ಅಪಾರ್ಥಕ್ಕೊಳಗಾದ ಅಪರೂಪ ಸಾಂಸ್ಕೃತಿಕ ಸಮಾಧಾನಿ
ಐವತ್ತಾರು ವರ್ಷಗಳ ಹಿಂದೆ, 1966ರಲ್ಲಿ ನಾನು ಉಡುಪಿಯ ಎಂ.ಜಿ.ಎಮ್. ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ಜಿ. ರಾಜಶೇಖರ್ ಇಂಗ್ಲಿಷ್ ವಿಭಾಗದಲ್ಲಿ ಟ್ಯೂಟರ್ ಆಗಿದ್ದರು. ಉಪನ್ಯಾಸಕರಿಗಿಂತ ಕೆಳ ಹಂತದ ಹುದ್ದೆಯಲ್ಲಿದ್ದ ಟ್ಯೂಟರ್ಸ್ ಆಗ ವಿದ್ಯಾರ್ಥಿಗಳ ಕಾಂಪೊಸಿಶನ್‌ನ ಮೌಲ್ಯಮಾಪನ ಮಾಡುವ ಕೆಲಸ ನಿರ್ವಹಿಸುತ್ತಿದ್ದರು. ನಾನು ಬರೆದಿದ್ದ ಕೆಲವು ಕಾಂಪೊಸಿಶನ್‌ಗಳನ್ನು ಅವರು ಕರೆಕ್ಟ್ ಮಾಡಿದ್ದರು.
ಮುಂದಿನ ವರ್ಷ ಉಡುಪಿಯಲ್ಲಿ ಎಲ್.ಐ.ಸಿ.ಯಲ್ಲಿ ಉದ್ಯೋಗಿಯಾಗಿ ಸೇರಿದ ಅವರು ಗುಮಾಸ್ತ ಹುದ್ದೆಯಲ್ಲೇ ನಿವೃತ್ತರಾದರು. ನಾನು ಎಂಜಿಎಮ್‌ನಲ್ಲಿ ಪದವಿ ಮುಗಿಸಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಮಾಡಿದ ನಂತರ, ಮೈಸೂರು, ಶೃಂಗೇರಿ, ತಿಪಟೂರಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕನಾಗಿ, 1977ರಲ್ಲಿ ಉಡುಪಿಗೆ ಮರಳಿದ ಬಳಿಕ, 1980ರಿಂದ ಮೊನ್ನೆ ಅವರು ‘ಇನ್ನಿಲ್ಲ’ವಾಗುವವರೆಗೂ ರಾಜಶೇಖರ್ ಅವರ ಒಡನಾಟದಲ್ಲಿದ್ದ ನನ್ನ ಪಾಲಿಗೆ ಅವರು ಅರ್ಧ ಶತಮಾನಕ್ಕೂ ಮಿಕ್ಕಿದ ನೆನಪಿನ ಗನಿ.
ಅಜ್ಜರಕಾಡಿನಲ್ಲಿದ್ದ ತನ್ನ ಕಚೇರಿಯ ಕೆಲಸ ಮುಗಿಸಿ, ಮಣಿಪಾಲದ ಗ್ರಂಥಾಲಯಕ್ಕೆ ಹೋಗಿ ಒಂದಷ್ಟು ಓದಿ ಮತ್ತೆ ರಥಬೀದಿಗೆ ಬಂದು ‘ಹರಟೆ’ಗೆ ಸಿಗುತ್ತಿದ್ದ ರಾಜಶೇಖರ್ ಅಂದಂದಿನ ರಾಜಕೀಯ, ಸಾಹಿತ್ಯಕ, ಸಾಂಸ್ಕೃತಿಕ ಘಟನೆಗಳನ್ನು ಗೆಳೆಯರೊಂದಿಗೆ ಚರ್ಚಿಸುತ್ತ, ಸಿಗರೆಟ್ ಸೇದುತ್ತ, ‘ಸ್ಮೋಕ್ ಮಾಡ್ತೀರಾ?’ ಎಂದು ತನ್ನ ಕೈಯಲ್ಲಿದ್ದ ಸಿಗರೆಟ್ ಪ್ಯಾಕನ್ನು ಮುಂದಕ್ಕೆ ಚಾಚುತ್ತಿದ್ದರು. ಒಮ್ಮೆ ತನ್ನ ಮಾತಿನ ಮಧ್ಯೆ ಅವರು ಕಾರ್ಮಿಕರ ಬಗ್ಗೆ, ಸಾಮಾಜಿಕ ಹೋರಾಟದ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿರುವಾಗ ನಾನು ‘ಈಗಿನ ಕೆಲಸಗಾರರು ಸ್ವಲ್ಪಲೇಝಿ; ಹಿಂದಿನವರ ಹಾಗಲ್ಲ’ ಎಂದಾಗ ಒಮ್ಮಿಂದೊಮ್ಮೆಗೇ ಸಿಟ್ಟಾಗಿ ‘ಡೋಂಟ್ ಸೇ ದ್ಯಾಟ್’ ಎಂದು ದನಿ ಏರಿಸಿ ಹೇಳಿದ್ದು ಇನ್ನೂ ನನ್ನ ನೆನಪಿನಲ್ಲಿದೆ.
ರಾಜಶೇಖರ್ ನಿಧನರಾಗಿ ನಾಲ್ಕು ದಿನಗಳೊಳಗಾಗಿ ವಾರ್ತಾ ಮಾಧ್ಯಮಗಳು ಅವರ ಬಗ್ಗೆ ಹೇಳಬಹುದಾದ ಬಹಳಷ್ಟನ್ನು ಹೇಳಿ ಮುಗಿಸಿವೆ: ಬಳಸಬಹುದಾದ ಅರ್ಥಪೂರ್ಣ ವಿಶೇಷಣಗಳನ್ನು ಬಳಸಿ ‘ಜಿ. ರಾಜಶೇಖರ್ ಎಂದರೆ ಏನು?’ ಎಂಬುದನ್ನು ಕನ್ನಡ ಸಾರಸ್ವತ ಲೋಕದ ಮುಂದೆ ಪ್ರಸ್ತುತಪಡಿಸಿವೆ. ಹೌದು, ಅವರು ಮೃದುಭಾಷಿ, ಕರುಣಾಳು, ಪುರೋಗಾಮಿ ಚಿಂತಕ, ಲೇಖಕ, ವಿಮರ್ಶಕ, ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ, ಬಹುತ್ವದ ಪ್ರತಿಪಾದಕ, ಬೀದಿ ಬುದ್ಧಿಜೀವಿ(street intellectual) ಎಲ್ಲವೂ ಆಗಿದ್ದರು. ಇದೆಲ್ಲವನ್ನೂ ಮೀರಿದ್ದ ಅವರ ಅನನ್ಯ ವ್ಯಕ್ತಿತ್ವದ ಕೆಲವು ಅವ್ಯಕ್ತ ಆತ್ಮೀಯ ಮುಖಗಳ ಬಗ್ಗೆ ನಾನು ಬರೆಯಬೇಕಾಗಿದೆ.
ಸಮಕಾಲೀನ ಸಾಮಾಜಿಕ ಏರುಪೇರುಗಳಿಗೆ, ಜೀವ ಹಿಂಸೆಯ ಉತ್ಪಾತಗಳಿಗೆ ತಕ್ಷಣ ಸ್ಪಂದಿಸುತ್ತಿದ್ದ ಸಾಂಸ್ಕೃತಿಕ ಸಮಾಧಾನಿಯಾಗಿದ್ದ ರಾಜಶೇಖರ್ ತಾನು ಪ್ರತಿಪಾದಿಸುತ್ತಿದ್ದ ತಾತ್ವಿಕತೆಯನ್ನು ಎಂದೂ ಯಾರ ಮೇಲೂ ಹೇರದ, ಭಾರತೀಯ ಆರ್ಷೇಯ ಪರಂಪರೆ ಮತ್ತು ಧಾರ್ಮಿಕತೆಯ ಒಬ್ಬ ಒಳ ವಿಮರ್ಶಕನಾಗಿದ್ದರೇ ಹೊರತು ಒಣ ಸಿದ್ಧಾಂತವಾದಿಯಾಗಿರಲಿಲ್ಲ. ಸುಮಾರು ಮೂರು ದಶಕಗಳ ಹಿಂದೆ ಅವರು ತನ್ನ ಇಬ್ಬರು ಮಕ್ಕಳ ಕೈಹಿಡಿದುಕೊಂಡು, ತನ್ನ ಹಣೆಗೆ ಗಂಧ ಹಚ್ಚಿಕೊಂಡು ಉಡುಪಿಯ ಅನಂತೇಶ್ವರ ದೇವಸ್ಥಾನಕ್ಕೆ ಹೋಗುತ್ತಿದ್ದರು. ಒಮ್ಮೆ ನನಗೆದುರಾದಾಗ ನಗುತ್ತ ‘ದೇ ಆರ್ ಆ್ಯಸ್ ಸ್ಟುಪಿಡ್ ಆ್ಯಸ್ ಎವರ್!’ ಎಂದು ಮುಗುಳ್ನಗುತ್ತ ನನ್ನೊಡನೆ ಹೇಳಿ ಒಳ ಹೋದರು.
ನಾಸ್ತಿಕ್ಯವನ್ನು ಸಮತಾವಾದದೊಂದಿಗೆ ಸಮೀಕರಿಸುವ ನಮ್ಮ ಸಮಾಜದ ಒಂದು ವರ್ಗ ಅವರನ್ನು ಅವರ ನಿಜವಾದ ಆಧ್ಯಾತ್ಮಿಕ ಕಾಳಜಿಯನ್ನು ಅಪಾರ್ಥ ಮಾಡಿಕೊಂಡಿತ್ತು; ಅಪಾರ ಪ್ರೀತಿ, ಕರುಣೆಯ ಅವರನ್ನು ತಪ್ಪಾಗಿ ತಿಳಿದಿತ್ತು ಎಂದು ನನಗನ್ನಿಸುತ್ತದೆ. ಇದಕ್ಕೊಂದು ಜ್ವಲಂತ ಸಾಕ್ಷಿಯಾಗಿ ಅವರು ಕನಕದಾಸರ ಬಗ್ಗೆ ಬರೆದ, ಕರ್ನಾಟಕದ ದಾಸ ಪರಂಪರೆಯ ಕುರಿತು ಬರೆಯಲಾಗಿರುವ ಬರಹಗಳಲ್ಲಿ ಒಂದು ಅತ್ಯಂತ ಶ್ರೇಷ್ಠ ಬರಹವೆನ್ನಬಹುದಾದ ‘ಕನಕನ ಕಾವ್ಯ ಮತ್ತು ಪ್ರಸ್ತುತತೆಯ ಸಮಸ್ಯೆಗಳು’ ಎಂಬ ಲೇಖನದ ಕೆಲವು ಅಂಶಗಳನ್ನು ಉಲ್ಲೇಖಿಸ ಬಯಸುತ್ತೇನೆ:
‘‘ಕನಕ ತನ್ನ ಕೀರ್ತನೆಗಳನ್ನು ಭಕ್ತಿಯನ್ನು ಎತ್ತಿ ಹಿಡಿದು ಜಾತಿ ವ್ಯವಸ್ಥೆಯ ವಿರುದ್ಧ ನಿಂತ. ಆ ಮುಖಾಂತರ ಸಮಾನತೆ, ಸಾಮಾಜಿಕ ನ್ಯಾಯಗಳ ಮೌಲ್ಯಗಳನ್ನು ಎತ್ತಿ ಹಿಡಿದ. ದೇಸಿ ಮತ್ತು ಶಿಷ್ಟ ಎರಡು ಕಾವ್ಯ ಪ್ರಕಾರಗಳಲ್ಲೂ ಕೃತಿ ರಚನೆ ಮಾಡಿದ ಇನ್ನೊಬ್ಬ ಸಂತ ಕವಿ ಕನ್ನಡದಲ್ಲಂತೂ ಇಲ್ಲ. ಭಾರತದ ವಿಭಿನ್ನ ತಾತ್ವಿಕ ಪರಂಪರೆಗಳ ಜ್ಞಾನವೂ ಕನಕನಿಗೆ ಇತ್ತು. ಕರ್ನಾಟಕದ ಮೇಲು ಜಾತಿ ವರ್ಗಗಳ ಆಹಾರ ಧಾನ್ಯ ಭತ್ತವನ್ನು ಕೆಳಜಾತಿ ವರ್ಗಗಳ ಅನ್ನವಾಗಿರುವ ರಾಗಿಗೆ ಎದುರು ಬದಿರಾಗಿಸುವ ಮೂಲಕ ‘ರಾಮಧಾನ್ಯಚರಿತ್ರೆ’ಯಲ್ಲಿ ಕನಕ ಎರಡು ಶ್ರೇಣಿಗಳನ್ನು, ಎರಡು ಜಾತಿ ವರ್ಗಗಳ ಮೌಲ್ಯಗಳನ್ನು ತುಲನೆಗೆ ಒಳಪಡಿಸುತ್ತಾನೆ. ಮೇಲುಜಾತಿ, ಕೆಳಜಾತಿ, ಬ್ರಾಹ್ಮಣ-ಶೂದ್ರ, ಸಂಸ್ಕೃತ-ದೇಶ ಭಾಷೆ, ಕೂತು ತಿನ್ನುವವರು, ದುಡಿದು ತಿನ್ನುವವರು, ಈ ಎಲ್ಲ ವೈರುಧ್ಯಗಳನ್ನು ಕನಕ ತನ್ನ ಕಾವ್ಯದೊಳಗೆ ವೈರುಧ್ಯಗಳು ಎಂಬಂತೆಯೇ ಚಿತ್ರಿಸಿದ್ದಾನೆ... ಭಾರತ ಉಪಖಂಡ ಮತ್ತು ಆಗ್ನೇಯ ಏಶ್ಯದ ನೂರಾರು ಭಾಷೆಗಳ ಸಾವಿರಾರು ರಾಮಾಯಣಗಳ ಬಹುವಚನಿ ಪರಂಪರೆಗೂ ಕನಕನ ರಾಮಧಾನ್ಯ ಚರಿತ್ರೆ ಒಂದು ಉದಾಹರಣೆ...
ಪುರಂದರನ ಹಾಗೆ ಕನಕ ಕೂಡ ವೈದಿಕ ಬ್ರಾಹ್ಮಣರ ಆಚಾರ ವಿಚಾರಗಳ ನಡುವಿನ ಬದುಕನ್ನು ಮಾತ್ರವಲ್ಲ ಆಚಾರದ ಡಾಂಭಿಕತೆ ಹಾಗೂ ವಿಚಾರದ ಪೊಳ್ಳುತನವನ್ನು ತನ್ನ ಹಲವು ಕೀರ್ತನೆಗಳಲ್ಲಿ ಕಟುವಾಗಿ ಹೀಗಳೆದಿದ್ದಾನೆ. ಅಷ್ಟೇ ಕಟುವಾಗಿ ಅವೈದಿಕ ಆಚರಣೆಗಳನ್ನೂ ಟೀಕಿಸುತ್ತಾನೆ’’.
ಹೀಗೆ, ಕನಕನ ನಿಲುವನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವ ರಾಜಶೇಖರ್ ‘‘ಕನಕ ವೇದಶಾಸ್ತ್ರ ತರ್ಕ ಮೀಮಾಂಸೆಗಳನ್ನು ಮಾತ್ರವಲ್ಲ ಅವಕ್ಕೂ ಮಿಕ್ಕು ಅಧ್ಯಯನ ಮಾಡಿದ್ದ ಎಂಬುದಕ್ಕೆ ಅವನ ಕಾವ್ಯದಲ್ಲೇ ಉದಾಹರಣೆಗಳು ಸಿಗುತ್ತವೆ’’ ಎಂಬ ತೀರ್ಮಾನಕ್ಕೆ ಬಂದು, ‘‘ಕನಕ ಮತ್ತು ಬಸವ ಬಂಡಾಯಗಾರರು, ಅವರ ಬಂಡಾಯವಿದ್ದದ್ದು ಪ್ರಭುತ್ವದ ವಿರುದ್ಧ ಮಾತ್ರವಲ್ಲ; ಎಲ್ಲ ಸ್ಥಿರ, ಸ್ಥಾವರ, ಸಿದ್ಧ ಅರ್ಥ ಹಾಗೂ ಸಂರಚನೆಗಳನ್ನು ಅವರು ತಿರಸ್ಕರಿಸಿದ್ದರು’’ ಎನ್ನುತ್ತಾರೆ.
ಕನಕನ ‘ಆಧ್ಯಾತ್ಮಿಕ ಬಂಡಾಯ’ಕ್ಕೆ ಉದಾಹರಣೆಯಾಗಿ ರಾಜಶೇಖರ್ ‘ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಕವಿತೆ’ಗಳಲ್ಲಿ ಒಂದಾಗಿರುವ ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ’ ಎಂಬ ಸೊಲ್ಲಿನ ಕೀರ್ತನೆಯನ್ನು ಉಲ್ಲೇಖಿಸುತ್ತಾರೆ.
ಹೀಗೆ, ಕನಕನಂತಹ ಒಬ್ಬ ಸಂತಕವಿಯ ರಚನೆಗಳಿಗೆ ಯಾವ ಅಧ್ಯಾತ್ಮವಾದಿಯೂ ಸ್ಪಂದಿಸಿರದ ರೀತಿಯಲ್ಲಿ ಸ್ಪಂದಿಸುವ ರಾಜಶೇಖರ್ ಅವರನ್ನು ಸರಳ ವಿಶೇಷಣಗಳಲ್ಲಿ ಬಂಧಿಸಿಡುವುದು ಕನ್ನಡ ಸಾರಸ್ವತಲೋಕ ಅವರಿಗೆ ಬಗೆಯುವ ಅಪಚಾರವಾದೀತು.
ಯಾವುದೇ ಒಂದು ಸಮುದಾಯದ ಒಬ್ಬ ವ್ಯಕ್ತಿ ಮಾಡುವ ತಪ್ಪಿಗೆ ಇಡೀ ಸಮುದಾಯವನ್ನು ಹೊಣೆಯಾಗಿಸುವ, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹೊಣೆಗೇಡಿತನದ ಪ್ರವೃತ್ತಿಯನ್ನು ಕಟುವಾಗಿ ವಿರೋಧಿಸುತ್ತಿದ್ದ ರಾಜಶೇಖರ್, ಅಷ್ಟೇ ಮೃದು ಹೃದಯಿಯಾಗಿ ಒಂದು ಸಮುದಾಯದ ಸಂಕಟ, ಅಸಹಾಯಕತೆಯನ್ನು ಅರ್ಥಮಾಡಿಕೊಳ್ಳಬಲ್ಲ ಸೂಕ್ಷ್ಮಸಂವೇದಿಯಾಗಿದ್ದರು. ಇದೇ ಸಂವೇದನೆ ಅವರು ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ದಿಕ್ಕು ನೀಡಲು ಕಾರಣವಾಯಿತು. ದನಿ ಇಲ್ಲದ ಸಮುದಾಯಗಳಿಗೆ ದನಿ ನೀಡಿದ ಅವರ ಮಾನವೀಯ ದನಿ ಶಾಶ್ವತವಾಗಿ ಉಳಿಯುವಂತೆ ಅವರ ಎಲ್ಲ ಬರಹಗಳು ಪುಸ್ತಕಗಳ ರೂಪದಲ್ಲಿ ಪ್ರಕಟವಾಗಬೇಕಾಗಿದೆ.
(bhaskarrao599@gmail.com)