ಸಾಧ್ಯತೆ ಮತ್ತು ಮಿತಿ ಅರಿತ ಕೃತಿ ‘ವಿಶ್ವಾಸ’
ಜುಲೈ 24ರಂದು ಕೃತಿ ಬಿಡುಗಡೆ ಕಾರ್ಯಕ್ರಮ
ಇಂದ್ರಕುಮಾರ್ ಎತ್ತರದ ನಿಲುವಿನ ಠಾಕುಠೀಕಾದ ವೇಷ ಭೂಷಣದ ಮನುಷ್ಯ. ಅವರು ಕೋಟು ಧರಿಸದೇ ಎಲ್ಲಿಯಾದರೂ ಬಂದುದನ್ನು ನಾನು ಕಂಡಿದ್ದಿಲ್ಲ. ಅದು ಅವರ ವೃತ್ತಿ ಕಲಿಸಿದ ಶಿಸ್ತು ಇರಬಹುದು. ಅಥವಾ ಅವರು ತಮ್ಮ ಜೀವನದಲ್ಲಿ ರೂಢಿಸಿಕೊಂಡ ಅಚ್ಚುಕಟ್ಟುತನ ಇರಬಹುದು. ಮುಟ್ಟಿದರೆ ಸಾಕು ರಕ್ತ ಚಿಮ್ಮಬಹುದಾದ ಬಣ್ಣ ಅವರದು. ನೋಡಲು ಸುಂದರ ವ್ಯಕ್ತಿ. ಮಾತಿನಲ್ಲಿ ವಿನಯ. ಸಹೃದಯತೆ. ತಾನು ಒಬ್ಬ ನ್ಯಾಯಾಧೀಶನಾಗಿ ನಿವೃತ್ತನಾದವ ಎಂಬ ಅಹಮಿಕೆ ಇಲ್ಲದ ಮೃದುತ್ವ.
ಇಂದ್ರಕುಮಾರ್ ಅವರು ತುಮಕೂರು ಜಿಲ್ಲೆಯವರು. ಅವರ ತಂದೆ ಜ್ವಾಲನಪ್ಪ. ತಾಯಿ ಸುವರ್ಣಮ್ಮ. ಇಂದ್ರಕುಮಾರ್ ತಮ್ಮ ಕುಟುಂಬದ ಕೊನೆಯ ಮಗ. ಜ್ವಾಲನಪ್ಪ ಅವರು ತಮ್ಮ ಊರು ಮರಳೂರಿನಲ್ಲಿ ‘ಸಾಹುಕಾರ್’ ಎಂದು ಹೆಸರಾಗಿದ್ದವರು. ಆದರೆ, ದಾಯಾದಿ ಕಲಹಗಳ ಕಾರಣವಾಗಿ ಅವರ ಶ್ರೀಮಂತಿಕೆ ಬಹಳ ಕಾಲ ಉಳಿಯಲಿಲ್ಲ. ಹಾಗೆ ನೋಡಿದರೆ ಇಂದ್ರಕುಮಾರ್ ಕಷ್ಟನಷ್ಟಗಳನ್ನು ಅನುಭವಿಸಿಯೇ ಬೆಳೆದರು. ಅತ್ಯಂತ ಆಕಸ್ಮಿಕವಾಗಿ ಅವರು ಕಾನೂನು ಕಲಿತರು. ನಂತರ, ಬಹುಶಃ ಅಷ್ಟೇ ಆಕಸ್ಮಿಕವಾಗಿ, ನ್ಯಾಯಾಧೀಶ ವೃತ್ತಿಯನ್ನೂ ಸೇರಿಕೊಂಡರು. ಮುನ್ಸೀಫ್ ಆಗಿ ಕೆಲಸಕ್ಕೆ ಸೇರಿದ ಅವರು ಲೋಕಾಯುಕ್ತದ ರಿಜಿಸ್ಟ್ರಾರ್ ಆಗಿ ನಿವೃತ್ತರಾದರು. ಇದು ಅವರ ಸ್ಥೂಲ ಪರಿಚಯ. ಬಯೊಡೇಟ.
ಜೀವನ ಎಂದರೆ ಇಷ್ಟೇ ಇರುವುದಿಲ್ಲ. ಅಲ್ಲಿ ಅನೇಕ ಏಳು ಬೀಳುಗಳು ಇರುತ್ತವೆ. ಒಂದು ಜೀವನ ಚರಿತ್ರೆಯಲ್ಲಿ ಎಲ್ಲವನ್ನೂ ಹಿಡಿದು ಇಡಲೂ ಆಗುವುದಿಲ್ಲ. ಹಾಗೆ ನೋಡಿದರೆ ಆತ್ಮಚರಿತ್ರೆಗೆ ಹೆಚ್ಚಿನ ಅವಕಾಶಗಳು ಇರುತ್ತವೆ. ಆದರೆ, ಎಲ್ಲರೂ ಆತ್ಮಚರಿತ್ರೆ ಬರೆಯಲು ಆಗುವುದಿಲ್ಲ. ಆತ್ಮಚರಿತ್ರೆ ಬರೆಯುವುದು ಸುಲಭವೂ ಅಲ್ಲ. ಅನೇಕ ಸಂಗತಿಗಳನ್ನು ಬರೆಯುವಂತೆ ಇರುವುದಿಲ್ಲ. ತಮ್ಮ ದೌರ್ಬಲ್ಯಗಳನ್ನು ಹೇಳಿಕೊಳ್ಳಲು ಯಾರು ಬಯಸುತ್ತಾರೆ? ತಾವು ಮಾಡಿದ ತಪ್ಪುಗಳನ್ನು ಯಾರು ತಾನೇ ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ? ಏಕೆಂದರೆ, ದೌರ್ಬಲ್ಯಗಳು ಇಲ್ಲದ, ತಪ್ಪು ಮಾಡದ ಮನುಷ್ಯ ಇರಲು ಸಾಧ್ಯವಿಲ್ಲ.
ಮಹಾತ್ಮರು ಎನಿಸಿದ ಗಾಂಧಿಯೇ ಪರಿಪೂರ್ಣ ವ್ಯಕ್ತಿಯಾಗಿರಲಿಲ್ಲ. ಎಲ್ಲ ಆತ್ಮಚರಿತ್ರಕಾರರೂ ತಮ್ಮ ಜೀವನದಲ್ಲಿ ಘಟಿಸಿದ್ದನ್ನೆಲ್ಲ ಆತ್ಮಚರಿತ್ರೆಯಲ್ಲಿ ಬರೆಯುತ್ತಾರೆ ಎಂದೂ ಅಲ್ಲ. ಬರೆಯಲು ಆಗುವುದೂ ಇಲ್ಲ. ಅದಕ್ಕಾಗಿಯೇ ಅನೇಕರು ಆತ್ಮಚರಿತ್ರೆ ಬರೆಯುವ ಗೊಡವೆಗೇ ಹೋಗುವುದಿಲ್ಲ. ಈ ಮಿತಿಗಳು ಜೀವನಚರಿತ್ರಕಾರನಿಗೂ ಇರುತ್ತವೆ. ಆತನಿಗೆ ತಾನು ಜೀವನಚರಿತ್ರೆ ಬರೆಯುವ ವ್ಯಕ್ತಿಯ ಕುರಿತು ವಿವಿಧ ಮೂಲಗಳಿಂದ ಲಭ್ಯವಾದ ಮಾಹಿತಿಯನ್ನು ಸಂಗ್ರಹಿಸಿ ಕೃತಿಯನ್ನು ರಚಿಸಬೇಕಾಗುತ್ತದೆ. ಇದು ಒಂದು ಸಾಧ್ಯತೆ; ಒಂದು ಮಿತಿ.
ಈ ಸಾಧ್ಯತೆ ಮತ್ತು ಮಿತಿಯನ್ನು ಅರಿತುಕೊಂಡೇ ಪ್ರೊ.ದಯಾನಂದ ಅವರು ಈ ಕೃತಿಯನ್ನು ರಚಿಸಿದ್ದಾರೆ. ದಯಾನಂದ ಮತ್ತು ಇಂದ್ರಕುಮಾರ್ ಅವರು ಆರು ದಶಕಗಳ ಗೆಳೆಯರು. ಸಹಪಾಠಿಗಳು. ಕೂಡಿ ಓದಿದವರು, ಕೂಡಿ ಆಡಿದವರು. ನಕ್ಕು ನಲಿದವರು. ಸುಖ ದುಃಖಗಳನ್ನು ಹಂಚಿಕೊಂಡವರು. ಏಕ ವಚನದಲ್ಲಿ ತಮಾಷೆ ಮಾಡಿಕೊಂಡವರು. ಈ ಕೃತಿಯಲ್ಲಿ ಎಲ್ಲಿ ಮೌನ ತಾಳಬೇಕೊ, ಎಲ್ಲಿ ತೇಲಿಸಬೇಕೋ ಅಲ್ಲಿ ಮೌನ ತಾಳುವ, ಅಲ್ಲಿ ತೇಲಿಸುವ ಜಾಣ್ಮೆಯನ್ನು ಲೇಖಕರು ನಿರ್ವಹಿಸಿದ್ದಾರೆ.
ಹತ್ತು ಅಧ್ಯಾಯಗಳಲ್ಲಿ ಹರಡಿರುವ ಸುಮಾರು ಇನ್ನೂರು ಪುಟದ ಇಂದ್ರಕುಮಾರ್ ಅವರ ಜೀವನಚರಿತ್ರೆಗೆ ಲೇಖಕರು ‘ವಿಶ್ವಾಸ’ ಎಂಬ ಹೆಸರು ಇಟ್ಟಿದ್ದಾರೆ. ಮೂರು ಅಕ್ಷರಗಳ ವಿಶ್ವಾಸದ ವ್ಯಾಪ್ತಿ ಬಹಳ ದೊಡ್ಡದು. ಈ ಶೀರ್ಷಿಕೆಯು ಈ ಕೃತಿಯ ಕೇಂದ್ರ ವ್ಯಕ್ತಿ ಎಂಥವರು ಎಂಬುದನ್ನು ಅತ್ಯಂತ ಸಂಕ್ಷಿಪ್ತವಾಗಿ ಆದರೆ, ಅತ್ಯಂತ ಸಮರ್ಥವಾಗಿ ಹೇಳುತ್ತದೆ. ಇಂದ್ರಕುಮಾರ್ ಅವರು ತಮ್ಮ ಬದುಕಿನಲ್ಲಿ ಮತ್ತು ವೃತ್ತಿಜೀವನದಲ್ಲಿ ಉಳಿಸಿಕೊಂಡುದು ಈ ವಿಶ್ವಾಸವನ್ನು, ಕಾಪಾಡಿಕೊಂಡುದು ಈ ಭರವಸೆಯನ್ನು. ಇದು ಸಣ್ಣ ಸಂಗತಿಯಲ್ಲ. ಒಬ್ಬ ಮನುಷ್ಯ ವಿಶ್ವಾಸಾರ್ಹ ಎಂಬ ನಂಬಿಕೆ ಮೂಡಿಸಬೇಕಾದರೆ ಆ ವ್ಯಕ್ತಿ ಪ್ರಾಮಾಣಿಕನಾಗಿರಬೇಕು, ಸಜ್ಜನನಾಗಿರಬೇಕು, ಸ್ನೇಹಜೀವಿಯಾಗಿರಬೇಕು, ವಹಿಸಿದ ಕೆಲಸ ವನ್ನು ನಿಭಾಯಿಸುವಂಥವನಾಗಿರಬೇಕು, ದಕ್ಷನಾಗಿರಬೇಕು. ಇಂದ್ರಕುಮಾರ್ ಅವರಲ್ಲಿ ಈ ಎಲ್ಲ ಗುಣಗಳು ಮೇಳೈಸಿವೆ. ಅಂತಲೇ ಅವರು ಈ ಎತ್ತರಕ್ಕೆ ಏರಲು ಸಾಧ್ಯವಾಯಿತು. ಅವರು ಈಗ ಜೀವನದಲ್ಲಿ ಗಳಿಸಿದ ‘ಸ್ನೇಹ’(ವ್ಯಕ್ತಿಗಳ)ವನ್ನು ಸಂಪಾದಿಸಲು ಅದೇ ಕಾರಣವಾಯಿತು.
ಜೀವನವೇ ಹಾಗೆ.. ಅದು ಅನೇಕ ಆಕಸ್ಮಿಕಗಳ ಒಂದು ದೊಡ್ಡ ಆಟ. ಇಂದ್ರಕುಮಾರ್ ಅವರ ಜೀವನದಲ್ಲಿಯೂ ಹಾಗೆಯೇ ಆಗುತ್ತದೆ. ಅವರ ಜೀವನದ ಬಂಡಿಯನ್ನು ಅವರ ತಾಯಿ ನಿರ್ದೇಶಿಸುವಂತೆ ಕಾಣುತ್ತದೆ. ಅವರ ತಾಯಿಯ ಹೆಸರು ಸುವರ್ಣಮ್ಮ. ಅವರು ಭೂಮಿತೂಕದ ಹೆಣ್ಣು ಮಗಳು. ಕ್ಷಮೆಯೇ ಮೂರ್ತಿವೆತ್ತಂಥವರು. ತನ್ನ ಎಲ್ಲ ಕಷ್ಟಗಳನ್ನು ಅವಡುಗಚ್ಚಿ ನುಂಗಿದವರು. ಯಾರಿಗೂ ಕಾಣದಂತೆ ಆಚೆ ಮುಖ ಮಾಡಿ ಕಣ್ಣಂಚಿನಲ್ಲಿ ನಿಂತ ನೀರನ್ನು ಒರೆಸಿಕೊಂಡು ಏಳು ಮಕ್ಕಳನ್ನು ಹೆತ್ತು ಎಲ್ಲರನ್ನೂ ಹೊತ್ತು ಬೆಳೆಸಿದವರು.
ಅವರು ಅತ್ಯಂತ ಧಾರ್ಮಿಕರು. ಜೈನಧರ್ಮದ ತತ್ವಗಳಲ್ಲಿ ಅಪಾರ ನಂಬಿಕೆಯುಳ್ಳವರು. ಅವುಗಳನ್ನು ಚಾಚೂ ತಪ್ಪದೇ ಪರಿಪಾಲಿಸಿದವರು. ಇದು ಸರಳವಾದ ಕೆಲಸವಲ್ಲ. ತಮ್ಮ ಅಂತ್ಯಕಾಲದ ವರೆಗೆ ಇಂದ್ರಕುಮಾರ್‌ರ ಜತೆಗೇ ಇದ್ದ ಸುವರ್ಣಮ್ಮನವರು ಮಗನ ಜೀವನದ ಏರಿಳಿತಗಳನ್ನೂ ತಮ್ಮದೇ ರೀತಿಯಲ್ಲಿ ಮೌನವಾಗಿ ಕಂಡವರು. ಹೆಮ್ಮೆ ಪಟ್ಟವರು. ಇಂದ್ರಕುಮಾರ್ ಅವರ ಮನೆಯ ಹೆಸರು ‘ಸುವರ್ಣ’. ಅದು ಒಬ್ಬ ಮಗ ತನ್ನ ತಾಯಿಗೆ ತೋರಿಸಬಹುದಾದ ಕೃತಜ್ಞತೆಯ ದ್ಯೋತಕ.
ಈ ಕೃತಿ ಆರಂಭವಾಗುವುದು ಜೈನಧರ್ಮ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ. ‘ಕಥನಕ್ಕೆ ಮುನ್ನ’ ಎಂದು ಲೇಖಕರು ಈ ಅಧ್ಯಾಯಕ್ಕೆ ಹೆಸರು ಕೊಟ್ಟಿದ್ದಾರೆ. ಇದು ಒಂದುರೀತಿ ಕರ್ಟನ್‌ರೈಸರ್ ಇದ್ದಂತೆ ಇದೆ. ಈ ಹಿನ್ನೆಲೆಗೂ ಕಥನದ ಕೊನೆಯಲ್ಲಿ ಬರುವ ಒಂದು ಪ್ರಸ್ತಾಪಕ್ಕೂ ಕೊಂಡಿ ಇದೆ. ನಮ್ಮ ಹುಟ್ಟು ಆಕಸ್ಮಿಕವಾಗಿರುತ್ತದೆ. ಯಾವ ಧರ್ಮದಲ್ಲಿ ನಾವು ಹುಟ್ಟುತ್ತೇವೆ ಎಂಬುದು ನಮ್ಮ ಕೈಯಲ್ಲಿ ಇರುವುದಿಲ್ಲ. ಅಹಿಂಸೆ, ಅನುಕಂಪ ಪ್ರಧಾನವಾಗಿರುವ ಜೈನಧರ್ಮದಲ್ಲಿ ಜನಿಸಿದ ಇಂದ್ರಕುಮಾರ್ ಅವರಲ್ಲಿ ಈ ಎರಡೂ ವೌಲ್ಯಗಳು ಸಾಕಾರಗೊಂಡಿದ್ದುವು.
ತಮ್ಮ ಸಹಾಯ ಕೇಳಿ ಬಂದವರಿಗೆ ಅವರು ತಮ್ಮ ಕೈಲಾದ ಸಹಾಯ ಮಾಡಿದರು. ಅವರು ಅರಸೀಕೆರೆಯಲ್ಲಿ ಇದ್ದಾಗ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದ ಒಬ್ಬ ಆರ್ಡರ್ಲಿ ಪರಿಶಿಷ್ಟ ಜಾತಿಯವರಾಗಿದ್ದರು. ಮಡಿ ಮೈಲಿಗೆಯಲ್ಲಿ ಅಪಾರ ನಂಬಿಕೆಯಿದ್ದ ಅವರ ತಾಯಿಗೆ ಇದೆಲ್ಲ ಇಷ್ಟವಾಗುತ್ತಿರಲಿಲ್ಲ. ಹಾಗೆಂದು ಇಂದ್ರಕುಮಾರ್ ಅವರು ಆ ಆರ್ಡರ್ಲಿಯನ್ನು ‘ದೂರ’ ಇಡಲು ಆಗುತ್ತಿರಲಿಲ್ಲ. ಬದಲಿಗೆ ಆತನ ಹೆಸರು ಶಿವಣ್ಣ ಎಂದು ಹೇಳಿ ತಾವು ಅಲ್ಲಿ ಇರುವಷ್ಟು ದಿನ ಆತ ತಮ್ಮ ಮನೆಯಲ್ಲಿಯೇ ಕೆಲಸ ಮಾಡಿಕೊಂಡು ಇರುವಂತೆ ಇಂದ್ರಕುಮಾರ್ ನೋಡಿಕೊಳ್ಳುತ್ತಾರೆ. ಇದು ಒಂದಿಷ್ಟು ದ್ವಂದ್ವದ ಸಂಗತಿ ಎಂದು ಅವರಿಗೆ ಅನಿಸಿರಲಿಲ್ಲ ಎಂದೂ ಅಲ್ಲ. ಆದರೂ ಅದನ್ನು ಅವರು ಮೀರುವುದು ತಾವು ಜನಿಸಿದ ಧರ್ಮಕ್ಕಿಂತ ಮಿಗಿಲಾದ ಮನುಷ್ಯತ್ವದಲ್ಲಿ ಅವರಿಗೆ ಇರುವ ನಂಬಿಕೆಯ ಪ್ರತೀಕ.
ಅರಸೀಕೆರೆಯಲ್ಲಿಯೇ ಅವರಿಗೆ ಅಬಕಾರಿ ಉದ್ಯಮಿ ಕೆ.ವೆಂಕಟಸ್ವಾಮಿ ಅವರ ಅಪೂರ್ವ ಸಂಪರ್ಕ ಲಭಿಸುತ್ತದೆ. ಇಂಥ ಸಂಪರ್ಕಗಳು ಸಂಬಂಧಗಳಾಗುವುದು ಪೂರ್ವಜನ್ಮದ ಸುಕೃತಗಳು ಇದ್ದಂತೆ. ವೆಂಕಟಸ್ವಾಮಿ ಅವರು ಬದುಕಿರುವಷ್ಟು ಕಾಲವೂ ಈ ಸಂಬಂಧ ಜತನವಾಗಿ ಉಳಿಯುತ್ತದೆ. ಮಾತ್ರವಲ್ಲ ಅವರ ಕಾಲಾನಂತರವೂ ಆ ಕುಟುಂಬದ ಜತೆಗೆ ಇಂದ್ರಕುಮಾರ್ ಸಂಬಂಧ ಮುಂದುವರಿದಿದೆ. ಇಂದ್ರಕುಮಾರ್ ಅವರ ಜೀವನದ ಇನ್ನೊಂದು ದೊಡ್ಡ ಗಳಿಕೆ ಕರ್ನಾಟಕದ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ದಿ.ಎನ್.ವೆಂಕಟಾಚಲ ಅವರು. ಅವರು ಲೋಕಾಯುಕ್ತರಾಗಲು ಇಂದ್ರಕುಮಾರ್ ಅವರೂ ಪರೋಕ್ಷವಾಗಿ ಕಾರಣರಾಗಿರುತ್ತಾರೆ.
ರಾಜ್ಯಕ್ಕೆ ಒಬ್ಬ ಒಳ್ಳೆಯ ಲೋಕಾಯುಕ್ತ ಸಿಗಲಿ ಎಂಬ ನಿರಪೇಕ್ಷ ಭಾವದಿಂದ ಅವರು ಈ ಕೆಲಸ ಮಾಡುತ್ತಾರೆ. ಇಂಥ ಪ್ರಸಿದ್ಧರು ಮಾತ್ರವಲ್ಲದೇ ವೃತ್ತಿಕಾರಣವಾಗಿ ತಮ್ಮ ಸಂಪರ್ಕಕ್ಕೆ ಬಂದವರೊಂದಿಗೂ ಇಂದ್ರಕುಮಾರ್ ಅವರು ಅಪರೂಪದ್ದು ಎನ್ನುವಂಥ ಸಂಬಂಧವನ್ನು ಉಳಿಸಿಕೊಂಡು ಬಂದಿದ್ದಾರೆ. ಅರಣ್ಯ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡಿದ ಕೃಷ್ಣಪ್ಪ ಅವರ ಮಕ್ಕಳು ಇಂದ್ರಕುಮಾರ್ ಅವರನ್ನು ಅಮೆರಿಕಕ್ಕೆ ಕರೆಸಿಕೊಂಡು ಮೂರು ತಿಂಗಳ ಕಾಲ ಇಟ್ಟುಕೊಂಡು ಇಡೀ ಅಮೆರಿಕನ್ನು ತೋರಿಸಿ ಕಳುಹಿಸುತ್ತಾರೆ.
ಇಂಥ ಸಂಬಂಧಗಳನ್ನು ಹೇಗೆ ವರ್ಣಿಸುವುದು? ಲೇಖಕರು ಅದಕ್ಕಾಗಿಯೇ ಒಂದು ಅಧ್ಯಾಯವನ್ನು ಮೀಸಲು ಇಟ್ಟಿದ್ದಾರೆ. ಸಂಬಂಧಗಳು ಶಿಥಿಲವಾಗುತ್ತಿರುವ ಈಗಿನ ಕಾಲದಲ್ಲಿ ಇವೆಲ್ಲ ಯಾರಿಗೇ ಆಗಲಿ ಮಾದರಿ ಎನಿಸಬೇಕಾದ ಸಂಗತಿಗಳು ಎಂದು ಹೇಳಬಹುದು. ಒಬ್ಬ ವ್ಯಕ್ತಿ ನಿವೃತ್ತನಾದ ನಂತರವೂ ಸಮಾಜಕ್ಕೆ ಬೇಕು ಎನಿಸುವವರು ಕೆಲವರು ಮಾತ್ರ. ಅಂಥವರಲ್ಲಿ ವಿಶೇಷ ಗುಣಗಳು ಇರುತ್ತವೆ. ವೃತ್ತಿಜೀವನದಲ್ಲಿ ಅವರು ಕೆಲಸ ಮಾಡಿದ ರೀತಿ, ಅಲ್ಲಿ ತೋರಿಸಿದ ದಕ್ಷತೆ, ಪ್ರಾಮಾಣಿಕತೆಗಳು ನಿವೃತ್ತಿ ಜೀವನದ ನಂತರ ನೆರವಿಗೆ ಬರುವುದು ಹೀಗೆ. ಇಂದ್ರಕುಮಾರ್ ಅವರು ಮೂರು ವಿಚಾರಣಾ ಆಯೋಗಗಳ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಾರೆ. ಅವರನ್ನು ಆಯ್ಕೆ ಮಾಡಿಕೊಂಡವರು ಇವರ ಸಮುದಾಯದವರಲ್ಲ, ಜಾತಿಯವರಲ್ಲ.
ಹಾಗಿದ್ದರೂ ಇಂದ್ರಕುಮಾರ್ ತಮಗೆ ಬೇಕು ಎಂದು ಅವರು ಏಕೆ ಹೇಳುತ್ತಾರೆ? ಇಂಥ ವಿಚಾರಣಾ ಆಯೋಗಗಳಲ್ಲಿ ರಹಸ್ಯ ಬಹಳ ಮುಖ್ಯ. ಆಯೋಗವು ಸರಕಾರಕ್ಕೆ ಸಲ್ಲಿಸುವ ವರದಿಯ ಅಂಶಗಳು ಯಾರಿಗೂ ಸಿಗದಂತೆ ಇರಬೇಕು. ಅದು ಮುಖ್ಯಮಂತ್ರಿಗೆ ಮಾತ್ರ ಸಲ್ಲಿಕೆಯಾಗಬೇಕು. ಇಂದ್ರಕುಮಾರ್ ಅವರು ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಯಾವ ಆಯೋಗದ ಶಿಫಾರಸುಗಳೂ ಅನಧಿಕೃತವಾಗಿ ಸೋರಿಕೆಯಾಗಲಿಲ್ಲ ಎಂಬುದು ಬಹಳ ಮುಖ್ಯವಾದ ಸಂಗತಿ. ಮಾಧ್ಯಮದಲ್ಲಿ ಕೆಲಸ ಮಾಡಿದ ನನಗೂ ಅವರು ಯಾವ ಸುಳಿವನ್ನೂ ಕೊಡಲಿಲ್ಲ!
ಇದು ವೃತ್ತಿ ಸಂಬಂಧಿ ಕೆಲಸಗಳಲ್ಲಿ ಇಂದ್ರಕುಮಾರ್ ಅವರು ಹೇಗೆ ಉಪಯುಕ್ತ ಎಂಬುದರ ಸೂಚನೆಯಾದರೆ ಅವರು ಕರ್ನಾಟಕ ಜೈನ ಭವನದ ಹಾಗೂ ವಿದ್ಯಾರ್ಥಿ ನಿಲಯಗಳ ಒಟ್ಟು ಸಮುಚ್ಚಯದ ನಿರ್ಮಾಣದಲ್ಲಿಯೂ ಇದೇರೀತಿ ಪರೋಪಕಾರಿಯಾಗಿ ಪರಿಣಮಿಸುತ್ತಾರೆ. ಇಲ್ಲಿ ಒಂದು ಮಾತನ್ನು ಪುನರುಕ್ತಿಯಾದರೂ ಮತ್ತೆ ಹೇಳಬೇಕು. ಆ ವೇಳೆಗೆ ಇಂದ್ರಕುಮಾರ್ ನಿವೃತ್ತರಾಗಿ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಾಗಿತ್ತು. ಅಂದರೆ, ನಿವೃತ್ತರಾದ ನಂತರವೂ ಅವರ ಮಾತು ಸರಕಾರದ ಇಲಾಖೆಗಳಲ್ಲಿ ನಡೆಯುತ್ತಿತ್ತು ಎಂದು ಅರ್ಥ.
ಇದು ಸಾಮಾನ್ಯ ಸಂಗತಿಯಲ್ಲ. ನಾವು ಮಾಡುವ ಒಳ್ಳೆಯ ಕೆಲಸಗಳು ನಮಗೇ ತಿಳಿಯದಂತೆ ಪ್ರತಿಫಲಗಳನ್ನು ಕೊಡುತ್ತವೆ. ಇಂದ್ರಕುಮಾರ್ ಅವರಿಗೆ ಅಂಥ ಸಿಕ್ಕ ಅಪೂರ್ವ ಪ್ರತಿಫಲ ಏನಿರಬಹುದು? ಒಬ್ಬ ವ್ಯಕ್ತಿಯ ಕುರಿತು ಜೀವನಚರಿತ್ರೆ ಪ್ರಕಟವಾಗುವುದಕ್ಕಿಂತ ದೊಡ್ಡ ಪ್ರತಿಫಲ ಏನಿರಲು ಸಾಧ್ಯ? ಅದನ್ನು ಬರೆದವರು ಅವರ ಸಹಪಾಠಿಯಾದರೂ ಅವರು ಒಬ್ಬ ಘನಪಾಠಿ. ಇಂಥ ಅದೃಷ್ಟ ಎಲ್ಲರಿಗೂ ಇರಲು ಸಾಧ್ಯವಿಲ್ಲ.
ಅಂಥ ಅದೃಷ್ಟಶಾಲಿಯಾದ ಇಂದ್ರಕುಮಾರ್ ಅವರ ಮಗ ಈಗ ಹೈಕೋರ್ಟ್ ನ್ಯಾಯಮೂರ್ತಿ. ಅರುಣ್ ಅವರು ತಮ್ಮ ವೃತ್ತಿಜೀವನದಲ್ಲಿ ತಮ್ಮ ತಂದೆಗಿಂತ ಉನ್ನತ ಹುದ್ದೆಯನ್ನು ಏರಿದ್ದಾರೆ. ಅವರೂ ತಂದೆಯ ಹಾಗೆ ಸಮಾಜಕ್ಕೆ ಉಪಕಾರಿಯಾಗಿ ಉಪಯುಕ್ತವಾಗಿ ಬಾಳಲಿ, ಹೆಸರು ಮಾಡಲಿ ಎಂದು ಇಂದ್ರಕುಮಾರ್ ಅವರ ಕಿರಿಯ ಮಿತ್ರನಾಗಿ ಹಾರೈಸುತ್ತೇನೆ. ಇದು ಇಂದ್ರಕುಮಾರ್ ಅವರಿಗೆ ಇಷ್ಟವಾಗುತ್ತದೆ ಎಂದೂ ನಾನು ಬಲ್ಲೆ.
(ಮುನ್ನುಡಿಯಿಂದ ಆಯ್ದ ಭಾಗ)
ವಿಶ್ವಾಸ
(ನಿವೃತ್ತ ನ್ಯಾಯಮೂರ್ತಿಗಳ ಆತ್ಮಚರಿತ್ರೆ)
ಲೇ: ಪ್ರೊ. ನಾ. ದಯಾನಂದ
ಪ್ರ: ಶೃಂಗಾರ ಪ್ರಕಾಶನ, ಚಿಕ್ಕನಾಯಕನಹಳ್ಳಿ
ಬೆಲೆ: ರೂ. 350