varthabharthi


ಅನುಗಾಲ

ರಾಮರಾಜ್ಯವೂ ಅರಾಜಕತೆಯೂ

ವಾರ್ತಾ ಭಾರತಿ : 28 Jul, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಈ ರಾಜಕಾರಣಿಗಳು ವಂಶಕಾರಣಿಗಳೂ, ಅಧಿಕಾರಕಾರಣಿಗಳೂ ಆಗಿದ್ದಾರೆಯೇ ಹೊರತು ರಾಜಕರಣಿಗಳಾಗಿಲ್ಲ. ಅವರ ಕರಣಗಳು ಕರಣಿಕ ಮೋನೋ-ವೃತ್ತಿಗಳು ಅಧಿಕಾರವನ್ನು ಮತ್ತು ಅದಕ್ಕೆ ಅಗತ್ಯವಿರುವ ಮುಂದಿನ ಚುನಾವಣೆಯನ್ನು ಮಾತ್ರ ಕಾಣುತ್ತವೆ. ತಾವು ತಮ್ಮ ಮಕ್ಕಳಿಗೆ ನೀಡುವ ಮಾಸಾಶನದಂತೆ ಈ ಶಾಸನಸಭಾ ಅಥವಾ ಸಂಸತ್ತಿನ ಸ್ಥಾನಗಳು ಎಂದು ಭಾವಿಸಿದಂತಿದೆ.


ರಾಮರಾಜ್ಯವೆಂದರೆ ವಾಲ್ಮೀಕಿಯ ಚಿತ್ರಣದ ವಾಸ್ತವ ಸ್ವರೂಪ. ಅಧಿಕಾರ ವಿಕೇಂದ್ರೀಕರಣವನ್ನು ಹೊಂದಿದ, ರಜಕನೊಬ್ಬನ ಮಾತಿಗೂ ಆಡಳಿತವು ಪ್ರತಿಸ್ಪಂದಿಸುವ, ಹೊಣೆಯರಿತು ಆಳುವ ರಾಜ್ಯ. ರಾಮರಾಜ್ಯವೆಂಬ ಪದವೇ ಒಕ್ಕೂಟ ವ್ಯವಸ್ಥೆಯ ಒಂದು ಪ್ರತೀಕ. ಅದು ರಾಮ‘ದೇಶ’ವಲ್ಲ, ರಾಮ‘ರಾಜ್ಯ’. ಅದರಲ್ಲಿ ಕೋಸಲವೂ ಇತ್ತು; ಕೇಕಯವೂ ಇತ್ತು; ಕಿಷ್ಕಿಂಧೆಯೂ ಇತ್ತು, ಲಂಕೆಯೂ ಇತ್ತು. ಇನ್ನೂ ಅನೇಕಾನೇಕ ರಾಜ್ಯಗಳೂ ಇದ್ದವು. ಅಲ್ಲಿ ಗುಹನೂ ರಾಜನೇ. ಈ ಎಲ್ಲರ ಹಿರಿಯನಾಗಿ ಅಯೋಧ್ಯೆಯ ರಾಮ. ವಿಶ್ವಕುಟುಂಬವೊಂದರ ಹಿರಿಯಣ್ಣ. ಬೆಳಕು ಬೀರುವಲ್ಲೆಲ್ಲ ಸೂರ್ಯವಂಶದ ಅರಸುಗಳ ಅಧಿಕಾರ ವ್ಯಾಪ್ತಿಯಿದೆಯೆಂದು ಹೇಳಲಾಗಿದ್ದರೂ ಆಗಿನ ಕಲ್ಪನೆಯಲ್ಲಿ ಭಾರತಭೂಖಂಡವನ್ನು ಹೊರತುಪಡಿಸಿ ಇರುವ ಇನ್ನಿತರ ಜಗತ್ತಿನ ಪರಿವೆ ಕವಿ ವಾಲ್ಮೀಕಿಗೆ ಇದ್ದಿರಲಿಕ್ಕಿಲ್ಲ. ಇದ್ದರೂ ಅವನ್ನು ಸ್ವರ್ಗವೆಂದೋ ನರಕವೆಂದೋ ಇನ್ನಿತರ ಅಂದರೆ ಒಟ್ಟು ಹದಿನಾಲ್ಕು ಲೋಕಗಳೆಂದೋ ಚಿತ್ರಿಸಲಾಗಿತ್ತು. ಆದ್ದರಿಂದ ಅಲ್ಲಿ ಹಿಂದೂ ದೇವದೇವತೆಗಳ ಹೊರತು, ವರ್ಣಾಶ್ರಮ ಧರ್ಮದ ಹೊರತು ಬೇರೆ ವಾಸ್ತವಗಳಿಲ್ಲ. ಶಂಭೂಕನ ವಧೆಯೂ ಈ ವರ್ಣಾಶ್ರಮ ಧರ್ಮದ ಒಂದು ಸಂಕೇತವೇ ಆಗಿತ್ತು. ಆ ಪ್ರಕರಣದಲ್ಲಿ ಒಬ್ಬ ಶೂದ್ರನ ಕೊಲೆಯನ್ನು (ಆಳುವವರು ಮಾಡುವ ಯಾವುದೇ ಕೊಲೆಯನ್ನೂ ವಧೆ ಎಂದು ಬಣ್ಣಿಸಲಾಗುತ್ತಿತ್ತು. (ಆದ್ದರಿಂದ ವಾಲಿ ‘ವಧೆ’! ರಾವಣ ‘ವಧೆೆ’!) ಒಬ್ಬ ಕ್ಷತ್ರಿಯನ ಕೈಯಲ್ಲಿ ಮಾಡಿಸಲಾಗಿತ್ತು. ಹೀಗೆ ಸ್ವಹಿತ-ಅಹಿತಗಳ, ಧರ್ಮಾಧರ್ಮಗಳ ಮಿಶ್ರಣದಂತಿರುವ ರಾಮರಾಜ್ಯವು ಇಂದಿಗೆ ಹೇಗೆ ಮಾದರಿಯಾಗುತ್ತದೆಂಬುದು ಸಂಶಯವಾದರೂ ಇಂದಿನ ಸಂದರ್ಭದಲ್ಲಿ ಪ್ರಾಯಃ ಗ್ರಾಮರಾಜ್ಯ, ಸ್ವರಾಜ್ಯ ಇಂತಹ ಕಲ್ಪನೆಗಳು ಸರಿಯಾಗಬಹುದೆಂದು ಕಾಣಿಸುತ್ತದೆ. ನಮ್ಮ ಪುರಾಣಕತೆಗಳೆಲ್ಲವೂ ರಾಜರ ಸುತ್ತವೇ ಇವೆ. ಅದಕ್ಕೆ ಪೂರಕವಾಗಿ ‘ಒಂದಾನೊಂದು ಊರಿನಲ್ಲಿ ಒಬ್ಬ ಬಡಬ್ರಾಹ್ಮಣನಿದ್ದ’ ಎಂದೋ, ‘ದೇವಲೋಕದಲ್ಲಿ ಒಮ್ಮೆ ಹೀಗೆ ನಡೆಯಿತು’ ಎಂದೋ ಪೀಠಿಕೆ ಆರಂಭವಾಗಿ ಅದು ಕೊನೆಗೆ ಒಬ್ಬ ರಾಜನ ವ್ಯಕ್ತಿತ್ವದ ಕೊಂಡಾಡುವಿಕೆಯಲ್ಲಿ ಮುಗಿಯುತ್ತದೆ. ಆನಂತರ ‘ಆ ರಾಜನು ಬಹುಕಾಲ ತನ್ನ ರಾಜ್ಯವನ್ನು ಆಳಿದನು. ಪ್ರಜೆಗಳು ನೆಮ್ಮದಿಯಿಂದ ಇದ್ದರು’. ರಾಜನ ಸುಖಭೋಗದಲ್ಲೇ ಪ್ರಜೆಗಳು ತಮ್ಮ ನೆಮ್ಮದಿಯನ್ನು ಕಾಣುವ ಕಾಲ ಅದು.

 ಪುರಾಣದ ಕತೆಗಳಲ್ಲಿ ಇನ್ನೂ ಒಂದು ಅಂಶವಿದೆ: ರಾಜನ ಆಯ್ಕೆ ಪ್ರಜೆಗಳಿಗಿರಲಿಲ್ಲ. ರಾಮಾಯಣದ ಕಲಹವೂ ಕುಟುಂಬದೊಳಗಿನದ್ದೇ ವಿನಾ ಎಲ್ಲರನ್ನೊಳಗೊಂಡಿರಲಿಲ್ಲ. ರಾಮನಿಲ್ಲದ ಅಯೋಧ್ಯೆಯಲ್ಲಿ ಪ್ರಜೆಗಳು ಕಷ್ಟದಿಂದಿದ್ದರೆಂಬ ಆಖ್ಯಾನ-ವ್ಯಾಖ್ಯಾನಗಳಿಲ್ಲ. ಅವರಿಗೆ ರಾಮನೂ ಒಂದೇ ಭರತನೂ ಒಂದೇ. ವಾಲ್ಮೀಕಿಗೆ ಮಾತ್ರ ರಾಮನಲ್ಲಿ ಹೆಚ್ಚು ಅಕ್ಕರೆ. ಏಕೆಂದರೆ ರಾಮ ವಾಲ್ಮೀಕಿ ರಾಮಾಯಣದ ನಾಯಕ. ಆಗಲೂ ನಾಯಕನೇ ಎಲ್ಲ ಕಡೆ ವಿಜೃಂಭಿಸುತ್ತಿದ್ದ. ಅಲ್ಲಿ ರಾಜನು ತನ್ನ ಕುಟುಂಬಕ್ಕೆ ರಾಜ್ಯವನ್ನು ಹಂಚುತ್ತಾನೆ. ಇದು ಆಡಳಿತಕ್ಕೆ ಮಾತ್ರ ಸೀಮಿತವಾಗಿತ್ತೆಂದು ಭಾವಿಸಬಹುದು. ಶ್ರೀರಾಮನು ವನವಾಸದಲ್ಲಿಯೂ ಕಿಷ್ಕಿಂಧೆಯ ಮೇಲೆ ಮತ್ತು ಆನಂತರ ಲಂಕೆಯ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿದ್ದ. ಲಂಕೆಯನ್ನು ಬಿಟ್ಟುಬರುವಾಗ ವಿಭೀಷಣನಿಗೆ ಪಟ್ಟಕಟ್ಟಿ ಅರಸೊತ್ತಿಗೆ ಮತ್ತು ಪ್ರಜಾಹಿತದ ನಡುವೆ ಸಮನ್ವಯವನ್ನು ಸಾಧಿಸಿದ್ದ. ಇದೊಂದು ರೀತಿಯ ಒಕ್ಕೂಟ ವ್ಯವಸ್ಥೆ. ರಾಜರ ಕತೆಯೆಲ್ಲವೂ ಹೀಗೆಯೇ. ಆನಂತರದ ಯುಗ ಮಹಾಭಾರತದ್ದು; ಅರ್ಥಾತ್ ಕುರುಕ್ಷೇತ್ರದ್ದು. ಕುಟುಂಬ ಕಲಹದಲ್ಲಿ ಇತರರೂ ಭಾಗಿಯಾದರು ಎಂಬುದನ್ನು ಹೊರತುಪಡಿಸಿದರೆ ಮಹಾಭಾರತವು ಜನರ ಕತೆಯಲ್ಲ. ಬದಲಾಗಿ ಉನ್ನತ ಸ್ಥಾನದಲ್ಲಿರುವ, ಬದುಕಿನ ಎಲ್ಲ ಸೌಭಾಗ್ಯಗಳನ್ನೂ ಪಡೆದ ಮಂದಿ ತೋರುವ ಸಣ್ಣತನ, ಲೋಭ-ಮೋಹ-ಮತ್ಸರ-ಅನೈತಿಕತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಧಿಕಾರ ಲಾಲಸೆ ಇವುಗಳ ಕತೆ. ಜನರು ಹೇಗಿದ್ದರು ಎಂಬ ಬಗ್ಗೆ ಹೆಚ್ಚು ಮಾಹಿತಿಯಿಲ್ಲ. ಜನರು ಹೇಗಿದ್ದರೂ ಸರಿಯೆ ಎಂಬ ಭಾವವಿದೆ.

ಕವಿ ಕುಮಾರವ್ಯಾಸ ಹೇಳುವಂತೆ ಅಧಿಕಾರ-ಆಡಳಿತ ಬದಲಾದಾಗ ‘ಮುನ್ನಿನವರೇ ಮಂತ್ರಿ ಸಚಿವರು ಮುನ್ನದಾವಂಗಾವ ಪರುಠವ ಭಿನ್ನವಿಲ್ಲದೆ ಪೌರಜನವೆಸೆದಿರ್ದುದಿಭಪುರಿಯ’ ಆದರೆ ಆಡಳಿತದ ಸೂತ್ರ ಹೇಗಿತ್ತು? ‘ಅರಸ ಕೇಳೈ ಪಟ್ಟವದು ಹಿರಿಯ ರಸನದು ಯುವರಾಜಪಟ್ಟವೆ ಹರಿತನೂಜನೊಳಾಯ್ತು ಸೇನಾಪತಿ ಧನಂಜಯನು ವರ ಕುಮಾರರು ಯಮಳರಲ್ಲಿಗೆ ಹಿರಿಯ ಸಚಿವನು ವಿದುರನವನಿಪಪರುಠವಿಸಿದ ಯುಯುತ್ಸುವನು ಸರ್ವಾಧಿಕಾರದಲಿ’ ಸರ್ವಾಧಿಕಾರವು ಕೆಲವೇ ಮಂದಿಯಲ್ಲಿ. ರಾಜ-ಯುವರಾಜ ಮಾತ್ರವಲ್ಲ, ಸೇನಾಪತಿ, ಸಚಿವ ಮುಖ್ಯರೆಲ್ಲ ಒಂದೇ ಕುಟುಂಬದವರು. (ಭಾರತವನ್ನು ಬರೆದ ವ್ಯಾಸ, ಪಂಪ, ರನ್ನ, ಇತರರಲ್ಲಿ ಈ ಸ್ಥಾನಗಳು ಪಲ್ಲಟವಾಗಿವೆಯೇ ಹೊರತು ಜನಸಾಮಾನ್ಯರಿಗೆ ಸ್ಥಾನಕೊಟ್ಟ ಬಗ್ಗೆ ಉಲ್ಲೇಖವಿಲ್ಲ.) ರಾಜ್ಯದ ಇತರರು? ಅವರ ಸುದ್ದಿಯಿಲ್ಲ. ಸರ್ವಾಧಿಕಾರವೆಂದರೆ ಒಬ್ಬನೇ ಅಂತಲ್ಲ, ಒಂದೇ ಬಳಗ ಎಂದೂ ಭಾವಿಸಬಹುದು. ಬರ್ಟ್ರಂಡ್ ರಸೆಲ್ ಹೇಳಿದ ‘ಸ್ವಲ್ಪಜನಪ್ರಭುತ್ವ’ (Oligarchy) ಇದೇ. ಪಾಂಡವರಿಂದ ರಾಜ್ಯಾಧಿಕಾರವು ಪರೀಕ್ಷಿತನಿಗೆ, ಆನಂತರ ಜನಮೇಜಯನಿಗೆ ರವಾನೆಯಾಗಿದ್ದರೆ ಅದು ಈ ವಂಶಪರಂಪರೆಯ ಪ್ರಭುತ್ವವೇ. ರಾಜರಿಂದ ಅರಾಜರಿಗೆ ಪ್ರಭುತ್ವವನ್ನು ವರ್ಗಾಯಿಸುವಾಗ ಅದು ಒಮ್ಮೆಗೇ ಪ್ರಜಾಪ್ರಭುತ್ವವಾಗದು. ರಾಜ-ಕತೆಯು ಅರಾಜ-ಕತೆಯಾಗುವುದು ಮತ್ತು ನಿಧಾನಕ್ಕೆ ಅರಾಜಕತೆಯಾಗುವುದು ತಲ್ಲಣಗೊಳಿಸುವ ಬೆಳವಣಿಗೆ.

ಸ್ವಾತಂತ್ರ್ಯಪೂರ್ವ ಭಾರತದ ಸ್ಥಿತಿಗತಿ ಹೆಚ್ಚುಕಡಿಮೆ ರಾಜಸತ್ತೆಯ ರಾಜಸದ್ದೇ. ಅಧಿಕಾರದಲ್ಲಿರುವವರು ಜನರ ಅಭಿಪ್ರಾಯಕ್ಕಿಂತ ಹೆಚ್ಚಾಗಿ ತಮ್ಮದೇ ಮತ್ತು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವ ಅತ್ಯಾವಸರದಲ್ಲಿರುವ ಕೆಲವೇ ಜನರ ಅಭಿಪ್ರಾಯದ ಮೇಲೆ ದೇಶದ ಭವಿಷ್ಯವನ್ನು ರೂಪಿಸಿದರು. ಸಂವಿಧಾನವನ್ನು ನಿರೂಪಿಸಿದವರು, ರಚಿಸಿದವರು ನಾವೆಲ್ಲ ಗೌರವಿಸುವ ನಾಯಕರೇ ಆಗಿದ್ದರೂ ಬದುಕಿನ ಹಾಗೆ ಅದರ ನಶ್ವರತೆಯೂ ಕಳೆದ ಹಲವು ದಶಕಗಳಲ್ಲಿ ಬಯಲಾಗಿದೆ. ನೂರಕ್ಕೂ ಹೆಚ್ಚು ತಿದ್ದುಪಡಿಗಳಾಗಿದ್ದರೆ ಅವೆಲ್ಲ ಸಂವಿಧಾನದ ಮೇಲಣ ಗೌರವದಿಂದಲ್ಲ, ಸಂವಿಧಾನ ಪೋಷಿತ ತತ್ವಾಧಾರಿತವೂ ಅಲ್ಲ. ರಂಗದ ಪರದೆಯ ಬಳಿಯಿಂದ ಇಣುಕಿದವರು ಮತ್ತು ಇಣುಕುವವರು ರಾಷ್ಟ್ರಪತಿ, ಪ್ರಧಾನಿ, ಸಚಿವರಾದರು. ಅವರ ಜೊತೆಯವರೆಲ್ಲ ಅಕ್ಕಪಕ್ಕದ ವಾದ್ಯಗಳನ್ನು ನುಡಿಸಿದರು. ಆನಂತರದ ದಶಕಗಳಲ್ಲಿ ಭಿನ್ನಮತಸ್ಫೋಟವಾಗಿದ್ದರೆ ಅದು ದೇಶಪ್ರೇಮದಿಂದಲ್ಲ; ಸ್ವಹಿತಪೋಷಣೆಯ ಫಲ. ಅಥವಾ ಹೆಚ್ಚೆಂದರೆ ತನ್ನ ಬಳಗದ ಹಿತದ್ದು. ಈ ದುರ್ಮತಿ ಕೆಟ್ಟುಕೊಂಡು ಹೋಯಿತಲ್ಲದೆ ಬೆಳಕು-ಬೆಳಗನ್ನು ನೀಡುವ ನಾಯಕರು ದುರ್ಲಭವಾಗಿದ್ದಾರೆ. ದೇಶ ಮುಖ್ಯವಾಗದೆ ಅಧಿಕಾರ ಮುಖ್ಯವಾಗಿದೆ. ಅದಕ್ಕೆ ಅನುಕೂಲವಾದ ಸಿದ್ಧಾಂತಗಳು ಅವು ಮುನ್ನಡೆಸಲಿ, ಹಿನ್ನಡೆಸಲಿ, (ಬಹುಪಾಲು ಹಿನ್ನಡೆಸುವವೇ ಆಗಿವೆ!) ಜಾರಿಗೆ ಬರುತ್ತಿವೆ. ದೇಶವನ್ನು ರಾಮರಾಜ್ಯವಾಗಿಸಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಹೀಗೆ ಪ್ರಯತ್ನಿಸುವ ಮಂದಿ ರಾಮಾಯಣವನ್ನಾಗಲೀ ಅದರ ಕಾವ್ಯಸತ್ಯವನ್ನಾಗಲೀ ಸತ್ವವನ್ನಾಗಲೀ ಅರ್ಥಮಾಡಿಕೊಳ್ಳದಿರುವುದು ಅಥವಾ ಅದರಲ್ಲಿ ತಮ್ಮ ಅಧಿಕಾರದ ಉಳಿವಿಗೆ ಬೇಕಾದ ಅಂಶಗಳನ್ನಷ್ಟೇ ಎತ್ತಿಕೊಂಡಿರುವುದು ಸ್ಪಷ್ಟವಾಗಿದೆ. ಆದರೆ ಶ್ರೀರಾಮ ಜಯರಾಮ ಜಯಜಯರಾಮ ಭಜಿಸುವ ಮಂದಿ ಏಕಾಧಿಪತ್ಯದ ಅಥವಾ ಜಾತಿ-ಮತ-ಧರ್ಮಾಧಾರಿತವಾಗಿ ಸರ್ವಾಧಿಕಾರವನ್ನು ಬಯಸುವುದು ಮತ್ತು ಅದರ ಉಳಿವಿಗಾಗಿ ನಿರಂತರವಾಗಿ ದುಡಿಯುವುದು ಹಾಗೂ ಸಾಮಾಜಿಕ ಸಾಮರಸ್ಯವನ್ನು ಕೆಡಿಸುವುದು ಕಾಣಿಸುತ್ತಿದೆ. ಯಾವುದೇ ಪಕ್ಷದವರು ತಮ್ಮ ಅಧಿಕಾರವನ್ನು ಮುಂದುವರಿಸಲು ಈ ದೇಶದ ಸುಮಾರು 140 ಕೋಟಿ ಜನರಲ್ಲಿ ಇತರರೂ ಇರುತ್ತಾರೆಂದು ತಿಳಿಯುವುದಿಲ್ಲ. ತಾನು, ತನ್ನ ಕುಟುಂಬ, ಹಿತೈಷಿಗಳು ಇಷ್ಟೇ ಮಂದಿ ಸಮರ್ಥರು ಎಂದು ತಿಳಿಯುತ್ತಾರೆ. ಹಿಂದೆಲ್ಲ ರಾಜನೊಬ್ಬ ದುಷ್ಟನಾಗಿದ್ದಾಗ ಮತ್ತು ಎದುರಾಳಿಗಳನ್ನು ನಿರ್ದಯವಾಗಿ ಮಣಿಸುತ್ತಿದ್ದಾಗ ಜನರ ನಡುವಿನಿಂದ ಯಾರಾದರೊಬ್ಬ ಕ್ರಾಂತಿಕಾರಿ ಉದ್ಭವಿಸುತ್ತಿದ್ದ. ಆಧುನಿಕ ಕಾಲದಲ್ಲಿ ಆಡಳಿತಕ್ಕೆ, ಅಧಿಕಾರಕ್ಕೆ, ಅತೀವ ಶಕ್ತಿ ಪ್ರಾಪ್ತವಾಗಿರುವುದರಿಂದ ಸಾಮಾನ್ಯ ಎದುರಾಳಿ ನಾಶವಾಗುತ್ತಾನೆ. ಸ್ವಾತಂತ್ರ್ಯ ಪೂರ್ವ ದಶಕಗಳಲ್ಲಿ ಗಾಂಧಿ ಮತ್ತು ಸ್ವತಂತ್ರ ಭಾರತದಲ್ಲಿ ಜೆಪಿ ಮಾತ್ರ ಈ ಹಂತಕ್ಕೆ ಬಂದವರು. ಇವರಿಬ್ಬರು ತೋರಿದ ಸಾಮಾನ್ಯ ಮತ್ತು ಅಸಾಮಾನ್ಯ ಲಕ್ಷಣವೆಂದರೆ ಅಧಿಕಾರತ್ಯಾಗ. ಇದು ಮತ್ತೆ ಇತರರಿಗೆ ಅನುಕೂಲವಾಗಿ ಪರಿಣಮಿಸಿದೆ. ಈ ದೇಶದ ದುರಂತವೆಂದರೆ ಎಲ್ಲ ಕ್ಷೇತ್ರಗಳಲ್ಲೂ ಲೋಭಿಗಳಿಗೆ ಬೇಕಾದಷ್ಟು ತ್ಯಾಗಿಗಳಿರುವುದು. ಈಗ ಅಧಿಕಾರಗ್ರಸ್ತ ನೀಚರಿಗೆ ಬೇಕಾದಷ್ಟು ಉದ್ಯಮಿಗಳಿದ್ದಾರೆ. ವೆಂಕಟೇಶ್ವರನ ಮದುವೆಗೆ ಕುಬೇರನು ಸಾಲಕೊಟ್ಟಂತೆ ಅಧಿಕಾರ ರಾಜಕಾರಣಕ್ಕೆ ಹಣ ಸುರಿಯುವ ಉದ್ಯಮಿಗಳಿದ್ದಾರೆ. ಇವರಿಗೆ ಅಧಿಕಾರ ಬೇಕಾಗಿಲ್ಲ; ಸುಖಭೋಗಗಳು ಸಿಕ್ಕಿದರಾಯಿತು. ಕುಟುಂಬ ರಾಜಕಾರಣವನ್ನು ವಿರೋಧಿಸಿದವರಲ್ಲಿ ಮದುವೆಯಾಗ ದವರಷ್ಟೇ ಕುಟುಂಬ ರಾಜಕಾರಣವನ್ನು ಬೆಳೆಸಲು ಅಶಕ್ತರಾಗಿದ್ದಾರೆ. ಇನ್ನುಳಿದವರೆಲ್ಲ ತಾವು ವಿಶ್ವಶ್ರೇಷ್ಠರನ್ನು ಸೃಷ್ಟಿಸಿದ್ದೇವೆಂದು ನಂಬುತ್ತಾರೆ. ಇತ್ತೀಚೆಗಿನ ದಿನಗಳಲ್ಲಿ ಯಾವುದೇ ಪಕ್ಷವೂ ಕುಟುಂಬ ರಾಜಕಾರಣವನ್ನು ಬಿಟ್ಟಿಲ್ಲ. ಮೊನ್ನೆ ಮೊನ್ನೆಯಷ್ಟೇ ಕರ್ನಾಟಕದಲ್ಲಿ ಬಲವಂತವಾಗಿ ನಿವೃತ್ತಿ (Compulosry retirement) ಯನ್ನು ಹೊಂದಿದ ಯಡಿಯೂರಪ್ಪನವರು ಶಿಕಾರಿಪುರವನ್ನು ತಮ್ಮ ಮಗನಿಗೆ ದಾನಮಾಡಿದರು. ಈ ಬೆಳವಣಿಗೆ ಹಸಿಯಿರುವಾಗಲೇ ಕಾಂಗ್ರೆಸಿನ ಕೆ.ಬಿ.ಕೋಳಿವಾಡರು ತಮ್ಮ ಕ್ಷೇತ್ರವನ್ನು ತಮ್ಮ ಮಗನಿಗೆ ದಯಪಾಲಿಸಿದರು. ಕರ್ನಾಟಕದಲ್ಲಿ ಒಬ್ಬೊಬ್ಬ ಮಂತ್ರಿಯ, ಶಾಸಕರ, ಬಂಧುಗಳೇ ಖಾಲಿ ಸ್ಥಾನವನ್ನು ತುಂಬುವ ಬೆರ್ಚಪ್ಪಗಳಾಗಿರುತ್ತಾರೆ. ಇನ್ನು ನಿಗಮ, ಪ್ರಾಧಿಕಾರ ಇವುಗಳನ್ನು ತುಂಬಿಸುವ ಹಂತದಲ್ಲಂತೂ ಆಯ್ಕೆಯಾದವರನ್ನು ನೋಡಿದಾಗ ಇವೆಲ್ಲ ಕೊಳ್ಳಿದೆವ್ವಗಳಂತೆ ಎಲ್ಲಿಂದ ಪ್ರತ್ಯಕ್ಷವಾದರಪ್ಪಾಎಂದು ಗ್ರಹಿಸಿ ಗಾಬರಿಯಾಗುತ್ತದೆ.

ಇದನ್ನು ನೋಡುವಾಗ, ಕೇಳುವಾಗ, ಓದಿದಾಗ ಮತ್ತೆ ಕುಮಾರವ್ಯಾಸ ಭಾರತದ ಕೃಷ್ಣನು ಪಾಂಡವರ ಪರವಾಗಿ ಕೌರವನಲ್ಲಿ ‘ಕೊಡು ವೃಕಸ್ಥಳವನು ಕುಶಸ್ಥಳ ಪೊಡವಿಯಾವಂತಿಯನು ಕುಳವನು ಕೊಡಿಸಿ ಕಳೆ ಸಿರಿಕರಣದವರಲಿ ವಾರಣಾವತವ ಕೊಡು ನಿನಗೆ ಮನ ಬಂದುದೊಂದನು’ ಎಂದು ಕೇಳಿದ್ದೇ ಹೆಚ್ಚು ಉದಾರ, ದಯಾಮಯ ಪ್ರಜಾಪ್ರಭುತ್ವವಿರಬಹುದೆನಿಸುತ್ತದೆ. ಈ ರಾಜಕಾರಣಿಗಳು ವಂಶಕಾರಣಿಗಳೂ, ಅಧಿಕಾರಕಾರಣಿಗಳೂ ಆಗಿದ್ದಾರೆಯೇ ಹೊರತು ರಾಜಕರಣಿಗಳಾಗಿಲ್ಲ. ಅವರ ಕರಣಗಳು ಕರಣಿಕ ಮೋನೋ-ವೃತ್ತಿಗಳು ಅಧಿಕಾರವನ್ನು ಮತ್ತು ಅದಕ್ಕೆ ಅಗತ್ಯವಿರುವ ಮುಂದಿನ ಚುನಾವಣೆಯನ್ನು ಮಾತ್ರ ಕಾಣುತ್ತವೆ. ತಾವು ತಮ್ಮ ಮಕ್ಕಳಿಗೆ ನೀಡುವ ಮಾಸಾಶನದಂತೆ ಈ ಶಾಸನಸಭಾ ಅಥವಾ ಸಂಸತ್ತಿನ ಸ್ಥಾನಗಳು ಎಂದು ಭಾವಿಸಿದಂತಿದೆ. ಮುನ್ನ ಶತಕೋಟಿರಾಯರುಗಳಾಳಿದ ನೆಲವ ಸಂಸಾರದೊಳಗೆ ಹಂಚುವ ರಾಜಕೀಯ, ಅಧಿಕಾರ ಇವು ಇರಬಾರದೆಂದು ಪ್ರಜಾರಾಜ್ಯ ಬಂದರೂ ಇಂತಹ ಕೆಟ್ಟ ಜಂತುಗಳು (ನಾನು ಹೆಸರಿಸದ ಮಂದಿಯೇ ಹೆಚ್ಚು, ಅವರೆಲ್ಲರ ನಾಮಸ್ಮರಣೆಗೆ ಇದು ಸಂದರ್ಭವಲ್ಲ, ಜಾಗವೂ ಇಲ್ಲ) ಸಕುಟುಂಬಿಗಳಾಗಿ ಕೊಳೆತುಹೋಗುವುದನ್ನು ಗಮನಿಸುವುದೂ ಅಸಹ್ಯ. ದೇಶದ ಗೃಹಮಂತ್ರಿಗಳ ಸುಪುತ್ರನೇ (ಎಂದೂ ಕ್ರಿಕೆಟ್ ಬ್ಯಾಟ್ ಮುಟ್ಟದಿದ್ದರೂ ಸರಿಯೆ!) ಸಾವಿರಾರು ಕೋಟಿ ಬೊಕ್ಕಸದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ. ಇವರ ಮತ್ತು ಇತರ ಸಚಿವರ ವೈಭವದ ಸಿರಿಯನ್ನು ಹೇಳಲು ಸಾವಿರ ನಾಲಿಗೆಯ ಆದಿಶೇಷನಿಗೂ ಸಾಧ್ಯವಾಗದು. ಸಂಪತ್ತನ್ನು ಕ್ರೋಡೀಕರಿಸಲಿ, ಅದು ಅವಿನಾಶಿ. ಸಂಪಾದಿಸಿದವನಿಗೇ ಉಳಿಯುತ್ತದೆಯೆಂದು ಹೇಳಲಾಗದು. ನಂದನ ಬದುಕೂ ನರಿನಾಯಿಗಳ ಪಾಲಾಗಿದೆ. ಕೊಹಿನೂರ್ ವಜ್ರ ಎಲ್ಲೆಲ್ಲೋ ಸುತ್ತಿದೆ. ಹಾಗೆಯೇ ಇದು ಇವರ ಕೈಯಲ್ಲೇ ಉಳಿಯುತ್ತದೆಯೆಂದು ಯಾವ ವಿಧಿಯೂ ಖಾತ್ರಿ ನೀಡಿಲ್ಲ; ನೀಡುವುದಿಲ್ಲವಾದ್ದರಿಂದ ಅದು ಭೌತಶಾಸ್ತ್ರದ ‘ವಸ್ತು’ (matter)ವಿನ ನಿರೂಪಣೆಯಂತೆ ಒಟ್ಟು ಮೌಲ್ಯವನ್ನು ಎಲ್ಲಾದರೂ ಉಳಿಸಿಕೊಂಡೇ ಇರುತ್ತದೆ. ಆದರೆ ಇದರ ಹಿಂದಿರುವ ಕ್ರೌರ್ಯ ಮಾತ್ರ ಇತರರ ನಾಶಿ. ಈ ಸಂಪಾದನೆಗಾಗಿ ನಡೆಯುವ ಹಿಂಸೆ, ಸಂಚು ಇವೆಲ್ಲ ಸಮಾಜದ ಕ್ಷೋಭೆಯಲ್ಲಿ ಸಿಂಹಪಾಲನ್ನು ಪಡೆಯುತ್ತವೆ. ಇದೊಂದು ವಿಚಾರದಲ್ಲಿ ಮನುಷ್ಯನಷ್ಟು ದೊಡ್ಡ ಮತ್ತು ಭಯಾನಕ ನರಭಕ್ಷಕ ಬೇರೊಂದಿರಲಾರದು. ಇವೆಲ್ಲದರ ಮೂಲ ಮತ್ತೆ ಅಧಿಕಾರದಾಹವೇ.

ಅದಕ್ಕಾಗಿ ಪರಸ್ಪರ ಕಚ್ಚಾಡಿಸುವ ಮನೋವೃತ್ತಿ ಎಂದಿಗೂ ನಿತ್ಯನೂತನ. ಹೊಸಹೊಸ ಆವಿಷ್ಕಾರಗಳು ಈ ದಿಸೆಯಲ್ಲಿ ನಡೆಯುತ್ತಿವೆ. ಧರ್ಮಾಂಧತೆಯಲ್ಲಿ ಕಣ್ಣಿಗೆ ಕಾಣುವ ಅರ್ಜುನನೂ ಅವನ ಹಿಂದಿರುವ ಕೃಷ್ಣನೂ ಇಂದಿನ ಬುಲ್ಡೋಜರ್‌ನಂತೆ ಯಾರದೋ ದಾಹವನ್ನು ಹಸಿವನ್ನು ಇಂಗಿಸುವ ಕಾರಣಕ್ಕೆ ಅಥವಾ ವಿನಾಕಾರಣಕ್ಕೆ ಖಾಂಡವವನದಹನವನ್ನು ಮಾಡಿದರಲ್ಲ! ಮರ, ಗಿಡ, ಹುಲ್ಲು, ಮೂಲಿಕೆಗಳು, ಮೃಗ, ಪಶು, ಪಕ್ಷಿಗಳು ಅದರಲ್ಲಿ ಸುಟ್ಟು ಬೂದಿಯಾದವು. ಯಾರದ್ದೋ ಹೊಟ್ಟೆ ತುಂಬಿತು. ದೊಡ್ಡ ಉದ್ಯಮಗಳು ಇಂದು ಖಾಸಗಿಯವರಲ್ಲಿ ಬೆಳೆದಿರುವುದು ಹೀಗೆಯೇ. ಇಂದು ಅಶ್ವಸೇನನೂ ಪಾರಾಗುವಂತಿಲ್ಲ; ಅಷ್ಟು ಅಭೇದ್ಯ ಈ ವ್ಯೆಹ.

ಬುದ್ಧಿವಂತರು ‘ಎಂದು ಕೊನೆ? ಹಾ! ಎಂದು ಕೊನೆ!’ ಎಂದು ಪ್ರಶ್ನಿಸಬಲ್ಲ ವಿಚಾರಪರರಾದರೆ ಮತ್ತು ಧೈರ್ಯವಂತರಾದರೆ ಮಾತ್ರ ಇಂತಹ ಕತ್ತಲಿಗೊಂದು ಪರಿಹಾರವನ್ನು ಕಾಣಬಹುದು. ನಿರ್ಬುದ್ಧಿಯೂ ದುರ್ಬುದ್ಧಿಯೇ. ಆದರೆ ಹೆಚ್ಚಿನ ವಿದ್ಯಾವಂತರು, ಬುದ್ಧಿವಂತರು ಗುಲಾಮಗಿರಿ ಮತ್ತು ಸ್ವಹಿತವೇ ಸ್ವಾತಂತ್ರ್ಯವೆಂದು ತಿಳಿಯುವ ಸಮಾಜದಲ್ಲಿ ಇದೂ ಕನಸೇ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)