ಹಾಗಾದರೆ ಇವರನ್ನು ಎಲ್ಲಿಗೆ ಕಳುಹಿಸಬೇಕು?
ಭೈರಪ್ಪನವರಾಗಲಿ, ಮುತಾಲಿಕರಾಗಲಿ, ಶಿಕ್ಷಣಮಂತ್ರಿ ನಾಗೇಶ್‌ರಾಗಲಿ ಮಾತಾಡುವ ಮುನ್ನ ಮೈ ಮೇಲೆ ಎಚ್ಚರವಿರಬೇಕು. ಇದೇ ಪರಿಸ್ಥಿತಿ ಮುಂದೆಯೂ ಇರುವುದಿಲ್ಲ. ಕಾಲ ಬದಲಾಗುತ್ತಿರುತ್ತದೆ. ಆಗ ಜನರ ಪ್ರಶ್ನೆಗಳನ್ನು ಇವರು ಎದುರಿಸಬೇಕಾಗುತ್ತದೆ. ಹಿಟ್ಲರ್, ಮುಸಲೋನಿಗಳಿಗೆ ಕೊನೆಗೆ ಏನಾಯಿತು ಎಂಬುದನ್ನು ಇವರು ತಿಳಿದುಕೊಳ್ಳಲಿ.
ನಮ್ಮ ಸುತ್ತಲೂ ಎತ್ತ ನೋಡಿದರೂ ಜನಾಂಗ ದ್ವೇಷದ ಮಾತುಗಳನ್ನೇ ಕೇಳುತ್ತಿದ್ದೇವೆ. ಜಾತಿ, ಮತ ನೋಡದೇ ಪ್ರಜೆಗಳ ರಕ್ಷಣೆ ಮಾಡಬೇಕಾ ದವರ ಬಾಯಿಯಲ್ಲೂ ನಂಜಿನ ಮಾತುಗಳು ಪುಂಖಾನುಪುಂಖವಾಗಿ ಬರುತ್ತಿವೆ. ಮನಸ್ಸನ್ನು ಅರಳಿಸಿ ಪ್ರೀತಿಯ ಸೆಲೆಯುಕ್ಕಿಸಬೇಕಾದ ಸಾಹಿತಿಗಳ ನಾಲಿಗೆಯೂ ಈಗ ನಂಜಿನ ನಾಲಿಗೆ ಯಾಗಿದೆ. ಇತ್ತೀಚೆಗೆ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪನವರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ಭಾರತದ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕೆಂದು ಅಂಬೇಡ್ಕರ್ ಹೇಳಿದ್ದಾರೆ ಎಂದು ಹೇಳಿ ತಮ್ಮ ಮನದೊಳಗಿನ ವಿಷ ಕಾರಿಕೊಂಡರು. ಅಂಬೇಡ್ಕರ್ ಯಾವ ಸಂದರ್ಭದಲ್ಲಿ ಈ ಮಾತು ಹೇಳಿದ್ದರು ಎಂಬುದನ್ನು ಭೈರಪ್ಪ ಉಲ್ಲೇಖಿಸಲಿಲ್ಲ. ತಮಗೆ ಎಷ್ಟು ಬೇಕೋ ಅಷ್ಟು ಸಾಲುಗಳನ್ನು ಎತ್ತಿಕೊಂಡು ಜನರನ್ನು ದಾರಿ ತಪ್ಪಿಸಲು ಭೈರಪ್ಪ ಯತ್ನಿಸಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಭೈರಪ್ಪನವರಿಗೆ ಮತ್ತು ಅವರ ಪಟಾಲಂಗೆ ಈಗ ನೆನಪಾಗಿದೆ. ಅದೇ ಅಂಬೇಡ್ಕರ್ 'ಮನುಸ್ಮತಿ' ಯನ್ನು ಸುಟ್ಟರು. ಅದೇ ಅಂಬೇಡ್ಕರ್ ಹಿಂದೂವಾಗಿ ಜನಿಸಿದ್ದರೂ ಹಿಂದೂವಾಗಿ ಸಾಯುವುದಿಲ್ಲ ಎಂದು ಬಹಿರಂಗವಾಗಿ ಹೇಳಿ ಬೌದ್ಧ ಧರ್ಮ ಸೇರಿದರು. ಅದೇ ಅಂಬೇಡ್ಕರ್ ಬ್ರಾಹ್ಮಣ್ಯ ಮತ್ತು ಬಂಡವಾಳ ಭಾರತದ ಮೊದಲ ಶತ್ರುಗಳು ಎಂದರು. ಅದೇ ಅಂಬೇಡ್ಕರ್ ಸಂವಿಧಾನದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳಿಗೆ ಖಾತ್ರಿ ನೀಡಿದರು. ಭೈರಪ್ಪನವರಿಗೆ ಮತ್ತು ಅವರ ಕೋಮು ಪರಿವಾರದವರಿಗೆ ಇದು ಅರ್ಥವಾಗುವುದಿಲ್ಲ.
ಹಿಂದೂ ಕಾನೂನು ಸಂಹಿತೆ ಪ್ರಶ್ನೆಯಲ್ಲಿ ನೆಹರೂ ಸಚಿವ ಸಂಪುಟಕ್ಕೆ ಅಂಬೇಡ್ಕರ್ ಯಾಕೆ ರಾಜೀನಾಮೆ ಕೊಟ್ಟರು ಎಂಬುದು ಭೈರಪ್ಪನವರಿಗೆ ಗೊತ್ತಿಲ್ಲವೆಂದಲ್ಲ. ಇಂಥದ್ದರ ಬಗ್ಗೆ ಅವರು ಮಾತನಾಡುವುದಿಲ್ಲ. ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಗಂಡುಮಕ್ಕಳಿಗೆ ಸಮನಾದ ಪಾಲು ನೀಡಬೇಕೆಂದು ಅಂಬೇಡ್ಕರ್ ವಿಧೇಯಕ ಮಂಡಿಸಿದಾಗ, ಇದೇ ಭೈರಪ್ಪನವರ ಕೋಮು ವ್ಯಾಧಿ ಪಟಾಲಂ ಅದನ್ನು ವಿರೋಧಿಸಿತು. ಮುಂದೆ ಸಾರ್ವತ್ರಿಕ ಚುನಾವಣೆಗಳು ಎದುರಾಗಿರುವುದರಿಂದ ಪ್ರಧಾನಿ ನೆಹರೂ ಕೂಡ ಹೆದರಿದರು. ಮಸೂದೆಗೆ ಕಾನೂನು ಸ್ವರೂಪ ನೀಡಲು ಸಾಧ್ಯವಿಲ್ಲ ಎಂದಾಗ ರಾಜಿ ಮಾಡಿಕೊಳ್ಳದ ಅಂಬೇಡ್ಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದು ಕೂಡ ಭೈರಪ್ಪನವರ ನೆನಪಿಗೆ ಬರುವುದಿಲ್ಲ.
ಭಾರತದಿಂದ ಬ್ರಿಟಿಷರು ತೊಲಗಿ ಸ್ವಾತಂತ್ರ ಬಂದಾಗ ಆರ್.ಎಸ್. ಎಸ್ ಮತ್ತು ಹಿಂದೂ ಮಹಾ ಸಭೆಯವರು ಸ್ವತಂತ್ರ ಭಾರತ ಹಿಂದೂರಾಷ್ಟ್ರ ಆಗಬೇಕು ಎಂದು ಪಟ್ಟು ಹಿಡಿದರು. ಇದನ್ನು ಖಂಡತುಂಡವಾಗಿ ವಿರೋಧಿಸಿದ ಡಾ.ಅಂಬೇಡ್ಕರ್ ಭಾರತ ಹಿಂದೂ ರಾಷ್ಟ್ರವಾದರೆ, ಅದು ವಿಪತ್ತು. ಅದನ್ನು ತಡೆಯಬೇಕು ಎಂದು ಘಂಟಾ ಘೋಷವಾಗಿ ಸಾರಿದರು. ಭಾರತದ ಸಂವಿಧಾನ ದಲ್ಲಿ ಜಾತ್ಯತೀತ ಒಕ್ಕೂಟ ಎಂದು ಉಲ್ಲೇಖಿಸಿದರು. ಇದೂ ಕೂಡ ಭೈರಪ್ಪನವರಿಗೆ ಅಪಥ್ಯ. ಸಂಘದ ಕಾರ್ಯಕರ್ತರೇನೋ ತಮ್ಮ ಸಂಘಟನೆ ಯನ್ನು ಬೆಳೆಸಲು ಇಂಥ ಹಸಿ ಸುಳ್ಳುಗಳನ್ನು ಹೇಳುತ್ತಾರೆ. ಸರಸ್ವತಿ ಸಮ್ಮಾನ ಪಡೆದ ಭೈರಪ್ಪನವರೂ ಅಷ್ಟು ಕೆಳಮಟ್ಟಕ್ಕೆ ಇಳಿದರಲ್ಲ. ಅದು ಅವರ ದುರಂತ.
ಭಾರತದ ಸಂವಿಧಾನ ಪ್ರಜೆಗಳಲ್ಲಿ ಪಕ್ಷಪಾತ ಮಾಡುವುದಿಲ್ಲ. ಜಾತಿ, ಮತವೆನ್ನದೇ ಎಲ್ಲರಿಗೂ ಸೇರಿದ ದೇಶವಿದು. ರಾಷ್ಟ್ರಕವಿ ಕುವೆಂಪು ಇದನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದರು. ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸುವ ಭೈರಪ್ಪನವರ ಹೇಳಿಕೆ ಸಂವಿಧಾನ ವಿರೋಧಿ ಯಾಗಿದೆ. ಭೈರಪ್ಪನವರಂಥ ಹಿರಿಯ ಸಾಹಿತಿಗಳೇ ಇಂಥ ಪ್ರಚೋದನಾಕಾರಿ ಮಾತುಗಳನ್ನು ಆಡಿದರೆ ಇನ್ನು ಬಿಸಿರಕ್ತದ ಯುವಕರು ಭೈರಪ್ಪನವರನ್ನು ಮತ್ತು ಬ್ರಾಹ್ಮಣರನ್ನು ಎಲ್ಲಿಗೆ ಕಳುಹಿಸಬೇಕು ಎಂದು ಪ್ರಶ್ನಿಸುತ್ತಾರೆ. ಭೈರಪ್ಪನವರು ಮತ್ತು ಅವರ ಪಟಾಲಂ ಪಡ್ಡೆಗಳು ಇದೇ ರೀತಿ ಪ್ರಚೋದನಾಕಾರಿ ಮಾತುಗಳನ್ನು ಆಡುವುದನ್ನು ಮುಂದುವರಿಸಿದರೆ ಅನಗತ್ಯವಾಗಿ ಶೂದ್ರ ಸಮುದಾಯಗಳಲ್ಲಿ ಬ್ರಾಹ್ಮಣ ವಿರೋಧಿ ಮನೋಭಾವ ಬೆಳೆಯುತ್ತದೆ. ಅದರ ಹೊಣೆ ಭೈರಪ್ಪ, ಸೂಲಿಬೆಲೆ ಮತ್ತು ಸಂಘ ಪರಿವಾರದವರು ಹೊರ ಬೇಕಾಗುತ್ತದೆ. ಇವರ ತಪ್ಪಿಗೆ ಅಮಾಯಕ ಬ್ರಾಹ್ಮಣರು ಉದಾರವಾದಿ ಬ್ರಾಹ್ಮಣರು ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಇವರು ಮರೆಯಬಾರದು.
ಭೈರಪ್ಪ ಮತ್ತು ಕೋಮುವಾದಿ ಪರಿವಾರದವರ ಪ್ರಚೋದನಾಕಾರಿ ಹೇಳಿಕೆಗಳು ನಾಳೆ ತಿರುಗುಬಾಣ ಆಗಬಹುದು. ಶೂದ್ರ ಸಮುದಾಯದಲ್ಲಿ ಬ್ರಾಹ್ಮಣ ವಿರೋಧಿ ಮನೋಭಾವ ಬೆಳೆದರೆ ಅದರ ಹೊಣೆ ಇವರೇ ಹೊರಬೇಕಾಗುತ್ತದೆ.
ಭೈರಪ್ಪನವರ ಮಾತು ಕೇಳಿದಾಗ ಪೂರ್ಣಚಂದ್ರ ತೇಜಸ್ವಿಯವರು ಹೇಳಿದ ಮಾತೊಂದು ನೆನಪಿಗೆ ಬರುತ್ತದೆ. ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಿದ ನಂತರ ಆರೆಸ್ಸೆಸ್ ಸ್ವಯಂಸೇವಕರು ನಿರುದ್ಯೋಗಿಗಳಾಗುತ್ತಾರೆ. ಆಗ ಅವರು ಹಿಂದೂ ಧರ್ಮದ ಕಟ್ಟುಪಾಡುಗಳನ್ನು ಕಾಪಾಡಲು ಬ್ರಾಹ್ಮಣರ ಓಣಿಗಳಲ್ಲಿ ಕುರುಬರು ಮನೆ ಮಾಡಬಾರದು. ಲಿಂಗಾಯತರು ಬ್ರಾಹ್ಮಣರ ಓಣಿಯ ಸಮೀಪ ಬರಕೂಡದು. ದಲಿತರು ತಮ್ಮ ಕೇರಿ ಬಿಟ್ಟು ಹೊರಗೆ ಬರಕೂಡದು ಎಂದು ಸಂಘದ ಸ್ವಯಂ ಸೇವಕರು ಲಾಠಿ ಹಿಡಿದು ನಿಲ್ಲಬೇಕಾಗುತ್ತದೆ ಎಂದು ತೇಜಸ್ವಿ ಜೋಕ್ ಮಾಡುತ್ತಿದ್ದರು.
ಈ ಭೈರಪ್ಪನವರು ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಹೊರಟಿದ್ದರೆ ನಮ್ಮ ರಾಜ್ಯದ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಮದ್ರಸಗಳ ಪಠ್ಯಕ್ರಮವನ್ನು ಬದಲಿಸಲು ಹೊರಟಿದ್ದಾರೆ. ಮದ್ರಸಗಳಲ್ಲಿನ ಪಠ್ಯಕ್ರಮವನ್ನು ಬದಲಿಸುವ ಕುರಿತಂತೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಇಲ್ಲವೇ ಮದ್ರಸಗಳಿಂದ ತಮಗೆ ಯಾವುದೇ ಬೇಡಿಕೆ ಬಂದಿಲ್ಲವೆಂದು ಸಚಿವರು ಒಪ್ಪಿಕೊಂಡಿದ್ದಾರೆ. ಹಾಗಿದ್ದರೆ ಮದ್ರಸ ಪಠ್ಯಕ್ರಮವನ್ನು ಬದಲಿಸುವ ಹುಳವನ್ನು ಸಚಿವರ ತಲೆಯಲ್ಲಿ ಬಿಟ್ಟವರು ಯಾರು?ನಾಗಪುರದ ಹುತ್ತದಿಂದ ಆದೇಶ ಬಂತೋ ಅಥವಾ ಬೆಂಗಳೂರಿನ ಕೇಶವ ಕೃಪಾದಿಂದ ಕಣ್ಸನ್ನೆಯಾಯಿತೋ? ಸಚಿವರು ಹೇಳಿದ ಪ್ರಕಾರ, ಅದ್ಯಾವುದೂ ಆಗಿಲ್ಲ. ಕೆಲ ಮುಸ್ಲಿಮ್ ಪೋಷಕರು ತಮ್ಮನ್ನು ಭೇಟಿಯಾಗಿ ಮದ್ರಸಗಳಲ್ಲಿನ ಪಠ್ಯಕ್ರಮವನ್ನು ಬದಲಿಸಲು ಮನವಿ ಮಾಡಿದರಂತೆ.
ಭೈರಪ್ಪನವರು ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಹೊರಟರೆ ಮುತಾಲಿಕರು ಮುಸಲ್ಮಾನರ ಹೇರ್ ಕಟಿಂಗ್ ಸೆಲೂನ್‌ಗಳನ್ನು ಬಂದ್ ಮಾಡಲು ಬಹಿರಂಗವಾಗಿ ಕರೆ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಂಥ ಹೇಳಿಕೆ ನೀಡುವ ಅಸೈನ್ಮೆಂಟ್ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಇವರಿಗೆ ನೀಡಿದಂತೆ ಕಾಣುತ್ತದೆ.
ಸಚಿವ ನಾಗೇಶ್‌ರ ಈ ಹೇಳಿಕೆ ಸಂದೇಹಾಸ್ಪದ ಆಗಿದೆ. ಮದ್ರಸಗಳಲ್ಲಿನ ಪಠ್ಯಕ್ರಮವನ್ನು ಬದಲಿಸಲು ತಮಗೆ ಮನವಿ ಮಾಡಿಕೊಂಡ ಮುಸ್ಲಿಮ್ ಪೋಷಕರ ಹೆಸರುಗಳನ್ನು ಅವರೇಕೆ ಬಹಿರಂಗ ಪಡಿಸಿಲ್ಲ?
ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲು ಯಾರೂ ಮನವಿ ಮಾಡಿಕೊಂಡಿರದಿದ್ದರೂ ತಮ್ಮ ಅಜೆಂಡಾ ಜಾರಿಗಾಗಿ ಅದಕ್ಕೆ ಕೈ ಹಾಕಿ ಮಾಡಿ ಕೊಂಡ ಅವಾಂತರ ನಮ್ಮ ಕಣ್ಣ ಮುಂದಿದೆ. ಶಿಕ್ಷಣ ಕ್ಷೇತ್ರವನ್ನು ಸಂಘದ ಶಾಖೆಯನ್ನಾಗಿ ಮಾಡಲು ಸರಕಾರ ಹೊರಟಂತೆ ಕಾಣುತ್ತದೆ. ಇದು ಮಂತ್ರಿ ಗಳು ನೀಡಿರುವ ವೈಯಕ್ತಿಕವಾದ ಆಕಸ್ಮಿಕ ಹೇಳಿಕೆಯಲ್ಲ. ಮದ್ರಸಗಳ ವಿರುದ್ಧ ಸಂಘ ಪರಿವಾರದ ಮತ್ತು ಬಿಜೆಪಿ ನಾಯಕರು ವ್ಯವಸ್ಥಿತವಾದ ಅಪಪ್ರಚಾರ ಮಾಡುತ್ತಲೇ ಬಂದಿದ್ದಾರೆ.ಈ ಕಾರ್ಯಸೂಚಿಯ ಭಾಗವಾಗಿಯೇ ಮಂತ್ರಿ ನಾಗೇಶರು ಈ ಮಾತು ಹೇಳಿರಬಹುದು.
ಮದ್ರಸಗಳ ಬಗ್ಗೆ ಭಾಗವತರಿಂದ ಸಿ.ಟಿ.ರವಿಯವರೆಗೆ ಎಲ್ಲರೂ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಅಪಪ್ರಚಾರ ಮಾಡುತ್ತಲೇ ಬಂದಿದ್ದಾರೆ. ಮದ್ರಸ ಗಳಿಂದ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ .ರವಿ ಹೇಳಿದ್ದರು. ಇವರಿಗಿಂತ ಒಂದು ಹೆಜ್ಜೆ ಮುಂದೆ ಹೋದ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಮದ್ರಸಗಳಲ್ಲಿ ದೇಶ ವಿರೋಧಿ ಪಠ್ಯ ಬೋಧಿಸಲಾಗುತ್ತದೆ ಎಂದು ಬಹಿರಂಗ ವಾಗಿ ಹೇಳಿ ಮದ್ರಸಗಳ ನಿಷೇಧಕ್ಕೆ ಒತ್ತಾಯಿಸಿದ್ದರು. ಮುಖ್ಯ ಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕೂಡ ಮದ್ರಸ ನಿಷೇಧಕ್ಕೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರ ಮಾತುಗಳನ್ನು ಗಮನಿಸಬೇಕು.
ಮಕ್ಕಳ ಬಗೆಗಿನ ಕಾಳಜಿಯಿಂದ ಸಚಿವರು ಮದ್ರಸ ಪಠ್ಯಕ್ರಮ ಬದಲಿಸಲು ಹೊರಟಿಲ್ಲ. ಅವರ ಕಾರ್ಯಸೂಚಿಯ ಭಾಗವಾಗಿ ಹಸ್ತಕ್ಷೇಪಕ್ಕೆ ಮುಂದಾಗಿ ದ್ದಾರೆ. ಸರಕಾರಿ ಶಾಲೆಗೆ ಹೋಗಬೇಕೋ?, ಖಾಸಗಿ ಶಾಲೆಗೆ ಹೋಗಬೇಕೋ ಅಥವಾ ಮದ್ರಸಕ್ಕೆ ಹೋಗಬೇಕೋ ಎಂಬುದನ್ನು ಸರಕಾರವಾಗಲಿ, ಸಚಿವರಾಗಲಿ ತೀರ್ಮಾನಿಸುವುದು ಸರಿಯಲ್ಲ. ಮಕ್ಕಳು ಮತ್ತು ಅವರ ಪೋಷಕರು ತಮಗೆ ಯಾವುದು ಇಷ್ಟವೋ ಅದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮುಸ್ಲಿಮ್ ಸಮುದಾಯದ ಮಕ್ಕಳು ಮದ್ರಸಗಳಲ್ಲೇ ಕಲಿಯಬೇಕೆಂಬ ಕಟ್ಟುಪಾಡಿಲ್ಲ. ಮದ್ರಸಗಳಿಗೆ ಹೋಗುವ ಅನೇಕ ಮುಸ್ಲಿಮ್ ಮಕ್ಕಳು ಸರಕಾರಿ ಇಲ್ಲವೇ ಖಾಸಗಿ ಶಾಲೆಗಳಿಗೂ ಹೋಗುತ್ತಾರೆ. ಮದ್ರಸಗಳಲ್ಲಿನ ಧಾರ್ಮಿಕ ಶಿಕ್ಷಣ ಮತ್ತು ಸಾರ್ವಜನಿಕ ಶಿಕ್ಷಣದ ನಡುವಿನ ವ್ಯತ್ಯಾಸದ ಬಗ್ಗೆ ಮಕ್ಕಳು ಮತ್ತು ಅವರ ಪೋಷಕರಿಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಮದ್ರಸ ಶಿಕ್ಷಣದಿಂದ ತಮ್ಮ ಮಕ್ಕಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಿಂದುಳಿಯುತ್ತಿದ್ದಾರೆಂದು ಕೆಲ ಪೋಷಕರು ಹೇಳಿದ್ದಾರೆಂದು ರೈಲು ಬಿಟ್ಟ ಮಂತ್ರಿಗಳು ಶಾಲೆಗಳಲ್ಲಿ ಕಲಿಯುತ್ತಿದ್ದು ಮದ್ರಸಗಳಿಗೂ ಹೋಗುವ ಮಕ್ಕಳ ಹಾಜರಾತಿಯನ್ನು ಸರಕಾರ ಗಮನಿಸಲಿದೆ ಎಂದು ನುಡಿಯುವ ಮೂಲಕ ಈ ವಿದ್ಯಾರ್ಥಿಗಳನ್ನು ಅವಮಾನಿಸಿದ್ದಾರೆ. ಮುಸ್ಲಿಮ್ ಮಕ್ಕಳ ಬಗ್ಗೆ ಮಂತ್ರಿ ಗಳಿಗೆ ನಿಜವಾಗಿ ಕಾಳಜಿ ಇದ್ದರೆ ರಾಜ್ಯದ ಎಲ್ಲಾ ಮದ್ರಸಗಳಿಗೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳನ್ನು ಗಮನಿಸಿ ಹೇಳಿಕೆ ನೀಡಲಿ.
ಭೈರಪ್ಪನವರಾಗಲಿ, ಮುತಾಲಿಕರಾಗಲಿ ಶಿಕ್ಷಣಮಂತ್ರಿ ನಾಗೇಶ್‌ರಾಗಲಿ ಮಾತಾಡುವ ಮುನ್ನ ಮೈ ಮೇಲೆ ಎಚ್ಚರವಿರಬೇಕು. ಇದೇ ಪರಿಸ್ಥಿತಿ ಮುಂದೆಯೂ ಇರುವುದಿಲ್ಲ. ಕಾಲ ಬದಲಾಗುತ್ತಿರುತ್ತದೆ. ಆಗ ಜನರ ಪ್ರಶ್ನೆಗಳನ್ನು ಇವರು ಎದುರಿಸಬೇಕಾಗುತ್ತದೆ. ಹಿಟ್ಲರ್, ಮುಸಲೋನಿಗಳಿಗೆ ಕೊನೆಗೆ ಏನಾಯಿತು ಎಂಬುದನ್ನು ಇವರು ತಿಳಿದುಕೊಳ್ಳಲಿ.