದಿರುವ ಬಹುಪಾಲು ಫಸಲು ಬಂಡಾಯದ ಅಸಲಿ ಬೆಳೆಯೇ ಹೌದು. ಬಂಡಾಯದ ಲೇಬಲ್ ಇಲ್ಲದೆಯೇ ಬರೆಯುವ ಬಹುಪಾಲು ಹೊಸಬರ ಬರವಣಿಗೆಗೆ ಬಂಡಾಯದ ಗಾಢ ಪ್ರಭಾವ ಇರುವುದನ್ನು ನಾವು ಅನೇಕ ಸಂದರ್ಭಗಳಲ್ಲಿ ಗುರುತಿಸಬಹುದಾಗಿದೆ.
ಹೌದು, ಅದಕ್ಕೆಂಬಂತೆ ನಾಲ್ಕು ದಶಕಗಳ ಹಿಂದೆಯೇ ಸಮೃದ್ಧ ಉಳಮೆ ಮಾಡಿ ಬಂಡಾಯ ಸಾಹಿತ್ಯಭೂಮಿ ಹದಗೊಳಿಸಿದೆ. ಅದು ಬಯಲ ಬಿತ್ತನೆಗೆ ಹುಸಿಯೊಡೆಯದ ಹದವರಿತ ಹಸಿರು ಭೂಮಿ. ಅಂತೆಯೇ ನಿಜವಾದ ರಾಜಕೀಯ ಪ್ರಜ್ಞೆ, ನಿಶಿತವಾದ ಮಾನವೀಯ ಗುಣಗಳು ಬಂಡಾಯದ ಹಸಿರು ನೆಲದಲ್ಲಿ ಹರಳುಗಟ್ಟಿವೆ. ಅದು ಇಂತಹ ಅನೇಕ ಸೂಕ್ಷ್ಮತೆಗಳಿಗೆ ಗಟ್ಟಿಮುಟ್ಟಾದ ಬುನಾದಿ ಕಟ್ಟಿ ಕೊಟ್ಟಿದೆ. ಅಂತಹ ಬುನಾದಿ ಮೇಲೆ ಅನೇಕ ಸೌಧಗಳನ್ನು ಕಟ್ಟ ಬಹುದಾಗಿದೆ. ಆದರೆ ಕೆಲವರಿಗೆ ಸೌಧಗಳಿಗೆ ಬದಲು ವಿಧಾನಸೌಧದ ಮೂರನೇ ಮಹಡಿಯ ಕುರ್ಚಿಯ ಕನಸುಗಳು ಬೀಳ ತೊಡಗಿದ್ದು, ಕೆಲವರಿಗೆ ಅದು ಈಡೇರಿದ್ದು ಸುಳ್ಳಲ್ಲ. ***
ಇತ್ತೀಚೆಗೆ ಖಾಸಗಿ ಟಿವಿಯೊಂದಿಗೆ ಮಾತನಾಡುತ್ತಾ ದಾವಣಗೆರೆಯ ಒಬ್ಬ ವಿರೋಧ ಪಕ್ಷದ ಇಬ್ಬರು ನಾಯಕರನ್ನು ಗುಂಡಿಟ್ಟು ಕೊಲ್ಲಬೇಕೆಂದು ಬಹಿರಂಗವಾಗಿ ಕರೆಕೊಟ್ಟ. ಹೀಗಿರುವಾಗ ಬರಹಗಾರರಿಗೆ ಬರುವ ರಾಶಿ ರಾಶಿ ಬೆದರಿಕೆ ಪತ್ರಗಳದು ಯಾವ ಲೆಕ್ಕ ಅನ್ನುವಂತಾಗಿದೆ. ಹೀಗೆ ಉಸಿರು ಕಟ್ಟುವ ಹತ್ತು ಹಲವು ಬಿಕ್ಕಟ್ಟು, ಘೋರ ಕುತ್ತುಗಳ ನಡುವೆ ವರ್ತಮಾನದ ಭಾರತ ಬದುಕುತ್ತಲಿದೆ. ಬಹುತ್ವ ಭಾರತದ ಹೆಸರನ್ನೇ ಬದಲಿಸಿ ಹಿಂದೂ ರಾಷ್ಟ್ರವನ್ನಾಗಿಸುವ ಒಳಹೇತುಗಳು. ಬಾಬಾ ಸಾಹೇಬರ ಸಂವಿಧಾನವನ್ನೇ ಬುಡಮೇಲುಗೊಳಿಸುವ ಹೀನಕೃತ್ಯಗಳು. ಅದಕ್ಕಾಗಿ ಹಲವು ಬಗೆಯ ಸಂಚಿತ ಹರಕೆಗಳು. ಹಂತ ಹಂತದ ಸಿದ್ಧತೆಗಳು. ಇದೇನು ರಹಸ್ಯದ ಕಾರ್ಯಾಚರಣೆಯಲ್ಲ. ಈಗೀಗ ನೇರವಾಗಿಯೇ ನೆರವೇರುವ ಬಹಿರಂಗ ಮಟ್ಟದ ಬದಲಾವಣೆಗಳು. ಅದಕ್ಕಾಗಿ ರಾಜಕೀಯ ಅಧಿಕಾರದ ಗಟ್ಟಿಮುಟ್ಟಾದ ಉಡದ ಹಿಡಿತಗಳು. ಏಕಮುಖೀಕರಣದತ್ತ ಚಲಿಸುತ್ತಿರುವ ಮತ್ತು ಅಪಾಯದ ಮಟ್ಟ ಮೀರುತ್ತಲಿರುವ ಬೆಳವಣಿಗೆಗಳು. ಇಂತಹ ಭಯಂಕರ ಸವಾಲುಗಳಿಗೆ ಸಂಸ್ಕೃತಿ ಚಿಂತಕರು ಮುಖಾಮುಖಿ ಆಗುತ್ತಾರೆ. ಅದಕ್ಕೆಂತಲೇ ಸಂಸ್ಕೃತಿಯ ಧಾರೆಗಳಲ್ಲಿ ಧರ್ಮದ ಅಮಲು ಬಿತ್ತುವ, ಬಾಲ್ಯದಿಂದಲೇ ಮಕ್ಕಳಿಗೆ ಏಕಮುಖ ಧರ್ಮದ ವಿಷವುಣ್ಣಿಸುವ ನೇರ ಹುನ್ನಾರ. ಅದಕ್ಕೆ ಸಾಕ್ಷಿಯಾಗಿ ಕರ್ನಾಟಕದಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ‘ಪು’ರೋಹಿತ ಮಾದರಿಯ ಪಠ್ಯಪುಸ್ತಕಗಳ ಮರು ಪರಿಷ್ಕರಣೆ. ವೈದಿಕ್ಯದ ಪೊಳ್ಳು ಇತಿಹಾಸ ಪೋಣಿಸುವ, ದತ್ತೂರಿ ಬೀಜಗಳ ಬಿತ್ತನೆ. ಮೊದಲಾಗಿದ್ದರೆ ಮಲವನ್ನು ತಲೆಯ ಮೇಲೆ ಹೊರಿಸುತ್ತಿದರು. ಈಗ ಹಾಗಲ್ಲ, ಅದನ್ನೀಗ ತಲೆಯೊಳಗೇ ತುರುಕುವ ಧಾರ್ಮಿಕ ಮೂಲಭೂತವಾದದ ಕೆಲಸ. ಪ್ರಸ್ತುತ ಬಂಡಾಯ ಸಾಹಿತ್ಯ ಸಮ್ಮೇಳನ ಬಂಡಾಯೋತ್ತರ ಬದಲಾವಣೆಗೆ ಪಕ್ವವಾಗಿದೆ. ನಾನು ಮಾತಾಡಿಸಿದ ಈ ತಲೆಮಾರಿನ ಕೆಲವು ಯುವಕ, ಯುವತಿಯರ ಅನಿಸಿಕೆಯಂತೆ ಅದು ಅಪ್ಡೇಟ್ ಆಗುವ ಹಂಬಲ. ಸಮ್ಮೇಳನದಲ್ಲಿ ಬರಗೂರು ಅವರಂತಹ ಹಿರಿಯರೊಂದಿಗೆ ಸಂವಾದ ಏರ್ಪಡಿಸಬೇಕು. ಅಂತಹ ಅನೇಕ ಹಿರಿಯರೊಂದಿಗೆ ಮನಸು ಬಿಚ್ಚಿ ಮಾತಾಡುವ ಮೂಲಕ ಹಾದಿ ಹಸನು ಮತ್ತು ಹಗುರ ಮಾಡಿಕೊಳ್ಳುವ ಉಮೇದು ಅವರದು. ಆ ಮೂಲಕ ಬಂಡಾಯ ಸಾಹಿತ್ಯದ ತಾತ್ವಿಕತೆಗಳನ್ನು ಸಮಕಾಲೀನ ಗೊಳಿಸುವಂತಾಗ ಬೇಕಿದೆ. ಸಂಘಟನೆ ಜತೆ ಸೇರಿಕೊಂಡರೆ ಸೃಜನಶೀಲತೆಗೆ ಧಕ್ಕೆ ಬರುತ್ತದೆಂಬ ಕೆಲವು ಕವಿ‘ರಾಜ’ಮಾರ್ಗಿ ಅವಕಾಶವಾದಿ ನಿಯೋ ಫ್ಯಾಶಿಸ್ಟ್ ಶಕ್ತಿಗಳನ್ನು ಹತ್ತಿಕ್ಕ ಬೇಕಿದೆ. ಆ ಮೂಲಕ ಘೋಷಣೆಯ ನುಡಿಗಟ್ಟು ಸಮೇತ ಸೇಫರ್ ರೆನ್ ಚಿಂತಕರಿಂದ ಬಿಡುಗಡೆ ಆಗಬೇಕೆಂಬುದು ಹಲವು ಹೊಸಬರ ಅಂಬೋಣ.