varthabharthi


ಸಿನಿಮಾ

‌ಮಮ್ಮುಟ್ಟಿ ಸಿನಿಮಾ ಪ್ರಯಾಣಕ್ಕೆ ಮರಳಿ ಜೀವ ತುಂಬಿದ ʼನ್ಯೂ ಡೆಲ್ಲಿʼಗೆ 35 ವರ್ಷದ ಸಂಭ್ರಮ.!

ವಾರ್ತಾ ಭಾರತಿ : 23 Jul, 2022
✍ Saleeth Sufiyan

Photo: Twitter/_bassim_7

ಕೊಚ್ಚಿ: ಅದು 80 ರ ದಶಕ. ಮಳೆಯಾಲಂ ಚಿತ್ರರಂಗದಲ್ಲಿ ʼಬಿಗ್‌ ಎಮ್‌ʼ ಗಳೆಂದೇ ಗುರುತಿಸಿಕೊಂಡಿರುವ ಮಮ್ಮುಟ್ಟಿ, ಮೋಹನ್‌ ಲಾಲ್‌ ಎಂಬ ನಟರ ಪ್ರವರ್ಧಮಾನದ ಕಾಲ. ಅದಾಗ್ಯೂ, ಆ ದಶಕದ ಮಧ್ಯಂತರದ ಅವಧಿಯ ವೇಳೆಗಾಗುವಾಗ ಮಮ್ಮುಟ್ಟಿಯವರು ಸತತ ಸೋಲಿನಿಂದ ಕಂಗೆಟ್ಟಿದ್ದರು. ಒಂದೆಡೆಯಲ್ಲಿ ಮೋಹನ್‌ ಲಾಲ್‌ ತಮ್ಮ ಜನಪ್ರಿಯತೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳುತ್ತಿರುವಾಗ ನಿರಂತರ ಸೋಲಿನಿಂದ ಮಮ್ಮುಟ್ಟಿ ಚಿತ್ರ ನಿರ್ಮಾಪಕರ ಅವಜ್ಞೆಗೆ ಒಳಗಾಗುತ್ತಿದ್ದರು. ಹೀಗಿರುವಾಗ ಅವರ ಸಿನೆಮಾ ಬದುಕಿನಲ್ಲಿ ದೊಡ್ಡ ತಿರುವು ನೀಡಿದ ಚಿತ್ರ ʼನ್ಯೂ ಡೆಲ್ಲಿʼ.

ಡೆನ್ನಿಸ್ ಜೋಸೆಫ್ ಬರೆದ, ಜುಬಿಲಿ ಪ್ರೊಡಕ್ಷನ್ಸ್‌ನ ಜಾಯ್ ಥಾಮಸ್ ನಿರ್ಮಿಸಿದ, ಜೋಶಿಯವರ ನಿರ್ದೇಶನದ ನ್ಯೂಡೆಲ್ಲಿ ಮಮ್ಮುಟ್ಟಿ ಸಿನೆಮಾ ಬದುಕಿನ ದೊಡ್ಡ ಮೈಲಿಗಲ್ಲಾಗಿರುವುದು ಈಗ ಇತಿಹಾಸ. ಮಲಯಾಳಂನ ಅತ್ಯುತ್ತಮ ಆಕ್ಷನ್ ಥ್ರಿಲ್ಲರ್ ಚಲನಚಿತ್ರ ಎಂದು ಕರೆಯುವ ಕಲ್ಟ್ ಕ್ಲಾಸಿಕ್ ವಿಭಾಗದಲ್ಲಿ ಪರಿಗಣಿಸಲಾಗುವ ʼನ್ಯೂ ಡೆಲ್ಲಿʼ ಚಿತ್ರವನ್ನು ಬಿಡುಗಡೆಗೂ ಮೊದಲೇ ವೀಕ್ಷಿಸಿದ್ದ ಖ್ಯಾತ ನಿರ್ದೇಶಕ ಪ್ರಿಯದರ್ಶನ್‌, ಮೋಹನ್‌ ಲಾಲ್‌ ಗೆ ಕರೆ ಮಾಡಿ ʼಮಮ್ಮುಟ್ಟಿ ಮರಳಿ ಬರುತ್ತಿದ್ದಾರೆʼ ಎಂದರಂತೆ. ಇದನ್ನು ಹೇಳಿದ್ದು ಸ್ವತಃ ನ್ಯೂ ಡೆಲ್ಲಿ ಕತೆಯನ್ನು ಬರೆದ ಡೆನ್ನಿಸ್‌ ಜೋಸೆಫ್.‌

  ಸಂದರ್ಶನವೊಂದರಲ್ಲಿ ಡೆನ್ನಿಸ್‌, ನ್ಯೂಡೆಲ್ಲಿ ಬಿಡುಗಡೆಯಾದ ಸಮಯ ಮತ್ತು ಅದರ ಸೂಪರ್‌ಹಿಟ್ ಯಶಸ್ಸಿನ ಪರಿಣಾಮದ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. 1987 ರಲ್ಲಿ ಬಿಡುಗಡೆಯಾದ ನ್ಯೂ ಡೆಲ್ಲಿ ಚಿತ್ರಕ್ಕೆ ಈಗ 35 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಕುರಿತಾದ ಸ್ವಾರಸ್ಯಕರ ಕೆಲವು ಅಂಶಗಳನ್ನು ಡೆನ್ನಿಸ್‌ ಅವರ ಸಂದರ್ಶನದಿಂದ ಆಯ್ದು ಇಲ್ಲಿ ನೀಡಲಾಗಿದೆ.  

 ನ್ಯೂಡೆಲ್ಲಿ ಚಿತ್ರದ ಯಶಸ್ಸು ಮಮ್ಮುಟ್ಟಿಗೆ ಮಾತ್ರವಲ್ಲದೆ, ಡೆನ್ನಿಸ್ ಜೋಸೆಫ್ ಮತ್ತು ಜೋಶಿಯವರ ಬರಹಗಾರ-ನಿರ್ದೇಶಕ ಜೋಡಿಗೂ ತೀರಾ ಅನಿವಾರ್ಯವಾಗಿತ್ತು.  ಡೆನ್ನಿಸ್‌ ಹಾಗೂ ಜೋಶಿ ಜೋಡಿಯ ಸಾಯಂ ಸಂಧ್ಯಾ, ಶ್ಯಾಮ, ನ್ಯಾಯವಿಧಿ ಮತ್ತು ಆಯಿರಂ ಕಣ್ಣುಕಲ್ ಚಿತ್ರಗಳಲ್ಲಿ ಯಾವುದೂ ಗಲ್ಲಾ ಪೆಟ್ಟಿಗೆಯನ್ನು ಗೆದ್ದಿರಲಿಲ್ಲ. ಅದೇ ವೇಳೆ, ಬಹುತೇಕ ನಿರ್ಮಾಪಕರು ಮಮ್ಮುಟ್ಟಿಯನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ್ದರೂ ಜುಬಿಲಿಯ ಜಾಯ್ ಥಾಮಸ್ ಅವರನ್ನು ಮರಳಿ ಕರೆತರಲು ಅದನ್ನು ಸವಾಲಾಗಿ ತೆಗೆದುಕೊಂಡರು. ಒಂದೆಡೆ ಸೋಲುಣ್ಣುತ್ತಿರುವ ನಟ, ಇನ್ನೊಂದೆಡೆ ಗೆಲುವು ಮರೆತಿರುವ ಬರಹಗಾರ-ನಿರ್ದೇಶಕ ಜೋಡಿ. ಈ ಎಲ್ಲಾ ಕಾರಣಕ್ಕಾಗಿ ನ್ಯೂ ಡೆಲ್ಲಿ ಚಿತ್ರವು ಹಲವು ಸವಾಲುಗಳಿಂದ ಕೂಡಿದ್ದವು.

ಚಿತ್ರದ ಕತೆಯ ಸುತ್ತ…

 ಈ ಚಿತ್ರವು ಅಮೆರಿಕಾದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ನಿರ್ಮಿಸಿದ ಕತೆಯಾಗಿದೆ. ಟ್ಯಾಬ್ಲಾಯ್ಡ್‌ ಪತ್ರಿಕೆಯ ಮಾಲಿಕರೊಬ್ಬರು ಅಮೆರಿಕಾ ಅಧ್ಯಕ್ಷರನ್ನು ಹತ್ಯೆಗೈಯಲು ಬಾಡಿಗೆ ಕೊಲೆಗಾರರ ತಂಡವೊಂದಕ್ಕೆ ಹಣ ನೀಡುತ್ತಾರೆ. ಮತ್ತು, ಹತ್ಯೆಯ ಕುರಿತು ತಮ್ಮ ಮರುದಿನದ ಪತ್ರಿಕೆಯಲ್ಲಿ ವರದಿಯನ್ನು ಮುದ್ರಿಸುತ್ತಾರೆ. ಆದರೆ, ಯೋಜನೆ ಕೈಗೂಡದೆ, ಟ್ಯಾಬ್ಲಾಯ್ಡ್ ಮಾಲೀಕರು ಸಿಕ್ಕಿಬೀಳುತ್ತಾರೆ. ಇದನ್ನೇ ಸ್ಥಳೀಯ ಪರಿಸರಕ್ಕೆ ಅನುಗುಣವಾಗುವಂತೆ ಯೋಚಿಸಿ ಕತೆ ಬರೆಯಲು ತೊಡಗುತ್ತಾರೆ.  ಅದಾಗ್ಯೂ, ಕೇರಳದ ಜನತೆ ಮಳೆಯಾಲಂ ಪತ್ರಿಕೆಯೊಂದರ ಮಾಲಿಕರು ಇಂತಹ ಕೃತ್ಯದಲ್ಲಿ ತೊಡಗುವುದನ್ನು ಕಲ್ಪಿಸಲೂ ಸಾಧ್ಯವಿರದಿದ್ದರಿಂದ ಈ ಕತೆ ನಡೆಯುವ ಸ್ಥಳವನ್ನು ದಿಲ್ಲಿಗೆ ಸ್ಥಳಾಂತರಿಸುತ್ತಾರೆ. ಹಾಗೆ ರೂಪುಗೊಂಡ ಕತೆಯೇ ʼನ್ಯೂ ಡೆಲ್ಲಿʼ. ಈಗಾಗಲೇ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಹತ್ಯೆ ಬಳಿಕ ದಿಲ್ಲಿಯನ್ನು ಬೆರಗಿನಿಂದಲೇ ನೋಡುತ್ತಿದ್ದ ಮಳೆಯಾಲಿ ಪ್ರೇಕ್ಷಕರಿಗೆ ದಿಲ್ಲಿಯಲ್ಲಿ ಏನು ಬೇಕಾದರೂ ನಡೆಯಬಹುದು ಎಂದು ಕಲ್ಪಿಸಲು ಸಾಧ್ಯವಾಗಬಹುದು ಎಂದು ಅಂದಾಜು ಮಾಡಿಕೊಂಡಿದ್ದರು.  

 ದಿಲ್ಲಿಯಲ್ಲೇ ಕತೆ ನಡೆಯುವುದರಿಂದ ಚಿತ್ರೀಕರಣವು ದಿಲ್ಲಿಯ ಸುತ್ತಲೇ ನಡೆಯಬೇಕಿತ್ತು. ಹಾಗಾಗಿಯೇ ಚಿತ್ರ ಬಜೆಟ್‌ ದೊಡ್ಡದಾಗಿತ್ತು. ಒಂದು ಹಂತದಲ್ಲಿ, ಮಮ್ಮುಟ್ಟಿಯ ಸಂಭಾವನೆಯ ಕಾಲು ಭಾಗದಷ್ಟರನ್ನು ಪ್ರತಿಷ್ಟಿತ ಸೆಂಟೌರ್‌ ಹೊಟೇಲಿನಲ್ಲಿ ಚಿತ್ರೀಕರಣ ಮಾಡಲು ಪ್ರತಿ ಗಂಟೆಗೆ ಪಾವತಿಸಲು ನಿರ್ಮಾಪಕರು ಒಪ್ಪಿಕೊಂಡಿದ್ದರು. ಆದರೆ, ನಂತರ ಹೊಟೆಲಿನ ಮಲೆಯಾಳಿ ಮ್ಯಾನೇಜರ್‌ ಉಚಿತವಾಗಿ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದ್ದರು.

ಚಿತ್ರೀಕರಣದ ಸಮಯದಲ್ಲಿ ತಂತ್ರಜ್ಞರು ಮತ್ತು ಸಿಬ್ಬಂದಿ ಕೇರಳ ಹೌಸ್‌ನಲ್ಲಿ ತಂಗಿದ್ದರು. ಡೆನ್ನಿಸ್ ಜೋಸೆಫ್ ಮೊದಲ ಶಾಟ್‌ಗೆ ಕೆಲವೇ ಗಂಟೆಗಳ ಮೊದಲು ದಿನದ ಚಿತ್ರೀಕರಣಕ್ಕೆ ಬೇಕಾದ ಸ್ಕ್ರಿಪ್ಟ್ ಅನ್ನು ಬರೆದು ಪೂರ್ಣ ಗೊಳಿಸಿರುತ್ತಾರೆ. ಈ ಪ್ರಕ್ರಿಯೆಯಲ್ಲಿ,   ಛಾಯಾಗ್ರಾಹಕ ವಿಕ್ಟರ್ ಜಾರ್ಜ್ ಅವರು ಜೋಸೆಫ್ ಅವರನ್ನು ತಮ್ಮ ಸ್ಕೂಟರ್‌ನಲ್ಲಿ "ಲೊಕೇಶನ್‌" ನೋಡಲು ಕರೆದುಕೊಂಡು ಹೋಗುತ್ತಿದ್ದರು. ಈ ಸ್ಕೂಟರ್‌ನ ಹಿಂಭಾಗದಲ್ಲಿ ಕುಳಿತು ನೋಡಿದ ಸ್ಥಳಗಳ ಸುತ್ತಲೂ ಸಂಪೂರ್ಣ ದೃಶ್ಯಗಳನ್ನು ಜೋಸೆಫ್‌ ಬರೆದಿದ್ದರು. ತರಾತುರಿಯಲ್ಲಿ ಬರೆದ ಚಿತ್ರಕತೆಯಾದ್ದರಿಂದ ಕೆಲವು ಸ್ಥಳಗಳಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿರಲಿಲ್ಲ. ಅಂದಿನ ಕೆಲವು ಕಾಂಗ್ರೆಸ್‌ ನಾಯಕರು ತಮ್ಮ ಪ್ರಭಾವ ಬಳಸಿ ಚಿತ್ರೀಕರಣ ಮಾಡಲು ಸಹಾಯ ಮಾಡಿದ್ದರು.

80 ರ ದಶಕದಲ್ಲಿ ಪ್ಯಾನ್ ಇಂಡಿಯನ್ ಯಶಸ್ಸು

ಚಿತ್ರವು ಕೇರಳದಲ್ಲಿ ಬ್ಲಾಕ್ಬಸ್ಟರ್ ಆಯಿತು, ಆದರೆ ಚಿತ್ರದ ಮ್ಯಾಜಿಕ್ ರಾಜ್ಯದ ಗಡಿಯಾಚೆಯೂ ಪ್ರಯಾಣಿಸಿತ್ತು. ಚೆನ್ನೈನ ಸಫೈರ್ ಥಿಯೇಟರ್‌ನಲ್ಲಿ, ಚಿತ್ರವು 100 ದಿನಗಳ ಕಾಲ ಓಡಿ ದಾಖಲೆ ನಿರ್ಮಿಸಿತು. ಆಗ ಮಲಯಾಳಂ ಚಿತ್ರವೊಂದು ಗರಿಷ್ಟ ಎರಡು ವಾರಗಳು ಮಾತ್ರ ಓಡುತ್ತಿದ್ದ ಕಾಲವಾಗಿತ್ತು ಅದು. ಚಿತ್ರ ಬಳಿಕ ತೆಲುಗು, ಹಿಂದಿ ಮತ್ತು ಕನ್ನಡಕ್ಕೆ ಕೂಡಾ ರೀಮೇಕ್ ಆಯಿತು.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)