ಅನುದಾನ ಇಲ್ಲದಿದ್ದರೂ ಶಿಕ್ಷಣ ಸಚಿವರ ಜಾಲತಾಣ ನಿರ್ವಹಣೆಗೆ ಲಕ್ಷಾಂತರ ರೂ. ಖರ್ಚು!
ಬೆಂಗಳೂರು, ಜು.25: ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಅಧಿಕಾರಾವಧಿತನಕ ಅವರ ಟ್ವಿಟರ್ ಖಾತೆ, ಫೇಸ್ಬುಕ್, ಯೂಟ್ಯೂಬ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡಲು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯಲ್ಲಿ ಯಾವುದೇ ಅನುದಾನ ನಿಗದಿಪಡಿಸದಿದ್ದರೂ ಇದೇ ಮೊದಲ ಬಾರಿಗೆ ಲಕ್ಷಾಂತರ ರೂ. ವೆಚ್ಚ ಮಾಡಿರುವುದು ಆರ್ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.
ಹತ್ತನೇ ತರಗತಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಅಸಮರ್ಪಕ ಮೌಲ್ಯಮಾಪನ ಮತ್ತು ಮೌಲ್ಯಮಾಪಕರಿಗೆ ಹೆಚ್ಚುವರಿ ಸಂಭಾವನೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ಬೆನ್ನಲ್ಲೇ ಯಾವುದೇ ಅನುದಾನ ಹಂಚಿಕೆಯಾಗದಿದ್ದರೂ ನಾಗೇಶ್ ಅವರ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಲಕ್ಷಾಂತರ ರೂ. ವೆಚ್ಚ ಮಾಡಿರುವುದು ಮುನ್ನೆಲೆಗೆ ಬಂದಿದೆ. ಈ ಸಂಬಂಧ ‘The-File,in’ ಸಮಗ್ರ ಕಡತವನ್ನು ಆರ್ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ಈ ಹಿಂದಿನ ಶಿಕ್ಷಣ ಸಚಿವರುಗಳಿಗೆ ಸಾಮಾಜಿಕ ಜಾಲತಾಣ ನಿರ್ವಹಣೆಗೆಂದು ಮಂಡಳಿಯು ಹಣ ವೆಚ್ಚ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ನಾಗೇಶ್ ಅವರ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡಲು ಮಂಡಳಿಯು ಲಕ್ಷಾಂತರ ರೂ. ವೆಚ್ಚ ಮಾಡಿರುವುದು ಕಡತದ ದಾಖಲೆಗಳಿಂದ ತಿಳಿದು ಬಂದಿದೆ.
ಅನುದಾನ ನಿಗದಿಯಾಗಿರಲಿಲ್ಲ
ಪ್ರಾಥಮಿಕ, ಪ್ರೌಢಶಿಕ್ಷಣ, ಸಕಾಲ ಸೇವಾ ಸಚಿವರ ಸಾಮಾಜಿಕ ಜಾಲತಾಣ ಗಳ ನಿರ್ವಹಣೆಯು ಹೊಸ ಕಾರ್ಯಕ್ರಮ ವಾಗಿರುವುದರಿಂದ ಮಂಡಳಿಯ ಅನುದಾನ ಹಂಚಿಕೆಯಲ್ಲಿ ಅನುದಾನ ನಿಗದಿಪಡಿಸಲಾಗಿರುವುದಿಲ್ಲ ಎಂದು ಮಂಡಳಿಯ ಶಾಖಾಧಿಕಾರಿಗಳು ಉಲ್ಲೇಖಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
2021-22ನೇ ಸಾಲಿನಿಂದ ನಾಗೇಶ್ ಅವರ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡಲು ಪಿ-ಪೋಲ್ ಅನಾಲಿಟಿಕ್ಸ್ ಕಂಪೆನಿಗೆ ತಿಂಗಳಿಗೆ ೯೦,೯೧೨ ರೂ.ನಂತೆ ಪಾವತಿಯಾಗುತ್ತಿದೆ.
ಮುಖ್ಯಮಂತ್ರಿ ಹೊರತುಪಡಿಸಿದರೆ ಉಳಿದ ಸಚಿವರ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಸರಕಾರದಿಂದ ನಯಾ ಪೈಸೆಯನ್ನೂ ವೆಚ್ಚ ಮಾಡುತ್ತಿಲ್ಲ. ಇತಿಹಾಸ ಪುರುಷರು, ರಾಜಕಾರಣಿಗಳ ಹುಟ್ಟುಹಬ್ಬ, ಇಲಾಖೆಯ ಮಹತ್ವದ ತೀರ್ಮಾನಗಳು, ಘೋಷಣೆಗಳು, ಕಾರ್ಯಕ್ರಮ ಉದ್ಘಾಟನೆ ಸೇರಿದಂತೆ ಇನ್ನಿತರ ಸಂಗತಿಗಳ ಕುರಿತು ಸಚಿವರುಗಳ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿಗಳನ್ನು ಪ್ರಕಟಿಸಲಾಗುತ್ತದೆ. ಈ ತಂಡಕ್ಕೆ ಖಾಸಗಿಯಾಗಿ ಹಣ ಪಾವತಿಯಾಗುತ್ತಿದೆಯೇ ಹೊರತು ಸರಕಾರದಿಂದ ಯಾವುದೇ ಹಣವೂ ಪಾವತಿಯಾಗುತ್ತಿಲ್ಲ.
ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ನಾಗೇಶ್ ಅವರ ಸಾಮಾಜಿಕ ಜಾಲತಾಣ ನಿರ್ವಹಿಸುತ್ತಿರುವ ಖಾಸಗಿ ಕಂಪೆನಿಗೆ ಲಕ್ಷಾಂತರ ರೂ.ಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಪಾವತಿಸುತ್ತಿರುವುದಕ್ಕೆ ಹಲವು ಆಕ್ಷೇಪಗಳು ವ್ಯಕ್ತವಾಗಿವೆ.