ಬಡ ಶಾಲಾ ಮಕ್ಕಳ ಮೊಟ್ಟೆಯ ಮೇಲೇಕೆ ಕಣ್ಣು?
ಈಗಾಗಲೇ ನಡೆದಿರುವ ಅಧ್ಯಯನದ ಪ್ರಕಾರ ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ ಮಕ್ಕಳ ಎತ್ತರ ಮತ್ತು ಗಾತ್ರದಲ್ಲಿ ಸಾಕಷ್ಟು ವ್ಯತ್ಯಾಸ ಆಗಿರುವುದನ್ನು ಮತ್ತು ಕಲಿಕೆಯಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿರುವುದನ್ನು ವರದಿಗಳು ಸಾಬೀತುಪಡಿಸಿವೆ.
ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ಕೊಡಬೇಕೇ ಅಥವಾ ಬಾಳೆಹಣ್ಣು ಕೊಡಬೇಕೇ ಎಂಬ ಒಂದು ವಿಚಾರದ ಕುರಿತು ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಚುನಾವಣೆಯ ಹೊತ್ತಿನಲ್ಲಿ ಇದೊಂದು ರಾಜಕೀಯ ವಿಷಯವಾಗಿ ಮಾರ್ಪಾಡಾಗಿ ಬದಲಾದರೂ ಆಶ್ಚರ್ಯವಿಲ್ಲ. ಏಕೆಂದರೆ ಇದಕ್ಕೆ ಧಾರ್ಮಿಕ ನಾಯಕರು, ಮಠಾಧೀಶರು ಪ್ರಗತಿಪರ ಸಂಘಟನೆಗಳು ಎಲ್ಲರೂ ಏಕಕಾಲಕ್ಕೆ ಧುಮುಕಿದಂತೆ ಕಾಣುತ್ತದೆ. ರಾಜ್ಯಾದ್ಯಂತ ಭಾರೀ ಮಳೆಗೆ ಜನರ ಜೀವನವೇ ಮೂರಾಬಟ್ಟೆಯಾಗಿರುವ ಈ ಸಂದರ್ಭದಲ್ಲಿ ಅದರ ಬಗ್ಗೆ ಗಮನ ಕೊಡುವುದರ ಬದಲಾಗಿ ಶಾಲೆ ಮಕ್ಕಳು ಪಡೆಯುತ್ತಿರುವ ಒಂದು ಮೊಟ್ಟೆಯ ವಿಚಾರವನ್ನು ಪ್ರತಿಷ್ಠೆಯ ವಿಚಾರವಾಗಿ ಕೆಲವರು ತೆಗೆದುಕೊಂಡಿರುವುದನ್ನು ನೋಡಿದರೆ ಆಶ್ಚರ್ಯ ಅನಿಸದು. ಏಕೆಂದರೆ ಇಲ್ಲಿ ಪ್ರತಿಯೊಂದಕ್ಕೂ ರಾಜಕೀಯ ಮಾಡುವುದು ಕೆಲವರು ತಮ್ಮ ಜನ್ಮಸಿದ್ಧ ಹಕ್ಕು ಎಂದುಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ನಮ್ಮ ವ್ಯವಸ್ಥೆಯೂ ಕೆಲವೊಮ್ಮೆ ಕುಣಿಯುತ್ತದೆ. ಶಾಲೆ ಮಕ್ಕಳಿಗೆ ಅಪೌಷ್ಟಿಕತೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ವರದಿಗಳ ಪ್ರಕಾರ ರಾಜ್ಯದ ಕಲಬುರಗಿ(ಶೇ. 77), ಬಳ್ಳಾರಿ (ಶೇ. 72), ಕೊಪ್ಪಳ(ಶೇ. 70), ರಾಯಚೂರು (ಶೇ. 70), ಬೀದರ್(ಶೇ. 69) ಶಾಲಾ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಹೆಚ್ಚಾಗಿ ಸರಕಾರಿ ಶಾಲೆಯ ಮಕ್ಕಳ ಕುಟುಂಬಗಳು ಈಗಾಗಲೇ ಬಡತನ, ನಿರುದ್ಯೋಗ, ಹಸಿವಿನಿಂದ ಬಳಲುತ್ತಿರುವ ಕಾರಣದಿಂದ ಅವರ ಮಕ್ಕಳು ಸರಕಾರಿ ಶಾಲೆಗಳಲ್ಲಿ ಹೊಟ್ಟೆತುಂಬಾ ಪೌಷ್ಟಿಕಯುಕ್ತ ಊಟ ಮಾಡಲಿ ಎಂದು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸರಕಾರಗಳು ಬಹಳಷ್ಟು ವರ್ಷಗಳ ಹಿಂದಿನಿಂದಲೂ ನಡೆಸಿಕೊಂಡು ಬಂದಿವೆ. ಕ್ರಿ.ಶ. 1967ರಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ ದೇಶದಲ್ಲಿ ಮೊದಲ ಬಾರಿಗೆ ಜಾರಿಗೆ ತಂದಿದ್ದು ಅಂದಿನ ತಮಿಳುನಾಡಿನ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್. ಅಂದಿನ ಕಾಲಕ್ಕೆ ಅದು ಬಹುದೊಡ್ಡ ಕ್ರಾಂತಿಕಾರಿ ಯೋಜನೆಯಾಗಿತ್ತು. ಕ್ರಮೇಣ ದೇಶದ ಇತರ ರಾಜ್ಯಗಳೂ ಇದನ್ನೇ ಅನುಸರಿಸಿದವು. ಕೆಲವು ರಾಜಕೀಯ ಪಕ್ಷಗಳು ಇದೇ ಹೆಸರಿನಲ್ಲಿ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರವನ್ನು ಅನುಭವಿಸಿವೆ. ಮೊದಲು ಅನ್ನ-ಸಾಂಬಾರ್ ಮಾತ್ರ ನೀಡುತ್ತಿದ್ದ ಮಧ್ಯಾಹ್ನದ ಬಿಸಿಯೂಟ ಯೋಜನೆ ಕ್ರಮೇಣ ಹಾಲು, ಮೊಟ್ಟೆ, ಬಾಳೆಹಣ್ಣು, ಕಾಳುಗಳು, ಕಬ್ಬಿಣಾಂಶದ ಮಾತ್ರೆಗಳು ಈ ರೀತಿಯಾಗಿ ಪರಿವರ್ತನೆಗೊಂಡವು. ಕೇವಲ ಅನ್ನ ಸಾಂಬಾರ್‌ನಿಂದ ಮಕ್ಕಳಿಗೆ ಪೌಷ್ಟಿಕಾಂಶ ದೊರೆಯುವುದಿಲ್ಲ ಎಂದು ಭಾವಿಸಿ ಮಕ್ಕಳಿಗೆ ಹಾಲು ಅಥವಾ ಮೊಟ್ಟೆ ಕೊಡುವ ಯೋಜನೆ ಕೆಲವೆಡೆ ಆರಂಭವಾಯಿತು.
ಬಿಸಿಯೂಟ ಯೋಜನೆಯ ಭಾಗವಾಗಿ ಮಕ್ಕಳಿಗೆ ಮೊಟ್ಟೆ ಕೊಡುವ ಯೋಜನೆ ಕಳೆದ ಕೆಲ ವರ್ಷಗಳಿಂದ ದೇಶದ ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಅದೇ ರೀತಿ ಕರ್ನಾಟಕದಲ್ಲೂ ಇತ್ತೀಚಿನ ದಿನಗಳಲ್ಲಿ ಮೊಟ್ಟೆ ಕೊಡುವ ಯೋಜನೆ ಆರಂಭಗೊಂಡಿದ್ದು ಸದ್ಯ ಇಲ್ಲಿ ಸಮಸ್ಯೆ ಆರಂಭವಾಗಿದೆ. ಧಾರ್ಮಿಕ ನಾಯಕರು ಮೊಟ್ಟೆಯನ್ನು ಮಾಂಸಾಹಾರ ಎಂದು ಹೇಳುತ್ತಾರೆ. ಹಾಗಾಗಿ ಶಾಲಾ ಮಕ್ಕಳಿಗೆ ಮೊಟ್ಟೆಯನ್ನು ಮಧ್ಯಾಹ್ನದ ಊಟದಲ್ಲಿ ಕೊಡಬಾರದು ಎನ್ನುವ ತಲೆಬುಡವಿಲ್ಲದ ಮತ್ತು ಖಚಿತವಲ್ಲದ ಹೇಳಿಕೆಗಳನ್ನು ಕೊಡುತ್ತಾ ಬಡಮಕ್ಕಳಿಗೆ ಮೊಟ್ಟೆ ಕೊಡುವುದನ್ನು ತಪ್ಪಿಸುತ್ತಿದ್ದಾರೆ ಎನ್ನುವ ಆರೋಪವಿದೆ.
ಪ್ರಗತಿ ಸಾಧಿಸಿದ್ದೇವೆ ಎಂದು ಎಷ್ಟೇ ಬೊಬ್ಬೆ ಹೊಡೆದರೂ ಆರೋಗ್ಯ ವಿಚಾರದಲ್ಲಿ ನಾವು ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳಿಗಿಂತಲೂ ಹಿಂದಿರುವುದನ್ನು ವಿಶ್ವಸಂಸ್ಥೆಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇದಕ್ಕೆ ಮುಖ್ಯಕಾರಣ ನಾವು ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಬಹಳ ಕಡಿಮೆ ಹಣವನ್ನು ನಿಗದಿಪಡಿಸಿರುವುದು ಮತ್ತು ಆರೋಗ್ಯವನ್ನು ಒಂದು ಪ್ರಮುಖ ಆದ್ಯತಾ ವಲಯವನ್ನಾಗಿ ಇನ್ನೂ ಪರಿಗಣಿಸಲು ಸರಕಾರಗಳು ಹಿಂದೆ ಮುಂದೆ ನೋಡುತ್ತಿರುವುದು. ಕೆಲ ವರದಿಗಳ ಪ್ರಕಾರ ಭಾರತದಲ್ಲಿ ಅಪೌಷ್ಟಿಕತೆಯಿಂದ ಶಿಶುಗಳ ಮರಣ ಮತ್ತು ಬಾಣಂತಿಯರ ಮರಣ ಹೆಚ್ಚಾಗಿಯೇ ಸಂಭವಿಸುತ್ತಿವೆ. ಹೆಚ್ಚಾಗಿ ಗ್ರಾಮೀಣ ಮತ್ತು ಆದಿವಾಸಿ ಕುಟುಂಬಗಳಲ್ಲಿ ಇದು ಸರ್ವೇ ಸಾಮಾನ್ಯವಾದ ಸಂಗತಿಯಾಗಿದೆ. ವಿಶ್ವದಲ್ಲಿ ಮೂರು ಬಿಲಿಯನ್ ಬಡ ಮತ್ತು ಮಧ್ಯಮ ವರ್ಗದ ಜನರು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಇದರಲ್ಲಿ ಹೆಚ್ಚಿನವರು ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಭೂತಾನ್ ಜನರು ಸೇರಿಕೊಂಡಿದ್ದಾರೆ. ವಿಶ್ವ ಆಹಾರ ಸಂಸ್ಥೆ ಪ್ರಕಾರ ಪ್ರಪಂಚದಲ್ಲಿ ಹೆಚ್ಚುಕಮ್ಮಿ 4.5 ಬಿಲಿಯನ್ ಜನರಿಗೆ ಆಹಾರ ಸುರಕ್ಷತೆ ಮತ್ತು ಭದ್ರತೆ ಇಲ್ಲ. ಈ ವರದಿಗಳ ಪ್ರಕಾರ ಭಾರತ ಹಸಿವಿನ ಸೂಚ್ಯಂಕ ಪಟ್ಟಿಯಲ್ಲಿ 94ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಒಟ್ಟು 167 ದೇಶಗಳಿವೆ. ವರದಿಗಳ ಪ್ರಕಾರ ದೇಶದಲ್ಲಿ 60 ಕೋಟಿಗಿಂತ ಹೆಚ್ಚಿನ ಜನರು ಉತ್ತಮ ಆಹಾರ ಪಡೆಯಲು ಒದ್ದಾಡುತ್ತಿದ್ದಾರೆ. ಇದು ಒಂದು ಕಡೆ ಸಮಸ್ಯೆಯಾದರೆ ಇನ್ನೊಂದು ಕಡೆ ವಿಶ್ವದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಭಾರತದಲ್ಲಿ ಆಹಾರ ವ್ಯರ್ಥವಾಗುತ್ತಿದೆ ಎನ್ನುವ ವರದಿಗಳಿವೆ.
ಭಾರತದಲ್ಲಿ ಆಹಾರ ವ್ಯರ್ಥವಾಗುವಿಕೆ 5 ವರ್ಷದೊಳಗಿನ ಮಕ್ಕಳ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದ್ದು, ಇದು ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಾಗಿದೆ. ಪಡಿತರ ವ್ಯವಸ್ಥೆ ಜಾರಿಗೆ ಬಂದರೂ ಸಮತೋಲಿತ ಆಹಾರ ಇನ್ನೂ ಲಕ್ಷಾಂತರ ಕುಟುಂಬಗಳಿಗೆ ಕನಸಾಗಿ ಉಳಿದುಕೊಂಡಿದೆ. ಅದಕ್ಕಿಂತ ಮುಖ್ಯವಾಗಿ ಶಾಲಾ ಮಕ್ಕಳು ಏನು ತಿನ್ನಬೇಕು ಏನು ತಿನ್ನಬಾರದು ಎಂಬುದನ್ನು ಸರಕಾರಗಳು, ಮಠಾಧೀಶರು, ಧಾರ್ಮಿಕ ನಾಯಕರು ಸಂಘಟನೆಗಳು ನಿರ್ಧರಿಸಬಾರದು. ವಿಜ್ಞಾನಿಗಳ ಪ್ರಕಾರ ಮೊಟ್ಟೆ ಮಾಂಸಾಹಾರಿ ಮತ್ತು ಸಸ್ಯಾಹಾರಿ ಎರಡೂ ವರ್ಗಕ್ಕೆ ಸೇರಿದೆ ಎನ್ನುವುದು ಒಂದು ವಾದವಾಗಿದೆ. ಹಾಗಾಗಿ ಅದನ್ನು ಮಾಂಸಹಾರ ವರ್ಗಕ್ಕೆ ಅಥವಾ ಸಸ್ಯಾಹಾರ ವರ್ಗಕ್ಕೆ ಸೇರಿಸಲು ಬಹಳಷ್ಟು ವೈಜ್ಞಾನಿಕ ಸಮಸ್ಯೆಗಳಿವೆ. ಇಲ್ಲಿ ವಿಜ್ಞಾನ ಏನು ಹೇಳುತ್ತದೆ ಅದನ್ನು ಮೊದಲು ನಾವು ಸ್ವಲ್ಪ ಕೇಳಬೇಕಾಗುತ್ತದೆ. ವಿಜ್ಞಾನದ ಪ್ರಕಾರ ಸಸ್ಯಾಹಾರ ಮನುಷ್ಯನಿಗೆ ಎಷ್ಟು ಮುಖ್ಯವೋ ಅಷ್ಟೇ ಕೆಲವೊಂದು ಪ್ರೊಟೀನ್‌ಗಳನ್ನು ಮತ್ತು ವಿಟಮಿನ್‌ಗಳನ್ನು ಮೊಟ್ಟೆಯು ನೇರವಾಗಿ ನಮ್ಮ ದೇಹಕ್ಕೆ ನೀಡುತ್ತದೆ. ಮೊಟ್ಟೆ ತಿಂದರೆ ಅವಶ್ಯಕ ಪ್ರೋಟಿನ್‌ಮತ್ತಿತರ ಪ್ರಾಣಿ ಜನ್ಯ ಪೌಷ್ಟಿಕಾಂಶ ಪಡೆಯಲು ಪ್ರಾಣಿಗಳ ಮಾಂಸ ಸೇವಿಸುವ ಅವಶ್ಯಕತೆಯಿಲ್ಲ. ಮೊಟ್ಟೆಯಲ್ಲಿರುವ ಪೌಷ್ಟಿಕಾಂಶ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಈಗಾಗಲೇ ನಡೆದಿರುವ ಅಧ್ಯಯನದ ಪ್ರಕಾರ ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ ಮಕ್ಕಳ ಎತ್ತರ ಮತ್ತು ಗಾತ್ರದಲ್ಲಿ ಸಾಕಷ್ಟು ವ್ಯತ್ಯಾಸ ಆಗಿರುವುದನ್ನು ಮತ್ತು ಕಲಿಕೆಯಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿರುವುದನ್ನು ವರದಿಗಳು ಸಾಬೀತು ಪಡಿಸಿವೆ. ಕೆಲವು ವರ್ಷಗಳ ಹಿಂದೆ ‘ದಿನಕ್ಕೊಂದು ಮೊಟ್ಟೆ ತಿನ್ನಿ’ ಎಂದು ಭಾರತ ಸರಕಾರದ ರಾಷ್ಟ್ರೀಯ ಎಗ್ ಕೋ-ಆರ್ಡಿನೇಷನ್ ಸಮಿತಿಯು ದೂರದರ್ಶನದ ಮೂಲಕ ಜಾಹೀರಾತು ನೀಡುತ್ತಿದ್ದುದನ್ನು ನಾವು ಇಲ್ಲಿ ಸ್ಮರಿಸಬಹುದು. ಇದನ್ನೇ ಮುಂದುವರಿಸಿ ಹೇಳುವುದಾದರೆ ಅಪೌಷ್ಟಿಕತೆ ಮಕ್ಕಳ ಕಲಿಕೆಯ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಅಪೌಷ್ಟಿಕತೆ ಸಮಸ್ಯೆಯಿಂದ ಮೆದುಳಿನ ಬೆಳವಣಿಗೆ ಸರಿಯಾಗಿ ಆಗದೆ ಕಲಿಕೆಯು ಸರಿಯಾಗಿ ನಡೆಯದೆ ಅದು ಮಕ್ಕಳ ಶೈಕ್ಷಣಿಕ ಫಲಿತಾಂಶದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ಭಾರತ ಮೂಲದ ಆರ್ಥಿಕತಜ್ಞ ಬ್ಯಾನರ್ಜಿಯವರಿಗೆ ಎರಡು ವರ್ಷಗಳ ಹಿಂದೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಬಹುಮಾನ ಸಹ ಸಿಕ್ಕಿದೆ ಎನ್ನುವ ವಿಚಾರವನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಇಲ್ಲಿ ನಾವು ಇನ್ನೊಂದು ವಿಚಾರವನ್ನು ಕೂಡಾ ಗಮನಿಸಬೇಕಾಗುತ್ತದೆ. ಶಾಲೆಯಲ್ಲಿ ವಿವಿಧ ತರಗತಿಗಳಲ್ಲಿ ವಿವಿಧ ವಯಸ್ಸಿನ ಮಕ್ಕಳು ಇರುವುದರಿಂದ ಎಲ್ಲಾ ವಯಸ್ಸಿನ ಮಕ್ಕಳಿಗೆ ಒಂದೇ ರೀತಿಯ ಆಹಾರವನ್ನು ನೀಡಲು ಸಾಧ್ಯವಿಲ್ಲ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ. ಅದಕ್ಕೆ ಸರಕಾರದ ಬಳಿ ಅಷ್ಟು ಹಣವಿದೆಯೇ? ಬಿಸಿಯೂಟ ಯೋಜನೆಯಲ್ಲಿ ಸಾಧ್ಯವಾದಷ್ಟು ವಯಸ್ಸಿಗೆ ತಕ್ಕಂತೆ ಆಹಾರವನ್ನು ನೀಡುವುದು ಅವಶ್ಯಕ ಎನ್ನುವುದು ಒಂದು ವರ್ಗದ ಅಭಿಪ್ರಾಯವಾಗಿದೆ. ಮೊಟ್ಟೆಯ ಬದಲಾಗಿ ಧಾನ್ಯಗಳನ್ನು ಅಥವಾ ಕಾಳುಗಳನ್ನು ಅಥವಾ ಬದಲಾಗಿ ಬಾಳೆಹಣ್ಣುಗಳನ್ನು ನೀಡುವುದು ಇವೆಲ್ಲವೂ ಅಸಮತೋಲಿತ ಆಹಾರಕ್ಕೆ ಕಾರಣವಾಗುವ ಸಾಧ್ಯತೆ ಖಂಡಿತ ಇರುತ್ತದೆ ಎನ್ನುತ್ತಾರೆ ಆಹಾರ ತಜ್ಞರು.
ಈಗಾಗಲೇ ಭಾರತದಲ್ಲಿ ಊಟದಲ್ಲಿ ಪಂಕ್ತಿ ಭೇದ ವ್ಯವಸ್ಥೆ ಬೇರೂರಿದೆ. ತಮಿಳುನಾಡು ಸರಕಾರವು ಅಲ್ಲಿನ ಮಕ್ಕಳಿಗೆ 50 ವರ್ಷಗಳಿಂದಲೂ ಮೊಟ್ಟೆಯನ್ನು ಬಿಸಿಯೂಟದ ಭಾಗವಾಗಿ ನೀಡುತ್ತಿದೆ. ಅಲ್ಲಿ ಯಾವ ಸಮಸ್ಯೆಯೂ ಬಂದಿಲ್ಲ. ಕೊರೋನ ಸಮಯದಲ್ಲಿ ಶಾಲೆಗಳು ನಡೆಯದೆ ಮಕ್ಕಳಿಗೆ ಬಿಸಿಯೂಟ ಸಿಗದೆ ಮಕ್ಕಳ ರೋಗನಿರೋಧಕ ಶಕ್ತಿಯು ಕ್ರಮೇಣ ಕುಂದುತ್ತಿರುವುದನ್ನು ವೈಜ್ಞಾನಿಕ ವರದಿಗಳು ಸಾಬೀತುಪಡಿಸುತ್ತಿವೆ. ಮೊಟ್ಟೆ ನೀಡುವಿಕೆಯಿಂದ ಇಷ್ಟೆಲ್ಲ ಉಪಯೋಗವಿದ್ದರೂ ಇದರ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳು ಹುಟ್ಟಿಕೊಳ್ಳುತ್ತಿರುವುದು ಸರಿಯಲ್ಲ ಎನ್ನುವುದು ಕೆಲ ಶಿಕ್ಷಕರ ವಾದವಾಗಿದೆ. ಮೊಟ್ಟೆ ಕೊಡುವ ವಿಚಾರ ವಿವಾದವಾಗುತ್ತಿರುವ ಹಿನ್ನೆಲೆಯಲ್ಲಿ ಬಾಳೆಹಣ್ಣು ಅಥವಾ ಸೊಯಾಬೀನ್ ಕೊಡುವ ಕುರಿತು ಶಿಕ್ಷಣ ಇಲಾಖೆ ಚಿಂತಿಸುತ್ತಿರುವ ಮಾಹಿತಿ ಹೊರಬಿದ್ದಿದೆ.
ಆಹಾರದ ಆಧಾರದ ಮೇಲೆ ಸಮಾಜ ಮತ್ತು ದೇಶವನ್ನು ವಿಭಾಗಿಸುವ ಕೆಲಸ ಎಷ್ಟರಮಟ್ಟಿಗೆ ಸರಿ ಎನ್ನುವುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಬಿಸಿಯೂಟ ಯೋಜನೆ ಜಾರಿಗೆ ಬಂದ ನಂತರ ಶಿಕ್ಷಕರಿಗೆ ಪಾಠ ಮಾಡುವುದರ ಬದಲಾಗಿ ಊಟ ನೀಡುವುದೇ ಬಹುದೊಡ್ಡ ಕೆಲಸವಾಗಿದೆ. ಇದರಿಂದ ಪಾಠದ ಅವಧಿ ಕಡಿಮೆಯಾಗಿದೆ ಎಂದು ಕೆಲವರ ಅಭಿಪ್ರಾಯವೂ ಇದೆ. ತಜ್ಞರ ಪ್ರಕಾರ ಕೇಂದ್ರೀಯ ಆಹಾರ ತಂತ್ರಜ್ಞಾನ ಮಂಡಳಿ, ಕೇಂದ್ರರಕ್ಷಣಾ ಆಹಾರ ತಂತ್ರಜ್ಞಾನ ಮಂಡಳಿ ಇವರು ಗಡಿಕಾಯುವ ಯೋಧರಿಗಾಗಿ ತಯಾರಿಸುವ ಅತ್ಯುತ್ತಮ ಪೌಷ್ಟಿಕಾಂಶ ಇರುವ ಆಹಾರಗಳನ್ನು ಮಕ್ಕಳಿಗೆ ಮಧ್ಯಾಹ್ನ ನೀಡುವ ಕುರಿತಾಗಿ ಯೋಚಿಸಬಹುದಾಗಿದೆ. ಇದರೊಂದಿಗೆ ಅಷ್ಟೇ ಮುಖ್ಯವಾಗಿ ಶಾಲಾ ಪಠ್ಯದಲ್ಲಿ ಆಹಾರದ ಬಗ್ಗೆ ಮಕ್ಕಳಿಗೆ ಸರಿಯಾದ ಮಾಹಿತಿಯನ್ನು ಕೊಡಬೇಕು. ಸಸ್ಯಾಹಾರ ಮತ್ತು ಮಾಂಸಾಹಾರಗಳ ನಡುವೆ ಇರುವ ವ್ಯತ್ಯಾಸವನ್ನು ಕಲಿಸಿಕೊಡಬೇಕಾಗುತ್ತದೆ.