varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 25 Jul, 2022
ಪಿ.ಎ. ರೈ

2023ರ ಚುನಾವಣೆಯೇ ನನ್ನ ಕೊನೆಯ ಇಲೆಕ್ಷನ್- ಸಿದ್ದರಾಮಯ್ಯ, ಮಾಜಿ ಸಿಎಂ
2024ರ ಚುನಾವಣಾ ಕುರಿತು ಇಡೀ ಭಾರತವೇ ಹಾಗನ್ನುತ್ತಿದೆ.

ಶೀಘ್ರದಲ್ಲೇ ಏಕರೂಪ ವಿದ್ಯುತ್ ದರ ಜಾರಿ- ಸುನೀಲ್ ಕುಮಾರ್, ಸಚಿವ
ಭ್ರಷ್ಟಾಚಾರ ಇಲಾಖೆಯಲ್ಲಿ ಏಕರೂಪ ಪರ್ಸೆಂಟೇಜ್ ದರ ಜಾರಿಗೊಳಿಸಿದರೆ ಹೇಗೆ?

ಬಿಜೆಪಿಯಲ್ಲಿ ವ್ಯಕ್ತಿ ಪೂಜೆ ಇಲ್ಲ, ಪಕ್ಷ ಪೂಜೆ ಇದೆ- ರೇಣುಕಾಚಾರ್ಯ, ಮಾಜಿ ಸಚಿವ
 ಹಾಗಾದರೆ ನಿಮ್ಮ ಪಕ್ಷದೊಳಗೆ ಎಲ್ಲೆಂದರಲ್ಲಿ ಕುರ್ಚಿ ಪೂಜೆಯೇ ಮೆರೆಯುತ್ತಿರುವುದೇಕೆ?

ಕಾಂಗ್ರೆಸ್ ಒಡೆದು ಹೋಳಾಗಲು ಕುಂಬಳಕಾಯಿಯೂ ಅಲ್ಲ, ಮಡಕೆಯೂ ಅಲ್ಲ- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
 ಆದ್ದರಿಂದ ಕೊಡಲಿ ಹುಡುಕುತ್ತಿದ್ದೀರಾ?

ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನಬದ್ಧ ಸಂಸ್ಥೆಗಳ ಬಗ್ಗೆ ಗೌರವವೇ ಇಲ್ಲ- ಸಿ.ಟಿ.ರವಿ, ಶಾಸಕ
ನಿಮ್ಮ ತುಂಬಿ ತುಳುಕುವ ನಕಲಿ ಗೌರವಕ್ಕಿಂತ ಅವರ ಅಲ್ಪ ಸ್ವಲ್ಪ ಅಸಲಿ ಗೌರವ ವಾಸಿ.

ಚೀನಾದಲ್ಲಿ ಇಸ್ಲಾಮ್ ಧರ್ಮ ಚೀನೀ ದೃಷ್ಟಿಕೋನದಂತಿರಬೇಕು- ಕ್ಸಿ ಜಿನ್ಪಿಂಗ್, ಚೀನಾ ಅಧ್ಯಕ್ಷ
ಹೆಂಗ್ ಪುಂಗ್ ಲೀ ಅನ್ನುತ್ತಿರಬೇಕೇ?

ಭಾರತ 200 ಕೋಟಿ ಕೊರೋನ ಲಸಿಕೆ ನೀಡಿಕೆ ದಾಟಿ ಇತಿಹಾಸ ನಿರ್ಮಿಸಿದೆ- ನರೇಂದ್ರ ಮೋದಿ, ಪ್ರಧಾನಿ
ಡಾಲರ್, ಸಿಲಿಂಡರ್, ಪೆಟ್ರೋಲ್ ಮುಂತಾದ ರಂಗಗಳ ವಿಶ್ವ ದಾಖಲೆಗಳನ್ನೂ ಪ್ರಸ್ತಾಪಿಸಿ, ಅದಾನಿಯ ಚೌಕಿದಾರರೇ?

ದೇವರು ಮತ್ತು ತಾಯಿಯ ಮಧ್ಯೆ ನಾನು ತಾಯಿಯನ್ನು ಆಯ್ಕೆ ಮಾಡುವೆ- ಬಸವರಾಜ ಬೊಮ್ಮಾಯಿ, ಸಿಎಂ
ಬಂಡವಾಳ ಬಯಲಾಗುವುದು, ಆಯ್ಕೆ ತಾಯಿ ಮತ್ತು ಕುರ್ಚಿಯ ಮಧ್ಯೆ ಇದ್ದಾಗ.

5 ಲಕ್ಷ ರೂ.ವರೆಗಿನ ವಿದ್ಯುತ್ ಗುತ್ತಿಗೆ ಸ್ಥಳೀಯರಿಗೆ ಮೀಸಲು- ಸುನೀಲ್ ಕುಮಾರ್, ಸಚಿವ
ಇರುವೆ ಊರವರಿಗೆ. ಆನೆ ನೆರೆಯವರಿಗೆ?

2047ಕ್ಕೆ ಹಿಂದೂಸ್ತಾನವನ್ನು ಮುಸ್ಲಿಮ್ ರಾಷ್ಟ್ರವನ್ನಾಗಿ ಮಾಡಲು ಷಡ್ಯಂತ್ರ ನಡೆದಿದೆ- ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
  ಛೆ ಛೆ. ನೀವು ತುಂಬಾ ಪುರುಸೊತ್ತಲ್ಲಿದ್ದಂತಿದೆ. ಷಡ್ಯಂತ್ರ ನಡೆಸುವವರು ತುಂಬಾ ಆತುರದಲ್ಲಿದ್ದಾರೆ.

ಭಾರತದಲ್ಲಿ ರಾಜಕೀಯ ವಿರೋಧವು ಹಗೆತನವಾಗಿ ಪರಿವರ್ತನೆಯಾಗುತ್ತಿದೆ- ಎನ್.ವಿ.ರಮಣ, ಸು.ಕೋ. ನ್ಯಾಯಮೂರ್ತಿ
ಭಿನ್ನತೆಯ ಧ್ವನಿ ಎತ್ತಿದವರನ್ನು ಸುಳ್ಳು ಕೇಸುಗಳ ಮೂಲಕ ಕಾರಾವಾಸಕ್ಕೆ ತಳ್ಳುವ ನ್ಯಾಯಾಧೀಶರುಗಳ ಪಾತ್ರವೂ ಅದರಲ್ಲಿದೆ.

ಕೃಷಿ ಕ್ಷೇತ್ರವು ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರನ್ನೂ ಒಳಗೊಂಡಿರುವ ಕ್ಷೇತ್ರ- ಬಡಗಲಪುರ ನಾಗೇಂದ್ರ, ರೈತ ಸಂಘದ ಅಧ್ಯಕ್ಷ
ಅದಕ್ಕೆ ರಾಜಕಾರಣಿಗಳು ಆ ಕ್ಷೇತ್ರದಿಂದ ದೂರ ಇರುವುದು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಲ್ಲು ಕಿತ್ತ ಹಾವಿನಂತಿರುವುದು ನಿಜ- ಟಿ.ಎಸ್.ನಾಗಾಭರಣ, ಕ.ಅ.ಪ್ರಾ. ಅಧ್ಯಕ್ಷ
ನೀರು ಹಾವು ಎಂದರೆ ಇನ್ನಷ್ಟು ಚೆನ್ನಾಗಿರುತ್ತದೆ.

ಬಣ ರಾಜಕೀಯವು ಮೂಲ ಶಿವಸೇನೆಯ ಬಲವನ್ನು ಎಂದಿಗೂ ಕುಗ್ಗಿಸುವುದಿಲ್ಲ- ಸಂಜಯ್ ರಾವುತ್, ಸಂಸದ
ಬೃಹತ್ ಸೂಟ್ ಕೇಸ್‌ಗಳಿಗೇನು ಮಾಡುತ್ತೀರಿ?

ಗೋದಾವರಿ ತೀರದಲ್ಲಿ ಇಷ್ಟೊಂದು ಹೆಚ್ಚಿನ ಮಳೆ ಸುರಿದಿರುವುದರ ಹಿಂದೆ ವಿದೇಶಿ ಪಿತೂರಿ ಇದ್ದರೂ ಅಚ್ಚರಿ ಇಲ್ಲ- ಚಂದ್ರಶೇಖರ ರಾವ್, ತೆಲಂಗಾಣ ಸಿಎಂ
ಹೌದು, ಪಾಪಿಗಳಿದ್ದಲ್ಲಿ ಮೊಣ ಕಾಲು ನೀರು ಎನ್ನುವ ಗಾದೆಯೇ ಇರುವಾಗ ಇಷ್ಟೊಂದು ಮಳೆ ಸುರಿಯಲು ಹೇಗೆ ಸಾಧ್ಯ?

ಕಸ್ತೂರಿ ರಂಗನ್ ವರದಿಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು- ಆರಗ ಜ್ಞಾನೇಂದ್ರ, ಸಚಿವ
ಕಾನೂನೆಲ್ಲಾ ಯಾಕೆ ಸಾರ್? ದೇವರು ಧರ್ಮಗಳನ್ನು ಎಳೆದು ತನ್ನಿ. ಎಲ್ಲವೂ ಸುಗಮವಾಗಿ ಬಿಡುತ್ತೆ.

ಈ ಬಾರಿ ನಾನು ಹುಟ್ಟು ಹಬ್ಬ ಆಚರಿಸುವುದಿಲ್ಲ- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
ಆಚರಿಸಿ ಆಚರಿಸಿ ದಣಿದು ಬಿಟ್ಟಿರಾ?

ಮಾಜಿ ಸಿಎಂ ಸಿದ್ದರಾಮಯ್ಯ ಈಗ ಅರೆ ಅಲೆಮಾರಿಯಾಗಿದ್ದಾರೆ- ಈಶ್ವರಪ್ಪ, ಮಾಜಿ ಸಚಿವ
ಶೇ.40 ಎಂಬ ಮಹಾಮಾರಿಯಾಗಿಲ್ಲವಲ್ಲ !

ಭಿಕ್ಷಾಟನೆ ನಿಷೇಧ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು- ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಹಸಿವು ನಿರೋಧಕ ಲಸಿಕೆ ತಯಾರಿಸಿಟ್ಟಿದ್ದೀರಾ?

ಜಿಎಸ್‌ಟಿ ವಿರೋಧಿಸುವವರು ಶ್ರೀಲಂಕಾ, ಪಾಕಿಸ್ತಾನ, ಮಾಲ್ಡೀವ್ಸ್‌ಗಳ ಆರ್ಥಿಕ ಸ್ಥಿತಿಗತಿ ಗಮನಿಸಲಿ- ಡಿ.ಎಸ್. ಅರುಣ್, ವಿ.ಪ. ಸದಸ್ಯ
ಅಲ್ಲೆಲ್ಲ ಪಾಠ ಇರುವುದು ಜಿಎಸ್‌ಟಿ ಬೆಂಬಲಿಗ ಅಂಧಭಕ್ತರಿಗೆ.

ಅನ್ಯ ಪಕ್ಷದವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಈಗಾಗಲೇ ಆ್ಯಕ್ಷನ್ ಪ್ಲಾನ್ ಸಿದ್ಧವಾಗಿದೆ- ಆರ್.ಅಶೋಕ್, ಸಚಿವ
ನೋಟಿನ ಚೀಲಗಳನ್ನು ಯಾವ ರೆಸಾರ್ಟ್‌ನಲ್ಲಿ ಅಡಗಿಸಿಟ್ಟಿದ್ದೀರಿ?

ನೂರು ಸುಳ್ಳು ಹೇಳಿ ಒಂದು ಸತ್ಯ ಮಾಡುವುದು ಬಿಜೆಪಿಯವರ ಗುಣ- ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ
ಅವರ ಜೊತೆಗಿನ ನಿಮ್ಮ ಸಖ್ಯದ ಇತಿಹಾಸ ನೋಡಿದರೆ ಅವರ ಗುರು ಯಾರೆಂಬ ಸಂಶಯ ಮೂಡುತ್ತದೆ.

ನಾನು ಕ್ರಿಮಿನಲ್ ಅಲ್ಲ- ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ
ತಪ್ಪೊಪ್ಪಿಗೆಯ ಪ್ರಕ್ರಿಯೆ ಸಮಯ ತೆಗೆದುಕೊಳ್ಳುತ್ತದೆ.

ಸರಕಾರ ತನ್ನ ಮಹತ್ವಾಕಾಂಕ್ಷಿ 'ಮಾದರಿ ಶಾಲೆ'ಗಳ ನಿರ್ಮಾಣಕ್ಕಾಗಿ ಈಗಿರುವ ಶಾಲೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಚಿಂತನೆ ನಡೆಸಿದೆ- ಬಿ.ಸಿ.ನಾಗೇಶ್, ಸಚಿವ
ವಿದ್ಯಾರ್ಥಿಗಳ ಸಂಖ್ಯೆಯನ್ನೂ ಕಡಿಮೆ ಮಾಡಿದರೆ 'ಮಾದರಿ ಗೋಶಾಲೆ'ಗಳ ಸ್ವಪ್ನ ಸಾಕಾರವಾದೀತು.

ರಾಜ್ಯದಲ್ಲಿನ ಸಾರಿಗೆ ವ್ಯವಸ್ಥೆ ಬಲಗೊಳಿಸುವ ನಿಟ್ಟಿನಲ್ಲಿ 1,500 ಬಸ್‌ಗಳನ್ನು ಖರೀದಿಸಲಾಗುವುದು- ಶ್ರೀರಾಮುಲು, ಸಚಿವ
ವ್ಯವಹಾರ ಅಂದ ಮೇಲೆ ಸಂಖ್ಯೆಗಿಂತ ಪರ್ಸೆಂಟೇಜ್ ಮುಖ್ಯ.

ರೈತರು ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವ ಬದಲು ಗೋಶಾಲೆಗೆ ಕಳುಹಿಸಬೇಕು- ಪ್ರಭು ಚವ್ಹಾಣ್, ಸಚಿವ
ಯಾಕೆ, ಹಸಿದು ನರಳಿ ಸಾಯಲಿಕ್ಕೆಂದೇ?

ಶವ ಹೊರುವುದಕ್ಕೂ ಜಿಎಸ್‌ಟಿ ವಿಧಿಸುವ ದಿನ ದೂರವಿಲ್ಲ- ಯು.ಟಿ.ಖಾದರ್, ಶಾಸಕ
ಜನಸಾಮಾನ್ಯನನ್ನು ಶವವಾಗಿಸುವುದಕ್ಕಾಗಿ ಜಿಎಸ್‌ಟಿ ಹೇರಿದ ದಯಾಳುಗಳು ಅಂತಹ ಕ್ರೌರ್ಯ ಮೆರೆದರೆ ಅಚ್ಚರಿ ಏನಿಲ್ಲ.

ವಿರಾಟ್ ಕೊಹ್ಲಿ ಅವರು ಹಳೆಯ ಲಯಕ್ಕೆ ಮರಳಲು ಬೇಕಾದ ಸಲಹೆಗಳನ್ನು ನೀಡಲು ಸಿದ್ಧ- ಸುನಿಲ್ ಗವಾಸ್ಕರ್, ಭಾರತದ ಮಾಜಿ ಕ್ರಿಕೆಟಿಗ
ಸೋತ ಕುದುರೆ ಅದು. ಲಾಯಕ್ಕೆ ಮರಳುವುದೇ ವಾಸಿ. ಶ್ರೀಲಂಕಾ ಅಧ್ಯಕ್ಷರಂತೆ ನರೇಂದ್ರ ಮೋದಿ ದೇಶ ಬಿಟ್ಟು ಓಡುವ ದಿನ ದೂರವಿಲ್ಲ- ಕಿಮ್ಮನೆ ರತ್ನಾಕರ್, ಮಾಜಿ ಸಚಿವ
ಹಾಗಾದರೆ ಪರವಾಗಿಲ್ಲ. ನೂರ ಮೂವತ್ತು ಕೋಟಿ ಮಂದಿಯನ್ನು ದೇಶದಿಂದ ಓಡಿಸುವ ಸಂಚು ಹೂಡಿದರೇನು ಮಾಡುವಿರಿ?

ಪಕ್ಷ ಬಹುಮತ ಪಡೆದಾಗ ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗುವ ಸಾಧ್ಯತೆ ಹೆಚ್ಚು- ವೀರಪ್ಪ ಮೊಯ್ಲಿ, ಮಾಜಿ ಸಿಎಂ
ಹಾಗೆ ಪಕ್ಷ ಬಹುಮತ ಪಡೆಯುವ ಕಾಲದಲ್ಲಿ ನಿಮ್ಮ ಸುಪುತ್ರ ಕೆಪಿಸಿಸಿ ಅಧ್ಯಕ್ಷರಾಗಿರುವಂತೆ ನೋಡಿಕೊಳ್ಳಿ.

ಮನೆ ದೇವರು, ತಾಯಿ ಚೌಡೇಶ್ವರಿ ನನ್ನನ್ನು (40 ಶೇ.) ಆರೋಪದಿಂದ ಮುಕ್ತಳಾಗಿಸಿದ್ದಾಳೆ- ಕೆ.ಎಸ್.ಈಶ್ವರಪ್ಪ, ಶಾಸಕ
ನಿಮ್ಮ ಕಮಿಷನ್ ಕಳಂಕವನ್ನು ತಾಯಿ ಚೌಡಮ್ಮನಿಗೆ ಯಾಕೆ ಅಂಟಿಸುತ್ತೀರಿ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು